ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಅವರ ಭವಿಷ್ಯವನ್ನಷ್ಟೇ ರೂಪಿಸುವುದಿಲ್ಲ, ಅದು ಸಮಾನತೆ, ನ್ಯಾಯ ಹಾಗೂ ಅಭಿವೃದ್ಧಿಯ ನೂತನ ಸಮಾಜವನ್ನು ಕಟ್ಟುವ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಹಾದಿಯಲ್ಲಿ ಎಜುಕೇಟ್ ಗರ್ಲ್ಸ್ ಮಾಡಿದ ಕೆಲಸ ಭಾರತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದೆ.
ಭಾರತದ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣವು ಶತಮಾನಗಳಿಂದ ಹಿಂದುಳಿದ ವಿಷಯವಾಗಿಯೇ ಉಳಿಯುತ್ತಿತ್ತು. ”ಹೆಣ್ಣುಮಕ್ಕಳು ಏಕೆ ಓದಬೇಕು? ಅವರು ಬೇಗನೆ ಮದುವೆಯಾಗಬೇಕು, ಅವರು ಮನೆ ಕುಟುಂಬ ನೋಡಿಕೊಳ್ಳಬೇಕಷ್ಟೆ” ಎಂಬ ರೂಢಿಗತ ನಂಬಿಕೆ, ಬಡತನ ಅನೇಕ ಹೆಣ್ಣುಮಕ್ಕಳನ್ನು ಶಾಲೆಯಿಂದ ಹೊರಗುಳಿಯುವ ಪರಿಸ್ಥಿತಿಗೆ ತಳ್ಳಿದ್ದವು. ಇಂತಹ ಸಂಕೀರ್ಣ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ನೀಡುವ ದೃಷ್ಟಿಯಿಂದ 2007ರಲ್ಲಿ ಸಫೀನಾ ಹುಸೇನ್ ಅವರು ಎಜುಕೇಟ್ ಗರ್ಲ್ಸ್ ಸಂಸ್ಥೆ ಸ್ಥಾಪಿಸಿದರು. ಸರ್ಕಾರೇತರ ಸಂಸ್ಥೆಯಾದ ಇದು ಇಂದು ಏಷ್ಯಾದ ನೊಬೆಲ್ ಎಂದೇ ಖ್ಯಾತವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದು ಭಾರತಕ್ಕೆ ಹೆಮ್ಮೆ ತಂದಿದೆ.
ಸಫೀನಾ ಹುಸೇನ್ ಅವರ ಜೀವನದಲ್ಲೇ ಶಿಕ್ಷಣವು ತಿರುವು ತಂದುಕೊಟ್ಟಿತ್ತು. ದೆಹಲಿಯ ಪಹರಗಂಜ್ ಎಂಬ ಸಾಮಾನ್ಯ ನಗರದಲ್ಲಿ ಬೆಳೆದ ಅವರು ಕುಟುಂಬದ ಆರ್ಥಿಕ ಕಷ್ಟಗಳಿಂದ ಶಾಲೆಯನ್ನು ತ್ಯಜಿಸಬೇಕಾಯಿತು. ತಂದೆ ಯೂಸುಫ್ ಹುಸೇನ್ ಬಾಲಿವುಡ್ ಸಿನಿಮಾ ನಟರಾದರೂ ಮಗಳಿಗೆ ಶಿಕ್ಷಣ ನೀಡಲು ಸಿದ್ಧರಿರಲಿಲ್ಲ. ಬಾಲ್ಯದಲ್ಲಿ ಅವರಿಗೆ ಸಹ ಶಾಲೆ ಬಿಟ್ಟುಬಿಡುವ ಸ್ಥಿತಿ ಎದುರಾಯಿತು. ”ಆಕೆ ಏನು ಮಾಡುತ್ತಾಳೆ, ಬೇಗ ಮದುವೆ ಮಾಡಿಕೊಡಿ” ಎಂಬಂತಹ ಮಾತುಗಳನ್ನು ಸಂಬಂಧಿಕರಿಂದ ಕೇಳಬೇಕಾಗಿತ್ತು. ಈ ಸಮಯದಲ್ಲಿ ಸಫೀನಾ ಅವರ ಬದುಕು ಬದಲಿಸಿದವರು ಅವರ ಒಬ್ಬ ಕುಟುಂಬ ಸ್ನೇಹಿತೆ. ಗೆಳತಿಯ ಪ್ರೋತ್ಸಾಹದಿಂದ ಅವರು ಮತ್ತೆ ಶಿಕ್ಷಣದ ಹಾದಿಗೆ ಮರಳಿದರು. ಇದು ಅವರ ಬದುಕಿನ ತಿರುವು. ಆಕೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಯಿಂದ ಪದವಿ ಪಡೆದರು. ಈ ಶಿಕ್ಷಣವೇ ಅವರಿಗೆ ಜೀವನದ ದಿಕ್ಕನ್ನು ತೋರಿಸಿತು. ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡಿದ ನಂತರ ಅವರು ಅನೇಕ ದೇಶಗಳಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಕೊನೆಗೆ ಭಾರತಕ್ಕೆ ಮರಳಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಿರಂತರ ಹೋರಾಟಕ್ಕೆ ಇಳಿದರು.

2007ರಲ್ಲಿ ಆರಂಭ
2007ರಲ್ಲಿ, ರಾಜಸ್ಥಾನದ ಪಾಳಿ ಮತ್ತು ಜಾಲೋರ್ ಜಿಲ್ಲೆಗಳ ಎರಡು ಹಳ್ಳಿಗಳಿಂದ ‘ಎಜುಕೇಟ್ ಗರ್ಲ್ಸ್’ ಕನಸಿನ ಪ್ರಯಾಣ ಆರಂಭವಾಯಿತು. ಆಗ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಶಿಕ್ಷಣದಲ್ಲಿ ಲಿಂಗ ಅಂತರ ಹೆಚ್ಚಿರುವ ಜಿಲ್ಲೆಗಳ ಪಟ್ಟಿಯನ್ನು ಸಂಸ್ಥೆಗೆ ನೀಡಿತ್ತು. ಅದರ ಆಧಾರದ ಮೇಲೆ ಪಾಲಿ ಮತ್ತು ಜಲೋರ್ ಜಿಲ್ಲೆಗಳಲ್ಲಿ ಸಂಸ್ಥೆಯ ಕಾರ್ಯ ಪ್ರಾರಂಭವಾಯಿತು. ಈ ಹಳ್ಳಿಗಳಲ್ಲಿ ಕೆಲಸ ಮಾಡುವಾಗ ಸಫೀನಾ ಅವರಿಗೆ ಅರಿವಾಗಿದ್ದೆಂದರೆ, ಬಡತನ ಒಂದು ಸಮಸ್ಯೆ ಹೌದು, ಆದರೆ ಅದಕ್ಕಿಂತಲೂ ದೊಡ್ಡ ಸವಾಲು ಪಿತೃ ಪ್ರಧಾನ ವ್ಯವಸ್ಥೆ ಮತ್ತು ಪಾಲಕರ ಮನಸ್ಥಿತಿ. ಹೆಣ್ಣುಮಕ್ಕಳು ಮನೆ ಕೆಲಸಗಳಲ್ಲಿ ತೊಡಗಿಸಿಕೊಂಡು ಶಾಲೆಯಿಂದ ದೂರವಾಗಿದ್ದರು, ಪೋಷಕರಿಗೆ ಶಿಕ್ಷಣದ ಅವಶ್ಯಕತೆ ತಿಳಿಯುತ್ತಿರಲಿಲ್ಲ. ಅಲ್ಲಿ ಕಂಡ ವಾಸ್ತವಗಳು ಅವರ ದೃಷ್ಟಿಕೋನವನ್ನು ಇನ್ನಷ್ಟು ಬಲಪಡಿಸಿದವು. ಆಗ ಸಫೀನಾ ಅವರು ”ಯಾವುದೋ ಹೊರಗಿನ ವ್ಯಕ್ತಿ ಬಂದು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಬೋಧಿಸಿದರೆ ಯಾರೂ ಕೇಳುವುದಿಲ್ಲ. ಬದಲಾವಣೆ ಬರಬೇಕಾದರೆ ಕುಟುಂಬದವರ ಸಹಭಾಗಿತ್ವ ಅಗತ್ಯ. ಸ್ಥಳೀಯ ಸಮುದಾಯವನ್ನೇ ಬದಲಾವಣೆಯತ್ತ ಮುನ್ನಡೆಸಬೇಕು” ಎಂಬ ತೀರ್ಮಾನಕ್ಕೆ ಬಂದರು.
ತಿರುವು ನೀಡಿದ ಟೀಮ್ ಬಾಲಿಕಾ
‘ಎಜುಕೇಟ್ ಗರ್ಲ್ಸ್’ ಸಂಸ್ಥೆಯು ಶಾಲಾ ಬಿಟ್ಟ ಬಾಲಕಿಯರನ್ನು ಗುರುತಿಸಿ, ಅವರನ್ನು ಶಾಲೆಗೆ ಸೇರಿಸುವುದು, ಶಿಕ್ಷಣದಲ್ಲಿ ಮುಂದುವರೆಯುವಂತೆ ಮಾಡುವುದು ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸುವುದರ ಮೇಲೆ ಗಮನಹರಿಸುತ್ತದೆ. ಸಮುದಾಯವನ್ನು ಸಜ್ಜುಗೊಳಿಸಿ, ಮನೆಮನೆಗೆ ಸಮೀಕ್ಷೆ ನಡೆಸಿ, ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿಸುತ್ತದೆ. ಇದರ ಭಾಗವಾಗಿ ಟೀಮ್ ಬಾಲಿಕಾ ಎಂಬ ಕಾರ್ಯಕ್ರಮವಾಗಿದ್ದು, ಇದು ಸ್ಥಳೀಯ ಸಮುದಾಯದ ಸ್ವಯಂಸೇವಕರ ಜಾಲವಾಗಿದೆ. ಮುಖ್ಯವಾಗಿ ಯುವತಿಯರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿ, ಅವರನ್ನು ನಾಯಕರನ್ನಾಗಿ ಬೆಳೆಸುವ ಈ ಯೋಜನೆಯು ಶಾಲೆ ಬಿಟ್ಟ ಬಾಲಕಿಯರನ್ನು ಹುಡುಕಿ, ಕುಟುಂಬಗಳೊಂದಿಗೆ ಮಾತನಾಡಿ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಟೀಮ್ ಬಾಲಿಕಾ ಸದಸ್ಯರು ಗ್ರಾಮೀಣ ಪ್ರದೇಶಗಳಲ್ಲಿ ಎಜುಕೇಟ್ ಗರ್ಲ್ಸ್‌ನ ಮುಖ್ಯ ಆಧಾರಸ್ತಂಭಗಳಾಗಿ ಕಾರ್ಯನಿರತರಾಗಿದ್ದಾರೆ.

ಎಜುಕೇಟ್ ಗರ್ಲ್ಸ್ ಒಟ್ಟಾರೆ ಸಂಸ್ಥೆಯಾಗಿದ್ದರೆ, ಟೀಮ್ ಬಾಲಿಕಾ ಅದರ ಅಂತರ್ಗತ ಸ್ವಯಂಸೇವಕ ಕಾರ್ಯಕ್ರಮವಾಗಿದೆ. ಎರಡೂ ಶಿಕ್ಷಣ ಸಮಾನತೆಗಾಗಿ ಕೆಲಸ ಮಾಡುತ್ತವೆಯಾದರೂ, ಟೀಮ್ ಬಾಲಿಕಾ ಸ್ಥಳೀಯ ಮಟ್ಟದಲ್ಲಿ ನೇರವಾಗಿ ಸಮುದಾಯದೊಂದಿಗೆ ಸಂಪರ್ಕಿಸುತ್ತದೆ. ಈ ಮಾದರಿಯು ಲಕ್ಷಾಂತರ ಬಾಲಕಿಯರ ಜೀವನವನ್ನು ಬದಲಿಸಿದೆ. ಯುವಕರು, ಮಹಿಳೆಯರು ಮತ್ತು ಕೆಲವೊಮ್ಮೆ ಹಿರಿಯರು ಸಹ ಈ ಟೀಂ ಬಾಲಿಕಾ ತಂಡದಲ್ಲಿ ಸೇರಿ ತಮ್ಮ ಹಳ್ಳಿಯ ಹೆಣ್ಣುಮಕ್ಕಳಿಗೆ ಶಾಲೆಯ ಮಹತ್ವವನ್ನು ತಿಳಿಸುತ್ತಾರೆ, ಪೋಷಕರನ್ನು ಮನವೊಲಿಸುತ್ತಾರೆ. ಈ ಮಾದರಿಯೇ ಎಜುಕೇಟ್ ಗರ್ಲ್ಸ್ ಯಶಸ್ಸಿನ ಬೆನ್ನೆಲುಬಾಗಿದೆ. ಸ್ಥಳೀಯ ಸಮುದಾಯಗಳನ್ನೇ ಬದಲಾವಣೆಯ ಹರಿಕಾರರನ್ನಾಗಿ ‘ಟೀಂ ಬಾಲಿಕಾ’ ಮಾದರಿ ರೂಪಿಸಿದೆ.
ಈ ಮಾದರಿಯಡಿಯಲ್ಲಿ ಸ್ಥಳೀಯ ಸ್ವಯಂಸೇವಕರು, ಪುರುಷರು ಮತ್ತು ಮಹಿಳೆಯರು, ತಮ್ಮ ಗ್ರಾಮಗಳಲ್ಲಿ ‘ಲಿಂಗ ಸಮಾನತೆಯ ಚಾಂಪಿಯನ್’ಗಳಾಗಿ ಕೆಲಸ ಮಾಡುತ್ತಾರೆ. ಈ ಸ್ವಯಂಸೇವಕರು ಹಣಕ್ಕಾಗಿ ಕೆಲಸ ಮಾಡುವುದಿಲ್ಲ, ಬದಲಾಗಿ ಸಮುದಾಯದ ಬದಲಾವಣೆಗಾಗಿ ಶ್ರಮಿಸುತ್ತಾರೆ. ಅವರ ಸಮುದಾಯದ ಸಂಪರ್ಕ ಮತ್ತು ನಂಬಿಕೆ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಈ ಸ್ವಯಂಸೇವಕರ ಬಲದೊಂದಿಗೆ, ಸಂಸ್ಥೆಯು ನಾಲ್ಕು ರಾಜ್ಯಗಳ (ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಬಿಹಾರ) 30,000ಕ್ಕೂ ಹೆಚ್ಚು ಹಳ್ಳಿಗಳಿಗೆ ವಿಸ್ತರಿಸಿದೆ ಮತ್ತು 20 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳ ಜೀವನದಲ್ಲಿ ಪರಿವರ್ತನೆ ತಂದಿದೆ.
ಮೊದಲು ಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು ಈ ಸ್ವಯಂಸೇವಕರ ಮೊದಲ ಕೆಲಸ. ಪೋಷಕರನ್ನು ಭೇಟಿ ಮಾಡಿ, ಅವರ ಭಾಷೆಯಲ್ಲಿಯೇ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಶಾಲೆಗೆ ಹೆಣ್ಣುಮಕ್ಕಳನ್ನು ಕಳುಹಿಸಲು ಹೆತ್ತವರು ಹಿಂಜರಿಯುತ್ತಿದ್ದಾಗ, ಸ್ಥಳೀಯ ಸ್ವಯಂಸೇವಕರು ಆ ಪಾಲಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಸಂಗಗಳೂ ನಡೆದಿವೆ. ಈ ರೀತಿಯ ಸಮುದಾಯ ಆಧಾರಿತ ಕಾರ್ಯಕ್ರಮವು ಸಮಾಜದ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಐ ತಂತ್ರಜ್ಞಾನದ ನೆರವು
ಎಜುಕೇಟ್ ಗರ್ಲ್ಸ್ ಸಂಸ್ಥೆ ಕೇವಲ ಸಾಮಾಜಿಕ ಜಾಗೃತಿ ಮೂಡಿಸುವುದರಷ್ಟಕ್ಕೇ ಸೀಮಿತವಾಗಿಲ್ಲ. ಅದು ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಸುವ ಹೊಸ ದಾರಿಗಳನ್ನು ತೆರೆದಿದೆ. ಸಂಸ್ಥೆಯು 2015ರಲ್ಲಿ ವಿಶ್ವದ ಮೊದಲ ಡೆವಲಪ್‌ಮೆಂಟ್ ಇಂಪ್ಯಾಕ್ಟ್ ಬಾಂಡ್ (DIB) ಅನ್ನು ಶಿಕ್ಷಣ ಕ್ಷೇತ್ರದಲ್ಲಿ ಪರಿಚಯಿಸಿತು. ಈ ಬಾಂಡ್‌ನ ಮೂಲಕ ಹಣಕಾಸಿನ ನೆರವು ನೇರವಾಗಿ ಫಲಿತಾಂಶಗಳಿಗೆ ಸಂಬಂಧಿತವಾಯಿತು. ಫಲಿತಾಂಶ ಸಕಾರಾತ್ಮಕವಾಗಿದ್ದರೆ ಮಾತ್ರ ಹೂಡಿಕೆದಾರರಿಗೆ ಲಾಭ ಸಿಗುವಂತಹ ಈ ಮಾದರಿಯು ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾಯಿತು. ಇತ್ತೀಚೆಗೆ ಸಂಸ್ಥೆಯು ಕೃತಕ ಬುದ್ಧಿಮತ್ತೆ (AI) ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದು ಯಾವ ಹಳ್ಳಿಗಳಲ್ಲಿ ಹೆಚ್ಚು ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆಂಬುದನ್ನು ನಿಖರವಾಗಿ ಪತ್ತೆಹಚ್ಚುತ್ತದೆ. ಸಾಮಾನ್ಯವಾಗಿ ಒಂದು ರಾಜ್ಯದಲ್ಲಿ ಶೇ. 5ರಿಂದ 10 ಹಳ್ಳಿಗಳಲ್ಲಿ ಹೆಚ್ಚು ಹೊರಗುಳಿದ ಮಕ್ಕಳಿರುತ್ತಾರೆ. ಎಐ ತಂತ್ರಜ್ಞಾನದಿಂದ ಇಂತಹ ‘ಹಾಟ್‌ಸ್ಪಾಟ್’ಗಳನ್ನು ಬೇಗನೆ ಗುರುತಿಸುತ್ತದೆ. ಅಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಕೇಂದ್ರೀಕರಿಸಲು ಸಾಧ್ಯವಾಗಿದೆ. ಈ ವಿಧಾನ ಸಮಯ ಮತ್ತು ಹಣವನ್ನು ಉಳಿಸುವುದರ ಜೊತೆಗೆ ಫಲಿತಾಂಶಗಳನ್ನು ದ್ವಿಗುಣಗೊಳಿಸಿದೆ.
ಎಜುಕೇಟ್ ಗರ್ಲ್ಸ್ ಕೇವಲ ಶಾಲೆಗೆ ಸೇರಿಸುವುದಷ್ಟಕ್ಕೇ ಕೊನೆಗೊಳ್ಳದೆ, ಹೆಣ್ಣುಮಕ್ಕಳ ಜೀವನದಲ್ಲಿ ಆಳವಾದ ಬದಲಾವಣೆಯನ್ನು ತರುತ್ತಿದೆ. ಶಿಕ್ಷಣ ಪಡೆದ ಮಹಿಳೆಯರು ಇನ್ನು ಮುಂದೆ ಬಾಲ್ಯ ವಿವಾಹವನ್ನು ಪ್ರಶ್ನಿಸುತ್ತಾರೆ, ಶೌಚಾಲಯಗಳ ಅಗತ್ಯವನ್ನು ಒತ್ತಾಯಿಸುತ್ತಾರೆ, ಮತ್ತು ತಮ್ಮ ಹಕ್ಕುಗಳಿಗಾಗಿ ಧೈರ್ಯವಾಗಿ ಎದ್ದುನಿಂತು ಕೇಳುತ್ತಾರೆ. ಅನೇಕ ಗ್ರಾಮಗಳಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸವು ಪೋಷಕರ ಮನೋಭಾವವನ್ನೇ ಬದಲಿಸಿದೆ. ಕುಟುಂಬಗಳು ಈಗ ಹೆಣ್ಣುಮಕ್ಕಳಿಗೂ ಸಮಾನ ಅವಕಾಶ ನೀಡಬೇಕೆಂಬ ಅರಿವಿಗೆ ಬರುತ್ತಿವೆ. ಸಂಸ್ಥೆಯ ಈ ಸಾಧನೆ ವಿಶ್ವದ ಗಮನ ಸೆಳೆದಿವೆ. 2023ರಲ್ಲಿ ಸಫೀನಾ ಹುಸೇನ್ ಅವರಿಗೆ ಜಾಗತಿಕವಾಗಿ ಪ್ರತಿಷ್ಠಿತವಾದ WISE Prize for Education ದೊರಕಿತು. ಅದೇ ಶ್ರೇಣಿಯ ಮತ್ತೊಂದು ದೊಡ್ಡ ಮಾನ್ಯತೆ ಎಂದರೆ ಈಗ ಲಭಿಸಿರುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ.
ಭವಿಷ್ಯದ ದೃಷ್ಟಿಕೋನ
ಸಫೀನಾ ಹುಸೇನ್ ಅವರು ಮುಂದಿನ ದಶಕದಲ್ಲಿ ’10 ಬೈ 10′ ಕಾರ್ಯಕ್ರಮದ ಮೂಲಕ 1 ಕೋಟಿ ಹೆಣ್ಣುಮಕ್ಕಳನ್ನು ಶಿಕ್ಷಣದ ಹಾದಿಗೆ ತರುವ ಗುರಿ ಹೊಂದಿದ್ದಾರೆ. ಅವರ ಕನಸು ಕೇವಲ ಭಾರತಕ್ಕೆ ಸೀಮಿತವಲ್ಲ; ಇತರ ದೇಶಗಳಲ್ಲೂ ಇದೇ ಮಾದರಿಯನ್ನು ಅನುಸರಿಸಿ ಹೆಣ್ಣುಮಕ್ಕಳಿಗೆ ಅವಕಾಶ ಕಲ್ಪಿಸುವುದಾಗಿದೆ. ”ಒಂದು ಹೆಣ್ಣುಮಗು ಶಿಕ್ಷಣ ಪಡೆದರೆ, ಅವಳ ಕುಟುಂಬ, ಅವಳ ಗ್ರಾಮ ಹಾಗೂ ಅವಳ ಮುಂದಿನ ಪೀಳಿಗೆಗಳು ಬೆಳೆಯುತ್ತವೆ” ಎಂಬ ಆಲೋಚನೆಯೇ ಸಂಸ್ಥೆಯ ಧ್ಯೇಯವಾಗಿದೆ.
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಿಕ್ಕಿರುವುದು ಕೇವಲ ಎಜುಕೇಟ್ ಗರ್ಲ್ಸ್‌ಗೆ ಸಿಗುವ ಗೌರವವಲ್ಲ. ಇದು ಸಮಾಜ ಸೇವೆಯಲ್ಲಿ ತೊಡಗಿರುವ ಸಾವಿರಾರು ಎನ್‌ಜಿಒಗಳಿಗೆ, ಹಳ್ಳಿಗಳಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಸ್ವಯಂಸೇವಕರಿಗೆ, ಮತ್ತು ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಹೆಣ್ಣುಮಗುವಿಗೂ ಸ್ಫೂರ್ತಿಯಾಗಿದೆ. ಶಿಕ್ಷಣದ ಹಕ್ಕು ಒಂದು ಮೂಲಭೂತ ಮಾನವ ಹಕ್ಕು ಎಂದು ವಿಶ್ವಕ್ಕೆ ಮತ್ತೆ ನೆನಪಿಸುವುದರ ಜೊತೆಗೆ, ಬಡತನ ಮತ್ತು ಪಿತೃಪ್ರಧಾನ ಶಕ್ತಿಯನ್ನು ಮುರಿಯುವ ಶಕ್ತಿಯೇ ಶಿಕ್ಷಣವೆಂಬುದನ್ನು ದೃಢಪಡಿಸುತ್ತದೆ. ಇಂದು ಎಜುಕೇಟ್ ಗರ್ಲ್ಸ್ 20 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳ ಜೀವನವನ್ನು ಬದಲಿಸಿದೆ. ಆದರೆ ಸಂಸ್ಥೆ ತನ್ನ ಗುರಿಯನ್ನು ಇನ್ನೂ ಮುಟ್ಟಿಲ್ಲವೆಂದು ತಿಳಿದು, ಇನ್ನೂ ಹೆಚ್ಚು ಶ್ರಮಿಸುತ್ತಿದೆ.
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಅವರ ಭವಿಷ್ಯವನ್ನೇ ರೂಪಿಸುವುದಲ್ಲ; ಅದು ಸಮಾನತೆ, ನ್ಯಾಯ ಹಾಗೂ ಅಭಿವೃದ್ಧಿಯ ನೂತನ ಸಮಾಜವನ್ನು ಕಟ್ಟುವ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಹಾದಿಯಲ್ಲಿ ಎಜುಕೇಟ್ ಗರ್ಲ್ಸ್ ಮಾಡಿದ ಕೆಲಸ ಭಾರತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದೆ.
