ಮೇ 3ರಂದು ಭುಗಿಲೆದ್ದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಬಿಷ್ಣುಪುರವೂ ಒಂದು. ಇಲ್ಲಿದ್ದ ಕುಕಿಗಳು ಪಕ್ಕದ ಚೂರಚಾಂದ್ಪುರಕ್ಕೆ ಪಲಾಯನ ಮಾಡಬೇಕಾಯಿತು. ಬಿಷ್ಣುಪುರ ಮತ್ತು ಚೂರಚಾಂದ್ಪುರದ ನಡುವೆ ಈಗ ಸಂಚಾರ ಮೊದಲಿನಂತೆ ಇಲ್ಲ. ಅಧಿಕಾರಿಗಳು, ಮೀಡಿಯಾ ಪ್ರತಿನಿಧಿಗಳು, ಮೈತೇಯಿಯೇತರ ಸಮುದಾಯಗಳು ಅಗತ್ಯ ದಾಖಲೆಗಳನ್ನು ತೋರಿಸಿ ಸೇನಾ ತುಕಡಿಯ ಕೋಟೆಗಳನ್ನು ಭೇದಿಸಿ ಸಂಚರಿಸಬೇಕಾಗುತ್ತದೆ
ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಪ್ರಯಾಣ ಶುರು ಮಾಡಿದರೆ ಪಶ್ಚಿಮ ಇಂಫಾಲ ದಾಟಿದ ಕೆಲವೇ ನಿಮಿಷಗಳಲ್ಲಿ ಬಿಷ್ಣುಪುರ ಜಿಲ್ಲೆ ಆರಂಭವಾಗುತ್ತದೆ. ನಮ್ಮ ಪ್ರಯಾಣ ಬಿಷ್ಣುಪುರ ಮಾರ್ಗವಾಗಿ ಚೂರಚಾಂದ್ಪುರದತ್ತ ಸಾಗಿತ್ತು. ಕುಕಿ ಪ್ರಾಬಲ್ಯದ ಜಿಲ್ಲೆಯಿದು.
ಬಿಷ್ಣುಪುರಕ್ಕೆ ಪ್ರವೇಶಿಸಿದೊಡನೆ ಸಿಗುವ ’ಫಾರೆಸ್ಟ್ ಆಫೀಸ್ ಗೇಟ್’ನಲ್ಲಿ ’ಮೈರಾ ಪೈಬಿ’ಗಳು ಧರಣಿ ಕೂತಿದ್ದರು. ’ಗೋ ಬ್ಯಾಕ್ ಅಸ್ಸಾಂ ರೈಫಲ್ಸ್’ ಎಂಬ ಆಗ್ರಹವನ್ನು ಹೊತ್ತು ದಿನವೂ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ನಮ್ಮ ಸುತ್ತಾಟಕ್ಕೆ ಜಂಟಿಯಾಗಿದ್ದ ಡ್ರೈವರ್ ನಾಸಿರ್ ಹೇಳುತ್ತಿದ್ದರು. ಕುಕಿ ಮತ್ತು ಮೈತೇಯಿಗಳ ನಡುವಣ ಹಿಂಸೆಯಲ್ಲಿ ದೊಡ್ಡ ಸಂಖ್ಯೆಯ ಸಾವು ನೋವುಗಳು ಘಟಿಸಿವೆ. ಕುಕಿಗಳಿಗೆ ಬೆಂಬಲವಾಗಿ ಅಸ್ಸಾಂ ರೈಫಲ್ಸ್ ನಿಂತಿದೆ ಎಂಬುದು ಮಣಿಪುರದ ಬಹುಸಂಖ್ಯಾತ ಮೈತೇಯಿಗಳ ಆರೋಪ. ’ಮೈರಾ ಪೈಬಿ’ ಚಳವಳಿಯ ಭಾಗವಾಗಿರುವ ಕುಕಿ ಮಹಿಳೆಯರದ್ದೂ ಇದೇ ವಾದ.
ಅಂದಹಾಗೆ ’ಮೈರಾ ಪೈಬಿ’ ಚಳವಳಿಗೆ ಬಹುದೊಡ್ಡ ಇತಿಹಾಸವೇ ಇದೆ ಎಂಬುದು ಬೇರೆಯ ಮಾತು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಮಣಿಪುರದಲ್ಲಿ ಹುಟ್ಟಿಕೊಂಡ ಈ ಚಳವಳಿ, ಶಾಂತಿಗಾಗಿ ಹೋರಾಟ ನಡೆಸುತ್ತಿದೆ. ದೀವಿಗೆ ಹಿಡಿದು ಗಮನ ಸೆಳೆಯುವುದರಿಂದ ಈ ಹೋರಾಟಕ್ಕೆ ’ಮೈರಾ ಪೈಬಿ’ (Women torch bearers) ಎಂಬ ಹೆಸರು ಬಂದಿದೆ. ಇಂಫಾಲ ಕಣಿವೆಯ ’ಮೈರಾ ಪೈಬಿ’ಗಳು ಅಸ್ಸಾಂ ರೈಫಲ್ಸ್‌ನವರನ್ನು ಈಗ ಅನುಮಾನದಿಂದ ನೋಡುತ್ತಿದ್ದಾರೆ.
‘ಮೈರಾ ಪೈಬಿ’ಗಳ ಫೋಟೋ ತೆಗೆಯಲು ಇಳಿದಾಗ ಆ ಕ್ಷಣದಲ್ಲಿ ಬಿಷ್ಣುಪುರ ಮಾರ್ಗವಾಗಿ ಸೇನೆಯ ತುಕುಡಿಯೊಂದು ಬರುತ್ತಲಿತ್ತು. ತಕ್ಷಣವೇ ಜಾಗೃತರಾದ ಹೋರಾಟಗಾರ್ತಿಯರು ’ಗೋಬ್ಯಾಕ್ ಅಸ್ಸಾಂ ರೈಫಲ್ಸ್’ ಎಂದು ರಸ್ತೆಗೆ ಅಡ್ಡಗಟ್ಟಿದರು. ಆದರೆ ಅದು ಅಸ್ಸಾಂ ರೈಫಲ್ಸ್ ತುಕುಡಿಯಾಗಿರಲಿಲ್ಲ. ನಾವು ವಿಚಾರಿಸಿದಾಗ ’ನಮ್ಮದು ಸಿಖ್ ರೆಜಿಮೆಂಟ್’ ಎಂಬ ಮಾಹಿತಿ ಸಿಕ್ಕಿತು. ಹೋರಾಟಗಾರ್ತಿಯರೊಂದಿಗೆ ಮಾತುಕತೆ ನಡೆದು ಸೇನೆಗೆ ದಾರಿ ಬಿಡಲಾಗಿತ್ತು.
ಮೇ 3ರಂದು ಭುಗಿಲೆದ್ದ ಹಿಂಸಾಚಾರ ತ್ರಸ್ತ ಪ್ರದೇಶಗಳಲ್ಲಿ ಬಿಷ್ಣುಪುರವೂ ಒಂದು. ಇಲ್ಲಿದ್ದ ಕುಕಿಗಳು ಪಕ್ಕದ ಚೂರಚಾಂದ್ಪುರಕ್ಕೆ ಪಲಾಯನ ಮಾಡಬೇಕಾಯಿತು. ಬಿಷ್ಣುಪುರ ಮತ್ತು ಚೂರಚಾಂದ್ಪುರದ ನಡುವೆ ಈಗ ಸಂಚಾರ ಮೊದಲಿನಂತೆ ಇಲ್ಲ. ಅಧಿಕಾರಿಗಳು, ಮೀಡಿಯಾ ಪ್ರತಿನಿಧಿಗಳು, ಮೈತೇಯಿಯೇತರ ಸಮುದಾಯಗಳು ಅಗತ್ಯ ದಾಖಲೆಗಳನ್ನು ತೋರಿಸಿ ಸೇನಾ ತುಕಡಿಯ ಕೋಟೆಗಳನ್ನು ಭೇದಿಸಿ ಸಂಚರಿಸಬೇಕಾಗುತ್ತದೆ.

ಐತಿಹಾಸಿಕ ’ಮೊಯಿರಾಂಗ್’ ದಾಟಿದ ಕೂಡಲೇ ಸೇನೆಯ ‘ಬಫರ್ ಜೋನ್’ ಆರಂಭವಾಗುತ್ತದೆ. ಅಂದಹಾಗೆ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಕಟ್ಟಿದ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ) ಪ್ರಧಾನ ಕಚೇರಿ ಇದ್ದ ಸ್ಥಳ ಮೊಯಿರಾಂಗ್. ಐಎನ್ಎಯ ಕರ್ನಲ್ ಶೌಕತ್ ಮಲಿಕ್ ಅವರು 14 ಏಪ್ರಿಲ್ 1944 ರಂದು, ಅಂದರೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಇದೇ ಮೊಯಿರಾಂಗ್ ನಲ್ಲಿ ಈಗ ಇಲ್ಲಿ ಐಎನ್ಎ ವಸ್ತು ಸಂಗ್ರಹಾಲಯ ಕೂಡ ಇದೆ. ಮೊಯಿರಾಂಗ್ ದಾಟಿದ ಮೇಲೆ ಸಿಗುವ ಕಾಂಗ್ವೈ ಬಜಾರ್ ಎಂಬಲ್ಲಿ ‘ಬಫರ್ ಜೋನ್’ನ ಆರಂಭ.
ಬಿಎಸ್ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್), ಕುಮಾಂವ್ ರೆಜಿಮೆಂಟ್, ಅಸ್ಸಾಂ ರೈಫಲ್ಸ್- ಹೀಗೆ ಹಲವು ತನಿಖಾ ಠಾಣೆಗಳನ್ನು ದಾಟಬೇಕಾಗುತ್ತದೆ. ಮೈತೇಯಿ ಆಗಿದ್ದರೆ ಲಮ್ಕಾ (ಚೂರಾಚಾಂದ್ಪುರದ) ಕಡೆಗೆ ಬಿಡುವುದಿಲ್ಲ. ಬಿಷ್ಣುಪುರ ಪ್ರವೇಶಿಸಬೇಕಾದರೆ, ಲಮ್ಕಾ ಕಡೆಯಿಂದ ಬರುವವರು ಕುಕಿಯಾಗಿರುವಂತಿಲ್ಲ. ಹೀಗಾಗಿ ಅಗತ್ಯ ದಾಖಲಾತಿಗಳನ್ನು ಇಟ್ಟುಕೊಂಡು ಇಲ್ಲಿನ ಜನರು ಓಡಾಡಬೇಕಾಗುತ್ತದೆ. ಹೀಗಾಗಿ ಈ ರಸ್ತೆ ಬಹುತೇಕ ಭಣಗುಟ್ಟುತ್ತಿರುತ್ತದೆ.
ಬಿಷ್ಣುಪುರ ಭಾಗದ ಅಲ್ಲಲ್ಲಿ ಸೇನೆಯ ದಿರಿಸಿನಲ್ಲಿ ಯುವಕರ ಗುಂಪುಗಳು ಕಾಣಸಿಗುತ್ತವೆ. ಶಸ್ತ್ರಾಧಾರಿಗಳಾಗಿ ಕಾವಲು ಕಾಯುವ ಇವರು ಮೈತೇಯಿ ಸಂಘಟನೆ ’ಆರಂಬಯ್ ತೆಂಗೋಲ್’ಗೆ ಸೇರಿದವರು ಎಂದು ಸ್ಥಳೀಯ ಮೂಲಗಳು ಹೇಳುತ್ತವೆ. ಹೀಗೆಯೇ ಕುಕಿಗಳ ಕಡೆಯ ಗುಂಪುಗಳೂ ತಮ್ಮ ಗಡಿಗಳಲ್ಲಿ ಸೇನೆಯ ದಿರಿಸಿನಲ್ಲಿ ಕಾವಲು ಕಾಯುವುದು ಸಾಮಾನ್ಯವಾಗಿದೆ. ಇದು ಸ್ವಯಂಸೇವೆಯೆಂದೇ ಉಭಯ ಸಮುದಾಯದ ಯುವಜನರು ಭಾವಿಸಿದ್ದಾರೆ.
ಲಮ್ಕಾಕ್ಕೆ ಪ್ರವೇಶಿಸುವ ಮುನ್ನವೇ ಒಂದು ವಿಷಯವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ. ಮೈತೇಯಿಗಳ ಪ್ರಕಾರ ಈ ಜಿಲ್ಲೆಯ ಹೆಸರು- ’ಚೂರಚಾಂದ್ಪುರ್’. ಆದರೆ ಕುಕಿಗಳು ಈ ಹೆಸರನ್ನು ಒಪ್ಪುವುದಿಲ್ಲ. ’ಲಮ್ಕಾ’ ಎಂದೇ ಕರೆದುಕೊಂಡಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ಪ್ರತಿ ಕಟ್ಟಡ, ಕಚೇರಿ, ಅಂಗಡಿ ಮುಂಗಟ್ಟುಗಳ ಮೇಲಿನ ’ಚೂರಚಾಂದ್ಪುರ್’ ಎಂಬ ಹೆಸರನ್ನು ಕಿತ್ತು ಹಾಕಲಾಗಿದೆ ಅಥವಾ ಕಪ್ಪು ಮಸಿ ಬಳಿದು ಮುಚ್ಚಿಹಾಕಿ, ಪಕ್ಕದಲ್ಲಿ ’ಲಮ್ಕಾ’ (LAMKA) ಎಂದು ಬರೆಯಲಾಗಿದೆ. ಶೇ. 90ಕ್ಕಿಂತ ಹೆಚ್ಚು ಬುಡಕಟ್ಟು ಕುಕಿಗಳು ಲಮ್ಕಾದಲ್ಲಿ ಇದ್ದಾರೆ.
ಲಮ್ಕಾ ಪ್ರವೇಶಿಸುವ ಆರಂಭದಲ್ಲಿ ’ಈ ದಿನ’, ’ನ್ಯೂಸ್ ಮಿನಿಟ್’ ತಂಡಕ್ಕೆ ಮೊದಲು ಸಿಕ್ಕಿದ್ದು ಐಟಿಎಲ್ಎಫ್ (Indigenous Tribal Leaders’ Forum) ಮಹಿಳಾ ಘಟಕದ ಕಾವಲು ಪಡೆ. ನಮ್ಮ ದಾಖಲೆಗಳನ್ನು ಪರಿಶೀಲಿಸಿ, ಲಗುಬಗೆಯಿಂದಲೇ ಲಮ್ಕಾಕ್ಕೆ ಸ್ವಾಗತಿಸಿದಾಗ ನಾವು ಅಂತಿಮ ‘ಬಫರ್ ಜೋನ್’ ದಾಟಿದ್ದೆವು.



ಗುಡ್ಡಗಾಡು ಜಿಲ್ಲೆ ’ಲಮ್ಕಾ’ದಲ್ಲಿ ಅಭಿವೃದ್ಧಿ ಮರೀಚಿಕೆ ಎಂಬುದು ಮೊದಲ ನೋಟಕ್ಕೇ ಅರ್ಥವಾಗಿಬಿಡುತ್ತದೆ. ಆದರೀಗ ಕುಕಿಗಳಿಗೆ ’ಲಮ್ಕಾ’ ಸುರಕ್ಷಿತ ತಾಣ. ನೂರಕ್ಕೂ ಹೆಚ್ಚು ನಿರಾಶ್ರಿತ ಶಿಬಿರಗಳನ್ನು ಈ ಭಾಗದಲ್ಲಿ ತೆರೆಯಲಾಗಿದೆ. ಗುಡ್ಡಗಾಡು ಜಿಲ್ಲೆಯ, ಯಾವುದಾದರೂ ಚರ್ಚ್‌ನಲ್ಲಿಯೋ, ಹಳೆಯದೊಂದು ಪಾಳುಬಿದ್ದ ಕಟ್ಟಡದಲ್ಲಿಯೋ ನಿರಾಶ್ರಿತ ಶಿಬಿರಗಳು ನಡೆಯುತ್ತಿವೆ. ಮೈತೇಯಿ ಹಿಡಿತದಲ್ಲಿರುವ ಮಣಿಪುರ ಸರ್ಕಾರ ಕುಕಿಗಳಿಗೆ ನಿರಾಶ್ರಿತ ಕೇಂದ್ರಗಳನ್ನು ತೆರೆದಿಲ್ಲ ಎಂಬುದು ಇಲ್ಲಿನ ಜನತೆಯ ಆರೋಪ.
ಇಂಫಾಲದಲ್ಲಿ ನೋಡಿದ ಶಿಬಿರಗಳಿಗೂ, ಕುಕಿಗಳು ಇರುವ ಶಿಬಿರಗಳಿಗೂ ಅಜಗಜಾಂತರವಿದೆ. ಕನಿಷ್ಠ ಜೀವಿಸಲು ಯೋಗ್ಯವಾದ ನಿರಾಶ್ರಿತ ಶಿಬಿರಗಳನ್ನು ಇಂಪಾಲದಲ್ಲಿ ಕಾಣಬಹುದಾದರೂ ಗುಡ್ಡುಗಾಡು ಜಿಲ್ಲೆಯಾದ ’ಲಮ್ಕಾ/ಚೂರ ಚಾಂದ್ಪುರ’ದಲ್ಲಿ ಶಿಬಿರಗಳು ರೋಗ ರುಜಿನಗಳ ಆಶ್ರಯತಾಣದಂತೆ ಕಾಣುತ್ತಿವೆ.
ಜುಲೇಮನ್ ಎಂಬ ಹಳ್ಳಿಯಲ್ಲಿ ಆರಂಭಿಸಲಾಗಿರುವ ಕುಕಿ ಶಿಬಿರಕ್ಕೆ ಭೇಟಿ ನೀಡಿದೆವು. ಸುಮಾರು 120 ಕುಕಿಗಳು ವಾಸವಿರುವ ಈ ಶಿಬಿರದಲ್ಲಿ ಅನ್ನ, ದಾಲ್ ಮತ್ತು ಬೇಯಿಸಿದ ಆಲೂ- ಇಷ್ಟೇ ಆಹಾರ. “ಮೇಲೆ ಸೂರು ಇರುವುದರಿಂದ ಮಳೆ ಬಂದರೆ ನೆನೆಯುವುದಿಲ್ಲ ಎಂಬುದನ್ನು ಬಿಟ್ಟರೆ ಸೊಳ್ಳೆಗಳ ಕಾಟಕ್ಕೆ ಮದ್ದಿಲ್ಲ. ಕುಕಿಗಳನ್ನು ಬಿರೇನ್ ಸರ್ಕಾರ ರಕ್ಷಿಸುವುದಿಲ್ಲ. ಜಿಲ್ಲೆಯಲ್ಲಿ 105 ಶಿಬಿರಗಳಿವೆ. ಅವೆಲ್ಲ ಇದೇ ದುಸ್ಥಿತಿಯಲ್ಲಿವೆ” ಎಂದು ನೋವು ತೋಡಿಕೊಂಡರು ಕುಕಿ ಸಮುದಾಯದ ಮಾಗ್ತಾಗ್ ಓಕಿ.
ಚಿತ್ರಗಳು: ಯತಿರಾಜ್, ಭುವನ್ ಮಲ್ಲಿಕ್ The News Minute
(ನಿರಾಶ್ರಿತ ಶಿಬಿರಗಳ ವರದಿ ಮುಂದುವರಿಯುತ್ತದೆ…)

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
This is a timely initiative by edina news portal. We all are eager to know the first hand reporting on the ground situation there. Great going Yathiraj and team, all power to you.
ಧನ್ಯವಾದಗಳು ಸರ್
ಶಾಂತಿ ನೆಲೆಸಲಿ
ಸತ್ಯ ಮತ್ತು ವಸ್ತುನಿಷ್ಠ ವರದಿ. ಧನ್ಯವಾದಗಳು.
ಸತ್ಯ ಮತ್ತು ಪ್ರಮಾಣಿಕವಾದ ನೈಜ ವರದಿ, ನಿಮ್ಮಗೆ ನಿಮ್ಮ ತಂಡಕ್ಕೆ ಹಾಗೂ ಈ ದಿನ.ಕಾಂ ನ ಎಲ್ಲರಿಗೂ ಧನ್ಯವಾದಗಳು