ಮಣಿಪುರದಿಂದ ’ಈ ದಿನ’ ವರದಿ- 4 | ಜನಾಂಗೀಯ ಕದನದಲ್ಲಿ ಮಡಿದ ಕುಕಿಗಳ ’ನೆನಪಿನ ಗೋಡೆ’

Date:

Advertisements
ರಸ್ತೆಯ ಪಕ್ಕದಲ್ಲಿ ಸಾಲಾಗಿ ಜೋಡಿಸಿದ ಖಾಲಿ ಶವಪೆಟ್ಟಿಗೆಗಳು, ’ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕು’ ಎಂಬ ಫಲಕಗಳು, ಮಡಿದವರ ಫೋಟೋಗಳ ಮುಂದಿಟ್ಟ ಸಾಲು ಸಾಲು ಹೂಗುಚ್ಛಗಳು… ಸಾವಿನ ನೋವನ್ನು ನಿತ್ಯವೂ ನೆನೆಯುವ, ನಿಲ್ಲದ ಕದನದ ನಡುವೆ ಪ್ರಭುತ್ವವನ್ನು ಪ್ರಶ್ನಿಸುವ ರೀತಿಯೂ ಇದಾಗಿದೆ

ಇಂಫಾಲದಿಂದ ಬಿಷ್ಣುಪುರ ಮಾರ್ಗವಾಗಿ ಲಮ್ಕಾ/ಚೂರಚಾಂದ್ಪುರ ಜಿಲ್ಲಾ ಕೇಂದ್ರವನ್ನು ಪ್ರವೇಶಿಸಿದರೆ ಆರಂಭದಲ್ಲೇ ’ವಾಲ್ ಆಫ್ ರಿಮೆಂಬರೆನ್ಸ್’ (ಸ್ಮರಣೆಯ ಗೋಡೆ) ಗಮನ ಸೆಳೆಯುತ್ತದೆ. ಜನಾಂಗೀಯ ಕಲಹದಲ್ಲಿ ಮಡಿದವರ ಸ್ಮರಣೆಯು ಚೂರಚಾಂದ್ಪುರದ ತೈಬಾಂಗ್ ನಲ್ಲಿರುವ ಶಾಂತಿ ಮೈದಾನದ ಬಳಿ ನಿತ್ಯವೂ ನಡೆಯುತ್ತಿದೆ.

ರಸ್ತೆಯ ಪಕ್ಕದಲ್ಲಿ ಸಾಲಾಗಿ ಜೋಡಿಸಿದ ಖಾಲಿ ಶವಪೆಟ್ಟಿಗೆಗಳು, ’ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕು’ ಎಂಬ ಫಲಕಗಳು, ಮಡಿದವರ ಫೋಟೋಗಳ ಮುಂದಿಟ್ಟ ಸಾಲು ಸಾಲು ಹೂಗುಚ್ಛಗಳು… ಸಾವಿನ ನೋವನ್ನು ನಿತ್ಯವೂ ನೆನೆಯುವ, ನಿಲ್ಲದ ಕದನದ ನಡುವೆ ಪ್ರಭುತ್ವವನ್ನು ಪ್ರಶ್ನಿಸುವ ರೀತಿಯೂ ಇದಾಗಿದೆ.

ಮೇ 3ರಂದು ಮಣಿಪುರ ರಾಜ್ಯಾದ್ಯಂತ ಭುಗಿಲೆದ್ದ ಹಿಂಸಾಚಾರದ ಬಳಿಕ ಕುಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾದರು. ಉಭಯ ಸಮುದಾಯಗಳ ಜನಸಾಮಾನ್ಯರು ಅಮಾಯಕರು, ನಿಜಕ್ಕೂ ಸಂತ್ರಸ್ತರು. ಮೈತೇಯಿಗಳ ಆರಂಬೈ ತೆಂಗೋಲ್, ಮೈತೇಯಿ ಲಿಪೂನ್, ಕುಕಿಗಳ ಐಟಿಎಲ್ಎಫ್ (Indigenous Tribal Leaders’ Forum), ಜೋಮಿ ವಿದ್ಯಾರ್ಥಿಗಳ ಒಕ್ಕೂಟ (ZSF), ಕುಕಿ ವಿದ್ಯಾರ್ಥಿಗಳ ಸಂಸ್ಥೆ (KSO) ಮೊದಲಾದ ಸಂಘಟನೆಗಳು ಈ ಅಂತರ್ಯುದ್ಧದಲ್ಲಿ ಪಾತ್ರ ವಹಿಸಿವೆ ಎಂಬುದು ನಿಜ. ಕೊಲೆ, ಅತ್ಯಾಚಾರಗಳಲ್ಲಿ ಎರಡೂ ಸಮುದಾಯಗಳ ಗುಂಪುಗಳು ಭಾಗಿ ಎಂಬುದು ತಟಸ್ಥ ನಿಲುವಿನ ಸ್ಥಳೀಯರ ಅಭಿಪ್ರಾಯ.

Advertisements

ಜೊತೆಗೆ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಪಕ್ಷಪಾತಿಯಾಗಿದೆ ಎನ್ನುವ ಕುಕಿ ಸಮುದಾಯದ ಆರೋಪದಲ್ಲಿ ಸತ್ಯವೂ ಇದೆ. ಕುಕಿಗಳು ಸ್ಥಾಪಿಸಿರುವ ’ನೆನಪಿನ ಗೋಡೆ’ಗೆ ರಾಜಕೀಯ ಆಯಾಮದ ಜೊತೆಗೆ ಮಾನವೀಯ ದೃಷ್ಟಿಯೂ ಇದೆ.

Wall of martyrs ೫೫೫೫
ಹಿಂಸಾಚಾರದಲ್ಲಿ ಮೃತಪಟ್ಟವರ ನೆನೆಯುತ್ತಾ…

“ಈವರೆಗೆ (ಬುಧವಾರ, ಆಗಸ್ಟ್ 9ರವರೆಗೆ) 130ಕ್ಕೂ ಹೆಚ್ಚು ಕುಕಿಗಳು ಸಾವಿಗೀಡಾಗಿದ್ದಾರೆ. 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, 357 ಚರ್ಚುಗಳು ಮತ್ತು 4,550 ಮನೆಗಳನ್ನು ಸುಟ್ಟು ಹಾಕಲಾಗಿದೆ, ಕುಕಿಗಳ 292 ಗ್ರಾಮಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ಕುಕಿ ಸಮುದಾಯ ಅಂಕಿ-ಅಂಶಗಳನ್ನು ಇಲ್ಲಿ ನೀಡಿದೆ. ಮೇ 3ರ ನಂತರ ಹಿಂಸಾಚಾರ ಮತ್ತು ಸ್ಥಳಾಂತರ ಆರಂಭವಾದ ಬಳಿಕ ಮಡಿದ ಕುಕಿಗಳ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಕಾಣೆಯಾದವರ ಜಾಗದಲ್ಲಿ ಫೋಟೋ ಹಾಕದೆ ಖಾಲಿ ಬಿಡಲಾಗಿದೆ.

ಸತ್ತವರಿಗೆ ಸಂತಾಪ ಸೂಚಿಸಿ ಸಾವಿರಾರು ಜನ ಈವರೆಗೆ ಹಸ್ತಾಕ್ಷರ ಹಾಕಿದ್ದಾರೆ. “ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಯಾಗಬೇಕು, ‘ಕುಕಿಲ್ಯಾಂಡ್’ಗಾಗಿ ನಮ್ಮ ಹೋರಾಟ” ಮೊದಲಾದ ಘೋಷಣೆಗಳು ‘ವಾಲ್ ಆಫ್ ರಿಮೆಂಬರೆನ್ಸ್’ ನಲ್ಲಿ ದಾಖಲಾಗಿವೆ. “ನಮ್ಮ ಬುಡಕಟ್ಟು ಹುತಾತ್ಮರು- ಸರ್ಕಾರಿ ಪ್ರಾಯೋಜಿತ ಜನಾಂಗೀಯ ಶುದ್ಧೀಕರಣದ ಸಂತ್ರಸ್ತರು” ಎಂಬ ಸಾಲುಗಳೊಂದಿಗೆ ಹತ್ಯೆಗೊಳಗಾದವರ ವಿವರಗಳನ್ನು ಪ್ರಕಟಿಸಲಾಗಿದೆ. ಕುಕಿಗಳ ಸಾವು ನೋವುಗಳ ಕುರಿತು ಬಿಟ್ಟು ಹೋಗಿರುವ ಮಾಹಿತಿ ಇದ್ದರೆ ನೀಡುವಂತೆಯೂ ಕೋರಿದ್ದಾರೆ.

ಇಲ್ಲಿನ ವಿವರಗಳನ್ನು ನೋಡಿದರೆ, ಕುಕಿ- ಮೈತೇಯಿ ಕಲಹದಲ್ಲಿ ಸಾವಿಗೀಡಾದ ಬಹುತೇಕರು ಯುವಜನರು ಎಂಬುದು ಮನದಟ್ಟಾಗುತ್ತದೆ. ಮೂವತ್ತರಿಂದ- ನಲವತ್ತು ವರ್ಷದ ವಯೋಮಾನದವರ ಬದುಕುಗಳು ಭಗ್ನಗೊಂಡು ಮಣ್ಣಾಗಿವೆ. ಶೋಕ, ಗಾಢ ಮೌನ, ವಿಷಾದದ ಛಾಯೆ ಇಲ್ಲಿ ಹೆಪ್ಪುಗಟ್ಟಿ ಆವರಿಸಿದೆ.

wall 2
‘ವಾಲ್ ಆಫ್ ರಿಮೆಂಬರೆನ್ಸ್’ ಬಳಿ ಅಳವಡಿಸಿರುವ ಬ್ಯಾನರ್

“ಮಕ್ಕಳು, ಮಹಿಳೆಯರು, ಗಂಡಸರು, ಹಿರಿಯರು, ವಿಶೇಷ ಚೇತನರು- ಸರ್ಕಾರಿ ಪ್ರಾಯೋಜಿತ ಗಲಭೆಯಲ್ಲಿ ಸಾವಿಗೀಡಾಗಿದ್ದಾರೆ. ಅನೇಕರು ಕಾಣೆಯಾಗಿದ್ದು, ಈವರೆಗೂ ಮನೆಗೆ ಹಿಂತಿರುಗಿಲ್ಲ” ಎಂದು ‘ವಾಲ್ ಆಫ್ ರಿಮೆಂಬರೆನ್ಸ್’ ಫಲಕದಲ್ಲಿ ದಾಖಲಿಸಲಾಗಿದೆ. “ಲಮ್ಕಾದ ಜಂಟಿ ವಿದ್ಯಾರ್ಥಿ ಘಟಕದಿಂದ ನೆನಪಿನ ಗೋಡೆ ರೂಪುಗೊಂಡಿತು. ಅನೇಕ ನಾಗರಿಕರು ಕೈ ಜೋಡಿಸಿದರು. ಜೂನ್ 24ರಂದು ಖಾಲಿ ಶವಪೆಟ್ಟಿಗೆಗಳನ್ನು ಲಮ್ಕಾ ವೈದ್ಯಕೀಯ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿ ಸರ್ಕಾರವನ್ನು ಎಚ್ಚರಿಸಲಾಗಿತ್ತು” ಎನ್ನುತ್ತಾರೆ ಐಟಿಎಲ್ಎಫ್ ಸದಸ್ಯರಾದ ಗ್ರೇಸಿ.

ಇದನ್ನು ಓದಿ ಮಣಿಪುರದಿಂದ ’ಈ ದಿನ’ ವರದಿ-3 | ಕುಕಿಗಳ ನಿರಾಶ್ರಿತ ಶಿಬಿರದಲ್ಲಿ; ಕುಕಿ-ಮೈತೇಯಿ ದಂಪತಿ ದೂರ ಮಾಡಿದ ಅಂತರ್ಯುದ್ಧ

ನಿತ್ಯವೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿರೋಧಕ್ಕೆ ವಾಲ್ ಆಫ್ ರಿಮೆಂಬರೆನ್ಸ್ ವೇದಿಕೆಯಾಗಿದೆ. ಹಾಡು, ಕತೆ, ಭಾಷಣಗಳ ಮೂಲಕ ತಮ್ಮ ಒಗ್ಗಟ್ಟನ್ನು, ಪ್ರತಿರೋಧವನ್ನು ಕುಕಿಗಳು ಪ್ರದರ್ಶಿಸುತ್ತಿದ್ದಾರೆ. “ಮಡಿದವರ ಸಾಮೂಹಿಕ ಅಂತ್ಯಕ್ರಿಯೆಗೆ” ಕುಕಿಗಳು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲ. ’ನೆನಪಿನ ಗೋಡೆ’ಯು ಗಾಯಗಳನ್ನು ಕೆದಕಿ ವ್ರಣವಾಗಿಸದೆ, ಜಾಗೃತಿ- ಸಾಂತ್ವನದ ಲೇಪವಾಗಲಿ ಎಂಬುದು ಇಲ್ಲಿನ ಪ್ರಜ್ಞಾವಂತ ನಾಗರಿಕರ ಆಶಯ

ಚಿತ್ರಗಳು: ಯತಿರಾಜ್‌

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

1 COMMENT

  1. ಉತ್ತಮ ನಿರೂಪಣೆ. ಮಣಿಪುರ ದ ಸ್ಥಿತಿಯನ್ನು ಓದಿ ಕಣ್ಣಾಲಿ ತುಂಬಿಕೊಂಡಿದೆ. ಅಧಿಕಾರದ ಮದ ಎಷ್ಟೋ ಅಮಾಯಕ ಮುಗ್ದ ಜನರ ಬದುಕನ್ನೇ ನಿರ್ನಾಮ ಮಾಡಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X