ಮಣಿಪುರದಿಂದ ’ಈ ದಿನ’ ವರದಿ- 5 | ಎಳೆಯ ಕೈಗಳಲ್ಲಿ ಬಂದೂಕು! ಬಂಕರ್‌ಗಳಲ್ಲಿ ಕಂಡ ದುರಂತ ಕಥನ

Date:

Advertisements
ಹುಟ್ಟಿನಿಂದಲೇ ಸಂಘರ್ಷಗಳನ್ನು ನೋಡುತ್ತಾ ಬಂದಿರುವ ಆ ಯುವಕರ ಕಣ್ಣುಗಳಲ್ಲಿ ಭಯವೇನೂ ಕಾಣಲಿಲ್ಲ. ಸಿಂಗಲ್ ಬ್ಯಾರಲ್, ಡಬ್ಬಲ್ ಬ್ಯಾರೆಲ್ ಗನ್ನುಗಳನ್ನು ನೇತು ಹಾಕಿಕೊಂಡು ಪಹರೆಯಲ್ಲಿದ್ದಾರೆ. ನಮ್ಮನ್ನು ಬಂಕರ್ ಇರುವ ಸ್ಥಳಕ್ಕೆ ಕರೆದೊಯ್ದಿದ್ದ ಕುಕಿ ವಿದ್ಯಾರ್ಥಿ ಸಂಘಟನೆ ಯುವಕ ತಮ್ಮ ಹೋರಾಟದ ಕತೆಗಳನ್ನು ಹೇಳುತ್ತಲೇ ಇದ್ದ.

ಅವನಿಗಿನ್ನೂ ಹದಿನೈದರ ಪ್ರಾಯ, ಒಂಬತ್ತನೇ ತರಗತಿಯ ವಿದ್ಯಾರ್ಥಿ. ಕುಕಿ-ಮೈತೇಯಿ ಸಂಘರ್ಷ ಅವನ ಕೈಗೆ ಬಂದೂಕು ನೀಡಿದೆ. ಕೆಲವೇ ತಿಂಗಳ ಹಿಂದೆ ಶಸ್ತ್ರಾಸ್ತ್ರ ತರಬೇತಿಯನ್ನೂ ಪಡೆದಿರುವ ಈ ಹದಿವಯಸ್ಕ ಈಗ ಚೂರಚಾಂದ್ಪುರ ಬಳಿಯ ಬಂಕರ್ ಒಂದರಲ್ಲಿ ಗನ್ ಹಿಡಿದು ಕಾಯುತ್ತಿದ್ದಾನೆ. ಮನೆಗೆ ಮರಳುವ ಮನಸ್ಸಿಲ್ಲ. ಗುಂಡಿನ ಕಾಳಗಕ್ಕೆ ಎದೆಯೊಡ್ಡಿದ್ದಾನೆ ಈ ಎಳೆಯ.

’ಈದಿನ.ಕಾಂ’ ತಂಡವು ಮಣಿಪುರದಲ್ಲಿನ ಸಂಘರ್ಷ ಪೀಡಿತ ಪ್ರದೇಶಗಳಲ್ಲಿನ ಕೆಲವು ಬಂಕರ್ ಗಳಿಗೆ ಭೇಟಿ ನೀಡಿತು. ಅತ್ತ ಕುಕಿ, ಇತ್ತ ಮೈತೇಯಿ ಸಮುದಾಯದ ಗ್ರಾಮಗಳಿರುವ ಜಾಗಗಳಲ್ಲಿ ಅಥವಾ ಎರಡು ಸಮುದಾಯಗಳು ಒಟ್ಟಿಗೆ ಇರುವ ಪ್ರದೇಶಗಳಲ್ಲಿ ಬಂಕರ್ ಗಳು ತಲೆ ಎತ್ತಿವೆ. ಆಗಾಗ್ಗೆ ’ಫೈರಿಂಗ್’ (ಗುಂಡಿನ ಚಕಮಕಿ) ನಡೆಯುತ್ತಿದೆ.

ಗಡಿ ಭಾಗಗಳಲ್ಲಿ ರಕ್ಷಣೆಗೆ ಮತ್ತು ಗನ್ ಫೈಟ್, ಶಸ್ತ್ರಾಸ್ತ್ರ ದಾಳಿ ನಡೆಸಲು ಅನುವಾಗುವಂತೆ ನಿರ್ಮಿಸಿಕೊಂಡ ಅಡಗು ತಾಣಗಳೇ ಬಂಕರ್ ಗಳು. ಅಲ್ಲಿ ಕುಳಿತು ಎದುರಾಳಿಯ ಆಕ್ರಮಣದ ಮೇಲೆ ನಿಗಾ ವಹಿಸಲಾಗುತ್ತದೆ. ಯಾರಾದರೂ ಗಡಿ ದಾಟಿ ಬರುವುದು ತಿಳಿದ ತಕ್ಷಣ ಹಿಮ್ಮೆಟ್ಟಿಸುವ ದಾಳಿ ಶುರುವಾಗುತ್ತದೆ. ದಾಳಿ-ಪ್ರತಿದಾಳಿಯ ವೇಳೆ ರಕ್ಷಣೆಗಾಗಿ ಈ ಬಂಕರ್ ಗಳು ಬಳಕೆಯಾಗುತ್ತವೆ.

ಮರಳು, ಮಣ್ಣು, ಜಲ್ಲಿಕಲ್ಲು ತುಂಬಿದ ಮೂಟೆಗಳ ಮೂಲಕ ಬಂಕರ್ ಗಳನ್ನು ನಿರ್ಮಿಸಿಕೊಂಡಿರುವ ಕುಕಿ ಮತ್ತು ಮೈತೇಯಿ ಯುವಕರು, ಅತ್ಯಾಧುನಿಕ ಬಂದೂಕುಗಳನ್ನು ಹಿಡಿದು ಹಗಲು ರಾತ್ರಿ ಪಾಳಿಯಲ್ಲಿ ಪಹರೆ ಹಾಕುತ್ತಿದ್ದಾರೆ.
ಆಗಸ್ಟ್ 9ರ ಬುಧವಾರ ಇಳಿ ಸಂಜೆ ನಮ್ಮ ಪ್ರಯಾಣ ಚೂರಚಾಂದ್ಪುರದಿಂದ, ಅಂದರೆ ಲಮ್ಕಾದಿಂದ ಕಾಂಗ್ವೈ ಗ್ರಾಮದತ್ತ ಹೊರಟಿತ್ತು. ಲಮ್ಕಾ ದಾಟಿದ ಕೂಡಲೇ ಚೆಕ್ ಪೋಸ್ಟ್ ಗಳು, ಸ್ವಯಂಸೇವಕರಾಗಿ ನಿಂತ ಮಿಲಿಟೆಂಟುಗಳು ಸಿಗುವುದುಂಟು. ಸ್ಥಳೀಯ ಸಂಘಟನೆಯ ಯಾರಾದರೂ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಪ್ರಯಾಣ ಸಲೀಸು.

kuki 1
ಕಾಂಗ್ವೈ ಗ್ರಾಮದ ಬಂಕರ್‌ ಬಳಿ ಬಂದೂಕು ಹಿಡಿದು ನಿಂತ ಬಾಲಕ

ಕುಕಿ ಪ್ರಾಬಲ್ಯದ ಲಮ್ಕಾದಿಂದ ಸುಮಾರು ಐದಾರು ಕಿಮೀ ದೂರದಲ್ಲಿರುವ ತೋರ್ಬುಂಗ್ ನಲ್ಲಿ ‘ಬಫರ್ ಝೋನ್’ ನಿರ್ಮಿಸಲಾಗಿದೆ. ತೋರ್ಬುಂಗ್ ಪ್ರದೇಶದ ಕಾಂಗ್ವೈ ಹಿಂಸಾಚಾರ ಪೀಡಿತ ಗ್ರಾಮ. ಇಲ್ಲಿನ ಒಂದು ಭಾಗದಲ್ಲಿ ಕುಕಿ, ಮತ್ತೊಂದು ಭಾಗದಲ್ಲಿ ಮೈತೇಯಿಗಳು ನೆಲೆಸಿದ್ದಾರೆ.

ಹುಟ್ಟಿನಿಂದಲೇ ಸಂಘರ್ಷಗಳನ್ನು ನೋಡುತ್ತಾ ಬಂದಿರುವ ಆ ಯುವಕರ ಕಣ್ಣುಗಳಲ್ಲಿ ಭಯವೇನೂ ಕಾಣಲಿಲ್ಲ. ಸಿಂಗಲ್ ಬ್ಯಾರಲ್, ಡಬ್ಬಲ್ ಬ್ಯಾರೆಲ್ ಗನ್ನುಗಳನ್ನು ನೇತು ಹಾಕಿಕೊಂಡು ಪಹರೆಯಲ್ಲಿದ್ದಾರೆ. ನಮ್ಮನ್ನು ಬಂಕರ್ ಇರುವ ಸ್ಥಳಕ್ಕೆ ಕರೆದೊಯ್ದಿದ್ದ ಕುಕಿ ವಿದ್ಯಾರ್ಥಿ ಸಂಘಟನೆ ಚೆರ್‍ರಿ (ಹೆಸರು ಬದಲಿಸಲಾಗಿದೆ) ತಮ್ಮ ಹೋರಾಟದ ಕತೆಗಳನ್ನು ಹೇಳುತ್ತಲೇ ಇದ್ದ.

“ನಾವು ಗನ್ ಹಿಡಿಯದಿದ್ದರೆ, ಅವರು (ಮೈತೇಯಿಗಳು) ನಮ್ಮನ್ನು ಕೊಲ್ಲುತ್ತಾರೆ. ನಮ್ಮ ರಕ್ಷಣೆಗಾಗಿ ನಾವು ಗನ್ ಹಿಡಿಯುವುದು ಅನಿವಾರ್ಯ” ಎಂಬುದು ಆತನ ವಾದ.

ಹದಿನೈದು, ಇಪ್ಪತ್ತು, ಇಪ್ಪತ್ತೆಂಟರ ವಯೋಮಾನದ ಹುಡುಗರ ಕೈಯಲ್ಲಿ ಬಂದೂಕುಗಳಿದ್ದವು. ಚಿಕ್ಕ ವಯಸ್ಸಿನಲ್ಲೇ ಸಾವಿನ ದವಡೆಯಲ್ಲಿರುವ ಆ ಬಾಲಕನೊಂದಿಗೆ ನಮ್ಮ ಮಾತುಕತೆ ಶುರುವಾಗಿತ್ತು. ಅರೆಬರೆ ಇಂಗ್ಲಿಷಿನಲ್ಲಿ ತನ್ನ ಹಿನ್ನೆಲೆಯನ್ನು ಆತ ಹೇಳುತ್ತಾ ಹೋದ. ನಾವು ಕೇಳಿದ ಪ್ರಶ್ನೆಗಳಿಗೆ ಸಣ್ಣನೆಯ ದನಿಯಲ್ಲಿ ಉತ್ತರಿಸುತ್ತಿದ್ದ.

“ಗನ್ ಬಳಸುವುದನ್ನು ಹೇಗೆ ಕಲಿತೆ?”

“ಅಂಡರ್ ಗ್ರೌಂಡ್ ನಲ್ಲಿ ಟ್ರೈನಿಂಗ್ ಆಗಿದೆ”. (ಯಾವುದು ಆ ಅಂಡರ್ ಗ್ರೌಂಡ್ ಎಂಬುದನ್ನು ತಿಳಿಸಲಿಲ್ಲ)

“ಯಾವಾಗ ಟ್ರೈನ್ ಆಗಿದ್ದು?”

“ಗಲಭೆ ಶುರುವಾದಾಗ ನಾನು ಹೋರಾಟಕ್ಕೆ ಬಂದೆ. ಅದಕ್ಕೂ ಒಂದು ತಿಂಗಳು ಮುಂಚೆ ನನಗೆ ಟ್ರೈನಿಂಗ್ ಆಗಿದೆ.”

“ನನಗೆ ಒಬ್ಬ ಸೋದರ, ಓರ್ವ ಸೋದರಿ ಇದ್ದಾರೆ. ಇಲ್ಲಿಯೇ ಸಮೀಪದ ತೋನ್ಸೋಗ ಗ್ರಾಮ ನಮ್ಮದು. ಧರ್ಮಪ್ರಚಾರಕನಾಗುವ ಕನಸಿದೆ. ಸ್ವಯಂಪ್ರೇರಿತನಾಗಿ ಈ ಹೋರಾಟಕ್ಕೆ ಬಂದಿರುವೆ. ಮನೆಗೆ ಹೋಗಲು ಇಷ್ಟವಿಲ್ಲ” ಎಂದನು.

ಸಿಂಗಲ್ ಬ್ಯಾರಲ್ ಗನ್ ಆತನ ಕೈಯಲ್ಲಿತ್ತು. ಇವರಿಗೆ ಗನ್ ಗಳನ್ನು ಯಾರು ಸರಬರಾಜು ಮಾಡುತ್ತಾರೆಂಬ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ. ನಮ್ಮನ್ನು ಕರೆತಂದಿದ್ದ ಕುಕಿ ಯುವಕ ಜೆರ್‍ರಿ, “ಇಲ್ಲಿಂದ ಸ್ವಲ್ಪ ದೂರದಲ್ಲಿ ಮೈತೇಯಿಗಳ ಬಂಕರ್ ಗಳಿವೆ. ಸಂಘರ್ಷ ತಾರಕಕ್ಕೇರಿದ ಬಳಿಕ ಆರ್ಮಿಯವರು ಇಲ್ಲಿ ಬೀಡುಬಿಟ್ಟಿದ್ದಾರೆ. ಆದ್ದರಿಂದ ಗನ್ ಫೈಟ್ ಕಡಿಮೆಯಾಗಿದೆ. ಬೂದಿಮುಚ್ಚಿದ ಕೆಂಡದ ಸ್ಥಿತಿಯಂತೂ ಇದ್ದೇ ಇದೆ. ಯಾವಾಗ ಬೇಕಾದರೂ ಗನ್ ಫೈಟ್ ಆಗುವ ಸಾಧ್ಯತೆಗಳಿವೆ” ಎಂದ.

ಮೈತೇಯಿ ಬಂಕರ್ ಗಳಿಗೆ ಭೇಟಿ

ಪಶ್ಚಿಮ ಇಂಫಾಲದ ವಿಶಾಲವಾದ ಕಣಿವೆಯನ್ನು ದಾಟಿ ಬೆಟ್ಟದ ತಪ್ಪಲಿನ ಕಡೆಗೆ ಗುರುವಾರ (ಆಗಸ್ಟ್ 10) ಬೆಳಗ್ಗೆ ನಮ್ಮ ಪ್ರಯಾಣ ಸಾಗಿತ್ತು. ಆ ಪ್ರದೇಶದ ಹೆಸರು ಕಾಂಗ್ಚುಪ್. ಬೆಟ್ಟದ ತಪ್ಪಲಿನಲ್ಲಿ ಮೈತೇಯಿಗಳು ವಾಸವಿದ್ದರೆ, ಮೇಲ್ಭಾಗದಲ್ಲಿ ಕುಕಿಗಳಿದ್ದಾರೆ. ಇಲ್ಲಿ ಮಣಿಪುರಿ ಪೊಲೀಸ್ ಮತ್ತು ಭಾರತೀಯ ಸೇನೆಯ ತುಕಡಿ ಈಗ ಕಾವಲಿವೆ. ತಪ್ಪಲು ದಾಟಿ, ಗುಡ್ಡವನ್ನು ಹತ್ತಲು ಅವಕಾಶವಿಲ್ಲ. ಯಾಕೆಂದರೆ ಬೆಟ್ಟದ ಭಾಗದಲ್ಲಿ ಕುಕಿ ಗ್ರಾಮವಿದೆ. ಮೇ ಮತ್ತು ಜೂನ್ ತಿಂಗಳು ಈ ಸ್ಥಳದಲ್ಲಿ ಸಾಕಷ್ಟು ಹಿಂಸಾಚಾರಗಳು ನಡೆದಿವೆ. ಕುಕಿ ಮನೆಗಳನ್ನು ಮೈತೇಯಿಗಳು, ಮೈತೇಯಿ ಮನೆಗಳನ್ನು ಕುಕಿಗಳು ಸುಟ್ಟು ಭಸ್ಮ ಮಾಡಿದ್ದಾರೆ. ಬದುಕುಗಳು ಬಂದೂಕಿನ ನಳಿಕೆ ತುದಿಯಲ್ಲಿ ಸಾಗಿವೆ.

bunker 1111
ಶಿಂಗ್ದಾದಾಮ್’ ಪ್ರದೇಶದಲ್ಲಿನ ಬಂಕರ್‌

ಅಲ್ಲಿಂದ ಮೈತೇಯಿಗಳ ಬಂಕರ್ ಇರುವ ಸ್ಥಳಕ್ಕೆ ನಮ್ಮ ಪ್ರಯಾಣ ಸಾಗಿತು. ವಿಶಾಲವಾದ ಗದ್ದೆಗಳನ್ನು ದಾಟಿ, ಕಾಡಿನ ಕಿರಿದಾದ ದಾರಿಯಲ್ಲಿ ಕ್ರಮಿಸಿ ‘ಶಿಂಗ್ದಾದಾಮ್’ ಎಂಬ ಪ್ರದೇಶ ತಲುಪಿದೆವು. ಈ ಗ್ರಾಮದ ಪಕ್ಕದಲ್ಲಿ ‘ಶಿಗ್ದಾಕುಕಿ’ ಪ್ರದೇಶ ಸಿಗುತ್ತದೆ. ಕಾಂಗ್ ಚಿಪ್ ಪ್ರದೇಶದಿಂದ ಬೆಟ್ಟವನ್ನು ಹತ್ತಿ ಶಿಗ್ದಾದಾಮ್ಗೆ ಬಂದರೆ ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಆದರೆ ಈಗ ಕಾಂಗ್ಚಿಪ್ ಮತ್ತು ಗುಡ್ಡಗಾಡಿನ ಸಂಪರ್ಕ ಕಡಿದು ಹೋಗಿರುವುದರಿಂದ ವಿಶಾಲವಾದ ಗದ್ದೆ ಬಯಲಿನ ರಸ್ತೆಯಲ್ಲಿ ಸುತ್ತಿಬಳಸಿ ಮೈತೇಯಿಗಳ ಗ್ರಾಮವನ್ನು ಸೇರಬೇಕಾಗುತ್ತದೆ.

ನಾವು ಭೇಟಿ ನೀಡಿದ ಆ ಸಂದರ್ಭದಲ್ಲಿ ಮೈತೇಯಿ ಮಹಿಳೆಯರು, ಪುರುಷರು ತಮ್ಮ ಗ್ರಾಮದಲ್ಲಿ ಧರಣಿ ನಡೆಸುತ್ತಿದ್ದರು. ನಮ್ಮೊಂದಿಗೆ ಬಂದಿದ್ದ ಇಂಫಾಲ ಪತ್ರಕರ್ತ ದಿನೇಶ್, ಸ್ಥಳೀಯ ಮುಖಂಡರ ಪರಿಚಯ ಮಾಡಿಕೊಟ್ಟರು. ಶಿಂಗ್ದಾಕುಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಾಯಿಂಟ್ ಗಳಲ್ಲಿ ಮೂರು ಬಂಕರ್ ಗಳನ್ನು ಮುಖಂಡರು ತೋರಿಸಿದರು.

ಮುಖ್ಯವಾಗಿ ಅತ್ಯಾಧುನಿಕ ಗನ್ನುಗಳು ಇವರ ಕೈ ಸೇರಿದ್ದು ಹೇಗೆ ಸೇರಿದವು ಎಂಬುದನ್ನು ತಿಳಿಯಬೇಕಿತ್ತು. ನಮ್ಮ ಆತ್ಮೀಯ ಮಾತುಕತೆಗೆ ಮುಖಂಡರು ಸ್ಪಂದಿಸತೊಡಗಿದರು. “ನೋಡಿ, ಈ ಬಂಕರ್ ಬಳಿ ನಮ್ಮ ಯುವಕನೊಬ್ಬ ಸಾವಿಗೀಡಾದ. ನಮ್ಮ ರಕ್ಷಣೆಗಾಗಿ ನಾವು ಹೋರಾಡುತ್ತಿದ್ದೇವೆ. ಕುಕಿಗಳು ಗ್ರಾಮದ ಮೇಲೆ ಅಟ್ಯಾಕ್ ಮಾಡುತ್ತಾರೆ. ನಮ್ಮ ಬಳಿ ಈಗ 20 ಗನ್ ಗಳಿವೆ. ಇವುಗಳನ್ನು ಸಾಂಗ್ಸಂಗ್ ಪೊಲೀಸ್ ಠಾಣೆ ಅಧಿಕಾರಿಯೇ ನಮಗೆ ನೀಡಿದ್ದರು” ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟರು.

“ನಮ್ಮ ಗ್ರಾಮದಲ್ಲಿನ 120 ಮಂದಿ, ಪಾಳಿಯ ಪ್ರಕಾರ ಬಂಕರ್ ನಲ್ಲಿ ಕಾವಲು ಕಾಯುತ್ತಿದ್ದಾರೆ. ಒಂದು ವಾರ 60 ಮಂದಿ, ಮತ್ತೊಂದು ವಾರ 60 ಮಂದಿ ಕೆಲಸ ಮಾಡುತ್ತಾರೆ” ಎಂದು ತಿಳಿಸಿದರು.

“ಮೈತೇಯಿ ಬಾಲಕರೂ ಗನ್ ಹಿಡಿದಿದ್ದಾರಾ?” ಎಂಬುದನ್ನು ಅವರು ಬಿಟ್ಟುಕೊಡಲಿಲ್ಲ. “ನಮ್ಮಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟವರು ಮಾತ್ರ ಬಂಕರ್ ಗಳಿಗೆ ಬರುತ್ತಾರೆ” ಎಂದು ಹೇಳಿಕೊಂಡರು.

‘ಶಿಗ್ದಾದಾಮ್’ನಲ್ಲಿನ ಬಂಕರಿನಲ್ಲಿ ಕುಳಿತು ನೋಡಿದರೆ ಶಿಗ್ದಾಕುಕಿ ಗ್ರಾಮದ ಬಂಕರ್ ಮಸಕು ಮಸಕಾಗಿ ಕಾಣುತ್ತದೆ. ಯಾವಾಗ ಬೇಕಾದರೂ ಇಲ್ಲಿ ಗನ್ ಫೈಟ್ ನಡೆಯಬಹುದು.

gun 1
‘ಶಿಂಗ್ದಾದಾಮ್’ ಪ್ರದೇಶದಲ್ಲಿನ ಬಂಕರೊಂದರಲ್ಲಿ ಶೇಖರಿಸಿರುವ ಡಬ್ಬಲ್‌ ಬ್ಯಾರೆಲ್‌ ಬುಲೆಟ್‌ಗಳು

ಮೈತೇಯಿಗಳ ಆರಂಬೈ ತೆಂಗೋಲ್ ಮತ್ತು ಕುಕಿ ವಿದ್ಯಾರ್ಥಿ ಸಂಘಟನೆಯಲ್ಲಿರುವ ಚಿಕ್ಕ ವಯಸ್ಸಿನ ಹುಡುಗರು ಕೂಡ ಹಿಂಸಾಚಾರದಲ್ಲಿ ಭಾಗಿಯಾಗುತ್ತಿರುವುದು ಆಘಾತಕಾರಿ. ಯುದ್ಧವು ನಾಗರಿಕ ಸಮಾಜವನ್ನು ಎಂತಹ ಅಧಃಪತನಕ್ಕೆ ಕರೆದೊಯ್ಯುತ್ತದೆ, ಭವಿಷ್ಯದ ತಲೆಮಾರನ್ನು ಹೇಗೆ ನಾಶಗೊಳಿಸುತ್ತದೆ ಎಂಬುದಕ್ಕೆ ಮಣಿಪುರ ಸದ್ಯದ ಉದಾಹರಣೆಯಾಗಿ ಕಾಣುತ್ತಿದೆ.

ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುವಾಗ ಸಂಸತ್ತಿನಲ್ಲಿ ಪ್ರಧಾನಿ ಹಾಸ್ಯ : ರಾಹುಲ್ ಗಾಂಧಿ ಗಂಭೀರ ಆರೋಪ

ಇಂಫಾಲ ಕಣಿವೆಯಲ್ಲಿನ ಮೈತೇಯಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿನ ಕುಕಿಗಳ ನಡುವೆ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಬಂದೂಕು ಹಿಡಿದ ಎಳೆಯ ಕೈಗಳನ್ನು ನೋಡಿದರೆ ಈ ಸಮಾಜಕ್ಕೆ ನಿಜಕ್ಕೂ ಭವಿಷ್ಯವಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

“ಇತಿಹಾಸದುದ್ದಕ್ಕೂ ಸದಾ ಸಂಘರ್ಷವನ್ನೇ ಕಂಡಿರುವ ಈಶಾನ್ಯ ಭಾರತ, ಮುಖ್ಯವಾಗಿ ಮಣಿಪುರ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಅಭಿವೃದ್ಧಿ ಕಾಣುತ್ತಿತ್ತು. ಆದರೆ ಕುಕಿ-ಮೈತೇಯಿಗಳ ನಡುವಿನ ಸಂಘರ್ಷ ಏರ್ಪಟ್ಟು ಮತ್ತೆ ಮಣಿಪುರ ಎರಡು ದಶಕಗಳಷ್ಟು ಹಿಂದಕ್ಕೆ ದೂಡಲ್ಪಟ್ಟಿದೆ” ಎಂಬುದು ಇಲ್ಲಿನ ಸಾಮಾನ್ಯ ನಾಗರಿಕರ ಅಭಿಪ್ರಾಯ.
ಚಿತ್ರಗಳು: ಯತಿರಾಜ್ ಬ್ಯಾಲಹಳ್ಳಿ, ಈ ದಿನ.ಕಾಂ

ಇವುಗಳನ್ನೂ ತಪ್ಪದೇ ಓದಿ

ಪ್ರತ್ಯಕ್ಷ ವರದಿ – 1
https://eedina.com/special/first-hand-report-from-manipur-in-the-maitei-pregnant-women-camp-started-by-bjp-1015/

ಪ್ರತ್ಯಕ್ಷ ವರದಿ – 2
https://eedina.com/special/eedina-report-from-manipur-2-on-the-highway-leading-to-kuki-dominated-lamka-1015/

ಪ್ರತ್ಯಕ್ಷ ವರದಿ – 3
https://eedina.com/special/eedina-report-from-manipur-3-in-the-refugee-camp-of-kukis1015/

ಪ್ರತ್ಯಕ್ಷ ವರದಿ – 4
https://eedina.com/special/eedina-report-from-manipur-4-wall-of-remembrance-of-kukis-who-died-in-ethnic-war-1015/

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

1 COMMENT

  1. ಮಣಿಪುರದ ನಿಜವಾದ ಚಿತ್ರಣವನ್ನು ತೋರಿಸುತ್ತಿರುವ ಈ ದಿನ.ಕಾಂ ತಂಡಕ್ಕೆ ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಥೆಗಾರನನ್ನು ರೂಪಿಸಿದ ಮಾಂತ್ರಿಕ ಮೊಗಳ್ಳಿ

ಮೊಗಳ್ಳಿ ದಲಿತರಾಗಿರಬಹುದು. ಅವರು ಬರೆದ ಕಥೆಗಳು ದಲಿತಲೋಕದ್ದೇ ಆಗಿರಬಹುದು. ಈ ಕಾರಣಗಳಿಂದ...

ʼಶರಾವತಿ ಪಂಪ್ಡ್ ಸ್ಟೋರೇಜ್ʼ: ಪರಿಸರವಾದಿಗಳು ವಿರೋಧಿಸುತ್ತಿರುವುದೇಕೆ?

ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ ಶರಾವತಿ...

ಗತದ ಗೆಳೆಯ ಗಣೇಶ್

ಅಕ್ಟೋಬರ್ 5ರಂದು ಇಲ್ಲವಾದ ಕತೆಗಾರ ಮೊಗಳ್ಳಿ ಗಣೇಶ್‌ಗೆ, ಸಮಕಾಲೀನ ಬರಹಗಾರರು ಸಮನಾಗಿ...

ಕೊಪ್ಪಳ | ಗಾಂಧಿ ಕನಸಿನ ಮಾದರಿ ಗ್ರಾಮ ʼಕಾಮನೂರುʼ; ನಾಲ್ಕು ದಶಕಗಳಿಂದ ಮದ್ಯ–ಗುಟ್ಕಾದಿಂದ ಮುಕ್ತ!

ಮಹಾತ್ಮ ಗಾಂಧಿಯವರ ಕನಸಾದ ಮದ್ಯಪಾನ ಮುಕ್ತ ಭಾರತದ ದಾರಿಗೆ ಹೆಜ್ಜೆ ಇಟ್ಟಿರುವ...

Download Eedina App Android / iOS

X