ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಕೇವಲ ಆಯೋಗದ ಅಥವಾ ರಾಜಕೀಯ ಪಕ್ಷಗಳ ಕೆಲಸವಲ್ಲ. ಸರ್ಕಾರ ಅಕ್ರಮ ನಡೆಸಿದರೆ ಅದು ತಡೆಯಬೇಕಾದ ಹೊಣೆಗಾರಿಕೆ ಸಾರ್ವಜನಿಕರ ಮೇಲಿದೆ.
ಭಾರತದ ಪ್ರಜಾಪ್ರಭುತ್ವದ ಹೃದಯಭಾಗವಾದ ಚುನಾವಣಾ ಪದ್ಧತಿಯು ಇತ್ತೀಚಿನ ವರ್ಷಗಳಲ್ಲಿ ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ 2024ರ ಲೋಕಸಭಾ ಚುನಾವಣೆ ಹಾಗೂ ನಂತರದ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಮತದಾರರ ದಾಖಲೆಗಳನ್ನು ವಂಚಿಸುವುದು ಹೆಚ್ಚಾಗಿ ಕಂಡುಬಂದಿವೆ. ಸರ್ಕಾರ ಹಾಗೂ ಚುನಾವಣಾ ಆಯೋಗವು ಈ ಆಪಾದನೆಗಳನ್ನು ತಳ್ಳಿಹಾಕುತ್ತಿರುವಂತೆ ತೋರುತ್ತಿದ್ದರೂ, ದೇಶದ ಪ್ರಜೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಈ ಸಮಸ್ಯೆಗಳು ಕೇವಲ ರಾಜಕೀಯ ಆರೋಪಗಳಲ್ಲದೆ, ಮತದಾನದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಹ ದುಷ್ಪರಿಣಾಮಗಳನ್ನು ಹೊಂದಿವೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನದ ಬಗ್ಗೆ ದೊಡ್ಡ ಅಭಿಯಾನ ಹಮ್ಮಿಕೊಂಡಿದ್ದಾರೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಅಕ್ರಮಗಳನ್ನು ದಾಖಲೆಗಳ ಸಮೇತ ಎತ್ತಿ ತೋರಿಸಿದ್ದಾರೆ. ಅಲ್ಲಿನ ಮಹದೇವಪುರ ವಿಧಾನಸಭಾ ವಲಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ನಕಲಿ ಮತಗಳನ್ನು ಚುನಾವಣಾ ಆಯೋಗದ ಬೆಂಬಲದ ಮೂಲಕ ಬಿಜೆಪಿ ನಾಯಕರು ಸೇರಿಸಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕೇವಲ 32 ಸಾವಿರ ಮತಗಳ ಅಂತರದಿಂದ ಜಯ ತಂದುಕೊಟ್ಟಿತು ಎಂದು ದಾಖಲೆಗಳಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪಗಳು ಬೆಂಗಳೂರಿನ ಗಡಿಗಳನ್ನು ಮೀರಿ ವಿಸ್ತರಿಸಿದ್ದು, ವಿವಿಧ ರಾಜ್ಯಗಳಲ್ಲಿ ಹತ್ತಾರು ಕಡೆ ನಡೆದಿವೆ. ‘ಮತ ಕಳ್ಳತನ’ತನವು ಬಿಜೆಪಿ ಅಧಿಕಾರಕ್ಕೆ ತರಲು ಅನುಕೂಲ ಮಾಡಿಕೊಡುವ ಸಲುವಾಗಿ ದೇಶಾದ್ಯಂತ ಒಟ್ಟು 48 ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿವೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಜೊತೆಗೂಡಿ ವಂಚನೆಗಳನ್ನು ನಡೆಸಿದೆ. ಹಾಗೆಯೇ ಎಸ್‌ಐಆರ್ ಹೆಸರಿನಲ್ಲಿ ಬಿಹಾರದಲ್ಲಿ 52 ಲಕ್ಷ ಮತದಾರರ ಹೆಸರುಗಳು ಕಾಣೆಯಾಗಿವೆ. ಮಹಾರಾಷ್ಟ್ರದಲ್ಲಿ 1 ಕೋಟಿ ಹೊಸ ಮತದಾರರ ಸೇರ್ಪಡೆ ಅಲ್ಲಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವೆಲ್ಲವೂ ವಂಚನೆಯ ಒಂದಿಷ್ಟು ಒಂದಿಷ್ಟು ವಿವರಗಳು. ಕೂಲಂಕಷವಾಗಿ ತನಿಖೆ ನಡೆಸಿದರೆ ಅಕ್ರಮಗಳ ಸರಣಿಯೇ ಬಯಲಿಗೆ ಬರುತ್ತದೆ.
ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಲ್ಲಿ ಸ್ವಾಯತ್ತ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಅಕ್ರಮಗಳನ್ನು ತೀವ್ರವಾಗಿ ನಡೆಸಿದೆ. ಮತದಾರರ ದಾಖಲೆಗಳಿಂದ ಹೆಸರುಗಳನ್ನು ತೆಗೆಯುವುದು, ನಕಲಿ ಮತದಾರರನ್ನು ಸೇರಿಸುವುದು ಮತ್ತು ಮತ ಚಲಾವಣೆಯಲ್ಲಿ ಹಸ್ತಕ್ಷೇಪ ಮಾಡುವುದು ಮುಂತಾದ ಅಕ್ರಮಗಳು ವಿಪರೀತವಾಗಿ ನಡೆದಿವೆ. ಬಿಜೆಪಿ ಪ್ರಾಬಲ್ಯ ಸಾಧಿಸಿದ ಪ್ರಾಂತ್ಯಗಳಾದ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಂತಹ ಮತ ವಂಚನೆಗಳು ಹೆಚ್ಚಾಗಿ ಕಂಡುಬಂದಿವೆ. ಮಹಾರಾಷ್ಟ್ರದಲ್ಲಿ 1 ಕೋಟಿಗೂ ಮೀರಿದ ರಹಸ್ಯ ಮತದಾರರ ಸೇರ್ಪಡೆಯಾಗಿದ್ದು, ಮತ ಲೆಕ್ಕಾಚಾರದಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರಿಸಿವೆ. ಒಡಿಶಾದಲ್ಲಿ ಸಂಜೆ 5 ರಿಂದ 9 ರ ನಡುವೆ ಸುಮಾರು 42 ಲಕ್ಷ ಮತಗಳು ಹೆಚ್ಚಳವಾಗಿವೆ. ಇದು ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲು ಅನುಕೂಲವಾಯಿತು. ಇದಲ್ಲದೆ, ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ದಾಖಲೆಗಳಿಂದ ತೆಗೆಯುವುದು ಮತ್ತು ಮತ ಚಲಾವಣೆಯಲ್ಲಿ ತೊಂದರೆಗಳನ್ನು ಉಂಟುಮಾಡುವುದು ಇತರ ಪ್ರಾಂತ್ಯಗಳಲ್ಲಿ ಕಂಡುಬಂದಿದೆ.
ಕರ್ನಾಟಕದ ಮಹದೇವಪುರದ ಹಲವು ಕಡೆಗಳಲ್ಲಿ 80ಕ್ಕಿಂತ ಮಂದಿ ಮತದಾರರು ಒಂದೇ ಸಣ್ಣ ಕೋಣೆಯಲ್ಲಿ ನೋಂದಾಯಿತರಾಗಿದ್ದರು. ಇವೆಲ್ಲವೂ ‘ಮತಕಳ್ಳತನದ’ ಸ್ಪಷ್ಟ ಪುರಾವೆಗಳಾಗಿವೆ. ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ ಎಂಬುಂದು ಇವುಗಳಿಂದ ಸ್ಪಷ್ಟವಾಗುತ್ತಿದೆ. ಈ ಆರೋಪಗಳು 2014ರಿಂದಲೂ ಇದ್ದ ಅನುಮಾನಗಳನ್ನು ಬಲಪಡಿಸುತ್ತವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಶೂನ್ಯ ಸ್ಥಾನಗಳನ್ನು ಪಡೆದಿರುವುದು ಕೂಡ ಹಲವು ಅನುಮಾನಗಳನ್ನು ಮೂಡಿಸುತ್ತದೆ. ಕಾಂಗ್ರೆಸ್ ಮತ್ತು ದೇಶದ ವಿಪಕ್ಷಗಳ ಒಕ್ಕೂಟವು ಈ ಅಕ್ರಮಗಳ ವಿರುದ್ಧ ಆಂದೋಲನಗಳನ್ನು ಹಮ್ಮಿಕೊಂಡಿವೆ. ಇದು ಕೇವಲ ರಾಜಕೀಯ ಪಕ್ಷಗಳ ಜವಾಬ್ದಾರಿಯಲ್ಲದೆ, ಸ್ವಯಂಸೇವಾ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಪಾತ್ರವೂ ಮುಖ್ಯವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?
ಪ್ರಜಾಪ್ರಭುತ್ವದಲ್ಲಿ ಮತದಾನದ ಅಧಿಕಾರವು ಬಹು ಮುಖ್ಯವಾಗಿದ್ದು, ಅದನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ದೇಶದ ನಾಗರಿಕರು ಚುನಾವಣಾ ಅಕ್ರಮವನ್ನು ತಡೆಗಟ್ಟಲು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಚುನಾವಣಾ ವಂಚನೆಗಳು ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ ಮತ್ತು ಇದನ್ನು ತಡೆಗಟ್ಟಲು ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು. ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಜನತಂತ್ರ ವ್ಯವಸ್ಥೆ ಗಟ್ಟಿಯಾಗಿರಬೇಕೆಂದರೆ ಚುನಾವಣಾ ಸಂಸ್ಥೆಯು ಪಾರದರ್ಶಕವಾಗಿರಬೇಕು ಎಂದು ಹೇಳುತ್ತಿದ್ದರು. ಆದಕಾರಣ ಮತಗಳ್ಳತನ ಕೇವಲ ರಾಜಕೀಯ ವಿವಾದವಲ್ಲ, ದೇಶದ ಭವಿಷ್ಯದ ಪ್ರಶ್ನೆಯಾಗಿದೆ.
ದೇಶಕ್ಕೆ ಕಂಟಕವಾಗಿರುವಂಥ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಪ್ರಜೆಗಳು ಒಟ್ಟಾಗಿ ಚುನಾವಣಾ ಪದ್ಧತಿ ಸದೃಢವಾಗಿರಲು ಸದಾ ಸಕ್ರಿಯವಾಗಿರಬೇಕು. ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಚುನಾವಣಾ ಸಂಸ್ಥೆಯು ಸಾಕ್ಷ್ಯಗಳನ್ನು ಬಿಡುಗಡೆ ಮಾಡಿ ಪಾರದರ್ಶಕತೆಯನ್ನು ತೋರಿಸಬೇಕು. ಆದರೆ ಸರ್ಕಾರದ ಕೈಗೊಂಬೆಯಾಗಿದೆ. ಪ್ರಜೆಗಳು ಕೂಡ ತಮ್ಮ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು. ಈ ಮೂಲಕ ಮಾತ್ರ ನಿಜವಾದ ಪ್ರಜಾಪ್ರಭುತ್ವವನ್ನು ಸಾಧಿಸಬಹುದು ಮತ್ತು ಭವಿಷ್ಯದ ಚುನಾವಣೆಗಳು ನ್ಯಾಯಯುತವಾಗಿರುತ್ತವೆ.
ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಕೇವಲ ಆಯೋಗದ ಅಥವಾ ರಾಜಕೀಯ ಪಕ್ಷಗಳ ಕೆಲಸವಲ್ಲ. ಸರ್ಕಾರ ಅಕ್ರಮ ನಡೆಸಿದರೆ ಅದು ತಡೆಯಬೇಕಾದ ಹೊಣೆಗಾರಿಕೆ ಸಾರ್ವಜನಿಕರ ಮೇಲಿದೆ. ಪ್ರಜಾಪ್ರಭುತ್ವದ ಬಲವು, ಜನರ ಏಕತೆ ಮತ್ತು ಜವಾಬ್ದಾರಿಯ ಮನೋಭಾವದಿಂದಲೇ ಬಂದು ನಿಲ್ಲುತ್ತದೆ. ಕಾಂಗ್ರೆಸ್, ಇತರ ವಿರೋಧ ಪಕ್ಷಗಳು ಅಥವಾ ಸಾಮಾಜಿಕ ಸಂಘಟನೆಗಳಷ್ಟೆ ಅಲ್ಲ, ಪ್ರತಿಯೊಬ್ಬ ಭಾರತೀಯನೂ ಈ ಹೋರಾಟದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು.
ಮತಗಳ್ಳತನದ ಗಂಭೀರ ಆರೋಪವನ್ನು ಪ್ರಶ್ನೆ ಮಾಡಬೇಕಾದವರು ರಾಹುಲ್ ಗಾಂಧಿಯಷ್ಟೆಯಲ್ಲ. ಅಲ್ಲದೆ ಇದು ಕೇವಲ ರಾಜಕೀಯ ಪಕ್ಷಗಳ ನಡುವಿನ ವಿವಾದವಷ್ಟೇ ಅಲ್ಲ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದು ಸಂಬಂಧಿಸಿದೆ. ವಿರೋಧ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ಹಾಗೂ ಸಾಮಾನ್ಯ ಪ್ರಜೆ, ಎಲ್ಲರೂ ”ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ” ಎಂಬ ಹಕ್ಕನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಇದು ಸರ್ಕಾರದ ವಿರುದ್ಧವಾಗಿ ಮಾತ್ರವಲ್ಲ, ಜನಸಾಮಾನ್ಯರ ಪ್ರಜಾತಂತ್ರದ ಭವಿಷ್ಯಕ್ಕಾಗಿ ಅತ್ಯಗತ್ಯವಾಗಿದೆ.
