ಕಾನೂನಿನ ಮುಂದೆ ಎಲ್ಲರೂ ಸಮಾನರು; ಭರವಸೆ ಮೂಡಿಸಿದ ಪ್ರಜ್ವಲ್‌-ದರ್ಶನ್‌ ಪ್ರಕರಣ

Date:

Advertisements

2024ರಲ್ಲಿ ಕರ್ನಾಟಕದಲ್ಲಿ ಸದ್ದು ಮಾಡಿದ್ದ ಎರಡು ಎಲೈಟ್‌ ಕ್ಲಾಸ್‌ ಹುಡುಗರ ಅಪರಾಧ ಕೃತ್ಯ. ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಅತ್ಯಾಚಾರ ಪ್ರಕರಣ ವಿಚಾರಣೆ ನಡೆದು ಜೀವಾವಧಿ ಶಿಕ್ಷೆಯೂ ಆಗಿದೆ. ಕೊಲೆ ಅಪರಾಧಿ ನಟ ದರ್ಶನ್‌ಗೆ ಸಿಕ್ಕಿದ್ದ ಜಾಮೀನು ರದ್ದಾಗಿದೆ. ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದ ಪ್ರಕರಣಗಳಿವು

2024ರ ವರ್ಷ ಕರ್ನಾಟಕ ಎರಡು ಹೀನ ಕೃತ್ಯಗಳಿಂದ ಸುದ್ದಿಯಾಗಿತ್ತು. ಪ್ರಬಲ ರಾಜಕೀಯ ಕುಟುಂಬದ, ಅದರಲ್ಲೂ ದೇಶದ ಮಾಜಿ ಪ್ರಧಾನಿಗಳ ಮೊಮ್ಮಗ, ಸ್ವತಃ ಸಂಸದನೂ ಆಗಿದ್ದ ಪ್ರಜ್ವಲ್‌ ರೇವಣ್ಣನ ಕಾಮಕಾಂಡದ ವಿಡಿಯೋಗಳು ಬಹಿರಂಗಗೊಂಡಿದ್ದು ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ನಾಲ್ಕು ದಿನ ಇರುವಾಗ. ಮಹಿಳಾ ಆಯೋಗ ತಕ್ಷಣ ಈ ಪ್ರಕರಣದಲ್ಲಿ ಸುವೋಮೊಟೋ ದಾಖಲಿಸಿಕೊಂಡು ಎಸ್‌ಐಟಿ ರಚನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಎಸ್‌ಐಟಿ ರಚನೆ ಆದೇಶ ಹೊರ ಬಿದ್ದ ಮರುದಿನವೇ ಮತದಾನ. ಏಪ್ರಿಲ್‌ 26ರಂದು ತನ್ನ ಮತ ಚಲಾಯಿಸಿದ ನಂತರ ಪ್ರಜ್ವಲ್‌ ರೇವಣ್ಣ ನಾಪತ್ತೆ. ಪೊಲೀಸರು ನೋಟಿಸ್‌ ಕೊಡುವ ಮುನ್ನವೇ ಜರ್ಮನಿಗೆ ಹಾರಿದ್ದ. ಮೇ 30ರಂದು ಅಂದ್ರೆ ಒಂದು ತಿಂಗಳ ನಂತರ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್‌ನನ್ನು ಏರ್‌ಪೋರ್ಟ್‌ನಿಂದಲೇ ಬಂಧಿಸಲಾಗಿತ್ತು. ಆ ನಂತರ ಆತನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲಾದವು. ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಡಿಜಿಟಲ್‌ ಸಾಕ್ಷ್ಯ, ಫೊರೆನ್ಸಿಕ್‌ ಸಾಕ್ಷ್ಯಗಳ ಆಧಾರದಲ್ಲಿ ಪ್ರಜ್ವಲ್‌ ಅಪರಾಧಿ ಎಂದು ತೀರ್ಪು ನೀಡಿರುವ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. 2025 ಆಗಸ್ಟ್‌ 1, ಕರ್ನಾಟಕದ ಇತಿಹಾಸದಲ್ಲಿ ಐತಿಹಾಸಿಕ ತೀರ್ಪು ಹೊರಬಿದ್ದ ದಿನವಾಗಿ ದಾಖಲಾಗಿದೆ. ಸಾಕ್ಷ್ಯ ಸಂಗ್ರಹ, ಚಾರ್ಜ್‌ಶೀಟ್‌ ಸಲ್ಲಿಕೆ, ಜಾಮೀನು ಅರ್ಜಿ ವಿಚಾರಣೆ, ಪಾಟೀಸವಾಲು ಎಲ್ಲವನ್ನೂ ಮುಗಿಸಿ ಹದಿನಾಲ್ಕು ತಿಂಗಳಲ್ಲಿ ಶಿಕ್ಷೆ ವಿಧಿಸಿದ ಅಪರೂಪದ ಪ್ರಕರಣವಿದು.

ವಿಶೇಷ ಲೇಖನ

ಪ್ರಜ್ವಲ್‌ ರೇವಣ್ಣ ಬಂಧನವಾಗಿ ಕೇವಲ ಎರಡು ವಾರವಾಗಿತ್ತು, 14 ಜೂನ್ 2024 ಬೆಳ್ಳಂಬೆಳಿಗ್ಗೆ ಕನ್ನಡದ ಖ್ಯಾತ ನಟ ದರ್ಶನ್‌ರನ್ನು ಕೊಲೆ ಪ್ರಕರಣ ಸಂಬಂಧ ಮೈಸೂರಿನ ಹೊಟೇಲಿನಿಂದ ಪೊಲೀಸರು ಬಂಧಿಸಿ ಕರೆತಂದಿದ್ದರು. ಗೆಳತಿ ಪವಿತ್ರ ಗೌಡ ಸೇರಿದಂತೆ ಒಂದು ಡಜನ್‌ ಸಹಚರರು ಬಂಧನಕ್ಕೊಳಗಾದರು. ಪವಿತ್ರಾ ಗೌಡಗೆ ಅಶ್ಲೀಲವಾಗಿ ಕಮೆಂಟ್‌ ಹಾಕುತ್ತಿದ್ದ ಎಂಬ ಕಾರಣಕ್ಕೆ ಆತನಿಗೆ ಬುದ್ದಿ ಕಲಿಸಬೇಕು ಎಂದು ಪವಿತ್ರಾ ಸ್ನೇಹಿತರು ಜೂನ್‌ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಕೊಂದು ಮೋರಿಗೆ ಎಸೆದು ಹೋಗಿದ್ದರು ಎಂಬುದು ಆರೋಪ. ಬಂಧನಕ್ಕೊಳಗಾಗಿ ತಿಂಗಳುಗಳ ಕಾಲ ಜೈಲಿನಲ್ಲಿದ್ದ ದರ್ಶನ್‌, ಪವಿತ್ರ ಗೌಡ ಸೇರಿ ಏಳು ಮಂದಿಗೆ ಕರ್ನಾಟಕ ಹೈಕೋರ್ಟ್‌ ನೀಡಿತ್ತು. ಇದೀಗ ಆ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಮತ್ತೆ ಎಲ್ಲರೂ ಜೈಲು ಪಾಲಾಗಿದ್ದಾರೆ.

Advertisements

ಕಾನೂನು ಎಲ್ಲರಿಗೂ ಒಂದೇ ಎಂಬ ಮಾತು ಅಪರೂಪಕ್ಕೆ ನಿಜವೂ ಆಗುತ್ತಿದೆ. ಅಂತಹ ಎರಡು ಪ್ರಕರಣಗಳಿವು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಆತನೇ ಸಾಕ್ಷಿ ನೂರಾರು ಸಾಕ್ಷಿ ಇಟ್ಟುಕೊಂಡಿದ್ದ. ಆತನ ಕಾರಿನ ಚಾಲಕನ ಹೆಸರಿನಲ್ಲಿ ಮಾಡಿಟ್ಟಿದ್ದ ಬೇನಾಮಿ ಆಸ್ತಿ ವಾಪಸ್‌ ಬರೆಸಿಕೊಳ್ಳಲು ತಾಯಿ ಭವಾನಿ ರೇವಣ್ಣ ಮುಂದಾಗಿದ್ದರು. ಹಾಗಾಗಿ ಪ್ರಜ್ವಲ್‌ ರೇವಣ್ಣನ ಕಾಮಕಾಂಡದ ವಿಡಿಯೋಗಳನ್ನು ಬೇರೆಯವರಿಗೆ ಕೊಟ್ಟು ಕಾರು ಚಾಲಕ ಸೇಡು ತೀರಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಅದು ಎಷ್ಟು ನಿಜ ಎಂಬುದು ಗೊತ್ತಿಲ್ಲ. ಆದರೆ ಕಾರು ಚಾಲಕ ತಾನೇ ಕಾಪಿ ಮಾಡಿಟ್ಟುಕೊಂಡ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದ. ಕಾರು ಚಾಲಕ ಹಾಗೆ ಮಾಡದೇ ಇದ್ದಿದ್ದರೆ ಇಡೀ ಪ್ರಕರಣ ಬಯಲಿಗೆ ಬರುತ್ತಿರಲಿಲ್ಲ. ಯಾರೊಬ್ಬರೂ ಅತ್ಯಾಚಾರ ಅಥವಾ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡ ಬಗ್ಗೆ ದೂರು ಕೊಟ್ಟಿರಲಿಲ್ಲ. ಪ್ರಭಾವಿಗಳಾದ ಕಾರಣ ಒಂದು ವೇಳೆ ದೂರು ಕೊಡಲು ಮುಂದಾದರೂ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದರು. ವಿಡಿಯೋ ಬಹಿರಂಗಗೊಂಡು ಮನೆಗೆಲಸದಾಕೆ ದೂರು ಕೊಟ್ಟ ನಂತರ, ಎಸ್‌ಐಟಿ ರಚನೆಯಾಗಿದ್ದರೂ ಯಾವುದೇ ಭಯವಿಲ್ಲದೇ ರೇವಣ್ಣಕುಟುಂಬ ದೂರುದಾರೆಯನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಕೂಡಿ ಹಾಕಿ ದೂರು ವಾಪಸ್‌ ಪಡೆಯುವ ಪ್ರಯತ್ನ ಮಾಡಿದ್ದರು. ಆ ಪ್ರಕರಣದಲ್ಲಿ ಶಾಸಕ ರೇವಣ್ಣ ಬಂಧನವಾಗಿ ಕೆಲಸ ದಿನ ಜೈಲಿನಲ್ಲಿದ್ದರು. ಭವಾನಿ ನಾಪತ್ತೆಯಾಗಿ ನಂತರ ಅನಾರೋಗ್ಯದ ಕಾರಣ ಹೇಳಿ ನಿರೀಕ್ಷಣಾ ಜಾಮೀನು ಪಡೆದು ನಂತರ ಕೋರ್ಟಿಗೆ ಹಾಜರಾಗಿದ್ದರು. ಸುಮಾರು ಹತ್ತು ತಿಂಗಳ ಕಾಲ ಅವರನ್ನು ಹಾಸನಕ್ಕೆ ಪ್ರವೇಶಿಸದಂತೆ ಕೋರ್ಟ್‌ ತಡೆದಿತ್ತು.

ಹೀಗೆ ಪ್ರತಿಷ್ಠಿತ, ಪ್ರಭಾವೀ ಕುಟುಂಬದ ಹಾಗೂ ಅಗರ್ಭ ಶ್ರೀಮಂತ ಸಂಸದ ಪ್ರಜ್ವಲ್‌ ಕನಿಷ್ಠ ಜಾಮೀನು ಕೂಡ ಪಡೆಯುವುದು ಸಾಧ್ಯವಾಗಲಿಲ್ಲ. ಮನಸ್ಸು ಮಾಡಿದರೆ ಎಂತಹ ಪ್ರಭಾವಿಗಳನ್ನೂ ಹೆಡೆಮುರಿಕಟ್ಟಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಪ್ರಜ್ವಲ್‌ ಬಂಧನವಾದ ನಂತರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ಚಿಕ್ಕಪ್ಪ ಎಚ್‌ ಡಿ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಆದರೆ ಯಾವುದೇ ಪ್ರಭಾವ ಬೀರುವುದು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಆತನೇ ಪ್ರಮುಖ ಸಾಕ್ಷಿಯಾಗಿದ್ದ ಎಂಬುದು ವಿಶೇಷ.

ಇನ್ನು ಸೆಲಬ್ರಿಟಿ ದರ್ಶನ್‌ ಖ್ಯಾತ ನಟ. ಎಸಿಪಿ ಚಂದನ್‌ ತರಹದ ಪೊಲೀಸ್‌ ಅಧಿಕಾರಿಯ ಕೈಗೆ ಪ್ರಕರಣ ಸಿಗದೇ, ಭ್ರಷ್ಟ ಪೊಲೀಸರ ಕೈಗೆ ಸಿಗುತ್ತಿದ್ದರೆ ದರ್ಶನ್‌ನನ್ನು ಬಂಧಿಸದೇ ಅಥವಾ ದರ್ಶನ್‌ ಈ ಪ್ರಕರಣದಲ್ಲಿ ಭಾಗಿಯೇ ಆಗಿಲ್ಲ ಎಂಬಂತೆ ಸಾಕ್ಷಿಗಳನ್ನು ನಾಶಪಡಿಸುವುದು ಕಷ್ಟವೇನೂ ಆಗುತ್ತಿರಲಿಲ್ಲ. ಆದರೆ ಹಾಗೆ ಆಗಿಲ್ಲ ಎಂಬುದು ಅಧಿಕಾರಿಗಳ ಬದ್ಧತೆ ತೋರಿಸುತ್ತದೆ.

ದರ್ಶನ್‌ ಮತ್ತು ಪವಿತ್ರಾ ಕಡೆಯ ಹುಡುಗರು ರೇಣುಕಾಸ್ವಾಮಿಯನ್ನು 2024 ಜೂನ್‌ 8ರಂದು ಚಿತ್ರದುರ್ಗದಿಂದ ಅಪಹರಿಸಿ ತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿ ಹಾಕಿ 9ರ ರಾತ್ರಿ ಅಲ್ಲಿಗೆ ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ಫೋನ್‌ ಮಾಡಿ ಕರೆಸಿಕೊಂಡಿದ್ದರು. ಅರೆಜೀವವಾಗಿದ್ದ ರೇಣುಕಾಸ್ವಾಮಿ ದರ್ಶನ್‌ನ ಬೂಟಿನೇಟಿಗೆ ಶವವಾಗಿದ್ದ. ನಂತರ ಆರೋಪಿಗಳು ಶವವನ್ನು ಮೋರಿಗೆ ಎಸೆದು ಹೋಗಿದ್ದರು. 10ರಂದು ಬೆಳ್ಳಂಬೆಳಗ್ಗೆ ಕಾಮಾಕ್ಷಿಪಾಳ್ಯ ಬಳಿಯ ಅಪಾರ್ಟ್‌ಮೆಂಟ್‌ ಪಕ್ಕದಲ್ಲಿನ ಮೋರಿಯಲ್ಲಿ ಜರ್ಜರಿತಗೊಂಡ ಸಣಕಲು ಶವವೊಂದನ್ನು ನಾಯಿಗಳು ಎಳೆದಾಡುತ್ತಿದ್ದುದನ್ನು ನೋಡಿದ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದನು.

ಆವೇಶದಲ್ಲಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದು ದರ್ಶನ್‌ ನೇರವಾಗಿ ಸಾವಿಗೆ ಕಾರಣನಾಗಿದ್ದ. ಅದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾಲ್ವರು ಯುವಕರಿಗೆ ತಲಾ ಐದು ಲಕ್ಷದಂತೆ ಹಣ ನೀಡಿ ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದ. ತಾನು ತೋಡಿದ ಖೆಡ್ಡಾಗೆ ತಾನೇ ಬೀಳುವಂತಾಯ್ತು.

pavithra gowda
ಪವಿತ್ರಾ ಗೌಡ

ಪೊಲೀಸ್ ವರದಿಯ ಪ್ರಕಾರ, ಜೂನ್ 10 ರಂದು ಸಂಜೆ 7 ಗಂಟೆ ಸುಮಾರಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್ ಮತ್ತು ಕೇಶವ ಮೂರ್ತಿ ಶರಣಾಗಿ, ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ರೇಣುಕಸ್ವಾಮಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು. ಆದಾಗ್ಯೂ, ವಿಚಾರಣೆಯ ಸಮಯದಲ್ಲಿ, ಪೊಲೀಸರಿಗೆ ಅವರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಹೆಚ್ಚಿನ ವಿಚಾರಣೆ ನಡೆಸಿದಾಗ ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದರು. ಜೂನ್‌ 11ರ ಬೆಳಿಗ್ಗೆ ದರ್ಶನ್‌ ಬಂಧನವೂ ಆಗಿತ್ತು.

ಆರೋಪಿಗಳಲ್ಲಿ ಒಬ್ಬನಾದ ದೀಪಕ್, ದರ್ಶನ್ ಅವರನ್ನು ರಕ್ಷಿಸಲು ತಾನೇ ಒಂದು ಯೋಜನೆ ರೂಪಿಸಿದ್ದ. ದರ್ಶನ್ ಹೆಸರನ್ನು ಮರೆಮಾಡಲು ಮತ್ತು ಕೊಲೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವನು ನಿಖಿಲ್ ನಾಯಕ್, ಕಾರ್ತಿಕ್, ರಾಘವೇಂದ್ರ ಮತ್ತು ಕೇಶವ ಮೂರ್ತಿಗೆ ತಲಾ 5 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದ್ದ. ರಾಘವೇಂದ್ರ ಹೇಳಿಕೆಯ ಪ್ರಕಾರ, ನಿಖಿಲ್ ಮತ್ತು ಕೇಶವ ಮೂರ್ತಿ ಆಗಲೇ ತಲಾ 5 ಲಕ್ಷ ರೂ.ಗಳನ್ನು ಪಡೆದಿದ್ದರು. ಕಾರ್ತಿಕ್ ಮತ್ತು ರಾಘವೇಂದ್ರ ಅವರ ಕುಟುಂಬಗಳಿಗೆ ಜೈಲು ಶಿಕ್ಷೆಯ ನಂತರ ಹಣವನ್ನು ನೀಡುವ ಭರವಸೆ ನೀಡಲಾಗಿತ್ತು. ದರ್ಶನ್‌ ಈ ಪ್ರಕರಣದಲ್ಲಿ ಹೇಗೆ ಭಾಗಿಯಾಗಿದ್ದ ಎಂಬುದನ್ನು ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ರೇಣುಕಾಸ್ವಾಮಿಯನ್ನು ಪವಿತ್ರಾ ಗೌಡ ಕಡೆಯ ಹುಡುಗರು ಚಿತ್ರದುರ್ಗದಿಂದ ಅಪಹರಿಸಿ ತಂದು ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದರು. ಅಷ್ಟು ಸಾಲದೆಂಬಂತೆ ಆತನನ್ನು ನೋಡಲು ಪವಿತ್ರಾ ಮತ್ತು ದರ್ಶನ್‌ ಇಬ್ಬರನ್ನೂ ಅಲ್ಲಿಗೆ ಕರೆಸಿಕೊಂಡು ಅವರೂ ಥಳಿಸುವುದಕ್ಕೆ ಪ್ರೇರಣೆಯಾಗಿತ್ತು. ರೇಣುಕಾಸ್ವಾಮಿ ಮರ್ಮಾಂಗಕ್ಕೆ ದರ್ಶನ್‌ ಒದ್ದ ನಂತರ ಆತನ ಪ್ರಾಣ ಹೋಗಿದೆ ಎಂಬುದಕ್ಕೂ ಪೊಲೀಸರಿಗೆ ಸಾಕ್ಷಿ ಸಿಕ್ಕಿತ್ತು. ದರ್ಶನ್‌ ತಂಡ ಓಡಾಡಿದ ಕಾರು, ಜೀಪುಗಳು ಸಿಸಿಟಿಪಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆರೋಪಿಯೊಬ್ಬನ ಮೊಬೈಲ್‌ನಲ್ಲಿ ಚಿತ್ರಹಿಂಸೆಯ ದೃಶ್ಯಗಳನ್ನು ರೆಕಾರ್ಡ್‌ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ಹೆಣೆದ ಬಲೆಯಲ್ಲಿ ತಾವಾಗಿಯೇ ಬಿದ್ದಿದ್ದರು.

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ಸ್ನೇಹಿತರ ಜೊತೆಗೆ ಟೀ ಕುಡಿಯುತ್ತಾ ಹರಟುತ್ತಿದ್ದ ವಿಡಿಯೋವೊಂದು ವೈರಲ್‌ ಆಗಿತ್ತು. ರಾಜಾತಿಥ್ಯ ಪಡೆಯುತ್ತಿದ್ದ ವಿಡಿಯೋ ಜೈಲಿನಲ್ಲಿದ್ದ ರೌಡಿಯೊಬ್ಬನೇ ಬಯಲು ಮಾಡಿಸಿದ್ದ, ಇದು ದೊಡ್ಡ ವಿವಾದವಾಗಿ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದು, ನಂತರ ಆತ ಬೆನ್ನು ನೋವಿನ ಕಾರಣ ನೀಡಿ ಚಿಕಿತ್ಸೆಗೆಂದು ಜಾಮೀನು ಪಡೆದು ಹೊರಬಂದು ಡೆವಿಲ್‌ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು ಚಿತ್ರದ ಪ್ರೊಮೋಷನ್‌ ಸಿದ್ದತೆಯಲ್ಲಿರುವಾಗಲೇ ಸುಪ್ರೀಂ ಕೋರ್ಟ್‌ ಶಾಕ್‌ ನೀಡಿದೆ.

ಈ ಇಬ್ಬರು ವ್ಯಕ್ತಿಗಳು ಸಾಮಾಜಿಕವಾಗಿ ಯುವ ಸಮುದಾಯಕ್ಕೆ ಮಾದರಿಯಾಗಬಹುದಿತ್ತು. ಉತ್ತಮ ನಡತೆಯ ಸಾವಿರಾರು ಯುವಕರನ್ನು ಪ್ರಭಾವಿಸಬಹುದಿತ್ತು. ಆದರೆ ಹಣ ಅಂತಸ್ತು, ಸ್ವೇಚ್ಚಾ ಮನೋಭಾವ ಇವರನ್ನು ಅತ್ಯಂತ ಕೆಟ್ಟ ಮಾದರಿಗೆ ನೆನಪಿಡುವಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ಕೊಲೆ ಆರೋಪದಲ್ಲಿ ಬಂಧನವಾದ ನಟರ ಉದಾಹರಣೆಯೇ ಇಲ್ಲ. ಅದೂ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾಗ ಲಕ್ಷಾಂತರ ಅಭಿಮಾನಿಗಳು ಹೀರೋ ಎಂದುಕೊಂಡಿದ್ದಾಗ ಕೊಲೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಚಿತ್ರರಂಗಕ್ಕೆ ಕಳಂಕವೇ ಸರಿ. ಕನ್ನಡ ಚಿತ್ರರಂಗದ ಪ್ರಮುಖರು ದರ್ಶನ್‌ ನಿಂದ ಅಂತರ ಕಾಯ್ದುಕೊಂಡಿದ್ದು, ಈ ಪ್ರಕರಣವನ್ನು ಖಂಡಿಸಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ ಪ್ರಜ್ವಲ್‌ ಕುಟುಂಬ, ಪಕ್ಷದ ಬೆಂಬಲಿಗರು ಈಗಲೂ ಆತನನ್ನು ಅಮಾಯಕ, ಯಾರದ್ದೋ ಷಡ್ಯಂತ್ರ ಎಂಬಂತೆ, ಮೇಲಿನ ಕೋರ್ಟ್‌ನಲ್ಲಿ ಕೃತ್ಯದಲ್ಲಿ

ಫೈನಲಿ ಒಂದು ಒಳ್ಳೆಯ ಟ್ರ್ಯಾಕ್‌ನಲ್ಲಿ ಹೋಗುತ್ತಿದೆ- ನಟಿ ರಮ್ಯಾ

ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ನಟಿ ರಮ್ಯಾ, “ಈ ಜಡ್ಜ್‌ಮೆಂಟ್‌ನಿಂದ ನನಗೊಂದು ರಿಲೀಫ್‌ ಏನಂದ್ರೆ, ಯಾವ ರೀತಿಯಲ್ಲಿ ನಮ್ಮ ಸಮಾಜ ಹೋಗುತ್ತಿತ್ತು ಅದನ್ನು ಕಂಟ್ರೋಲ್‌ ಮಾಡಿದೆ. ಯಾಕಂದ್ರೆ ಪ್ರಜ್ವಲ್‌ ರೇವಣ್ಣ ಕೇಸ್‌ ಆಗಲಿ, ದರ್ಶನ್‌ ಕೇಸ್‌ ಆಗಲಿ ಕೋರ್ಟ್‌ಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಿವೆ, ಸಮಾಜ ಮತ್ತು ಸಾರ್ವಜನಿಕರ ರಕ್ಷಣೆಗೆ ನಿಂತಿವೆ. ಇಂತಹ ಪ್ರಕರಣಗಳನ್ನು ಲೈಟ್‌ ಆಗಿ ತೆಗೆದುಕೊಳ್ಳಲ್ಲ. ಇವತ್ತಿನ ಆದೇಶ ಸಮಾಜಕ್ಕೆ ಒಂದು ಉತ್ತಮ ಮೆಸೇಜ್‌ ಕೊಟ್ಟಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು. ಯಾರೇ ಆಗಿರಲಿ ಕಾನೂನನ್ನು ಪಾಲಿಸಬೇಕು ಅಂತ.

ramya 5

ಸೆಲಬ್ರಿಟಿಗಳಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ನಾವು ಸಮಾಜಕ್ಕೆ ಎಕ್ಲಾಂಪಲ್‌ ಆಗಿರುತ್ತೇವೆ. ನಾವು ಮೊದಲು ಕಾನೂನು ಫಾಲೋ ಮಾಡಬೇಕು. ನಮ್ಮ ಸಿನಿಮಾಗಳು ಹೇಗಿರುತ್ತವೆ ಅಂದ್ರೆ ನಮ್ಮನ್ನು ತುಂಬಾ ಇಮಿಟೇಟ್‌ ಮಾಡುವವರು, ನಾವು ನಡೆಯುವ ರೀತಿ, ಬಟ್ಟೆ ಹಾಕಿಕೊಳ್ಳುವ ರೀತಿ, ಮಾತಾಡುವ ರೀತಿ, ಬ್ಯಾಗ್‌ ಹಾಕಿಕೊಳ್ಳುವ ರೀತಿ ಎಲ್ಲವನ್ನೂ ಕಾಪಿ ಮಾಡುತ್ತಾರೆ. ಅಂಥದ್ದರಲ್ಲಿ ನಮಗೆ ತುಂಬಾ ದೊಡ್ಡ ಜವಾಬ್ದಾರಿ ಇರುತ್ತದೆ. ನನಗನ್ನಿಸುತ್ತದೆ ಸೆಲಬ್ರಿಟಿಗಳು ಹೆಚ್ಚು ಜಾಗರೂಕತೆಯಿಂದ ಇರಬೇಕು. ಪಬ್ಲಿಕ್‌ನಲ್ಲಿ ನಮ್ಮ ಸ್ಟ್ಯಾಂಡರ್ಡ್‌ ಮೇಂಟೇನ್‌ ಮಾಡ್ಬೇಕು. ಪ್ರೆಸೆಂಟ್‌ ಮಾತ್ರ ಅಲ್ಲ, ಫ್ಯೂಚರ್‌ನಲ್ಲೂ. ಹೆಣ್ಣುಮಕ್ಕಳಿಗೆ ಸೇಫ್‌ ಎನ್ವಿರಾನ್‌ಮೆಂಟ್‌ ಒದಗಿಸಿಕೊಡಬೇಕು.

ಫೈನಲಿ ಒಂದು ಒಳ್ಳೆಯ ಟ್ರ್ಯಾಕ್‌ನಲ್ಲಿ ಹೋಗುತ್ತಿದೆ. ಹೈಕೋರ್ಟ್‌ ಜಡ್ಜ್‌ಮೆಂಟ್‌ ಪ್ರಜ್ವಲ್‌ ರೇವಣ್ಣ ಕೇಸಲ್ಲಿ, ದರ‍್ಸನ್‌ ಕೇಸಲ್ಲಿ ಸುಪ್ರೀಂ ಕೋರ್ಟ್‌ ಒಬ್ಸರ್ವೇಷನ್‌ ಭರವಸೆ ಮೂಡಿಸಿದೆ. ಆದರೆ, ಅವರ ಜೀವನ ಮಾತ್ರ ಅಲ್ಲ ಅವರ ಜೊತೆಗೆ ಹೋದವರ ಎಲ್ಲರ ಜೀವನ ವೇಸ್ಟ್‌ ಆಯ್ತು ಅಂತ ಬೇಜಾರಾಗ್ತಿದೆ. ಆದ್ರೆ, ಎಲ್ಲರೂ ಸಮಾನರು, ಎಲ್ಲರೂ ಕಾನೂನು ಪಾಲಿಸಲೇಬೇಕು. ಒಂದು ಸ್ವಸ್ಥ ಸಮಾಜಕ್ಕೆ ನಾವು ಇಷ್ಟು ಮಾಡಲೇಬೇಕು” ಎಂದು ಹೇಳಿದರು.

***

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇವರೆಲ್ಲರಿಗೂ ಅವರದೇ ಆದ ಕುಟುಂಬಗಳಿವೆ ಎಂಬುದನ್ನು ನಾಗರಿಕರು ಗಮನಿಸಬೇಕು. ಪವಿತ್ರ ಗೌಡ ಸಿಂಗಲ್‌ ಮದರ್.‌ ಈಗ ಆಕೆಯ ಹದಿಹರೆಯದ ಮಗಳು ಒಂಟಿ. ಅಜ್ಜಿ, ಮಾವ ಎಲ್ಲರೂ ಜೊತೆಗಿದ್ದು ಸಮಾಧಾನಿಸಬಹುದು ಆದರೆ, ಹೆತ್ತವರು ಜೊತೆಗಿದ್ದಂತೆ ಆಗಲ್ಲ. ದರ್ಶನ್‌ ಪತ್ನಿ ದಾಂಪತ್ಯ ಜೀವನದುದ್ದಕ್ಕೂ ಹಿಂಸೆ, ಅವಮಾನಗಳನ್ನು ಅನುಭವಿಸಿದಾಕೆ. ಆದರೆ, ಪತಿಯನ್ನು ನೋಡಲು ದೂರದ ಬಳ್ಳಾರಿ ಜೈಲಿಗೆ, ಜಾಮೀನು ಪಡೆಯಲು ಕೋರ್ಟಿಗೆ ಅಲೆದಾಡಿದಾಕೆ. ಹಣ ಇರಬಹುದು, ಐಷಾರಾಮಿ ಬದುಕು ಇರಬಹುದು, ಪತಿ ಜೈಲಿನಲ್ಲಿರುವ ಅವಮಾನ ಕಾಡುತ್ತಲೇ ಇರುತ್ತದೆ. ಅವರ ಮಗ ಇನ್ನೂ ಹೈಸ್ಕೂಲ್‌ ವಿದ್ಯಾರ್ಥಿ. ಅಪ್ಪ ಕೊಲೆಗಾರನಾ ಅಲ್ವಾ ಗೊತ್ತಿಲ್ಲ. ಆದರೆ ಜೈಲಿನಲ್ಲಿದ್ದಾರೆ ಎಂಬುದು ನಿಜ. ಸ್ನೇಹಿತರ ಪ್ರಶ್ನೆಗಳನ್ನು ಆ ಬಾಲಕ ಎದುರಿಸಬೇಕಿದೆ. ಹೆತ್ತವರ ತೆವಲು, ಅನಾಚಾರಗಳಿಗೆ ಆ ಮಕ್ಕಳು ಬಲಿಪಶುವಾಗಬೇಕಿದೆ. ಇನ್ನು ಮಿಕ್ಕ ಆರೋಪಿಗಳು ದರ್ಶನ್‌ ಸ್ನೇಹಿತರೋ, ಆಳುಗಳೋ ಗೊತ್ತಿಲ್ಲ. ಅವರು ಕುಟುಂಬದ ನೊಗ ಹೊರಬೇಕಾದವರು ಎಂಬುದು ಮಾತ್ರ ಸತ್ಯ. ಈ ಪ್ರಜ್ಞೆ ಹಣ, ಖ್ಯಾತಿಯ ಮದದಲ್ಲಿ ಮೆರೆಯುವವರಿಗೆ ಇರಬೇಕು ಎಂದು ನಿರೀಕ್ಷಿಸೋದು ಕಷ್ಟ.

Exclusive | ದರ್ಶನ್‌ ಜೀವನ ಮಾತ್ರವಲ್ಲ, ಜೊತೆಗಿದ್ದವರ ಜೀವನವೂ ಹಾಳಾಯ್ತು- ನಟಿ ರಮ್ಯಾ

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X