ಸೌಜನ್ಯ ಕುಟುಂಬದವರು ಹೇಳುತ್ತಿರುವ ಮೂವರು ಆರೋಪಿತರಲ್ಲಿ ಒಬ್ಬನ ಮಾತು ಕೇಳುತ್ತಿದ್ದಂತೆ ಹನ್ನೊಂದು ವರ್ಷಗಳ ಹಿಂದೆ ಪ್ರಕೃತಿ ಚಿಕಿತ್ಸಾಲಯದ ಗೇಟಿನ ಬಳಿ ಸಿಕ್ಕಿ ಎಚ್ಚರಿಸಿದ್ದ ವ್ಯಕ್ತಿಯ ನೆನಪು ಬಂದಿದೆ. ತಡವರಿಸಿ ಮಾತನಾಡುವ ಆ ವ್ಯಕ್ತಿ ಧರ್ಮಸ್ಥಳದ ಆಟೋ ಡ್ರೈವರ್. ಆತ ಎಚ್ಚರಿಸಿದ ಕೆಲ ನಿಮಿಷಗಳಲ್ಲಿ ಅಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಬಲವಂತವಾಗಿ ಕಾರಿಗೆ ಎತ್ತಿ ಹಾಕಿದ್ದು, ಆಗ ಆಕೆಯ ಬ್ಯಾಗ್, ಕೊಡೆ ಬಿದ್ದ ದೃಶ್ಯ ಕಣ್ಣ ಮುಂದೆ ಬಂದಿದೆ…
2012ರಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನಿಂದ ಸಂಜೆ ನಾಲ್ಕೂವರೆಯ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದಾಗ, ನೇತ್ರಾವತಿ ಸ್ನಾನಘಟ್ಟದ ಬಳಿ ಬಸ್‌ನಿಂದ ಇಳಿದು ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಂದೆ ಕಣ್ಣಳತೆ ದೂರದಲ್ಲಿ ಮನೆ ಕಡೆಯ ರಸ್ತೆ ತಿರುವಿನಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಸೌಜನ್ಯಳನ್ನು ಅಪಹರಿಸಿದ್ದನ್ನು ನೋಡಿದವರು ಯಾರಾದರೂ ಇದ್ದಾರಾ? ಈ ಪ್ರಶ್ನೆ ಇಷ್ಟು ವರ್ಷಗಳಿಂದ ಕಾಡುತ್ತಲೇ ಇತ್ತು. ಯಾಕೆಂದರೆ ಆಕೆ ಸ್ನಾನಘಟ್ಟದ ಬಳಿ ಇಳಿದು ಮನೆ ಕಡೆಗೆ ಹೋಗುವುದನ್ನು ಜೀಪಿನಲ್ಲಿ ತನ್ನ ಅಂಗಡಿಗೆ ಹೋಗುತ್ತಿದ್ದ ಆಕೆಯ ಮಾವ ವಿಠಲ ಗೌಡ ನೋಡಿದ್ದಾರೆ. ಅದೇ ಕಡೆ, ನಂತರ ಸೌಜನ್ಯಳನ್ನು ನೋಡಿದವರಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಆ ದಿನ ಪ್ರಕೃತಿ ಚಿಕಿತ್ಸಾಲಯದ ಗೇಟಿನ ಬಳಿ ನಿಂತಿದ್ದ ಪರವೂರಿನ ಇಬ್ಬರು ದೂರದಲ್ಲಿ ಒಂದು ಹುಡುಗಿಯನ್ನು ಕಾರಿಗೆ ಬಲವಂತವಾಗಿ ಎತ್ತಿಕೊಂಡು ಹಾಕಿರುವುದನ್ನು ನೋಡಿರುವುದಾಗಿ, ಅದಕ್ಕೂ ಕೆಲವು ನಿಮಿಷಗಳ ಮುನ್ನ ಮೂತ್ರ ವಿಸರ್ಜನೆಗೆ ರಸ್ತೆಯ ಪೊದೆಯ ಕಡೆ ಹೋದಾಗ ಅಲ್ಲೊಬ್ಬ ವ್ಯಕ್ತಿ ನಿಂತಿದ್ದು, ಆತ “ಇಲ್ಲೆಲ್ಲ ಬರಬೇಡಿ” ಎಂದು ಎಚ್ಚರಿಸಿದ್ದನಂತೆ. ಅದಾದ ಮೇಲೆ ಅವರು ಬಸ್ ಹತ್ತಿ ಹೋಗಿದ್ದಾರೆ. ಆದರೆ ಆ ಯುವತಿ ಯಾರು ಎಂಬ ಪ್ರಶ್ನೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಸೌಜನ್ಯ ಪ್ರಕರಣಕ್ಕೂ ಈ ಘಟನೆಗೂ ಏನಾದರೂ ಲಿಂಕ್ ಇದೆಯೇ ಎಂಬುದು ಬಯಲಾಗಬೇಕಿದೆ.
ಆ ಪರವೂರಿನ ವ್ಯಕ್ತಿಗಳು, ತಮ್ಮ ಪಾಡಿಗೆ ತಾವು ಊರು ಸೇರಿದ್ದಾರೆ. ಅದಾಗಿ ಹನ್ನೊಂದು ವರ್ಷಗಳ ನಂತರ ಸೌಜನ್ಯ ಪ್ರಕರಣದ ಸಿಬಿಐ ತೀರ್ಪು ಬಂದಾಗ ಆಕೆಯ ಕುಟುಂಬದವರು ಬಲವಾಗಿ ಅನುಮಾನ ವ್ಯಕ್ತಪಡಿಸಿದ ಮೂವರು ವ್ಯಕ್ತಿಗಳು ಮಾಧ್ಯಮಗಳ ಮುಂದೆ ಬಂದು ತಾವು ನಿರಪರಾಧಿಗಳು ಎಂದು ಹೇಳಿಕೊಂಡಿದ್ದರು. ಆಣೆ ಪ್ರಮಾಣ ಮಾಡುವ ನಾಟಕ ಒಂದು ಕಡೆಯಾದರೆ, ಮತ್ತೊಂದು ಕಡೆ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿತ್ತು.

ದೂರುದಾರರು ಹೀಗೆ ಮನೆಯಲ್ಲಿ ಕೂತು ಟಿವಿ ನೋಡುತ್ತಿದ್ದಾಗ ಆ ಮೂವರು ಆರೋಪಿತರಲ್ಲಿ ಒಬ್ಬನ ಮಾತು ಕೇಳುತ್ತಿದ್ದಂತೆ ಹನ್ನೊಂದು ವರ್ಷಗಳ ಹಿಂದೆ ಪ್ರಕೃತಿ ಚಿಕಿತ್ಸಾಲಯದ ಗೇಟಿನ ಬಳಿ ಸಿಕ್ಕಿ ಎಚ್ಚರಿಸಿದ್ದ ವ್ಯಕ್ತಿಯ ನೆನಪು ಬಂದಿದೆ. ತಡವರಿಸಿ ಮಾತನಾಡುವ ಆ ವ್ಯಕ್ತಿ ಧರ್ಮಸ್ಥಳದ ಆಟೋ ಡ್ರೈವರ್. ಆ ದಿನ ಆತ ಎಚ್ಚರಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಬಲವಂತವಾಗಿ ಕಾರಿಗೆ ಎತ್ತಿ ಹಾಕಿದ್ದು, ಆಗ ಆಕೆಯ ಬ್ಯಾಗ್, ಕೊಡೆ ಬಿದ್ದ ದೃಶ್ಯ ಕಣ್ಣ ಮುಂದೆ ಬಂದಿದೆ. ಈ ವಿಚಾರವನ್ನು ಹೇಗಾದರೂ ಮಾಡಿ ಬಯಲು ಮಾಡಬೇಕು ಎಂಬ ಉದ್ದೇಶದಿಂದ ಸಾಕ್ಷಿಗಳು ಸೌಜನ್ಯ ಪರ ಹೋರಾಟದ ಮುಂಚೂಣಿಯಲ್ಲಿದ್ದ ಮೈಸೂರಿನ ʼಒಡನಾಡಿʼ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿ ವಿಷಯ ತಿಳಿಸುತ್ತಾರೆ. ಸಾಕ್ಷಿಗೆ ಸಂಪೂರ್ಣ ರಕ್ಷಣೆ ನೀಡಿರುವ ಸಂಸ್ಥೆ ಸರಿಯಾದ ಸಂದರ್ಭಕ್ಕೆ ಕಾದಿತ್ತು.
ಇದೀಗ ನೂರಾರು ಅನಾಥ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಪೊಲೀಸರ ಮುಂದೆ ಬಂದಿರುವ ವ್ಯಕ್ತಿಯ ದೂರು ಆಧರಿಸಿ ಎಸ್‌ಐಟಿ ತನಿಖೆ ಶುರು ಮಾಡಿರುವುದಲ್ಲದೇ ದೂರು ನೀಡುವವರಿಗೆ ಅನುಕೂಲವಾಗುವಂತೆ ಸಹಾಯವಾಣಿ ಸ್ಥಾಪಿಸಿದೆ. ಕಳೆದ ಶುಕ್ರವಾರ ಖುದ್ದು ಸಹಾಯವಾಣಿಗೆ ದೂರು ನೀಡಿದ್ದು, ಎಸ್‌ಐಟಿ ಅಧಿಕಾರಿಗಳು ಒಡನಾಡಿ ಸ್ಟ್ಯಾನ್ಲಿ ಅವರೊಂದುಗೂ ಮಾತನಾಡಿದ್ದಾರೆ ಎಂಬ ಮಾಹಿತಿ ಈ ದಿನಕ್ಕೆ ಲಭ್ಯವಾಗಿದೆ.
ಒಡನಾಡಿ ಸ್ಟ್ಯಾನ್ಲಿ ಅವರು ಈದಿನದ ಜೊತೆಗೆ ಮಾತನಾಡಿ “ಸೌಜನ್ಯ ಪ್ರಕರಣದಲ್ಲಿ ನಂಬಲರ್ಹ ಮತ್ತು ಬಹಳ ಮಹತ್ವದ ಸಾಕ್ಷಿಯಾಗಿರುವ ಕಾರಣ ತನಿಖೆಯ ಹಾದಿಯಲ್ಲಿ ಬಳಸಿಕೊಳ್ಳುತ್ತೇವೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕೃತಿ ಚಿಕಿತ್ಸಾಲಯದ ಗೇಟಿನ ಬಳಿ ಸಣ್ಣ ಬಲ್ಬಿನ ರೀತಿಯ ಒಂದು ವಸ್ತು ಇತ್ತು ಎಂದು ಅವರು ಹೇಳಿದ್ದಾರೆ. ಅದು ಸಿಸಿಟಿವಿ ಕ್ಯಾಮೆರಾ ಇದ್ದಿರಬಹುದು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಒಬ್ಬ ಯುವತಿಯನ್ನು ನಾಲ್ಕಾರು ವಾಹನಗಳಲ್ಲಿ ಅಡ್ಡಗಟ್ಟಿ ಹೊತ್ತೊಯ್ಯುವುದನ್ನು ಕಂಡಿರುವುದಲ್ಲದೆ ನಾವು ಅವರೊಡನೆ ಹತ್ತಿರದಿಂದ ಮಾತನಾಡಿರುತ್ತೇವೆ” ಎಂದು ಸಾಕ್ಷಿಗಳು ಹೇಳಿಕೊಂಡಿರುತ್ತಾರೆ. ಪ್ರತ್ಯಕ್ಷ ಸಾಕ್ಷಿಗಳಲ್ಲಿ ಒಬ್ಬರು ಮರಣಹೊಂದಿದ್ದಾರೆ.
ಇದೀಗ ಎಸ್‌ಐಟಿ ರಚನೆಯಾಗಿರುವುದು ಅಕ್ರಮವಾಗಿ ಹೂತ ಶವಗಳ ಸಂಬಂಧ ಎಂದು ಗೃಹಸಚಿವ ಡಾ ಪರಮೇಶ್ವರ್ ಹೇಳಿದರೂ, ಸೌಜನ್ಯ ಅತ್ಯಾಚಾರ- ಕೊಲೆ ರಹಸ್ಯ ಬಯಲು ಮಾಡುವುದು ಸರ್ಕಾರದ ಕರ್ತವ್ಯ. ಪ್ರಭಾವಿಗಳ ಒತ್ತಡಕ್ಕಿಂತ ಜನರ ಒತ್ತಡಕ್ಕೆ ಸರ್ಕಾರ ಮಣಿಯಬೇಕಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಮುಖ್ಯ.
ಇದನ್ನೂ ಓದಿ ಧರ್ಮಸ್ಥಳ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
ವಿಶೇಷ ವರದಿ ಚೆನ್ನಾಗಿದೆ. ಹೀಗೆ ಒಂದೊಂದಾಗಿ ಸಾಕ್ಷಿ, ಪುರಾವೆಗಳು ಸಿಗುತ್ತಾ ಬಂದರೆ ಒಳ್ಳೆಯದು.
ಆ ಆಟೊ ಡ್ರೈವರ್ ಗುರುತು ಪ್ರಕಟಿಸಿಬಿಟ್ಟಿದೀರಲ್ಲ. ಆತ ತಲೆ ಮರೆಸಿಕೊಳ್ಳುವುದು, ಇನ್ಯಾವುದೋ ರೀತಿ ಸಾಕ್ಷ್ಯ ನಾಶ ಮಾಡುವುದು ಹೀಗೇನಾದರೂ ಆಗಲಿಕ್ಕಿಲ್ವ?
ಬ್ಲರ್ಬ್ ಓದಿದಾಗ, ಪೂರ್ತಿ ವರದಿ ಓದುವವರೆಗೂ ಏನೆಂದು ಅರ್ಥವಾಗಲ್ಲ, ಕೇವಲ ಗೊಂದಲವಾಗುತ್ತೆ. ವಾಕ್ಯಗಳನ್ನು ಸ್ವಲ್ಪ ಕತ್ತರಿಸಿ ಹೊಂದಿಸಬೇಕಿತ್ತೇನೊ.