ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮ ವಿರೋಧಿ ಎಂದು ಮೇಲ್ಜಾತಿಗಳು ವ್ಯಾಪಾರಿ ಗೋವಿಂದರಾವ್ ಜತೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಮಗ ಜ್ಯೋತಿಬಾ, ಸೊಸೆ ಸಾವಿತ್ರಿ ಬಾಯಿ ಅವರು ಅಕ್ಷರ ಕಲಿಸುವುದನ್ನು ನಿಲ್ಲಿಸದ್ದಕ್ಕೆ ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಹೊರಹಾಕುತ್ತಾರೆ. ಗೋವಿಂದರಾವ್ ತಂಗಿ ಸುಗುಣಬಾಯಿ ಪರ್ಷಿಯನ್ ಶಿಕ್ಷಕ ಮುನ್ಷಿ ಗಫರ್ ಖಾನ್ ಅವರ ಬಳಿ ವಿಷಯ ತಿಳಿಸುತ್ತಾಳೆ. ಗಫರ್ ಖಾನ್ ಫುಲೆ ದಂಪತಿಗಳನ್ನು ಉಸ್ಮಾನ್ ಶೇಕ್ ಅವರ ಮನೆಗೆ ಕರೆದೊಯ್ಯುತ್ತಾರೆ. ನಡೆದ ಘಟನೆಯನ್ನು ವಿವರಿಸುತ್ತಾರೆ. ಉಸ್ಮಾನ್ ಶೇಕ್ ತನ್ನ ಮನೆಯ ಎರಡು ಕೋಣೆಗಳನ್ನು ಬಿಟ್ಟುಕೊಡುತ್ತಾರೆ. ಮನೆಯ ಒಳಗಿಂದ ಒಂದು ಹುಡುಗಿ ಬಂದು ಸಾವಿತ್ರಿ ಬಾಯಿಯನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ಆ ಹುಡುಗಿಯೇ ಉಸ್ಮಾನ್ ಶೇಕ್ ಅವರ ತಂಗಿ ಫಾತೀಮಾ ಶೇಕ್.
ಉಸ್ಮಾನ್ ಶೇಕ್ ಅವರ ಮನೆಯಲ್ಲಿ ಫುಲೆ ದಂಪತಿಗಳಿಂದ (1848) ಶಾಲೆಯೊಂದು ಆರಂಭವಾಗುತ್ತದೆ. ಇದೇ ಶಾಲೆಯಲ್ಲಿ ಸಾವಿತ್ರಿ ಬಾಯಿ ಮತ್ತು ಫಾತೀಮಾ ಶಿಕ್ಷಕಿಯರಾಗುತ್ತಾರೆ. ಆದರೆ ಸಾವಿತ್ರಿ ಬಾಯಿ ಅವರನ್ನು ಜನವರಿ 3 ರಂದು ದೇಶವ್ಯಾಪಿ ನೆನೆದು ಫುಲೆ ದಂಪತಿಗಳ ಅಕ್ಷರ ಕ್ರಾಂತಿಯ ಭಾಗವಾಗಿದ್ದ ಫಾತೀಮಾ ಶೇಕ್ ಹುಟ್ಟಿದ ಜನವರಿ 9ನ್ನು ಚಾರಿತ್ರಿಕವಾಗಿ ನೆನೆಯುವುದಿಲ್ಲ.
ಹಾಗೆ ನೋಡಿದರೆ, ಫುಲೆ ದಂಪತಿಗಳ ಜತೆ ಮುನ್ಷಿ ಗಫರ್ ಖಾನ್, ಸುಗುಣ ಬಾಯಿ, ಉಸ್ಮಾನ್ ಶೇಖ್ ಹಾಗೂ ಫಾತೀಮಾ ಶೇಖ್ ಆಧುನಿಕ ಭಾರತದಲ್ಲಿ ದಮನಿತರಿಗೆ ಅಕ್ಷರದ ಬೆಳಕು ಬೀರಲು ಸಾಲು ದೀಪದಂತೆ ಉರಿದವರು. ಈ ಶಿಕ್ಷಣ ಕ್ರಾಂತಿಗೆ ‘ದಲಿತ-ದಮನಿತ-ಮಹಿಳೆ-ಮುಸ್ಲೀಂ’ ಸಂಯುಕ್ತ ಅರಿವಿನ ಹೋರಾಟದ ಒಂದು ದೊಡ್ಡ ಮಾದರಿಯನ್ನು ಈ ಮೂಲಕ ತೋರಿಸಿದ್ದಾರೆ. ಹಾಗಾಗಿ ಈ ಕಾರ್ಯಾಚರಣೆಯ ಭಾಗವಾದ ಎಲ್ಲರನ್ನೂ ನೆನೆಯಬೇಕಿದೆ.
ಸೂಸಿ ತಾರು ಮತ್ತು ಲಲಿತ ಕೆ ಅವರು 1991ರಲ್ಲಿ ಸಂಪಾದಿಸಿದ ‘ವುಮನ್ ರೈಟಿಂಗ್ ಇನ್ ಇಂಡಿಯಾ’ ಮೊದಲ ಸಂಪುಟದಲ್ಲಿ ಸಾವಿತ್ರಿ ಬಾಯಿ 1856ರಲ್ಲಿ ಬರೆದ ಪತ್ರವೊಂದು ಪ್ರಕಟವಾಗುತ್ತದೆ. ಈ ಪತ್ರದಲ್ಲಿ ಫಾತೀಮಾ ಶೇಕ್ ಅವರ ಉಲ್ಲೇಖ ಗಮನ ಸೆಳೆಯುತ್ತದೆ. ನಂತರ ಫಾತೀಮಾಳ ಬಗ್ಗೆ ಕುತೂಹಲ ಮೂಡುತ್ತದೆ. 1831ರ ಜನವರಿ 9ರಂದು ಫಾತೀಮಾ ಶೇಕ್ ಪುಣೆಯಲ್ಲಿ ಜನಿಸುತ್ತಾಳೆ. ಅಣ್ಣ ಉಸ್ಮಾನ್ ಶೇಕ್ ಜತೆ ಫುಣೆಯ ಭಿಡೆವಾಡೆಯಲ್ಲಿ ಬೆಳೆಯುತ್ತಾಳೆ. ಉಸ್ಮಾನ್ ತಂಗಿಗೆ ಉರ್ದು ಶಿಕ್ಷಣ ಕೊಡಿಸುತ್ತಾರೆ. ಮುಸ್ಲೀಮರ ವಿರೋಧದ ನಡುವೆಯೂ ಫಾತಿಮಾಗೆ ಮರಾಠಿ ಶಿಕ್ಷಣ ಕೊಡಿಸುತ್ತಾರೆ. ಹಾಗಾಗಿ ಮರಾಠಿ ಕಲಿತ ಮೊದಲ ಮುಸ್ಲಿಂ ಮಹಿಳೆ.

ಅಮೇರಿಕಾದ ಮರಾಠಿ ಮಿಷನರಿಯಾಗಿ ಭಾರತಕ್ಕೆ ಬಂದ ಸಿಂಥಿಯಾ ಫೆರಾರ್ 1829ರಲ್ಲಿ ಅಹಮದಾಬಾದ್‌ನಲ್ಲಿ ನಾಲ್ಕು ಹುಡುಗಿಯರ ಶಾಲೆ ತೆರೆಯುತ್ತಾಳೆ. 1848ರಲ್ಲಿ ಜ್ಯೋತಿ ಬಾ ಪುಲೆ ಈ ಶಾಲೆಗಳನ್ನು ನೋಡಿ ಹುಡುಗಿಯರಿಗಾಗಿ ಶಾಲೆ ತೆರೆಯುವ ಪ್ರೇರಣೆ ಪಡೆಯುತ್ತಾರೆ. ಸಿಂಥಿಯಾ ಹುಡುಗಿಯರ ಶಾಲೆಗಳಲ್ಲಿ ಟೀಚರ್ ಆಗಿ ಕೆಲಸಮಾಡಲು ಬೇಕಿದ್ದ ತರಬೇತಿ ಶಾಲೆಯನ್ನು ಅಹಮದ್ ನಗರದಲ್ಲಿ ತೆರೆಯುತ್ತಾರೆ. ಈ ಟೀಚರ್ ಟ್ರೈನಿಂಗ್ ಸ್ಕೂಲಿನ ಮೊದಲ ಬ್ಯಾಚಿನ ವಿದ್ಯಾರ್ಥಿನಿಯರಾಗಿ ಸಾವಿತ್ರಿ ಬಾಯಿ ಫುಲೆ ಮತ್ತು ಫಾತೀಮಾ ಶೇಕ್ ಸೇರುತ್ತಾರೆ. ಇಬ್ಬರೂ ಸಿಂಥಿಯಾ ಅವರ ನೇರ ಶಿಷ್ಠೆಯರಾಗುತ್ತಾರೆ. ಹೀಗೆ ಜ್ಯೋತಿರಾವ್ ಫುಲೆ, ಸಾವಿತ್ರಿ ಬಾಯಿ, ಫಾತೀಮಾ ಶೇಕ್ ಅವರಲ್ಲಿ ಹುಡುಗಿಯರ ಶಾಲೆಯ ಕನಸಿನ ಬೀಜ ಬಿತ್ತಿದ್ದು ಸಿಂಥಿಯಾ ಫೆರಾರ್ ಎನ್ನುವುದನ್ನು ಮರೆಯುವಂತಿಲ್ಲ.
ಈ ವರದಿ ಓದಿದ್ದೀರಾ?: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಬದುಕು ನಮಗೆ ಸ್ಫೂರ್ತಿಯಾಗಲಿ
ಸಾವಿತ್ರಿ ಬಾಯಿ ಶಾಲೆಗಳಲ್ಲಿ ಕಲಿಸುತ್ತಿದ್ದರೆ, ಫಾತೀಮಾ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ತಿಳಿಸಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದಳು. ಮುಸ್ಲಿಂ ಬಾಲಕಿಯರನ್ನು ಶಾಲೆಗೆ ಪ್ರೇರೇಪಿಸಿದ್ದಕ್ಕೆ ಮುಸ್ಲೀಂ ಗಂಡಸರಿಂದ ಕಷ್ಟಗಳನ್ನು ಎದುರಿಸುತ್ತಾಳೆ. ಮುಂದೆ ಮಹಿಳೆಯರಿಗಾಗಿ ಫುಲೆ ದಂಪತಿಗಳು ಆರಂಭಿಸಿದ ಹದಿನೆಂಟು ಶಾಲೆಗಳ ವ್ಯವಹಾರವನ್ನು ನಿರ್ವಹಿಸಿದಳು. ಮುಂಬೈನಲ್ಲಿ 1851ರಲ್ಲಿ ಸ್ವತಃ ಹುಡುಗಿಯರಿಗಾಗಿ ಎರಡು ಶಾಲೆಗಳನ್ನು ತೆರೆದಳು. ಫುಲೆ ದಂಪತಿಗಳಂತೆ ಫಾತೀಮಾ ಸಾಹಿತ್ಯ ರಚಿಸದಿದ್ದ ಕಾರಣ ಬಹುಕಾಲ ತೆರೆಮರೆಯಲ್ಲೆ ಉಳಿದರು.
ಅಂಬೇಡ್ಕರ್ 1946ರಲ್ಲಿ ‘ಶೂದ್ರರು ಯಾರಾಗಿದ್ದರು?’ ಕೃತಿಯನ್ನು ಜೋತಿಬಾ ಪುಲೆ ಅವರಿಗೆ ಅರ್ಪಿಸಿ ಅವರು ನನ್ನ ಗುರು ಎನ್ನುತ್ತಾರೆ. ಹೀಗಾಗಿ ಅಂಬೇಡ್ಕರ್ ಕುರಿತ ಅಧ್ಯಯನದ ಜತೆಜತೆಗೆ ದಲಿತ-ಬಹುಜನ ಪಕ್ಷವು ಜ್ಯೋತಿಬಾ ಮತ್ತು ಸಾವಿತ್ರಿ ಬಾಯಿ ಅವರನ್ನು ಮುನ್ನಲೆಗೆ ತಂದಿತು. ಭಾರತದಲ್ಲಿ ಮುಸ್ಲಿಂ ಚಿಂತಕರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದ ಸರ್ ಸೈಯದ್ ಅಹ್ಮದ್ ಖಾನ್ ಮೂಲಕ ಆಧುನಿಕ ಭಾರತದ ಮುಸ್ಲಿಂ ಶಿಕ್ಷಣವನ್ನು ಗುರುತಿಸುತ್ತಾರೆ. ವಿಪರ್ಯಾಸವೆಂದರೆ, 1848ರಲ್ಲಿಯೇ ಶಿಕ್ಷಕಿಯಾಗಿ ಅಕ್ಷರದ ಬೆಳಕಿಂಡಿ ತೆರೆದ ಫಾತೀಮಾ ಶೇಕ್ ಬಗ್ಗೆ ಮುಸ್ಲಿಂ ಚಿಂತಕರು ಚರಿತ್ರೆಯಲ್ಲಿ ಗುರುತಿಸುವುದಿಲ್ಲ.

ಸಾವಿತ್ರಿ ಬಾಯಿ ಪುಲೆ ಮತ್ತು ಫಾತೀಮಾ ಶೇಕ್ ಕುರ್ಚಿಯ ಮೇಲೆ ಕುಳಿತಿದ್ದು, ಕೆಳಗಡೆ ಇಬ್ಬರು ಮಕ್ಕಳು, ಹಿಂದೆ ಒಬ್ಬ ಮಹಿಳೆ ನಿಂತಿರುವ ಒಂದು ಬಹಳ ಹಳೆಯ ಫೋಟೋವನ್ನು ಲೋಕಂಡೆ ಎನ್ನುವ ಬ್ರಿಟಿಷ್ ಮಿಷನರಿ ತನ್ನ ಪುಸ್ತಕದಲ್ಲಿ ಪ್ರಕಟಿಸುತ್ತಾನೆ. 1924ರಲ್ಲಿ ಆರ್.ಎನ್ ಲಾಡ್ ಎನ್ನುವವರು ಸಂಪಾದಕರಾಗಿ ಪ್ರಕಟಿಸುತ್ತಿದ್ದ ‘ಮಜೂರ್’ ಎನ್ನುವ ಪತ್ರಿಕೆಯಲ್ಲಿ ಈ ಫೋಟೋವನ್ನು ಮುದ್ರಿಸಿ ಸಂಕ್ಷಿಪ್ತ ಪರಿಚಯ ಬರೆಯುತ್ತಾರೆ. ಮುಂದೆ ಈ ಫೋಟೋವನ್ನು ಡಾ.ಎಂ.ಜಿ ಮಾಲಿ ಅವರ ‘ಸಾವಿತ್ರಿಬಾ ಪುಲೆ ಸಮಗ್ರ ವಾಜ್ಞ್ಮಯ’ ಎನ್ನುವ ಕೃತಿಯಲ್ಲಿ ಪ್ರಕಟಿಸುತ್ತಾರೆ. ಇದರ ರೆಫರೆನ್ಸ್‌ನಿಂದ 2020ರಲ್ಲಿ ಬಿಬಿಸಿಯ ಹಿಂದಿ ಚಾನಲ್‌ನಲ್ಲಿ ಪತ್ರಕರ್ತ ನಾಜಿರುದ್ದೀನ್ ಅವರು ‘ಫಾತೀಮಾ ಶೇಕ್-ಸಾವಿತ್ರಿ ಬಾಯಿ ಕೆ ಸಾತ್ ವಂಚಿತೋಂಕೋ ಶಿಕ್ಷಿತ್ ಕರ್ನೆ ವಾಲಿ ಮಹಿಳಾ” ಎಂಬ ಕಾರ್ಯಕ್ರಮ ಪ್ರಸಾರ ಮಾಡಿ ಈ ಫೋಟೋದ ಚಾರಿತ್ರಿಕತೆ ಕುರಿತು ಚರ್ಚಿಸುತ್ತಾರೆ. ಆಗ ಈ ಫೋಟೋ ಹೆಚ್ಚು ಜನಪ್ರಿಯವಾಗುತ್ತದೆ.
ಹೀಗೆ ಮುನ್ನಲೆಗೆ ಬಂದು ಪರಿಚಯವಾದ ಫಾತೀಮಾ ಶೇಕ್ ಅವರ ಪರಿಚಯವನ್ನು 2016ರಲ್ಲಿ ಮಹಾರಾಷ್ಟ್ರದ
ಬಾಲಭಾರತಿಯ ಉರ್ದು ಪಠ್ಯದಲ್ಲಿಯೂ, 2022ರಲ್ಲಿ ಆಂದ್ರದ 8 ನೇ ತರಗತಿಯ ಪಠ್ಯದಲ್ಲಿಯೂ ಸೇರಿಸಲಾಗಿದೆ. 2022ರಲ್ಲಿ ಫಾತಿಮಾಳ 191ನೇ ಜನ್ಮದಿನಾಚರಣೆಗೆ ಗೂಗಲ್ ಡೂಡಲ್ ಮೂಲಕ ಗೌರವಿಸಿ ಗಮನಸೆಳೆಯಿತು. ಸೈಯದ್ ನಸೀರ್ ಅಹಮದ್ ಅವರು ತೆಲುಗಿನಲ್ಲಿ ಬರೆದ ಫಾತೀಮಾ ಶೇಕ್ ಜೀವನ ಚರಿತ್ರೆಯ ಕೃತಿಯನ್ನು ಲೇಖಕ ಕಾ.ಹು ಚಾನ್ ಪಾಷ ಅವರು ಕನ್ನಡಕ್ಕೂ ತಂದಿದ್ದಾರೆ. ಭಾರತದ ಚರಿತ್ರೆಯಲ್ಲಿ ಮರೆಯಬಾರದ ಫಾತೀಮಾ ಶೇಕ್ ಅವರನ್ನು ಇನ್ನಾದರೂ ನೆನೆಯೋಣ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com