ಫಿಡೆಲ್ ಸತ್ತ ನಂತರ ಏನಾಗಬಹುದು ಎಂಬ ಲೆಕ್ಕಾಚಾರ ಸಾಮ್ರಾಜ್ಯವಾದಿ ಅಮೆರಿಕಗೆ ಪ್ರಿಯವಾದ ಸಂಗತಿಯಾಗಿತ್ತು. ಫಿಡೆಲ್ ನಂತರ ಕ್ಯೂಬಾ ಕುಸಿಯುತ್ತದೆ ಎಂದು ಅಮೆರಿಕ ಹಾಗೂ ಹಲವರು ಭಾವಿಸಿದ್ದರು. ಆದರೆ, ಫೆಡೆಲ್ ಸಾವಿನ ಬಳಿಕವೂ ಅಂತಹ ಯಾವುದೂ ಕ್ಯೂಬಾದಲ್ಲಿ ಸಂಭವಿಸಲಿಲ್ಲ. ಫಿಡೆಲ್ ನಾಯಕತ್ವದ ರೀತಿಯಲ್ಲಿಯೇ ಕ್ಯೂಬಾ ಮುಂದುವರೆದಿದೆ.
ಮನುಷ್ಯ ಹುಟ್ಟುತ್ತಲೇ ಕ್ರಾಂತಿಕಾರಿ ಅಲ್ಲ. ಸಂದರ್ಭ, ಸಂಘರ್ಷ, ಸನ್ನಿವೇಶಗಳ ಕೂಸು. ಹೀಗಾಗಿ, ಮನುಷ್ಯ ಪೂರ್ಣವಾಗಿ ತನ್ನ ಭವಿಷ್ಯದ ಪೂರ್ಣ ನಿರ್ಮಾತೃ ಸಂಪೂರ್ಣ ತಾನೇ ಆಗಿರುವುದಿಲ್ಲ. ಲೋಹದ ತುಂಡನ್ನು ಶಿಲ್ಪಿಯೊಬ್ಬ ಕಡಿದು, ಕೆತ್ತುವ ಹಾಗೆ, ಪರಿಸ್ಥಿತಿಗಳು ಮನುಷ್ಯನನ್ನು ರೂಪಿಸುತ್ತವೆ. ಅದೇ ರೀತಿ ರೂಪುಗೊಂಡವರು ಫಿಡೆಲ್ ಕ್ಯಾಸ್ಟ್ರೋ.
ಕ್ಯೂಬಾ ಅಮೆರಿಕ ದಕ್ಷಿಣದ ತುದಿಗೆ 89 ಮೈಲಿಗಳ ದೂರದಲ್ಲಿರುವ ಒಂದು ಪುಟ್ಟ ರಾಷ್ಟ್ರ (1 ಕೋಟಿ ಜನಸಂಖ್ಯೆವುಳ್ಳ ರಾಷ್ಟ್ರ). ಈ ರಾಷ್ಟ್ರ, ಜಗತ್ತಿನ ಸಾಮ್ರಾಜ್ಯಶಾಹಿ, ಬೃಹತ್ ಶಕ್ತಿಗಳ ಎದುರು ಎದೆ ಎತ್ತಿ ನಿಂತಿರುವುದರ ಹಿಂದಿನ ಬಂಡೆಗಲ್ಲು ಕ್ಯಾಸ್ಟ್ರೋ ಮತ್ತು ಚೆಗುವೆರಾ. ಈ ಕ್ರಾಂತಿಕಾರಿ ಜೋಡಿಯನ್ನು ಜಗತ್ತು ಮರೆಯಲು ಸಾಧ್ಯವೇ ಇಲ್ಲ.
ಕ್ಯಾಸ್ಟ್ರೋ– 1926ರ ಆಗಸ್ಟ್ 13ರಂದು ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿದವರು. ಶ್ರೀಮಂತರಿಗಾಗಿಯೇ ಇದ್ದ ಶಾಲೆಗಳಲ್ಲಿ ಓದಿ, ಕಾನೂನು ಅಭ್ಯಾಸ ಮಾಡಿದ್ದ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಪ್ರತಿಗಾಮಿ ನಾಯಕನಾಗುವ ಎಲ್ಲ ಅವಕಾಶಗಳಿದ್ದವು. ಆದರೆ, ಅವರು ಹಾಗೆ ಆಗಲಿಲ್ಲ. ಬದಲಾಗಿ, ಅವರು ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಾಂತಿಕಾರಿಯಾಗಿ ರೂಪುಗೊಂಡರು. ಕ್ಯೂಬಾವನ್ನು ಸಮಾಜವಾದಿ, ಕ್ರಾಂತಿ ದಿಕ್ಕಿಗೆ ಕೊಂಡೊಯ್ದರು. ಅವರು ಕ್ಯೂಬಾವನ್ನ ಜಗತ್ತಿನ ರಾಷ್ಟ್ರಗಳ ಸಾಲಿಗೆ ನಿಲ್ಲಿಸಿದ್ದು ಮಾತ್ರವಲ್ಲ, ಏನೆಲ್ಲ ಕಷ್ಟ-ಕಿರುಕುಳಗಳ ನಡುವೆ ಪರ್ಯಾಯ ಸಾಮಾಜಿಕ ಮಾದರಿ ಸಾಧ್ಯ ಇದೆ ಅನ್ನುವುದನ್ನ ನಿರೂಪಿಸಿ, ಜಗತ್ತಿಗೆ ತೋರಿಸಿದವರು.
ರಷ್ಯನ್ ಕ್ರಾಂತಿಯ ಆಳ, ಅಗಲ, ವಿಸ್ತಾರಗಳನ್ನು ಕ್ಯೂಬಾ ಕ್ರಾಂತಿ ಹೊಂದಿರದಿದ್ದರೂ, ಜಗತ್ತಿನ ಕ್ರಾಂತಿಕಾರಿ ಶಕ್ತಿಗಳಿಗೆ ಫಿಡೆಲ್ ಮತ್ತು ಕ್ಯೂಬಾ ಒಂದು ಅಂತರ್‌ಚೇತನ. ಉಜ್ವಲ ಭವಿಷ್ಯದ ಕನಸುಗಳೊಂದಿಗೆ, ಅನ್ಯಾಯಕ್ಕೆ ಸಮಾಧಿ ಕಟ್ಟಬೇಕೆಂಬ ಛಲದೊಂದಿಗೆ, ಬಡತನ, ಅಸಮಾನತೆ, ಶೋಷಣೆಯನ್ನು ಜಗತ್ತಿನಿಂದ ಕಿತ್ತೊಗೆಯಲು ‘ಕಮ್ಯುನಿಸಂ’ನಿಂದ ಮಾತ್ರ ಸಾಧ್ಯವೆಂದು ನಂಬಿರುವ ಅಸಂಖ್ಯಾತರಲ್ಲಿ ಫಿಡೆಲ್ ಒಬ್ಬರು.

ಅವರು ಎದುರಿಸಿದ್ದು, ಸಣ್ಣ ಶಕ್ತಿಯನ್ನಲ್ಲ. ಅವತ್ತಿಗೆ ಲ್ಯಾಟಿನ್ ಅಮೆರಿಕದ ಹಲವಾರು ದೇಶಗಳಲ್ಲಿ ಅಮೆರಿಕದ ಬೆಂಬಲ ಮತ್ತು ಪಿತೂರಿಗಳಿಂದ ಸ್ಥಾಪನೆಗೊಂಡಿದ್ದ ಸರ್ವಾಧಿಕಾರಿ ನಾಯಕರುಗಳಿದ್ದರು. ಕ್ಯೂಬಾದಲ್ಲಿ ಬಟಿಷ್ಠ ಎಂಬ ಅಮೆರಿಕದ ಬಾಲಬುಡುಕ ಸರ್ವಾಧಿಕಾರಿ ಇದ್ದ. ಡೊಮೆನಿಕನ್ ರಿಪಬ್ಲಿಕ್‌ನಲ್ಲಿ ಟ್ರುಜುಲೋ ಎಂಬಾತ ಇದ್ದ. ವೆನೆಜ್ಯುವೆಲಾದಲ್ಲಿ ಪೆರೆಸ್ ಇಮ್ಯಾನೆಜ್ ಇದ್ದ. ಈ ರೀತಿಯಲ್ಲಿ ಇಡೀ ದಕ್ಷಿಣ ಅಮೆರಿಕದ ಎಲ್ಲ ದೇಶಗಳಲ್ಲಿ ಕ್ರೂರ ಸರ್ವಾಧಿಕಾರಿಗಳು ವಸಾಹತುಶಾಹಿ ಮತ್ತು ಲೂಟಿಕೋರ ಬಂಡವಾಳಶಾಹಿಗಳಿಗೆ ಸೇವೆ ಸಲ್ಲಿಸುತ್ತಿದ್ದರು. ಇಂತಹ ಲೂಟಿ ಮತ್ತು ಸರ್ವಾಧಿಕಾರದ ವಿರುದ್ಧ, ಸಾಮ್ರಾಜ್ಯಶಾಹಿ ಕ್ರೌರ್ಯದ ವಿರುದ್ಧ 1959ರ ಜನವರಿಯಲ್ಲಿ ಕ್ಯೂಬಾ ಕ್ರಾಂತಿಯನ್ನು ಸಂಘಟಿಸಿ, ಯಶಸ್ವಿಗೊಳಿಸಿದವರ ಧೀಮಂತ ಯುವಕ ಫಿಡೆಲ್ ಕ್ಯಾಸ್ಟ್ರೋ. ಇದು ಪಶ್ಚಿಮ ಭೂಗೋಳದಲ್ಲಿ ನಡೆದ ಮೊದಲ ಸಮಾಜವಾದಿ ಕ್ರಾಂತಿ ಇದು.
ಫಿಡೆಲ್ ಕುಟುಂಬ ಅತ್ಯಂತ ಶ್ರೀಮಂತ ಕುಟುಂಬವಾಗಿದ್ದರೂ, ಅವರ ಸುತ್ತಲಿನ ವಾತಾವರಣ ಬಹಳ ಬಡತನದಿಂದ ತುಂಬಿತ್ತು. ಹವಾನಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವಾಗ ಫಿಡೆಲ್ ಅವರು ಸ್ಪಷ್ಟ ಹಾದಿಯನ್ನ ಕಂಡುಕೊಂಡರು. ಸರ್ವಾಧಿಕಾರಿ ಬಟಿಷ್ಠನ ವಿರುದ್ಧ ಸಂಘಟನೆಯನ್ನ ಆರಂಭಿಸಿದರು. ಕ್ಯೂಬಾದ ಪರಿಸ್ಥಿತಿಯನ್ನು ಅನುಸರಿಸಿ, ಗೆರಿಲ್ಲಾ ಮಾದರಿ ಪ್ರತಿರೋಧವನ್ನು ರೂಪಿಸಿದರು. ಮೊಂಕಾಡಾ ಬ್ಯಾರೆಕ್ ಎಂಬ ಮಿಲಿಟರಿ ಬ್ಯಾರೆಕ್ ಮೇಲೆ ಮೊದಲು ದಾಳಿ ನಡೆಸಿದರು. ಆದರೆ, ದಾಳಿ ವಿಫಲವಾಯಿತು. ಫಿಡೆಲ್‌ರನ್ನ ಸೆರೆಹಿಡಿದು, ಜೈಲಿಗೆ ಹಾಕಲಾಯಿತು.
ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಫಿಡೆಲ್ ತಮ್ಮ ಪರವಾಗಿ ತಾವೇ ವಾದಿಸಿದರು. ಲಿಖಿತ ಭಾಷಣವನ್ನು ತಮ್ಮ ವಾದವನ್ನಾಗಿ ಮಂಡಿಸಿದರು. ಆ ಭಾಷಣ ಕ್ಯೂಬಾದ ಭೂತ, ವರ್ತಮಾನ ಮತ್ತು ಭವಿಷ್ಯದ ಬಗೆಗಿನ ಮಾರ್ಗದರ್ಶಿಯಾಗಿ ಚರಿತ್ರೆಯಲ್ಲಿ ದಾಖಲಾಗಿದೆ. ಅದನ್ನು, ‘ಇತಿಹಾಸ ನನ್ನನ್ನು ದೋಷಮುಕ್ತಗೊಳಿಸುತ್ತದೆ’ ಎಂಬುದು ಅವರ ಶೀರ್ಷಿಕೆಯಾಗಿತ್ತು. ಅವರ ವಾದವು ಅವರನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿಯನ್ನ ನಿರ್ಮಾಣ ಮಾಡಿತು. ಬಿಡುಗಡೆಯಾಗಿ ಬಂದ ಫಿಡೆಲ್ ಅವರು ಮೆಕ್ಸಿಕೋಗೆ ಹೋಗುತ್ತಾರೆ. ಅಲ್ಲಿ, ಗೆರಿಲ್ಲಾ ತಂಡವನ್ನು ರಚನೆ ಮಾಡುತ್ತಾರೆ. ಅಲ್ಲಿಯೇ, ಕ್ರಾಂತಿಕಾರಿ ಸ್ಪೂರ್ತಿ ಚಿಲುಮೆ ಚೆಗುವೆರಾ ಕೂಡ ಫಿಡೆಲ್ ಜೊತೆಗೂಡುತ್ತಾರೆ.
ಫಿಡೆಲ್ ಮತ್ತು ಚೆ– ಈ ಇಬ್ಬರೂ ಕೇವಲ 12 ಮಂದಿ ಪ್ರಯಾಣಿಸಬಹುದಾದ ದೋಣಿಯಲ್ಲಿ 82 ಮಂದಿ ಗೆರಿಲ್ಲಾ ಸೈನಿಕರನ್ನ ತುಂಬಿಕೊಂಡು ಮೆಕ್ಸಿಕೋದಿಂದ ಸಮುದ್ರದಾಟಿ ಕ್ಯೂಬಾಗೆ ಬರುತ್ತಾರೆ. ಇದು ಧೈರ್ಯ ಮಾತ್ರವಲ್ಲ, ಕ್ರಾಂತಿ ಮಾಡಲೇಬೇಕು ಎಂಬ ಬದ್ಧತೆ ಮತ್ತು ತುಡಿತ.

ಕ್ಯೂಬಾದ ಸಿಯಾರಾ ಮೆಸ್ತ್ರಾ ಎಂಬ ಬೆಟ್ಟಗಳಲ್ಲಿ ಸರ್ವಾಧಿಕಾರಿ ಬಟಿಷ್ಠಾನ ಸೇನೆಯ ವಿರುದ್ಧ ಗೆರಿಲ್ಲಾ ಸೈನಿಕರು ಸಂಘರ್ಷ ನಡೆಸುತ್ತಾರೆ. ಅವರಲ್ಲಿ, ಕೇವಲ 12 ಮಂದಿ ಮಾತ್ರ ಉಳಿಯುತ್ತಾರೆ. ಆದಾಗ್ಯೂ, ಧೃತಿಗೆಡದ ಫಿಡೆಲ್, ಕ್ರಾಂತಿ ಗೆಲ್ಲುತ್ತೇವೆಂಬ ಅದಮ್ಯ ವಿಶ್ವಾಸ ಹೊಂದಿದ್ದರು. ಕ್ಯೂಬಾದ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ಭರವಸೆ ಆ ವಿಶ್ವಾಸದ ಹಿಂದಿತ್ತು. ಆ ಭರವಸೆಯನ್ನು ಕ್ಯೂಬಾ ಜನರು ಖಾತ್ರಿಗೊಳಿಸಿದರು. ಫಿಡೆಲ್ ಜೊತೆ ನಿಂತರು.
ಫಿಡೆಲ್ ಅಂದುಕೊಂಡಂತೆ ಜನರ ಬೆಂಬಲದೊಂದಿಗೆ ಫಲ್ಗೆನ್ಶಿಯೋ ಬಟಿಷ್ಠಾನನ್ನು ಬಗ್ಗು ಬಡಿದರು. 1959ರಲ್ಲಿ ಕ್ಯೂಬಾ ಸ್ವಾತಂತ್ರ್ಯಗೊಂಡಿತು. ಸಾಮ್ರಾಜ್ಯಶಾಹಿ ಅಮೆರಿಕಗೆ ತನ್ನ ನೆರೆಯ ಪುಟ್ಟ ರಾಷ್ಟ್ರ ಸಮಾಜವಾದಿ ಆಶಯದೊಂದಿಗೆ ಸ್ವಾತಂತ್ರ್ಯಗೊಂಡು ನಿಂತಿದ್ದನ್ನು ಸಹಿಸಲು ಅಂದಿಗೂ-ಇಂದಿಗೂ ಸಾಧ್ಯವಾಗಿಲ್ಲ. ಆದರೆ, ಅಮೆರಿಕ ಎಂಬ ರಕ್ಕಸನನ್ನು ಎದುರುಹಾಕಿಕೊಂಡ ಕ್ಯೂಬಾದ ಬದ್ದತೆ ಸಾಧಾರಣ ವಿಷಯವೂ ಅಲ್ಲ. ಫಿಡೆಲ್ ಅವರು ಕಟ್ಟಿದ ಸಮಾಜವಾದಿ ರಾಷ್ಟ್ರವನ್ನು ಬಗ್ಗುಬಡಿಯಬೇಕು ಎಂಬ ಹುನ್ನಾರದೊಂದಿಗೆ ಅಮೆರಿಕದ ನಡೆದ ತಂತ್ರ-ಕುತಂತ್ರಗಳಿಗೆ ಲೆಕ್ಕವೇ ಇಲ್ಲ. 1959ರಿಂದ ಈವರೆಗೆ ಅಮೆರಿಕಗೆ ಅಧ್ಯಕ್ಷರಾಗಿ ಆಡಳಿತ ನಡೆಸಿದ ಎಲ್ಲರೂ, ಕ್ಯೂಬಾದಲ್ಲಿನ ಸಮಾಜವಾದವನ್ನು ಮಣಿಸಬೇಕು, ಫಿಡೆಲ್‌ರನ್ನು ಕೊಲ್ಲಬೇಕು ಎಂದು ನಡೆಸಿದ ತಂತ್ರಗಳಿಗೆ ಅಂತ್ಯವೂ ಇಲ್ಲ.
ಅಮೆರಿಕದ ಅಧ್ಯಕ್ಷರಾದ ಐಸೆನ್ ಓ.ಆರ್., ಕೆನೆಡಿ, ಜಾನ್‌ಸನ್, ನಿಕ್ಸನ್, ಫೋರ್ಡ್, ಕಾರ್ಟರ್, ರೇಗನ್, ಸೀನಿಯರ್ ಬುಶ್, ಕ್ಲಿಂಟನ್, ಜೂನಿಯರ್ ಬುಶ್– ಹೀಗೆ ಅಮೆರಿಕದ 10 ಅಧ್ಯಕ್ಷರನ್ನ ತಮ್ಮ ಅಧಿಕಾರಾವಧಿಯಲ್ಲಿ ಫಿಡೆಲ್ ಎದುರಿಸಿದ್ದಾರೆ. ಈ ಅಧ್ಯಕ್ಷರುಗಳು ತಮ್ಮ ಅಧಿಕಾರಾವಧಿಯಲ್ಲಿ ಫಿಡೆಲ್‌ರನ್ನು ಸಿಎಎ ಮೂಲಕ ಕೊಲ್ಲಲು ಬರೋಬ್ಬರಿ 634 ಬಾರಿ ಪ್ರಯತ್ನ ನಡೆಸಿದ್ದಾರೆ. ಇದೊಂದು ಜಾಗತಿಕ ದಾಖಲೆ. ಆದರೆ, ಈ ಎಲ್ಲ ತಂತ್ರ, ಪ್ರಯತ್ನಗಳು ವಿಫಲ ಆದವು ಎಂಬುದು ಗಮನಾರ್ಹ.
ಕ್ರಾಂತಿಯಾದ ಎರಡೇ ವರ್ಷಗಳಲ್ಲಿ ಕ್ಯೂಬಾವನ್ನ ವಶಪಡಿಸಿಕೊಳ್ಳಬೇಕೆಂದು ಅಮೆರಿಕ ಸೇನೆ 1961ರಲ್ಲಿ ಬ ಆಫ್ ಫಿಕ್ಸ್ ಎಂಬ ಪ್ರದೇಶದಲ್ಲಿ ಯುದ್ಧ ನಡೆಸಿತು. ಆದರೆ, ಕ್ಯೂಬಾ ಪರವಾಗಿ ಸಮಾಜವಾದಿ ರಷ್ಯಾ ಕ್ಷಿಪಣಿಗಳನ್ನ ತಂದು ನಿಲ್ಲಿಸಿತು. ಆಗ, ಇನ್ನೇನು 3ನೇ ಮಹಾಯುದ್ಧ ಆರಂಭವೇ ಆಯಿತು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಇದನ್ನ ‘ಮಿಸೈಲ್ ಕ್ರೈಸಿಸ್’ (ಕ್ಷಿಪಣಿ ಬಿಕ್ಕಟ್ಟು) ಎಂದು ಕರೆಯಲಾಯಿತು. ಆದರೆ, ಅಮೆರಿಕ ಸೋತು, ಹಿಂದೆ ಸರಿಯಿತು. ಸಣ್ಣ ರಾಷ್ಟ್ರದ ವಿರುದ್ಧ ವಿಫಲವಾದ ಅಮೆರಿಕ ಅವಮಾನ ಅನುಭವಿಸಿತು. ಕ್ಯೂಬಾ ಮೇಲೆ ಹಲವಾರು ನಿರ್ಬಂಧಗಳನ್ನ ಹೇರಿತು. ಆದರೆ, ನಿರ್ಬಂಧ ಹೇರದಂತೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ವಿರುದ್ಧ ಭಾರೀ ಚರ್ಚೆಗಳು ನಡೆದವು. ಆದರೆ, ಅಮೆರಿಕದ ಕಿವಿಗೊಡಲಿಲ್ಲ.
1990ರ ದಶಕದಲ್ಲಿ ‘ಹೆಮ್ಸ್ ಬರ್ಟನ್ ಆಕ್ಟ್’ ಎಂಬ ಹೆಸರಿನಲ್ಲಿ ಅಮೆರಿಕ ಹಲವಾರು ಆರ್ಥಿಕ ನಿರ್ಬಂಧಗಳನ್ನು ಕ್ಯೂಬಾ ಮೇಲೆ ವಿಧಿಸಿದೆ. ಅವು ಈಗಲೂ ಜಾರಿಯಲ್ಲಿವೆ. 2004ರಲ್ಲಿ ತಿದ್ದುಪಡಿಗಳನ್ನು ತಂದು, ನಿರ್ಬಂಧಗಳನ್ನ ಮತ್ತಷ್ಟು ಹೆಚ್ಚಿಸಲಾಗಿದೆ. ಆದರೂ, ಕ್ಯೂಬಾ ಎದೆಗುಂದಿಲ್ಲ. ಫ್ಲೋರಿಡಾವನ್ನ ನೆಲೆ ಮಾಡಿಕೊಂಡು ಕ್ಯೂಬಾದಲ್ಲಿ ಭಯೋತ್ಪಾದಕ ಕೃತ್ಯಗಳನ್ನ ನಡೆಸಲು ಅಮೆರಿಕದ ಹಣ ಸರಬರಾಜು ಮಾಡುತ್ತಿದೆ. ಕಳೆದ 50 ವರ್ಷಗಳಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ನಡೆಸಿ, ಸುಮಾರು 3,500ಕ್ಕೂ ಹೆಚ್ಚು ಕ್ಯೂಬಾ ಜನರನ್ನ ಅಮೆರಿಕ ಕೊಂದಿದೆ. ಇಂತಹ ಎಲ್ಲ ಸಂದರ್ಭಗಳಲ್ಲಿ ಕ್ಯಾಸ್ಟ್ರೋ ಅಮೆರಿಕದ ಯಾವುದೇ ಪ್ರದೇಶಗಳ ಮೇಲೂ ಪ್ರತಿದಾಳಿ ನಡೆಸಿಲ್ಲ. ಪಿತೂರಿಗಳನ್ನು ಮಾಡಿಲ್ಲ. ಅಮೆರಿಕದ ಜನರ ಮೇಲೆ ದಾಳಿ ಮಾಡಿಲ್ಲ, ಕೊಂದಿಲ್ಲ. ಯಾರಿಗೂ ಹಿಂಸೆ ಕೊಡಬಾರದು, ದಾಳಿ ನಡೆಸಬಾರದು ಎಂಬುದನ್ನ ಕ್ಯೂಬಾ-ಕ್ಯಾಸ್ಟ್ರೋ ಅಳವಡಿಸಿಕೊಂಡಿದ್ದರು.
ಫಿಡೆಲ್ ತನ್ನ ತಾಯಿ ನೆಲವನ್ನ ರಕ್ಷಿಸಿಕೊಳ್ಳುವುದರ ಜೊತೆಗೆ, ಅಮೆರಿಕದ ಜನರನ್ನು ಪ್ರೀತಿಸುತ್ತಿದ್ದರು. ‘ನಮ್ಮದೇನಿದ್ದರೂ ಅಮೆರಿಕನ್ ಪ್ರಭುತ್ವದ ನೀತಿಗಳ ವಿರುದ್ಧದ ಹೋರಾಟವೇ ಹೊರತು, ಅಮೆರಿಕದ ಜನರ ವಿರುದ್ಧವಲ್ಲ’ ಎಂಬುದನ್ನು ಫಿಡೆಲ್ ಪದೇ-ಪದೇ ಹೇಳುತ್ತಿದ್ದರು.

ಕ್ಯಾಸ್ಟ್ರೋ ನಾಯಕತ್ವದಲ್ಲಿ ಕ್ಯೂಬಾ ಎಲ್ಲರೂ ಗೌರವದಿಂದ ಬದುಕುವ ಸಮಾಜವನ್ನ ನಿರ್ಮಾಣ ಮಾಡಲು ಪ್ರಯತ್ನಿಸಿದೆ. ಕ್ಯೂಬಾದಲ್ಲಿ ಅನಕ್ಷರತೆಯನ್ನು ತೊಡೆದುಹಾಕಲಾಗಿದೆ. ಜಗತ್ತಿನಲ್ಲಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ದೇಶ ಕ್ಯೂಬಾ. ಈಗಲೂ ಅಲ್ಲಿ ಉಚಿತವಾಗಿ ಸಾರ್ವತ್ರಿಕ ಶಿಕ್ಷಣ ದೊರೆಯುತ್ತಿದೆ. ಜಗತ್ತಿನ ಯಾವುದೇ ಮುಂದುವರೆದ ದೇಶಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಕ್ಯೂಬಾದ ಆರೋಗ್ಯ ವ್ಯವಸ್ಥೆ ಇದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶಗಳು ಕಾನೂನಾತ್ಮಕವಾಗಿವೆ.
ಮುಖ್ಯವಾಗಿ, ಕ್ಯೂಬಾದಲ್ಲಿ ಜನಾಂಗೀಯ ಸಮಾನತೆ ಇದೆ. ಕರಿಯರು ಮತ್ತು ಬಿಳಿಯರು ಯಾವುದೇ ಸಂಘರ್ಷಗಳಿಲ್ಲದೆ ಬದುಕುತ್ತಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಕ್ಯೂಬಾ ಮೊದಲನೆಯದು. ತನ್ನ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದರ ಜೊತೆಗೆ, ಮಾನವ ಅಭಿವೃದ್ಧಿ, ಸಾಮಾನ್ಯ ಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ, ಜೈವಿಕ ವಿಷಯದಲ್ಲಿ ಉನ್ನತ ಸಂಶೋಧನೆ, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕ್ಯೂಬಾ ಮುಂದಿದೆ. ಇದೆಲ್ಲದರ ಹಿಂದೆ ಕ್ರಾಂತಿಕಾರಿ ಫಿಡೆಲ್ ಅವರ ಅಪಾರವಾದ ಶ್ರಮ ಇದೆ.
ಫಿಡೆಲ್ ರಾಷ್ಟ್ರೀಯವಾದಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾದಿಯೂ ಅಗಿದ್ದರು. 1960ರ ದಶಕದಲ್ಲಿ ಮಧ್ಯ ಮತ್ತು ದಕ್ಷಿಣ ಅಮೆರಿಕದ ರಾಷ್ಟ್ರಗಳಾ ಎಲ್‌ಸಾಲ್ವ ಡಾಲೋ, ಗೊಟೆಮಾಲ, ನಿಕರಾಗುವಾ, ಕೊಲಂಬಿಯಾ, ವೆನುಜುವೆಲಾ, ಬೊಲಿವಿಯಾ, ಅರ್ಜಂಟೀನಾ ಸೇರಿದಂತೆ ಹಲವು ದೇಶಗಳಲ್ಲಿ ಸಶಸ್ತ್ರ ಬಂಡಾಯ ಹೋರಾಟಗಳಿಗೆ ಫಿಡೆಲ್ ಸಹಾಯ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಬಿಳಿಯರ ಸರ್ಕಾರದ ಮಧ್ಯಪ್ರವೇಶದ ವಿರುದ್ಧ ಅಂಗೋಲಾಗೆ ಕ್ಯೂಬಾ ಸೈನ್ಯವನ್ನು ಕ್ಯಾಸ್ಟ್ರೋ ಕಳಿಸಿದ್ದರು. ವರ್ಣಭೇದ ನೀತಿಯ ವಿರುದ್ಧದ ನೆಲ್ಸನ್ ಮಂಡೇಲಾರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಕ್ಯೂಬಾ ತನ್ನ ವೈದ್ಯರು ಮತ್ತು ಶಿಕ್ಷಕರನ್ನು ಜಗತ್ತಿನೆಲ್ಲೆಡೆ ಜನರಿಗೆ ಸೇವೆ ಸಲ್ಲಿಸಲು ಕಳಿಸಿರುವ ಮಾದರಿ, ಬೇರಾವುದೇ ರಾಷ್ಟ್ರಗಳಲ್ಲಿಲ್ಲ ಎಂಬುದು ಮಹತ್ವದ್ದು.
1980ರ ದಶಕದಲ್ಲಿ ಅಲಿಪ್ತ ಚಳವಳಿಯ ಮುಂಚೂಣಿಯಲ್ಲಿ ಫಿಡೆಲ್ ಇದ್ದರು. ಲ್ಯಾಟಿನ್ ಅಮೆರಿಕದ ರಾಷ್ಟ್ರಗಳ ವಿದೇಶ ಸಾಲಗಳ ರದ್ದತಿಗಾಗಿ ಫಿಡೆಲ್ ಕೆಲಸ ಮಾಡಿದರು. 1990ರ ದಶಕದಲ್ಲಿ ರಷ್ಯಾದ ಕುಸಿತದಿಂದ ಕ್ಯೂಬಾ ಸಂಕಷ್ಟಗಳಿಗೆ ಸಿಕ್ಕಿಕೊಂಡಿತು. ಅಂತಹ ಅವಧಿಯನ್ನು ವಿಶೇಷ ಅವಧಿ ಎಂದು ಕರೆದುಕೊಂಡ ಫಿಡೆಲ್, ಆ ಸಂದರ್ಭವನ್ನ ಸಮರ್ಥವಾಗಿ ನಿಭಾಯಿಸಿದರು. 1959ರಿಂದ 2008ರವರೆಗೆ ಐದು ದಶಕಗಳ ಕಾಲ ಕ್ಯೂಬಾವನ್ನು ಮುನ್ನಡೆಸಿದ ಕ್ಯಾಸ್ಟ್ರೋ 2016ರ ನವೆಂಬರ್ 25ರಂದು ಜಗತ್ತನ್ನು ಅಗಲಿದರು.

ಫಿಡೆಲ್ ಸತ್ತ ನಂತರ ಏನಾಗಬಹುದು ಎಂಬ ಲೆಕ್ಕಾಚಾರ ಸಾಮ್ರಾಜ್ಯವಾದಿ ಅಮೆರಿಕಗೆ ಪ್ರಿಯವಾದ ಸಂಗತಿಯಾಗಿತ್ತು. ಫಿಡೆಲ್ ನಂತರ ಕ್ಯೂಬಾ ಕುಸಿಯುತ್ತದೆ ಎಂದು ಅಮೆರಿಕ ಹಾಗೂ ಹಲವರು ಭಾವಿಸಿದ್ದರು. ಆದರೆ, ಫೆಡೆಲ್ ಸಾವಿನ ಬಳಿಕವೂ ಅಂತಹ ಯಾವುದೂ ಕ್ಯೂಬಾದಲ್ಲಿ ಸಂಭವಿಸಲಿಲ್ಲ. ಫಿಡೆಲ್ ನಾಯಕತ್ವದ ರೀತಿಯಲ್ಲಿಯೇ ಕ್ಯೂಬಾ ಮುಂದುವರೆದಿದೆ. ಬಂಡವಾಳಶಾಹಿ ಶೋಷಣೆಯ ವಿರುದ್ಧದ ಹಾದಿಯಲ್ಲಿ ಮುಂದೆನಡೆಯುತ್ತಿದೆ. ಜನರನ್ಜು ಪ್ರೀತಿಸುವ, ಮಾನವತೆಯನ್ನು ಅಪ್ಪಿಕೊಳ್ಳುವ ಸಮಾಜವಾದಿ ಸಿದ್ಧಾಂತಕ್ಕೆ ಬದ್ದರಾಗಿರುವ ಕ್ಯೂಬಾ ಜನರು ಫಿಡೆಲ್ ಹಾಕಿಕೊಟ್ಟಿರುವ ದಾರಿಯಲ್ಲಿ ನಡೆಯುತ್ತಿದ್ದಾರೆ. ಅದೇ ಕಾರಣಕ್ಕಾಗಿ, ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆದರೆ, ಅಮೆರಿಕ ಬಯಸಿದ ರೀತಿಯಲ್ಲಿ ಕ್ಯೂಬಾ ಕುಸಿಯಲಿಲ್ಲ. ಸಮಾಜವಾದವನ್ನು ಬಿಟ್ಟುಕೊಡಲಿಲ್ಲ. ಅಮೆರಿಕದ ಪ್ರತಿಗಾಮಿ ನಾಯಕರು ಕ್ಯೂಬಾ ವಿಚಾರದಲ್ಲಿ ಪದೇ-ಪದೇ ವಿಫಲರಾಗಿದ್ದಾರೆ.
ಕ್ಯೂಬಾ ಗಟ್ಟಿಯಾಗಿ ಸಮಾಜವಾದವನ್ನು ಮೈಗೂಡಿಸಿಕೊಳ್ಳುವಲ್ಲಿ ಫಿಡೆಲ್ ಕಟ್ಟಿಕೊಟ್ಟಿರುವ ಸೈದ್ಧಾಂತಿಕ ಬದ್ದತೆ ಅಂತಹದ್ದು. ಸಂಪತ್ತು ಜನರ ಸ್ವತ್ತು ಅನ್ನೋದನ್ನ ಫಿಡೆಲ್ ಅಳವಡಿಸಿಕೊಂಡಿದ್ದರು. ತಮ್ಮ ಆಸ್ತಿಯನ್ನೂ ಸರ್ಕಾರಕ್ಕೆ ಬಿಟ್ಟುಕೊಟ್ಟರು. ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದ ಫಿಡೆಲ್, ಭವಿಷ್ಯದ ಕುರಿತು ಅಂದಾಜು, ಇತಿಹಾಸದ ಕುರಿತ ಆಸಕ್ತಿ ಮತ್ತು ದಣಿವರಿದ ದುಡಿತದ ವೇಗಕ್ಕೆ ಸಾಟಿಯೇ ಇಲ್ಲ. ಜಾಗತೀಕರಣದ ಅಪಾಯವನ್ನು ಎದುರಿಸಲು ಯುವಜನರನ್ನು ಸಜ್ಜುಗೊಳಿಸಲು ಹೆಚ್ಚು ಒತ್ತು ಕೊಟ್ಟಿದ್ದರು.
ವಿಶೇಷ ಅಂದ್ರೆ, ಫಿಡೆಲ್ ಆಗಲೀ, ಚೆಗುವೆರಾ ಆಗಲೀ ಅಥವಾ ಯಾವುದೇ ನಾಯಕರ ಅಧಿಕೃತ ಭಾವಚಿತ್ರ, ವಿಗ್ರಹ, ನಾಣ್ಯ, ರಸ್ತೆಗೆ ಹೆಸರು, ಸ್ಮಾರಕ ಅಥವಾ ಇನ್ನಾವುದನ್ನೂ ಕ್ಯೂಬಾದಲ್ಲಿ ಮಾಡಿಲ್ಲ. ಫಿಡೆಲ್ ದೈತ್ಯ ನಾಯಕನಾದರೂ, ವ್ಯಕ್ತಿಪೂಜೆಯನ್ನು ಬೆಳೆಸಲಿಲ್ಲ.
ಕನ್ನಡದ ಹೆಮ್ಮೆಯ ಕವಿ ಕುವೆಂಪು ಅವರು ಲೆನಿನ್ ಕುರಿತು, ‘ಲೆನಿನ್- ನಿನ್ನ ಹೆಸರದು ಸಿಡಿಲ್ ಸದ್ದು, ಧರೆಗಿವಿಗೆ’ ಎಂದು ಬರೆದಿದ್ದಾರೆ. ಒಂದು ವೇಳೆ, ಕುವೆಂಪು ಅವರು ಈಗೇನಾದ್ರು ಆ ಪದ್ಯವನ್ನು ಬರೆದಿದ್ದರೆ, ‘ಫಿಡಲ್- ನಿನ್ನ ಹೆಸರದು ಸಿಡಿಲ್ ಸದ್ದು, ಸಾಮ್ರಾಜ್ಯಕ್ಕೆ’ ಎಂದು ಬರೆಯುತ್ತಿದ್ದರು ಅನ್ನಿಸುತ್ತದೆ.
ಲೇಖಕ ಕೆ ಪ್ರಕಾಶ್ ಅವರು ಸಿಪಿಐಎಂ ಮುಖಂಡರು. ವಿದ್ಯಾರ್ಥಿಯಾಗಿದ್ದಾಗಲೇ ಎಸ್‌ಎಫ್‌ಐನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಹೋರಾಟದ ಹಾದಿಯಲ್ಲಿ ಬೆಳೆದುಬಂದವರು. ಇವರು 1997ರಲ್ಲಿ ಕ್ಯೂಬಾದಲ್ಲಿ ನಡೆದ ‘ವಿಶ್ವ ಯುವಜನ ಉತ್ಸವ’ದಲ್ಲಿ ಭಾಗಿಯಾಗಿದ್ದರು. ಕ್ಯೂಬಾದ ಹೋರಾಟ, ಸ್ಥಿತಿಗತಿ, ಅಭಿವೃದ್ಧಿ, ಅಲ್ಲಿನ ಜನರ ಸೈದ್ಧಾಂತಿಕ ಬದ್ಧತೆಯನ್ನು ಕಣ್ಣಾರೆ ಕಂಡುಬಂದಿರುವವರು.
https://shorturl.fm/icC6a
https://shorturl.fm/NStDC