ಸುಕ್ರಿ ಬೊಮ್ಮ ಗೌಡರು ಹಾಲಕ್ಕಿ ಜಾನಪದದ ಸಂಪತ್ತೇ ಆಗಿದ್ದರು. ಹಾಲಕ್ಕಿಗಳ ಮದುವೆ, ಮಕ್ಕಳು ಜನ್ಮದಿನದ ಸಂಭ್ರಮ, ಹಬ್ಬಗಳಲ್ಲಿ, ಇತರೆ ಸಂಭ್ರಮದ ಸಂದರ್ಭದಲ್ಲಿ ಹಾಡುತ್ತಿದ್ದ ಸುಕ್ರಿ ಬೊಮ್ಮಗೌಡರನ್ನು ಜಾನಪದ ತಜ್ಞ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿ.ಚಿ.ಬೋರಲಿಂಗಯ್ಯ ಮೊದಲಿಗೆ ಗುರುತಿಸಿದರು.
ತಾಯ್ತನಕ್ಕೆ ಮತ್ತೊಂದು ಹೆಸರಿದ್ದರೆ ಅದು ಸುಕ್ರಜ್ಜಿ. ಬುದ್ಧನ ಪ್ರಶಾಂತತೆ, ಮಮತೆಯನ್ನು ಮಡಿಲಲ್ಲಿಟ್ಟುಕೊಂಡೇ ಬದುಕಿದವರು ಸುಕ್ರಿ ಗೌಡರು. ಬದುಕಿನುದ್ದಕ್ಕೂ ಕಷ್ಟ ಕಾರ್ಪಣ್ಯಗಳಿಗೆ ತಮ್ಮನ್ನು ಒಗ್ಗಿಕೊಂಡೇ ಬದುಕಿದವರು.
ತಮ್ಮಲ್ಲಿದ್ದ ಅಪಾರ ನೆನಪಿನ ಶಕ್ತಿ ಮತ್ತು ಜಾನಪದ ಹಾಡುಗಳ ಬುತ್ತಿಯನ್ನೇ ತನ್ನ ಕಂಠಸಿರಿಯಲ್ಲಿಟ್ಟು ಕೊಂಡಿದ್ದ ಸುಕ್ರಿ ಬೊಮ್ಮ ಗೌಡ ಅವರು ಇನ್ನು ನೆನಪಷ್ಟೇ. ಅಂಕೋಲಾದ ಬಡಗೇರಿ ಗ್ರಾಮ ಸುಕ್ರಿ ಗೌಡರ ಜನ್ಮಸ್ಥಳವೂ ಹೌದು. ಕಾರ್ಯಕ್ಷೇತ್ರವೂ ಹೌದು. ಅತೀ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡರು. ಅವರಿಗೆ ಇದ್ದ ಒಬ್ಬನೇ ಸಾಕು ಮಗ ಸಹ ಹೆಚ್ಚು ಕಾಲ ಬದುಕಲಿಲ್ಲ. ಆತನಿಗೆ ಮದುವೆಯಾಗಿ, ಒಂದು ಮಗು ಜನಿಸಿದ ನಂತರ ಆತನೂ ತೀರಿ ಹೋದ.
ಬಡಗೇರಿ ಪುಟ್ಟ ಗ್ರಾಮದಲ್ಲಿ ಸಾರಾಯಿ ಕುಡಿತದ ಕಾರಣಕ್ಕೆ ತನ್ನ ಸಮುದಾಯದ ಜನ ಕುಡಿತಕ್ಕೆ ಬಲಿಯಾಗುತ್ತಿರುವುದನ್ನು ಕಣ್ಣಾರೆ ಕಂಡಿದ್ದ ಸುಕ್ರಿ ಗೌಡರು ಸಾರಾಯಿ ಮಾರಾಟದ ವಿರುದ್ಧ ಚಳವಳಿಗೆ ಧುಮುಕಿದರು. ಅದನ್ನು ಆಂದೋಲನದ ಮಟ್ಟಕ್ಕೆ ಏರಿಸಿದರು. ದೆಹಲಿತನಕ ಹೋಗಿ ಗ್ರಾಮಗಳಲ್ಲಿ ಸಾರಾಯಿ ಮಾರಾಟ ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ 90ರ ದಶಕದಲ್ಲಿ ಮನವಿ ನೀಡಿ ಬಂದರು. ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಸತ್ಯಾಗ್ರಹ ಮಾಡಿದರು. ಸರ್ಕಾರದ ಗಮನ ಸೆಳೆದರು. ಸಾರಾಯಿ ವಿರುದ್ಧದ ಆಂದೋಲನದಲ್ಲಿ ಸುಕ್ರಿ ಬೊಮ್ಮ ಗೌಡರು ಸೋತಿರಬಹುದು. ಆದರೆ ಅವರು ಮೂಡಿಸಿದ ಜಾಗೃತಿ ಮಾತ್ರ ಮರೆಯಲಾಗದ್ದು.
ಸುಕ್ರಿ ಬೊಮ್ಮ ಗೌಡರು ಹಾಲಕ್ಕಿ ಜಾನಪದದ ಸಂಪತ್ತೇ ಆಗಿದ್ದರು. ಹಾಲಕ್ಕಿಗಳ ಮದುವೆ, ಮಕ್ಕಳು ಜನ್ಮದಿನದ ಸಂಭ್ರಮ, ಹಬ್ಬಗಳಲ್ಲಿ, ಇತರೆ ಸಂಭ್ರಮದ ಸಂದರ್ಭದಲ್ಲಿ ಹಾಡುತ್ತಿದ್ದ ಸುಕ್ರಿ ಬೊಮ್ಮ ಗೌಡರನ್ನು ವಿಶ್ವ ವಿದ್ಯಾಲಯಗಳ ಜಾನಪದ ತಜ್ಞರು ಮೊದಲು ಗುರುತಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿ.ಚಿ.ಬೋರಲಿಂಗಯ್ಯ ಮೊದಲಿಗೆ ಗುರುತಿಸಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಜಾನಪದ ವಿಭಾಗ, ಮಂಡ್ಯ ಜಾನಪದ ಲೋಕ ಗುರುತಿಸಿತು. ಹಾಲಕ್ಕಿ ಜಾನಪದ ಸಾಹಿತ್ಯವನ್ನು ಹಾಡುಗಬ್ಬದಲ್ಲಿ ಉಳಿಸಿದ ಸುಕ್ರಿ ಗೌಡರು ನಾಡಿನ ತುಂಬಾ ಹೆಸರು ಮಾಡಿದರು.

ಬಡಗೇರಿ ಗ್ರಾಮ ಅಂದರೆ ಸುಕ್ರಿ ಗೌಡ
ಸಮುದಾಯಕ್ಕಾಗಿ, ಸಮಾಜಕ್ಕಾಗಿ ಬದುಕುವವರು ವಿರಳ. ಒಂದೂ ಗ್ರಾಮವನ್ನು ಒಬ್ಬರ ವ್ಯಕ್ತಿತ್ವದ ಕಾರಣಕ್ಕೆ, ಬದುಕಿನಲ್ಲಿ ಸಾಧಿಸಿದ ಸಾಧನೆ ಕಾರಣಕ್ಕೆ ವ್ಯಕ್ತಿಯ ಹೆಸರಿನಿಂದಲೇ ಗುರುತಿಸುವುದು ಅಪರೂಪ. ಹಾಗೆ ಸುಕ್ರಿ ಗೌಡರ ಬದುಕಿನ ನಡೆ ನುಡಿ ಕಾರಣಕ್ಕೆ ಬಡಗೇರಿ ಗ್ರಾಮ ಹೆಸರುವಾಸಿಯಾಗಿದೆ. ಅಪಾರ ನೆನಪಿನ ಶಕ್ತಿ ಹೊಂದಿದ್ದ ಸುಕ್ರಿ ಗೌಡರು ಒಮ್ಮೆ ನೋಡಿ ಮಾತಾಡಿಸಿದವರನ್ನು ಸದಾ ನೆನಪಲ್ಲಿಟ್ಟುಕೊಳ್ಳುತ್ತಿದ್ದರು. ಎಲ್ಲೇ ಸಿಕ್ಕರು ನೆನಪಿಸಿಕೊಂಡು ಮಾತಾಡುತ್ತಿದ್ದರು. ಅಂತಹ ತಾಯ್ತನ ಸುಕ್ರಿ ಗೌಡರಲ್ಲಿತ್ತು. 88 ವರ್ಷಗಳ ಸುದೀರ್ಘ ಬದುಕಿನಲ್ಲಿ ಅವರು ಜನರಿಗೆ ಪ್ರೀತಿಯನ್ನೇ ಹಂಚಿದರು. ಯಾವುದೇ ವೇದಿಕೆಯಲ್ಲಿ ಮಾತಾಡಿದರೂ ಸಾರಾಯಿ ಕುಡಿತ ಬೇಡ ಎಂದು ಕರೆ ನೀಡುತ್ತಿದ್ದರು. ಮನುಷ್ಯರು ಪ್ರೀತಿಯಿಂದ ಬದುಕಬೇಕು ಎಂದು ಹೇಳುತ್ತಿದ್ದರು.
ಪಾದಯಾತ್ರೆ
ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಹಕ್ಕಿಗಾಗಿ ನಡೆಯುತ್ತಿದ್ದ ಹೋರಾಟದಲ್ಲಿ ರವೀಂದ್ರ ನಾಯ್ಕ 2014ರಲ್ಲಿ ಪಾದಯಾತ್ರೆ ಸಂಘಟಿಸಿದ್ದರು. ಆ ಪಾದಯಾತ್ರೆ ಮುರುಡೇಶ್ವರದಲ್ಲಿ ಉದ್ಘಾಟಿಸಿದ್ದು ಸುಕ್ರಿ ಬೊಮ್ಮ ಗೌಡರು. ಅಷ್ಟೇ ಅಲ್ಲ, ಮುರುಡೇಶ್ವರದಿಂದ ಕಾರವಾರದ ತನಕ ನಡೆದ ಪಾದಯಾತ್ರೆಯಲ್ಲಿ ಸುಕ್ರಿ ಗೌಡರು ತಮ್ಮ 76ನೇ ವಯಸ್ಸಿನಲ್ಲಿ ಅತ್ಯಂತ ಉತ್ಸಾಹದಿಂದ ನಡೆದಿದ್ದರು. ಇಳಿವಯಸ್ಸಿನಲ್ಲೂ 120 ಕಿ.ಮಿ.ಕಾಲ್ನಡಿಗೆಯಲ್ಲಿ ಬಂದಿದ್ದ ಸುಕ್ರಿ ಗೌಡರು ಸ್ವಲ್ಪವೂ ದಣಿದಿರಲಿಲ್ಲ.
ಕಾಡಿನಿಂದ ಕಟ್ಟಿಗೆ ತಂದು ಜೀವನ
1988 ರಲ್ಲಿ ಕರ್ನಾಟಕ ಸರ್ಕಾರ ಕಣ್ಮರೆಯಾಗುತ್ತಿರುವ ಬುಡಕಟ್ಟು ಜಾನಪದ ಸಂರಕ್ಷಿಸಿದ್ದ ಕಾರಣಕ್ಕೆ ಸುಕ್ರಿ ಗೌಡರಿಗೆ ಮೊದಲ ಪ್ರಶಸ್ತಿ ಬಂದಿತ್ತು. ಆ ದಿನಗಳಲ್ಲಿ ಸುಕ್ರಿ ಗೌಡರು ,ತನ್ನ ಜನಾಂಗದ ಇತರೆ ಮಹಿಳೆಯರ ತರಹ ಕಾಡಿನಿಂದ ಕಟ್ಟಿಗೆ ತಂದು, ಮಾರಾಟ ಮಾಡಿ, ಜೀವನ ನಡೆಸುತ್ತಿದ್ದರು. ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ತರಕಾರಿ ಬೆಳೆಯುತ್ತಿದ್ದರು. ಭತ್ತ ಸಸಿ ನಾಟಿಗೂ ತೆರಳುತ್ತಿದ್ದರು. 1999ರಲ್ಲಿ ಜಾನಪದಶ್ರೀ ಪ್ರಶಸ್ತಿ ಬಂದಾಗಲೂ ಅವರು ಗದ್ದೆಗಳಲ್ಲಿ ಕೆಲಸ ಮಾಡುವುದು ನಿಲ್ಲಿಸಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದರು. ಹಂಪಿ ವಿ.ವಿ.ನಾಡೋಜ ಪ್ರಶಸ್ತಿ ನೀಡಿದಾಗಲೂ ಸುಕ್ರಜ್ಜಿ ದುಡಿದು ಬದುಕುವುದನ್ನು ಬಿಡಲಿಲ್ಲ.

ಪದ್ಮಶ್ರೀ ಬಂದಾಗ…
2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂತು. ಅದೇ ವರ್ಷ ಕಾರವಾರ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶ ಸುಕ್ರಿಬೊಮ್ಮ ಗೌಡರಿಗೆ ಒದಗಿಬಂತು. ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕಿನ ಅಧ್ಯಕ್ಷನಾಗಿದ್ದ ನಾನು, ಸುಕ್ರಜ್ಜಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸಿ, ಅಕ್ಷರದ ಮಹತ್ವದ ಬಗ್ಗೆ ಸಮಾಜಕ್ಕೆ ಒಂದು ಸಂದೇಶ ಕೊಡಿಸಲಾಗಿತ್ತು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸುಕ್ರಿ ಗೌಡರು ಕನ್ನಡ ಶಾಲೆಗಳನ್ನು ಉಳಿಸಬೇಕೆಂದು, ಶಾಲೆಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ನೇಮಿಸಬೇಕೆಂದು ಮಾತಾಡಿದ್ದರು.
ಸುಕ್ರಿ ಗೌಡರ ಕೊನೆಯ ಆಸೆ ಈಡೇರಲಿಲ್ಲ
ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸಮುದಾಯದವರು ಹೋರಾಟ ಮಾಡಿ ಮನವಿ ಮಾಡುತ್ತಾ ಬಂದಿದ್ದರು. ಈ ಹೋರಾಟದಲ್ಲಿ ಸುಕ್ರಜ್ಜಿ ಸಹ ಇದ್ದರು. ಕೆಲ ವೇದಿಕೆಗಳಲ್ಲಿ ಸುಕ್ರಿ ಬೊಮ್ಮ ಗೌಡರು ಮಾತಾಡುತ್ತಾ, ನಮ್ಮ ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಇದು ನನ್ನ ಕೊನೆಯ ಆಸೆ ಎಂದು ಹೇಳುತ್ತಿದ್ದರು. ಆದರೆ ಅವರ ಕೊನೆಯ ಆಸೆಯನ್ನು ಸರ್ಕಾರಗಳು ಈಡೇರಿಸಲಿಲ್ಲ. ಅವರ ಬೇಡಿಕೆ ಬೇಡಿಕೆಯಾಗಿಯೇ ಉಳಿಯಿತು.

ನಾಗರಾಜ್ ಹರಪನಹಳ್ಳಿ
ಪತ್ರಕರ್ತ. ಹುಟ್ಟೂರು ಚಾಮರಾಜನಗರ. ಬೆಳೆದದ್ದು ಹರಪನಹಳ್ಳಿಯಲ್ಲಿ. ಓದಿದ್ದು ಧಾರವಾಡದಲ್ಲಿ. ಬದುಕು ಹಾಗೂ ನೆಲೆ ಕಾರವಾರ.