ವಿಕಾಸದ ಹೆಸರಿನಲ್ಲಿ ಕಾರ್ಖಾನೆಗಳ ವಂಚನೆ; ಭೂಮಿ ಕೊಟ್ಟರೂ ಸ್ಥಳೀಯರ ಉದ್ಯೋಗಕ್ಕೆ ಕತ್ತರಿ

Date:

Advertisements

ಕೊಪ್ಪಳ ಜಿಲ್ಲೆಯ ಜನತೆಯ ಬದುಕು ಒಂದಲ್ಲ ಒಂದು ರೀತಿ ಸಂಕಷ್ಟದಲ್ಲೇ ಕಳೆಯುತ್ತಿದೆ. ಯುವಕರ ಬದುಕು ಹೋರಾಟದಲ್ಲೇ ಸವೆಯುತ್ತಿದೆ. ಇಲ್ಲಿನ ಜನ ಸುಮಾರು 20 ವರ್ಷಗಳಿಂದ ನಿರಂತರವಾಗಿ ಬಲ್ಡೋಟಾ ಸೇರಿದಂತೆ ಹೊಗೆ ಸೂಸುವ ಧೂಳಿನ ಘಾಟು ಎಬ್ಬಿಸಿ ಪರಿಸರಕ್ಕೆ ಮಾರಕವಾಗಿರುವ ಕಾರ್ಖಾನೆಗಳ ವಿರುದ್ಧ ಹೋರಾಡುತ್ತಲೇ ಅರ್ಧ ಆಯಸ್ಸು ಕಳೆದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಹೆಸರಿನಲ್ಲಿ ಸ್ಥಳೀಯ ಉದ್ಯೋಗಗಳನ್ನು ಕಿತ್ತು ಉತ್ತರದಿಂದ ಕಡಿಮೆ ಕೂಲಿಗೆ ಬರುವವರಿಗೆ ಕೊಡಲಾಗುತ್ತಿದೆ. ಉದ್ಯೋಗದಾಸೆಯಿಂದ ತಮ್ಮ ಕಡಿಮೆ ಬೆಲೆಗೆ ಜಮೀನು ಮಾರಿಕೊಂಡವರು ಕಂಗಾಲಾಗಿ ಪರಿತಪಿಸುವಂತಾಗಿದೆ.

ಕಾರ್ಖಾನೆಗಳ ಹೊಗೆ ಇಡೀ ಕೊಪ್ಪಳ ಜಿಲ್ಲೆಯನ್ನು ಆವರಿಸಿಕೊಂಡಿದೆ. ಜೈನ್ ಕಾಶಿ ಎಂದು ಕರೆಸಿಕೊಂಡಿರುವ ಜಿಲ್ಲೆಗೆ ಈಗ ಧೂಳಿನ ಖಜಾನೆ, ರೋಗದ ಖನಿಜ ಎಂದು ಕರೆಸಿಕೊಳ್ಳುವ ಪರಿಸ್ಥಿತಿ ‌ಒದಗಿ ಬಂದಿದೆ. ಜಿಲ್ಲೆಯಾಗಿ ಉಗಮವಾದಾಗಿನಿಂದಲೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದ ಜಿಲ್ಲೆ ಎನಿಸಿಕೊಂಡಿದೆ. ಸರ್ಕಾರಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸುತ್ತಿವೆ. ಯುವಕರಿಗೆ ಉದ್ಯೋಗದ ಆಮಿಷವೊಡ್ಡಿ ರೈತರ ಸಾವಿರಾರು ಎಕರೆ ಭೂಮಿಯನ್ನು ಕಡಿಮೆ ದರಕ್ಕೆ ಖರೀದಿಸುತ್ತಿವೆ. ಆದರೆ, ಅದರ ಲಾಭ ಸಿಕ್ಕಿದ್ದು ಯಾರಿಗೆ? ನಷ್ಟ ತಟ್ಟಿದ್ದು ಯಾರಿಗೆ ಎಂಬ ಪ್ರಶ್ನೆ ಪ್ರಗತಿಪರ ಹಾಗೂ ಸಾಮಾನ್ಯ ಜನರ ಪ್ರಶ್ನೆಯಾಗಿದೆ.

‘ಕೊಪ್ಪಳ ಇರಬೇಕು ಇಲ್ಲ ಕಾರ್ಖಾನೆಗಳು ಇರಬೇಕು ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ’, ‘ಕಾರ್ಖಾನೆಯ ವಿಷಾನಿಲ, ಧೂಳು ನಮ್ಮನ್ನು ಹಾಗೂ ನಮ್ಮ ಸಂತಾನವನ್ನು ಕೊಲ್ಲುತ್ತಿದೆ’, ‘ಕಾರ್ಖಾನೆಗಳಿಂದ ತೊಟ್ಟಿಲು ತೂಗುವ ಕೈಗಳಿಗಿಂತ ಮಸಣ ಸೇರುವವರು ಹೆಚ್ಚಾಗುತ್ತಿದ್ದಾರೆ’, ‘ಅಂದು ಕ್ವಿಟ್ ಇಂಡಿಯಾ; ಇಂದು ಕೊಪ್ಪಳದಿಂದ ಕ್ವಿಟ್ ಬಲ್ಡೋಟಾ’ ಹೀಗೆ ಮುಂತಾದ ಘೋಷವಾಕ್ಯಗಳಿಂದ ನಗರದ ಸುತ್ತಲಿನ ಗ್ರಾಮಸ್ಥರಲ್ಲಿ ಅರಿವು, ಜಾಗೃತಿ ಮೂಡಿಸುವ ಕೆಲಸವನ್ನ ನಿರಂತರವಾಗಿ ಪರಿಸರ ಹಿತರಕ್ಷಣಾ ವೇದಿಕೆ ಹಾಗೂ‌ ಕೊಪ್ಪಳ ಬಚಾವೋ ಆಂದೋಲನ ನಡೆಸುತ್ತಲೇ ಬಂದಿದೆ. ಆದರೆ ಇದಾವುದಕ್ಕೂ ಸರ್ಕಾರವಾಗಲೀ, ಬೇಡದ ಬೃಹತ್‌ ಕಾರ್ಖಾನೆಗಳಾಗಲೀ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

Advertisements
WhatsApp Image 2025 05 31 at 5.28.25 PM

ಕೆಲವು ತಿಂಗಳುಗಳ ಹಿಂದೆ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳ ಮುಂದಾಳತ್ವದಲ್ಲಿ ಸ್ವತಃ ಶ್ರೀಗಳೇ ಜಿಲ್ಲೆಯ ಗ್ರಾಮಸ್ಥರ ಜೊತೆ ಮಾತಾಡಿ ಅವರನ್ನು ಓಲೈಸಿ ಕಾರ್ಖಾನೆಗಳ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಜಾತಿ, ಧರ್ಮಗಳ ಬೇಧ ಮರೆತು ಆ ಪ್ರತಿಭಟನೆಯಲ್ಲಿ ಸೇರಿದ್ದರು. ಆಗ ಜಿಲ್ಲೆಯ ಸುತ್ತಲೂ ಆವರಿಸಿರುವ ಕಾರ್ಖಾನೆಗಳ ಆಡಳಿತ ಮಂಡಳಿಗೆ ಹಾಗೂ ಮಾಲೀಕರಿಗೆ ಭಯ ಆವರಿಸಿತ್ತು. ದುರಂತವೆಂದರೆ, ಆ ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕದ ಕಲ್ಲು, ಮರಳು ತಿಂದವರು, ಮಣ್ಣು ತಿಂದು ಗಡಿರೇಖೆಯನ್ನೇ ಅಳಿಸಿ ನುಂಗಿ ಜೈಲಿಗೆ ಹೋದ ಗಣಿಧಣಿಗಳು ಭಾಗಿಯಾಗಿದ್ದರು.

ಕಾರ್ಖಾನೆಗಳ ವಾಹನಗಳಿಂದ ತೂರಿ ಬರುವ ಧೂಳು, ಕಪ್ಪು ಹೊಗೆ ಸುಮಾರು 25 ರಿಂದ 30 ಹಳ್ಳಿಗಳಲ್ಲಿ ಆವರಿಸಿ ಅಲ್ಲಿಯ ಜನರ ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ ಬೀರಿದೆ. ಅಸ್ತಮಾ, ಕ್ಯಾನ್ಸರ್, ಬಂಜೆತನ, ನಂಪುಸಕತೆ, ಕ್ಷಯ.. ಹೀಗೆ ಹಲವು ರೋಗಗಳು ಹರಡಿ ವಯಸ್ಕ ಹಾಗೂ ಅಪ್ರಾಪ್ತ ವಯಸ್ಸಿನವರ ಸಾವು ಸಂಭವಿಸುತ್ತಿದೆ. ಅಲ್ಲದೆ ಧೂಳು, ಹೊಗೆಯಿಂದ ಸೂಸುವ ಕಪ್ಪು ಮಸಿಯಿಂದ ಕೃಷಿ ಬೆಳೆಗಳೂ ಕೂಡಾ ಹಾನಿಗೊಳಗಾಗುತ್ತಿವೆ. ಜಾನುವಾರುಗಳು ಮತ್ತದೇ ಮೇವು ಸೇವಿಸಿಸುತ್ತಿವೆ. ಇದರಿಂದ ಮೂಕ ಪ್ರಾಣಿಗಳೂ ಸಾವಿಗೀಡಾಗುತ್ತಿವೆ. ಇದರ ಕುರಿತು ದಶಕಗಳಿಗೂ ಹೆಚ್ಚಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಕ್ರಮ ತೆಗೆದುಕೊಳ್ಳದ ಆಡಳಿತ ವ್ಯವಸ್ಥೆ ಹಾಗೂ ಸರಕಾರದ ಬಗ್ಗೆ ಬೇಸರ ಹಾಗೂ ಆಕ್ರೋಶ ಕೇಳಿ ಬರುತ್ತಿದೆ.

WhatsApp Image 2025 05 31 at 5.29.25 PM

ಸ್ಥಳೀಯ ಯುವಕರಿಗಿಲ್ಲದ ಉದ್ಯೋಗ:

ಕೊಪ್ಪಳದ ಸುಮಾರು 367 ರೈತರು ಉದ್ಯೋಗ ಸಿಗುವ ಆಸೆಯಿಂದ ತೀರಾ ಕಡಿಮೆ ಬೆಲೆಗೆ ಅಂದರೆ ಎಕರೆಗೆ ಕೇವಲ 3 ರಿಂದ 4 ಲಕ್ಷಕ್ಕೆ ಕಾರ್ಖಾನೆಗಳಿಗೆ ಭೂಮಿ ಕೊಟ್ಟು ಕಂಗಾಲಾಗಿದ್ದಾರೆ. ಆದರೆ, ಹೋರಾಟಗಳಿಗೆ ಮಣಿದು ಎಚ್ಚೆತ್ತು ಆ ಪೈಕಿ ಕೇವಲ 64 ಮಂದಿಗೆ ಕಂಪನಿಯಲ್ಲಿ ಉದ್ಯೋಗ ಕೊಟ್ಟಿದ್ದಾರೆ ಎನ್ನುತ್ತಾರೆ ಭೂಮಿ ಕಳೆದುಕೊಂಡ ಉದ್ಯೋಗ ವಂಚಿತ ಕುಟುಂಬದವರು. ʼಜಿಲ್ಲೆಯ ಜನ ಗುಳೆ ಹೋಗುವುದನ್ನು ಕಾರ್ಖಾನೆಗಳು ತಡೆದಿವೆʼ ಎಂದು ಕಾರ್ಖಾನೆಗಳ ಆಡಳಿತ ಮಂಡಳಿ‌ ಹಾಗೂ ಮಾಲೀಕರು ಹೇಳಿಕೊಳ್ಳುತ್ತಾರೆ. ಆದರೆ, ಸ್ಥಳೀಯ ಯುವಕರಿಗೆ ಎಷ್ಟು ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಎಂಬುದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ಕಡಿಮೆ ಕೂಲಿಗೆ ಕೆಲಸ ಮಾಡುವ ಉತ್ತರ ಭಾರತದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಿಕೊಳ್ಳುತ್ತಾರೆ ಮತ್ತು ಅವರ ಆರೋಗ್ಯ ಜೀವನ ನಿರ್ವಹಣೆಗೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಹೊರ ರಾಜ್ಯದ ಕಾರ್ಮಿಕರನ್ನು ಕಡಿಮೆ ಕೂಲಿಗೆ ಕರೆತರುವುದರಿಂದ ಸ್ಥಳೀಯರು ಕೂಲಿ ಹರಸಿ ಉಡುಪಿ, ಮಂಗಳೂರು, ಬೆಂಗಳೂರು ಸೇರಿ ಬೇರೆಡೆಗೆ ಗಾರೆ ಕೆಲಸ, ಪೈಲ್‌ಲೈನ್ ಕೆಲಸ ಅರಸಿ ಗುಳೆ ಹೋಗುವುದು ಹೆಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ.

WhatsApp Image 2025 05 31 at 5.32.02 PM 1

ಗೋಡೆ ಬರಹ ಅಭಿಯಾನ:

ಕೊಪ್ಪಳ ಜಿಲ್ಲೆಯ ಜನರ ಆರೋಗ್ಯ ಹಾಗೂ ಪರಿಸರದ ಜೊತೆ ಚೆಲ್ಲಾಟ ಆಡುತ್ತಿರುವ, ದಬ್ಬಾಳಿಕೆ ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಿರುವ ಪರಿಸರ ಹಿತರಕ್ಷಣಾ ಸಮಿತಿ ಹಾಗೂ ಕೊಪ್ಪಳ ಬಚಾವೋ ಹೊಸದಾಗಿ ಆಂದೋಲನ ಅಭಿಯಾನ ಆರಂಭಿಸಿವೆ. ಕಂಪನಿಗಳಿಂದ ಬಾಧಿತ ಕುಟುಂಬಗಳಿಗೆ, ನಗರ ಪ್ರದೇಶ ಹಾಗೂ ಗ್ರಾಮಸ್ಥ ಜನರಲ್ಲಿ ಜಾಗೃತಿ ಮೂಡಿಸಲು ನಗರ ಮತ್ತು ಗ್ರಾಮಗಳಲ್ಲಿ ಗೋಡೆ ಬರಹ ಅಭಿಯಾನ ಆರಂಭಿಸಿದ್ದು, ಇದಕ್ಕೆ ಟೌನ್ ಪೊಲೀಸರಿಂದ ಕೆಲಸ ಮಾಡುವ ಪೇಂಟರ್‌ಗಳಿಗೆ ಮಾನಸಿಕವಾಗಿ ಬೆದರಿಸಿ ತಡೆದರೆಂಬ ಆರೋಪ ಕೇಳಿ ಬರುತ್ತಿದೆ. ಆಂದೋಲನದ ಭಾಗವಾಗಿರುವ ಸಂಚಾಲಕರನ್ನು ಅನಾವಶ್ಯಕವಾಗಿ ವಿಚಾರಣೆಗೆ ಕರೆಯುತ್ತಿದ್ದಾರೆ ಇದು ಅವರ ವ್ಯಾಪ್ತಿಗೆ ಬರುವಂತದ್ದಲ್ಲ. ನಗರಸಭೆಯವರ ಕರ್ತವ್ಯದಲ್ಲಿ ನಗರ ಠಾಣೆ ಸಿಬ್ಬಂದಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ಸಮಿತಿ ಆಕ್ರೋಶ ಹೊರಹಾಕಿದೆ.

WhatsApp Image 2025 05 31 at 4.24.28 PM

ಕೇಂದ್ರ ಪರಿಸರ ಸಚಿವಾಲಯದ ಅನಮತಿ

ಗವಿಮಠದ ಶ್ರೀಗಳ ಮುಂದಾಳತ್ವದ ಬೃಹತ್ ಪ್ರತಿಭಟನೆಯ ನಂತರ ಸರಕಾರ ಕಂಪನಿ ವಿಸ್ತರಣೆಗೆ ತಡೆಯಾಜ್ಞೆ ಹೊರಡಿಸಿತು. ಆದರೆ, ಮತ್ತೆ ಕೆಲವು ದಿನಗಳ ನಂತರ ಬಲ್ಡೋಟಾ ಕಂಪನಿ ತನ್ನ ಬಂಡವಾಳಶಾಹಿ ಶಕ್ತಿ ಬಳಸಿ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮತಿ ಪಡೆದುಕೊಂಡಿತು. ಅನುಮತಿ ಸಿಕ್ಕಿದೆ ಎಂದು ಎಲ್ಲೋ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಂಪನಿ ವಿಸ್ತರಣೆಗೆ ಅನುಮತಿ ದೊರೆತಿದೆ ಎಂದು ತಿಳಿಸಿತು. ಆದರೆ, ಇದರ ಬಗ್ಗೆ ಜನರ ಮನದಲ್ಲಿ ಭಯ ಹಾಗೂ ಆತಂಕ ಹುಟ್ಟಿಸಲು ಸುಪ್ರೀಂಕೋರ್ಟ್ ಅನುಮತಿ ದೊರೆತಿದೆ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಲ್ಲದೆ, ಸುಳ್ಳು ಹೇಳಿ ನ್ಯಾಯಾಲಯದ ಗೌರವಕ್ಕೆ ಕುಂದು ತಂದಿದ್ದಾರೆ ಎಂದು ಚಳವಳಿಗಾರರು ಆರೋಪಿಸುತ್ತಿದ್ದಾರೆ.

ಸಾರ್ವಜನಿಕರ ಗೋಳು ಕೇಳುವವರೇ ಇಲ್ಲ:

ಬಲ್ಡೋಟಾ ವಿಸ್ತರಣೆಯ ಹಾಗೂ ಕಾರ್ಖಾನೆಗಳ ವಿರುದ್ಧ ಎರಡು ದಶಕಗಳಿಂದ ಹೋರಾಟ ಮಾಡುತ್ತಿರುವ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಈದಿನ.ಕಾಮ್ನೊಂದಿಗೆ ಮಾತನಾಡಿ, “ನಾವು ಕಾರ್ಖಾನೆಗಳ ವಿರೋಧಿಗಳಲ್ಲ. ಆದರೆ ಕೊಪ್ಪಳ ಜಿಲ್ಲೆಯ ಪರಿಸರ ವಿನಾಶವಾಗುತ್ತಿದೆ; ಸುಮಾರು 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜನರು ಅನಾರೋಗ್ಯ ಪೀಡಿತರಾಗಿದ್ದಾರೆ. ಗ್ರಾಮಗಳ ಬೆನ್ನಿಗೆ ಆತುಕೊಂಡೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಅದರಿಂದ ಹೊರ ಸೂಸುವ ಹೊಗೆ, ಜನರ ಶ್ವಾಸಕೋಶದಲ್ಲಿ ಸೇರಿ ಅನೇಕ ರೋಗಗಳಿಗೆ ತುತ್ತಾಗಿದ್ದಾರೆ. ಇದರಿಂದ ಸಾವುಗಳಾಗಿರುವ ಉದಾಹರಣೆಗಳೂ ಇವೆ. ಬಲ್ಡೋಟಾ ವಿಸ್ತರಣೆಯಿಂದ ಈಗಾಗಲೇ ಕೊಪ್ಪಳ ನಗರದ ಗವಿ ಮಠದ ಭಾಗದಲ್ಲಿರುವ ಹಲವಾರು ಬಡಾವಣೆಗಳಿಗೆ ಕಾರ್ಖಾನೆಯ ಧೂಳು ಆವರಿಸಿದೆ. ಇಷ್ಟಾದರೂ ಜಿಲ್ಲಾಡಳಿತ ಹಾಗೂ ಸರಕಾರ ಬೇಜವಾಬ್ದಾರಿತನ ಮೆರೆಯುತ್ತಿವೆ. ಈ ಘೋರಗಳನ್ನು ಕಂಡರೂ ಕಾಣದಂತೆ ವರ್ತಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

WhatsApp Image 2025 05 31 at 5.39.37 PM
ಅಲ್ಲಮಪ್ರಭು ಬೆಟ್ಟದೂರು

ಜಿಲ್ಲಾ ಬಚವೋ ಆಂದೋಲನದ‌ ಸಂಚಾಲಕ ಕೆ.ಬಿ.ಗೋನಾಳ ಮಾತನಾಡಿ, “ಬಲ್ಡೋಟ ಸಮೂಹದ ಎಂ.ಎಸ್.ಪಿ.ಎಲ್. ಮತ್ತು ಆರ್‌ಎಸ್ ಐರನ್ ಕಂಪನಿ ಹೆಸರಿನಲ್ಲಿ ಧರಂಸಿಂಗ್ ಸರ್ಕಾರ 2006ರಲ್ಲಿ ಕೆ.ಐ.ಎ.ಡಿ.ಬಿ. ಮೂಲಕ ಬಸಾಪುರ, ಹಾಲವರ್ತಿ ಮತ್ತು ಕೊಪ್ಪಳ ಗ್ರಾಮದ 1034 ಎಕರೆ ರೈತರ ಫಲವತ್ತಾದ ಕೃಷಿ ಭೂಮಿ ನಗರಕ್ಕೆ ಹೊಂದಿಕೊಂಡಿದ್ದರೂ 3-4 ಲಕ್ಷ ಎಕರೆಗೆ ಅಗ್ಗದ ದರ ನೀಡಿ ಬಲವಂತವಾಗಿ ಭೂ ಸ್ವಾಧೀನ ಮಾಡಲಾಯಿತು. ಭೂಮಿ ಕೊಡಲು ಒಪ್ಪದ ರೈತರಿಗೆ ಗುತ್ತಿಗೆದಾರರನ್ನಾಗಿ ಮಾಡುವ ಆಮಿಷ ತೋರಿಸಿ ಅದಕ್ಕೂ ಒಪ್ಪದಿದ್ದಾಗ ಗೂಂಡಾಗಿರಿ ಮಾಡಿ ಭೂಮಿ ಕಿತ್ತುಕೊಂಡರು. ಇದರಿಂದ ಕುಟುಂಬಗಳು, ಬಂಧುತ್ವಗಳು ಒಡೆದು ಹೋದವು.

“ಬಸಾಪುರ ಸ.ನಂ. 143 ರ 44-35 ಎಕರೆ ಗ್ರಾಮದ ಸರ್ಕಾರಿ ತಲಾಬ (ಕೆರೆ)ನ್ನು ಕೇವಲ 33 ಲಕ್ಷಕ್ಕೆ ಕೆಐಎಡಿಬಿ ಮೂಲಕ ಎಂಎಸ್‌ಪಿಎಲ್. ಕಂಪನಿಗೆ ಸೇಲ್ ಮಾಡುತ್ತಾರೆ. ಈ ಕೆರೆ ಮಾರಾಟ ಪ್ರಶ್ನಿಸಿ ರಿ.ಪಿ. ನಂ. 5713/2009 ರಂತೆ ಬೆಂಗಳೂರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದಾಗ ಹೈಕೋರ್ಟ್ ಸಾರ್ವಜನಿಕರು ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಈ ನೀರು ಬಳಕೆಯಾಗುತ್ತದೆ. ಈ ಬಳಕೆಯನ್ನು ಕಂಪನಿ ತಡೆಯಕೂಡದು ಎಂದು 2022ರಲ್ಲಿ ಆದೇಶಮಾಡಿದೆ. ಈಗ ಕಂಪನಿ ಸಾರ್ವಜನಿಕರು ಕೆರೆಗೆ ಹೋಗಲು ಬಳಸುತ್ತಿದ್ದ ರಸ್ತೆ ಬಂದ್ ಮಾಡಿ ಕೋಟೆಯ ರೀತಿಯಲ್ಲಿ ಕೆರೆಗೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. 15 ಎಕರೆಯಷ್ಷು ಕೆರೆಯನ್ನು ಮುಚ್ಚಿ ಭಾರಿ ವಾಹನ ಓಡಾಡಲು ಕಂಪನಿ ರಸ್ತೆ ನಿರ್ಮಾಣ ಮಾಡಿಕೊಂಡಿದೆ.ನೀರು ಬಳಸದಂತೆ 40 ಅಡಿ ಕಂದಕ ತೆಗೆದು ತಿಳಿಗೊಳಿಸಿ ನಮ್ಮ ನೀರು ಬಳಸುವ ಹಕ್ಕು ಕಿತ್ತುಕೊಂಡಿದ್ದಾರೆ. 12 ಎಕರೆ ಸರ್ಕಾರಿ ಜಮೀನು ಕೂಡ ಎಸ್.ಸಿ. ಎಸ್.ಟಿ ಜನರ ಸಾಗೂವಳಿ ಭೂಮಿಯನ್ನೂ ಬಿಡದೆ ಕಸಿದುಕೊಂಡಿದ್ದಾರೆ” ಎಂದು ಬಲ್ಡೋಟಾ ಕಂಪನಿಯ ಬೃಹತ್ ಮೋಸದ ಜಾಲವನ್ನು ತೆರೆದರು” ಎಂದರು.

ಮುಂದಿನ ದಾರಿ ಏನು?

ʼಐಐಎಮ್‌ಎಸ್‌ನಿಂದ ಬಾಧಿತ ಗ್ರಾಮೀಣ ಜನರ ಆರೋಗ್ಯ ಸಮೀಕ್ಷೆಯಾಗಬೇಕು ಹಾಗೂ ಟಿಐಎಸ್‌ಸಿ ಯಿಂದ ಪರಿಸರ ಹಾನಿಯ ಅಧ್ಯಯನ ನಡೆಸಬೇಕುʼ ಎನ್ನುವ ಹಕ್ಕೊತ್ತಾಯ ಸಲ್ಲಿಸಲಾಗಿದೆ.

ಜಿಲ್ಲೆಯ ಜನ, ಸರ್ಕಾರ ಮತ್ತು ಕಾರ್ಖಾನೆ ಮೂವರೂ ಸಮಯ ತೆಗೆದುಕೊಂಡು ಚರ್ಚೆ ಮಾಡಬೇಕು. ಕೊಪ್ಪಳ ಜನತೆಯ ಸಮಸ್ಯೆ ಏನು? ಅವರ ವಿರೋಧಕ್ಕೆ ಕಾರಣ ಏನು? ಎನ್ನವ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪ್ರಾಮಾಣಿಕ ಚರ್ಚೆಯಾಗಬೇಕು.

ಬಿಎಸ್‌ಪಿಎಲ್ ಹಾಗೂ ಎಂಎಸ್‌ಪಿಎಲ್ ಸಂಸ್ಥೆ ಕೂಡ ತನ್ನ ಮುಂದಿನ ಭವಿಷ್ಯದ ಕಾರ್ಯಕ್ರಮಗಳೇನು ಎಂದು ಸ್ಪಷ್ಟಪಡಿಸಬೇಕು. ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುತ್ತದೆಯೇ? ಸ್ಥಳೀಯ ಜನರಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಅದರ ಚಿಕಿತ್ಸೆ ವೆಚ್ಚ ಪೂರ್ಣ ಭರಿಸುತ್ತದೆಯೆ? ಹಾಗೂ ಜೀವವಿಮೆ ಒದಗಿಸಬಹುದಾ? ಅಥವಾ ಆರೋಗ್ಯ ಸಮಸ್ಯೆ ಆಗದಿರುವಂತೆ ನೋಡಿಕೊಳ್ಳುತ್ತಾ? ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಸ್ಥಳೀಯರು ಒಕ್ಕೊರಲಿನಿಂದ ಕೇಳುತ್ತಿದ್ದಾರೆ.

IMG 20241219 WA0001
ಕೇಶವ ಕಟ್ಟಿಮನಿ
+ posts

ಕೃಷಿ, ಪುಸ್ತಕ ಓದುಗ,

ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೇಶವ ಕಟ್ಟಿಮನಿ
ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ, ಫೀಲ್ಡ್ ಕೋರ್ಡಿನೇಟರ್, ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X