‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ

Date:

Advertisements
'ಗಾಂಧೀಜಿಯ ಹಂತಕ' ಪುಸ್ತಕವು ವರ್ತಮಾನದಲ್ಲಿ ಭಾರತದ ಸಮಾಜ ಅನುಭವಿಸುತ್ತಿರುವ ಹಲವಾರು ಆತಂಕಕಾರಿ ತಲ್ಲಣಗಳಿಗೆ ಕಾರಣವಾಗಿರುವ ಕೆಲವು ಸಂಘಟನೆಗಳು, ವ್ಯಕ್ತಿಗಳು ಅವರ ಚಿಂತನೆಗಳು, ಪ್ರಚೋದನೆಗಳು ಮತ್ತು ಅವರು ಸೃಷ್ಟಿಸಿದ ಅನರ್ಥಕಾರಿ ಘಟನಾವಳಿಗಳನ್ನು ಒಳಗೊಂಡಿದೆ. ಅವುಗಳ ಕುರಿತಾದ ಒಂದು ಸ್ಪಷ್ಟ ಅರಿವು ದೇಶದ ಪ್ರತಿಯೊಬ್ಬ ಪ್ರಜೆಗೂ ಇರುವ ಅಗತ್ಯವಿದೆ.

ಜನವರಿ 19ರ ರಾತ್ರಿ 9ರ ಸುಮಾರಿಗೆ ಅಂದರೆ ಗಾಂಧೀಜಿ ಮೇಲೆ ಹಲ್ಲೆ ನಡೆಯುವ ಒಂದು ದಿನ ಮೊದಲು ಪಹ್ವಾನೊಂದಿಗೆ ಒಂದು ಗೋಪ್ಯ ಸಭೆಯನ್ನು ನಡೆಸಲಾಯಿತು. ಅದಕ್ಕೂ ಒಂದು ವಾರ ಮೊದಲಿನಿಂದ ಸಭೆಗಳು ನಡೆದಿದ್ದವಾದರೂ ಅವುಗಳಿಂದ ಪಹ್ವಾನನ್ನು ದೂರ ಇಡಲಾಗಿತ್ತು. ಆದಾಗ್ಯೂ, ಆತ ಈ ಸಂಚಿನ ಮುಖ್ಯ ಸದಸ್ಯನಾಗಿರಲಿಲ್ಲ. ಹಾಗಾಗಿ, ಆತನ ಮನಸ್ಸಿನಲ್ಲಿ ಈ ಕುರಿತು ಚಂಚಲ ಭಾವನೆ ಇತ್ತು. ಆತನ ಪಾತ್ರವು ಸಂಚಿನ ಯಶಸ್ಸಿನ ಕೇಂದ್ರ ಭಾಗವಾಗಿತ್ತು. ಆತನ ಸಹಕಾರ ಇದಕ್ಕೆ ಇರಲೇಬೇಕಿತ್ತು. ಇಲ್ಲದಿದ್ದರೆ ಏನು ಬೇಕಾದರೂ ಸಂಭವಿಸಬಹುದಾಗಿತ್ತು.

ಪಹ್ವಾ ಹಾಸಿಗೆಯಲ್ಲಿ ಮಲಗಿಕೊಂಡು ನಿದ್ರೆಗೆ ಜಾರಲು ಪ್ರಯತ್ನಿಸುತ್ತಿದ್ದ. ಆತ ತನ್ನ ಯೋಚನೆಗಳಲ್ಲಿಯೇ ಮುಳುಗಿದ್ದ. ಬಹುಶಃ ಮದುವೆಯ ಬಗ್ಗೆ ಯೋಚಿಸುತ್ತಿದ್ದ. ”ಆಪ್ಟೆ ಕೊಠಡಿಗೆ ಬಂದು ಕರ್ಕರೆಯ ಕಿವಿಯಲ್ಲಿ ಏನನ್ನೋ ಹೇಳಿ ಚಳಿಯ ರಾತ್ರಿಯಲ್ಲಿ ಅವನನ್ನು ಕರೆದುಕೊಂಡ ಹೋದರು. ನಾನು ಮಹಾಸಭಾ ಭವನದ ಕೊಠಡಿಯಲ್ಲಿ ನಿದ್ರೆಗೆ ಜಾರುವುದಕ್ಕೆ ಮುನ್ನವೇ ಸುಮಾರು ಐದರಿಂದ ಹತ್ತು ನಿಮಿಷಗಳಲ್ಲಿ ಕೊಠಡಿಗೆ ಬಂದ ಕರ್ಕರೆ ನನ್ನ ಕಿವಿಯಲ್ಲಿ ‘ಗಾಂಧಿಯನ್ನು ಕೊಲ್ಲಬಲ್ಲೆಯಾ?’ ಎಂದು ಕೇಳಿದರು” ಎಂದು ಪಹ್ವಾ ತಿಳಿಸಿದ್ದಾನೆ. ‘ನನ್ನಿಂದ ಅಂತಹ ಕೆಲಸ ಮಾಡಲು ಆಗುವುದಿಲ್ಲ ಎಂದು ಗುಟ್ಟಾಗಿ ಹೇಳಿದೆ’1 ಎಂದು ನೆನಪಿಸಿಕೊಂಡಿದ್ದಾನೆ.

ಕರ್ಕರೆ ಪಹ್ವಾನ ಮಾತುಗಳನ್ನು ತನ್ನ ಅವಗಾಹನೆಗೆ ತಂದುಕೊಂಡು ಏನನ್ನೂ ಹೇಳದೇ ಅಲ್ಲಿಂದ ಹೊರನಡೆದ. ಪಹ್ವಾ ಗಾಬರಿಯಾದ. ಏಕೆಂದರೆ ಆತ ಇದನ್ನು ನಿರೀಕ್ಷಿಸಿರಲಿಲ್ಲ. ತಮ್ಮ ಗುಂಪಿನಲ್ಲೇ ಒಬ್ಬರು ಗಾಂಧಿಯನ್ನು ಕೊಲೆ ಮಾಡುತ್ತಾರೆ. ತನ್ನದು ಕರ್ಕರೆಗೆ ಸಹಾಯ ಮಾಡುವ ಕೆಲಸ ಎಂದು ಅಂದುಕೊಂಡಿದ್ದ. ಅಲ್ಲದೆ, ಇಲ್ಲಿಯವರೆಗೆ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುವವರನ್ನು ಹೆದರಿಸಿದರೆ ಸಾಕು ಎಂಬುದು ಆತನ ಧೋರಣೆಯಾಗಿತ್ತು. ಆತ ಅಹ್ಮದ್ ನಗರದಲ್ಲಿ ಹೀಗೆಯೇ ಮಾಡಿಕೊಂಡು ಬಂದಿದ್ದ. ಆದರೆ, ನಿಜವಾಗಿಯೂ ಗಾಂಧಿಯನ್ನು ಕೊಲ್ಲಲು ಮುಂದಾಗಿರುವ ಕ್ರಮ ಆತನನ್ನು ಭೀತಿಗೀಡು ಮಾಡಿತ್ತು. ಅಲ್ಲದೇ, ತಾನೇನಾದರೂ ಒಪ್ಪಿಕೊಂಡು ಗಾಂಧೀಜಿಯನ್ನು ಕೊಲೆ ಮಾಡಿದರೆ ತನ್ನ ಜೀವನ ಹಾಳಾಗಲಿದೆ. ತನಗೆ ಈ ಕೆಲಸ ಒಪ್ಪಿಸಿದವರು ಏನೂ ಆಗದೇ ಬಚಾವಾಗುತ್ತಾರೆ ಎಂದೂ ಯೋಚಿಸಿದ.

Advertisements

ಪಹ್ವಾಗೆ ಗಾಂಧೀಜಿ ಬಗ್ಗೆ ಮೊದಲಿನಿಂದಲೂ ಗೌರವ ಇರಲಿಲ್ಲ. ಇತರೆ ನಿರಾಶ್ರಿತರಂತೆ ಅವರ ಎಲ್ಲ ಯಾತನೆಗಳಿಗೆ ಗಾಂಧೀಜಿಯೇ ಕಾರಣ ಎಂದು ನಂಬಿದ್ದ. ಕೆಲ ದಿನಗಳ ಹಿಂದೆ ಕರ್ಕರೆ ಹೇಳಿದ್ದೆಲ್ಲವನ್ನೂ ಮಾಡಲು ಸಿದ್ಧನಾಗಿದ್ದ. ಅಲ್ಲದೇ, ಅದನ್ನು ಒಂದು ಆಯ್ಕೆ ಎಂದೂ ಅಂದುಕೊಂಡಿರಲಿಲ್ಲ. ಆದರೆ, ಸಮಯ ಕಳೆದಂತೆ ಆತನ ಆದ್ಯತೆಗಳು ಬದಲಾದವು. ಗಾಂಧಿಯನ್ನು ದ್ವೇಷಿಸುವುದೊಂದೇ ಆತನ ಜೀವನದ ಮುಖ್ಯ ಗುರಿಯಾಗಿರಲಿಲ್ಲ. ಸೇವಂತಿ ಆತನನ್ನು ಸಾಕಷ್ಟು ತಿದ್ದಿದ್ದರಿಂದ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಿಸಿಕೊಂಡಿತ್ತು. ಅಲ್ಲದೇ, ತನ್ನ ತಂದೆ ತೋರಿಸಿದ ಹುಡುಗಿಯನ್ನು ಮದುವೆಯಾಗಲು ಆತ ಮಾನಸಿಕವಾಗಿ ತಯಾರಾಗುತ್ತಿದ್ದ.

ಪಹ್ವಾ ತನ್ನ ಹೊದಿಕೆಯನ್ನು ಮುಖದ ಮೇಲೆ ಹೊದ್ದುಕೊಂಡು ನಿದ್ದೆ ಮಾಡುವ ವ್ಯರ್ಥ ಪ್ರಯತ್ನ ನಡೆಸಿದ. ಆಗ ಇನ್ನಷ್ಟು ಸ್ಪಷ್ಟವಾಗಿ ಚಿಂತನೆ ಮಾಡಲು ಶುರು ಮಾಡಿದ. ಸರಿಸುಮಾರು ಒಂದು ತಿಂಗಳಿಂದ ಆತ ಕರ್ಕರೆಯಿಂದ ಆದೇಶಗಳನ್ನು ಪಡೆಯಲು ಶುರು ಮಾಡಿದ್ದ. ಪಹ್ವಾ ಯಾವಾಗಲೂ ಕರ್ಕರೆಗೆ ವಿಧೇಯನಾಗಿಯೇ ಇದ್ದ. ಇದೇ ಮೊದಲ ಬಾರಿಗೆ ಆತ ಹೇಳಿದ ಕೆಲಸ ತನ್ನಿಂದ ಆಗುವುದಿಲ್ಲ ಎಂದು ಹೇಳಿದ್ದ. ಆದರೆ, ಆ ಸ್ಥಳದಲ್ಲಿ ಇರಲು ಆತನಿಗೆ ಕಷ್ಟವಾಯಿತಾದರೂ ಕರ್ಕರೆಯನ್ನು ಬಿಟ್ಟು ಹೋಗಲು ಸಿದ್ಧನಿರಲಿಲ್ಲ. ಏಕೆಂದರೆ ತನ್ನ ಎಲ್ಲ ಅವಶ್ಯಕತೆಗಳಿಗಾಗಿ ಆತ ಕರ್ಕರೆಯನ್ನೇ ಅವಲಂಬಿಸಿದ್ದ. ಆತನ ಕೊಠಡಿಗೆ ಬಡ್ಗೆ ಮತ್ತು ಶಂಕರ್ ಕೆಲ ಗಂಟೆಗಳ ಹಿಂದೆ ಬಂದು ನಿದ್ದೆ ಮಾಡುತ್ತಿದ್ದರು. ಪಹ್ವಾ ಮಲಗುವುದಕ್ಕೆ ಮುನ್ನವೇ ಕರ್ಕರೆ ಮತ್ತು ಗೋಪಾಲ್ ಬಂದು ಗಾಢ ನಿದ್ದೆಗೆ ಜಾರಿದ್ದರು. ಆದರೆ, ಅವರುಗಳು ಯಾವಾಗ ಬಂದರು ಎಂಬುದೂ ಪಹ್ವಾನಿಗೆ ಅರಿವಾಗಲಿಲ್ಲ.2

*

ಗಾಂಧೀಜಿಯವರನ್ನು ಕೊಲ್ಲುವ ಜವಾಬ್ದಾರಿಯನ್ನು ಪಹ್ವಾ ತಿರಸ್ಕರಿಸಿದ ಬಳಿಕ ಕಾರ್ಯಾಚರಣೆಯಲ್ಲಿ ಹಲವು ಎಡರು ತೊಡರುಗಳು ಎದುರಾದವು. ಈ ಕೊಲೆ ಯೋಜನೆಯ ಜವಾಬ್ದಾರಿಯನ್ನು ಯಾರು ಹೊರಬೇಕು ಎಂಬ ಬಗ್ಗೆ ಪುನರ್ ಪರಿಶೀಲಿಸುವ ಕೆಲಸ ಮತ್ತೊಮ್ಮೆ ನಡೆಯಿತು. ಗೋಡ್ಸೆ ಆಗಲೂ ಈ ಕೆಲಸ ಮಾಡಲು ಸಿದ್ಧನಿರಲಿಲ್ಲ. ಆಪ್ಟೆಗೆ ಆದ ಇನ್ನೊಂದು ಆಘಾತವೆಂದರೆ ಗಾಂಧಿ ಮೇಲೆ ಹಲ್ಲೆ ನಡೆಯುವ ದಿನವಾದ ಜನವರಿ 20ರಂದು ಗೋಡ್ಸೆಗೆ ತೀವ್ರ ಸ್ವರೂಪದ ಮೈಗ್ರೇನ್ (ತಲೆ ನೋವು) ಕಾಣಿಸಿಕೊಂಡಿತು.3 ಮೈಗ್ರೇನ್ ನಿಜವಾಗಿಯೂ ಬಂದಿತ್ತೋ ಅಥವಾ ತಾನು ಗಾಂಧಿ ಕೊಲೆ ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿ ಸುಳ್ಳು ಹೇಳಿದ್ದನೋ ಎಂಬುದನ್ನು ತಿಳಿದುಕೊಳ್ಳಲು ಯಾವುದೇ ಮಾರ್ಗ ಇರಲಿಲ್ಲ. ಆದರೆ, ಗಾಂಧಿ ಕೊಲೆ ಮಾಡುವ ಸಂಚು ಈಗ ಮುಗಿದು ಹೋದ ಅಧ್ಯಾಯ ಎಂದು ಅವನು ಊಹಿಸಿರಬಹುದು.

ಆದಾಗ್ಯೂ, ಆಪ್ಟೆ ಹತ್ಯೆ ಯತ್ನದ ಯೋಜನೆ ರೂಪಿಸುವುದನ್ನು ಮಾತ್ರ ಬಿಡಲಿಲ್ಲ. ಅನಿರೀಕ್ಷಿತ ಬೆಳವಣಿಗೆಗಳ ಮಧ್ಯೆಯೂ ಈ ಯೋಜನೆ ಕಾರ್ಯರೂಪಕ್ಕೆ ಬರಲೇಬೇಕು ಎಂಬ ಹಂಬಲದಿಂದ ಆತ ಮುಂದುವರೆದ. ಗೋಡ್ಸೆಯನ್ನು ಮರೀನಾ ಹೋಟೆಲ್‌ನ ಕೊಠಡಿಯಲ್ಲಿ ಬಿಟ್ಟ ಆಪ್ಟೆ ಅಲ್ಲಿಂದ ಹಿಂದೂ ಮಹಾಸಭಾ ಕಚೇರಿಗೆ ತೆರಳಿದ. ಅಲ್ಲಿದ್ದ ಬಡ್ಗೆ ಮತ್ತು ಶಂಕರ್‌ನನ್ನು ಕರೆದುಕೊಂಡು ಬಿರ್ಲಾ ಹೌಸ್‌ನತ್ತ ತೆರಳಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲು ಮುಂದಾದ. ಆಪ್ಟೆ ಗಾಂಧೀಜಿ ಪ್ರಾರ್ಥನೆ ಸಮಯದಲ್ಲಿ ಕುಳಿತುಕೊಳ್ಳುವ ಮಂಚವನ್ನು ತೋರಿಸಿ ಮಂಚದ ಹಿಂಭಾಗದಲ್ಲಿರುವ ಸೇವಕರ ವಸತಿಗೃಹದ ಕಡೆಯಿಂದ ಗುಂಡು ಹಾರಿಸಬೇಕಾದ ಸ್ಥಳವನ್ನು ತೋರಿಸಿದ್ದಾಗಿ ಬಡ್ಗೆ ನಂತರ ಪೊಲೀಸರ ಎದುರು ಹೇಳಿಕೆ ನೀಡಿದ್ದ.

ಅಲ್ಲಿ ಕಲ್ಲು ಹಾಗೂ ಇಟ್ಟಿಗೆಯಿಂದ ನಿರ್ಮಿಸಿದ್ದ ಕಿಟಕಿಯನ್ನು ತೋರಿಸಿದ ಆಪ್ಟೆ, ಕಿಟಕಿಯ ಹಿಂಬದಿಯಿಂದ ಪ್ರಾರ್ಥನಾ ಸಭೆಯತ್ತ ಹ್ಯಾಂಡ್ ಗ್ರೆನೇಡ್ ಎಸೆಯಬಹುದು ಎಂದು ತಿಳಿಸಿದ್ದ. ಅಲ್ಲದೇ ರಿವಾಲ್ವರ್‌ನಿಂದ ಗುಂಡು ಹಾರಿಸಬಹುದು ಎಂದೂ ವಿವರಿಸಿದ್ದ. ಗೋಡೆಯ ಸುತ್ತಲೂ ನಮ್ಮನ್ನು ಕರೆದೊಯ್ದು ಎರಡು ಸ್ಥಳಗಳನ್ನು ತೋರಿಸಿ ಅಲ್ಲಿ ಗನ್ ಕಾಟನ್ ತೂರಿದರೆ ಅದರಿಂದ ಬರುವ ಹೊಗೆಯಿಂದ ಜನರು ಗಾಬರಿಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗಾಂಧಿಯ ಹತ್ಯೆ ಮಾಡಬಹುದು ಎಂದು ಹೇಳಿದ್ದಾಗಿ ಬಡ್ಗೆ ತನಿಖಾಧಿಕಾರಿಗಳ ಎದುರು ಮಾಹಿತಿ ನೀಡಿದ್ದ.4

ಆಪ್ಟೆ ಅವರಿಗೆ ಕೊಠಡಿಯ ಮುಂಭಾಗವನ್ನು ತೋರಿಸಿದ. ಆ ಕೊಠಡಿಗೆ ಇಟ್ಟಿಗೆಯಿಂದ ನಿರ್ಮಿಸಿದ ಜಾಲರಿಯಂತಹ ಕಿಟಕಿ ಇತ್ತು. ಬಡ್ಗೆ ಹೇಳಿದ ಪ್ರಕಾರ, ‘ನಾವು ಫೋಟೊಗ್ರಾಫರ್ ವೇಷದಲ್ಲಿ ಆ ಕೊಠಡಿಯತ್ತ ತೆರಳಬೇಕು. ಗಾಂಧೀಜಿ ಅವರು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಫೋಟೊ ತೆಗೆಯುತ್ತಿರುವಂತೆ ನಟಿಸಬೇಕು. ಆ ಸಂದರ್ಭದಲ್ಲಿ ರಿವಾಲ್ವರ್‌ನಿಂದ ಗಾಂಧೀಜಿಯತ್ತ ಗುಂಡು ಹಾರಿಸಿ ನಂತರ ಗ್ರೆನೇಡ್ ಎಸೆಯಬೇಕು’5 ಎಂದು ಆಪ್ಟೆ ನಿರ್ದೇಶನ ನೀಡಿದ್ದನಂತೆ. ಅವರು ಮಧ್ಯಾಹ್ನದೊಳಗಾಗಿಯೇ ಹಿಂದು ಮಹಾಸಭಾ ಭವನಕ್ಕೆ ಬಂದರು. ಬಂದ ತಕ್ಷಣವೇ ಆಪ್ಟೆ ಗೋಪಾಲ್ ಗೋಡ್ಸೆ, ಶಂಕರ್ ಹಾಗೂ ನನ್ನನ್ನು ಉದ್ದೇಶಿಸಿ ಮಹಾಸಭಾ ಕಚೇರಿಯ ಹಿಂಬದಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ತಮಗೆ ನೀಡಲಾದ ರಿವಾಲ್ವರ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಾಲೀಮು ಮಾಡಲು ಕರೆದುಕೊಂಡು ಹೋದ. ಶಂಕರ್ ಸಣ್ಣ ರಿವಾಲ್ವರ್ ತೆಗೆದುಕೊಂಡರೆ, ಗೋಪಾಲ್ ಗೋಡ್ಸೆ ದೊಡ್ಡ ರಿವಾಲ್ವರ್ ತೆಗೆದುಕೊಂಡು ಆಪ್ಟೆ ಜೊತೆಗೆ ಹೋದರು ಎಂದು ಬಡ್ಗೆ ಹೇಳಿದ್ದಾನೆ.6

ಅರಣ್ಯ ಪ್ರದೇಶದ ಸುರಕ್ಷಿತ ಜಾಗಕ್ಕೆ ತೆರಳಿದ ಬಳಿಕ ರಿವಾಲ್ವರ್‌ನಿಂದ ಗುಂಡು ಹಾರಿಸುವ ಪ್ರಯೋಗವನ್ನು ಶುರು ಮಾಡಿದರು. ಗೋಪಾಲ್ ಗೋಡ್ಸೆ ಮೊದಲಿಗೆ ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿದ. ಆದರೆ, ಅದು ಸರಿಯಾಗಿ ಕೆಲಸ ಮಾಡಲಿಲ್ಲ. ಆ ರಿವಾಲ್ವರ್ ಚೇಂಬರ್‌ನಲ್ಲಿ ಸರಿಯಾಗಿ ತಿರುಗುತ್ತಿರಲಿಲ್ಲ ಎಂದು ಬಡ್ಗೆ ಹೇಳಿದ್ದ. ನಂತರ ಆಪ್ಟೆ ಶಂಕರ್ ಬಳಿ ಇದ್ದ ರಿವಾಲ್ವರ್ ಪರೀಕ್ಷಿಸಲು ಮುಂದಾದನು. ಎದುರಿಗೆ ಇರುವ ಮರದತ್ತ ಗುರಿ ಇಟ್ಟು ಗುಂಡು ಹಾರಿಸುವಂತೆ ಆಪ್ಟೆ ಶಂಕರ್‌ಗೆ ಹೇಳಿದ. ಅದರಂತೆ ಗುಂಡು ಹಾರಿಸಿದಾಗ ಅದು ಗುರಿ ತಲುಪುವ ಬದಲು ಕೆಲವೇ ಅಂತರದಲ್ಲಿ ಸಿಡಿದು ಬಿತ್ತು. ಆ ನಂತರ ಈ ಆಯುಧಗಳು ಪರಿಣಾಮಕಾರಿಯಾಗಿಲ್ಲ ಎಂಬ ತೀರ್ಮಾನಕ್ಕೆ ಬಂದ.7 ಆ ನಂತರ ದೊಡ್ಡ ರಿವಾಲ್ವರ್ ದುರಸ್ತಿ ಮಾಡಲು ಮುಂದಾದರು. ಅದರಂತೆ ಗೋಪಾಲ್ ಗೋಡ್ಸೆ ರಿವಾಲ್ವರ್ ಬಿಚ್ಚಿ ಅದಕ್ಕೆ ಎಣ್ಣೆ ಹಾಕಿ ಅದರ ಬಿಡಿಭಾಗಗಳನ್ನು ಸ್ವಚ್ಛಗೊಳಿಸಲಾರಂಭಿಸಿದ. ಅದೇ ಸಮಯದಲ್ಲಿ ಮೂವರು ಅರಣ್ಯ ರಕ್ಷಕ ಸಿಬ್ಬಂದಿ ಅಲ್ಲಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಮೂವರೂ ತಕ್ಷಣ ತಮ್ಮಲ್ಲಿದ್ದ ಆಯುಧಗಳನ್ನು ಮರೆಮಾಚಿದರು. ಅರಣ್ಯ ದಳದ ಸಿಬ್ಬಂದಿ ಅಲ್ಲಿಂದ ತೆರಳಿದ ಬಳಿಕ ಅರಣ್ಯದಲ್ಲಿ ಇನ್ನಷ್ಟು ಹೊತ್ತು ಇರುವುದು ಅಪಾಯಕಾರಿ ಎಂದರಿತು ಆಯುಧಗಳನ್ನು ಮರಿನಾ ಹೋಟೆಲ್‌ನ ತನ್ನ ಕೊಠಡಿಗೆ ಸಾಗಿಸುವಂತೆ ಆಪ್ಟೆ ಸೂಚಿಸಿದ. ಅಲ್ಲಿಂದ ಹೊರಡುವ ಮುನ್ನ ಕರ್ಕರೆಯನ್ನುದ್ದೇಶಿಸಿ ಪಹ್ವಾ ಜೊತೆಗೆ ಬಾಂಬೆಯಿಂದ ತಂದ ಸ್ಫೋಟಕಗಳೊಂದಿಗೆ ಹೋಟೆಲ್‌ಗೆ ತಲುಪುವಂತೆ ಆಪ್ಟೆ ನಿರ್ದೇಶನ ನೀಡಿದ.

ಮುಂದಿನ ಎರಡು ಗಂಟೆಗಳ ಕಾಲ ಮರಿನಾ ಹೋಟೆಲ್‌ನ ಗೋಡ್ಸೆ ಕೊಠಡಿಯಲ್ಲಿ ಉನ್ಮಾದಗೊಂಡಂತಹ ಬಿರುಸಿನ ಚಟುವಟಿಕೆಗಳು ನಡೆದವು. ಆಪ್ಟೆ ನೇತೃತ್ವದಲ್ಲಿ ಗಾಂಧಿ ಮೇಲಿನ ದಾಳಿಗೆ ಕೊಠಡಿಗೆ ಹೊಂದಿಕೊಂಡ ಬಚ್ಚಲು ಮನೆಯಲ್ಲಿ ಸಿದ್ಧತೆಗಳು ನಡೆದವು. ‘ನಾಥೂರಾಮ್ ಹಾಸಿಗೆಯಲ್ಲೇ ಮಲಗಿದ್ದ’ ಎಂದು ನಂತರ ಬಡ್ಗೆ ಸ್ಮರಿಸಿಕೊಂಡಿದ್ದ. ನಾಥೂರಾಮನ ಕೊಠಡಿಯ ಮುಚ್ಚಿದ ಬಾಗಿಲುಗಳ ಹಿಂದೆ ಗೋಪಾಲ್ ಗೋಡ್ಸೆ ರಿವಾಲ್ವರ್‌ಗಳನ್ನು ಮರು ಜೋಡಿಸಿದ. ನಾವು ಹ್ಯಾಂಡ್ ಗ್ರೆನೇಡ್ ಒಳಗೆ ಡೆಟೊನೇಟರ್ಸ್ ಮತ್ತು ಗನ್ ಕಾಟನ್ ಸ್ಲ್ಯಾಬ್‌ಗಳನ್ನು ಅಳವಡಿಸಿದೆವು.8 ಗುಂಪಿನ ಎಲ್ಲ ಸದಸ್ಯರಿಗೆ ಸಹಚರರನ್ನು ಒದಗಿಸಲಾಯಿತು. ಅದರಂತೆ ಬಡ್ಗೆಯ ಸಹಚರನಾಗಿ ನಿಯೋಜನೆಗೊಂಡ ಬಂಡೋಪಂತನಿಗೆ ಗಾಂಧಿಯತ್ತ ಗುಂಡು ಹಾರಿಸುವ ಕೆಲಸವನ್ನು ನಿಗದಿ ಮಾಡಲಾಯಿತು. ನಾನು (ಬಡ್ಗೆ) ಗಾಂಧೀಜಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವ ಸ್ಥಳದ ಹಿಂಭಾಗದ ಸೇವಕರ ಕೊಠಡಿಯಲ್ಲಿ ನಿಂತು ಫೋಟೊಗ್ರಾಫರ್‌ನಂತೆ ನಟಿಸುತ್ತಿರಬಹುದು. ನನ್ನೊಂದಿಗೆ ರಿವಾಲ್ವರ್ ಹಾಗೂ ಹ್ಯಾಂಡ್ ಗ್ರೆನೇಡ್ ಇರಬೇಕು ಎಂಬಂತೆ ಯೋಜನೆ ರೂಪಿಸಿದ್ದರ ಬಗ್ಗೆ ಹೇಳಿಕೆ ನೀಡಿದ್ದ.9

ಅವರ ಈ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಗತಗೊಳ್ಳುವ ಸಂದರ್ಭದಲ್ಲಿ ಪಹ್ವಾ ತಮ್ಮ ಜೊತೆಯಲ್ಲಿಯೇ ಇದ್ದು, ಇದರ ಭಾಗವಾಗಬೇಕು ಎಂದು ಆಪ್ಟೆ ತೀರ್ಮಾನಿಸಿದ್ದ. ಈ ಬಗ್ಗೆ ಅತಿ ಹೆಚ್ಚು ಮಾಹಿತಿ ಆತನಿಗೆ ಗೊತ್ತಿರುವುದರಿಂದ ಈ ಕಾರ್ಯಾಚರಣೆ ಸಂದರ್ಭದಲ್ಲಿ ಆತ ಹೊರಗಿರುವುದು ಹೆಚ್ಚು ಅಪಾಯಕಾರಿ ಎಂದು ಆತ ಭಾವಿಸಿದ್ದ. ಆತನನ್ನು ತಟಸ್ಥವಾಗಿರಿಸುವ ಏಕೈಕ ಉಪಾಯವೆಂದರೆ ಹೇಗಾದರೂ ಮಾಡಿ ಆತನನ್ನು ಈ ಸಂಚಿನಲ್ಲಿ ಭಾಗಿದಾರನನ್ನಾಗಿ ಮಾಡಬೇಕು ಎಂದು ಯೋಚಿಸಿದ್ದ. ಹೀಗಾಗಿ, ಪಹ್ವಾನಿಗೆ ಅತಿ ಕಡಿಮೆ ಅಪಾಯಕಾರಿಯಾದ ಕೆಲಸವನ್ನು ವಹಿಸಿದ. ಪ್ರಾರ್ಥನಾ ಮೈದಾನದ ಹೊರಗೆ ನಿಂತು ಯಾರಿಗೂ ತೊಂದರೆಯಾಗದಿರುವಂತೆ ಆದರೆ, ಭೀತಿಯನ್ನುಂಟು ಮಾಡಲು ಸಾಧ್ಯವಾಗುವ ಗನ್ ಕಾಟನ್ ಸಿಡಿಸುವ ಕೆಲಸವನ್ನು ವಹಿಸಲಾಯಿತು.10 ಇದಕ್ಕೆ ಕರ್ಕರೆ ಹಾಗೂ ಪಹ್ವಾ ತಮ್ಮ ಸಮ್ಮತಿ ಸೂಚಿಸಿದರು.

ಇದನ್ನು ಓದಿದ್ದೀರಾ?: ಕಿಶನ್ ಪಟ್ನಾಯಕ್ : ಭಗವದ್ಗೀತೆಯ ಸ್ಥಿತಪ್ರಜ್ಞನ ಪರಿಕಲ್ಪನೆಯಂತೆ ಬದುಕಿದ ಅಸಾಧಾರಣ ವ್ಯಕ್ತಿ

ಪಹ್ವಾ ಗನ್ ಕಾಟನ್ ಸಿಡಿಸಿದ ಬಳಿಕ ಬೇರೆ ಬೇರೆ ದಿಕ್ಕುಗಳಲ್ಲಿ ನಿಂತಿರುವ ಇತರರೂ ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದು ಹೊಗೆ ಎಬ್ಬಿಸಬೇಕು. ಇದರಿಂದ ಜನರು ದಿಕ್ಕಾಪಾಲಾಗಿ ಓಡಲು ಶುರು ಮಾಡುತ್ತಾರೆ. ಅದೇ ಸಂದರ್ಭದಲ್ಲಿ ಬಡ್ಗೆ ಗಾಂಧಿಯತ್ತ ಗುರಿ ಇಟ್ಟು ರಿವಾಲ್ವರ್ ಮೂಲಕ ಗುಂಡು ಹಾರಿಸಬಹುದು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ಕಾರ್ಯಾಚರಣೆಯನ್ನು ಯಾರಾದರೂ ಕೈಗೆತ್ತಿಕೊಂಡು ಮುನ್ನಡೆಸಲಿ ಆದರೆ, ಒಗ್ಗಟ್ಟು ಮುರಿಯಬಾರದು ಎಂದು ಗೋಡ್ಸೆ ಬಯಸಿದ್ದ. ಇಡೀ ದಿನ ಏನನ್ನೂ ಮಾಡದೇ ಆಲಸಿಯಾಗಿ, ಆಗಾಗ ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತ ಕುಳಿತಿದ್ದ. ತಂಡದ ಎಲ್ಲರೂ ಅಗತ್ಯವಾದ ಸಿದ್ಧತೆಗಳನ್ನು ಬಿರುಸಿನಿಂದ ಮಾಡಿಕೊಳ್ಳುತ್ತಿದ್ದರು. ಆದರೆ, ಗೋಡ್ಸೆ ಉತ್ಸಾಹ ಕಳೆದುಕೊಂಡಂತೆ ತೋರುತ್ತಿದ್ದ. ಇದರಿಂದ ಆಪ್ಟೆಗೆ ಕಿರಿಕಿರಿ ಉಂಟಾಗಿತ್ತು. ಅದಕ್ಕೆ ತಕ್ಕಂತೆ ಆಪ್ಟೆ ಗೋಡ್ಸೆಯನ್ನು ಛೇಡಿಸುವ ರೀತಿಯಲ್ಲಿ ಮಾತನಾಡಿದ. ಹೋಟೆಲ್ ಕೊಠಡಿಯಲ್ಲೇ ಗೋಡ್ಸೆ ಉಳಿದುಕೊಳ್ಳಲು ಬಯಸಿದಾಗ, ಆಪ್ಟೆ ಗೋಡ್ಸೆಯನ್ನುದ್ದೇಶಿಸಿ, ‘ಮೈಯಲ್ಲಿ ಹುಷಾರಿಲ್ಲ ಎಂದ ಮೇಲೆ ನಿನ್ನನ್ನೇ ನಂಬಿಕೊಂಡು ಕುಳಿತುಕೊಳ್ಳುತ್ತಿಲ್ಲ’ ಎಂದು ಹೇಳಿದ. ನಂತರ ಎಲ್ಲರೂ ಕೊಠಡಿಯಿಂದ ನಿರ್ಗಮಿಸಿದರು ಎಂದು ಗೋಡ್ಸೆ ನೆನಪಿಸಿಕೊಂಡಿದ್ದ.11

*

1948 ಜನವರಿ 20ರ ಸಂಜೆ 5ಕ್ಕೆ ಗಾಂಧಿ ಅವರನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ಪ್ರಾರ್ಥನೆ ನಡೆಯಲಿರುವ ಮೈದಾನಕ್ಕೆ ಕರೆತರಲಾಯಿತು. ಅವರು ನೋಡಲು ಅಸೌಖ್ಯದಿಂದ ಇರುವಂತೆ ಹಾಗೂ ಬಳಲಿದಂತೆ ಕಂಡು ಬಂದರು. ತಮ್ಮ ಉಪವಾಸ ಮುಗಿಸಿ ಎರಡು ದಿನ ಕಳೆದರೂ, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬರೀ ದ್ರವರೂಪದ ಆಹಾರವನ್ನಷ್ಟೇ ನೀಡಲು ನಿರ್ಧರಿಸಿದ್ದರು. ಹೀಗಾಗಿ, ಗಾಂಧೀಜಿ ಅವರಲ್ಲಿ ಶಕ್ತಿ ಬಂದಿರಲಿಲ್ಲ. ಆದಾಗ್ಯೂ, ಕೋಮು ಗಲಭೆಗಳು ನಡೆದಿದ್ದರಿಂದ ಅವುಗಳನ್ನು ತಣ್ಣಗಾಗಿಸಲು ಉಪವಾಸ ಸತ್ಯಾಗ್ರಹ ಮಾಡಿದ್ದರು. ಕೋಮು ಸಂಘರ್ಷ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಹೊಸ ಉತ್ಸಾಹದೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವಸಾಹತುಶಾಹಿ ವಿರೋಧಿ ಚಳವಳಿಯಲ್ಲಿ ಅಗ್ರ ನಾಯಕರಾಗಿ ಗುರುತಿಸಿಕೊಂಡಿದ್ದ ಗಾಂಧೀಜಿ ತಮ್ಮ ಯಶಸ್ವಿ ಉಪವಾಸ ಸತ್ಯಾಗ್ರಹದ ನಂತರ ಕೋಮು ಸೌಹಾರ್ದದ ಹೊಸ ಭರವಸೆಯ ನಾಯಕರಾಗಿ ರೂಪಾಂತರಗೊಂಡಿದ್ದರು. ಗಾಂಧೀಜಿ ತಮ್ಮ ಸಿದ್ಧಾಂತವನ್ನು ಧೈರ್ಯದಿಂದ ಪ್ರಸ್ತುತಪಡಿಸಿದ್ದಕ್ಕಾಗಿ ವಿಶ್ವದ ಪ್ರಮುಖ ಪತ್ರಿಕೆಗಳು ಅವರನ್ನು ಹಾಡಿ ಹೊಗಳಿದ್ದವು. ದೇಶ ಹಾಗೂ ವಿದೇಶದಲ್ಲಿ ಎಂದಿಗೂ ಪ್ರತಿಷ್ಠೆಯನ್ನು ಪ್ರದರ್ಶಿಸಲು ಹೋಗಿರಲಿಲ್ಲ. ಹಿಂದುತ್ವದ ಮತಾಂಧರು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ ದೇಶದ ಬಹು ಜನರ ದೃಷ್ಟಿಯಲ್ಲಿ ಗಾಂಧೀಜಿ ಒಬ್ಬ ವಿಸ್ಮಯಕರ ಶಕ್ತಿಯುಳ್ಳ ವ್ಯಕ್ತಿಯಾಗಿ ಗೋಚರಿಸಿದ್ದರು. ಉಪವಾಸದಿಂದಾಗಿ ಅವರ ಕೆಲ ಅಂಗಾಂಗಗಳಿಗೆ ಘಾಸಿಯಾಗಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಅವರ ಮೂತ್ರಪಿಂಡ ಹಾಗೂ ಯಕೃತ್ತಗಳಿಗೆ ಹಾನಿಯಾಗಿತ್ತು. ʼಒಂದು ಬಾರಿ ಯುದ್ಧನೌಕೆ ತೆರಳಿತು ಎಂದರೆ ಅದು ವಾಪಸ್ ಬರುವಾಗ ವಿಜಯ ಪತಾಕೆಯನ್ನು ಹಾರಿಸಿಕೊಂಡೇ ಬರುತ್ತದೆʼ ಎಂದು ಅವರ ನಿಕಟವರ್ತಿ ಪ್ಯಾರೆಲಾಲ್ ಬಣ್ಣಿಸಿದ್ದರು. ʼಆದರೆ ಈ ಬಾರಿ ದೇಹದ ಕೆಲ ಭಾಗ ಸಾಕಷ್ಟು ಹಾನಿಗೀಡಾಗಿತ್ತುʼ ಎಂದೂ ಒಪ್ಪಿಕೊಂಡಿದ್ದರು.12

ಅಷ್ಟಾಗಿಯೂ ಅವರ ಸರಳ ಜೀವನ ಹಾಗೂ ಸ್ವಯಂ ಶಿಸ್ತಿನಿಂದಾಗಿ ಅವರ ಶರೀರ ಸುಸ್ಥಿರವಾಗಿಯೇ ಇತ್ತು. ಅವರು ನಿದ್ದೆಯ ಮೇಲೆ ಸಾಧಿಸಿದ ನಿಯಂತ್ರಣ ಅಮೋಘವಾಗಿತ್ತು. ಪ್ಯಾರೆಲಾಲ್ ಅವರು ದಾಖಲಿಸಿದಂತೆ, ನಾನು ಯಾವತ್ತು ನಿದ್ದೆಯ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತೇನೆಯೋ ಅಂದಿಗೆ ನನ್ನ ಕಥೆ ಮುಗಿದಂತೆ ಎಂದು ಗಾಂಧೀಜಿ ಹೇಳುತ್ತಿದ್ದರು. ದೈಹಿಕವಾಗಿ ಕಳೆಗುಂದುವುದಕ್ಕಿಂತ ಮುಖ್ಯವಾಗಿ ಮನಸ್ಸಿನ ಊನತೆ ಉಂಟಾಗುವುದು ಅಪಾಯಕಾರಿ. ನಮ್ಮಲ್ಲಿನ ಉತ್ಸಾಹ ಕುಗ್ಗುವುದರಿಂದ ದೇಹದ ಅವನತಿ ಆರಂಭವಾಗುತ್ತದೆ. ಆ ನಂತರ ಅದು ನಮ್ಮ ದೇಹಕ್ಕೆ, ಕೊನೆಗೆ ಪರಿಸರವನ್ನೇ ಆಪೋಶನ ತೆಗೆದುಕೊಳ್ಳುತ್ತದೆ ಎನ್ನುತ್ತಿದ್ದರು.13

ಉಪವಾಸವನ್ನು ಕೊನೆಗೊಳಿಸುತ್ತಿದ್ದಂತೆಯೇ ತಮ್ಮ ಕೊನೆಯ ಆದರೆ ಮಹತ್ವದ ಅಭಿಯಾನವನ್ನು ನಡೆಸಲು ಗಾಂಧೀಜಿ ಯೋಜನೆ ರೂಪಿಸಿದ್ದರು. ಅದೇನೆಂದರೆ ಮುಸ್ಲಿಂ ನಿರಾಶ್ರಿತರನ್ನು ಭಾರತಕ್ಕೆ ಕರೆಸಿಕೊಳ್ಳುವ, ಹಿಂದು ನಿರಾಶ್ರಿತರನ್ನು ಹೊಸ ದೇಶಕ್ಕೆ ಕಳಿಸುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಪಾದಯಾತ್ರೆ ನಡೆಸುವುದು.14 ಈ ಅಭಿಯಾನದಿಂದ ಮಾತ್ರ ಜನರಲ್ಲಿ ಮೂಡಿದ್ದ ಗಾಯ ಮಾಯವಾಗುತ್ತದೆ. ಮತ್ತು ಎರಡೂ ದೇಶಗಳ ಸ್ವಾತಂತ್ರ‍್ಯ ಖಾತ್ರಿಯಾಗುತ್ತದೆ ಎಂದು ತಮ್ಮ ಜೀವನದ ಸಂಧ್ಯಾಕಾಲದಲ್ಲೂ ಬಲವಾಗಿ ನಂಬಿದ್ದರು.15 ಮತ್ತೊಂದು ಹೋರಾಟ ನಡೆಸಲೂ ಅವರು ಸಶಕ್ತರಾಗಿದ್ದರು ಎಂದು ಪ್ಯಾರೆಲಾಲ್ ಸ್ಮರಿಸಿದ್ದಾರೆ.16

ಉಪವಾಸ ಸತ್ಯಾಗ್ರಹದ ಬಳಿಕ ಗಾಂಧೀಜಿ ಅವರಿಗೆ ಇನ್ನಷ್ಟು ದೈಹಿಕ ಕ್ಷಮತೆಯನ್ನು ಪಡೆದುಕೊಳ್ಳಬೇಕು ಎನಿಸಿತು. ಇದು ನಿಜಕ್ಕೂ ಅತ್ಯಂತ ಮಹತ್ವದ ವಿಚಾರ ಎಂದೇ ಪರಿಗಣಿಸಬೇಕಾಗುತ್ತದೆ. ಅದಕ್ಕಾಗಿ ತಮ್ಮ ವಾರ್ಧಾ ಆಶ್ರಮದಲ್ಲಿ ಕೆಲ ಕಾಲ ವಾಸ್ತವ್ಯ ಮಾಡಿ ಇನ್ನಷ್ಟು ಕ್ಷಮತೆಯನ್ನು ಪಡೆದುಕೊಳ್ಳಲು ಮುಂದಾದರು. ಹೊಸ ಉತ್ಸಾಹ ಇಮ್ಮಡಿಸಿದ್ದರಿಂದ ತಾವು ಅಲ್ಲಿಯವರೆಗೂ ಪಾಲಿಸಿಕೊಂಡು ಬಂದಿದ್ದ ನಿಯಮವನ್ನು ಮುರಿಯಬೇಕಾಯಿತು. ಹಲವು ವರ್ಷಗಳಿಂದ ಸೋಮವಾರವನ್ನು ಅವರು ಮೌನವಾಗಿ, ವಿಶ್ರಾಂತಿಯಿಂದ ಇರುವುದನ್ನು ರೂಢಿಸಿಕೊಂಡಿದ್ದರು. ಆದರೆ, ಅಂದು ಸೋಮವಾರ, 19 ಜನವರಿ 1948ರಂದು ಎಂದಿನಂತೆ ಮೌನವಾಗಿರುವ ನಿಟ್ಟಿನಲ್ಲಿ ಹಲವು ಯೋಚನೆಗಳು ಬರಲಾರಂಭಿಸಿದವು. ಅಂದು ಬೆಳಗ್ಗೆ ಅವರ ಭೇಟಿಗಾಗಿ ಬಂದಿದ್ದ ಇಬ್ಬರು ವ್ಯಕ್ತಿಗಳು ಕರಾಚಿಯಲ್ಲಿ ಹಿಂದು ಮತ್ತು ಸಿಖ್ಖರಿಗೆ ಏನಾಗಿದೆ ಎಂಬುದರ ಬಗ್ಗೆ ಕರಾಳ ಕಥೆಗಳನ್ನು ಹೊತ್ತು ತಂದಿದ್ದರು. ‘ಪಾಕಿಸ್ತಾನಕ್ಕೆ ಹೋಗಲು ತಯಾರಾಗಿದ್ದೀರಲ್ಲ ನೋಡಿ ಅಲ್ಲಿ ಈ ಸ್ಥಿತಿ ಇದೆ’ ಎಂದು ಅಲ್ಲಿನ ದಾರುಣ ಸ್ಥಿತಿಯನ್ನು ಬಿಚ್ಚಿಟ್ಟರು. ಅದಕ್ಕೆ ಗಾಂಧೀಜಿ ‘ನೀವು ಏನು ಹೇಳಿದ್ದೀರೋ ಅದನ್ನು ಬರವಣಿಗೆಯಲ್ಲಿ ಕೊಡಿ. ಅದನ್ನು ಸರಿಪಡಿಸಲು ಅಗತ್ಯವಾದ ಕ್ರಮವನ್ನು ಕೈಗೊಳ್ಳುತ್ತೇನೆ’ ಎಂದರು.17

ಆದಾಗ್ಯೂ ಜಿನ್ನಾ ಅವರ ಅವಿಶ್ವಾಸಭರಿತ ನಡೆಗಳಿಂದಾಗಿ ಗಾಂಧೀಜಿಯವರ ಪಾಕಿಸ್ತಾನ ಭೇಟಿಯ ಅಭೂತಪೂರ್ವ ಯೋಜನೆಯು ಅನಿಶ್ಚಿತವಾಗಿ ತೋರಿತು. ಆದರೆ, ಗಾಂಧೀಜಿ ಇದಾವುದನ್ನೂ ಲೆಕ್ಕಿಸದೇ ಹೊಸ ಉತ್ಸಾಹದಲ್ಲಿ ಮುನ್ನಡೆಯಲು ಸಿದ್ಧತೆ ನಡೆಸಿದ್ದರು. ಅಲ್ಲಿಯವರೆಗೂ ಗಾಂಧೀಜಿ ಅವರು ಲಿಖಿತ ಭಾಷಣವನ್ನು ಓದುತ್ತಿದ್ದರು. ಆದರೆ, ಜನವರಿ 20ರಂದು ತಾವೇ ಸ್ವತಃ ಸಂದೇಶ ನೀಡಲು ಮುಂದಾದರು. ತಮ್ಮ ಕಟ್ಟಿಗೆಯ ಪೀಠದ ಮೇಲೆ ಆಸೀನರಾದ ಗಾಂಧೀಜಿ ಎಷ್ಟು ಜನ ಪ್ರೇಕ್ಷಕರು ಬಂದಿದ್ದಾರೆ ಎಂದು ಎದುರುನೋಡತೊಡಗಿದರು. ಎದುರಿನ ಹುಲ್ಲುಹಾಸಿನ ಮೇಲೆ ಸುಮಾರು 300 ಪ್ರೇಕ್ಷಕರು ಸೇರಿದ್ದರು. ಹಲವರು ಅವರ ಭಾಷಣಕ್ಕಿಂತ ಅವರ ದರ್ಶನ ಪಡೆಯಲೆಂದೇ ಬಂದಿದ್ದರು. ಇನ್ನು ಕೆಲವರು ದರ್ಶನವೂ ಬೇಡ, ಭಾಷಣವೂ ಬೇಡ ಎಂಬ ಮನೋಭಾವದಿಂದಲೂ ಬಂದವರಿದ್ದರು.

*

ಅಂತಹ ಜನರ ಪೈಕಿ ಕೊನೆಯದಾಗಿ ಪ್ರಾರ್ಥನಾ ಮೈದಾನಕ್ಕೆ ಬಂದವನೆಂದರೆ ಗೋಡ್ಸೆ. ಇಡೀ ದಿನ ಕೊಲೆಯ ಮುಂಚಿನ ಪೂರ್ವಸಿದ್ಧತೆಯಿಂದ ಈತ ಹೊರಗೇ ಉಳಿದಿದ್ದ. ಆತನ ಕೊಠಡಿಯ ಸ್ನಾನಗೃಹದಲ್ಲಿ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಲಾಗಿತ್ತು. ಹಾಸಿಗೆಯಲ್ಲೇ ಮಲಗಿದ್ದ ಆತ, ಮಾತುಕತೆಗಳಲ್ಲಿ ತೊಡಗಿಸಿಕೊಂಡದ್ದೂ ವಿರಳವಾಗಿತ್ತು. ಬಿರ್ಲಾ ಹೌಸ್‌ಗೆ ಹೊರಡುವಾಗ ಆಪ್ಟೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳದಂತೆ ಚುಚ್ಚುಮಾತು ನುಡಿದಿದ್ದ. ಆದರೂ ಅದಕ್ಕೆ ಗೋಡ್ಸೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆತನ ಕೊಠಡಿ ಖಾಲಿಯಾಗುತ್ತಿದ್ದಂತೆಯೇ ಆತನಲ್ಲಿ ತನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ಬಂದಿತು. ಕೆಲವೇ ಕ್ಷಣಗಳಲ್ಲಿ ಆತನ ತಲೆನೋವು ಮಾಯವಾಯಿತು, ನಂತರ ಅವರೊಂದಿಗೆ ಜೊತೆಯಾಗಲು ನಿರ್ಧರಿಸಿದ. ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತಿಗೆ ನನಗೆ ತಲೆನೋವಿನಿಂದ ಮುಕ್ತಿ ಸಿಕ್ಕಿತು. ನಂತರ ಒಂದು ಟಾಂಗಾ ಹಿಡಿದುಕೊಂಡು ಪ್ರಾರ್ಥನೆ ನಡೆಯುವ ಮೈದಾನಕ್ಕೆ ತೆರಳಿದೆ ಎಂದು ಗೋಡ್ಸೆ ಹೇಳಿಕೆ ನೀಡಿದ್ದ.18

ಮೈದಾನವನ್ನು ಪ್ರವೇಶಿಸಿದ ಕೂಡಲೇ ಜನರ ಮಧ್ಯೆ ಒಂದು ಸುತ್ತು ಓಡಾಡಿದ. ಆಪ್ಟೆಯನ್ನು ಹುಡುಕಾಡತೊಡಗಿದ. ಐದು ನಿಮಿಷಗಳ ನಂತರ ನಾನು ಆಪ್ಟೆಯನ್ನು ಭೇಟಿ ಮಾಡಿದೆ. ಹೊರಗಡೆ ಒಂದು ಟ್ಯಾಕ್ಸಿ ನಮಗಾಗಿ ಕಾಯುತ್ತಿದೆ ಎಂದು ಹೇಳಿದ. ಆಗ ನಾನು ಏನು ಮಾಡಬಹುದು ಎಂದು ಆಪ್ಟೆಗೆ ಕೇಳಿದೆ. ಆ ಬಗ್ಗೆ ನಿನಗೆ ಕೆಲ ಹೊತ್ತಿನಲ್ಲೇ ಗೊತ್ತಾಗಲಿದೆ ಎಂದನು.19 ನಂತರ ಆಪ್ಟೆ ಬಡ್ಗೆಯೊಂದಿಗೆ ಮಾತನಾಡಲು ಅವಸರವಾಗಿ ತೆರಳಿದ. ಬಡ್ಗೆ ಹುಲ್ಲುಹಾಸಿನ ಗೇಟಿನ ಬಳಿ ಶಂಕರ್‌ನೊಂದಿಗೆ ಆಪ್ಟೆಯ ಸೂಚನೆಗಾಗಿ ಕಾಯುತ್ತಿದ್ದ.

ಆದರೆ, ನಂತರ ಯೋಜನೆಯಂತೆ ಯಾವುದೂ ನಡೆಯಲಿಲ್ಲ. ಗಾಂಧಿ ಫೋಟೋ ತೆಗೆಯಲು ಸೇವಕರನ್ನು ಮನವೊಲಿಸಿ ಹಿಂದಿನ ಕೊಠಡಿಗೆ ಫೋಟೊಗ್ರಾಫರ್‌ನಂತೆ ತೆರಳಲು ಕರ್ಕರೆ ಹೇಳಿದ್ದರೂ ಬಡ್ಗೆ ಅಲ್ಲಿಗೆ ಹೋಗಲು ಹಿಂಜರಿದ. ‘ಕೊಠಡಿಗೆ ಹೋಗಬೇಕು ಎಂದು ಆಪ್ಟೆ ನನಗೆ ಹೇಳಿದ್ದ’ ಎಂದು ಬಡ್ಗೆ ನಂತರ ಮಾಹಿತಿ ನೀಡಿದ. ಆ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಿದ್ದರೆ ಸುಲಭವಾಗಿ ನಾನು ಯಾರು ಎಂಬುದನ್ನು ಅಲ್ಲಿದ್ದವರು ಗುರುತಿಸುತ್ತಿದ್ದರು. ನಂತರ ಬಂಧನಕ್ಕೊಳಗಾಗುತ್ತಿದ್ದೆ. ಹೀಗಾಗಿಯೇ ನಾನು ಹೋಗಲು ಸಿದ್ಧನಿರಲಿಲ್ಲ ಎಂದು ಹೇಳಿಕೆ ನೀಡಿದ್ದ.20 ಯಾವುದನ್ನು ಮಾಡಲೂ ಹೇಸದ ವ್ಯಕ್ತಿಯಾಗಿದ್ದನಾದರೂ ಮೂರ್ಖನಾಗಿರಲಿಲ್ಲ. ಪಕ್ಕಾ ವ್ಯಾಪಾರಿಯಾಗಿದ್ದ ಆತನಿಗೆ ತನ್ನ ವೈಯಕ್ತಿಕ ಹಿತವೇ ಮುಖ್ಯವಾಗಿತ್ತು. ತಾನು ಮತ್ತು ಶಂಕರ್ ಇಬ್ಬರೂ ಸಣ್ಣ ರಿವಾಲ್ವರ್ ಹಾಗೂ ಹ್ಯಾಂಡ್ ಗ್ರೆನೇಡ್ ಹಿಡಿದುಕೊಂಡು ಗಾಂಧೀಜಿಗೆ ಎದುರಾಗಿ ನಿಂತು ಕೂಡ ಈ ಕೆಲಸ ಮಾಡುತ್ತೇವೆ ಎಂದು ಆಪ್ಟೆಗೆ ಹೇಳಿದ.

Gandhi 1

ಗೋಡ್ಸೆ ಮತ್ತು ಆಪ್ಟೆ ಇಬ್ಬರೂ ಬಡ್ಗೆಯ ಮನವೊಲಿಸಲು ಮುಂದಾದರು. ತಪ್ಪಿಸಿಕೊಳ್ಳುವ ದಾರಿ ಮಾಡಿಕೊಡಲಾಗಿದೆ. ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಹೇಳಿದರೂ ಅದಕ್ಕೆ ಆತ ಒಪ್ಪಲಿಲ್ಲ. ಅವರು ಹೋದ ನಂತರ ಶಂಕರ್ ಬಳಿ ಇದ್ದ ಎರಡನೇ ರಿವಾಲ್ವರ್ ಪಡೆದುಕೊಂಡ. ಎರಡನ್ನೂ ಒಂದು ಟವೆಲ್‌ನಲ್ಲಿ ಸುತ್ತಿ ಟ್ಯಾಕ್ಸಿಯ ಹಿಂದಿನ ಸೀಟಿನಲ್ಲಿಟ್ಟ.21 ಟ್ಯಾಕ್ಸಿ ಚಾಲಕ ದೂರದಲ್ಲಿದ್ದುದರಿಂದ ಆತನ ಗಮನಕ್ಕೆ ಈ ಸಂಗತಿ ಬರಲಿಲ್ಲ. ತನ್ನೊಂದಿಗಿರುವ ಜನರ ಮೇಲೆ ವಿಶ್ವಾಸವಿಡಲಾಗದು ಎಂದು ಬಡ್ಗೆಗೆ ಅನಿಸಿತು. ಪ್ರಾರ್ಥನೆ ನಡೆಯುವ ಮೈದಾನದ ಬಳಿ ಈ ಹಂತದಲ್ಲಿ ರಿವಾಲ್ವರ್‌ಗಳನ್ನು ಕೊಂಡೊಯ್ಯುವುದು ಅಪಾಯಕಾರಿ. ಗಾಂಧಿ ಹತ್ಯೆ ಪ್ರಯತ್ನ ಬಹುತೇಕ ವಿಫಲ ಎಂದೆನಿಸಿತು. ಆದರೆ, ನಂತರ ನಡೆದ ಬೆಳವಣಿಗೆಯು ಗೋಡ್ಸೆ ಮತ್ತು ಆಪ್ಟೆ ಗಮನಕ್ಕೆ ಬರಲಿಲ್ಲ. ಕ್ರಮೇಣ ಬಡ್ಗೆ ಶಂಕರ್‌ನೊಂದಿಗೆ ಮೈದಾನದ ಒಳಗೆ ತೆರಳಿ ಗಾಂಧೀಜಿ ಪ್ರಾರ್ಥನೆ ಮಾಡುತ್ತಿದ್ದ ಮರದ ವೇದಿಕೆಯ ಹತ್ತಿರಕ್ಕೇ ಸಾಗಿದರು.

ಬಡ್ಗೆಯಂತೆ ಪಹ್ವಾ ಸಹ ಆಪ್ಟೆ ಮತ್ತು ಇತರರ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ. ಆತ ನಿರ್ವಹಿಸುವ ಕೆಲಸ ಕಡಿಮೆ ಅಪಾಯಕಾರಿ ಎಂದು ಹೇಳಿದ್ದನಾದರೂ ಇತರರೂ ಆ ಕೆಲಸ ಮಾಡುತ್ತಿದ್ದಾರೆಯೇ ಅಥವಾ ತನಗೊಬ್ಬನಿಗೇ ಈ ಕೆಲಸ ವಹಿಸಲಾಗಿದೆಯೋ ಎಂಬ ಬಗ್ಗೆ ಆತನಿಗೆ ಖಚಿತತೆ ಇರಲಿಲ್ಲ. ಹೀಗಾಗಿ, ಪಹ್ವಾ ಗನ್ ಕಾಟನ್ ಸ್ಫೋಟಕವನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸಿ ಆಪ್ಟೆ ಬಳಿ ಹೋಗಿ, ‘ನಾನೊಬ್ಬನೇ ಈ ಕೆಲಸ ಮಾಡುತ್ತಿದ್ದೇನಾ ಅಥವಾ ಉಳಿದವರೂ ಮಾಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿಯೇ ಬಿಟ್ಟ. ಆಪ್ಟೆ ತಂಡದ ಇತರ ಸದಸ್ಯರೂ ಆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಭರವಸೆ ನೀಡಿದ. ʼಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಹೀಗಾಗಿ, ನೀ ಗಾಬರಿಪಡುವ ಅಗತ್ಯವಿಲ್ಲ’ ಎಂದು ಸಮಾಧಾನಪಡಿಸಿದ. ಅದಾದ ಮೇಲೆ ‘ಬಿರ್ಲಾ ಹೌಸ್‌ನ ಸೇವಕರ ಕೊಠಡಿಯ ಬಲಗಡೆ ಗೋಡೆಯ ಪಕ್ಕದಿಂದ ಕಾಟನ್ ಸ್ಲ್ಯಾಬ್ ಸ್ಫೋಟಿಸುವಂತೆ ನನಗೆ ಸೂಚಿಸಿದ’ ಎಂದು ಪಹ್ವಾ ನಂತರ ವಿವರಿಸಿದ್ದ.

ಈ ಸ್ಫೋಟಕ ಸಿಡಿದ ಬಳಿಕ ಶಂಕರ್ ಮತ್ತೊಂದು ಗನ್ ಕಾಟನ್ ಸ್ಫೋಟಿಸುತ್ತಾನೆ. ಅದಾದ ನಂತರ ಬಡ್ಗೆ ಗಾಂಧೀಜಿಯ ಪ್ರಾರ್ಥನೆ ನಡೆಯುತ್ತಿದ್ದ ಮೈದಾನದ ಎಡಭಾಗದಲ್ಲಿ ಹ್ಯಾಂಡ್ ಗ್ರನೇಡ್ ಎಸೆಯುತ್ತಾನೆ. ನಾನು ಮೈದಾನದ ಹೊರಭಾಗದ ರಸ್ತೆಯ ಬದಿಯ ಗೋಡೆಯತ್ತ ಹ್ಯಾಂಡ್ ಗ್ರನೇಡ್ ಎಸೆಯಬೇಕಿದೆ. ಅದಾದ ನಂತರ ಶಂಕರ್ ಮತ್ತು ಬಡ್ಗೆ ಕ್ರಮವಾಗಿ ಗ್ರನೇಡ್‌ಗಳನ್ನು ಎಸೆಯಬೇಕು. ಇದಕ್ಕೆ ಪೂರಕವಾಗಿ ಆಪ್ಟೆ ಮತ್ತು ಗೋಪಾಲ ಗೋಡ್ಸೆ ಗಾಂಧೀಜಿಯ ಅಕ್ಕ ಪಕ್ಕದ ಜಾಗದಲ್ಲಿ ರಿವಾಲ್ವರ್‌ಗಳೊಂದಿಗೆ ಸಿದ್ಧವಾಗಿರುತ್ತಾರೆ. ಆಗ ಪ್ರೇಕ್ಷಕರು ಗಾಬರಿಯಿಂದ ಪರಾರಿಯಾಗಲು ಯತ್ನಿಸುವ ಸಂದರ್ಭದಲ್ಲಿ ತಾನು ಅಥವಾ ಬಡ್ಗೆ ಶೂಟ್ ಮಾಡುತ್ತೇವೆ ಎಂಬುದು ನಮ್ಮಗಳ ಯೋಜನೆಯಾಗಿತ್ತು ಎಂದು ಆಪ್ಟೆ ತಿಳಿಸಿದ್ದ.22

ಆಪ್ಟೆ ತನಗೆ ಏನು ಹೇಳಿದ ಎಂಬುದನ್ನು ಪರಿಶೀಲಿಸಲು ಪಹ್ವಾನಿಗೆ ಸಾಧ್ಯವಿರಲಿಲ್ಲ. ಬಡ್ಗೆ ಮತ್ತು ಶಂಕರ್ ತಮ್ಮಿಂದ ಸಾಕಷ್ಟು ದೂರ ಇದ್ದುದರಿಂದ ತನಗೆ ಆಪ್ಟೆ ಏನು ಹೇಳಿದ ಎಂಬುದನ್ನು ಕೇಳಿಸಿಕೊಳ್ಳಲು ಅವರಿಗೆ ಸಾಧ್ಯವಿರಲಿಲ್ಲ. ಕೆಲ ಸ್ಫೋಟಗಳಾದ ಬಳಿಕ ತಾನು ಮತ್ತು ಗೋಪಾಲ್ ಇಬ್ಬರೂ ರಿವಾಲ್ವರ್ ಹಿಡಿದು ನಿಂತಿದ್ದು, ಗಾಂಧೀಜಿಯನ್ನು ಹತ್ಯೆ ಮಾಡುತ್ತೇವೆ ಎಂದು ಕ್ಲೈಮ್ ಮಾಡಿದ್ದ. ಪಹ್ವಾ ನಂತರ ತಾನು ನಿಂತಿದ್ದ ಸ್ಥಾನಕ್ಕೆ ಹಿಂದಿರುಗಿದ. ತನ್ನಂತೆಯೇ ಇತರರೂ ಮಾಡುತ್ತಾರೆ ಎಂದು ನಂಬಿದ್ದ.

ಗನ್ ಕಾಟನ್ ಸ್ಫೋಟವಾಗುತ್ತಿದ್ದನ್ನು ಕೇಳಿಸಿಕೊಂಡ ಗಾಂಧೀಜಿ ಇದು ಮಿಲಿಟರಿ ತಾಲೀಮಿರಬಹುದು ಎಂದುಕೊಂಡರು. ಆ ಸಂದರ್ಭದಲ್ಲಿ ಪ್ಯಾರೆಲಾಲ್ ಸಹೋದರಿ ಸುಶೀಲಾ ನಾಯರ್ ಅವರು ಗಾಂಧೀಜಿ ಪ್ರಾರ್ಥನೆ ಸಂದರ್ಭದಲ್ಲಿ ಕ್ಷೀಣ ದನಿಯಲ್ಲಿ ಹೇಳುತ್ತಿದ್ದ ಮಾತುಗಳನ್ನು ಮತ್ತೊಮ್ಮೆ ಗಟ್ಟಿಯಾಗಿ ಪುನರಾವರ್ತಿಸುತ್ತಿದ್ದರು.23 ಆ ಸ್ಫೋಟವು ಬಹಳ ಜೋರಾಗಿ, ಕಟ್ಟಡ ಅಲುಗಾಡುವಂತೆ ಕೇಳಿಸಿತ್ತಾದರೂ ಯಾರೂ ಅಲ್ಲಿಂದ ಕದಲಲಿಲ್ಲ. ಆದರೆ, ಸದ್ದು ಎಲ್ಲಿಂದ ಬಂದಿರಬಹುದು ಎಂದು ತಲೆ ಎತ್ತಿ ನೋಡತೊಡಗಿದರು. ಇದನ್ನು ಗಮನಿಸಿದ ಗಾಂಧೀಜಿ, ‘ಏನೂ ಆಗದೇ ಇದ್ದುದಕ್ಕೇ ಇಷ್ಟೊಂದು ಗಾಬರಿಯಾದ ನೀವು ಒಂದು ವೇಳೆ ನಿಜವಾಗಿಯೂ ಆದರೆ ಏನು ಮಾಡುತ್ತಿದ್ದಿರಿ’ ಎಂದು ಪ್ರಶ್ನಿಸಿದರು.24 ಸಭೆ ಶಾಂತವಾಯಿತು. ಗಾಂಧೀಜಿ ಭಾಷಣ ಮುಂದುವರೆಯಿತು.

ಆದರೆ, ಪಹ್ವಾ ಸ್ಫೋಟಿಸಿದ ಬಳಿಕ ತನ್ನ ಸಹಚರರಿಂದ ಮತ್ತೊಂದು ಸ್ಫೋಟ ಅಥವಾ ಗುಂಡಿನ ಸದ್ದು ಕೇಳದೇ ಇದ್ದುದರಿಂದ ಪಹ್ವಾ ಆಘಾತಗೊಂಡ. ಬಡ್ಗೆ ಅಲ್ಲಿಂದ ಕಾಲ್ಕಿತ್ತಿದ್ದ. ಗೋಡ್ಸೆ ಮತ್ತು ಇತರ ಸಂಚುಕೋರರೂ ಕಾಣಿಸಲಿಲ್ಲ. ಸ್ಫೋಟ ಕೇಳಿದ ಬಳಿಕ ಹಲವು ಜನರು ಕಾಂಪೌಂಡ್ ಹೊರಗೆ ಬಂದು ಹುಡುಕಾಟ ನಡೆಸಿದರು. ನಾನು ನಮ್ಮ ಟ್ಯಾಕ್ಸಿ ನಿಲ್ಲಿಸಿದ್ದ ಜಾಗವನ್ನು ನೋಡಿದೆ. ಅದು ಅಲ್ಲಿಂದ ಹೊರಟು ಹೋಗಿತ್ತು. ನಾನು ಬಾಂಬ್ ಎಸೆಯುವ ಮುನ್ನ ಮತ್ತೊಂದು ಸ್ಫೋಟ ಕೇಳಿ ಬರುತ್ತದೆಯೇ ಎಂದು ಕಾದೆ. ಆದರೆ, ಬರಲಿಲ್ಲ. ಕೊಂಚ ಗದ್ದಲದ ಹೊರತಾಗಿ ಬೇರೇನೂ ಕೇಳಲಿಲ್ಲ. ಜನಗಳು ಮತ್ತೆ ಪ್ರಾರ್ಥನೆಯಲ್ಲಿ ತೊಡಗಿದರು ಎಂದು ಪಹ್ವಾ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದ. ಆತ ಸಿಕ್ಕಿ ಹಾಕಿಕೊಂಡಿದ್ದ. ಒಂದು ವೇಳೆ ಮತ್ತೊಂದು ಭಾಗದಲ್ಲಿ ಸ್ಫೋಟವಾಗಿದ್ದರೆ ಆತನೆಡೆಗೆ ಗಮನ ಕಡಿಮೆಯಾಗಿರುತ್ತಿತ್ತು. ಯಾವುದೇ ಸ್ಫೋಟ ಆಗಲಿಲ್ಲ. ಅಲ್ಲಿನ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದರು. ನಂತರ ಪೊಲೀಸರು ತಮ್ಮ ವಶಕ್ಕೆ ಪಡೆದರು. ಆಗ ತಾನು ಮೋಸ ಹೋದೆ ಎಂಬುದು ಪಹ್ವಾನಿಗೆ ಅರಿವಾಯಿತು.25

*

ಸ್ಫೋಟ ಸಂಭವಿಸಿದಾಗ ಗೋಡ್ಸೆ, ಆಪ್ಟೆ ಮತ್ತು ಗೋಪಾಲ ಕಾರಿನಲ್ಲಿದ್ದರು. ಗನ್ ಕಾಟನ್ ಸ್ಲ್ಯಾಬ್ ಸಿಡಿಸುವಂತೆ ಆಪ್ಟೆ ಪಹ್ವಾನಿಗೆ ಸೂಚನೆ ನೀಡುತ್ತಿದ್ದಂತೆಯೇ, ಅವರು ಅವಸರದಲ್ಲಿ ಟ್ಯಾಕ್ಸಿ ಏರಿ ಕುಳಿತಿದ್ದರು. ಗೋಡ್ಸೆ ಸ್ಫೋಟದ ಶಬ್ದ ಕೇಳಿ ಭಾವೋದ್ರೇಕಗೊಂಡ, ಗಾಬರಿಯಿಂದ ಜೋರಾಗಿ ಕಿರುಚಿಕೊಂಡು ಕಾರು ಚಾಲೂ ಮಾಡುವಂತೆ ಚಾಲಕನಿಗೆ ಸೂಚಿಸಿದ.26 ನಂತರ ಚಾಲಕ ಕಾರು ಚಾಲೂ ಮಾಡಿ ಗಿಯರ್ ಹಾಕಿದ. ʼನನಗೆ ಸ್ಫೋಟದ ಸದ್ದು ಕೇಳಿಸಿತು. ಆದರೆ, ಅದು ನಾನು ಕಾರು ಚಾಲೂ ಮಾಡುವ ಮೊದಲು ಕೇಳಿಸಿತೋ ಅಥವಾ ನಂತರ ಕೇಳಿಸಿತೋ ಎಂಬುದು ನೆನಪಾಗುತ್ತಿಲ್ಲ’ ಎಂದು ಕಾರಿನ ಚಾಲಕ ಸುರ್ಜಿತ್ ಸಿಂಗ್ ನಂತರ ಹೇಳಿಕೆ ನೀಡಿದ್ದ.27

ಗೋಡ್ಸೆ ಮತ್ತು ಆತನ ಸಹಚರರಿಗೆ ಗಾಂಧೀಜಿ ಹತ್ಯೆ ಆಯಿತೇ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಹಾಗೆ ಅಂದುಕೊಳ್ಳುವುದರಲ್ಲಿ ಅರ್ಥವೂ ಇರಲಿಲ್ಲ. ಆದರೂ ಅವರಿಗೆ ಕೊಂಚ ವಿಶ್ವಾಸವಿತ್ತು. ಬಡ್ಗೆ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದ. ಹಾಗಾಗಿ ಸ್ಫೋಟಕಗಳು ಸಿಡಿದಿದ್ದರಿಂದ ಕೆಲಸ ಆಗಿದೆ ಎಂದುಕೊಂಡರು.28 ಆದರೆ, ಗಾಂಧಿಯನ್ನು ಕೊಲ್ಲಲು ಬಡ್ಗೆ ಮತ್ತು ಶಂಕರ್ ಕೊಂಡೊಯ್ಯಬೇಕಿದ್ದ ರಿವಾಲ್ವರ್‌ಗಳು ಕಾರಿನ ಸೀಟಿನ ಹಿಂಬದಿಯಲ್ಲಿ ಪತ್ತೆಯಾದವು.29 ಬಳಿಕ ಸಂಚು ಯಶಸ್ವಿಯಾಗಿದ್ದರ ಬಗ್ಗೆ ಅವರಲ್ಲಿ ಸಂಶಯ ಶುರುವಾಯಿತು.

ಕನಾಟ್ ಸರ್ಕಲ್‌ನಲ್ಲಿ ಅವರು ಕಾರಿನಿಂದ ಇಳಿದ ಬಳಿಕ ಗೋಪಾಲ್ ರಿವಾಲ್ವರ್‌ಗಳನ್ನು ತನ್ನ ಬಳಿ ಇರಿಸಿಕೊಂಡ. ನಂತರ ಎಲ್ಲರೂ ಬಾಂಬೆಗೆ ಬೇರೆ ಬೇರೆಯಾಗಿ ಹೊರಡಬೇಕು ಎಂದು ತೀರ್ಮಾನಿಸಿದರು. ಅದರಂತೆ ಗೋಪಾಲ್ ಟಾಂಗಾ ಹಿಡಿದು ಹೊರಟ, ಆಪ್ಟೆ ಮತ್ತು ಗೋಡ್ಸೆ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಹಿಂದೂ ಮಹಾಸಭಾ ಕಚೇರಿಗೆ ತೆರಳಿದರು. ಅಲ್ಲಿ ಯೋಜನೆ ಏನಾದರೂ ಕಾರ್ಯಗತವಾಗಿದೆಯೇ ಎಂದು ತಿಳಿಯಲು ಉದ್ದೇಶಿಸಿದ್ದರು.

ಅದಾಗಲೇ ಹಿಂದು ಮಹಾಸಭಾ ಕಚೇರಿ ತಲುಪಿದ್ದ ಬಡ್ಗೆ ಬೇಸರದಲ್ಲಿದ್ದ. ಸ್ಫೋಟದ ಬಳಿಕ ಆತ ಶಂಕರ್‌ನೊಂದಿಗೆ ಬಿರ್ಲಾ ಹೌಸ್‌ನ ಹಿಂದಿನ ಗೇಟಿಗೆ ಬಂದಿದ್ದ. ತಮಗಾಗಿ ಟ್ಯಾಕ್ಸಿ ಕಾಯುತ್ತಿದೆ ಎಂದುಕೊಂಡಿದ್ದರು. ಅಲ್ಲಿಂದ ಅದು ಗಾಡಿ ಹೋಗಿದ್ದರಿಂದ ನಮ್ಮನ್ನೇ ಈ ಹತ್ಯಾಕಾಂಡದಲ್ಲಿ ಸಿಕ್ಕಿ ಹಾಕಿಸುವ ಯೋಜನೆ ಇರುವಂತೆನಿಸಿತು ಎಂದು ಆತ ಆಕ್ಷೇಪಿಸಿದ. ಟ್ಯಾಕ್ಸಿ ಕಾಣದ್ದರಿಂದ ತರಾತುರಿಯಲ್ಲಿ ಒಂದು ಟಾಂಗಾ ಗೊತ್ತು ಮಾಡಿಕೊಂಡು ಅವರು ಹಿಂದು ಮಹಾಸಭಾ ಕಚೇರಿಗೆ ಬಂದಿದ್ದರು, ನಂತರ ತಮ್ಮ ಬಳಿ ಇದ್ದ ಎರಡು ಹ್ಯಾಂಡ್ ಗ್ರನೇಡ್‌ಗಳನ್ನು ಸಮೀಪದ ಅರಣ್ಯದಲ್ಲಿ ಎಸೆಯಲಾಯಿತು ಎಂದು ಬಡ್ಗೆ ಹೇಳಿಕೆ ನೀಡಿದ್ದ.30

ಶಂಕರ್ ಅರಣ್ಯಕ್ಕೆ ಹೋದ ಬಳಿಕ ಬಡ್ಗೆ ಅವಸರದಲ್ಲಿ ತನ್ನ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಪ್ರಯಾಣ ನಡೆಸಲು ಸಿದ್ಧತೆ ನಡೆಸಿದ. ನಂತರ ಕಚೇರಿಗೆ ಬಂದ ಗೋಡ್ಸೆ ಮತ್ತು ಆಪ್ಟೆ ಏನೇನು ಘಟನೆಗಳಾದವು ಎಂಬ ಬಗ್ಗೆ ವಿಚಾರಿಸಲು ಮುಂದಾದರು. ಇದನ್ನು ಕೇಳಿದ ತಕ್ಷಣ ನಾನು ಇಬ್ಬರನ್ನೂ ಕೆಟ್ಟದಾಗಿ ಬೈಯಲು ಶುರು ಮಾಡಿದೆ. ಅಲ್ಲಿಂದ ಹೊರಟು ಹೋಗುವಂತೆಯೇ ಚೀರಿಕೊಂಡೆ ಎಂದು ಬಡ್ಗೆ ಹೇಳಿದ್ದಾನೆ.31

ತಕ್ಷಣ ಅಲ್ಲಿಂದ ಯಾರಿಗೂ ಗೊತ್ತಾಗದಂತೆ ಭಾರವಾದ ಹೃದಯದಿಂದ ತಮ್ಮ ಸಾಮಾನುಗಳೊಂದಿಗೆ ಮರಿನಾ ಹೋಟೆಲ್ ಬಿಲ್ ಚುಕ್ತಾ ಮಾಡಿ ಹೊರಟ ಗೋಡ್ಸೆ ಮತ್ತು ಆಪ್ಟೆ ದೆಹಲಿಯಿಂದ ರಾತ್ರಿ ತೆರಳುವ ರೈಲನ್ನು ಹತ್ತಿ ಕಾನ್ಪುರಕ್ಕೆ ಹೋದರು. ಜನವರಿ 21ರ ಇಡೀ ರಾತ್ರಿಯನ್ನು ಕಾನ್ಪುರ ರೈಲು ನಿಲ್ದಾಣದಲ್ಲಿ ಕಳೆದು ಮರುದಿನ ಮಧ್ಯಾಹ್ನ ಹೊರಟ ರೈಲಿನಲ್ಲಿ ಬಾಂಬೆಗೆ ಪ್ರಯಾಣ ಬೆಳೆಸಿದರು.

(‘ಗಾಂಧೀಜಿಯ ಹಂತಕ’ ಪುಸ್ತಕದಿಂದ ಆಯ್ದ ಭಾಗ)

ಗೋಡ್ಸೆ1

ಅಡಿ ಟಿಪ್ಪಣಿಗಳು

  1. Mahatma Gandhi Murder Case, Statements of Accused, File No. 47, p. 79, NAI, New Delhi.
  2. Ibid.
  3. Mahatma Gandhi Murder Case Statement of Accused in Origi- nal, File No. 23, p. 77, NAI, New Delhi.
  4. Ibid., p. 113.
  5. Ibid., pp. 113-114.
  6. Ibid., p. 114.
  7. Ibid.
  8. Ibid., p. 115.
  9. Ibid., pp. 115-116.
  10. Mahatma Gandhi Murder Case, Statements of Accused, File No. 47, p. 82, NAI, New Delhi.
  11. Mahatma Gandhi Murder Case, Statement of Accused in Origi- nal, File No. 23, p. 78, NAI, New Delhi.
  12. Pyarelal, Mahatma Gandhi: The Last Phase, Vol. X, Navajivan Publishing House, Ahmedabad, 1997, p. 747.
  13. Ibid.
  14. Robert Payne, The Life and Death of Mahatma Gandhi, Rupa & Co., Calcutta, 1997, pp. 567-568.
  15. Ibid., p. 568.
  16. Pyarelal, Mahatma Gandhi: The Last Phase, Vol. X, Navajivan Publishing House, Ahmedabad, 1997, p. 748.
  17. Robert Payne, The Life and Death of Mahatma Gandhi, Rupa & Co., Calcutta, 1997, p. 569.
  18. Mahatma Gandhi Murder Case, Statement of Accused in Origi- nal, File No. 23, p. 78, NAI, New Delhi.
  19. Ibid., p. 79.
  20. Ibid., p. 118.
  21. Ibid.
  22. Mahatma Gandhi Murder Case, Statements of Accused, File No. 47, pp. 83–84, NAI, New Delhi.
  23. Brijkrishna Chandiwala, At the Feet of Bapu, Navajivan Pub- lishing House, Ahmedabad, 1954, p. 244.
  24. Pyarelal, Mahatma Gandhi: The Last Phase, Vol. X, Navajivan Publishing House, Ahmedabad, 1997, p. 749.
  25. Mahatma Gandhi Murder Case, Statements of Accused, File No. 47, p. 85, NAI, New Delhi.
  26. Tapan Ghosh, The Gandhi Murder Trial, Asia Publishing House, Bombay, 1974, p. 83.
  27. Ibid.
  28. Mahatma Gandhi Murder Case, Statement of Accused in Origi- nal, File No. 23, p. 129, ΝΑΙ, New Delhi.
  29. Ibid.
  30. Ibid., p. 119.
  31. Ibid.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಇನ್ನೂ ಸರಳ ಮನಸ್ಸಿನವ ಅಂತೀರಲ್ಲಾ, ಇಷ್ಟೆಲ್ಲಾ ಆದಮೇಲೂ, ವಿಕೃತ, ಪೈಶಿಚಿಕ ಮನಸ್ಸಿನವ, ಇವೆಲ್ಲಾ rss ನಿಂದ ತಲೆಗೆ ಬಂದಿರೋದು ಆತನಿಗೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X