ಸ್ನೇಹಿತರೇ,
ನಮಸ್ಕಾರ. ನಿನ್ನೆ, 2024, ಅಕ್ಟೋಬರ್ 20ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜಿ.ಎನ್. ಸಾಯಿಬಾಬಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ನಡೆದ ಸಭೆಯ ವಿಡಿಯೋಗಳು ಇವು: ಭಾಗ ಒಂದು, ಭಾಗ ಎರಡು.
ಸಭೆಯನ್ನು ಉದ್ದೇಶಿಸಿ ಎಸ್ ಬಾಲನ್, ರಾಧಿಕಾ ಚಿತ್‍ಕಾರ್ ಹಾಗೂ ಶಿವಸುಂದರ್ ಅವರು ಮನಮುಟ್ಟುವಂತೆ, ಮನತಲ್ಲಣಿಸುವಂತೆ ಮಾತನಾಡಿದರು. ಯುಎಪಿಎ ಕಾಯಿದೆ ಎಂಬ ಮಹಾ ಕೇಡಿನ ಬಗ್ಗೆ, ಅದರ ಅಡಿ ಬಂಧನಕ್ಕೆ ಒಳಗಾಗಿ ಸೆರೆಮನೆ ಎಂಬ ನರಕಕೂಪದಲ್ಲಿರುವ ಆದಿವಾಸಿಗಳು, ಕಾರ್ಮಿಕರು, ನ್ಯಾಯನಿಷ್ಠುರ ಕಾರ್ಯಕರ್ತರು ಹಾಗೂ ಧೀಮಂತರ ಬವಣೆಯ ಬಗ್ಗೆ ಸಾಕಷ್ಟು ತಿಳಿದಿರುವವರ ಎದೆಗಳು ಕೂಡ ನಡುಗುವಂತಿತ್ತು ಅವರು ಒಬ್ಬೊಬ್ಬರ ಮಾತೂ.
ಮೇಲಿನ ಆ ಮಾತಲ್ಲಿ ಅತಿಶಯೋಕ್ತಿ ಇಲ್ಲ. ದಯವಿಟ್ಟು ಬಿಡುವು ಮಾಡಿಕೊಂಡು, ಈ ವಿಡಿಯೋಗಳನ್ನು ನೋಡಿ. ಸಾವಧಾನವಾಗಿ ನೋಡಿ. ನೋಡಿದಮೇಲೆ ಆದಷ್ಟು ಜನರಿಗೆ ಹಂಚಿ. ಸ್ನೇಹಿತರೊಡನೆ ಚರ್ಚಿಸಿ.
ನಿಮ್ಮ ಅನುಕೂಲಕ್ಕಾಗಿ, ಈ ವಿಡಿಯೋಗಳಲ್ಲಿ ಯಾರ ಮಾತು ಎಲ್ಲಿಂದ ಎಲ್ಲಿಯವರೆಗೆ ಇದೆ ಎನ್ನುವುದರ ವಿವರವನ್ನು ಈ ಕೆಳಗೆ ಕೊಟ್ಟಿದೆ:
ವಿಡಿಯೋ ಒಂದು: https://www.youtube.com/watch?v=Vy11CicjQsM
0:00 – 18:16 – ಪ್ರಸ್ತಾವನೆ: ನಗರಗೆರೆ ರಮೇಶ್, ಜನಶಕ್ತಿ ಸಂಘಟನೆಯ ಗೌರವಾಧ್ಯಕ್ಷರು
18:16 – 39:35 – ಎಸ್ ಬಾಲನ್, ಕಾರ್ಮಿಕ ಹಾಗೂ ಮಾನವಹಕ್ಕುಗಳ ಧೀಮಂತ ನ್ಯಾಯವಾದಿ
39: 35 – 58:43 – ರಾಧಿಕಾ ಚಿತ್‍ಕಾರ್, ಅಪರಾಧ ಮತ್ತು ಮಾನವಹಕ್ಕುಗಳ ಪ್ರಾಧ್ಯಾಪಕಿ, ನ್ಯಾಷನಲ್ ಸ್ಕೂಲ್ ಆಫ್ ಲಾ ಯೂನಿವರ್ಸಿಟಿ, ಬೆಂಗಳೂರು ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್ ಸಂಘಟನೆಯ ಕಾರ್ಯಕರ್ತೆ
58:43 – ಕಡೆಯವರೆಗೆ – ಶಿವಸುಂದರ್, ಕನ್ನಡದ ಅತಿಧೀಮಂತ ಪತ್ರಕರ್ತ, ಲೇಖಕ. ವಾರ್ತಾಭಾರತಿ ಪತ್ರಿಕೆಯ ಜಾಲತಾಣ ಹಾಗೂ ಯೂಟ್ಯೂಬ್ ವಾಹಿನಿಯಲ್ಲಿ ಇವರ ನೂರಾರು ವಿಡಿಯೋ ಹಾಗೂ ಲೇಖನಗಳು ಲಭ್ಯ. ಸಾಯಿಬಾಬಾ ಅವರೊಂದಿಗೆ ಹಲವು ವರ್ಷ ಕೆಲಸ ಮಾಡಿದವರು; ಅವರನ್ನು ಹತ್ತಿರದಿಂದ ಬಲ್ಲವರು. ಶಿವಸುಂದರ್ ಅವರು ಸಾಯಿಬಾಬಾ ಅವರ ಬಗ್ಗೆ ನೀಡಿದ ಹಲವು ವಿವರ ಕೇಳಿದರೆ, ಮನಸ್ಸು ಬೇಸರ, ದುಃಖ, ಮೆಚ್ಚುಗೆ, ಬೆರಗುಗಳ ಮುದ್ದೆಯಾಗಿ, ಸ್ತಂಭೀಭೂತವಾಗುತ್ತದೆ. ಮಾತು ಎರಡನೇ ವಿಡಿಯೋದಲ್ಲಿ ಮುಂದುವರಿಯುತ್ತದೆ.
ವಿಡಿಯೋ ಎರಡು: https://www.youtube.com/watch?v=_kt7UVSQsV4
0.00 – 16.00 – ಶಿವಸುಂದರ್ ಅವರ ಮಾತು ಮುಂದುವರಿದಿದೆ.
ಸಭೆಯ ಕಡೆಯಲ್ಲಿ, ಅತಿ ಆರ್ದ್ರ ಮನಸ್ಸಿನ ದು. ಸರಸ್ವತಿ ಅವರು ಮಾತನಾಡಿದರು. ಕಳೆದ ಮಾರ್ಚ್ ತಿಂಗಳು, ಸಾಯಿಬಾಬಾ ಅವರು ಎಲ್ಲ ಆರೋಪಗಳಿಂದ ಸಂಪೂರ್ಣ ಖುಲಾಸೆಗೊಂಡು ಸೆರೆಮನೆಯಿಂದ ಹೊರಬಂದಮೇಲೆ, ಸರಸ್ವತಿ ಅವರು ಹೈದರಾಬಾದಿನಲ್ಲಿ ಅವರನ್ನು ಕಂಡು, ಅವರ ಕೈಹಿಡಿದು ಅವರ ಜೊತೆ ಮತ್ತು ಅವರ ಮಡದಿ ಶ್ರೀಮತಿ ವಸಂತಾ ಅವರ ಜೊತೆ ಕಳೆದ ಕೆಲವು ಗಂಟೆಗಳನ್ನು ನೆನೆಸಿಕೊಂಡರು; ಆ ಅನುಭವವನ್ನು ಕಥಿಸಿದರು.
ದುರದೃಷ್ಟದಿಂದ, ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅವರ ಮಾತು ಮುದ್ರಣಗೊಳ್ಳಲಿಲ್ಲ. ಸರಸ್ವತಿಯವರು ಮಾತನಾಡಿದ ಮೇಲೆ ಸಭೆಯ ಅಧ್ಯಕ್ಷ ಭಾಷಣ ಮಾಡಿದ ಅರವಿಂದ ನಾರಾಯಣ, ಅಧ್ಯಕ್ಷ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಇವರ ಮಾತು ಕೂಡ ಮುದ್ರಣಗೊಳ್ಳಲಿಲ್ಲ. ದೊಡ್ಡ ನಷ್ಟವಾಗಿದೆ.
ವಿಡಿಯೋಗಳನ್ನು ತಪ್ಪದೆ ನೋಡಿ. ಭಾರತವಾಸಿಗಳಾಗಿ, ನಾಗರಿಕರಾಗಿ, ಪ್ರಪಂಚದ ನಾಗರಿಕರಾಗಿ ನಮ್ಮ ನಮ್ಮ ಸಂವೇದನೆಯನ್ನು, ನಮ್ಮ ಸುತ್ತಲಿನವರ ಸಂವೇದನೆಯನ್ನು ಹೇಗೆ ರೂಪಿಸಿಕೊಳ್ಳಬೇಕಿದೆ, ಹಾಗೆ ಮಾಡುತ್ತ ಏನು ಮಾಡಬೇಕಿದೆ, ದಯವಿಟ್ಟು ಯೋಚಿಸಿ; ಸ್ನೇಹಿತರು ಮತ್ತು ಇಷ್ಟರೊಡನೆ ಚರ್ಚಿಸಿ.
-ರಘುನಂದನ