ಗೋವಾ ಚಿತ್ರೋತ್ಸವ | ಉದ್ಘಾಟನಾ ಸಿನಿಮಾ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ; ಆಯ್ಕೆಗೆ ಮಾನದಂಡವೇನು?

Date:

Advertisements

ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಾಗಲೀ, ಭಾರತೀಯ ಪನೋರಮಾ ವಿಭಾಗದಲ್ಲಾಗಲೀ ಮೊದಲು ಪ್ರದರ್ಶನಗೊಳ್ಳುವ ಸಿನಿಮಾಕ್ಕೆ ಅದರದೇ ಪ್ರಾಮುಖ್ಯತೆ ಇರುತ್ತದೆ, ಇರಬೇಕಾಗುತ್ತದೆ. ಕಾರಣ, ಆ ಸಿನಿಮಾವು ಪ್ರದರ್ಶನಗೊಳ್ಳುವ ಮುಂದಿನ ಸಿನಿಮಾಗಳಿಗೆ ಮುನ್ನುಡಿಯಂತಿರುತ್ತದೆ. ಹಾಗಾಗಿ, IFFI ತಾನೇ ಹೇಳಿಕೊಂಡಿರುವ ಆಶಯಗಳಿಗೆ ತಕ್ಕಂತೆ ಓಪನಿಂಗ್ ಸಿನಿಮಾ ಇರಬೇಕಾದುದು ಅಪೇಕ್ಷಣೀಯ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಗೋವಾದಲ್ಲಿ ಎಂದಿನಂತೆ ಪೂರ್ವ ನಿಗದಿತ ದಿನಗಳಲ್ಲಿ, ನವೆಂಬರ್ 20 ರಿಂದ 28ರವರೆಗೆ ನೆರವೇರಲಿದೆ. ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಜಾಗತಿಕ ಸಿನಿಮಾಗಳನ್ನು ಸಿನಿಮಾಸಕ್ತರು, ಸಿನಿಮಾಗಳ ಕುರಿತು ಅಧ್ಯಯನ ಮಾಡುವವರು, ವಿಮರ್ಶಕರು, ಪ್ರತಿ ಬಾರಿಯೂ ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ದೇಶದಾದ್ಯಂತ ಹಲವು ಫಿಲಂ ಫೆಸ್ಟಿವಲ್‌ಗಳು ವರ್ಷವಿಡೀ ನಡೆಯುತ್ತವೆಯಾದರೂ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಾಲದಲ್ಲಿ 1952 ಪ್ರಾರಂಭಗೊಂಡ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI) ಇತರೆಲ್ಲಾ ಚಿತ್ರೋತ್ಸವಗಳಿಗಂತ ಹೆಚ್ಚು ಆಕರ್ಷಣೆ, ಮನ್ನಣೆ ಪಡೆದುಕೊಂಡಿದೆ. ಉಳಿದ ಎಲ್ಲಾ ಚಿತ್ರೋತ್ಸವಗಳನ್ನು ಆಯಾ ರಾಜ್ಯಗಳು ಅಥವಾ ಸಿನಿಮಾ ಸಂಸ್ಥೆಗಳು ಆಯೋಜಿಸಿದರೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ.

ಈಗ ಗೋವಾದಲ್ಲಿ ನಡೆಯುತ್ತಿರುವುದು 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. 2003ರಲ್ಲಿ ದೆಹಲಿಯಲ್ಲಿ ನಡೆದ 34ನೇ ಚಿತ್ರೋತ್ಸವದವರೆಗೂ ಪ್ರತಿ ವರ್ಷ ಈ ಸಿನಿಮಾ ಉತ್ಸವವು ದೇಶದ ವಿವಿಧ ರಾಜ್ಯಗಳ ರಾಜಧಾನಿಯಲ್ಲಿ ನಡೆಯುತ್ತಿತ್ತು. ಆದರೆ, 35ನೇ ಚಿತ್ರೋತ್ಸವದಿಂದ (2004) ಗೋವಾದ ಪಣಜಿಯಲ್ಲಿ ನಿಗದಿತ ದಿನಗಳಲ್ಲಿ ನಿರಂತರವಾಗಿ ನಡೆದುಕೊಳ್ಳುತ್ತಾ ಬರುತ್ತಿದೆ.

Advertisements

1978ರಲ್ಲಿ ಚೆನ್ನೈನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಜಾಗತಿಕ ಸಿನಿಮಾಗಳ ಪ್ರದರ್ಶನದೊಂದಿಗೆ ಭಾರತೀಯ ಪನೊರಮಾ (Indian Panorama) ವಿಭಾಗವನ್ನು ಪರಿಚಯಿಸಲಾಯಿತು. ಅದರ ಮುಖ್ಯ ಉದ್ದೇಶ, ಸಿನಿಮಾ ಕಲೆಯ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರಸಾರ ಮಾಡುವುದು. ಈ ವಿಭಾಗದಲ್ಲಿ ಭಾರತದಲ್ಲಿ ಆಯಾ ವರ್ಷದ ಅವಧಿಯಲ್ಲಿ ನಿರ್ಮಾಣಗೊಂಡ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಅದರಲ್ಲಿ ಅತ್ಯುತ್ತಮ ಪ್ರಶಸ್ತಿ ವಿಜೇತ ಸಿನಿಮಾ ಸೇರಿದಂತೆ ಸುಮಾರು 26 ಫಿಕ್ಷನ್ ಮತ್ತು 21 ನಾನ್ ಫಿಕ್ಷನ್ ಸಿನಿಮಾಗಳು ಇರುತ್ತವೆ. ಮುಖ್ಯವಾಗಿ ವಿಷಯಾಧಾರಿತ, ಸಿನಿಮಾಟಿಕ್ ಮತ್ತು ಕಲಾತ್ಮಕ ಸಿನಿಮಾಗಳನ್ನು ಈ ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ.

ಈ ಬಾರಿ – 55ನೇ IFFI ಚಿತ್ರೋತ್ಸವದ ಭಾರತೀಯ ಪನೊರಮಾ (Indian Panorama) ವಿಭಾಗದಲ್ಲಿ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ʼಜಿಂಗರ್ ಥಾಂಡ ಡಬ್ಬಲ್ ಎಕ್ಸ್ʼ ಸಿನಿಮಾದ ಜೊತೆಗೆ ಕಲ್ಕಿ 2898 ಎಡಿ, ಮಂಜುಮಲ್ ಬಾಯ್ಸ್ , ಆಡುಜೀವಿತಮ್, 35 ಚಿನ್ನಾ ಕತಾ ಕಾಡು ಮುಂತಾದ 25 ಸಿನಿಮಾಗಳು ಆಯ್ಕೆಯಾಗಿವೆ. ಇದೇ ವಿಭಾಗದಲ್ಲಿ ನಟ ರಣದೀಪ್ ಹೂಡ ನಿರ್ದೇಶಿಸಿರುವ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಚಿತ್ರ ಆಯ್ಕೆಯಾಗಿರುವುದು ಅಚ್ಚರಿ ಹುಟ್ಟಿಸಿದ್ದರ ಜೊತೆ ಒಪನಿಂಗ್ ಸಿನಿಮಾವಾಗಿ ಪ್ರದರ್ಶಿತವಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಾಗಲೀ, ಭಾರತೀಯ ಪನೊರಮಾ ವಿಭಾಗದಲ್ಲಾಗಲೀ ಮೊದಲು ಪ್ರದರ್ಶನಗೊಳ್ಳುವ ಸಿನಿಮಾಕ್ಕೆ ಅದರದೇ ಪ್ರಾಮುಖ್ಯತೆ ಇರುತ್ತದೆ, ಇರಬೇಕಾಗುತ್ತದೆ. ಕಾರಣ, ಆ ಸಿನಿಮಾವು ಪ್ರದರ್ಶನಗೊಳ್ಳುವ ಮುಂದಿನ ಸಿನಿಮಾಗಳಿಗೆ ಮುನ್ನುಡಿಯಂತಿರುತ್ತದೆ. ಹಾಗಾಗಿ, IFFI ತಾನೇ ಹೇಳಿಕೊಂಡಿರುವ ಆಶಯಗಳಿಗೆ ತಕ್ಕಂತೆ ಒಪನಿಂಗ್ ಸಿನಿಮಾ ಇರಬೇಕಾದುದು ಅಪೇಕ್ಷಣೀಯ.

IFFI goa

ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅಷ್ಟಾಗಿ ಜನಮನ್ನಣೆ ಗಳಿಸದ ʼಸಾವರ್ಕರ್ʼ – ಸಿನಿಮಾಟಿಕ್ ಆಗಿ, ಸಿನಿಮಾ ವ್ಯಾಕರಣಗಳನ್ನು ದುಡಿಸಿಕೊಂಡ ವೃತ್ತಿಪರತೆ ಉಳ್ಳ ಸಿನಿಮಾ ಆಗಿರಬಹುದು. ಆದರೆ, ಸಾವರ್ಕರ್ ಅವರ ಜೀವನಗಾಥೆಯನ್ನು ಬೆಳ್ಳಿಪರದೆ ಮೇಲೆ ತರುವಾಗ ಸಿದ್ಧ ಪಡಿಸಿದ ಚಿತ್ರಕತೆ ಇತಿಹಾಸಕ್ಕೆ ನಿಷ್ಠವಾಗಿದೆಯೇ ಎಂಬುದು ಪ್ರಶ್ನೆ.

ಕಾಲಪಾನಿಯ ಅಮಾನವೀಯ ಶಿಕ್ಷೆಯನ್ನು ತಪ್ಪಿಸಿಕೊಂಡು ಮರಳಿ ಭಾರತಕ್ಕೆ ಬಂದ ಬಳಿಕ, ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಅವರ ಪಾತ್ರ ಯಥಾವತ್ತಾಗಿ ಚಿತ್ರಿತವಾಗಿದೆಯೇ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ವಾಗ್ದಾನ ಮಾಡಿ ಬ್ರಿಟಿಷರಿಗೆ ಹಲವು ಕ್ಷಮಾಪಣೆ ಪತ್ರಗಳನ್ನು ಬರೆದುದು ನಿಜವಲ್ಲವೇ? 1942ರಲ್ಲಿ ಗಾಂಧೀಜಿಯವರ ʼಕ್ವಿಟ್ ಇಂಡಿಯಾʼ ಕರೆಗೆ ವ್ಯತಿರಿಕ್ತವಾಗಿ ಹಿಂದೂ ಯುವಕರನ್ನು ಬ್ರಿಟಿಷರ ಪರವಾಗಿ, ಹೋರಾಟದ ವಿರೋಧವಾಗಿ ಎತ್ತಿಕಟ್ಟಿದ್ದು ಇತಿಹಾಸದಲ್ಲಿ ದಾಖಲಾದ ಸಂಗತಿಯೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗಾಂಧೀಜಿಯವರ ಹತ್ಯೆಯ ಮಾಸ್ಟರ್ ಮೈಂಡ್ ಆಗಿ ಕೊಲೆ ಆರೋಪಿಯಾಗಿದ್ದು. ಇನ್ನೂ ಹಲವಾರು ವಿಷಯಗಳಲ್ಲಿ ದೇಶಪ್ರೇಮಕ್ಕಿಂತ ʼಹಿಂದುತ್ವʼವೇ ಮುಖ್ಯವಾಗಿದ್ದ ಸಾವರ್ಕರ್ ಅವರ ವ್ಯಕ್ತಿತ್ವದ ಒಂದೇ ಮಗ್ಗುಲನ್ನು ಸಿನಿಮಾ ಭಾಷೆ ಬಳಸಿ ವಿಜೃಂಭಿಸಿ ತೋರಿಸಿರುವ ʼಸಾವರ್ಕರ್ʼ ಸಿನಿಮಾ, ಸೃಜನಶೀಲ ಮಾಧ್ಯಮವನ್ನು ಅಪಬಳಕೆ ಮಾಡಿ ತಯಾರಾದ ಪ್ರಾಪಗಂಡ ಸಿನಿಮಾವೇ ಆಗಿದೆ.

ಈ ಮಾತನ್ನು ಪುಷ್ಟೀಕರಿಸುವಂತೆ ಸಿನಿಮ್ಯಾಟಿಕ್ ಲಿಬರ್ಟಿ ನೆಪದಲ್ಲಿ ನಿರ್ದೇಶಕ ರಣದೀಪ್ ಹೂಡ ಹೇಗೆ ಇತಿಹಾಸವನ್ನು ತಿರುಚಿ ಸಾವರ್ಕರ್ ಒಬ್ಬ ಅಪತ್ರಿಮ ದೇಶಭಕ್ತನಂತೆ ಚಿತ್ರೀಕರಿಸಿರುವುದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದು.

we have all been taught that india got its independence only by non violence. ಇದು ಸಿನಿಮಾದ ಆರಂಭಕ್ಕೆ ಮುಂಚೆ ಪರದೆಯಲ್ಲಿ ಕಾಣುವ ಹೇಳಿಕೆ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಕೇವಲ ಅಹಿಂಸಾ ಹೋರಾಟದಿಂದಲೇ ಮಾತ್ರ ಬರಲಿಲ್ಲ. ಪರೋಕ್ಷವಾಗಿ ಹಿಂಸೆಯಿಂದ ಅಂದರೆ ಶಸ್ತ್ರಸಜ್ಜಿತ ಹೋರಾಟದಿಂದ ಬಂತು ಎನ್ನುವುದನ್ನು ಸಿನಿಮಾದಲ್ಲಿ ಸಾವರ್ಕರ್ ಪಾತ್ರದ ಉತ್ಪ್ರೇಕ್ಷಿತ ಹೇಳಿಕೆಯಿಂದ ಸಾಧಿಸಲು ಯತ್ನಿಸಲಾಗಿದೆ. ಇಸವಿ 1947ಕ್ಕೆ ಮೂವತ್ತೈದು ವರ್ಷಗಳ ಮುಂಚೆಯೇ ಅಂದರೆ 1912ರಲ್ಲಿಯೇ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳಬಹುದಿತ್ತು ಎಂಬುದು ಸತ್ಯಕ್ಕೆ ದೂರವಾದ ಮಾತು. ಅಸಲಿಗೆ ಸಾವರ್ಕರ್ 1910ರಿಂದ ಸೆಲ್ಯುಲಾರ್ ಜೈಲಿನಲ್ಲಿದ್ದು ಬಿಡುಗಡೆಯಾಗುವುದು 1924ರಲ್ಲಿ. ಮತ್ತೂ ವಿಲಕ್ಷಣವಾದ ಸಂಗತಿ ಎಂದರೆ 1912ರಲ್ಲೇ ಬ್ರಿಟಿಷ್ ಸರ್ಕಾರದ ಕ್ಷಮೆಯಾಚಿಸಿ ಮೂರು ಪತ್ರಗಳನ್ನು ಸಾವರ್ಕರ್ ಬರೆದದ್ದು ಇತಿಹಾಸದಲ್ಲಿ ಅಳಿಸಲಾಗದ ದಾಖಲೆಯಾಗಿದೆ.

ಸಾವರ್ಕರ್ ಸಲಹೆ ಮೇರೆಗೆ ನೇತಾಜಿಯವರು ಆಜಾದ್ ಹಿಂದ್ ಫೌಜ್ ಸೈನ್ಯವನ್ನು ಜರ್ಮನಿ ಮತ್ತು ಜಪಾನ್ ದೇಶಗಳ ಸಹಾಯದಿಂದ ಕಟ್ಟಿದರು ಎಂಬುದು ಮತ್ತೊಂದು ಹಸಿಹಸಿ ಸುಳ್ಳು. ಯಾಕೆಂದರೆ ಆ ಹೊತ್ತಲ್ಲೇ ಹಿಂದೂ ಯುವಕರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸುವಂತೆ ಸಾವರ್ಕರ್ ಹಿಂದೂ ಮಹಾ ಸಭಾವನ್ನು ಒತ್ತಾಯಿಸುತ್ತಿದ್ದರು. ಈ ಬಗ್ಗೆ ನೇತಾಜಿಯವರು ಪ್ರತಿಕ್ರಿಯಿಸುತ್ತಾ, “ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮ್ ಲೀಗ್‌ನಿಂದಲಾಗಲಿ ಹಿಂದೂ ಮಹಾ ಸಭಾದಿಂದಾಗಲಿ ಏನನ್ನೂ ನಿರೀಕ್ಷಿಸುವಂತಿಲ್ಲ” ಎಂಬ ದಾಖಲಾದ ಹೇಳಿಕೆಯನ್ನು ಗಮನಿಸಬಹುದು.

ಇಡೀ ಸಿನಿಮಾದಲ್ಲಿ ಸಾವರ್ಕರ್ ಅವರನ್ನು ವೈಭವೀಕರಿಸುವುದಕ್ಕಾಗಿ ಗಾಂಧೀಜಿಯವರನ್ನು ಅಸಹಾಯಕರಂತೆ ಚಿತ್ರಿಸಿ ಕುಬ್ಜರಂತೆ ಕಾಣಿಸಲಾಗಿದೆ. ಜೊತೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಸ್ವಾತಂತ್ರ್ಯ ಸಂಗ್ರಾಮದ ಪಾತ್ರದ ಪ್ರಾಮಾಣಿಕತೆಯನ್ನು ಹಲವು ಕಡೆ ಪ್ರಶ್ನಿಸಲಾಗಿದೆ.

ಸಿನಿಮಾದ ಕೊನೆಯಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆಯ ಸುದ್ದಿ ಬಂದಾಗ ಸಾವರ್ಕರ್ ಆ ಬಗ್ಗೆ ಖೇದಗೊಂಡು ಹತ್ಯೆಯನ್ನು ಖಂಡಿಸುತ್ತಾರೆ! ಗಾಂಧಿ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಕ್ಕೆ ಆರೋಪಿಯಾಗಿ ಕಟಕಟೆ ನಿಲ್ಲಬೇಕಾದ ಪರಿಸ್ಥಿತಿಯನ್ನು ಕಾಂಗ್ರೆಸ್ ಸಂಚು ಎಂಬಂತೆ ಚಿತ್ರೀಕರಿಸಲಾಗಿರುವುದು ಇತಿಹಾಸಕ್ಕೆ ಮಾಡಿದ ಅಪಚಾರ.

ಈ ದಿನ ಸಂಪಾದಕೀಯ | ಮೀಸಲಾತಿಗೇ ಕುತ್ತು ಬಂದಿರುವಾಗ, ಒಳಮೀಸಲಿನ ನಿಜವನ್ನು ಇನ್ನೆಷ್ಟು ಕಾಲ ಮುಂದೂಡುತ್ತೀರಿ?

ಎಲ್ಲಕ್ಕಿಂತ ಸಿನಿಮಾದಲ್ಲಿನ ತಮಾಷೆ ಸಂಗತಿಯೆಂದರೆ, ಭಗತ್ ಸಿಂಗ್ ಅವರು ಸಾವರ್ಕರ್‌ರನ್ನು ʼಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮʼ ಪುಸ್ತಕವನ್ನು ಮರಾಠಿಯಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಲು ಕೇಳಿಕೊಳ್ಳುವುದು. ವಾಸ್ತವದ ಸಂಗತಿಯೆಂದರೆ ಆ ಪುಸ್ತಕ 1908ರಲ್ಲಿ ರಚಿತವಾದುದು. ಅಲ್ಲದೇ ಭಗತ್ ಸಿಂಗ್ ಜನಿಸಿದ್ದೇ 1907ರಲ್ಲಿ. ಹಾಗಾಗಿ ಸಾವರ್ಕರ್ ಜೀವನದಲ್ಲಿ ಭಗತ್ ಸಿಂಗ್ ಅವರನ್ನು ಭೇಟಿಯಾಗಿರುವ ಸಂಭವವೇ ಇಲ್ಲ.

ರಣದೀಪ್ ಹೂಡ ನಿರ್ದೇಶಿಸಿರುವ ʼಸಾವರ್ಕರ್ʼ ಅಂತಹ ಒಂದು ಪ್ರೊಪಗಾಂಡ ಸಿನಿಮಾವನ್ನು ಸಿನಿಮಾ ಕಲೆ, ಸೌಂದರ್ಯದ ಬಗ್ಗೆ ಕಾಳಜಿ ತೋರುವ IFFI ಆಶಯಕ್ಕೆ ವಿರುದ್ದವಾಗಿ, ಚಿತ್ರೋತ್ಸವಕ್ಕೆ ಆಯ್ಕೆ ಮಾಡಿರುವುದೇ ಹಾಸ್ಯಾಸ್ಪದ ಸಂಗತಿ ಆಗಿದೆ. ಅಂಥದ್ದರಲ್ಲಿ ಅದನ್ನು ಒಪನಿಂಗ್ ಸಿನಿಮಾವಾಗಿ ಪ್ರದರ್ಶನಕ್ಕೆ ಆಯ್ಕೆ ಮಾಡಿರುವುದು ಆಳುವ ಕೇಂದ್ರ ಬಿಜೆಪಿ ಸರ್ಕಾರದ ಧರ್ಮಾಧಾರಿತ ಅಜೆಂಡಾಗಳಿಗೆ ಪೂರಕವಾಗಿದೆ ಎನ್ನುವುದು ಢಾಳಾಗಿ ಕಾಣುತ್ತದೆ.

ಇದನ್ನೂ ಓದಿ ಈ ದಿನ ವಿಶೇ‍‍ಷ | ಮಹಿಳಾ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು?

53ನೇ IFFI ಚಿತ್ರೋತ್ಸವದಲ್ಲಿ ಖ್ಯಾತ ಇಸ್ರೇಲ್ ನಿರ್ದೇಶಕ ನಾದವ್ ಲಾಪಿದ್, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದ ಕಾಶ್ಮೀರ್ ಫೈಲ್ಸ್ʼ ಸಿನಿಮಾವನ್ನು ಅಂತಾರಾಷ್ಟ್ರೀಯ ಸ್ವರ್ಧಾ ವಿಭಾಗಕ್ಕೆ ಆಯ್ಕೆ ಮಾಡಿದ್ದರ ಬಗ್ಗೆ ಖೇದ ವ್ಯಕ್ತಪಡಿಸಿ “ಅದೊಂದು ಅಶ್ಲೀಲ ಮತ್ತು ಪ್ರೊಪಗಾಂಡ ಸಿನಿಮಾ” ಎಂದು ತೀರ್ಪುಗಾರರ ಪರವಾಗಿ ಹೇಳಿಕೆ ದಾಖಲಿಸಿದ್ದರು. ಸಾವರ್ಕರ್ ಸಿನಿಮಾವನ್ನು ಕೇವಲ ಭಾರತೀಯ ಸಿನಿಮಾ ವಿಭಾಗಕ್ಕೆ ಸೀಮಿತಗೊಳಿಸಿರುವುದು ನೋಡಿದರೆ ಅಂತ ಛೀಮಾರಿಯಿಂದ ಆಯ್ಕೆ ಮಂಡಳಿ ಸ್ವಲ್ಪ ಮಟ್ಟಿಗೆ ಎಚ್ಚೆತ್ತುಗೊಂಡಂತೆ ಕಾಣುತ್ತದೆ.
****
ಆಳುವ ಸರ್ಕಾರಗಳು ತಮ್ಮ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಸಿನಿಮಾದಂಥ ಸೃಜನಶೀಲ ಕಲಾಮಾಧ್ಯಮಗಳನ್ನು ಬಳಸಿಕೊಳ್ಳುವುದು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಎಗ್ಗಿಲ್ಲದೆ ಪ್ರೊಪಗಾಂಡ ಸಿನಿಮಾಗಳನ್ನು ಪ್ರದರ್ಶಿಸುವುದು ದೇಶ ಕಾಣುತ್ತಿರುವ ಸಾಂಸ್ಕೃತಿಕ ಅಧಃಪತನದ ಸಂಕೇತವಾಗಿ ಕಾಣುತ್ತದೆ.

chandraprabha ೧
ಚಂದ್ರಪ್ರಭ ಕಠಾರಿ
+ posts

ಸಿನಿಮಾಸಕ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X