ಮಳವಳ್ಳಿಯ ಗೋಕುಲ ವಿದ್ಯಾಸಂಸ್ಥೆಯ ಮುಖ್ಯಸ್ಥ ಲಂಕೇಶ್ ಅವರು, ಸಮಾರಂಭಗಳಲ್ಲಿ ಉಳಿದ ಆಹಾರ ತಮ್ಮ ಗೋಕುಲ ಸೇವಾಶ್ರಮಕ್ಕೆ ತಲುಪಿಸಿ ಎಂದು ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು. ಆ ಪೋಸ್ಟರ್ ʼಈ ದಿನʼಕ್ಕೆ ಲಭ್ಯವಾಗಿದೆ. ಅಷ್ಟೇ ಅಲ್ಲ ಹಾಸ್ಟೆಲ್ ನಡೆಸಲು ಸರ್ಕಾರದ ಅನುಮತಿ ಕೂಡಾ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶನಿವಾರ (ಮಾ.8) ಮಳವಳ್ಳಿ ಟಿ. ಕಾಗೇಪುರದ ಗೋಕುಲ ವಿದ್ಯಾ ಸಂಸ್ಥೆಯ ಹಾಸ್ಟೆಲ್‌ಗೆ ಹೊರಗಿನಿಂದ ಪೂರೈಸಲಾಗಿದ್ದ ಆಹಾರ ತಿಂದು ಮುವ್ವತ್ತು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಮೇಘಾಲಯದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಉಳಿದ ಮಕ್ಕಳು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಹೊರಬರುತ್ತಿದ್ದಂತೆ ಕೇಳಿ ಬಂದ ಮೊದಲ ಆರೋಪ ಏನೆಂದರೆ, ಈ ಹಾಸ್ಟೆಲ್‌ನಲ್ಲಿ ಮೇಘಾಲಯ, ನೇಪಾಳ ಮೂಲದ ವಿದ್ಯಾರ್ಥಿಗಳು ಇದ್ದು, ಅವರಿಗೆ ಹೋಟೆಲ್‌ನಲ್ಲಿ ಉಳಿದ ಆಹಾರ, ಮದುವೆ, ತಿಥಿ, ಸಮಾವೇಶ ಮುಂತಾದ ಕಾರ್ಯಕ್ರಮಗಳಲ್ಲಿ ಮಿಕ್ಕಿದ ಆಹಾರವನ್ನು ತರಿಸಿ ಕೊಡಲಾಗುತ್ತಿತ್ತು ಎಂಬುದಾಗಿತ್ತು.
ಸಾಮಾನ್ಯವಾಗಿ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ವ್ಯರ್ಥ ಮಾಡುವ ಬದಲು ಅನಾಥಾಶ್ರಮ, ವೃದ್ದಾಶ್ರಮಗಳಿಗೆ, ಬಡ ಮಕ್ಕಳ ಹಾಸ್ಟೆಲ್‌ಗಳಿಗೆ ಕಳಿಸಿಕೊಡುವುದು ರೂಢಿಯಲ್ಲಿದೆ. ಆದರೆ, ಹೀಗೆ ಪೂರೈಸಲಾಗುವ ಆಹಾರ ತಾಜಾ ಇರುವುದಿಲ್ಲ. ಅದರಲ್ಲೂ ಬೇಸಿಗೆಯಲ್ಲಿ ಬೇಯಿಸಿದ ಆಹಾರ ಬಹಳ ಬೇಗನೆ ಕೆಡುತ್ತದೆ. ಹೀಗೆ ಉಳಿಕಯಾದ, ಹಳಸಿದ ಆಹಾರ ತಿಂದು ಅಸ್ವಸ್ಥರಾದ, ಪ್ರಾಣ ಕಳೆದುಕೊಂಡ ಹಲವು ಉದಾಹರಣೆಗಳು ಇವೆ. ಹಾಗೆಯೇ ಸ್ಥಳೀಯರು ಹೇಳುವ ಪ್ರಕಾರ ಈ ಸಂಸ್ಥೆ ನಡೆಸುವ ಹಾಸ್ಟೆಲ್ ಇಂತಹ ಆಹಾರವನ್ನೇ ಅವಲಂಬಿಸಿತ್ತು. ಇದಕ್ಕೆ ಸಾಕ್ಷಿಯಾಗಿ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಹಂಚಿಕೊಂಡ ಪೋಸ್ಟರ್ ಒಂದು ಈ ದಿನ.ಕಾಂಗೆ ಲಭ್ಯವಾಗಿದೆ.
ಮಳವಳ್ಳಿಯ ಗೋಕುಲ ವಿದ್ಯಾಸಂಸ್ಥೆಯ ಮುಖ್ಯಸ್ಥ ಲಂಕೇಶ್ ಅವರು, ಸಮಾರಂಭಗಳಲ್ಲಿ ಉಳಿದ ಆಹಾರ ತಮ್ಮ ಸೇವಾಶ್ರಮಕ್ಕೆ ತಲುಪಿಸಿ ಎಂದು ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು.

ಲಂಕೇಶ್ ಅವರು ತಮ್ಮ ಸಂಸ್ಥೆಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ “ಗೋಕುಲ ವಿದ್ಯಾಸಂಸ್ಥೆ ಹಾಗೂ ಗೋಕುಲ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ ಗೋಕುಲ ಸೇವಾಶ್ರಮ ನಡೆಸುತ್ತಿದ್ದು ಇಲ್ಲಿ ಇಪ್ಪತ್ತಕ್ಕೂ ಹೆಚ್ಚು ಅನಾಥ, ನಿರ್ಗತಿಕ ಮತ್ತು ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಹಾಗೂ ಪೋಷಣೆ ಮಾಡುತ್ತಿದ್ದು, ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಊಟ ಉಳಿದರೆ ಅದನ್ನು ಚೆಲ್ಲದೇ ದಯಮಾಡಿ ಆಶ್ರಮಕ್ಕೆ ತಲುಪಿಸಿಕೊಟ್ಟಲ್ಲಿ ಇಲ್ಲಿರುವ ಮಕ್ಕಳಿಗೆ ಅನುಕೂಲವಾಗುತ್ತದೆ” ಎಂದು ಉಲ್ಲೇಖಿಸಲಾಗಿದೆ. ಸಂಪರ್ಕಿಸಲು ಆರು ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದೆ.
ಸೇವಾಶ್ರಮ ನಡೆಸುತ್ತಿದ್ದೇವೆ, ಅನಾಥ ಮಕ್ಕಳಿಗೆ ಉಚಿತ ಆಶ್ರಯ-ಶಿಕ್ಷಣ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಸಮಾಜಸೇವೆಯ ಹೆಸರಿನಲ್ಲಿ ದೇಣಿಗೆ ಎತ್ತುವ ದಂಧೆಗೆ ಇಳಿದಿದ್ದರೇ ಎಂಬ ಅನುಮಾನ ಬರುತ್ತಿದೆ. ಯಾಕೆಂದರೆ ಹಾಸ್ಟೆಲ್ ನಡೆಸಲು ಲಂಕೇಶ್ ಅನುಮತಿಯನ್ನೇ ಪಡೆದಿಲ್ಲ.
ಈ ಬಗ್ಗೆ ಮಳವಳ್ಳಿ ತಾಲ್ಲೂಕು ಶಿಕ್ಷಣಾಧಿಕಾರಿ ಶ್ರೀನಿವಾಸ್ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಗೋಕುಲ ವಿದ್ಯಾಸಂಸ್ಥೆಯವರಿಗೆ ಶಾಲೆ ನಡೆಸಲಷ್ಟೇ ಅನುಮತಿ ನೀಡಲಾಗಿತ್ತು. ಹಾಸ್ಟೆಲ್‌ಗೆ ಅನುಮತಿ ನೀಡಿರಲಿಲ್ಲ. ಆದರೂ ಏಳು ವರ್ಷಗಳಿಂದ ಹಾಸ್ಟೆಲ್ ನಡೆಸಲಾಗುತ್ತಿದೆ ಎಂಬುದು ಈ ಘಟನೆ ನಡೆದ ನಂತರ ಗೊತ್ತಾಗಿದೆ. ಆದರೆ ಶಾಲೆ ಇರುವ ಪ್ರದೇಶ ನೋಡಿದರೆ ಶಾಲೆಗೂ ಪರವಾನಗಿಯೂ ಕೊಡುವಂತಿಲ್ಲ. ಅಷ್ಟು ಕೆಟ್ಟದಾಗಿದೆ. ಊರ ಹೊರಗೆ ಮದನಮೋಹನ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಈ ಶಾಲೆ ಇದೆ. ಅಲ್ಲಿ ಏನು ನಡೆದರೂ ಯಾರಿಗೂ ಗೊತ್ತಾಗುವ ಪರಿಸ್ಥಿತಿ ಇಲ್ಲ. ಇನ್ನು ಬೇರೆ ರಾಜ್ಯದ ಮಕ್ಕಳು ಈ ಶಾಲೆಗೆ ಹೇಗೆ ಬಂದರು ಎಂಬುದಕ್ಕೆ ಮಕ್ಕಳ ಹಕ್ಕುಗಳ ಆಯೋಗವೇ ಉತ್ತರ ಕೊಡಬೇಕು” ಎಂದರು.

ಈ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ ನಾಗಣ್ಣ ಗೌಡ ಅವರನ್ನು ಸಂಪರ್ಕಿಸಲಾಯಿತು. ಈ ದಿನದ ಜೊತೆಗೆ ಮಾತನಾಡಿದ ಅವರು, “ಈಗಾಗಲೇ ಗೋಕುಲ ವಿದ್ಯಾಸಂಸ್ಥೆ ಮತ್ತು ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ಮಂಡ್ಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇನೆ. ಗೋಕುಲ ವಿದ್ಯಾಸಂಸ್ಥೆಗೆ ಎಂಟನೇ ತರಗತಿಯವರೆಗೆ ಮಾತ್ರ ಶಾಲೆ ನಡೆಸಲು ಪರವಾನಗಿ ಇದೆ. 9-10ನೇ ತರಗತಿಯ ಮಕ್ಕಳಿಗೆ ಬೇರೆ ಶಾಲೆಯಲ್ಲಿ ಶಿಕ್ಷಣ ಕೊಡಿಸಲಾಗುತ್ತಿತ್ತು. ಹಾಸ್ಟೆಲ್‌ಗೆ ಅನುಮತಿ ಇಲ್ಲ ಎಂದು ತಿಳಿದು ಬಂದಿದೆ. ಬೇರೆ ರಾಜ್ಯದ ಮಕ್ಕಳನ್ನು ಅವರ ಪೋಷಕರೇ ದಾಖಲಿಸಿದ್ದಾರೆ. ಇಲ್ಲಿ ಯಾರು ಕರೆತಂದರು ಎಂಬುದು ಮುಖ್ಯವಲ್ಲ. ಪೋಷಕರ ಅನುಮತಿ ಇದೆಯಾದರೆ ಎಲ್ಲಿ ಬೇಕಾದರೂ ಶಿಕ್ಷಣ ಪಡೆಯಬಹುದು. ರಾಜ್ಯದಾದ್ಯಂತ ಮೇಘಾಲಯದ 900 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರೆಲ್ಲರ ಸಂಪೂರ್ಣ ವಿವರ ಪಡೆಯಲಾಗುವುದು” ಎಂದು ತಿಳಿಸಿದರು.
ಗೋಕುಲ ವಿದ್ಯಾಸಂಸ್ಥೆಯ ಈ ಪ್ರಕರಣವನ್ನು ಸರ್ಕಾರ ಮತ್ತು ಮಕ್ಕಳ ರಕ್ಷಣೆಯ ಹೊಣೆ ಹೊತ್ತ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳು ಮತ್ತು ಸೇವಾಶ್ರಮಗಳ ವಿರುದ್ಧ ಗಂಭೀರವಾದ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.
ಇದನ್ನೂ ಓದಿ ಮಳವಳ್ಳಿಯ ಗೋಕುಲ ಶಾಲೆಗೆ ಮೇಘಾಲಯದಿಂದ ಮಕ್ಕಳನ್ನು ಕರೆತಂದವರು ಆರೆಸ್ಸೆಸ್ ಪ್ರಚಾರಕ ಸೀತಾರಾಂ!

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.