ಮೈಸೂರು ಸ್ಯಾಂಡಲ್ ಮಾರುಕಟ್ಟೆಗೂ ಸವರ್ಣ ಹೆಣ್ಣೇ ಸರಕು; ಇದು ಜಾಹೀರಾತು ಜಗತ್ತಿನ ವಿಕೃತಿ

Date:

Advertisements
ರಾಮನ ಬಣ್ಣ ಕಡುಕಂದು, ರಾವಣನ ಶಯ್ಯಾಗಾರದಲ್ಲಿದ್ದ ಸುಂದರಿಯರ ವರ್ಣ ಕಪ್ಪು, ಮಹಾಭಾರತದ ದ್ರೌಪದಿ, ಸತ್ಯವತಿ, ವ್ಯಾಸ, ಕರ್ಣನ ಬಣ್ಣ ಕಪ್ಪು. ಆಗ ಸೌಂದರ್ಯದ ಪ್ರತೀಕವಾಗಿದ್ದ ಕಪ್ಪು ಈಗ್ಯಾಕೆ ಅಸಹ್ಯಕ್ಕೆ ರೂಪಕವಾಗಿದೆ. ಯಾಕೆ?

ʼಮೈಸೂರು ಸ್ಯಾಂಡಲ್ ಸೋಪ್ʼ ಈ ಹೆಸರೇ ಕನ್ನಡಿಗರಿಗೊಂದು ಹೆಮ್ಮೆಯ ಭಾವ. ನೈಸರ್ಗಿಕ ಶುದ್ಧತೆಯ ಸಂಕೇತದ ಪರಿಕಲ್ಪನೆ ಹಾಗೂ ಜಗತ್ತಿನಾದ್ಯಂತ ಪಸರಿಸಿರುವ ಕರ್ನಾಟಕದ ಸಾಂಸ್ಕೃತಿಕ ಸುಗಂಧ. ಈ ದೇಶೀಯ ಬ್ರಾಂಡ್ಗೆ ರಾಯಭಾರಿಯನ್ನಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ, ಮಾರುಕಟ್ಟೆ ದೃಷ್ಟಿಯಿಂದ ಸಮರ್ಥನೆ ಪಡೆಯಬಹುದು. ಆದರೆ, ಈ ತೀರ್ಮಾನದ ಒಳಗೆ ಎದುರಾಗುವ ದೃಷ್ಟಿಕೋನಗಳು ಬಹಳವೇ ಗಂಭೀರವಾಗಿವೆ. ಅದು ಗ್ಲಾಮರ್ ಆಧಾರಿತ ಮಾರಾಟದ ತಂತ್ರವಷ್ಟೇ ಅಲ್ಲ; ಅದು ಮಹಿಳೆಯರನ್ನು ‘ಜಾಹೀರಾತಿಗಾಗಿ ಬಳಸುವ ಸರಕಿನ ಮುಖ’ವನ್ನಾಗಿ ಪರಿಗಣಿಸುವ ಸಮಾಜದ ಪುರುಷ ಪ್ರಧಾನ ನೋಟವನ್ನೂ ಪ್ರತಿಬಿಂಬಿಸುತ್ತದೆ.

ಅದು, ʼಮಹಿಳೆಯರು ಗೃಹಬಳಕೆಯ, ಸೌಂದರ್ಯದ ಹಾಗೂ ಶುದ್ಧತೆಯ ಸಂಕೇತʼ ಎಂಬ ನಿರಾಧಾರ ಕಲ್ಪನೆಗೆ ಪೋಷಣೆಯೋ? ಅಥವಾ ಮಹಿಳೆಯ ಮುಖಕ್ಕೆ ಬ್ರಾಂಡ್ಗಿಂತ ಹೆಚ್ಚು ಆಕರ್ಷಣೆ ಸಿಗುತ್ತೆ ಎಂಬ ನಂಬಿಕೆಯೋ? ಪ್ರತಿಯೊಂದು ಜಾಹೀರಾತು ತಾತ್ವಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಒಂದು ಸಂದೇಶ ಹೊತ್ತಿರುತ್ತದೆ. ಅದು ಕೇವಲ ಉತ್ಪನ್ನವನ್ನು ಮಾರಲು ನಿರ್ಮಿಸಲಾದ ಚಿತ್ರಣವಲ್ಲ. ಅದರ ಹಿಂದೆ ಸಮಾಜದ ನೋಟ, ಲಿಂಗಪರಮಾನ್ಯತೆ, ಮೌಲ್ಯಮಾಪನಗಳ ಮೌನ ಪ್ರತಿಧ್ವನಿಗಳೂ ಇರುತ್ತವೆ. ಹಾಗಾಗಿಯೇ, ಕರ್ನಾಟಕ ಸರ್ಕಾರ ಮೈಸೂರಿನ ಸ್ಯಾಂಡಲ್ ಸೋಪಿಗಾಗಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ ಸುದ್ದಿ, ಕೇವಲ “ಸಾಬೂನು ಜಾಹೀರಾತು” ಎಂದುಕೊಂಡು ಸುಮ್ಮನೆ ಬಿಡಲಾಗದು.

WhatsApp Image 2025 05 27 at 12.31.18 PM

ದಶಕಗಳ ಹಿಂದೆಯೂ ನಾವು ನೋಡಿದ್ದೇವೆ. ಶಾಂಪೂ ಆಗಲಿ, ವಾಶಿಂಗ್ ಪೌಡರ್ ಆಗಲಿ, ಆರೋಗ್ಯದ ಉತ್ಪನ್ನವಾಗಲೀ, ಸೌಂದರ್ಯವರ್ಧಕವಾಗಲೀ ಅಥವಾ ಸ್ನಾನದ ಸಾಬೂನುಗಳಾದರೂ ಸರಿ… ಜಾಹೀರಾತಿನಲ್ಲಿ ಮಹಿಳೆಯೇ ಮುಖ್ಯ ಪಾತ್ರಧಾರಿಯಾಗಿ ಕಾಣಿಸುತ್ತಾಳೆ. ಬಿಳಿ ಚರ್ಮ, ಹೊಳೆಯುವ ಕೂದಲು, ಆಕರ್ಷಕ ನಗೆಯ ಯುವತಿಯೊಬ್ಬಳು, “ನಾನು ಈ ಉತ್ಪನ್ನ ಬಳಸ್ತೀನಿ… ನೀವೂ ಬಳಸಿ” ಎನ್ನುವ ಇಂಗಿತ. ಈ ದೃಶ್ಯವನ್ನೇ ವಿವಿಧ ರೂಪಗಳಲ್ಲಿ ಇಂದಿಗೂ ನೋಡುತ್ತಲೇ ಇದ್ದೇವೆ.

Advertisements

ನೆನಪಿರಬಹುದು ಹಸಿರು ಬಣ್ಣದ ಲಿರಿಲ್‌ ಸೋಪಿನ ಜಾಹೀರಾತು. ಬಿಕಿನಿ ಹಾಕಿದ ಹೆಣ್ಣುಮಗಳೊಬ್ಬಳು ಜಲಪಾತದಿಂದ ಜಿಗಿದು, ನೀರೊಳಗೆ ಇಳಿದು ಮಹೋನ್ನತ ತಾಜಾತನವನ್ನು ಅನುಭವಿಸುವ ಜಾಹೀರಾತದು. ಬಿಳಿ ತ್ವಚೆಯ ಹೆಣ್ಣಿನ ದೇಹವನ್ನು ಬಳಸಿ ಪುರುಷ ವರ್ಗವನ್ನು ಆಕರ್ಷಿಸುವ ಜಾಲ(ಜಾಹೀರಾತು)ವೇ ಆಗಿತ್ತದು. ‘ಶುದ್ಧತೆ’ ಮತ್ತು ‘ತಾಜಾತನ’ದ ಸಂಕೇತವಾಗಿ ಹೆಣ್ಣನ್ನು ಬಳಸಲಾಗಿದೆ ಎಂದು ಸಮರ್ಥಿಸಿಕೊಳ್ಳಬಹುದಾದರೂ ಕನಿಷ್ಠ ಉಡುಪು, ನೀರಿನಲ್ಲಿ ತೇಲುವ ಹಸಿ ನೃತ್ಯವನ್ನು ‘ಆಕರ್ಷಣೆಯ’ ಮಾಧ್ಯಮವನ್ನಾಗಿ ಮಾಡಲಾಗಿತ್ತು. ದಿನ ಕಳೆದಂತೆ ಅದು ಆಧುನಿಕತೆಗೆ ತಕ್ಕಂತೆ ನವೀಕರಣಗೊಂಡಿತು. ಸರಕು ಮಾತ್ರ ಬಿಳಿ ಚರ್ಮದ ಹೆಣ್ಣೇ ಆಗಿತ್ತು.

WhatsApp Image 2025 05 27 at 11.10.49 AM

“ಫೇರ್ ಅಂಡ್ ಲವ್ಲಿ” ಈ ಹೆಸರನ್ನು ಕೇಳಿದರೂ ಸಾಕು, ಬಹುತೇಕ ಭಾರತೀಯರ ಮಗುಚಿಕೊಂಡ ಆತ್ಮವಿಶ್ವಾಸ, ಸಾಮಾಜಿಕ ತಾತ್ವಿಕತೆ ಮತ್ತು ತ್ವಚೆ ಬಣ್ಣದ ಕುರಿತ ಜಿಜ್ಞಾಸೆ ನೆನಪಿಗೆ ಬರುತ್ತದೆ. ಇದು ಕೇವಲ ಕ್ರೀಮ್ ಅಲ್ಲ, ಭಾರತೀಯ ಮನಸ್ಸಿನ ಮೇಲೆ ನಡೆದ ಬಹು ದೊಡ್ಡ ಮಟ್ಟದ ಮನೋವೈಜ್ಞಾನಿಕ ಪಲ್ಲಟ.

1975ರ ಬಳಿಕ ‘ಫೇರ್ ಅಂಡ್ ಲವ್ಲಿ’ ತನ್ನ ಮೊದಲ ಉತ್ಪನ್ನವನ್ನು ಪರಿಚಯಿಸಿತು. ನಂತರದ ಮೂರು ದಶಕಗಳಲ್ಲಿ ಈ ಉತ್ಪನ್ನ ಸುಂದರತೆಯ ಸಮಾನಾರ್ಥಿಯಾಗಿ “ಬಿಳುಪು” ಎಂಬ ಕಲ್ಪನೆಯನ್ನು ಹೇರತೊಡಗಿತು. ಕಪ್ಪು ಮೈಬಣ್ಣ ವೈಫಲ್ಯ, ಬಿಳುಪು ಯಶಸ್ಸು ಎಂಬಿತ್ಯಾದಿ ಸಂದೇಶಗಳನ್ನು ವಿಶ್ಲೇಷಣಾ ರಹಿತವಾಗಿ ಬಿತ್ತಿತು. ಸಮಾಜದ ಭೇದಭಾವಗಳನ್ನು “ಆತ್ಮವಿಶ್ವಾಸ ಹೆಚ್ಚಿಸುವ” ಹೆಸರಿನಲ್ಲಿ ಮತ್ತಷ್ಟು ಗಾಢಗೊಳಿಸಿತು. ಲಕ್ಸ್‌, ಸಂತೂರ್‌, ಸ್ಪಿನ್ಸ್‌ ಟಾಲ್ಕ್ ಸೇರಿದಂತೆ ಶೇ.99 ರಷ್ಟು ಸೌಂದರ್ಯವರ್ಧಕಗಳನ್ನು ಜಾಹೀರಾತುಗೊಳಿಸುವ ಆಡ್ ಕಂಪನಿಯಗಳ ಕಥೆಯೂ ಅದೇ.

WhatsApp Image 2025 05 27 at 11.00.26 AM

ಬಣ್ಣವೆಂದರೆ ಕೇವಲ ಶರೀರದ ಮೇಲಿನ ಒಂದು ವೈಶಿಷ್ಟ್ಯ. ಆದರೆ ನಮ್ಮ ಸಮಾಜದಲ್ಲಿ ಅದು ವ್ಯಕ್ತಿಯ ಮೌಲ್ಯವನ್ನು ನಿರ್ಧರಿಸುವ ಮಾನದಂಡವಾಗಿ ಬದಲಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. “ಬಿಳುಪೆಂದರೆ ಶ್ರೇಷ್ಠ, ಕಪ್ಪೆಂದರೆ ಕನಿಷ್ಠ” ಎನ್ನುವ ಈ ಪೂರ್ವಗ್ರಹವು ಇಂದು-ನಿನ್ನೆಯದಲ್ಲ. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲದಲ್ಲಿ, ಅವರ ಬಿಳಿಚರ್ಮ ಭಾರತೀಯರಲ್ಲಿ ಒಂದು “ಉನ್ನತತನ”ದ ಭಾವನೆ ಉಂಟುಮಾಡಿತ್ತು. ಗೋಧಿ, ಕಂದು, ಕಡುಕಂದು ಬಣ್ಣದ ಭಾರತೀಯರು ತಮ್ಮನ್ನು ತಾವು ಕೀಳು ಎಂದು ತೋಚಿಕೊಳ್ಳಲಾರಂಭಿಸಿದರು. ಅವರು ತಾವು ಬಿಳುಪಾಗಬೇಕೆಂದೂ, ಆಂಗ್ಲ ಶೈಲಿಗೆ ಹೊಂದಿಕೊಳ್ಳಬೇಕೆಂದೂ ಬಯಸಲಾರಂಭಿಸಿದರು.

ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ದಾಸ್ಯವ್ಯವಸ್ಥೆ ಇದ್ದದ್ದು ನಮಗೆ ತಿಳಿದಿರುವ ವಿಷಯವೆ. ಈ ವ್ಯವಸ್ಥೆಯಲ್ಲಿ ಹೆಚ್ಚಾಗಿ ಕಪ್ಪು, ಕಡುಕಂದು ಚರ್ಮದ ಜನರನ್ನು ದಾಸರನ್ನಾಗಿ ಬಳಕೆ ಮಾಡಲಾಗುತ್ತಿತ್ತು. ಬಿಳಿ ಚರ್ಮದವರು ಮಾಲೀಕರಾಗಿ ಇದ್ದರು. ಈ ಚಿತ್ರಣ ಬಿಳುಪು ಶಕ್ತಿಯ ಸಂಕೇತ, ಕಪ್ಪು ಅಧೀನತೆಯ ಸಂಕೇತ ಎನ್ನುವ ಮನೋಭಾವ ಕಾಲಕ್ರಮೇಣ ಸಮಾಜದೊಳಗೆ ಹೊಕ್ಕಿಕೊಂಡಿತು.

ಅಷ್ಟೇ ಅಲ್ಲದೆ, ಕೆಲವು ಧಾರ್ಮಿಕ ಆಚರಣೆಗಳಲ್ಲಿಯೂ ಬಿಳುಪು “ಪವಿತ್ರ” ಎಂದು ಬಿಂಬಿಸಲಾಗಿದೆ. ಉದಾಹರಣೆಗೆ – ಪಂಡಿತರ ಬಟ್ಟೆ ಬಿಳಿ, ಮದುವೆಯಲ್ಲಿ ವಧುವಿಗೆ ಬಿಳಿ-ಬಂಗಾರದ ಉಡುಪು, ಮಡಿದವರ ಶ್ರಾದ್ಧ ಕ್ರಿಯೆಗೂ ಬಿಳಿ ಉಡುಪು ಬಳಸುವುದು. ಇದಕ್ಕೆ ವಿರುದ್ಧವಾಗಿ, ಕಪ್ಪು ಬಣ್ಣವನ್ನು ಹಲವಾರು ಬಾರಿ ದುಷ್ಟ ಶಕ್ತಿ ಅಥವಾ ದುಃಖದ ಸಂಕೇತವಾಗಿ ಬಳಸಲಾಯಿತು.

ʼಕಪ್ಪುʼ ಎಂಬುದಕ್ಕೆ ಕೃಷ್ಣ, ಕಡು ನೀಲಿ, ಕತ್ತಲೆ, ದುಷ್ಟ, ಕೃಷ್ಣಮೃಗ, ಕೋಗಿಲೆ ಎಂಬಿತ್ಯಾದಿ ಅರ್ಥಗಳನ್ನು ಉಲ್ಲೇಖಿಸುತ್ತದೆ 1890ರ ಆಪ್ಟೆ ಸಂಸ್ಕೃತ ನಿಘಂಟು. ರಾಮ, ಕೃಷ್ಣ, ಮೋಹಿನಿ ಎಂಬ ಕೃಷ್ಣನ ಮೂರು ಅವತಾರಗಳ ಬಣ್ಣವೂ ಕಪ್ಪು/ಕಡುನೀಲಿ. ಈ ಮೂರು ಅವತಾರಗಳ, ಕಪ್ಪಿನ ಸೌಂದರ್ಯವನ್ನು ಪುರಾಣಗಳು, ಭಾಗವತಗಳು ಕೊಂಡಾಡಿವೆ.

ರಾಮನ ಬಣ್ಣ ಕಡುಕಂದು ಹಾಗೂ ಕಣ್ಣುಗಳು ಕೆಂಪು, ರಾವಣನ ಶಯ್ಯಾಗಾರದಲ್ಲಿರುತ್ತಿದ್ದ ಸುಂದರಿಯರ ವರ್ಣ ಕಪ್ಪು, ಮಹಾಭಾರತದ ದ್ರೌಪದಿ, ಸತ್ಯವತಿ, ವ್ಯಾಸ, ಕರ್ಣ ಕಪ್ಪು ಬಣ್ಣದವರು ಎಂದು ವಾಲ್ಮೀಕಿ ರಾಮಾಯಣದ ʼಸುಂದರಕಾಂಡʼ ಭಾಗದಲ್ಲಿ ಹನುಮಂತ ವರ್ಣಿಸುತ್ತಾರೆ. ಆಗ ಸೌಂದರ್ಯದ ಪ್ರತೀಕವಾಗಿದ್ದ ಕಪ್ಪು ಈಗ್ಯಾಕೆ ಅಸಹ್ಯಕ್ಕೆ ರೂಪಕವಾಗಿದೆ ಎಂದು ತಿಳಿಯಬೇಕಾಗಿದೆ.

ಇದಕ್ಕೆ ಕಾರಣಗಳು ಹಲವಿರಬಹುದು. ಅವುಗಳಲ್ಲಿ ರಾಜ ರವಿವರ್ಮನ ತೈಲ ಚಿತ್ರಗಳ ಪ್ರಭಾವವೂ ಇರಬಹುದೆಂಬುದನ್ನು ತಳ್ಳಿಹಾಕುವಂತಿಲ್ಲ. ಕಾರಣ, ರವಿವರ್ಮರ ಜನಪ್ರಿಯ ಚಿತ್ರಗಳಲ್ಲಿನ ಪುರಾಣಗಳ ಪಾತ್ರಗಳನ್ನು ಗೌರವರ್ಣದಲ್ಲಿಯೇ (ಬಿಳಿ) ಚಿತ್ರಿಸಲಾಗಿದೆ. ಅಲ್ಲದೇ 80ರ ದಶಕದಲ್ಲಿ ಪ್ರತಿ ಮನೆ ತಲುಪಿದ್ದ ರಮಾನಂದ ಸಾಗರ ಹಾಗೂ ಬಿ ಆರ್ ಚೋಪ್ರಾ ಅವರ ರಾಮಾಯಣ ಮತ್ತು ಮಹಾಭಾರತ ಎಂಬ ಟಿವಿ ಧಾರಾವಾಹಿಗಳು ಪ್ರಸಾರ ಮಾಡಿದ್ದು ಇದೇ ಮಿಥ್ಯೆಯನ್ನೇ.

WhatsApp Image 2025 05 27 at 12.25.09 PM

ಈ ವಿಚಾರದಲ್ಲಿ ಸಿನಿಮಾಗಳು ಬೀರಿರುವ ಪ್ರಭಾವವೂ ಇದೇ. ಚಿತ್ರದ ನಾಯಕಿ ಎಂದರೆ ಸಪೂರ ದೇಹಾಕೃತಿ, ಬಿಳಿ ಮೈಬಣ್ಣ ಇವೇ ಕ್ರೈಟೀರಿಯಾ. ಇಲ್ಲಿ ಪ್ರತಿಭೆ, ಕಥೆಯ ತೂಕ ಎಲ್ಲವೂ ನಗಣ್ಯ. ಇಂಥದ್ದೊಂದು ಪೂರ್ವಗ್ರಹ ತಡೆಗೋಡೆಯನ್ನು ಕನ್ನಡದಲ್ಲಿ ಒಡೆದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಅವರ ಬಹುತೇಕ ಚಿತ್ರಗಳು ಮಹಿಳಾ ಪ್ರಧಾನವಾದವು. ಆ ಕಾಲಕ್ಕೆ ಪದ್ಮಾ ವಾಸಂತಿ, ಮಂಜುಳಾ, ಕಲ್ಪನಾ, ಆರತಿಯಂತಹವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡು ಗೆದ್ದಿದ್ದರು. ಬಿಳಿ ಮೈಬಣ್ಣದ ನಾಯಕಿಯೇ ಬೇಕು ಎನ್ನುವಂತಿದ್ದ ಕಾಲದಲ್ಲಿ ಕೃಷ್ಣ ಸುಂದರಿಯರನ್ನು ತೆರೆ ಮೇಲೆ ತಂದು ಪುಟ್ಟಣ್ಣ ಗೆದ್ದಿದ್ದರು. ಆದರೆ, ಮುಂದೆ ಅವರು ಹಾಕಿಕೊಟ್ಟ ದಾರಿಯಲ್ಲಿ ಯಾಕೋ ಯಾರೂ ಸಾಗಲೇ ಇಲ್ಲ. ಮತ್ತದೇ ಹಳೆ ಕಥೆಗೆ ಜೋತುಬಿದ್ದರು.

ಈ ಪ್ರಭಾವಗಳಿಂದ ಬಿಳಿ ಎಂಬುದನ್ನು ಶ್ರೇಷ್ಠವೆಂದುಕೊಳ್ಳುವ ಮನಸ್ಥಿತಿ ಹಬ್ಬಿ ನಿಂತಿದೆ. ಅದೇ ಪೂರ್ವಗ್ರಹದಿಂದ ಹಾಲಿನಂತೆ ಹೊಳಪುಳ್ಳ ಮೈಬಣ್ಣವಿರುವ ಹೆಣ್ಣು ಮಕ್ಕಳನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಾಗುತ್ತದೆ.

ಈ ಹೊತ್ತಿನಲ್ಲಿ ಲಿಂಗ ಪರಿಕಲ್ಪನೆಗಳು ಹೇಗೆ ಜಾಹೀರಾತು ಹಾಗೂ ಸಾಮಾಜಿಕ ಮಟ್ಟದಲ್ಲಿ ನಿರಂತರವಾಗಿ ಪುನರುತ್ಪತ್ತಿ ಹೊಂದುತ್ತಿವೆ ಎಂಬುದನ್ನು ಪುನರ್‌ ಮನನ ಮಾಡಬೇಕಾಗಿದೆ. ಮಹಿಳೆಯ ಶರೀರ ಅಥವಾ ಮುಖವನ್ನ ಉಪಯೋಗಿಸುವ ಜಾಹೀರಾತುಗಳು ಸಾಂಸ್ಕೃತಿಕವಾಗಿ ಅಷ್ಟು ಸೂಕ್ತವಲ್ಲ ಎಂಬ ಇಂಗಿತವನ್ನ ಹೊಂದಿರುತ್ತದೆ. ಅದು ಪುರುಷನ ಕಣ್ಣಿನ ಮೆಚ್ಚುಗೆಗೆ ಮೀಸಲಾಗಿರುವ ‘ಗ್ಲಾಮರ್’ ಎಂಬ ತಾತ್ವಿಕ ಸಂಕಲನಕ್ಕೆ ಮಹಿಳೆಯನ್ನ ಸರಬರಾಜು ಸರದಿಯಲ್ಲಿ ನಿಲ್ಲಿಸುತ್ತದೆ.
ಅಂತೆಯೇ, ಈ ಪ್ರಕ್ರಿಯೆಯು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಳೆಯುವ ದಾರಿ ಮಾಡಿಕೊಡುತ್ತದೆ. ತಮಿಳುನಾಡಿನಲ್ಲಿ ಸ್ಥಳೀಯ ನಟಿಯು ‘ಕಾವೇರಿ ನೀರಿನ ಸಂರಕ್ಷಣಾ’ ಅಭಿಯಾನಕ್ಕೆ ಮುಖವಾಗಿರುವುದು, ಅಥವಾ ಕೇರಳದಲ್ಲಿ ಆಯುರ್ವೇದ ಉತ್ಪನ್ನಗಳಿಗಾಗಿ ಸ್ಥಳೀಯ ವೈದ್ಯರು ಮತ್ತು ಸಾಂಪ್ರದಾಯಿಕ ತಜ್ಞರನ್ನು ಬಳಸಿದ ಉದಾಹರಣೆಗಳಿವೆ. ಆದರೆ ನಮ್ಮಲ್ಲಿ ಮಾರುಕಟ್ಟೆಗೇ ಮಣಿದು, ಸ್ಥಳೀಯತೆಯ ಮೂಲಾತ್ಮವನ್ನು ತ್ಯಜಿಸಲಾಗುತ್ತಿದೆ ಎನ್ನಬಹುದು.

ಇಂದಿಗೆ ಮಹಿಳೆಯರು ವಿಜ್ಞಾನ, ಸಾಹಿತ್ಯ, ಗ್ರಾಮೀಣ ಉದ್ಯಮ, ಪರಿಸರ ಸಂರಕ್ಷಣೆ, ನೈತಿಕತೆ, ಶಿಕ್ಷಣ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವ ಬೀರುತ್ತಿದ್ದಾರೆ. ಇಂತಹ ಮಹಿಳೆಯರು ಈ ಸಂಸ್ಥೆಯ ರಾಯಭಾರಿಗಳಾಗಿ ಇದ್ದಿದ್ದರೆ ಒಂದು ಮೌಲ್ಯಬದ್ಧ, ನೈಜ ಪ್ರಾತಿನಿಧ್ಯ ನೀಡಿದಂತಾಗುತ್ತಿತ್ತು. ಆದರೆ ನಮ್ಮ ಆಂತರಿಕ ಜೀವಪರ ಮೌಲ್ಯಗಳನ್ನು ಬಿಟ್ಟು, ಮಾಧ್ಯಮಮುಖಿಯಾಗಿರುವ ಆಕರ್ಷಕ ಮುಖಗಳನ್ನು ಆಯ್ಕೆಮಾಡುವುದು, ನಮ್ಮ ರಾಜಕೀಯ-ಸಾಂಸ್ಕೃತಿಕ ಶ್ರದ್ಧೆಗಳ ಮೇಲೆಯೇ ಪ್ರಶ್ನೆ ಎಬ್ಬಿಸುತ್ತದೆ.

ಇದನ್ನೂ ಓದಿ: ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು

ಪ್ರತಿಯೊಂದು ಜಾಹೀರಾತಿನ ಹಿಂದೆ ಅದರದ್ದೇ ಆದ ಮಾರುಕಟ್ಟೆ ತಂತ್ರ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ, ಬಹುತೇಕ ಜಾಹೀರಾತುಗಳು ಮಾಡುವ ಕೆಲಸಗಳು, ಮಹಿಳೆಯ ಸೌಂದರ್ಯವನ್ನ ವಾಣಿಜ್ಯಗೊಳಿಸುವ, ಸ್ಥಳೀಯತೆಯನ್ನು ಪಾಶ್ಚಾತ್ಯ ಬೆಡಗಿಗೆ ತೊಡಗಿಸುವ ಹಾಗೂ ನೈಜ ಸಾಂಸ್ಕೃತಿಕ ಪ್ರತಿನಿಧಿತ್ವವನ್ನ ಬಲಿಗೊಡುವ ಪ್ರವೃತ್ತಿಯ ಭಾಗಗಳೇ ಆಗಿರುತ್ತವೆ. ಇದು ಲಿಂಗ ಸಮಾನತೆ ಮತ್ತು ನೈತಿಕ ಜವಾಬ್ದಾರಿ ಎನ್ನುವುದು ಕೇವಲ ಸಾರ್ವಜನಿಕ ಭಾಷಣ, ಕಥೆ-ಕವನ ಪುಸ್ತಕಗಳಿಗಷ್ಟೇ ಸೀಮಿತವಾಗಿದೆಯೇ ಎನಿಸಿಬಿಡುತ್ತದೆ.

ನೂರು ವರ್ಷಗಳಷ್ಟು ದೀರ್ಘ ಕನ್ನಡ ಪರಂಪರೆಯಿರುವ ಈ ಸಾಬೂನಿಗೆ ಕನ್ನಡ ಭಾಷೆಯ, ಸ್ಥಳೀಯ ಕಲಾವಿದರು, ಪರಿಸರ ಹಿತಚಿಂತಕರು ಅಥವಾ ಸುಗಂಧದ್ರವ್ಯಗಳ ತಜ್ಞರನ್ನು ರಾಯಭಾರಿಗಳಾಗಿಸಬಹುದಾಗಿತ್ತು ಎನ್ನುವ ಕೂಗು ಅತಿಯಾಗಲಾರದೇನೋ?

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X