ಅಧಿವೇಶನದಲ್ಲಿ ಆಗಬೇಕಾದ್ದೇನು | ಏಳು ವರ್ಷಗಳಾದರೂ ಜಾರಿಯಾಗದ ʼಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ’ ವರದಿ

Date:

Advertisements

2016ರಲ್ಲಿ ಕಾಂಗ್ರೆಸ್‌ ಸರ್ಕಾರ ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ ಎಸ್‌ ಜಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ‘ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ’ ರಚನೆ ಮಾಡಿತ್ತು. ಆ ಸಮಿತಿ 2017ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ 21 ಶಿಫಾರಸುಗಳನ್ನು ಮಾಡಲಾಗಿದೆ. ಅದಾಗಿ ಏಳು ವರ್ಷಗಳಾಗಿವೆ. ಇದುವರೆಗೆ ವರದಿಯನ್ನು ಚರ್ಚೆಗೇ ಇಟ್ಟಿಲ್ಲ. ಕನಿಷ್ಠ ವರದಿಯ ಶಿಫಾರಸುಗಳಲ್ಲಿ ಕೆಲವನ್ನಾದರೂ ಜಾರಿ ಮಾಡಿದ್ದರೆ ಸರ್ಕಾರಿ ಶಾಲೆಗಳಿಗೆ ಈ ದುರ್ಗತಿ ಬರುತ್ತಿರಲಿಲ್ಲ.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉದ್ದಾರ ಮಾಡುವ ಬಗ್ಗೆ ಎಲ್ಲ ಸರ್ಕಾರಗಳೂ ಘೋಷಣೆಗಳನ್ನು ಮಾಡುತ್ತಿರುತ್ತವೆ. ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದು, ಒಂದಷ್ಟು ಹೊಸ ಯೋಜನೆಗಳನ್ನು ಘೋಷಿಸೋದು ಮಾಮೂಲಿ. ಕಡೆಗೆ ಅದರ ಫಲಶ್ರುತಿ ಏನು ಎಂದು ನೋಡಿದರೆ ಶೂನ್ಯ. ನಂತರ ಬರೋದು ‘ಮಕ್ಕಳ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿ ಇನ್ನಷ್ಟು ಶಾಲೆಗಳು, ಚಾವಣಿ ಕುಸಿದು ಮಕ್ಕಳಿಗೆ ಗಾಯ, ಶಾಲೆ ಕುಸಿಯುವ ಭೀತಿ; ಮರದಡಿಯಲ್ಲೇ ಪಾಠ, ಮಳೆಗೆ ಶಾಲಾ ಗೋಡೆ ಕುಸಿತ, ಶಿಕ್ಷಕರ ಕೊರತೆ…’ ಇವೇ ಮಾಮೂಲಿ ಸುದ್ದಿಗಳು. ಯಾವ ಸರ್ಕಾರ, ಸಚಿವರು ಬಂದರೂ ಕನಿಷ್ಠ ಶಾಲೆ ಶುರುವಾಗುವಾಗ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಮಾಡುವಲ್ಲಿಯೂ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಅದಕ್ಕಿಂತಲೂ ವಿಷಾದಕರ ಸಂಗತಿಯೆಂದರೆ ಸರ್ಕಾರಗಳು ಬಹಳ ಮುತುವರ್ಜಿಯ ʼಪ್ರದರ್ಶನʼ ಮಾಡಿ ಶಿಕ್ಷಣ ತಜ್ಞರ ಸಮಿತಿಯಿಂದ ವರದಿ ತರಿಸಿಕೊಂಡು ನಂತರ ಕವಾಟಿನೊಳಗೆ ಇಟ್ಟು ಮರೆತುಬಿಡುತ್ತಿವೆ. ತಜ್ಞರ ಸಮಿತಿಯ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರಗಳ ಈ ನಡೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದೆ. ಅವರ ಕನಸಿಗೆ ಕೊಳ್ಳಿ ಇಡುತ್ತಿದೆ.

Advertisements

ಎಲ್ಲ ರಾಜಕೀಯ ನಾಯಕರೂ ಭ್ರಷ್ಟಾಚಾರ, ಜಾತಿ ರಾಜಕಾರಣ, ಸ್ವಹಿತಾಸಕ್ತಿಯ ರಾಜಕಾರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ವರ್ಷದಲ್ಲಿ ಮೂರು ಬಾರಿ ನಡೆಯುವ ವಿಧಾನಮಂಡಲಗಳ ಅಧಿವೇಶನದಲ್ಲಿ ಭ್ರಷ್ಟಾಚಾರದ ಚರ್ಚೆ, ಕೇವಲ ರಾಜಕೀಯ ಕೆಸರೆರಚಾಟ, ಪ್ರತಿಭಟನೆ, ಆರೋಪ- ಪ್ರತ್ಯಾರೋಪದಲ್ಲಿ ಕಳೆದು ಹೋಗುತ್ತಿದೆ. ಆದರೆ, ನಿಜಕ್ಕೂ ನಮ್ಮ ಪ್ರತಿನಿಧಿಗಳಿಗೆ ಸರ್ಕಾರಿ ಶಾಲೆಗಳು ಉದ್ದಾರವಾಗಬೇಕು, ಅಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ನೈಜ ಕಾಳಜಿ ಇದ್ದಿದ್ದರೆ ಯಾವ ಸಮಿತಿಯ ಶಿಫಾರಸಿನ ಅಗತ್ಯವೂ ಇರುತ್ತಿರಲಿಲ್ಲ.

2016ರಲ್ಲಿ ಕಾಂಗ್ರೆಸ್‌ ಸರ್ಕಾರ ಆಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್‌ ಜಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ರಚನೆ ಮಾಡಿತ್ತು. ಆ ಸಮಿತಿ 2017ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ 21 ಶಿಫಾರಸ್ಸುಗಳನ್ನು ಮಾಡಲಾಗಿದೆ. ಆ ಶಿಫಾರಸಿಗೆ ಸಂಬಂಧಿಸಿದ ವಿವರಣೆಯನ್ನೂ ನೀಡಲಾಗಿದೆ. ಆದರೆ ಅದಾಗಿ ಏಳು ವರ್ಷಗಳಾಗಿವೆ. ಬಿಜೆಪಿ ಸರ್ಕಾರ ಹೋಗಿ ಮತ್ತೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದಿದೆ. ಆ ಸಮಿತಿಯ ಶಿಫಾರಸುಗಳು ಹಾಗೇ ಉಳಿದಿವೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ಈ ವರದಿಯ ಶಿಫಾರಸುಗಳನ್ನು ನೆನಪಿಸುವ ಅಗತ್ಯವಿದೆ.

ಸಮಿತಿಯು ರಾಜ್ಯದ ಹಲವಾರು ಕಡೆ ಕ್ಷೇತ್ರ ಅಧ್ಯಯನ ಮಾಡಿ ಮಾಹಿತಿ ಕಲೆಹಾಕಿತ್ತು. ಅಧ್ಯಯನಕ್ಕೆ ಅಗತ್ಯವಾದ ಪ್ರಶ್ನಾವಳಿಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ನೇರವಾಗಿ ಶಾಲಾ ಪರಿಸ್ಥಿತಿಗಳನ್ನು ಪರಿವೀಕ್ಷಿಸಿತ್ತು. ದಶಕಗಳ ಅನುಭವವುಳ್ಳ ತಜ್ಞರು ಮತ್ತು ಈ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ ಸರ್ಕಾರ ಹಾಗೂ ಸರ್ಕಾರೇತರ ಸಂಘಟನೆಯವರ ಸಲಹೆ ಸೂಚನೆಗಳನ್ನು ಪಡೆದಿತ್ತು. ಹೀಗಾಗಿ ವರದಿಗೆ ಮಾಹಿತಿಗಳನ್ನು ಕ್ಷೇತ್ರಾಧ್ಯಯನ ತಜ್ಞರ ಜೊತೆ ಚರ್ಚೆ ವಿಚಾರ ವಿನಿಮಯ ಪರಿಶೀಲನೆಗಳ ಮೂಲಕ ಸಂಗ್ರಹಿಸಲಾಗಿದೆ. ಇದರ ಜೊತೆಗೆ ಶಿಕ್ಷಣ ಕ್ಷೇತ್ರದ ಉಸ್ತುವಾರಿ ನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಅಂಕಿಅಂಶಗಳನ್ನು ಎಲ್ಲ ಜಿಲ್ಲೆಗಳಿಂದಲೂ ತರಿಸಿಕೊಳ್ಳಲಾಗಿತ್ತು. ವಿಶೇಷವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಜಿಲ್ಲಾ ಪರಿಶೀಲನೆಗೆ ಹೋದಾಗ ಕಡ್ಡಾಯವಾಗಿ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿತ್ತು. ಇದೆಲ್ಲದರ ಸಾರರೂಪದ ಫಲಿತವಾಗಿ ಆ ವರದಿಯನ್ನು ಸಿದ್ಧಪಡಿಸಲಾಗಿತ್ತು. 18 ವರ್ಷದ ಎಲ್ಲಾ ಮಕ್ಕಳು ತಮ್ಮ ಪರಿಸರದಲ್ಲಿಯೇ ಗುಣಾತ್ಮಕ ಆರೈಕೆ, ರಕ್ಷಣೆ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತಹ ಹೊಸ ಶೈಕ್ಷಣಿಕ ವ್ಯವಸ್ಥೆಯನ್ನು ಕುರಿತು ಸಮಗ್ರವಾಗಿ ಈ ವರದಿಯಲ್ಲಿ ಚಿಂತಿಸಲಾಗಿದೆ. ಪ್ರಮುಖವಾಗಿ ಈ ನಾಡಿನ ಎಲ್ಲ ಮಕ್ಕಳು ಸಮಾನ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಭೂತ ಹಕ್ಕನ್ನು ಸಾಕಾರಗೊಳಿಸಬೇಕಿದೆ ಎಂಬುದನ್ನು ವರದಿ ಎತ್ತಿ ಹಿಡಿದಿದೆ. ಈ ವಿಷಯದಲ್ಲಿ ಸರ್ಕಾರ ತ್ವರಿತ ತೀರ್ಮಾನ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರವನ್ನು ಒತ್ತಾಯಿಸಿತ್ತು.

ಸರ್ಕಾರಿ ಶಾಲೆ 13

ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯ ಪ್ರಮುಖ ಶಿಫಾರಸುಗಳು

ಶಿಫಾರಸು-1 ಮಕ್ಕಳ ಜೀವ ರಕ್ಷಣೆಯ ದೃಷ್ಟಿಯಿಂದ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ನಿರಾಳವಾಗಿ ಕಳುಹಿಸುವ ವಾತಾವರಣ ಸೃಷ್ಟಿಯ ಅಗತ್ಯತೆಯಿಂದ, ದುಃಸ್ಥಿತಿಯಲ್ಲಿರುವ ಎಲ್ಲಾ ಶಾಲಾ ಕೊಠಡಿಗಳನ್ನು ತುರ್ತಾಗಿ ನವೀಕರಣಗೊಳಿಸಬೇಕು ಮತ್ತು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ತುರ್ತು ಕ್ರಮ ವಹಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ, ವಿಲೀನ ಮಾಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಮುಚ್ಚಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಪುನಃ ತೆರೆಯಲು ಕ್ರಮ ಕೈಗೊಳ್ಳಬೇಕು.

ಶಿಫಾರಸು-2 ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತಕ್ಷಣ ಪ್ರಾರಂಭಿಸಬೇಕು.

ಶಿಫಾರಸು-3 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕು.

ಶಿಫಾರಸು-4 ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಪ್ರತಿ ಶಾಲೆಗೂ ಕನಿಷ್ಠ ತರಗತಿಗೊಬ್ಬ ಶಿಕ್ಷಕ, ವಿಷಯಕ್ಕೊಬ್ಬ ಶಿಕ್ಷಕರ ನೇಮಕಾತಿಯ ಅಗತ್ಯವಿದೆ. ಮಕ್ಕಳ-ಶಿಕ್ಷಕರ ಆದರ್ಶ ಅನುಪಾತ ಮುಟ್ಟುವವರೆಗೆ ಕನಿಷ್ಠ ವಿಷಯವಾರು ಬೋಧನೆಯ ಪ್ರಮಾಣದ ಅನುಪಾತವನ್ನೂ ಗಮನಿಸಿ ಶಿಕ್ಷಕರನ್ನು ಒದಗಿಸಬೇಕು.

ಶಿಫಾರಸು-5 ಶಿಕ್ಷಕರು ಸಕ್ರಿಯವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ತಮ್ಮ ವೃತ್ತಿ ನೈಪುಣ್ಯತೆಯನ್ನು ಉನ್ನತೀಕರಿಸಿಕೊಳ್ಳಲು ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ, ತರಬೇತಿ ಮತ್ತು ಅನುಪಾಲನೆಗೆ ಪೂರಕವಾದ ಬೆಂಬಲ ವ್ಯವಸ್ಥೆಗಳನ್ನು ಬಲವರ್ಧನೆಗೊಳಿಸುವುದು

ಶಿಫಾರಸು-6 ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ಭಾಗವಾಗಿ ಸರ್ಕಾರಿ ಶಾಲೆಗಳಲ್ಲಿ ಹೊಸ ತಂತ್ರಜ್ಞಾನಗಳನ್ನು, ಇ-ಲೈಬ್ರರಿ, ಇ-ಬುಕ್ ಇತ್ಯಾದಿ ಕಾಲೋಚಿತ ತಂತ್ರಜ್ಞಾನ ಅಳವಡಿಕೆ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು.

ಸರ್ಕಾರಿ ಶಾಲೆ 6

ಶಿಫಾರಸು-8 ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಬಲಪಡಿಸಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳನ್ನು ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸಲು ತುರ್ತುಕ್ರಮ ವಹಿಸುವುದು. ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು.

ಶಿಫಾರಸು-9 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸಲು ಆ ವ್ಯಾಪ್ತಿಯ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಕಡ್ಡಾಯವಾಗಿ ಅವರ ಮಕ್ಕಳನ್ನು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಸೇರಿಸುವಂತೆ ಕೂಡಲೇ ಸುಗ್ರೀವಾಜ್ಞೆಯನ್ನು ಹೊರಡಿಸುವುದು

ಶಿಫಾರಸು-10 ಕೇಂದ್ರ ಸರ್ಕಾರ ದೇಶದ ಒಟ್ಟು ನಿವ್ವಳ ಉತ್ಪನ್ನದಲ್ಲಿ ಕನಿಷ್ಠ ಶೇಕಡಾ 10ರಷ್ಟನ್ನು ಮತ್ತು ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಕನಿಷ್ಠ ಶೇಕಡ 25ರಷ್ಟನ್ನು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿ ಬೆಳೆಸಿ ನೆರೆ ಹೊರೆಯ ಸಮಾನ ಶಾಲೆಯ ತತ್ವದ ಮೇಲೆ ಬಲವರ್ಧನೆಗೊಳಿಸಲು ಮೀಸಲಿರಿಸಬೇಕು.

ಶಿಫಾರಸು-11 ಪಠ್ಯ ಪುಸ್ತಕ ರಚನೆಯು ಸಂವಿಧಾನದ ತಾತ್ವಿಕ ಬುನಾದಿ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಭ್ರಾತೃತ್ವ, ಜಾತ್ಯತೀತತೆ, ಘನತೆ, ಬಹುತ್ವ ಮತ್ತು ಶೋಷಣೆ ಮುಕ್ತ ಸಮ-ಸಮಾಜವನ್ನು ನೆಲೆಗೊಳಿಸುವ ಮೂಲ ಆಶಯಗಳನ್ನು ಎತ್ತಿ ಹಿಡಿಯಬೇಕು. ಪಠ್ಯ ಪುಸ್ತಕಗಳು ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುವ ಕನಿಷ್ಠ ಹದಿನೈದು ದಿನಗಳ ಮುಂಚೆ ಆಯಾ ಶಾಲೆಗಳನ್ನು ತಲುಪಿರಬೇಕು.

ಶಿಫಾರಸು-12 ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕ್ಯಾಪಿಟೇಷನ್/ ವಂತಿಗೆ ಶುಲ್ಕ ಸಂಗ್ರಹಿಸುವುದು ಮತ್ತು ಮಕ್ಕಳಿಗೆ ಪ್ರವೇಶ ನೀಡುವಾಗ ಮಕ್ಕಳಿಗಾಗಲೀ ಅವರ ಪಾಲಕ ಪೋಷಕರಿಗಾಗಲಿ ಪ್ರವೇಶ ಪರೀಕ್ಷೆ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು. ಇದರ ಪರಿವೀಕ್ಷಣೆ ಹಾಗೂ ಮೇಲ್ವಿಚಾರಣೆಗೆ ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿಉಸ್ತುವಾರಿ ಸಮಿತಿಗಳ ರಚನೆ ಮಾಡಬೇಕು.

ಶಿಫಾರಸು-13 ಸರ್ಕಾರಿ ಶಾಲೆಗಳ ಸಬಲೀಕರಣ ದೃಷ್ಟಿಯಿಂದ (ಅ) ಆರ್.ಟಿ.ಇ ಅಡಿಯಲ್ಲಿ ಶೇ.25ರಷ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ಅವರ ಶುಲ್ಕವನ್ನು ಸರ್ಕಾರ ಭರಿಸುತ್ತಿರುವುದನ್ನು ನಿಲ್ಲಿಸಬೇಕು. ಅದೇ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬೇಕು. (ಆ) ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಆಯಾ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿಯಾಗಬೇಕು.

ಶಿಫಾರಸು-14 (ಅ) ಎಲ್ಲಾ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳುಮಾನ್ಯತಾ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರದಿಂದ ಪಡೆಯುವುದು ಕಡ್ಡಾಯ. ಇದನ್ನು ಪ್ರತಿ ವರ್ಷವೂ ನವೀಕರಣಕ್ಕೆ ಒಳಮಾಡಬೇಕು. ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಬೇಕು.
(ಆ) ಆರ್‌ಟಿಇ ಕಾಯ್ದೆಯ ಅಡಿಯಲ್ಲಿ 39 ಅಂಶಗಳಿದ್ದು ಅವುಗಳಲ್ಲಿ ಶಿಕ್ಷಣ ಇಲಾಖೆ ಆರ್‌ಟಿಇ ಶುಲ್ಕವನ್ನು ಭರಿಸುವ ಏಕಮಾತ್ರ ಅಂಶವನ್ನು ಗಮನಿಸುತ್ತಿದ್ದು ಉಳಿದ 38 ಅಂಶಗಳನ್ನು ಗಮನಕ್ಕೇ ತೆಗೆದುಕೊಂಡಿಲ್ಲ. ಇದರಿಂದಾಗಿ ಖಾಸಗಿ ಶಾಲೆಗಳ ವ್ಯಾಪಾರೀಕರಣ ನಿಯಂತ್ರಣವಿಲ್ಲದೆ ಸಾಗಿದೆ. ಹೀಗಾಗಿ ಆರ್‌ಟಿಇ ಕಾಯ್ದೆಯ 39 ಅಂಶಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು.

ಶಿಫಾರಸು-15 ಭಾರತ ಕಲಿಕಾ ಅಧಿನಿಯಮ-2015ನ್ನು ಕಡ್ಡಾಯವಾಗಿ ಜಾರಿಗೊಳಿಸುವುದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಕನ್ನಡ ಕಲಿಕೆ ಕಾಯಿದೆ ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ ಮೇಲುಸ್ತುವಾರಿ ನಡೆಸಲು ಒಂದು ಉನ್ನತ ಮೇಲುಸ್ತುವಾರಿ ಸಮಿತಿಯನ್ನು ರಚಿಸಬೇಕು.

ಶಿಫಾರಸು-16 ಪ್ರಾಥಮಿಕ ಶಿಕ್ಷಣ ಮಾಧ್ಯಮ ಮಗುವಿನ ಪರಿಸರ ಭಾಷೆ ಅರ್ಥಾತ್ ರಾಜ್ಯಭಾಷೆಯಲ್ಲಿಯೇ ಇರತಕ್ಕದ್ದು. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರುವ ಮೂಲಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ ಎಲ್ಲಾ ರಾಜ್ಯಗಳಿಗೆ ಅನ್ವಯಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.

ಶಿಫಾರಸು-17 ಅಂಗನವಾಡಿ ಕೇಂದ್ರಗಳನ್ನು ಪುನಶ್ಚೇತನಗೊಳಿಸುವುದು: (ಅ) ಪ್ರಸ್ತುತ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವಾಗಿಸಲು ಬೇಕಾದ ಮೂಲಭೂತ ಅನುಕೂಲತೆಗಳಿಂದ ವ್ಯವಸ್ಥಿತಗೊಳಿಸಬೇಕು.
(ಇ) ಪ್ರತಿ ಗ್ರಾಮಗಳಲ್ಲೂ ಶಿಶುಪಾಲನಾ ಕೇಂದ್ರಗಳನ್ನು ತೆರೆಯಬೇಕು. ಅಲ್ಲಿ 1ರಿಂದ 3+ವರೆಗಿನ ಮಗು ಪ್ರವೇಶ ಪಡೆಯಬೇಕು. ಅಲ್ಲಿ ತರಬೇತಿ ಪಡೆದ ಶಿಕ್ಷಕಿ ಹಾಗೂ ಓರ್ವ ಸಹಾಯಕರ ನೇಮಕ ಮಾಡಬೇಕು. ಅಲ್ಲದೇ ಆರೋಗ್ಯ ಕಾರ್ಯಕರ್ತೆಯರ ಸೇವೆ ಸಂದರ್ಭಾನುಸಾರ ನಿಯತವಾಗಿ ದೊರಕುವಂತಿರಬೇಕು ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಬೇಕು.

ಸರ್ಕಾರಿ ಶಾಲೆ 8

ಶಿಫಾರಸು–18 ಪ್ರಾಥಮಿಕ ಕಿರಿಯ ಹಿರಿಯ ಮಾಧ್ಯಮಿಕ ಪ್ರೌಢ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಅಗತ್ಯವಿದ್ದು, ಪ್ರಸ್ತುತ ಶಾಲೆಗಳನ್ನು ಇತರ ಶಿಕ್ಷಣ ಸಂಸ್ಥೆಗಳ ಜೊತೆ ಇಂದೀಕರಿಸುವ ತುರ್ತು ಇರುವುದರಿಂದ ಪಠ್ಯೇತರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಆದ್ಯತೆಯಲ್ಲಿ ಆಗಬೇಕು. ಪಠ್ಯ ಮತ್ತು ಪಠ್ಯೇತರ ಕಲಿಕಾ ಸೌಲಭ್ಯಗಳನ್ನು ಕಾಲೋಚಿತಗೊಳಿಸುವುದು
(ಅ) ಪಠ್ಯೇತರ-ಸಂಗೀತ, ಚಿತ್ರಕಲೆ, ದೈಹಿಕ ಶಿಕ್ಷಣ, ತೋಟಗಾರಿಕೆ, ಕರಕುಶಲ ಕಲೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ಹೊಂದಿದ ಶಿಕ್ಷಕರಿಂದ ಕಲಿಕೆ.
(ಆ) ಮೂಲಭೂತ ಸೌಲಭ್ಯ-ತರಗತಿಗೊಂದು ಕೊಠಡಿ, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಬಳಕೆಯುಕ್ತ ಶೌಚಾಲಯ, ಹೊರಾಂಗಣ-ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಾಮಗ್ರಿ, ಕಂಪ್ಯೂಟರ್ ಪ್ರಯೋಗಾಲಯ, ಸುಸಜ್ಜಿತ ಪ್ರಯೋಗಶಾಲೆ ರಂಗಮಂದಿರ ಇವೆಲ್ಲವೂ ಗುಣಾತ್ಮಕ ಶಿಕ್ಷಣಕ್ಕೆ ಪೂರಕ ಸಾಮಗ್ರಿಗಳಾಗಿದ್ದು ಅವುಗಳನ್ನು ಒದಗಿಸುವುದು.
(ಇ) ಪೂರ್ವ ಪ್ರಾಥಮಿಕ ಶಾಲೆಗಳ ನಂತರ 1 ರಿಂದ 4ರವರೆಗೆ ಕಿರಿಯ ಪ್ರಾಥಮಿಕ ಶಾಲೆ ಎಂದು ವಿಭಾಗಿಸಬೇಕು. ವಿಷಯಕ್ಕೊಬ್ಬರಂತೆ ಇಬ್ಬರು ಭಾಷಾಶಿಕ್ಷಕರು (ಆಂಗ್ಲ+ ಮಾತೃಭಾಷೆ)ಪರಿಸರ ಅಧ್ಯಯನಕ್ಕೆ ಒಬ್ಬರು ಗಣಿತಕ್ಕೊಬ್ಬರು ಒಟ್ಟು ನಾಲ್ಕು ಜನ ಶಿಕ್ಷಕರು ನೇಮಕವಾಗಬೇಕು.

ಶಿಫಾರಸು-19 ಸಮ ಸಮಾಜಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಂಚಾಯತಿ ಹಾಗು ಪಟ್ಟಣ/ ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದ ಸುಸಜ್ಜಿತ ನೆರೆಹೊರೆಯ ಸಮಾನ ಸಾರ್ವಜನಿಕ ಶಾಲೆಗಳನ್ನು ಕೇಂದ್ರ ಸರ್ಕಾರದ ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಸ್ಥಾಪಿಸಬೇಕು.

ಶಿಫಾರಸು-20 ದತ್ತು ಯೋಜನೆ, ಸಾರ್ವಜನಿಕ–ಖಾಸಗಿ ಸಹಭಾಗಿತ್ವಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳ ಆವರಣ ಹಾಗೂ ಶಾಲೆಗಳ ಮೂಲ ಆಶಯಕ್ಕೆ ಧಕ್ಕೆಯುಂಟು ಮಾಡುವುದನ್ನು ನಿಲ್ಲಿಸಬೇಕು.

ಶಿಫಾರಸು-21 ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯು ನೀಡುತ್ತಿರುವ ಈ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವಂತೆ ಉನ್ನತಮಟ್ಟದ ಸಮಿತಿಯೊಂದನ್ನು ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ ರಚಿಸುವುದು.

ಅನುಷ್ಠಾನಕ್ಕೆ ಸಲಹೆ
ಶಾಲಾ ಸಬಲೀಕರಣ ಸಮಿತಿಯು ನೀಡುತ್ತಿರುವ ಈ ಶಿಫಾರಸುಗಳು ಶೈಕ್ಷಣಿಕ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸಮಾನ ಶಿಕ್ಷಣ ನೀತಿಯ ಆಶಯದ ಕಡೆಗೆ ದಾರಿದೀಪಗಳಂತಿವೆ. ಆದ್ದರಿಂದ ಇವುಗಳ ಅನುಷ್ಠಾನ ಕಡ್ಡಾಯವಾಗಿ ಆಗುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಯ ಎಲ್ಲಾ ಅವಕಾಶಗಳೂ ಇವೆ. ಇದು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸಂಬಂಧಿಸಿರದೆ ಪರ್ಯಾಯವಾಗಿ ಪೈಪೋಟಿ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುತ್ತಿರುವುದರಿಂದ ಈ ಎಲ್ಲಾ ಶಿಕ್ಷಣ ವ್ಯವಸ್ಥೆಗಳ ಮೇಲೆ ಸಮತೋಲನ ಸಾಧಿಸುವ ಉದ್ದೇಶದಿಂದ ಒಂದು ಪರಿವೀಕ್ಷಣಾ ಸಮಿತಿಯ ಅಗತ್ಯವಿರುತ್ತದೆ. ಈ ಪರಿವೀಕ್ಷಣಾ ಸಮಿತಿಯು ರಾಜ್ಯಮಟ್ಟದಲ್ಲಿ ಉನ್ನತ ಸಮಿತಿಯಾಗಿದ್ದು ಜಿಲ್ಲಾ ಮಟ್ಟಗಳಲ್ಲಿ ಉಪಸಮಿತಿಗಳಂತೆ ಕಾರ್ಯನಿರ್ವಹಿಸಬೇಕು. ರಾಜ್ಯಮಟ್ಟದ ಸಮಿತಿಯಲ್ಲಿ ಮಾನ್ಯ ಶಿಕ್ಷಣ ಸಚಿವರು ಅಧ್ಯಕ್ಷರಾಗಿದ್ದು, ಸಮಿತಿಯಲ್ಲಿ ಸರ್ಕಾರದ ಪದನಿಮಿತ್ತ ಉನ್ನತಮಟ್ಟದ ಅಧಿಕಾರಿಗಳು ಸದಸ್ಯರಾಗಿಯೂ, ಅಧಿಕಾರೇತರ ಸದಸ್ಯರಾದ ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಜಿಲ್ಲೆಯ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರುತ್ತದೆ.

ಇಷ್ಟು ಶಿಫಾರಸುಗಳಿಗೆ ಸೂಕ್ತ ವಿವರಗಳನ್ನು, ಕಾರಣಗಳನ್ನು, ವಸ್ತುಸ್ಥಿತಿ ವಿವರಗಳನ್ನು ವರದಿಯಲ್ಲಿ ನೀಡಲಾಗಿದೆ.

ರಾಜ್ಯದ ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಇಲ್ಲದಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಒಂದು ಪ್ರಮುಖ ಕಾರಣವಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಪ್ರಕರಣ 11ರ ಅನ್ವಯ ಮೂರು ವರ್ಷ ತುಂಬಿ ನಾಲ್ಕನೇ ವರ್ಷಕ್ಕೆ ಕಾಲಿರಿಸುವ ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಸಿದ್ಧಗೊಳಿಸುವ ದೃಷ್ಟಿಯಿಂದ ಮತ್ತು ಮಕ್ಕಳು ಆರು ವರ್ಷ ಪೂರೈಸುವವರೆಗೆ ಅವರಿಗೆ ಎಳೆ ವಯಸ್ಸಿನ ಆರೈಕೆ ದೊರಕಿಸಿ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಪೂರ್ವ ಪ್ರಾಥಮಿಕ ತರಗತಿ-1 (ಎಲ್ ಕೆಜಿ) ಹಾಗೂ ಪೂರ್ವ ಪ್ರಾಥಮಿಕ ತರಗತಿ-2 (ಯುಕೆಜಿ) ಮಾದರಿಯಲ್ಲಿ ಸರ್ಕಾರವು ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ಒದಗಿಸುವುದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಬೇಕೆಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ, ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ತಕ್ಷಣ ಅಗತ್ಯ ಕ್ರಮವಹಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಏಳು ವರ್ಷ ಕಳೆದರೂ ಇನ್ನೂ ಪೂರ್ಣಪ್ರಮಾಣದಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಮಾಡಿಲ್ಲ.

ಕೊಠಾರಿ ಆಯೋಗದ ನಂತರ ಬಂದ ಗಂಭೀರ ವರದಿಯಿದು- ಡಾ ನಿರಂಜನಾರಾಧ್ಯ ವಿ ಪಿ

ಈ ಸಮಿತಿಯಲ್ಲಿದ್ದ ಅಭಿವೃದ್ಧಿ ಶಿಕ್ಷಣ ತಜ್ಞ ಡಾ ನಿರಂಜನಾರಾಧ್ಯ ಅವರು ಈ ದಿನದ ಜೊತೆಗೆ ಮಾತನಾಡಿ, “ಈ ವರದಿಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದಾಗ, ವರದಿಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಗುವುದು. ಆಗ ಈ ಶಿಫಾರಸುಗಳಿಗೆ ಅಧಿಕೃತತೆ ಬರುತ್ತದೆ ಎಂದು ಹೇಳಿದ್ದರು. ಆ ನಂತರ ಬೇರೆ ಸರ್ಕಾರ ಬಂತು. ಅವರು ಅದರ ಗೋಜಿಗೆ ಹೋಗಿಲ್ಲ. ಮತ್ತೆ ಸಿದ್ದರಾಮಯ್ಯ ಸರ್ಕಾರ ಬಂದಿದೆ. ಆದರೆ ಸರ್ಕಾರ ಈ ವರದಿಯ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಉತ್ತರ ಕರ್ನಾಟಕದ ಶಾಲೆಗಳ ಸ್ಥಿತಿಗತಿ ಅಧ್ಯಯನಕ್ಕೆ ಡಾ ಕರ್ಜಗಿಯವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ನೇಮಿಸಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಶಾಲೆಗಳಿಗೆ ಏಕ ಶಿಕ್ಷಕರಿದ್ದಾರೆ. ಅಲ್ಲಿ ಶಿಕ್ಷಕರನ್ನು ನೇಮಿಸಿ, ಮೂಲಭೂತ ಸೌಕರ್ಯ ಕೊಟ್ಟರೆ ಸಾಕು. ಸರ್ಕಾರ ಮತ್ತೇನೂ ಮಾಡಬೇಕಿಲ್ಲ. ನಮ್ಮ ಸಮಿತಿ ಕೊಟ್ಟ ವರದಿ 1964-66ರಲ್ಲಿ ಡಾ ಡಿ ಎಸ್‌ ಕೊಠಾರಿ ಆಯೋಗ ಕೊಟ್ಟ ವರದಿಯ ನಂತರ ಬಂದ ಗಂಭೀರವಾದ ವರದಿಯಾಗಿದೆ. ಆ 21 ಶಿಫಾರಸುಗಳಲ್ಲಿ ಒಂದೇ ಒಂದು ಶಿಫಾರಸನ್ನೂ ಸರ್ಕಾರ ಅನುಷ್ಠಾನಗೊಳಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ವರದಿಯನ್ನು ಚರ್ಚೆಗೇ ಇಟ್ಟಿಲ್ಲ – ಪ್ರೊ ಎಸ್‌ ಜಿ ಸಿದ್ಧರಾಮಯ್ಯ

ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ ಎಸ್‌ ಜಿ ಸಿದ್ಧರಾಮಯ್ಯ ಅವರು, “ಈ ವರದಿಯನ್ನು ಸರ್ಕಾರ ಚರ್ಚೆಗೇ ಇಟ್ಟಿಲ್ಲ. ಅಷ್ಟೇ ಅಲ್ಲ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನೂ ಪ್ರಾಧಿಕಾರದ ಕಡೆಯಿಂದ 2017ರಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೆವು. ಅದನ್ನೂ ಸರ್ಕಾರ ಗಂಭಿರವಾಗಿ ಪರಿಗಣಿಸಿಲ್ಲ. ಸರ್ಕಾರಿ ಶಾಲೆಗಳಿಗೆ ಈ ದುರ್ಗತಿ ಬಂದಿರುವ ಸಮಯದಲ್ಲಾದರೂ ನಮ್ಮ ಶಿಫಾರಸುಗಳನ್ನು ಸರ್ಕಾರ ಜಾರಿಗೊಳಿಸಬೇಕು. ಈ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಹೇಳುತ್ತಲೇ ಬಂದಿದ್ದೇವೆ“ ಎಂದರು.

ಜಾರಿಗೊಳಿಸದ ಮೇಲೆ ಸಮಿತಿ ಯಾಕೆ ಬೇಕುಡಾ ಪುರುಷೋತ್ತಮ ಬಿಳಿಮಲೆ

“ಸರ್ಕಾರಿ ಶಾಲೆಗಳನ್ನು ಸುಧಾರಿಸುವ ನಿಜ ಕಾಳಜಿ ಇದ್ದ ಸರ್ಕಾರ ನೇಮಿಸಿದ ಸಮಿತಿಗಳು ಕೊಟ್ಟ ವರದಿಯ ಶಿಫಾರಸುಗಳನ್ನು ಜಾರಿಗೆ ತರುತ್ತದೆ. ಕಾಳಜಿ ಇಲ್ಲದ ಮೇಲೆ ಹಣ ಖರ್ಚು ಮಾಡಿ ಸಮಿತಿಗಳನ್ನು ರಚಿಸಿ ವರದಿಗಳನ್ನು ಪಡೆಯುವುದು ಯಾಕಾಗಿ? ಎಲ್ಲ ಸರ್ಕಾರಗಳೂ ಸಮಿತಿಗಳು ಅಧ್ಯಯನ ಮಾಡಿ ಕೊಡುವ ವರದಿಯನ್ನು ಅನುಷ್ಠಾನಗೊಳಿಸಿದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಬರುತ್ತಿರಲಿಲ್ಲ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಹೇಳುತ್ತಾರೆ.

ವಿಧಾನಮಂಡಲಗಳಲ್ಲಿ ಶಾಸನ ರೂಪಿಸುವ ಸ್ಥಾನಗಳಲ್ಲಿ ಕೂತಿರುವ ಜನ ಪ್ರತಿನಿಧಿಗಳು ರಾಜ್ಯದ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ. ಇಂತಹದೊಂದು ಸಮಿತಿಯ ಶಿಫಾರಸುಗಳಲ್ಲಿ ಕೆಲವನ್ನಾದರೂ ಜಾರಿಗೊಳಿಸಿದ್ದರೆ ಅದರ ಸಕಾರಾತ್ಮ ಪರಿಣಾಮ ಕಾಣಬಹುದಿತ್ತು. ಈಗಲಾದರೂ ಇಂತಹ ವಿಚಾರಗಳು ಚರ್ಚೆಯ ವಿಷಯವಾಗಲಿ. ಸಾಮಾಜಿಕ ನ್ಯಾಯ, ಬಡವರ ಪರ ಎಂದು ಹೇಳಿಕೊಳ್ಳುವ ಸಿ ಎಂ ಸಿದ್ದರಾಮಯ್ಯ ಅವರು ಹಿಂದೆ ತಾವೇ ರಚನೆ ಮಾಡಿದ ತಜ್ಞರ ಸಮಿತಿ ಕೊಟ್ಟ ವರದಿಯನ್ನು, ಅದರ ಶಿಫಾರಸುಗಳಲ್ಲಿ ಅರ್ಧದಷ್ಟನ್ನಾದರೂ ಜಾರಿಗೆ ತಂದು ಸರ್ಕಾರಿ ಶಾಲೆಗಳ ಸಬಲೀಕರಣ ಮಾಡಬೇಕು.

ಸುವರ್ಣ ಸೌಧ

ಬೆಳಗಾವಿ ಅಧಿವೇಶನದಲ್ಲಿ ಉ.ಕ.ದ ಶಾಲಾ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಯಲಿ

ಉತ್ತರ ಕರ್ನಾಟಕದ ಭಾಗದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಶೋಚನೀಯವಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಶಾಲೆಗಳ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ) ಕೂಡಾ ಒತ್ತಾಯಿಸಿದೆ.

ಶಿಕ್ಷಣ ಇಲಾಖೆಯ 2024-25ನೇ ಸಾಲಿನ ಅಂಕಿ-ಅಂಶಗಳ ಅನ್ವಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಟ್ಟು ಮುಂಜೂರಾದ ಶಿಕ್ಷಕರ ಹುದ್ದೆಗಳು 1,87,993. ಆದರೆ,ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 1,44,747. ಸರಿ ಸುಮಾರು 43,246 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳಲ್ಲಿ ಸುಮಾರು 27,376 ಹುದ್ದೆಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿವೆ. ಶೇಕಡವಾರು ಲೆಕ್ಕದಲ್ಲಿ ಇದು 63.3.

ಅದರಲ್ಲಿ, ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಮೊದಲ 5 ಜಿಲ್ಲೆಗಳೆಂದರೆ ಉತ್ತರ ಕರ್ನಾಟಕದ ರಾಯಚೂರು, ಚಿಕ್ಕೋಡಿ, ಕಲ್ಬುರ್ಗಿ, ಕೊಪ್ಪಳ, ಮತ್ತು ಬಳ್ಳಾರಿ. ಈ ಜಿಲ್ಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಳು ಕ್ರಮವಾಗಿ 8436, 9779, 9276, 6335 ಮತ್ತು 4494. ಆದರೆ, ಇಲ್ಲಿ ಖಾಲಿ ಇರುವ ಹುದ್ದೆಗಳು ಕ್ರಮವಾಗಿ 3826, 2903, 2452, 2214 ಮತ್ತು 1907. ಈ ಐದು ಜಲ್ಲೆಗಳಲ್ಲಿ ಸರಾಸರಿ ಶೇ. 35.8ರಷ್ಟು ಹುದ್ದೆಗಳು ಖಾಲಿ ಇವೆ.

ಈ ಜಿಲ್ಲೆಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಸಂಖ್ಯೆ ಕ್ರಮವಾಗಿ 3205, 2231, 1832,1818 ಮತ್ತು 1661. ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ರಾಜ್ಯ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿದೆ. 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 34192 ಅತಿಥಿ ಶಿಕ್ಷಕರು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಸೇವಾಭದ್ರತೆಯಾಗಲಿ ಅಥವಾ ಕನಿಷ್ಠ ವೇತನವಾಗಲಿ ಸಿಗುತ್ತಿಲ್ಲ. ಒಮ್ಮೊಮ್ಮೆ 4-5 ತಿಂಗಳಾದರೂ ಅವರಿಗೆ ಸಿಗಬೇಕಾದ ಗೌರವಧನವೂ ಸಿಕ್ಕಿರುವುದಿಲ್ಲ.

ಇದನ್ನೂ ಓದಿ ಸದನದಲ್ಲಿ ಆಗಬೇಕಾದ್ದೇನು | ಉತ್ತರ ಕರ್ನಾಟಕದ ನೀರು-ನೀರಾವರಿ ತಾಪತ್ರಯ ನೀಗುವುದು ಯಾವಾಗ?

ಜೊತೆಗೆ, ಈ ಹಿಂದೆ 1 ರಿಂದ 7ನೇ ತರಗತಿಗೆ ನೇಮಕವಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ನೇ ತರಗತಿಗೆ ಸೀಮಿತಗೊಳಿಸುವ ಮೂಲಕ ಹಿಂಬಡ್ತಿ ನೀಡಿ ಶಿಕ್ಷಕರ ಉತ್ಸಾಹವನ್ನು ಕುಗ್ಗಿಸಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಸಹ ಶಿಕ್ಷಕರಾಗಿ ವೃತ್ತಿಗೆ ಸೇರುವ ಶಿಕ್ಷರಿಗೆ ಜೇಷ್ಠತೆ ಅಥವಾ ಸೇವೆಗೆ ಸೇರಿದ ನಂತರ ಪಡೆದ ವಿದ್ಯಾರ್ಹತೆಗಳನ್ನು ಪರಿಗಣಿಸಿ ಅವರ ವೃತ್ತಿ ಬದುಕಿನಲ್ಲಿ ಮುಂಬಡ್ತಿ ನೀಡಬೇಕಾಗಿದ್ದ ಸರ್ಕಾರ, ಅವರಿಗೆ ಹಿಂಬಡ್ತಿ ನೀಡಿ ಘೋರ ಅನ್ಯಾಯವೆಸಗಿದೆ ಎಂದು ಫಾಫ್ರೆ ಹೇಳಿದೆ.

ಸರ್ಕಾರ ಇವೆಲ್ಲವನ್ನೂ ಗಮನಿಸಬೇಕಿದೆ. ಒಟ್ಟಾರೆ ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಶೂನ್ಯ ಶಿಕ್ಷಕರ ಶಾಲೆ, ಏಕೋಪಾಧ್ಯಾಯ ಶಾಲೆ ಮತ್ತು ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿಲ್ಲದಿರುವುದು, ಗುಣಮಟ್ಟದ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಮುಖ್ಯವಾಗಿ ಉ.ಕ ಭಾಗದ ಶಾಸಕರು ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುವುದು ಅವರ ಕರ್ತವ್ಯವಾಗಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

2 COMMENTS

  1. ಅದ್ಭುತವಾದ ಮತ್ತು ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಿ ಬಲಪಡಿಸಲು ಸಹಕಾರಿಯಾಗುವ ವರದಿ. ತತ್ ತಕ್ಷಣ ಈ ವರದಿ ಜಾರಿಗೆ ತರುವ ಒತ್ತಾಯ ಮಾಡಬೇಕಾಗಿದೆ.

  2. ಉತ್ತಮ ವರದಿ ಇಲ್ಲಿಯವರೆಗೆ ಜಾರಿಗೆ ಆಗಿದೆ ಈ ವಿಷಯವನ್ನು
    ಚಳಿಗಾಲದ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡು ವರದಿಯನ್ನು ಜಾರಿಗೆ ತರುವ ಆದೇಶವಾಗಲಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X