ಬೆಂಗಳೂರಿನ ದಿಣ್ಣೂರು ದಲಿತ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ: ಕ್ರೂರಿಯಾಯಿತೇ ಸರ್ಕಾರ?

Date:

Advertisements
ಈ ಭೂಮಿಯಲ್ಲಿ ಅವರು ಏಳೆಂಟು ದಶಕಗಳಿಂದ ವಾಸಿಸುತ್ತಿದ್ದಾರೆ ಮತ್ತು ಕೆಲವರ ಬಳಿ ಭೂಮಿಯ ಕಾನೂನುಬದ್ಧ ದಾಖಲೆಗಳೂ ಇವೆ. ಆದರೆ, ಅರಣ್ಯ ಇಲಾಖೆಯು ಈ ಭೂಮಿಯನ್ನು 'ಅರಣ್ಯ ಭೂಮಿ' ಎಂದು ವರ್ಗೀಕರಿಸಿದ್ದು, ಗ್ರಾಮಸ್ಥರಿಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಿದೆ.

ಬೆಂಗಳೂರು, ಭಾರತದ ತಂತ್ರಜ್ಞಾನ ನಗರವಾಗಿ ಗುರುತಿಸಲ್ಪಟ್ಟಿದೆ. ಆದರೆ, ಇದರ ಒಡಲಾಳದಲ್ಲಿರುವ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಡುಗೋಡಿ ಸಮೀಪದ ದಿಣ್ಣೂರು ಎಂಬ ಗ್ರಾಮದಲ್ಲಿ ಒಂದು ಗಂಭೀರ ಸಮಸ್ಯೆ ಎದುರಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಈ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿದ್ದೆಂದು ಘೋಷಿಸಿ, ಗ್ರಾಮವನ್ನು ಖಾಲಿ ಮಾಡುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಇದು ಗ್ರಾಮಸ್ಥರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸದ್ಯ ಭೂಮಿ ಮಾಲೀಕತ್ವ, ಸರ್ಕಾರಿ ನೀತಿಗಳು ಮತ್ತು ಗ್ರಾಮೀಣ ಸಮುದಾಯದ ಹಕ್ಕುಗಳ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಎಚ್‌ ಅವರು ಈದಿನ ಡಾಟ್‌ ಕಾಮ್‌ನೊಂದಿಗೆ ಮಾತನಾಡಿ, “1950ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಲಿಂಗಯ್ಯ ಅವರು ದಿಣ್ಣೂರಿನಲ್ಲಿ ದಲಿತರಿಗೆ ಭೂಮಿ ಹಂಚಿಕೆ ಮಾಡಿದ್ದರು. ಈ ಊರಿನಲ್ಲಿ ನನ್ನದು ಮೂರನೇ ತಲೆಮಾರು. ಈ ಊರಿಗೆ ರಸ್ತೆ, ವಿದ್ಯುತ್‌, ಸ್ಮಶಾನ, ಕುಡಿಯುವ ನೀರು ಸೇರಿದಂತೆ ಸಕಲ ಸೌಲಭ್ಯಗಳನ್ನೂ ಒದಗಿಸಲಾಗಿದೆ” ಎಂದು ಹೇಳಿದರು.

Advertisements
ದಿಣ್ಣೂರು ದಲಿತರ ಪ್ರತಿಭಟನೆ

“711 ಎಕರೆ ಅರಣ್ಯ ಭೂಮಿ ಇದು ಅಂತ ಈಗ ಹೇಳುತ್ತಿದ್ದಾರೆ. ಆದರ ಅಂದು ನಮಗೆ 572 ಎಕರೆ 9 ಗುಂಟೆ ಭೂಮಿಯನ್ನು ಸೊಸೈಟಿಯಲ್ಲಿ ಮಂಜೂರಾತಿ ಮಾಡಿ, ʼಸಾಮೂಹಿಕ ವ್ಯವಸಾಯ ಸಹಕಾರ ಸಂಘʼ ಎನ್ನುವಂತಹ ಒಂದು ಸಂಘವನ್ನು ಡಿಸಿಯವರೇ ಕಟ್ಟಿದ್ದರು, ಅದರಲ್ಲಿದ್ದವರೆಲ್ಲ ದಲಿತರು. ಹರಿಜನ ಕಾಲೋನಿ ಅಂತ ಇತ್ತು. ಇದೀಗ ಇವುಗಳನ್ನು ಪ್ಲಾಂಟೇಷನ್‌ ಎಂದು ಬದಲಿಸಿಕೊಂಡಿದ್ದಾರೆ. ಈ ಮೂಲಕ ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ” ಎಂದು ದೂರಿದ್ದಾರೆ.

“ಈಗ ಬಂಗಾರದಂತ ಬೆಲೆ ಬಾಳುತ್ತಿರುವ ಭೂಮಿ ಇದು. ಹಾಗಾಗಿ ಇದನ್ನು ನಮ್ಮಿಂದ ಕಿತ್ತುಕೊಳ್ಳಲು ಸರ್ಕಾರ ಸಂಚು ನಡೆಸಿದೆ. 1950ರಿಂದ ಈವರೆಗೆ ನಾವೇ ಸ್ವಾಧೀನದಲ್ಲಿದ್ದೇವೆ. 1983ರಲ್ಲಿ ಇದೇ ಸರ್ಕಾರ 430 ಎಕರೆ ಜಮೀನನ್ನು ಕೆಐಎಡಿಬಿಗಾಗಿ ವಶಪಡಿಸಿಕೊಂಡು, ಕೇವಲ ₹30,000 ಪರಿಹಾರ ನೀಡಿದೆ. ಬಳಿಕ ಸರ್ಕಾರ ಆ ಭೂಮಿಯನ್ನು ₹50 ಲಕ್ಷಕ್ಕೆ ಮಾರಿಕೊಂಡಿದೆ. ಆಗಲೂ ಮೋಸ ಮಾಡಿದ್ರು, ಈಗಲೂ ಮೋಸ ಮಾಡುತ್ತಿದ್ದಾರೆ. ಕೆಐಎಡಿಬಿಗೆ, ಸರ್ಕಾರಕ್ಕೆ ನಮ್ಮ ಜಮೀನುಗಳನ್ನು ಕೊಟ್ಟರೆ ಸರಿ. ಆದರೆ ನಮ್ಮಿಂದ ಕಸಿದುಕೊಂಡಿರುವ ಭೂಮಿಗಳನ್ನು ಈಗ ಹೈಟೆಕ್‌ಗಳನ್ನಾಗಿ ಮಾಡಿಕೊಂಡಿದ್ದಾರೆ.‌ ಮೊಲೆಟ್‌, ಇಪ್ರೊ ಎಲ್ಲವನ್ನೂ ಮಾಡುವುದಕ್ಕೆ ಅವಕಾಶಗಳನ್ನು ಕೊಟ್ಟಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈಗ ಆ ಜಾಗ ತುಂಬಾ ಅಭಿವೃದ್ಧಿಯಾಗಿದೆ, ನಗರೀಕರಣ ಆಗುತ್ತಿದೆ. ನಾವು ಎಸ್‌ಸಿಗಳು, ಹೊಲೆಮಾದಿಗರು ಎನ್ನುವ ಕಾರಣಕ್ಕೆ ನಮ್ಮನ್ನು ಹೊಕ್ಕಲೆಬ್ಬಿಸುವ ಸಂಚು ರೂಪಿಸುತ್ತಿದ್ದಾರೆ. ನಾವು ಈ ಜಾಗದಲ್ಲಿ ನಮ್ಮ ಬದುಕು ಕಟ್ಟಿಕೊಂಡಿದ್ದೇವೆ. ಇಷ್ಟು ವರ್ಷ ವ್ಯವಸಾಯ ಮಾಡಿಕೊಂಡು ಬದುಕಿದ್ದೇವೆ. ಆದರೆ ನಮ್ಮ ಭೂಮಿಯಲ್ಲಿ ನಾವು ಬದುವುದಕ್ಕೇ ಅವಕಾಶ ನೀಡುತ್ತಿಲ್ಲ. ಇದು ಸರ್ಕಾರ ಮಾಡುತ್ತಿರುವ ತಾರತಮ್ಯ ಅಲ್ಲವೇ” ಎಂದು ಪ್ರಶ್ನಿಸಿದರು.

ದಿಣ್ಣೂರು ದಲಿತರ ಪ್ರತಿಭಟನೆ 1

“ನಾವಿದ್ದನ್ನು ಪ್ರಶ್ನಿಸಿದರೆ, ಇದು 120 ಎಕರೆ ಅರಣ್ಯ ಭೂಮಿ ಎಂದು ಹೇಳುತ್ತಾರೆ. ಆದರೆ ಇಲ್ಲಿ 120 ಎಕರೆ ಎಲ್ಲಿದೆ? 711 ಎಕರೆಯಲ್ಲಿ 572 ಎಕರೆ ಸೊಸೈಟಿಗೆ ಮಂಜೂರಾತಿ ಮಾಡಿದ್ದಾರೆ. 430 ಎಕರೆ ಕೆಐಎಡಿಬಿ ವಶಪಡಿಸಿಕೊಂಡಿದೆ. 69 ಎಕರೆ ಅರಣ್ಯವೇ ಇದೆ. ನಾವು ಅಂದಿನಿಂದ ಅಂದರೆ 75 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುಕುತ್ತಿರುವ ನಮ್ಮ ಭೂಮಿಯನ್ನು ಕಿತ್ತುಕೊಳ್ಳುವುದಕ್ಕೆ ಬಂದಿರುವ ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ? ಇದು ಅರಣ್ಯ ಭೂಮಿ ಎನ್ನುವುದಕ್ಕೆ ಅವರ ಬಳಿ ಯಾವುದೇ ದಾಖಲಾತಿಗಳಿಲ್ಲ. ನಮ್ಮ ಹತ್ತಿರ ಪಾಣಿ, ಪಟ್ಟಾ, ಖಾತೆ ಎಲ್ಲವೂ ಇವೆ. ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾರೆ. ಆದರೂ ಈ ರೀತಿ ಕ್ಯಾತೆ ತೆಗೆಯುತ್ತಿದ್ದರೆ, ನಾವೇನು ಹೇಳುವುದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಐವತ್ತರ ದಶಕದಲ್ಲಿ 50-60 ರಷ್ಟಿದ್ದ ಜನಸಂಖ್ಯೆ ಇಂದು 5000 ದಾಟಿದೆ ಮತ್ತು 1200 ಮನೆಗಳಿವೆ. ಈ ಎಲ್ಲ ಕುಟುಂಬಗಳು ಸುಮಾರು 150-200 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈ ಊರಿಗೆ ಹೊಂದಿಕೊಂಡಿರುವ ಸುಮಾರು 430 ಎಕರೆ ಭೂಮಿಯನ್ನು ಸರ್ಕಾರ ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಹಂಚಿಕೆ ಮಾಡಿದೆ. ನಾವಿರುವ ಜಾಗವನ್ನು ಅರಣ್ಯ ಭೂಮಿ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ಇದೇ ಭೂಮಿಯಲ್ಲಿ ಕಾಡುಗೋಡಿ ಮೆಟ್ರೋ ನಿಲ್ದಾಣ, ಕಾಡುಗೋಡಿ ಪೊಲೀಸ್‌ ಠಾಣೆ ನಿರ್ಮಾಣ ಮಾಡಲಾಗಿದೆ. ಹಾಗಾದರೆ ಅವುಗಳನ್ನೂ ತೆರವುಗೊಳಿಸಲಾಗುತ್ತದೆಯೇ? ಇದು ಅರಣ್ಯ ಭೂಮಿ ಎನ್ನುವುದೇ ಖಾತರಿಯಾಗಿದ್ದರೆ ಈ ಹಿಂದೆ ಕೆಐಎಡಿಬಿ ಜಮೀನನ್ನು ವಶಪಡಿಸಿಕೊಂಡಾಗ ಯಾಕೆ ಪರಿಹಾರ ನೀಡಿದೆ? ಅರಣ್ಯ ಭೂಮಿ ಹಾಗೆಯೇ ವಶಪಡಿಸಿಕೊಳ್ಳಬಹುದಿತ್ತಲ್ಲವೇ? ಇದೀಗ ನಗರೀಕರಣವಾಗಿ ಬೆಳೆಯುತ್ತ ಬರುತ್ತಿದೆ ಅಂತ ಏಕಾಏಕಿ ಬಂದು ಈ ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಎಲ್ಲರೂ ಊರನ್ನೇ ಖಾಲಿ ಮಾಡಬೇಕು ಅಂತ ಬೆದರಿಕೆ ಒಡ್ಡಲಾಗುತ್ತಿದೆ. ಆದರೆಇಲ್ಲಿ ವಾಸಿಸುತ್ತಿರುವುದು ಮೂರನೇ ತಲೆಮಾರು, ಈ ಊರಿಗೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಏಕಾಏಕಿ ಊರನ್ನು ಖಾಲಿ ಮಾಡಬೇಕು ಎಂದರೆ ಹೇಗೆ” ಎಂಬುದು ನಾರಾಯಣಸ್ವಾಮಿ ಪ್ರಶ್ನೆ.

ದಿಣ್ಣೂರು ದಲಿತರ ಪ್ರತಿಭಟನೆ 2

“ಜಮೀನು ನಮ್ಮದು ಎನ್ನುವುದಕ್ಕೆ, ಸರ್ಕಾರ ಸೌಲಭ್ಯಗಳನ್ನು ನೀಡಿರುವುದಕ್ಕೆ , ಜಮೀನು ಹಂಚಿಕೆ ಮಾಡಿರುವುದಕ್ಕೆ ದಾಖಲೆಗಳಿವೆ. ಆದರೆ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ನಮ್ಮನ್ನು ಬೆದರಿಸುತ್ತಿದೆ. ಮಹಿಳೆಯರು ಧರಣಿಗೆ ಕೂತರೆ ಪೊಲೀಸರು ಅವರನ್ನು ಹಿಡಿದು ಎಳೆದಾಡುತ್ತಾರೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವುದು ಸರ್ಕಾರದ ನಿಯಮವೇ? ಸರ್ಕಾರ, ಅರಣ್ಯ ಇಲಾಖೆ ಮತ್ತು ಪೊಲೀಸರು ಒಟ್ಟಾಗಿ ಹೊಲೆ ಮಾದಿಗರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇಲ್ಲಿ ಬೇರೆ ಯಾವುದೇ ಸಮುದಾಯಗಳಿಲ್ಲ. ದಲಿತ ಸಮುದಾಯಗಳೇ ಎನ್ನುವ ಕಾರಣಕ್ಕೆ ಸರ್ಕಾರ ಇಷ್ಟು ಕ್ರೂರವಾಗಿ ವರ್ತಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಉಳಿವಿಗಾಗಿ ನಾವು ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.

“ಮಂಜುಳಾ ಅರವಿಂದ ಲಿಂಬಾವಳಿ ಸ್ಥಳೀಯ ಬಿಜೆಪಿ ಶಾಸಕಿ. ಆದರೆ ಅವರು ಈವರೆಗೂ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಕಷ್ಟ, ಗೋಳು ವಿಚಾರಿಸಿಲ್ಲ. ನಮ್ಮ ರಕ್ಷಣೆಗೆ ಬಂದಿಲ್ಲ. ವೋಟು ಕೇಳಲು ಮಾತ್ರ ಬರುತ್ತಾರೆ. ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಹಾಗಾಗಿ ದಲಿತರನ್ನು ಒಕ್ಕಲೆಬ್ಬಿಸಿ ಈ ಭೂಮಿಯನ್ನು ಕೈಗಾರಿಕೆಗಳಿಗೆ ಮಾರಾಟ ಮಾಡುವ ಸಂಚು ನಡೆದಿದೆ” ಎಂಬುದು ದಿಣ್ಣೂರು ಗ್ರಾಮಸ್ಥರ ಆಪಾದನೆ.

ದಿಣ್ಣೂರು ಗ್ರಾಮದ ಹಿನ್ನೆಲೆ

ದಿಣ್ಣೂರು ಗ್ರಾಮವು ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ಸಮೀಪದಲ್ಲಿದೆ. ಈ ಗ್ರಾಮದಲ್ಲಿ ಸುಮಾರು 200 ಕುಟುಂಬಗಳು ವಾಸಿಸುತ್ತಿವೆ ಮತ್ತು ಬಹುತೇಕ ಜನರು ಕೃಷಿ ಹಾಗೂ ಸಣ್ಣ ಕೈಗಾರಿಕೆಗಳನ್ನು ನಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಗ್ರಾಮವು ತನ್ನ ಸಾಂಪ್ರದಾಯಿಕ ಜೀವನ ಶೈಲಿಯಿಂದ ಕೂಡಿದ್ದು, ಇಲ್ಲಿನ ಗ್ರಾಮಸ್ಥರು ಮೂರು ತಲೆಮಾರುಗಳಿಂದ ವಾಸಿಸುತ್ತಿರುವವರು. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಈ ಗ್ರಾಮವನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವುದರಿಂದ ಅಲ್ಲಿನ ದಲಿತ ನಿವಾಸಿಗಳು ಭೀತಿ ಎದುರಿಸುತ್ತಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಗ್ರಾಮಕ್ಕೆ ಆಗಮಿಸಿ, ಈ ಭೂಮಿಯು ಅರಣ್ಯ ಇಲಾಖೆಗೆ ಸೇರಿದೆಯೆಂದು ಘೋಷಿಸಿದ್ದಾರೆ. ಈ ಆರೋಪವು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದೆ, ಏಕೆಂದರೆ ಈ ಭೂಮಿಯಲ್ಲಿ ಅವರು ಏಳೆಂಟು ದಶಕಗಳಿಂದ ವಾಸಿಸುತ್ತಿದ್ದಾರೆ ಮತ್ತು ಕೆಲವರ ಬಳಿ ಭೂಮಿಯ ಕಾನೂನುಬದ್ಧ ದಾಖಲೆಗಳೂ ಇವೆ. ಆದರೆ, ಅರಣ್ಯ ಇಲಾಖೆಯು ಈ ಭೂಮಿಯನ್ನು ‘ಅರಣ್ಯ ಭೂಮಿ’ ಎಂದು ವರ್ಗೀಕರಿಸಿದ್ದು, ಗ್ರಾಮಸ್ಥರಿಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಿದೆ.

ದಿಣ್ಣೂರು ಗ್ರಾಮಸ್ಥರು ಅರಣ್ಯ ಇಲಾಖೆಯ ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಈ ಭೂಮಿಯ ಮೇಲೆ ತಮಗೆ ಕಾನೂನುಬದ್ಧ ಹಕ್ಕಿದೆ. ಅರಣ್ಯ ಇಲಾಖೆಯ ಈ ಏಕಪಕ್ಷೀಯ ಕ್ರಮವು ಅನ್ಯಾಯವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಗ್ರಾಮಸ್ಥರು ತಮ್ಮ ಭೂಮಿಯ ದಾಖಲೆಗಳನ್ನು ಒದಗಿಸಿದ್ದಾರೆ. ಆದರೆ ಅಧಿಕಾರಿಗಳು ಇವುಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಜತೆಗೆ, ಈ ಒಕ್ಕಲೆಬ್ಬಿಸುವಿಕೆಯಿಂದಾಗಿ ಗ್ರಾಮಸ್ಥರ ಜೀವನೋಪಾಯ, ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಭಾರತದಲ್ಲಿ, ಅರಣ್ಯ ಭೂಮಿಯ ವರ್ಗೀಕರಣ ಮತ್ತು ಒಕ್ಕಲೆಬ್ಬಿಸುವಿಕೆಗೆ ಸಂಬಂಧಿಸಿದಂತೆ ‘ಅರಣ್ಯ ಸಂರಕ್ಷಣಾ ಕಾಯ್ದೆ 1980’ ಮತ್ತು ‘ಅರಣ್ಯ ಹಕ್ಕು ಕಾಯ್ದೆ 2006′(Forest Rights Act) ಮುಖ್ಯವಾದ ಕಾನೂನು ಚೌಕಟ್ಟುಗಳಾಗಿವೆ. ಈ ಕಾಯ್ದೆಗಳು ಅರಣ್ಯ ಭೂಮಿಯಲ್ಲಿ ವಾಸಿಸುವ ಗ್ರಾಮೀಣ ಮತ್ತು ಆದಿವಾಸಿ ಸಮುದಾಯಗಳಿಗೆ ತಮ್ಮ ಭೂಮಿಯ ಮೇಲಿನ ಹಕ್ಕನ್ನು ಗುರುತಿಸಲು ಅವಕಾಶ ನೀಡುತ್ತವೆ. ಆದರೆ, ದಿಣ್ಣೂರು ಗ್ರಾಮದಲ್ಲಿ ಈ ಕಾಯ್ದೆಗಳ ಅನುಷ್ಠಾನದ ಕುರಿತು ಸ್ಪಷ್ಟತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಗ್ರಾಮಸ್ಥರು ತಮ್ಮ ಭೂಮಿಯನ್ನು ಕಾನೂನುಬದ್ಧವಾಗಿ ಪಡೆದಿರುವುದಾಗಿ ವಾದಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯು ಈ ಭೂಮಿಯನ್ನು ‘ಅಕ್ರಮವಾಗಿ ಒತ್ತುವರಿ’ ಎಂದು ಪರಿಗಣಿಸಿದೆ. ಈ ಗೊಂದಲವು ಭೂಮಿಯ ಸರ್ವೆ ಮತ್ತು ದಾಖಲಾತಿಗಳ ಸರಿಯಾದ ನಿರ್ವಹಣೆಯ ಕೊರತೆಯಿಂದ ಉಂಟಾಗಿರಬಹುದು.

ಗ್ರಾಮಸ್ಥರ ಒಕ್ಕಲೆಬ್ಬಿಸುವಿಕೆಯು ಕೇವಲ ಭೂಮಿಯ ಕಳೆದುಕೊಳ್ಳುವಿಕೆಗೆ ಸೀಮಿತವಾಗಿಲ್ಲ. ಇದು ಗ್ರಾಮದ ಸಾಮಾಜಿಕ ರಚನೆ, ಆರ್ಥಿಕ ಸ್ಥಿರತೆ ಮತ್ತು ಸಾಂಸ್ಕೃತಿಕ ಗುರುತನ್ನೇ ಹಾನಿಗೊಳಿಸುತ್ತದೆ. ಗ್ರಾಮಸ್ಥರಿಗೆ ಪರ್ಯಾಯ ವಾಸಸ್ಥಳ ಅಥವಾ ಪುನರ್ವಸತಿ ಯೋಜನೆಯ ಕುರಿತು ಯಾವುದೇ ಸ್ಪಷ್ಟ ಮಾಹಿತಿಯನ್ನೂ ನೀಡಿಲ್ಲ. ಇದರಿಂದಾಗಿ, ಗ್ರಾಮಸ್ಥರಲ್ಲಿ ಭಯ, ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಬೆಂಗಳೂರಿನಂತಹ ನಗರದ ಸಮೀಪದ ಗ್ರಾಮವಾಗಿರುವ ದಿಣ್ಣೂರು, ರಿಯಲ್ ಎಸ್ಟೇಟ್‌ನ ಒತ್ತಡದಿಂದಾಗಿಯೂ ಈ ಸಮಸ್ಯೆಯನ್ನು ಎದುರಿಸುತ್ತಿದೆ. ವೈಟ್‌ಫೀಲ್ಡ್ ಸಮೀಪದ ಭೂಮಿಯು ರಿಯಲ್ ಎಸ್ಟೇಟ್‌ಗೆ ಆಕರ್ಷಕ ಸ್ಥಳವಾಗಿದ್ದು, ರಾಜಕೀಯ ಮತ್ತು ಆರ್ಥಿಕ ಒತ್ತಡಗಳಿಂದ ದಲಿತ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಯುತ್ತಿದೆ ಎಂಬ ಶಂಕೆಯಿದೆ.

ಈ ವಿವಾದವು ಸರ್ಕಾರದ ಪಾರದರ್ಶಕತೆ ಮತ್ತು ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಗ್ರಾಮಸ್ಥರಿಗೆ ಸರಿಯಾದ ಸಮಾಲೋಚನೆ ಇಲ್ಲದೆ, ಅವರ ಹಕ್ಕುಗಳನ್ನು ಗೌರವಿಸದೆ ಒಕ್ಕಲೆಬ್ಬಿಸುವಿಕೆ ಆರಂಭಿಸುವುದು ಸಾಮಾಜಿಕ ನ್ಯಾಯದ ಉಲ್ಲಂಘನೆ. ಸದ್ಯ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ನಗರ ಪಾಲಿಕೆಯಂತಹ ಸಂಸ್ಥೆಗಳು ಒಗ್ಗೂಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

ಇದನ್ನೂ ಓದಿದ್ದೀರಾ? ಬಿಜೆಪಿ ವರಿಷ್ಠರಿಂದ ಬಿಎಸ್‌ವೈಗೆ ಉಸ್ತುವಾರಿ ಹೊಣೆ; ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!

ಗ್ರಾಮಸ್ಥರಿಗೆ ಕಾನೂನು ಸಹಾಯ, ಪರ್ಯಾಯ ವಾಸಸ್ಥಳ ಅಥವಾ ಭೂಮಿಯ ಮಾಲೀಕತ್ವದ ಸ್ಪಷ್ಟತೆಯನ್ನು ಒದಗಿಸುವುದು ಅಗತ್ಯ. ಜತೆಗೆ, ಈ ಘಟನೆಯ ಕುರಿತು ಸಾರ್ವಜನಿಕ ಚರ್ಚೆಯನ್ನು ಉತ್ತೇಜಿಸುವುದು ಮತ್ತು ಮಾಧ್ಯಮಗಳ ಮೂಲಕ ಸರ್ಕಾರದ ಗಮನ ಸೆಳೆಯುವುದು ಮುಖ್ಯ.

ಒಟ್ಟಾರೆಯಾಗಿ ದಿಣ್ಣೂರು ಗ್ರಾಮದ ಒಕ್ಕಲೆಬ್ಬಿಸುವಿಕೆಯ ವಿವಾದವು ಕೇವಲ ಒಂದು ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದು ಭಾರತದ ಗ್ರಾಮೀಣ ಸಮುದಾಯಗಳ ಭೂಮಿ ಹಕ್ಕುಗಳು, ಅರಣ್ಯ ಇಲಾಖೆಯ ನೀತಿಗಳು ಮತ್ತು ನಗರೀಕರಣದ ಒತ್ತಡದಿಂದ ಉಂಟಾಗುವ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ, ಗ್ರಾಮಸ್ಥರು, ಮತ್ತು ಸಮಾಜದ ಎಲ್ಲ ವರ್ಗಗಳು ಒಗ್ಗೂಡಿ ಕೆಲಸ ಮಾಡಬೇಕು. ಗ್ರಾಮಸ್ಥರಿಗೆ ನ್ಯಾಯ, ಪಾರದರ್ಶಕತೆ ಮತ್ತು ಮಾನವೀಯತೆಯಿಂದ ಕೂಡಿದ ಪರಿಹಾರವನ್ನು ಒದಗಿಸುವುದು ಈಗಿನ ತುರ್ತು ಅಗತ್ಯ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X