ಇಚ್ಛಾಶಕ್ತಿ ಇದ್ದರೆ ‘ಗ್ರೇಟರ್‌ ಬೆಂಗಳೂರು’ ನಿಜಕ್ಕೂ ಗ್ರೇಟ್‌ ಆಗಲಿದೆ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರು ಬೆಳೆಯುತ್ತಲೇ ಇದೆ. ನಗರ ಬೆಳೆಯುತ್ತಿದೆ, ಆದರೆ, ಮೂಲ ಸೌಕರ್ಯಗಳು ಬೆಳೆಯುತ್ತಿಲ್ಲ. ನಾನಾ ರೀತಿಯ ಮೂಲಭೂತ ಸಮಸ್ಯೆಗಳು ಬೆಂಗಳೂರು ಮತ್ತು ಬೆಂಗಳೂರಿಗರನ್ನು ಕಾಡುತ್ತಿವೆ. ನಗರದ ಬೆಳವಣಿಗೆ ಮತ್ತು ಸಮಸ್ಯೆಗಳನ್ನೂ ಆಳುವವರು ಲಾಭದ ಸರಕು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಸದ್ಯ, ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇರುವ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುತ್ತೇವೆಂದು ಕಾಂಗ್ರೆಸ್‌ ಸರ್ಕಾರ ಹೇಳುತ್ತಿದೆ.

ಕಾಂಗ್ರೆಸ್‌ ಸರ್ಕಾರವು ಗ್ರೇಟರ್ ಬೆಂಗಳೂರು ಮಸೂದೆಯನ್ನು ರಾಜ್ಯದ ಉಭಯ ಸದನಗಳಲ್ಲಿ ಮಂಡಿಸಿ, ಅಂಗೀಕರಿಸಿದೆ. ಆದರೆ, ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಈಗಾಗಲೇ, ದೆಹಲಿಯ ಆಡಳಿತವನ್ನು ಏಳು ಪಾಲಿಕೆಗಳಾಗಿ ಪ್ರತ್ಯೇಕಗೊಳಿಸಿರುವ ಪ್ರಯೋಗ ವಿಫಲವಾಗಿದೆ. ಜೊತೆಗೆ, ವಿಧೇಯಕ ವಿರೋಧಿಸಿದ ಸಂಘಟನೆ, ಸಂಸ್ಥೆ, ವಿಪಕ್ಷ ನಾಯಕರು ನಾನಾ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ. ಈ ಎಲ್ಲದಕ್ಕೂ ವಿವರಣೆ ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ. ಪರಿಣಾಮ, ಮಸೂದೆಯು ಮತ್ತೆ ಸರ್ಕಾರದ ಬತ್ತಳಿಕೆ ಸೇರಿದೆ.

ಗ್ರೇಟರ್‌ ಬೆಂಗಳೂರು ನಿರ್ಮಾಣದ ಚರ್ಚೆ ಇಂದಿನದ್ದಲ್ಲ. ಸುಮಾರು 10 ವರ್ಷಗಳ ಹಿಂದೆಯೇ ‘ಗ್ರೇಟರ್ ಬೆಂಗಳೂರು’ ಚರ್ಚೆ ಮುನ್ನೆಲೆಗೆ ಬಂದಿತ್ತು. ಆಗಲೂ, ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ, ‘ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿನ ಆಡಳಿತ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಂದರಿಂದ ಅಥವಾ ಬಿಬಿಎಂಪಿಯ ಓರ್ವ ಮೇಯರ್‌ ಹಾಗೂ ಆಯುಕ್ತರಿಂದ ನಿರ್ವಹಿಸಲು ಸಾಧ್ಯವಿಲ್ಲ. ಬೆಂಗಳೂರಿನ ಆಡಳಿತವನ್ನು ವಿಕೇಂದ್ರೀಕರಣ ಮಾಡಬೇಕು. ಬಿಬಿಎಂಪಿಯನ್ನು ಏಳು ಪಾಲಿಕೆಗಳಾಗಿ ವಿಭಜಿಸಬೇಕು. ರಚಿನೆಯಾಗುವ ಏಳು ಪಾಲಿಕೆಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಿರ್ವಹಿಸಬೇಕು. ಈ ಪ್ರಾಧಿಕಾರವು ಮುಖ್ಯಮಂತ್ರಿಯ ನೇತೃತ್ವದಲ್ಲಿ ಕಾರ್ಯನಿರ್ಹಹಿಸುತ್ತದೆ’ ಎಂಬ ಚರ್ಚೆ ಮುನ್ನೆಲೆ ಬಂದಿತ್ತು.

Advertisements

ಬೆಂಗಳೂರಿನ ಆಡಳಿತವನ್ನು 7 ಪಾಲಿಕೆಗಳಾಗಿ ವಿಭಜಿಸಿ, ಪ್ರತಿ ಪಾಲಿಕೆಯಲ್ಲೂ 100ರಿಂದ 125 ವಾರ್ಡ್‌ಗಳು ಇರುವಂತೆ 700ಕ್ಕೂ ಹೆಚ್ಚು ವಾರ್ಡ್‌ಗಳನ್ನು ರಚನೆ ಮಾಡಬೇಕು. ಅದಕ್ಕಾಗಿ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಹಲವು ಹಕ್ಕಿಗಳನ್ನೂ ‘ಗ್ರೇಟರ್‌ ಬೆಂಗಳೂರು’ ವ್ಯಾಪ್ತಿಗೆ ತಂದು, ಅಭಿವೃದ್ಧಿ ಪಡಿಸಬೇಕು ಎಂಬುದು ಮಸೂದೆಯ ಪ್ರಮುಖ ಅಂಶಗಳಲ್ಲಿ ಒಂದು.

ಬೆಂಗಳೂರನ್ನು ಗ್ರೇಟರ್ ಬೆಂಗಳೂರನ್ನಾಗಿ ಅಭಿವೃದ್ಧಿ ಮಾಡುವುದರಿಂದ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸುವುದರಿಂದ ಆಡಳಿತದಲ್ಲಿ ಸಮನ್ವಯತೆ ಸಾಧ್ಯವಾಗುತ್ತದೆ. ಬೆಂಗಳೂರಿನಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ. ಹೀಗಾಗಿಯೇ, ನಗರವಾಸಿಗಳು ವಿವಿಧ ಯೋಜನೆಗಳಿಂದ ಪ್ರಯೋಜನ ಪಡೆಯುವುದಕ್ಕಿಂತ ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ. ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು, ಮೇಯರ್‌ಗಳು ಹಾಗೂ ಅಧಿಕಾರಿಗಳು ಜನರಿಗೆ ಸಿಗುವಂತಾಗಲು ಸಾಧ್ಯವಾಗುತ್ತದೆ. ಮೂಲಸೌಕರ್ಯ ಹಾಗೂ ಅಭಿವೃದ್ಧಿ ವಿಚಾರಗಳಲ್ಲಿ ಉತ್ತಮ ಸೇವೆ ನೀಡಬಹುದು ಎಂಬುದು ಚರ್ಚೆಯ ಪ್ರಮುಖ ಅಂಶ.

ಗ್ರೇಟರ್‌ ಬೆಂಗಳೂರು ರಚನೆ ಮತ್ತು ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಲು ಹಿರಿಯ ನಿವೃತ್ತ ಅಧಿಕಾರಿ ಬಿ.ಎಸ್‌ ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಲಂಡನ್, ದೆಹಲಿ ಹಾಗೂ ಮುಂಬೈ ನಗರಗಳ ರಚನೆಯ ಬಗ್ಗೆ ಅಧ್ಯಯನ ನಡೆಸಿದೆ.

ಇಂಗ್ಲೆಂಡ್‌ನ ಲಂಡನ್ ಸಿಟಿಯು ಭಾರೀ ಅಧ್ವಾನವಾಗಿ ರೂಪುಗೊಂಡಿತ್ತು ಮತ್ತು ಬೆಳೆಯುತ್ತಿತ್ತು. ಆ ನಗರದ ಪರಿಸ್ಥಿತಿಯನ್ನು ಗಮನಿಸಿ, ಗ್ರೇಟರ್‌ ಲಂಡನ್ ಪರಿಕಲ್ಪನೆಯನ್ನು ಅಭಿವೃದ್ಧಿ ಮಾಡಲಾಯಿತು. ಈಗ, ಲಂಡನ್‌ ಅತ್ಯುತ್ತುಮವಾಗಿ ಕಾರ್ಯನಿರ್ವಹಿಸುತ್ತಿರುವ ನಗರವಾಗಿದೆ. ಅಂತೆಯೇ, ಭಾರತದ ರಾಜಧಾನಿ ದೆಹಲಿಯನ್ನು ‘ನ್ಯಾಷನಲ್ ಕ್ಯಾಪಿಟಲ್ ರೀಸನ್’ (ಎನ್‌ಸಿಆರ್‌) ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ದೆಹಲಿಯಲ್ಲಿ ನಾನಾ ರೀತಿಯಲ್ಲಿ ಜನರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಹಾಗೂ ಆಡಳಿತ ಸಮನ್ವಯ ಸಾಧಿಸುವಲ್ಲಿ ಯಶಸ್ಸು ಕಂಡಿದೆ ಎಂಬುದನ್ನು ಸಮಿತಿ ಗುರುತಿಸಿತ್ತು.

ಆದಾಗ್ಯೂ, ದೆಹಲಿಗೆ ತೆರಳಿದ್ದ ಸಮಿತಿಯ ಭಾಗವಾಗಿದ್ದ ಓರ್ವ ಅಧಿಕಾರಿ, ಎನ್‌ಸಿಆರ್‌ ಮಾದರಿಯು ಯಶಸ್ಸು ಕಂಡಿಲ್ಲ ಎಂದು ಹೇಳಿದ್ದರು. ಅವರಿಗೆ ಸಮಿತಿಯ ಮುಖ್ಯಸ್ಥರಾಗಿದ್ದ ಬಿ.ಎಸ್‌ ಪಾಟೀಲ್ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಅವುಗಳಿಗೆ ಸರಿಯಾಗಿ ಅಧಿಕಾರಿ ಉತ್ತರಿಸಲಿಲ್ಲ. ಹೀಗಾಗಿ, ಅಧಿಕಾರಿಯ ವರದಿಯನ್ನು ಪರಿಗಣಿಸಲಿಲ್ಲ ಎಂದು ಸಮಿತಿ ಕಾರ್ಯನಿರ್ವಹಣೆಗಳನ್ನು ಹತ್ತಿರದಿಂದ ಕಂಡಿದ್ದ, ಸಮಿತಿಯಲ್ಲಿ ಸಹಾಯಕ ತಜ್ಞರಾಗಿ ಕೆಲಸ ಮಾಡಿದ್ದ ಎ ನಾರಾಯಣ್ ಹೇಳಿದ್ದಾರೆ.

ಎ ನಾರಾಯಣ್ ಹೇಳುವಂತೆ, “ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಪಾಲಿಕೆ ಇರುವುದು ಸೂಕ್ತ. ನಗರಗಳು ಅಭಿವೃದ್ದಿ ಆಗುತ್ತಿರುವುದನ್ನು ಗಮನಿಸಿದರೆ, ಒಂದು ಪಾಲಿಕೆ ಎಲ್ಲ ಭಾಗವನ್ನೂ ನಿರ್ವಹಿಸಲು ಸಾಧ್ಯವಿಲ್ಲ. 7 ಪಾಲಿಕೆಗಳು ರಚನೆಯಾಗುವುದು ಆಡಳಿತದ ದೃಷ್ಟಿಯಿಂದ ಅನುಕೂಲಕರ. ನಗರಗಳ ವಿಕಾಸದ ಕಾರಣದಿಂದಾಗಿ, ಬೆಂಗಳೂರಿಗೆ ಆಡಳಿತದ ವಿಭಜನೆ ಮತ್ತು ಕೇಂದ್ರೀಕೃತ ಸಮನ್ವಯದ ಅಗತ್ಯವಿದೆ!”

ಪ್ರಸ್ತುತ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ, ಜಲಮಂಡಳಿ, ಮೆಟ್ರೋ, ಬಿಡಿಎ, ಬಿಎಂಆರ್‌ಸಿಎಲ್‌ ಹಾಗೂ ಬೆಸ್ಕಾಂಗಳ ನಡುವೆ ಸಮನ್ವಯತೆ ಇಲ್ಲ. ಹೀಗಾಗಿ ವಿವಿಧ ಸಂಸ್ಥೆಗಳ ಕಾಮಗಾರಿಗಳಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಉದಾ: ಬಿಬಿಎಂಪಿ ರಸ್ತೆಗಳಿಗೆ ಹೊಸದಾಗಿ ಡಾಂಬರು ಹಾಕಿದರೆ, ಅದಾದ ಬಳಿಕ ಜಲಮಂಡಳಿ ರಸ್ತೆಗಳನ್ನು ಅಗೆದು ಪೈಪ್‌ಗಳನ್ನು ಅಳವಡಿಸುತ್ತದೆ. ಪರಿಣಾಮ, ಒಂದೇ ರಸ್ತೆಯನ್ನು ಮತ್ತೆ-ಮತ್ತೆ ಅಗೆಯುವುದು ಮತ್ತು ಕಾಮಗಾರಿ ನಡೆಸುವುದು ನಡೆಯುತ್ತದೆ. ಇದು ದುಂದುವೆಚ್ಚಕ್ಕೆ ಕಾರಣವಾಗುತ್ತಿದೆ. ಇದೊಂದು ಅತ್ಯಂತ ಸಣ್ಣ ಉದಾಹರಣೆ. ಆದರೆ, ಇದಕ್ಕೂ ಮಿಗಿಲಾದ ಬೃಹತ್ ಸಮಸ್ಯೆಗಳಿವೆ. ಅಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೆರವಾಗುತ್ತದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರವು ಎಲ್ಲ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಹೀಗಾಗಿ, ಯೋಜನೆ ರೂಪಿಸುವಲ್ಲಿ, ಕಾಮಗಾರಿ ನಡೆಸುವಲ್ಲಿ ಎಲ್ಲ ಸಂಸ್ಥೆಗಳ ನಡುವೆ ಸಮನ್ವಯ ಇರುತ್ತದೆ. ಎಲ್ಲವನ್ನೂ ಮುಖ್ಯಮಂತ್ರಿಗಳು ಉಸ್ತುವಾರಿ ವಹಿಸುತ್ತಾರೆ. ಪರಿಣಾಮ, ಆಡಳಿತದಲ್ಲಿ ಪೂರ್ಣ ಪ್ರಮಾಣದ ಸಮನ್ವಯ ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ವರದಿ ಓದಿದ್ದೀರಾ?: ಹನಿಟ್ರ್ಯಾಪ್ | ಕರ್ನಾಟಕ ರಾಜಕಾರಣ ಕಂಡ ‘ಗಲೀಜುಗಾಥೆ’ಗಳ ಸರಮಾಲೆ

ಆದಾಗ್ಯೂ, 7 ಪಾಲಿಕೆಗಳ ಜೊತೆಗೆ, ಅದರ ಒಟ್ಟಾರೆ ಆಡಳಿತಕ್ಕಾಗಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ ರಚನೆ ಮಾಡುವುದುರಿಂದ, ಪ್ರಾಧಿಕಾರವು ಪಾಲಿಕೆಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎಂಬ ಅಭಿಪ್ರಾಯಗಳೂ ಇವೆ.  

‘ಗ್ರೇಟರ್‌ ಬೆಂಗಳೂರು’ ಯೋಜನೆಯು ಅಧಿಕಾರ ವಿಕೇಂದ್ರೀಕರಣದ ಬದಲು ಮರು ಕೇಂದ್ರೀಕರಣ ಮಾಡುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪಾಲಿಕೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ರಸ್ತೆ, ಚರಂಡಿ, ನೀರು ಸೇರಿದಂತ ಬೃಹತ್‌ ಯೋಜನೆಗಳನ್ನು ಪ್ರಾಧಿಕಾರವೇ ನೇರವಾಗಿ ನಿರ್ವಹಿಸುತ್ತದೆ. ಪರಿಣಾಮ, ಪಾಲಿಕೆಗಳ ಅಡಿಯಲ್ಲಿ ಹೆಚ್ಚಿನ ಅಧಿಕಾರಗಳು ಇರುವುದಿಲ್ಲ. ಇದು, ಸಂವಿಧಾನದ 74ನೇ ತಿದ್ದುಪಡಿಯ ಉದ್ದೇಶವನ್ನು ಉಲ್ಲಂಘಿಸುತ್ತದೆ ಎಂಬ ಆಕ್ಷೇಪಗಳಿವೆ.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು, ಸ್ಥಳೀಯ ಸಂಸ್ಥೆಗಳು ಮತ್ತು ಮೇಯರ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು. ಮಾತ್ರವಲ್ಲದೆ, ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಮೇಯರ್‌ಗಳ ಅಧಿಕಾರಾವಧಿಯನ್ನು 5 ವರ್ಷಗಳಿಗೆ ವಿಸ್ತರಿಸುತ್ತೇವೆಂದು ಭರವಸೆ ನೀಡಿದ್ದರು. ಕಾಂಗ್ರೆಸ್‌ ನಾಯಕರೇ ಜಾರಿಗೆ ತಂದಿದ್ದ, ಘೋಷಿಸಿದ್ದ ಉದ್ದೇಶಗಳನ್ನು ‘ಗ್ರೇಟರ್ ಬೆಂಗಳೂರು’ ಯೋಜನೆ ಬುಡಮೇಲು ಮಾಡುತ್ತದೆ ಎಂಬ ಅಭಿಪ್ರಾಯಗಳೂ ಬಿಜೆಪಿ ಮತ್ತು ಅವರ ಬೆಂಬಲಿಗ ವಲಯದಿಂದ ಕೇಳಿಬರುತ್ತಿದೆ.

ಅಧಿಕಾರ ಕೇಂದ್ರೀಕರಣ ಆಗುತ್ತದೆ ಎಂಬುದನ್ನು ಹಲವರು ಅಲ್ಲಗಳೆದಿದ್ದಾರೆ. ಬದಲಾಗಿ, ಆಡಳಿತವನ್ನು ನಾಗರಿಕರ ಹತ್ತಿರಕ್ಕೆ ತರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾರ್ಡ್‌ಗಳ ವ್ಯಾಪ್ತಿಯು ಚಿಕ್ಕದಾಗುವುದರಿಂದ ಕಾಪೋರೇಟರ್‌ಗಳು ಸಮಸ್ಯೆಗಳನ್ನು ಗಮನಿಸಲು, ಜನರ ಕುಂದುಕೊರತೆಗಳನ್ನು ಆಲಿಸಲು, ಅಗತ್ಯವಿದ್ದಾಗ ಜನರಿಗೆ ಸಿಗಲು ಸಾಧ್ಯವಾಗುತ್ತದೆ. ಅಲ್ಲದೆ, 7 ಪಾಲಿಕೆಗೆ 7 ಮೇಯರ್‌ಗಳು ಮತ್ತು 7 ಆಯುಕ್ತರು ಇರುವುದರಿಂದ ಆಡಳಿತ ನಿರ್ವಹಣೆ ಸುಧಾರಿಸುತ್ತದೆ. ರಸ್ತೆ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಗಳ ಪೂರೈಕೆ ಮತ್ತು ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ನಾಗರಿಕ ಹೋರಾಟಗಾರ ಶ್ರೀನಿವಾಸ ಅಲವಿಲ್ಲಿ ಅಭಿಪ್ರಾಯಪಟ್ಟರು.

“ಗ್ರೇಟರ್‌ ಬೆಂಗಳೂರು ಅಡಿಯಲ್ಲಿ ವಾರ್ಡ್ ಸಮಿತಿಗಳಿಗೆ ಆದ್ಯತೆ ನೀಡುವುದರಿಂದ ಜನರ ಸಹಭಾಗಿತ್ವಕ್ಕೆ ಮರುಚಾಲನೆ ದೊರೆಯುತ್ತದೆ. ಪ್ರಸ್ತುತ, ವಾರ್ಡ್‌ ಕಮಿಟಿ ಎಂಬುದು ಇದೆ ಎಂಬುದನ್ನೇ ಜನರು ಮರೆತಿದ್ದಾರೆ. ವಾರ್ಡ್‌ ಕಮಿಟಿಗಳು ‘ಗ್ರೇಟರ್‌ ಬೆಂಗಳೂರು’ ಯೋಜನೆಯ ಭಾಗವಾಗಿದ್ದು, ಆಡಳಿತ ನಿರ್ವಹಣೆಯಲ್ಲಿ ಜನರು ಭಾಗಿಯಾಗುವುದು ಮತ್ತು ಚರ್ಚಿಸುವುದು ಯಶಸ್ಸಿಗೆ ಕಾರಣವಾಗುತ್ತದೆ” ಎಂದು ಎ ನಾರಾಯಣ್ ಹೇಳುತ್ತಾರೆ.

ಅಲ್ಲದೆ, “ಎಲ್ಲ ಸಂದರ್ಭಗಳಲ್ಲೂ ಅಧಿಕಾರ ಕೇಂದ್ರೀಕರಣವನ್ನು ವಿರೋಧಿಸುವುದೇ ತಪ್ಪು. ಈಗ ಜಾರಿಯಲ್ಲಿರುವ ಬಿಬಿಎಂಪಿ ಕೂಡ ಕೇಂದ್ರೀಕೃತ ಅಧಿಕಾರದ ಭಾಗವೇ ಆಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬುದು ಇ ಪಾಲಿಕೆಗಳನ್ನೂ ಒಳಗೊಂಡ ಒಂದು ಕೇಂದ್ರ ಘಟಕವಾಗಿರುತ್ತದೆ. ಇದು, ಎಲ್ಲ ಪಾಲಿಕೆಗಳ ಕಾರ್ಯನಿರ್ವಹಣೆ ಮತ್ತು ಯೋಜನೆಗಳು ಹಾಗೂ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುತ್ತದೆ” ಎಂದು ಎ ನಾರಾಯಣ್ ಹೇಳಿದ್ದಾರೆ.

ಸದ್ಯ, ಬೆಳೆಯುತ್ತಿರುವ ಬೆಂಗಳೂರನ್ನು ಉತ್ತಮವಾಗಿ ನಿರ್ವಹಿಸಲು ಬೆಂಗಳೂರಿನ ಆಡಳಿತವನ್ನು 7 ಪಾಲಿಕೆಗಳಾಗಿ ವಿಂಗಡಿಸುವುದು ಉತ್ತಮ. ಆದರೆ, ಅದಕ್ಕೆ ತಕ್ಕಂತೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ಆಗ ಮಾತ್ರವೇ ‘ಗ್ರೇಟರ್ ಬೆಂಗಳೂರು’ ಅಕ್ಷರಶಃ ಗ್ರೇಟ್‌ ಆಗಲು ಸಾಧ್ಯವಾಗುತ್ತದೆ. ಬದಲಾಗಿ, ಅಧಿಕಾರ ಮತ್ತು ಹಣದ ಹಪಾಹಪಿಯ ಯೋಜನೆಯಾಗಿ, ರಿಯಲ್ ಎಸ್ಟೇಟ್ ಉದ್ಯಮದ ವಿಸ್ತರಣೆಗಾಗಿ ಜಾರಿಗೊಳಿಸಿದರೆ, ಹಣದ ಹೊಳೆ ಹರಿಸುವ ಯೋಜನೆಯಾಗಿ ಮಾತ್ರವೇ ಜಾರಿಯಾಗಿ, ಮೂಲ ಆಶಯವನ್ನು ವಿಫಲಗೊಳಿಸುತ್ತದೆ. ಇದು ಸರ್ಕಾರಕ್ಕೆ ಇರಬೇಕು ಎಂದು ತಜ್ಞರು ಎಚ್ಚರಿಕೆಯ ಮಾತನ್ನಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X