ಎಸ್ ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ‘ಎಸ್ ದಿವಾಕರ್ ಸ್ನೇಹಿತರ ಬಳಗ’ ಸಂಪಾದಿಸಿ, ವೀರಲೋಕ ಪ್ರಕಾಶನ ಪ್ರಕಟಿಸಿರುವ ‘ಪರಿಮಳದ ಪಡಸಾಲೆ’ ಎಂಬ ಕೃತಿಗೆ ಬರೆದಿರುವ ಸಂಪಾದಕೀಯ ಮಾತುಗಳ ಆಯ್ದಭಾಗವಿದು. ಇದೇ ನವೆಂಬರ್ 26ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ‘ನಮ್ಮ ದಿವಾಕರ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.
ದಿವಾಕರ್ ಅವರೊಂದಿಗಿನ ಒಡನಾಟವೆಂದರೆ, ಸಾವಿರ ಸಾವಿರ ಕಥನಗಳೊಂದಿಗಿನ ಒಡನಾಟವಲ್ಲದೆ ಬೇರೇನೂ ಅಲ್ಲ. ವಿಶ್ವದ ಯಾವುದೋ ಭಾಷೆಯ, ಯಾವುದೋ ಬರಹಗಾರನ ಆ ಕಥನಗಳನ್ನು, ದಿವಾಕರ್ ಮೂಲಕ ಕನ್ನಡದ ಓದುಗರು ದಶಕಗಳಿಂದ ತಮ್ಮದಾಗಿಸಿಕೊಳ್ಳುತ್ತಾ ಬಂದಿರುವುದು ಆಧುನಿಕ ಕನ್ನಡ ಸಾಹಿತ್ಯದ ಅಪೂರ್ವ ವಿದ್ಯಮಾನಗಳಲ್ಲೊಂದು. ಇತರರ ಕಥೆಗಳನ್ನು ಹೇಳುವುದಕ್ಕೆ ಮಾತ್ರ ದಿವಾಕರ್ ಅವರ ಕಥನಪ್ರತಿಭೆ ಸೀಮಿತವಾಗಿಲ್ಲ; ಸ್ವತಃ ಅವರೇ ಅನನ್ಯ ಕಥೆಗಾರರು. ಸಮರ್ಥ ಕವಿ, ಪ್ರಬಂಧಕಾರರೂ.
ಪತ್ರಿಕೋದ್ಯಮ ಮತ್ತು ಸಾಹಿತ್ಯ ದಿವಾಕರ್ ಅವರ ಕೊಡುಗೆ ಸಂದಿರುವ ಎರಡು ಕ್ಷೇತ್ರಗಳು. ಎರಡೂ ಕ್ಷೇತ್ರಗಳಲ್ಲಿ ಅತ್ಯುತ್ತಮವಾದುದನ್ನು ಸಾಧಿಸಿದ ಯಶಸ್ಸು ಅವರದು. ‘ಸುಧಾ’ ಹಾಗೂ ‘ಮಲ್ಲಿಗೆ’ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಅವರು ಅನೇಕ ಬರಹಗಾರರನ್ನು ರೂಪಿಸಿದ್ದೇ ಅಲ್ಲದೆ, ಅವರ ಬರಹಗಳಿಗೆ ಹೊಸ ರೂಪವನ್ನೂ ನೀಡಿದರು. ಕಥೆ, ಕಾದಂಬರಿಗಳಿಗೆ ಹೊಸ ರೂಪ ನೀಡುವ ಮೂಲಕ ನಿಜವಾದ ಅರ್ಥದಲ್ಲಿ ‘ಸಂಪಾದಕ’ನ ಕೆಲಸ ಮಾಡಿದವರು ಅವರು. ಕನ್ನಡದ ಪ್ರಮುಖ ಲೇಖಕಿ ವೈದೇಹಿ ಅವರು ತಮ್ಮ ಬರವಣಿಗೆಯ ಆರಂಭದ ದಿನಗಳಲ್ಲಿ, ‘ಜಾನಕಿ’ ಎನ್ನುವ ತಮ್ಮ ನಿಜವಾದ ಹೆಸರಿನಲ್ಲಿ ಬರೆಯಲು ಹಿಂಜರಿದಾಗ, ಅವರಿಗೆ ವೈದೇಹಿ ಎನ್ನುವ ನಾಮಕರಣ ಮಾಡಿದ್ದು ದಿವಾಕರ್ ಅವರೇ. ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಅತ್ಯುತ್ತಮ ನುಡಿಚಿತ್ರಗಳನ್ನು ಬರೆದಿದ್ದ ಅವರು, ಇತರ ಲೇಖಕರಿಂದಲೂ ವಿಶಿಷ್ಟವಾದುದನ್ನು ಬರೆಸಿದರು. ಯಶವಂತ ಚಿತ್ತಾಲರು ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಎನ್ನುವ ಲೇಖನಮಾಲೆಯನ್ನು ‘ಮಲ್ಲಿಗೆ’ಯಲ್ಲಿ ಬರೆಯಲು ಹಾಗೂ ಗಿರಡ್ಡಿ ಗೋವಿಂದರಾಜರು ‘ಮರೆಯಬಾರದ ಹಳೆಯ ಕಥೆಗಳು’ ಸರಣಿಯನ್ನು ರೂಪಿಸಲು ದಿವಾಕರ್ ಅವರ ಒತ್ತಾಸೆಯೇ ಕಾರಣ. ಕಥೆಗಾರ ಚಿತ್ತಾಲರು ‘ಲಬಸಾ’ಗಳ (ಲಯಬದ್ಧ ಸಾಲುಗಳು) ಮೂಲಕ ಕವಿಯಾದುದು ದಿವಾಕರ್ ಆಗ್ರಹದಿಂದಲೇ. ಹೀಗೆ, ಬರೆಸಿದ್ದು ಒಂದು ಕಡೆಯಾದರೆ, ಒಳ್ಳೆಯ ಬರವಣಿಗೆ ಪ್ರಕಟವಾದಾಗ ಅದನ್ನು ಸಂಭ್ರಮಿಸುವ, ತಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳುವ ಕೆಲಸವನ್ನೂ ದಿವಾಕರ್ ಮಾಡಿದರು. ಯುವ ಕವಿ–ಕಥೆಗಾರರ ಒಳ್ಳೆಯ ಕೃತಿಗಳು ಪ್ರಕಟವಾದಾಗ ತಮ್ಮ ಬರವಣಿಗೆಗಿಂತಲೂ ಹೆಚ್ಚು ಪ್ರೇಮದಿಂದ ದಿವಾಕರ್ ಸಂಭ್ರಮಿಸುವುದನ್ನು ಅವರ ಸಂಪರ್ಕಕ್ಕೆ ಬಂದವರೆಲ್ಲರೂ ಬಲ್ಲರು. ಯುವಬಳಗವನ್ನು ಕಟ್ಟಿಕೊಂಡೇ ದಿವಾಕರ್ ಅವರು ಆಯೋಜಿಸಿದ್ದ ಕಾವ್ಯಹಬ್ಬಗಳನ್ನೂ ಅವರ ದಣಿವರಿಯದ ಪ್ರಯೋಗಶೀಲತೆಯ ಭಾಗವಾಗಿಯೇ ನೋಡಬೇಕು. ವಿವಿಧ ಕ್ಷೇತ್ರಗಳ ಪ್ರಸಿದ್ಧರು ಕವಿತೆಗಳನ್ನು ವಾಚಿಸಿದ ‘ನಾದಲೀಲೆ’, ‘ಚೈತ್ರೋದಯ’ ಹಾಗೂ ‘ಗುಲ್‌ಮೊಹರ್’ ಕಾರ್ಯಕ್ರಮಗಳು, ದ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ ಹಾಗೂ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಸಂದ ಗೌರವವಷ್ಟೇ ಆಗಿರಲಿಲ್ಲ; ಕನ್ನಡ ಕಾವ್ಯವನ್ನು ಜನಮುಖಿಗೊಳಿಸುವ ಪ್ರಯೋಗಗಳೂ ಆಗಿದ್ದವು.
ಇದನ್ನು ಓದಿದ್ದೀರಾ?: ದೇಶ ವಿಭಜನೆ ಕಾಲಘಟ್ಟದ ಒಂದು ಉಪಕತೆ : ಹಸನ್ ನಯೀಂ ಸುರಕೋಡ ಬರೆಹ
ದಿವಾಕರ್ ಅವರಿಗೆ ಯಶವಂತ ಚಿತ್ತಾಲರು ಬರೆದ ಪತ್ರವೊಂದರಲ್ಲಿನ, ‘ಯಾವಾಗಲೂ ಉಳಿದವರ ಪ್ರತಿಭೆಯ ಬಗೆಗೇ ಕಾಳಜಿ ವಹಿಸುವುದರಲ್ಲಿ ತನ್ನ ಪ್ರತಿಭೆಗೆ ಇಷ್ಟೊಂದು ನಿರಾಸಕ್ತನಾದ ಇನ್ನೊಬ್ಬ ಲೇಖಕನನ್ನು ನಾನಿನ್ನೂ ಕಂಡಿಲ್ಲ!’ ಎನ್ನುವ ಮಾತು ದಿವಾಕರ್ ಅವರೊಂದಿಗೆ ಒಡನಾಡಿದ ಬಹುತೇಕರ ಅಭಿಪ್ರಾಯವೂ ಹೌದು. ಈ ನಿಸ್ವಾರ್ಥದಿಂದಲೇ ಬೇರೆ ಬೇರೆ ದೇಶಗಳ ಕಥೆಗಳನ್ನು ಕನ್ನಡಕ್ಕೆ ತರಲು ಅವರಿಗೆ ಸಾಧ್ಯವಾಗಿದೆ; ಸ್ವಂತ ಬರವಣಿಯಷ್ಟೇ, ಅಥವಾ ಅದಕ್ಕೂ ಮಿಗಿಲೆಂದು ಅನುವಾದಗಳನ್ನು ನೋಡುವುದು ಸಾಧ್ಯವಾಗಿದೆ.
ಮಿತ್ರರ ಬರವಣಿಗೆಗೆ ಪ್ರೇರಣೆಯಾಗುವುದು ಮಾತ್ರವಲ್ಲದೆ, ಅವರ ಕೃತಿಗಳ ಪ್ರಕಟಣೆಗೂ ದಿವಾಕರ್ ನೆರವಾಗಿದ್ದಾರೆ. ನಿಸಾರ್ ಅಹಮದ್‌ರ ‘ನಿತ್ಯೋತ್ಸವ’ ಸಂಕಲನ ಬಾಕಿನ ಅವರ ‘ಲಿಪಿ ಪ್ರಕಾಶನ’ದಡಿ ಪ್ರಕಟಗೊಳ್ಳಲಿಕ್ಕೆ ದಿವಾಕರ್ ಅವರದೇ ಒತ್ತಾಸೆ. ಗೋಪಾಲಕೃಷ್ಣ ಅಡಿಗರ ಕವಿತೆಗಳು ಮೊದಲ ಬಾರಿಗೆ ‘ಸಮಗ್ರ ಕಾವ್ಯ’ ಹೆಸರಿನಲ್ಲಿ ಪ್ರಕಟಗೊಳ್ಳಲಿಕ್ಕೆ, ಆ ಮೂಲಕ ಕನ್ನಡದಲ್ಲಿ ‘ಸಮಗ್ರ ಕಾವ್ಯ’ ಪರಿಕಲ್ಪನೆ ಆರಂಭಗೊಳ್ಳುವುದರ ಹಿಂದೆ ಇದ್ದುದೂ ದಿವಾಕರ್ ಅವರ ಸೃಜನಶೀಲ ಉತ್ಸಾಹವೇ.
ಎಪ್ಪತ್ತೊಂಬತ್ತು ವರ್ಷಗಳನ್ನು ದಾಟಿ ಎಂಬತ್ತರ ಕ್ಲಬ್ಬಿಗೆ ದಿವಾಕರ್ ಕಾಲಿಡುತ್ತಿರುವ ಸಂದರ್ಭದಲ್ಲಿ ಹಿಂತಿರುಗಿ ನೋಡಿದರೆ, ಸಂಖ್ಯೆಯ ದೃಷ್ಟಿಯಿಂದ ಅವರ ಸ್ವಂತ ಬರವಣಿಗೆಯ ಪ್ರಮಾಣ ದೊಡ್ಡದಾಗಿಯೇನೂ ಕಾಣುವುದಿಲ್ಲ. ಆದರೆ, ಗುಣಮಟ್ಟ ಹಾಗೂ ಪ್ರಯೋಗಶೀಲತೆಯ ದೃಷ್ಟಿಯಿಂದ ಅವರು ಕನ್ನಡದ ಪ್ರಮುಖ ಲೇಖಕರ ಸಾಲಿಗೆ ಸೇರಿರುವವರು. ಅವರ ಕತೆಗಳು ಕನ್ನಡ ಕಥಾಲೋಕದ ಹೊಳಪನ್ನು ಹೆಚ್ಚಿಸಿದ್ದರೆ, ಅನುವಾದಗಳು ಕಥನದ ಹಲವು ಸಾಧ್ಯತೆಗಳನ್ನು ಪರಿಚಯಿಸಿವೆ. ಬರೆದುದೆಲ್ಲವೂ ಭಿನ್ನವಾಗಿರಬೇಕು ಎನ್ನುವ ದಿವಾಕರ್ ಹಂಬಲ, ಸೃಜನಶೀಲ ಬರಹಗಾರನೊಬ್ಬನ ಉತ್ಕಟ ತುಡಿತದಂತೆ, ಬರವಣಿಗೆಯ ಸಾಧ್ಯತೆಗಳ ಕುರಿತ ಎಂದಿಗೂ ತೀರದ ಕುತೂಹಲದಂತೆ ಭಾಸವಾಗುತ್ತದೆ.