ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು ಬರೋಬ್ಬರಿ 11 ವರ್ಷವಾಗಿದೆ. ಈ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನ ತಂದಿದ್ದಕ್ಕಿಂತ ಹೆಚ್ಚಾಗಿ ಜನವಿರೋಧಿ ಯೋಜನೆಗಳನ್ನ ಜಾರಿಗೆ ತಂದು, ಜನರನ್ನ ಸಂಕಷ್ಟಕ್ಕೆ ದೂಡಿದ್ದೆ ಹೆಚ್ಚು. ಆರ್ಥಿಕತೆಯಲ್ಲಿ ಸುಧಾರಣೆ ತರುತ್ತೇವೆಂದು ಹೇಳಿಕೊಂಡು, ಒಂದು ದೇಶ – ಒಂದೇ ತೆರಿಗೆ ಹೆಸರಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನ ದೇಶದ ಜನರ ಮೇಲೆ ಹೇರಿತ್ತು. ಜಿಎಸ್‌ಟಿ ಜಾರಿಗೆ ಬಂದು ಬರೋಬ್ಬರಿ ಎಂಟು ವರ್ಷಗಳು ಗತಿಸಿವೆ. ಆದರೂ, ಆರ್ಥಿಕತೆ ಸುಧಾರಿಸಿಲ್ಲ. ಬದಲಾಗಿ, ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ಪಾಲಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಾತ್ರವಲ್ಲದೆ, ದೇಶದಲ್ಲಿ ಇಂದಿಗೂ 17 ಲಕ್ಷ ಜನರು ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಆದರೂ ಕೂಡ, ಮೋದಿ ಸರ್ಕಾರ ಹಾಲು, ಮೊಸರು, ತುಪ್ಪ, ಗೋಧಿ ಹಿಟ್ಟು ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತು ಸೇರಿದಂತೆ ಸಾವಯವ ಗೊಬ್ಬರದ ಮೇಲೂ ಜಿಎಸ್‌ಟಿ ಹಾಕಿ ಜನರನ್ನು ಮತ್ತಷ್ಟು ಲೂಟಿ ಮಾಡುತ್ತಿದೆ.
ಜಿಎಸ್‌ಟಿ ಜೊತೆಗೆ, ದೇಶದಲ್ಲಿ ಸಂಪೂರ್ಣವಾಗಿ ‘ಕ್ಯಾಶ್ ಲೆಸ್’ (ನಗದು ರಹಿತ) ಆರ್ಥಿಕತೆ ತರಬೇಕೆಂದು ಮೋದಿ ಅವರು ಕರೆ ಕೊಟ್ಟಿದ್ದರು. ಇ-ವಾಲೆಟ್ ಹಾಗೂ ಇನ್ನಿತರ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸುವಂತೆ ಜನರನ್ನು ಉತ್ತೇಜಿಸಿದ್ದರು. ಇನ್ನೇನ್ನಿದ್ದರೂ ಡಿಜಿಟಲ್ ಯುಗ ಅಂತ ಹೇಳಿದ್ದರು. ಅದರಂತೆಯೇ, ಭಾರತದ ಜನಪ್ರಿಯ ಪೇಮೆಂಟ್ ಫ್ಲಾಟ್ ಫಾರ್ಮ್ ಆಗಿರುವ ‘ಯುಪಿಐ’ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ವಿತ್ತೀಯ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ.ಗಳಷ್ಟಿದ್ದ ಯುಪಿಐ ವಹಿವಾಟಿನ ಮೌಲ್ಯವು 2023-24ರ ಹಣಕಾಸು ವರ್ಷದ ವೇಳೆಗೆ ಶೇ.138ರಷ್ಟು ಏರಿಕೆಯಾಗಿ ₹200 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಹಲವು ಬ್ಯಾಂಕ್‌ಗಳು ಒಂದಾಗಿ ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಪಾವತಿ ವ್ಯವಸ್ಥೆ ಯುಪಿಐ, ಅಂದರೆ, Unified Payments Interface (UPI). ಇತ್ತೀಚೀನ ದಿನಗಳಲ್ಲಿ UPI ಭಾರತದಲ್ಲಿ ವಹಿವಾಟುಗಳಿಗೆ ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ಜನರು ನಗದು ವ್ಯವಹಾರ ಮಾಡುವುದು ಸಂಪೂರ್ಣ ಕಡಿಮೆಯಾಗುತ್ತಿದ್ದು, ಆನ್‌ಲೈನ್ ಪಾವತಿ ವಿಧಾನವನ್ನೇ ಅವಲಂಬಿಸಿದ್ದಾರೆ.
ಸದ್ಯಕ್ಕೆ ದೇಶದಲ್ಲಿ ಯುಪಿಐ ಬಳಕೆಗೆ ಯಾವುದೇ ಶುಲ್ಕ ಇಲ್ಲ. ಹೀಗಾಗಿ, ಜನರು ಫೋನ್ ಪೇ, ಗೂಗಲ್ ಪೇ ಸೇರಿದಂತೆ ಹಲವು ರೀತಿಯ ಆನನ್‌ಲೈನ್ ಪಾವತಿ ವೇದಿಕೆಗಳ ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಯುಪಿಐ ಬಳಕೆ ಮೇಲೆ ಶುಲ್ಕ ವಿಧಿಸುವುದಕ್ಕೆ ಆರಂಭ ಮಾಡಿದರೆ, ಬಹುತೇಕರು ಯುಪಿಐ ಬಳಕೆಯನ್ನೇ ನಿಲ್ಲಿಸಬಹುದು ಅನ್ನೋ ವಿಚಾರ ಒಂದು ಸರ್ವೆಯಲ್ಲಿ ಬಯಲಾಗಿದೆ.
ಹೌದು, ಯುಪಿಐ ಬಳಕೆಯಲ್ಲಿ ವಹಿವಾಟು ಶುಲ್ಕವನ್ನ ಕೇಂದ್ರ ಸರ್ಕಾರ ಹೇರಿದರೆ, ಭಾರತದಲ್ಲಿ ಮೂರನೇ ಎರಡರಷ್ಟು ಅಂದರೆ, ಅಂದಾಜು ಶೇ.75ರಷ್ಟು ಬಳಕೆದಾರರು ಯುಪಿಐ ಪಾವತಿಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ಆನ್ ಲೈನ್ ಮೂಲಕ ಸರ್ವೆಯೊಂದನ್ನ ನಡೆಸಿದ್ದು, ದೇಶದ 364 ಜಿಲ್ಲೆಗಳಲ್ಲಿ ಒಟ್ಟು 42 ಸಾವಿರ ಮಂದಿಯನ್ನು ಆನ್ ಲೈನ್ ಮೂಲಕ ಸಂದರ್ಶನ ಮಾಡಿದೆ. ಈ ಲೋಕಲ್ ಸರ್ಕಲ್ ಸರ್ವೆಗೆ ಶೇ.67ರಷ್ಟು ಪುರುಷರು ಹಾಗೂ ಶೇ.33ರಷ್ಟು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಲ್ ಸರ್ಕಲ್ಸ್ ಸಂಸ್ಥೆ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಶೇ.38ರಷ್ಟು ಬಳಕೆದಾರರು ಶೇ.50ಕ್ಕೂ ಹೆಚ್ಚು ಮೊತ್ತದ ವಹಿವಾಟನ್ನು ಯುಪಿಐ ಮೂಲಕ ಮಾಡುತ್ತಿದ್ದಾರೆ. ಶೇ.22ರಷ್ಟು ಮಂದಿ ಮಾತ್ರ ಯುಪಿಐ ವಹಿವಾಟು ಶುಲ್ಕವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದರೆ, ಈ ಸರ್ವೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಒಂದು ವೇಳೆ ಮುಂದಿನ ದಿನಗಳಲ್ಲಿ ಯುಪಿಐ ಪಾವತಿಗೆ ಶುಲ್ಕ ವಿಧಿಸುವ ಪ್ರಕ್ರಿಯೆ ಆರಂಭವಾದರೆ ತಾವು ಯುಪಿಐ ಬಳಕೆಯನ್ನೇ ನಿಲ್ಲಿಸಿ ನಗದು ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಭಾನುವಾರ ಲೋಕಲ್ ಸರ್ಕಲ್ ಸಂಸ್ಥೆ ತನ್ನ ಸರ್ವೆಯನ್ನು ಬಹಿರಂಗ ಮಾಡಿದೆ.
ಅಷ್ಟೇ ಅಲ್ಲದೇ, ಕಳೆದ ವರ್ಷ ತಮ್ಮ ಯುಪಿಐ ಬಳಕೆ ಮೇಲೆ ವಹಿವಾಟು ಶುಲ್ಕ ಕಡಿತವಾಗಿದೆ ಎಂದೂ ಕೆಲವರು ಹೇಳಿದ್ದಾರೆ. ಹೌದು, ಕಳೆದ 12 ತಿಂಗಳಲ್ಲಿ ತಮ್ಮ ಖಾತೆಯಲ್ಲಿ ಎರಡಕ್ಕೂ ಹೆಚ್ಚು ಬಾರಿ ಯುಪಿಐ ಪಾವತಿ ಮೇಲಿನ ಶುಲ್ಕ ಕಡಿತ ಆಗಿದೆ. ಇದು ನಮ್ಮ ಅನುಭವಕ್ಕೆ ಬಂದಿದೆ ಎಂದು ಶೇ.37ರಷ್ಟು ಬಳಕೆದಾರರು ಹೇಳಿದ್ದಾರೆ. ಇನ್ನು ಬಹುತೇಕರು ಪ್ರತಿ ತಿಂಗಳು ಕನಿಷ್ಟ 10 ಬಾರಿಯಾದರೂ ಯುಪಿಐ ಬಳಕೆ ಮಾಡೋದಾಗಿ ಹೇಳಿದ್ದಾರೆ. ಈ ಸಂಖ್ಯೆ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆ ಆಗುತ್ತದೆ. ಜುಲೈ 15ರಿಂದ ಸೆಪ್ಟೆಂಬರ್ 20ರ ನಡುವೆ ಈ ಆನ್ ಲೈನ್ ಸಮೀಕ್ಷೆಯನ್ನು ನಡೆಸಲಾಗಿದ್ದು, 15,598 ಬಳಕೆದಾರರು ನಿರ್ದಿಷ್ಟವಾಗಿ ಯುಪಿಐ ವಹಿವಾಟು ಶುಲ್ಕದ ಕುರಿತೇ ಪ್ರತಿಕ್ರಿಯಿಸಿದ್ದಾರೆ. 38% ಬಳಕೆದಾರರು ಡೆಬಿಟ್, ಕ್ರೆಡಿಟ್ ಅಥವಾ ಯಾವುದೇ ರೀತಿಯ ಡಿಜಿಟಲ್ ವಹಿವಾಟಿನ ಬದಲಿಗೆ ಯುಪಿಐ ಮೂಲಕ ತಮ್ಮ ಪಾವತಿಯ ವಹಿವಾಟಿನ 50% ಕ್ಕಿಂತ ಹೆಚ್ಚು ಮಾಡುತ್ತಾರೆ ಎಂದು ಸಮೀಕ್ಷೆಯು ಪತ್ತೆ ಹಚ್ಚಿದೆ.
ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವುದರ ವಿರುದ್ಧ ವಕಲಾತ್ತು ವಹಿಸಲು ಲೋಕಲ್ ಸರ್ಕಲ್ಸ್ ಈ ಶೋಧನೆಗಳನ್ನು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಎದುರು ಮಂಡಿಸಲು ಯೋಜಿಸಿದೆ.
2023-24ನೇ ಆರ್ಥಿಕ ವರ್ಷದಲ್ಲಿ ಯುಪಿಐ ವಹಿವಾಟು ₹131 ಬಿಲಿಯನ್‌ಗೆ ಏರಿಕೆಯಾಗಿದ್ದು, ಗಾತ್ರದಲ್ಲಿ ಶೇ. 57ರಷ್ಟು ಏರಿಕೆಯಾಗಿದ್ದರೆ, ಮೌಲ್ಯದಲ್ಲಿ ಶೇ. 44ರಷ್ಟು ಏರಿಕೆಯಾಗಿದೆ. ಒಟ್ಟಾರೆ ಯುಪಿಐ ವಹಿವಾಟಿನ ಮೌಲ್ಯವು 199.89 ಟ್ರಿಲಿಯನ್‌ಗೆ ತಲುಪಿದೆ ಎಂಬುದರತ್ತ ಸಮೀಕ್ಷೆ ಬೊಟ್ಟು ಮಾಡಿದೆ.
ಇನ್ನು ಯುಪಿಐ ವಹಿವಾಟಿನ ಮೇಲೆ ಹಲವು ಹಂತಗಳಲ್ಲಿ ಶುಲ್ಕ ವಿಧಿಸುವ ಪ್ರಸ್ತಾಪವನ್ನು 2022ರ ಆಗಸ್ಟ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿಟ್ಟಿತ್ತು. ಈ ಪ್ರಸ್ತಾಪವನ್ನು ಆರ್‌ಬಿಐ ಚರ್ಚಾ ಹಂತದಲ್ಲೇ ಇಟ್ಟಿದೆ. ಈ ನಡುವೆ, ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಸ್ಪಷ್ಟನೆ ನೀಡಿದ್ದು, ಯುಪಿಐ ಪಾವತಿ ಹಾಗೂ ವಹಿವಾಟಿನ ಮೇಲೆ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾಪ ಇಲ್ಲ ಎಂದಿದೆ.
ಇನ್ನು ಜಿಎಸ್‌ಟಿ ಹೇರಿಕೆ ಆರಂಭವಾದಾಗಿನಿಂದಲೂ ಜನರು ಇದರ ವಿರುದ್ಧ ಪ್ರತಿಭಟಿಸುತ್ತಲೇ ಇದ್ದಾರೆ. ಅಗತ್ಯ ಆಹಾರದ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎಷ್ಟೇ ಪ್ರತಿಭಟಿಸಿದರೂ ಕೂಡ ಕೇಂದ್ರ ಸರ್ಕಾರ ಜನರ ಈ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬಡ ಹಾಗೂ ಮಧ್ಯಮವರ್ಗದವರು ಬಳಸುವ ಆಹಾರ ವಸ್ತುಗಳ ಮೇಲೆ ದುಬಾರಿ ಜಿಎಸ್‌ಟಿ ಹಾಕಿ, ಕೇಂದ್ರ ಸರ್ಕಾರ ಮೋದಿಯ ಉದ್ಯಮಿ ಗೆಳೆಯರಿಗೆ ಮಾತ್ರ ಸಾಲ ಮನ್ನಾದ ಉಚಿತ ಯೋಜನೆ ನೀಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಬಡವರನ್ನ ಸುಲಿಗೆ ಮಾಡುತ್ತಿದೆ. ಟೀ, ಕಾಫಿ ಪುಡಿ, ಹಾಲು, ಬೆಲ್ಲ, ಸಕ್ಕರೆ, ರಸ್ಕ್ ಮೇಲೆ ಶೇ.5ರಷ್ಟು ಜಿಎಸ್‌ಟಿ ಹಾಕಿದೆ. ಇನ್ನು ಡ್ರೈ ಫ್ರೂಟ್ಸ್, ಜ್ಯೂಸ್ ಪ್ಯಾಕ್ ಮೇಲೆ ಶೇ.12 ರಷ್ಟು ಜಿಎಸ್‌ಟಿ, ಬ್ರೆಡ್ ಮೇಲೆ 18% ಜಿಎಸ್‌ಟಿ ಹಾಗೂ ಕಾರ್ಬೊನೇಟ್ ಪಾನೀಯ, ಚಾಕೊಲೇಟ್ ಮೇಲೆ ಶೇ.28 ರಷ್ಟು ಜಿಎಸ್‌ಟಿ ಹೇರಿದೆ. 25 ಕೆ.ಜಿಗಿಂತ ಹೆಚ್ಚು ಅಕ್ಕಿಯ ಮೇಲೆ ಶೇ.5ರಷ್ಟು, ಅವಲಕ್ಕಿ, ರವೆ, ಮಂಡಕ್ಕಿ, ನೂಡಲ್ಸ್ ಮೇಲೆ ಶೇ.28ರಷ್ಟು ಜಿಎಸ್‌ಟಿ, ಒಂದು ಸಾವಿರಕ್ಕಿಂತ ಕಡಿಮೆ ಬೆಲೆಯ ಬಟ್ಟೆಯ ಮೇಲೆ ಶೇ.5ರಷ್ಟು, ಒಂದು ಸಾವಿರಕ್ಕಿಂತ ಕಡಿಮೆ ದರದ ಪಾದರಕ್ಷೆಯ ಮೇಲೆ ಶೇ.12ರಷ್ಟು ತೆರಿಗೆ, ಒಂದು ಸಾವಿರಕ್ಕಿಂತ ಹೆಚ್ಚಿನ ದರದ ಪಾದರಕ್ಷೆಯ ಮೇಲೆ ಶೇ.18ರಷ್ಟು ಜಿಎಸ್‌ಟಿ ಹೇರಿದೆ.
ಇನ್ನು ಜನರು ನಿತ್ಯವೂ ಬಳಸುವ ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಲೋಷನ್, ಸೋಪು, ಪೌಡರ್, ಟೂತ್ ಪೇಸ್ಟ್, ಬ್ರಷ್, ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೇ.18ರಷ್ಟು ತೆರಿಗೆ ಹಾಕಲಾಗಿದೆ. ಶ್ಯಾಂಪೂಗಳ ಮೇಲೆ ಶೇ. 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಮಕ್ಕಳ ಕಲಿಕಾ ವಸ್ತುಗಳನ್ನ ಬಿಡದ ಕೇಂದ್ರ ಸರ್ಕಾರ ಪೆನ್ಸಿಲ್, ಕ್ರೆಯಾನ್ಸ್ (ಬಣ್ಣದ ಪೆನ್ಸಿಲ್) ಮೇಲೆ ಶೇಕಡಾ 12 ಹಾಗೂ ಪೆನ್ ಮೇಲೆ ಶೇ.28ರಷ್ಟು ಜಿಎಸ್‌ಟಿ ಹೇರಿದೆ. ದಿನನಿತ್ಯ ಒಬ್ಬ ವ್ಯಕ್ತಿ ಬಳಸುವ ಪ್ರತಿಯೊಂದು ವಸ್ತುಗಳ ಮೇಲೆಯೂ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನ ಹೇರಿದೆ.
ಸೆಪ್ಟೆಂಬರ್ 11ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಧ್ಯಮಿಗಳ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉದ್ಯಮಿಗಳ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅನ್ನಪೂರ್ಣ ಸಂಸ್ಥೆಯ ಮಾಲೀಕ ಟಿ. ಶ್ರೀನಿವಾಸನ್ ಅವರು ಪ್ರಶ್ನೆಯೊಂದನ್ನು ಕೇಳಿದ್ದರು. ಶ್ರೀನಿವಾಸನ್ ಅವರು ಜಿಎಸ್‌ಟಿಯ ಕ್ಲಿಷ್ಟತೆ ಬಗ್ಗೆ ಮಾತನಾಡಿದ್ದರು.
ಈ ಸುದ್ದಿ ಓದಿದ್ದೀರಾ? ಮುಡಾ ಹಗರಣ | ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಪ್ರತಿ ಬಾರಿಯೂ ನಮ್ಮ ರೆಸ್ಟೋರೆಂಟ್ ಮುಂದೆ ಜಿಎಸ್‌ಟಿ ವಿಚಾರವಾಗಿ ಜಗಳವಾಗುತ್ತಿರುತ್ತೆ, “ಬನ್‌ಗೆ 5% ಜಿಎಸ್‌ಟಿ ಇದೆ, ಕ್ರೀಮ್‌ಗೆ 5% ಜಿಎಸ್‌ಟಿ ಇದೆ. ಅದೇ ಬನ್ನಿನೊಳಗೆ ಕ್ರೀಮ್ ಹಾಕಿದರೆ ಅದಕ್ಕೆ ಶೇ.18ರಷ್ಟು ಜಿಎಸ್‌ಟಿ ನಮೂದಾಗುತ್ತೆ. ಗ್ರಾಹಕರು ಏನು ಹೇಳುತ್ತಿದ್ದಾರೆಂದರೆ, ನೀವು ಕ್ರೀಮು, ಬನ್ನು ತಂದುಕೊಟ್ಟರೆ ನಾನೇ ಹಾಕಿಕೊಳ್ಳುತ್ತೇನೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಹೀಗಾಗಿ, ನಮಗೆ ಅಂಗಡಿ ನಡೆಸುವುದಕ್ಕೆ ಕಷ್ಟವಾಗುತ್ತಿದೆ. ದಯವಿಟ್ಟು ನಮಗೆ ಹೀಗೆ ಪ್ರತ್ಯೇಕ ಜಿಎಸ್‌ಟಿಗಿಂತ ಏಕರೂಪದ ಜಿಎಸ್‌ಟಿ ತಂದರೆ ಅನುಕೂಲವಾಗುತ್ತದೆ ಎಂದು ಜಿಎಸ್‌ಟಿಯಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿದ್ದರು. ಅವರು ಜಿಎಸ್‌ಟಿ ಬಗ್ಗೆ ಆಡಿದ ಮಾತುಗಳು ವೈರಲ್ ಆಗಿದ್ದವು.
ತಿನ್ನುವ ಆಹಾರದಿಂದ ಹಿಡಿದು ದಿನನಿತ್ಯ ಜನರು ಬಳಸುವ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹೇರಿದೆ. ಸದ್ಯ ಯುಪಿಐ ಪಾವತಿಗಳ ಜನಪ್ರಿಯತೆಯು ದೇಶಾದ್ಯಂತ ಹೆಚ್ಚುತ್ತಿದೆ. ಪ್ರತಿದಿನ ಹೆಚ್ಚಿನ ಜನರು ಈ ಸಿಸ್ಟಮ್‌ಗೆ ಸೇರುತ್ತಿದ್ದಾರೆ. ಜನರು ದೈನಂದಿನ ವಸ್ತುಗಳನ್ನು ಖರೀದಿಸುತ್ತಿರಲಿ ಅಥವಾ ಯಾರಿಗಾದರೂ ಹಣವನ್ನು ಕಳುಹಿಸುತ್ತಿರಲಿ, ಯುಪಿಐ ಎಲ್ಲರಿಗೂ ಅನುಕೂಲಕರವಾಗಿದೆ. 64% ಗ್ರಾಹಕರು ಆನ್‌ಲೈನ್ ಹಬ್ಬದ ಶಾಪಿಂಗಾಗಿ ಯುಪಿಐ ಅನ್ನು ಆಯ್ಕೆ ಮಾಡುತ್ತಾರೆ. ವಿಶೇಷವಾಗಿ ಹಬ್ಬದ ಸಮಯದಲ್ಲಿ 82% ಜನರು ಯುಪಿಐ ರಿವಾರ್ಡ್ ಮತ್ತು ಕ್ಯಾಶ್ ಬ್ಯಾಕ್ ಗಳಿಸಲು ತಮ್ಮ ನೆಚ್ಚಿನ ಡಿಜಿಟಲ್ ಪಾವತಿ ವಿಧಾನವನ್ನ ಬಳಕೆ ಮಾಡುತ್ತಾರೆ. ಈ ನಡುವೆ ಕೇಂದ್ರ ಸರ್ಕಾರವೇನಾದರೂ ಮತ್ತೆ ಈ ಯುಪಿಐ ಫ್ಲಾಟ್ ಫಾರ್ಮ್ ಮೇಲೆನಾದರೂ ಜಿಎಸ್‌ಟಿ ಹೇರಿದರೇ, ಕ್ಯಾಶ್ ಲೆಸ್ ಯುಗ ಕಂಡಿದ್ದ ಮೋದಿ ಅವರ ಕನಸು ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ…