'ಘಟನೆ ಕೇಳಿ ಎಲ್ಲರಿಗೂ ಆಘಾತವಾಯಿತು. ಎಷ್ಟೊಂದು ನಿರ್ಲಕ್ಷ್ಯ ಹೇಗೆ? ಎಡವಟ್ಟುಗಳನ್ನು ಮಾಡಿ ಕೊನೆಗೆ ವಿದ್ಯಾರ್ಥಿಗಳ ಮೇಲೆ, ಕಾಲೇಜುಗಳ ಮೇಲೆ ಆರೋಪ ಹೊರಿಸುತ್ತೀರಿ ಎಂದು ಅಧಿಕಾರಿಗಳ ಮೇಲೆ ರೇಗಾಡಿದೆ' ಎನ್ನುತ್ತಾರೆ ಸಿಂಡಿಕೇಟ್ ಸದಸ್ಯ ಉದಯ ಪಾಟೀಲ್
ಗುಲಬರ್ಗಾ ವಿಶ್ವವಿದ್ಯಾಲಯದ ಅಧ್ವಾನಗಳು ಒಂದೆರಡಲ್ಲ. ಈ ಹಿಂದೆ ಉತ್ತರ ಪತ್ರಿಕೆಗಳು ಕಾಣೆಯಾಗಿ ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವೇ ವಿಳಂಬವಾಗಿದ್ದ ಘಟನೆಯಿಂದಲೂ ಎಚ್ಚೆತ್ತುಕೊಳ್ಳದ ವಿವಿ ಮತ್ತದೇ ಎಡವಟ್ಟು ಮಾಡಿದೆ. ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳ ಬಂಡಲ್ ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದು ವಿಶ್ವವಿದ್ಯಾಲಯದ ನಿರ್ಲಕ್ಷ್ಯಗಳಿಗೆ ಮತ್ತೊಮ್ಮೆ ಕನ್ನಡಿ ಹಿಡಿದಂತಾಗಿದೆ.
ಕಲಬುರಗಿ ನಗರದ ಗುಡ್‌ಲಕ್ ಹೋಟೆಲ್ ಬಳಿಯ ತಿಪ್ಪೆಗುಂಡಿಯಲ್ಲಿ ಬಂಡಲ್‌ವೊಂದನ್ನು ಕಂಡ ಸ್ಥಳೀಯರೊಬ್ಬರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಉದಯ್ ಪಾಟೀಲ್ ಅವರ ಗಮನಕ್ಕೆ ತರುತ್ತಾರೆ. ಆ ನಂತರ ವಿವಿಗೆ ಉತ್ತರ ಪತ್ರಿಕೆಗಳ ಬಂಡಲ್ ವರ್ಗಾವಣೆಯಾಗಿದೆ.
ಆ ಬಂಡಲ್ ಮೇಲೆ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದ ವಿವರಗಳಿದ್ದವು. ಪರೀಕ್ಷಾ ಕೇಂದ್ರವಾಗಿದ್ದ ಗುರೂಜಿ ಪ್ರಥಮದರ್ಜೆ ಕಾಲೇಜಿನವರು ವಿಶ್ವವಿದ್ಯಾಲಯದ ನೋಡಲ್ ಕೇಂದ್ರವಾಗಿದ್ದ ಎನ್.ವಿ. ಪ್ರಥಮದರ್ಜೆ ಕಾಲೇಜಿಗೆ ಈ ಬಂಡಲ್ ಹಸ್ತಾಂತರಿಸಿರುವುದು ಸ್ಪಷ್ಟ.
‘ಈದಿನ ಡಾಟ್ ಕಾಮ್’ ಜೊತೆಯಲ್ಲಿ ಮಾತನಾಡಿದ ಗುರೂಜಿ ಪದವಿ ಕಾಲೇಜಿನ ಅಧ್ಯಕ್ಷ ಕಲ್ಯಾಣರಾವ್ ಶೀಲವಂತ, “ನಾವು ನೋಡಲ್ ಕೇಂದ್ರಕ್ಕೆ ಹಸ್ತಾಂತರಿಸಿರುವ ದಾಖಲೆಗಳು ನಮ್ಮ ಬಳಿ ಇದೆ. ನಮ್ಮಿಂದ ಪ್ರಮಾದವಾಗಿಲ್ಲ. ಕೇಂದ್ರಕ್ಕೆ ತಲುಪಿದ ಮೇಲೆ ಏನಾಯಿತೆಂದು ಗೊತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿ.ಎ. ತೃತೀಯ ಸೆಮಿಸ್ಟರ್ (ಎನ್‌ಇಪಿ ಪಠ್ಯಕ್ರಮ) ಇತಿಹಾಸ ಡಿಎಸ್‌ಸಿ-6 ಪರೀಕ್ಷೆಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳು ಇವಾಗಿದ್ದವು. ಫೆಬ್ರವರಿ 6, 2025ರಂದು ಗುರೂಜಿ ಕಾಲೇಜಿನವರು ನೋಡೆಲ್ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ಬಂಡಲ್ ಮೇಲಿನ ವಿವರಗಳಿಂದ ತಿಳಿದು ಬರುತ್ತದೆ. ಏಪ್ರಿಲ್ 21ರಂದು ತಿಪ್ಪೆಗುಂಡಿಯಲ್ಲಿ ಸದರಿ ಬಂಡಲ್ ಸಿಕ್ಕಿದ್ದು, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ ಅವರಿಗೆ ಅದನ್ನು ಹಸ್ತಾಂತರಿಸಲಾಗಿದೆ.


ಏಪ್ರಿಲ್ 21ರಂದು ಏನಾಯಿತೆಂದು ಸಿಂಡಿಕೇಟ್ ಸದಸ್ಯ ಉದಯ ಪಾಟೀಲ್ ಅವರು ವಿವರವಾಗಿ ‘ಈದಿನ ಡಾಟ್ ಕಾಮ್’ಗೆ ಮಾಹಿತಿ ನೀಡಿದರು.
“ಗುರೂಜಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರೀಕ್ಷಾ ನೊಡೆಲ್ ಕೇಂದ್ರವಾಗಿದ್ದ ಎನ್.ವಿ.ಕಾಲೇಜಿಗೆ ವರ್ಗಾಯಿಸಲಾಗಿತ್ತು. ನೋಡಲ್ ಕೇಂದ್ರಗಳಲ್ಲಿ ಇರುವ ಉತ್ತರಪತ್ರಿಕೆಗಳನ್ನು ಕಲೆಕ್ಟ್ ಮಾಡಿಕೊಳ್ಳುವ ಕೆಲಸ ವಿಶ್ವವಿದ್ಯಾಲಯದ್ದು. ಗುರೂಜಿ ಕಾಲೇಜಿನವರು ಎನ್.ವಿ. ಕಾಲೇಜಿಗೆ ಉತ್ತರಪತ್ರಿಕೆಗಳನ್ನು ಕೊಟ್ಟಿರುವುದಕ್ಕೆ ಅವರ ಬಳಿ ದಾಖಲೆ ಹೊಂದಿದ್ದಾರೆ. ಉದ್ದೇಶಪೂರ್ವಕವಾಗಿ ಬಂಡಲ್ ಎಸೆದಿದ್ದಾರೋ ಅಥವಾ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆಯೋ ಗೊತ್ತಿಲ್ಲ. ತಿಪ್ಪೆಗುಂಡೆಯಲ್ಲಿ ಬಂಡಲ್ ಬಿದ್ದಿರುವುದಾಗಿ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ತಿಳಿಸಿದರು. 110 ವಿದ್ಯಾರ್ಥಿಗಳ ಭವಿಷ್ಯ ಆ ಬಂಡಲ್‌ನಲ್ಲಿ ಇತ್ತು. ಗುಡ್‌ಲಕ್ ಹೋಟೆಲ್ ಸಮೀಪ ತಿಪ್ಪೆ ಇದ್ದು, ಅಲ್ಲಿ ಬಂಡಲ್ ಪತ್ತೆಯಾಗಿತ್ತು. ಆ ವ್ಯಕ್ತಿಯು ಕರೆ ಮಾಡಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲೇ ಇದ್ದೆ, ಜೊತೆಗೆ ಮೌಲ್ಯಮಾಪನ ರಿಜಿಸ್ಟರ್ ಬಳಿ ಮಾತನಾಡುತ್ತಿದ್ದೆ. ಘಟನೆ ಕೇಳಿ ಎಲ್ಲರಿಗೂ ಆಘಾತವಾಯಿತು. ಎಷ್ಟೊಂದು ನಿರ್ಲಕ್ಷ್ಯ ಹೇಗೆ? ಎಡವಟ್ಟುಗಳನ್ನು ಮಾಡಿ ಕೊನೆಗೆ ವಿದ್ಯಾರ್ಥಿಗಳ ಮೇಲೆ, ಕಾಲೇಜುಗಳ ಮೇಲೆ ಆರೋಪ ಹೊರಿಸುತ್ತೀರಿ ಎಂದು ಅಧಿಕಾರಿಗಳ ಮೇಲೆ ರೇಗಾಡಿದೆ. ಬಂಡಲ್‌ಗಳನ್ನು ಪರೀಕ್ಷಾಂಗ ಕುಲಸಚಿವರಿಗೆ ಉತ್ತರ ಪತ್ರಿಕೆಗಳನ್ನು ಹಸ್ತಾಂತರಿಸಿ ಫೋಟೋ ತೆಗೆದುಕೊಂಡೆ. ಸಿಂಡಿಕೇಟ್ ಗಮನಕ್ಕೆ ತೆಗೆದುಕೊಂಡು ಬರುವೆ. ನಿರ್ಲಕ್ಷ್ಯ ತಾಳಿದವರ ಮೇಲೆ ಕ್ರಮ ಆಗಬೇಕು ಎಂದು ತಿಳಿಸಿದೆ. ಏಪ್ರಿಲ್ 21, ಸಾಯಂಕಾಲ ನಾಲ್ಕು ಗಂಟೆಯ ಸಮಯದಲ್ಲಿ ಆಗಿರುವ ಘಟನೆ ಇದು. ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಇದ್ದ ಪರೀಕ್ಷಾಂಗ ಕುಲಸಚಿವರಾದ ಮೇದಾವಿನಿ ಎಸ್. ಕಟ್ಟಿ ಅವರ ಅವಧಿಯಲ್ಲಿ ಈ ಸಮಸ್ಯೆ ಆಗಿದೆ ಎಂದು ಕುಲಸಚಿವರು ಹೇಳುತ್ತಿದ್ದರು. ತನಿಖೆಯಾದರೆ ಸತ್ಯ ಹೊರಬರುತ್ತದೆ ಎಂದು ಅವರಿಗೆ ಪ್ರತಿಕ್ರಿಯಿಸಿದೆ.”
-ಇದಿಷ್ಟು ಉದಯ ಪಾಟೀಲರ ವಿವರಣೆ.
ಇದನ್ನೂ ಓದಿರಿ: ಗುಲಬರ್ಗಾ ವಿವಿ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು
ಹಾಲಿ ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರ ಅವರು ಪ್ರತಿಕ್ರಿಯಿಸಲು ಸಂಪರ್ಕಿಸಿದಾಗ, ನಾನು ಅಧಿಕಾರ ವಹಿಸಿಕೊಂಡ ನಂತರ ಆಗಿರುವ ಘಟನೆ ಇದಲ್ಲ ಎಂದಿಷ್ಟೇ ಹೇಳಿ, ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.
ಪರೀಕ್ಷಾ ಪ್ರಕ್ರಿಯೆ ಹೇಗಿರುತ್ತದೆ?
ಪರೀಕ್ಷೆ ನಡೆದ ದಿನವೇ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪ್ಯಾಕ್ ಆಗಿ, ಸೀಲ್ ಆಗಬೇಕಾಗುತ್ತದೆ. ಪ್ರಾಂಶುಪಾಲರು ಮತ್ತು ಸೀನಿಯರ್ ಸೂಪರ್‌ವೈಸರ್‌ಗಳ ಸಮ್ಮುಖದಲ್ಲಿ ಈ ಕೆಲಸವಾಗುತ್ತದೆ. ಅಂದು ಸಾಯಂಕಾಲವೇ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು. ಒಂದು ವೇಳೆ ಪರೀಕ್ಷಾ ಕೇಂದ್ರವು ವಿಶ್ವವಿದ್ಯಾಲಯ ಮುಖ್ಯಕೇಂದ್ರಕ್ಕೆ ದೂರವಿದ್ದರೆ, ಪ್ರಾಂಶುಪಾಲರ ಕಸ್ಟಡಿಯಲ್ಲಿ ಲಾಕ್ ಮಾಡಿ ಇಟ್ಟು, ಮುಂದಿನ ದಿನವೇ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು. ಪರೀಕ್ಷಾ ಕೈಪಿಡಿಯ ಪ್ರಕಾರ ಮಹಾವಿದ್ಯಾಲಯಗಳನ್ನು ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗುತ್ತದೆ. ಸದರಿ ಎನ್‌ವಿ ಕಾಲೇಜು ಪರೀಕ್ಷಾ ಕೇಂದ್ರ ಮತ್ತು ನೋಡೆಲ್ ಕೇಂದ್ರವೂ ಹೌದು. ಉತ್ತರ ಪತ್ರಿಕೆಗಳು ಬರುತ್ತವೆಯಾದರೆ ಸಂಜೆ ಆರು ಗಂಟೆಯಾದರೂ ಸಿಬ್ಬಂದಿಗಳು ಕಾಯಬೇಕು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.