ವಾಹನಗಳ ನಿಲುಗಡೆಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ನೈಪುಣ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಯೋಜನೆಯೊಂದನ್ನು ಬಿಜೆಪಿ ರೂಪಿಸಿದೆ. ಈ ಯೋಜನೆಗೆ ಓಷಿಯಾನಸ್ ಡ್ವೆಲಿಂಗ್ಸ್ ಎಂಬ ಕಂಪೆನಿಯ ಸಿಎಸ್‍ಆರ್ ಹಣಸಹಾಯವನ್ನು ಪಡೆಯಲಾಗಿದೆ. ಈ ಕೇಂದ್ರಕ್ಕೆ ಹೆಡ್ಗೆವಾರ್ ಹೆಸರಿಡಲು ಬಿಜೆಪಿ ರಾತ್ರೋರಾತ್ರಿ ಸಭೆ ಸೇರಿ ತೀರ್ಮಾನಿಸಿದೆ.
ಬಿಜೆಪಿಯು ತಮ್ಮ ನಾಯಕರನ್ನು ವೈಭವೀಕರಿಸುವ ಮತ್ತು ಸಾರ್ವಜನಿಕ ಸ್ತರದಲ್ಲಿ ಅವರನ್ನು ಪ್ರತಿಷ್ಠಾಪಿಸುವ ಕುಟಿಲ ಪ್ರಯತ್ನಕ್ಕೆ ಈಗ ಕೇರಳದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ಎದುರಾಗಿದೆ. ಕೇರಳದ ಪಾಲಕ್ಕಾಡ್ ನಗರಸಭೆಯ ಬಿಜೆಪಿ ಆಡಳಿತವು ನೂತನ ಯೋಜನೆಯೊಂದಕ್ಕೆ RSS ಸಂಸ್ಥಾಪಕರಾದ ಕೇಶವ ಬಲಿರಾಂ ಹೆಡ್ಗೆವಾರ್ (Hedgewar) ಹೆಸರಿಡಲು ತೀರ್ಮಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪಾಲಕ್ಕಾಡ್ ನಗರಸಭೆಯು ಬಿಜೆಪಿ ಪಾಲಾಗಿ 10 ವರ್ಷಗಳು ಕಳೆದವು. ನಗರಸಭೆಯ ಒಟ್ಟು ಸದಸ್ಯಬಲ 52. ಅದರ ಪೈಕಿ 2015ರಲ್ಲಿ ಬಿಜೆಪಿಯ ಸದಸ್ಯಬಲ 24 ಆಗಿತ್ತು. ಆದರೆ, 2020ರಲ್ಲಿ ಅದು 28 ಆಗಿ ಬೆಳಿಯಿತು.
ವಾಹನಗಳ ನಿಲುಗಡೆಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ನೈಪುಣ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಯೋಜನೆಯೊಂದನ್ನು ಬಿಜೆಪಿ ರೂಪಿಸಿದೆ. ಈ ಯೋಜನೆಗೆ ಓಷಿಯಾನಸ್ ಡ್ವೆಲಿಂಗ್ಸ್ ಎಂಬ ಕಂಪೆನಿಯ ಸಿಎಸ್‍ಆರ್ ಹಣಸಹಾಯವನ್ನು ಪಡೆಯಲಾಗಿದೆ. ಈ ಕೇಂದ್ರಕ್ಕೆ ಹೆಡ್ಗೆವಾರ್ ಹೆಸರಿಡಲು ಬಿಜೆಪಿ ರಾತ್ರೋರಾತ್ರಿ ಸಭೆ ಸೇರಿ ತೀರ್ಮಾನಿಸಿದೆ. ಇದರ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ಯೂತ್ ಕಾಂಗ್ರೆಸ್ ಮತ್ತು ಡಿವೈಎಫ್‍ಐ ಕಾರ್ಯಕರ್ತರು ತಡೆದಿದ್ದಾರೆ. ಪೂಜೆಗಾಗಿ ಇಟ್ಟಿದ್ದ ದೀಪ ಮತ್ತು ಇತರೆ ಪದಾರ್ಥಗಳನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಿತ್ತು ಬಿಸಾಡಿದ ನಂತರ ಅದೇ ಜಾಗದಲ್ಲಿ ಬಾಳೆಗಿಡವನ್ನು ಹಾಕಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಕಟ್ಟುವ ನೈಪುಣ್ಯ ಅಭಿವೃದ್ಧಿ ಕೇಂದ್ರಕ್ಕೆ ಹೆಡ್ಗೆವಾರ್ ಹೆಸರು ಹೇಗೆ ಪ್ರಸ್ತುತವಾಗುತ್ತೆ ಎನ್ನುವುದು ಪ್ರತಿಭಟನಾಕಾರರ ಪ್ರಶ್ನೆ. ಹೆಡ್ಗೆವಾರ್ ಯಾರು ಎಂಬ ಪ್ರಶ್ನೆಗೆ ಬಿಜೆಪಿಗರು ಕೆರಳಿದ್ದಾರೆ. ಪಾಲಕ್ಕಾಡ್‍ನ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತಿಲ್ ಬಿಜೆಪಿಯ ಈ ಕುತಂತ್ರವನ್ನು ಕಟುವಾಗಿ ವಿರೋಧಿಸಿದ್ದಾರೆ. ರಾಹುಲ್‍ರನ್ನು ಪಾಲಕ್ಕಾಡ್ ಜಿಲ್ಲೆಗೆ ಪ್ರವೇಶಿಸಲು ಬಿಡಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಶಿವನ್ ಬೆದರಿಕೆಯೊಡ್ಡಿದ್ದಾರೆ. ತನ್ನ ಉಸಿರು ಇರುವ ತನಕ ಆರೆಸ್ಸೆಸ್ ಅಜೆಂಡಾ ತನ್ನ ಕ್ಷೇತ್ರದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎನ್ನುವುದು ರಾಹುಲ್‍ರ ನಿಲುವು.
ಈತನ್ಮಧ್ಯೆ, ಕೊಲ್ಲಂ ಜಿಲ್ಲೆಯ ದೇವಸ್ಥಾನವೊಂದರ ಜಾತ್ರೆ ವೇಳೆಯಲ್ಲಿ ಹಾಕಲಾಗಿದ್ದ ಹೆಡ್ಗೆವಾರ್ ಭಿತ್ತಿಚಿತ್ರವನ್ನು ನಾಶಗೊಳಿಸಿರುವುದೂ ವಿವಾದಕ್ಕೆ ಕಾರಣವಾಗಿದೆ. ಈ ಎರಡು ಘಟನೆಗಳು ಕೇರಳದ ಸಾಮಾಜಿಕ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಡ್ಗೆವಾರ್ ಮಹತ್ವದ ಪಾತ್ರ ವಹಿಸಿದರು ಮತ್ತು ಭಾರತ ಎಂಬ ಆಶಯವನ್ನು ರೂಪಿಸಲು ಅವರ ಕೊಡುಗೆ ಅಪಾರವಾದದ್ದು ಎನ್ನುವುದು ಕೇಸರಿ ನಾಯಕರ ಪ್ರತಿಪಾದನೆ. ಆದರೆ, ಹೆಡ್ಗೆವಾರ್ ಕೊಡುಗೆ ಶೂನ್ಯವೆನ್ನುವ ವಾಸ್ತವವನ್ನು ಎದುರಿಸಲು ಕೇಸರಿ ನಾಯಕರಿಗೆ ಆಗುತ್ತಿಲ್ಲ.
ಕೇಶವ ಬಲಿರಾಂ ಹೆಡ್ಗೆವಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‍ಎಸ್)ದ ಸಂಸ್ಥಾಪಕ. ಸಂಘಪರಿವಾರದ ಪೂಜ್ಯ ನಾಯಕ ಮತ್ತು ಸ್ಪೂರ್ತಿದಾಯಕ. ಹೆಡ್ಗೆವಾರ್‌ರನ್ನು ಕೇರಳದ ಮುಖ್ಯವಾಹಿನಿಗೆ ತರಲು ಬಿಜೆಪಿ ನಡೆಸಿದ ವ್ಯರ್ಥಪ್ರಯತ್ನದ ನಿದರ್ಶನವೇ ಮೇಲಿನ ಎರಡು ಘಟನೆಗಳು. 2014ರಲ್ಲಿ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ, ಹಿಂದೂ ನಾಯಕರನ್ನು ವೈಭವೀಕರಿಸಿ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಗುಂಡಿಕ್ಕಿ ಕೊಂದ ಆರೋಪವನ್ನು ಹೊತ್ತಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ವಿಚಾರಧಾರೆಯಿಂದ ಪ್ರಚೋದನೆಗೊಂಡ ಕೆ.ಬಿ. ಹೆಡ್ಗೆವಾರ್ ಆರೆಸ್ಸೆಸ್ಸನ್ನು 1925ರಲ್ಲಿ ಸ್ಥಾಪಿಸಿದರು.
1910-14ರಲ್ಲಿ ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಅನುಶೀಲನಾ ಸಂಘದಲ್ಲಿ ಸದಸ್ಯರಾಗಿದ್ದರು ಎನ್ನುವುದು ನಿಜ. ಬ್ರಿಟೀಷ್ ಸರ್ಕಾರದ ವಿರುದ್ಧ ಕರಪತ್ರಗಳನ್ನು ಹಂಚಿದ ಆರೋಪಕ್ಕಾಗಿ ಬ್ರಿಟಿಷ್ ಪೊಲೀಸರ ಬಂಧನಕ್ಕೊಳಗಾದರು. 1916ರಲ್ಲಿ ಅನುಶೀಲನಾ ಸಂಘವನ್ನು ತೊರೆದು ಹೆಡ್ಗೆವಾರ್ ನಾಗ್ಪುರಕ್ಕೆ ಹೋದರು. 1920ರಲ್ಲಿ ಕಾಂಗ್ರೆಸಿನ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು. 1921ರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾದರು. 1930ರಲ್ಲಿ ವನಸತ್ಯಾಗ್ರಹದಲ್ಲಿ ಭಾಗಿಯಾದ ಆರೋಪಕ್ಕೆ 9 ತಿಂಗಳ ಕಾರಾಗೃಹ ವಾಸವನ್ನು ಅನುಭವಿಸಿದರು. ಇಷ್ಟರಲ್ಲೇ ಅವರ ಕೊಡುಗೆ ಸೀಮಿತ. 1925ರಲ್ಲಿ ಆರೆಸ್ಸೆಸ್ ಸ್ಥಾಪಿಸಿದ ನಂತರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರ ಏನೂ ಇರಲಿಲ್ಲ. ಆರೆಸ್ಸೆಸ್‌ನ ಶಕ್ತಿ ಬ್ರಿಟಿಷರ ವಿರುದ್ಧ ಹೋರಾಡಿ ನಾಶ ಮಾಡುವುದಕ್ಕಲ್ಲ ಎಂದು ಹೆಡ್ಗೆವಾರ್ ಹೇಳಿದುಂಟು.
ಹಿಂದೂಗಳನ್ನು ಒಟ್ಟುಗೂಡಿಸುವುದು ಮತ್ತು ಅವರಲ್ಲಿ ಸ್ವಾಭಿಮಾನವನ್ನು ಹುಟ್ಟುಹಾಕುವುದು ಹೆಡ್ಗೆವಾರ್ ಗುರಿಯಾಗಿತ್ತು. ಹಿಂದು ಯುವಜನರಿಗೆ ದೈಹಿಕ ಅಭ್ಯಾಸ, ಹಿಂದುತ್ವ ವಿಚಾರಧಾರೆಯ ಪ್ರಚಾರ ಮತ್ತು ಶಾಖೆ ಸಭೆಗಳಲ್ಲಿ ಆರಸ್ಸೆಸ್ ತಮ್ಮ ಕಾರ್ಯವನ್ನು ಕೇಂದ್ರೀಕರಿಸಿತ್ತು. 1930ರಲ್ಲಿ ನಡೆದ ಉಪ್ಪು ಸತ್ಯಾಗ್ರಹದಲ್ಲಿ ಆರೆಸ್ಸೆಸ್ ಭಾಗವಹಿಸುವುದಿಲ್ಲ ಎಂದು ಹೇಳಿತ್ತು. ಆದರೆ, ವೈಯಕ್ತಿಕವಾಗಿ ವನಸತ್ಯಾಗ್ರಹದಲ್ಲಿ ಹೆಡ್ಗೆವಾರ್ ಭಾಗಿಯಾದರು.
1930 ಜನವರಿ 26ರಂದು ತ್ರಿವರ್ಣ ಧ್ವಜವನ್ನು ಎಲ್ಲೆಡೆ ಹಾರಿಸಲು ಕಾಂಗ್ರೆಸ್ ಕರೆ ಕೊಟ್ಟಾಗ ಕೇಸರಿ ಧ್ವಜ ಹಾರಿಸಲು ಹೆಡ್ಗೆವಾರ್ ತನ್ನ ಕಾರ್ಯಕರ್ತರಿಗೆ ಕರೆ ಕೊಟ್ಟರು. ಇತ್ತೀಚಿನವರೆಗೆ ಆರೆಸ್ಸೆಸ್ ಆಸ್ಥಾನದಲ್ಲಿ ದೇಶದ ಧ್ವಜವನ್ನು ಹಾರಿಸಿರಲೇ ಇಲ್ಲ. ಎಲ್ಲರನ್ನು ಒಳಗೊಳ್ಳುವ ಬಹುತ್ವದ ಸಂಕೇತವಾದ ತ್ರಿವರ್ಣ ಧ್ವಜವನ್ನು ಆರೆಸ್ಸೆಸ್ ಎಂದಿಗೂ ಒಪ್ಪಿರಲಿಲ್ಲ. ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಎಂಬ ವಿ ಡಿ ಸಾವರ್ಕರರ ಕನಸನ್ನು ನನಸು ಮಾಡಲು ಸಂಘವನ್ನು ಹೆಡ್ಗೆವಾರ್ ಸ್ಥಾಪಿಸಿದರು. ಮುಸಲ್ಮಾನರು ಈ ದೇಶಕ್ಕೆ ಮಾರಕ ಎಂಬ ನರೇಟೀವ್ ಮುಂದಿಟ್ಟಿದ್ದೇ ಆರೆಸ್ಸೆಸ್. ಹಿಂದೂಗಳು ಅಸಂಘಟಿತರೆಂಬ ವ್ಯಾಪಕ ಪ್ರಚಾರದಿಂದ ಹಲವು ಸಮುದಾಯಗಳ ಯುವಕರನ್ನು ಸಂಘಕ್ಕೆ ಕರೆತರುವಲ್ಲಿ ಯಶಸ್ವಿಯಾದರು.
1942ರ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಹೆಡ್ಗೆವಾರ್ ಆರೆಸ್ಸೆಸ್ ಯಾವುದೇ ಸಹಕಾರವನ್ನು ನೀಡಲಿಲ್ಲ. ಬದಲಿಗೆ, ವಸಾಹತುಶಾಹಿ ಬ್ರಿಟಿಷರ ಜೊತೆ ನಿಂತು ಅವರ ಪ್ರೀತಿಪಾತ್ರರಾಗಲು ಸಕಲ ಪ್ರಯತ್ನವೂ ಮಾಡಿದರು. ಹೆಡ್ಗೆವಾರ್ ನಂತರ ಬಂದ ಎಂ.ಎಸ್. ಗೋಲ್ವಾಲ್ಕರ್ ‘ಬ್ರಿಟಿಷರಿಗೆ ತೊಂದರೆ ಕೊಡುವಂತಹ ಯಾವುದೇ ಪ್ರಯತ್ನಗಳು ಮಾಡಬೇಡ’ ಎಂದು ಶಾಖೆಗಳಿಗೆ ಕಿವಿಮಾತು ಹೇಳಿದುಂಟು.
ಹೆಡ್ಗೆವಾರ್ ಕಾರಾಗೃಹವಾಸವನ್ನು ಅನುಭವಿಸಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾರಣಕ್ಕೆ. ಆರೆಸ್ಸೆಸ್ಸನ್ನು ಸ್ಥಾಪಿಸಿದ ನಂತರ ಭಾರತದಲ್ಲಿ ನಡೆದ ಎಲ್ಲ ಮುಖ್ಯ ಸಂಗ್ರಾಮಗಳಿಂದ ಅವರು ದೂರ ಉಳಿದರು. 1939ರಲ್ಲಿ ಸುಭಾಷ್ ಚಂದ್ರ ಬೋಸ್‍ರನ್ನು ಭೇಟಿ ಮಾಡಲು ಹೆಡ್ಗೆವಾರ್ ನಿರಾಕರಿಸಿದರು. ಬ್ರಿಟಿಷರ ವಿಭಜನ ಸಿದ್ಧಾಂತಕ್ಕೆ ಹೆಡ್ಗೆವಾರ್ ಅವರಂಥವರ ಬೆಂಬಲವಿತ್ತು. ಅದನ್ನು ಯಶಸ್ವಿಯಾಗಿ ಜಾರಿಗೊಳಿಸಲು ಬ್ರಿಟಿಷರಿಗೆ ಸಾಧ್ಯವಾದದ್ದು ಹೆಡ್ಗೆವಾರ್ ಅವರಂಥವರ ಬೆಂಬಲದಿಂದ.
ಸಮಸಮಾಜಕ್ಕಾಗಿ ಹೋರಾಡಿದ ಡಾ ಅಂಬೇಡ್ಕರ್, ಜಾತ್ಯತೀತ ಮೌಲ್ಯಗಳಿಗಾಗಿ ವಾದಿಸಿದ ಜವಹರಲಾಲ್ ನೆಹರು ಮುಂತಾದ ನಾಯಕರು ಭಾರತವನ್ನು ವೈವಿಧ್ಯತೆ ಮತ್ತು ಪ್ರಜಾತಾಂತ್ರಿಕ ರಾಷ್ಟ್ರವನ್ನಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಹೆಡ್ಗೆವಾರ್ ಅದರ ವಿರುದ್ಧವಾದ ನಿಲುವು ತಾಳಿದರು. ಬ್ರಿಟಿಷ್ ವಸಾಹತೀಕರಣಕ್ಕಿಂತ ಹಿಂದೂ ರಾಷ್ಟ್ರವು ಅವರ ಆದ್ಯತೆಯಾಗಿತ್ತು. ರಾಷ್ಟ್ರೀಯ ಐಕ್ಯತೆ ಮತ್ತು ಸಮಭಾವಕ್ಕಿಂತ ಕೋಮುವಿಭಜನೆಗೆ ಒತ್ತು ಕೊಟ್ಟರು. ಭಾರತದ ಸಂವಿಧಾನದ ಮೂಲ ತತ್ವಗಳ ವಿರುದ್ಧ ಸಾಗುತ್ತಾ ಬಹುಸಂಖ್ಯಾ ಸಿದ್ಧಾಂತವನ್ನೇ ಮುಂದಿಟ್ಟವರು ಹೆಡ್ಗೆವಾರ್. ಜಾತ್ಯತೀತ ಪ್ರಜಾತಾಂತ್ರಿಕ ರಿಪಬ್ಲಿಕ್ ಎನ್ನುವ ಆಶಯವನ್ನೇ ಅವರು ಒಪ್ಪಲಿಲ್ಲ. ಇಂತಹ ವ್ಯಕ್ತಿಯನ್ನು ಸ್ವಾತಂತ್ರ್ಯ ಸಂಗ್ರಾಮದ ಧೀಮಂತ ನಾಯಕರಲ್ಲಿ ಒಬ್ಬರಂತೆ ಬಿಂಬಿಸುವ ಪ್ರಯತ್ನವು ಬಿಜೆಪಿ ಮಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಹೆಡಗೆವಾರ್ ಸೇರಿದಂತೆ ಆರೆಸ್ಸೆಸ್ ನಾಯಕರುಗಳ ಜೀವನ ಚರಿತ್ರೆಯನ್ನು ಸೇರಿಸಲಾಗಿದೆ. ದೇಶದ ಹಲವೆಡೆ ಆರೆಸ್ಸೆಸ್ ನಾಯಕರುಗಳ ಸಂಸ್ಮರಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿವೆ.
ಹೆಡಗೆವಾರ್ ಎಂದಿಗೂ ದೇಶದುದ್ದಗಲಕ್ಕೂ ಓಡಾಡಿ ಸಂಘಟನೆಯನ್ನು ಕಟ್ಟಿದವರಲ್ಲ. ಬಹುಜನ ಚಳವಳಿಗಾಗಿ ಅವರು ಎಂದಿಗೂ ಜೈಲು ಸೇರಲಿಲ್ಲ. ಬ್ರಿಟಿಷರ ವಿರುದ್ಧ ಯಾವುದೇ ಚಳವಳಿಯೂ ಅವರು ಹುಟ್ಟುಹಾಕಲಿಲ್ಲ. ಒಗ್ಗಟ್ಟಿನ ಪ್ರತಿರೋಧಕ್ಕಾಗಿ ಯಾವುದೇ ಸಿದ್ಧಾಂತವನ್ನು ಮುಂದಿಡಲಿಲ್ಲ. ಭಾರತವನ್ನು ವ್ಯಾಖ್ಯಾನಿಸುವ ಸಾಂವಿಧಾನಿಕ ಮೌಲ್ಯಗಳನ್ನು ಅವರು ಎಂದಿಗೂ ಸಮರ್ಥನೆ ಮಾಡಲೂ ಇಲ್ಲ. ಇಂತಹವರನ್ನು ದೇಶದ ನಾಯಕನಾಗಿ ಬಿಂಬಿಸಲು ಹೇಗೆ ಸಾಧ್ಯ?
ಸ್ವಾತಂತ್ರ್ಯ ಸಂಗ್ರಾಮದ ಉಸಿರಾಗಿದ್ದ ಮಹಾತ್ಮ ಗಾಂಧಿಯ ಎದೆಗೆ ಗುಂಡು ಹಾರಿಸಿದ ವಿಚಾರಧಾರೆ ಯಾವುದೆಂದು ನಮ್ಮಗೆಲ್ಲರಿಗೂ ಗೊತ್ತಿದೆ. ಈ ದೇಶದ ಜನತೆ ಅದನ್ನು ನೆನಪಿಟ್ಟುಕೊಳ್ಳುವವರೆಗೂ ಆರೆಸ್ಸೆಸ್ ನಾಯಕರನ್ನು ಮಹಾನ್ ಸ್ವಾತಂತ್ರ್ಯ ಸಂಗ್ರಾಮ ನಾಯಕರನ್ನಾಗಿ ಮರುಪ್ರತಿಷ್ಠೆ ಮಾಡುವ ಬಿಜೆಪಿಯ ಪ್ರಯತ್ನಗಳು ನಡೆಯದು. ಭಾರತದ ಬಹುಜನರ ಐಕ್ಯತೆಯನ್ನು ಕನಸು ಕಂಡವರು ಈ ದೇಶವನ್ನು ಜಾತ್ಯತೀತ ಪ್ರಜಾತಾಂತ್ರಿಕ ರಿಪಬ್ಲಿಕ್ಕಾಗಿ ರೂಪಿಸಿದರು; ಬಹುಸ್ವರ ಸಮಾಜವನ್ನು ಸೃಷ್ಟಿಸಿದರು. ಅವರ ಕನಸುಗಳನ್ನು ನಾವು ಕೆಡವಿಹಾಕಬಾರದು.
ಕರ್ನಾಟಕದ ಹಲವು ರಸ್ತೆಗಳಿಗೆ, ವೃತ್ತಗಳಿಗೆ ಆರೆಸ್ಸೆಸ್ ನಾಯಕರ ಹೆಸರಿಡುವ ಪ್ರಯತ್ನಗಳು ನಡೆದಿವೆ. ಕೆಲವು ಕಡೆಗಳಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ಹೆಡಗೆವಾರ್ ವೃತ್ತವಿದೆ. ಹೆಡ್ಗೆವಾರ್ ಅವರ ಹೆಸರಿಡುವ ಪ್ರಸ್ತಾಪ ಬಂದಾಗ ಅದರ ವಿರುದ್ಧ ದನಿಯೆತ್ತಿ ಸೆಟೆದು ನಿಂತವರು ದಿವಂಗತ ಕಿಚ್ಚೆದೆಯ ಹೋರಾಟಗಾರ ಪ್ರೊ. ಕೆ. ರಾಮದಾಸ್. ಅಂದು ಮೈಸೂರಿನ ಜಾತ್ಯತೀತ ಸಮಾಜಕ್ಕೆ ರಾಮದಾಸ್ ಅವರ ಒಂಟಿ ದನಿಯನ್ನು ಅರ್ಥೈಸಲು ಸಾಧ್ಯವಾಗಲಿಲ್ಲ. ನಮ್ಮ ದೇಶದಲ್ಲಿ ಬಹುಜನರನ್ನು ವಿವಿಧ ಪಂಗಡಗಳನ್ನಾಗಿ ಮಾಡಿ ಪರಸ್ಪರ ದ್ವೇಷಿಸಿ ಕೊಲ್ಲಿಸುವ ಫ್ಯಾಸಿಸ್ಟ್ ಸಂಘಟನೆಯನ್ನು ಹುಟ್ಟುಹಾಕಿದ ಹೆಡ್ಗೆವಾರ್ ಅಂತಹ ನಾಯಕರುಗಳಿಗೆ ಭಾರತ ದೇಶದ ಸಾರ್ವಜನಿಕ ಸ್ಥರದಲ್ಲಿ ಜಾಗ ನೀಡಲು ಸಾಧ್ಯವಿಲ್ಲ ಎಂಬ ಕೇರಳದ ಎಡರಂಗ ಮತ್ತು ಕಾಂಗ್ರೆಸ್‍ನ ನಿಲುವು ಮಹತ್ವದ್ದು. ಭಾರತದ ಎಲ್ಲೆಡೆ ಇಂತಹ ಪ್ರತಿರೋಧಗಳು ಇಂದಿನ ತುರ್ತು.

ಬಾಬುರಾಜ್ ಪಲ್ಲದನ್
ಮೈಸೂರಿನಲ್ಲಿ ವಕೀಲರು ಮತ್ತು ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ