“A Part Apart” ಅಥವಾ ಕತ್ತರಿಸಿ ಬಿಸುಡಿರುವ ಖಂಡ ಎಂಬುದು ಒಡೆದು ತೋರುವ ಒಂದು ಪದ ಪಂಕ್ತಿ. ಅದನ್ನು ಹೇಗೆ ಅನುವಾದ ಮಾಡಬಹುದು? ಈ ಪದಗಳು ಕಿವಿ ಮೇಲೆ ಬಿದ್ದಾಗ ನಿಮ್ಮ ಕಣ್ಣ ಮುಂದೆ ಹಾದು ಹೋಗುವ ಚಿತ್ರ ಯಾವುದು? ಅದು ಮೇಲು ಕೀಳುಗಳ ವ್ರಣಗಳಾಗಿ ಪಿತಗುಡುತ್ತಿರುವ ಹಿಂದೂ ಸಮಾಜವೆಂಬ ಅಖಂಡದಿಂದ ಕತ್ತರಿಸಿ ಬಿಸಾಕಿದ ಖಂಡವೇ ಅಲ್ಲವೇ? ಬಹಿಷ್ಕೃತ ಭಾರತವೇ ಅಲ್ಲವೇ? ಅಪಾಂಗ ಎಂದು ಹಂಗಿಸಿದ ಜನಸಮುದಾಯಗಳೇ ಅಲ್ಲವೇ?
ಮೊನ್ನೆ ‘ಸುಪ್ರೀಮ್ ಕೋರ್ಟ್ ಅಬ್ಸರ್ವರ್’ನಲ್ಲಿ ವಿಜಯ್ ಕೆ ತಿವಾರಿ ಎಂಬುವರು ಬರೆದ Ambedkar: The Mooknayak of the disability justice movement ಲೇಖನವೊಂದನ್ನು ಓದುತ್ತಿದ್ದೆ… ಲೇಖನದಲ್ಲಿ ಮನ ಕಲಕಿದ ಈ ಅಂಶಗಳನ್ನು ಹಂಚಿಕೊಳ್ಳಬೇಕೆನಿಸಿತು.
ಬಾಂಬೆ ಪ್ರೆಸಿಡೆನ್ಸಿಯ ಪ್ರಧಾನಮಂತ್ರಿ ಬಿ.ಜಿ.ಖೇರ್ ಮತ್ತು ಬಿ.ಆರ್.ಅಂಬೇಡ್ಕರ್ ನಡುವೆ ನಡೆದ ಪತ್ರವ್ಯವಹಾರವೊಂದು ಬಹಳ ಪ್ರಸಿದ್ಧ. ದೇಶದ ತಳವರ್ಗಗಳ ಜನಸಮೂಹ ಮತ್ತು ದೇಶದ ನಡುವೆ ನನ್ನ ಆದ್ಯತೆ ದೇಶದ ತಳವರ್ಗಗಳ ಜನಸಮೂಹ ಎಂಬುದು ಅಂಬೇಡ್ಕರ್ ಅವರ ಪ್ರತಿಪಾದನೆಯಾಗಿರುತ್ತದೆ. ಈ ಪ್ರತಿಪಾದನೆಗೆ ಬಿ.ಜಿ.ಖೇರ್ ತೀವ್ರ ಆಕ್ಷೇಪ ಪ್ರಕಟಿಸುತ್ತಾರೆ. ಜಗಳವನ್ನೇ ಆಡುತ್ತಾರೆ. ಇಂಗ್ಲಿಷಿನಲ್ಲಿ ಖೇರ್ ವಾದ ಹೀಗಿದೆ – “because the part can never be greater than the whole. The whole must contain the part”. ಈ ವಾಕ್ಯವನ್ನು ಕನ್ನಡಕ್ಕೆ ಅನುವಾದಿಸಿ ಹೇಳುವುದಾದರೆ- “ಯಾಕೆಂದರೆ ಖಂಡವು ಅಖಂಡಕ್ಕಿಂತ ಹಿರಿದಾಗುವುದು ಎಂದೆಂದಿಗೂ ಸಾಧ್ಯವಿಲ್ಲ. ಅಖಂಡವು ಖಂಡವನ್ನು ಒಳಗೊಂಡಿರಲೇಬೇಕು”.
ಆದರೆ ತಳವರ್ಗಗಳ ಜನಸಮೂಹಗಳ ಹಿತವೇ ತಮ್ಮ ಮೊದಲ ಆದ್ಯತೆ ಯಾಕೆ ಎಂದು ಅಂಬೇಡ್ಕರ್ ಅವರು ಖೇರ್ ಗೆ ಬಿಡಿಸಿ ಹೇಳುತ್ತಾರೆ. ಅವರು ವಿವರಿಸುವ ಇಂಗ್ಲಿಷ್ ವಾಕ್ಯ- “I am not a part of the whole; I am a part Apart” ನಾನು ಅಖಂಡವೇ ಕತ್ತರಿಸಿ ಬಿಸುಡಿರುವ ಖಂಡವೇ ವಿನಾ ಅಖಂಡದ ಒಂದು ಖಂಡ ಅಲ್ಲ.
“A Part Apart” ಅಥವಾ ಕತ್ತರಿಸಿ ಬಿಸುಡಿರುವ ಖಂಡ ಎಂಬುದು ಒಡೆದು ತೋರುವ ಒಂದು ಪದ ಪಂಕ್ತಿ. ಅದನ್ನು ಹೇಗೆ ಅನುವಾದ ಮಾಡಬಹುದು? ಈ ಪದಗಳು ಕಿವಿ ಮೇಲೆ ಬಿದ್ದಾಗ ನಿಮ್ಮ ಕಣ್ಣ ಮುಂದೆ ಹಾದು ಹೋಗುವ ಚಿತ್ರ ಯಾವುದು? ಅದು ಮೇಲು ಕೀಳುಗಳ ವ್ರಣಗಳಾಗಿ ಪಿತಗುಡುತ್ತಿರುವ ಹಿಂದೂ ಸಮಾಜವೆಂಬ ಅಖಂಡದಿಂದ ಕತ್ತರಿಸಿ ಬಿಸಾಕಿದ ಖಂಡವೇ ಅಲ್ಲವೇ? ಬಹಿಷ್ಕೃತ ಭಾರತವೇ ಅಲ್ಲವೇ? ಅಪಾಂಗ ಎಂದು ಹಂಗಿಸಿದ ಜನಸಮುದಾಯಗಳೇ ಅಲ್ಲವೇ?
ಗೋಪಾಲ್ ಗುರು ಹೇಳುವ ಪ್ರಕಾರ Disability ಅಥವಾ ಅಂಗವೈಕಲ್ಯ ಎಂಬುದು ಅಂಬೇಡ್ಕರ್ ಅವರ ಬದುಕಿನುದ್ದಕ್ಕೂ, ಅವರ ಎಲ್ಲ ಕೃತಿಗಳ ಗುಂಟವೂ ಹಾದು ಹೋಗಿರುವ ಸ್ಥಿರವಾದ ಮತ್ತು ನಿರಂತರವಾದ ವಿಷಯವಸ್ತು. Disabilty ಅಥವಾ ಅಂಗವೈಕಲ್ಯ ಎಂಬುದು ದೈಹಿಕವಾಗಿರಲಿ ಇಲ್ಲವೇ ಮಾನಸಿಕವೇ ಇರಲಿ, ಅದು ಸೋಶಿಯೋಜೆನಿಕ್ ಅಥವಾ ಸಮಾಜಜನ್ಯ ಎನ್ನುತ್ತಾರೆ ಚಿಂತಕ ಉಪೇಂದ್ರ ಬಕ್ಷಿ. ಘನತೆಹೀನತೆ ಮತ್ತು ಅವಹೇಳನದ ಹೇರುವಿಕೆಯು ಶಾಶ್ವತ ಸಾಮಾಜಿಕ ಅಂಗವೈಕಲ್ಯವನ್ನು ಸೃಷ್ಟಿಸುವ ವ್ಯವಸ್ಥೆಯೇ ಆಗಿ ಹೋಗಿದೆ ಎನ್ನುತ್ತಾರೆ. ಅಂಬೇಡ್ಕರ್ ಅವರ A part apart ಎಂಬ ಪದಪ್ರಯೋಗವು ಅಂಗವಿಕಲತೆಯನ್ನೇ ಧ್ವನಿಸುತ್ತದೆ ಎಂದು ವ್ಯಾಖ್ಯಾನ ಮಾಡಲಾಗಿದೆ.
ತಮ್ಮ ಮರಾಠೀ ಪತ್ರಿಕೆ ಮೂಕನಾಯಕದ ಹೆಸರು ಕೂಡ ಸಮಾಜ ಜನ್ಯ ಅಂಗವೈಕಲ್ಯವನ್ನೇ ಧ್ವನಿಸಿದೆ. ಅಖಂಡವು ಕತ್ತರಿಸಿ ಎಸೆದ ಖಂಡದ ರೂಪಕವನ್ನೇ ಸೂಚಿಸಿದೆ. ಹಿಂದೂ ಸಮಾಜದ ಬಹುದೊಡ್ಡ ಜನವರ್ಗವನ್ನು ಅಂಗವಿಕಲಗೊಳಿಸಿದ್ದರ ವಿರುದ್ಧವೇ ಅಂಬೇಡ್ಕರ್ ಹೋರಾಡಿದರು. ಸಾವಿರಾರು ವರ್ಷಗಳ ಹಿಂದಿನ ಅಖಂಡವು ಕತ್ತರಿಸಿ ಎಸೆದ ಖಂಡವಿದು. ಹೀಗಾಗಿ ಈ ಖಂಡದ ಎಲ್ಲ ಪೀಳಿಗೆಗಳ ಹಣೆಯ ಮೇಲೆ ಅಂಕವೈಕಲ್ಯವನ್ನು ಬರೆ ಎಳೆದು ಬರೆಯಲಾಯಿತು. ನಿಮ್ನ ವರ್ಗಗಳನ್ನು ಕುಸಿತದ ಕಾಲಗಳಲ್ಲಿ ಆಘಾತಗಳನ್ನು ತಮ್ಮ ಭುಜದ ಮೇಲೆ ಹೊರುವ Shock absorbers ಗಳಂತೆಯೂ, ಏರುಗತಿ ಅಥವಾ ಉತ್ಕರ್ಷದಲ್ಲಿ dead weights ಗಳಂತೆಯೂ ಅಂದರೆ ದಂಡಪಿಂಡಗಳಂತೆಯೂ ನಡೆಸಿಕೊಳ್ಳಲಾಯಿತು. Treated them as Shock absorbers in slum[ and dead-weights in booms ಎಂದು ಹೇಳುತ್ತಾರೆ ಅಂಬೇಡ್ಕರ್. ಜಾತಿವ್ಯವಸ್ಥೆ ಮತ್ತು ಅದರೊಂದಿಗೆ ಲಗತ್ತಾಗಿರುವ ಅಸ್ಪೃಶ್ಯತೆಗಳು ಇಂಡಿಯಾದ ಬಹುದೊಡ್ಡ ಸಾಮಾಜಿಕ, ದೈಹಿಕ ಮತ್ತು ಇತರೆ ಅಂಗವೈಕಲ್ಯತೆಗಳು.
Untouchables are nobodies. This makes Hindus some bodies ಎಂದು ವಿಶ್ಲೇಷಿಸುತ್ತಾರೆ ಅಂಬೇಡ್ಕರ್. ಸೋದರತೆಯನ್ನು (ಪ್ರಜ್ಞಾವಂತ ಮಹಿಳೆಯರು ಈ ಪದವನ್ನು ಒಪ್ಪುವುದಿಲ್ಲ) ತಿರಸ್ಕರಿಸಿರುವ ಸಮಾಜ a part apart ಅಥವಾ ಅಖಂಡವು ಕತ್ತರಿಸಿ ಎಸೆದ ಖಂಡವನ್ನು ಹೇಗೆ ತಾನೇ ಹತ್ತಿರ ಸೇರಿಸಬಲ್ಲದು? As no one is a brother to the other, no one is a keeper of the other ಎಂದು ಅಂಬೇಡ್ಕರ್ ಹೇಳುತ್ತಾರೆ.
ಸಂವಿಧಾನದ ಪೀಠಿಕೆಯಲ್ಲಿ We the People…ಎಂಬ ಮಾತಿದೆ. ‘ಭಾರತದ ಜನರಾದ ನಾವು’ ಎಂಬ ಭಾರತದ ಜನರಲ್ಲಿ ಡಾ. ಅಂಬೇಡ್ಕರ್ ಅವರು ಹೇಳುವ ‘ಡಿಪ್ರೆಸ್ಡ್ ಕ್ಲ್ಯಾಸಸ್’ ನ ಅರ್ಥಪೂರ್ಣ ಮತ್ತು ನ್ಯಾಯಯುತ ಭಾಗವಹಿಸುವಿಕೆ ಇದೆಯೇ, ಇದ್ದರೆ ಅದರ ಗುಣ ಮತ್ತು ಪ್ರಮಾಣಗಳೇನು ಎಂದು ಆಲೋಚಿಸಬೇಕಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು
I don’t know what to say about the mind of Indian people having caste system in society.