“ಶಿಕ್ಷಕನಾಗಿ ಅವರಿಂದ ಕಲಿತದ್ದು ಅಪಾರ”- ಮೇಷ್ಟ್ರು ಕಂಡಂತೆ ದೀಪಾ ಭಾಸ್ತಿ

Date:

Advertisements

ಎರಡು ದಶಕಗಳ ಹಿಂದೆ ತಮ್ಮದೇ ಬ್ಲಾಗ್ ತೆರೆದು ವೈವಿಧ್ಯಮಯ ವಿಚಾರಗಳ ಬಗ್ಗೆ ವಿಶಿಷ್ಟ ಒಳನೋಟಗಳುಳ್ಳ  ವಿಶ್ಲೇಷಣೆಗಳನ್ನು ನೀಡುತ್ತಿದ್ದ ದೀಪಾರಿಂದ ಅವರ  ಶಿಕ್ಷಕರಲ್ಲೊಬ್ಬನಾಗಿದ್ದ ನಾನು ಕಲಿತದ್ದು ಅಪಾರ. ಬ್ಲಾಗ್‌ ಎಂದರೇನು ಎಂಬುದೇ ಬಹುತೇಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಿಳಿಯದಿದ್ದ ಸಂದರ್ಭದಲ್ಲಿ ಗಂಭೀರ ವಿಚಾರಗಳ ಚರ್ಚೆಯನ್ನು ಆರಂಭಿಸಿ ನಿರಂತರ ಬರೆಯುತ್ತಾ ಬಂದ ನನ್ನ ಮೊದಲ ವಿದ್ಯಾರ್ಥಿ ದೀಪಾ. ಮಡಿಕೇರಿಯಲ್ಲಿ ಬಿಕಾಂ ಪದವಿ ಮುಗಿಸಿದ್ದ ದೀಪಾರ ವಿಸ್ತಾರವಾದ ಓದು ಮತ್ತು ಬರವಣಿಗೆಯ ಪ್ರಬುದ್ಧತೆ ನನ್ನಲ್ಲಿ ಬೆರಗು ಮೂಡಿಸಿತ್ತು.

ಬಾನು ಮಷ್ತಾಕ್ ಅವರ ಕತೆಗಳನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿ ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿಯ ಗರಿ ಮೂಡಲು ಕಾರಣರಾದ ದೀಪಾ ಭಾಸ್ತಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಎರಡು ದಶಕಗಳ ಹಿಂದೆ ತಮ್ಮದೇ ಬ್ಲಾಗ್ ತೆರೆದು ವೈವಿಧ್ಯಮಯ ವಿಚಾರಗಳ ಬಗ್ಗೆ ವಿಶಿಷ್ಟ ಒಳನೋಟಗಳುಳ್ಳ  ವಿಶ್ಲೇಷಣೆಗಳನ್ನು ನೀಡುತ್ತಿದ್ದ ದೀಪಾರಿಂದ ಅವರ  ಶಿಕ್ಷಕರಲ್ಲೊಬ್ಬನಾಗಿದ್ದ ನಾನು ಕಲಿತದ್ದು ಅಪಾರ. ಬ್ಲಾಗ್‌ ಎಂದರೇನು ಎಂಬುದೇ ಬಹುತೇಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಿಳಿಯದಿದ್ದ ಸಂದರ್ಭದಲ್ಲಿ ಗಂಭೀರ ವಿಚಾರಗಳ ಚರ್ಚೆಯನ್ನು ಆರಂಭಿಸಿ ನಿರಂತರ ಬರೆಯುತ್ತಾ ಬಂದ ನನ್ನ ಮೊದಲ ವಿದ್ಯಾರ್ಥಿ ದೀಪಾ. ಮಡಿಕೇರಿಯಲ್ಲಿ ಬಿಕಾಂ ಪದವಿ ಮುಗಿಸಿದ್ದ ದೀಪಾರ ವಿಸ್ತಾರವಾದ ಓದು ಮತ್ತು ಬರವಣಿಗೆಯ ಪ್ರಬುದ್ಧತೆ ನನ್ನಲ್ಲಿ ಬೆರಗು ಮೂಡಿಸಿತ್ತು. ಅಂಕಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ದೀಪ ಓದು, ಬರವಣಿಗೆ, ಪ್ರವಾಸ, ಸಿನಿಮಾ ಮತ್ತು ಪ್ರಕೃತಿಯ ಬಗ್ಗೆ ಗಮನ ಹರಿಸಿದ್ದರು. ನಾನು ಕೇಳದೇ ಇದ್ದ ಹಲವು ಮಹತ್ವದ ಪುಸ್ತಕಗಳನ್ನು ಮತ್ತು ಲೇಖಕರನ್ನು ನನಗೆ ಪರಿಚಯಿಸಿದ್ದಾರೆ. ಪ್ರತೀ ಭೇಟಿಯಲ್ಲೂ ಹೊಸದೊಂದು ಪುಸ್ತಕವನ್ನು ನನ್ನ  ಕೈಯಲ್ಲಿರಿಸುವ ದೀಪಾ ನನ್ನ ಓದಿನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಅಂಗೈ ಮೇಲಿನ ಪುಸ್ತಕ ಭಂಡಾರ ಕಿಂಡಲ್‌ ರೀಡರ್ ನ್ನು ನನಗೆ ಪರಿಚಯಿಸಿದವರೂ ಅವರೆ.  ಸ್ನಾತಕೋತ್ತರ ಪದವಿಯ ನಂತರ ಪತ್ರಕರ್ತೆಯಾದ ದೀಪಾ ತಮ್ಮ ಸಮಾಜಮುಖಿ ಚಿಂತನೆ ಮತ್ತು ಮಾನವೀಯ ಕಾಳಜಿಗಳಿಂದ ಭಿನ್ನವಾದ ವೃತ್ತಿಪಥವನ್ನು ಸೃಷ್ಟಿಸಿಕೊಂಡರು. ಪೂರ್ಣಕಾಲಿಕ ಸುದ್ದಿ ಪತ್ರಿಕೋದ್ಯಮಕ್ಕೆ ಕೆಲವೇ ವರ್ಷಗಳಲ್ಲಿ ವಿದಾಯ ಹೇಳಿದ ದೀಪಾ ಸ್ವತಂತ್ರ ಪತ್ರಕರ್ತರಾಗಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಲೇಖನಗಳನ್ನು, ಅಂಕಣಗಳನ್ನು ಮತ್ತು ವಿಶ್ಲೇಷಣಾತ್ಮಕ ವರದಿಗಳನ್ನು ಬರೆಯುತ್ತಾ ಬಂದಿದ್ದಾರೆ.

ಸಾಹಿತ್ಯ, ಸಂಸ್ಕೃತಿ, ಕಲೆ, ಸಿನಿಮಾ, ಇತಿಹಾಸ, ಆಹಾರ ಅವರ ಆಸಕ್ತಿಯ ವಿಷಯಗಳು. ಆಹಾರದ, ಸಾಂಸ್ಕೃತಿಕ, ಸಮಾಜಿಕ, ರಾಜಕೀಯ ಮತ್ತು ಭೌಗೋಳಿಕ ಆಯಾಮಗಳನ್ನು ಚರ್ಚಿಸುವ ʻದಿ ಫೊರೇಜರ್ʼ ಎಂಬ ಮ್ಯಾಗಜಿನ್‌ನ ಸಂಪಾದಕರಾಗಿದ್ದ ದೀಪಾ ಅಮೆರಿಕ ಮೂಲದ ‘ಮೋಲ್ಡ್‌’ ಎಂಬ ಡಿಜಿಟಲ್‌ ಪೋರ್ಟಲ್‌ನಲ್ಲಿ ವಿಶಿಷ್ಟ ಆಹಾರ ಸಂಪ್ರದಾಯಗಳ ಬಗ್ಗೆ ಬರೆಯುತ್ತಾರೆ.  ಬೀಜದಿಂದು ಹಿಡಿದು ಬಾಯಿಯವರೆಗಿನ ಆಹಾರದ ಪಯಣದ ಬಗ್ಗೆ ನಡೆದಿರುವ ಆಳವಾದ ಮತ್ತು ಗಂಭೀರವಾದ ಚರ್ಚೆಯನ್ನು ನನಗೆ  ಪರಿಚಯಿಸಿದ್ದೇ ದೀಪಾ.

Advertisements
ದೀಪಾ ಭಾಸ್ತಿ
ಮಗಳ ಸಾಧನೆಯ ಖುಷಿಯಲ್ಲಿ ತಾಯಿ ಸುಧಾಮಣಿ, ತಂದೆ ಪ್ರಕಾಶ್‌

ದೀಪಾರವರ ಅನುವಾದ ಪ್ರತಿಭೆಗೆ ಶಿವರಾಮ ಕಾರಾಂತರ ʻಅದೇ ಊರು, ಅದೇ ಮರʼ ಮತ್ತು ಕೊಡಗಿನ ಗೌರಮ್ಮನವರ ಕತೆಗಳ ಅನುವಾದಗಳು ಸಾಕ್ಷಿಯಾಗಿದ್ದವು. ಅನುವಾದಕರಾಗಿಯೇ ಹೆಚ್ಚು ಪರಿಚಿತರಾಗಿರುವ ದೀಪಾ ಕಥೆ,ಕವನಗಳನ್ನೂ ಬರೆದಿದ್ದಾರೆ. ಇಂಗ್ಲಿಷನಲ್ಲೇ ಹೆಚ್ಚು ಬರೆದಿರುವ ದೀಪಾ ಕನ್ನಡದಲ್ಲಿಯೂ ಅಷ್ಟೇ ಸುಲಲಿತವಾಗಿ ಬರೆಯಬಲ್ಲರು. ‘ಹಾರ್ಟ್‌ ಲ್ಯಾಂಪ್‌’ಲ್ಲಿರುವ ಕತೆಗಳ ಅನುವಾದದಲ್ಲಿ ಕನ್ನಡದ ಪರಿಮಳ ಹರಡಿಕೊಂಡಿದೆ. ಈ ಕತೆಗಳಲ್ಲಿ ರೂಪಕವಾಗಿ ಬರುವ ಸೀರೆಯ ಸೆರಗು ಇಂಗ್ಲಿಷ್‌ ನಲ್ಲೂ ಸೆರಗು ಎಂದೇ ಬಳಕೆಯಾಗಿರುವುದು ಓದನ್ನು ಆಪ್ತವಾಗಿಸುತ್ತದೆ. ಹಲವು ಕನ್ನಡ ಪದಗಳನ್ನು ಇಂಗ್ಲಿಷ್‌ ಅಭಿವ್ಯಕ್ತಿ ಶೈಲಿಗೆ ಬೆಸೆದು ಇದುವೇ ನನ್ನ ಇಂಗ್ಲಿಷ್‌ ಎಂದು ತೋರಿಸಿ ಆ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಅಂತರರಾಷ್ಟ್ರೀಯ ಓದುಗರಿಗೆ ಕನ್ನಡದ ಕಂಪನ್ನು ಉಣಿಸಿರುವುದು ಈ ಅನುವಾದದ ವೈಶಿಷ್ಟ್ಯ. ಅನುವಾದದ ಸೌಂದರ್ಯವನ್ನು ಆಸ್ವಾದಿಸಲು ಕನ್ನಡ ಓದುಗರೂ ಇಂಗ್ಲಿಷ್‌ನ ‘ಹಾರ್ಟ್‌ ಲ್ಯಾಂಪ್‌’ ಓದಲೇಬೇಕು. ಮುಸ್ಲಿಂ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನಲ್ಲಿ ಇತರೆ ಸಮುದಾಯಗಳಲ್ಲಿ ಇರುವಂತೆಯೇ ಪುರುಷ ಯಜಮಾನಿಕೆ, ಮೌಢ್ಯ, ಲಂಪಟತನ, ಮಹಿಳೆಯರ ಶೋಷಣೆ ಹಾಗೆಯೇ ಮಾನವೀಯತೆ, ಪ್ರಜ್ಞಾವಂತಿಕೆ, ಮುಗ್ಧತೆ, ತ್ಯಾಗ, ಬಂಡಾಯ, ಜೀವನೋತ್ಸಾಹ ಎಲ್ಲವನ್ನೂ ರೂಪಕಗಳಲ್ಲಿ ನಿರೂಪಿಸುವ ಮಷ್ತಾಕ್‌ ರವರ ಕತೆಗಳಿಗೆ ಇಂಗ್ಲಿಷ್‌ ನಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಜೀವಂತಿಕೆ ತುಂಬಿರುವ ದೀಪಾ ಉಪೇಕ್ಷೆಗೊಳಗಾಗಿದ್ದ ಕನ್ನಡ ಅನುವಾದ ಲೋಕಕ್ಕೆ ಬೆಲೆಕಟ್ಟಲಾಗದ ಗೌರವ ತಂದುಕೊಟ್ಟಿದ್ದಾರೆ.

ಇದನ್ನೂ ಓದಿ ಬಾನು ಮುಷ್ತಾಕ್‌ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ

ಸ್ವಾತಂತ್ರ, ಸಮಾನತೆ, ಮತ್ತು ಬಹುತ್ವದ ಮೌಲ್ಯಗಳನ್ನು ಗೌರವಿಸುವ ದೀಪಾ ವೈವಿಧ್ಯಮಯ ಆಸಕ್ತಿಗಳುಳ್ಳ ವ್ಯಕ್ತಿಗಳೊಂದಿಗೆ ಸಂವಾದಿಸುತ್ತಾ, ತೆರೆದ ಮನಸ್ಸಿನಿಂದ ಜಗತ್ತನ್ನು ಗ್ರಹಿಸುತ್ತಾ, ಸಂಪ್ರದಾಯಗಳನ್ನು ಮುರಿಯುತ್ತಾ ತಮ್ಮದೇ ರೀತಿಯ ʻಬಂಡಾಯʼದ ಹಾದಿಯನ್ನು ತುಳಿದಿದ್ದಾರೆ. ಮಡಿಕೇರಿಯಲ್ಲಿ ಅವರು ಹಳೆಯ ಮನೆಗಳಿಂದ ಆಯ್ದು ತಂದ ಸಾಮಗ್ರಿಗಳಿಂದ ನಿರ್ಮಿಸಿಕೊಂಡಿರುವ ಮನೆ ಪಾರಂಪರಿಕ ಮತ್ತು ಆಧುನಿಕ ನಿರ್ಮಾಣ ಕಲೆಗಳ ಸುಸ್ಥಿರ ಬೆಸುಗೆ. ಮನೆಯೆಂಬ ಈ ಅದ್ಭುತ ಸೃಷ್ಟಿಯ ಹಿಂದೆ ದೀಪಾರ ಪತಿ ಕಲಾವಿದ ನಾಣಯ್ಯನವರ ಪರಿಶ್ರಮವಿದೆ. ಇಂದಿನ ಕೊಡಗಿನ ರಾಜಕೀಯ ಮತ್ತು ಸಾಮಾಜಿಕ ಪರಿಸರದ ಸಂದರ್ಭದಲ್ಲಿ ಅವರ ಬದುಕು, ಬರಹ ಮತ್ತು ಸಾಧನೆಗಳು ಅಲ್ಲಿಯ ಯುವಕರಿಗೆ ಸ್ಫೂರ್ತಿಯಾಗಬೇಕು.

poornanada
ಪ್ರೊ.ಡಿ.ಎಸ್. ಪೂರ್ಣಾನಂದ
+ posts

ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ.ಡಿ.ಎಸ್. ಪೂರ್ಣಾನಂದ
ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.

2 COMMENTS

  1. 👍👍👍ಸಾಧನೆಯಲ್ಲಿ ಮಗ ಅಪ್ಪನನ್ನು ಮೀರಿಸಿದಾಗಲೇ ಅಪ್ಪನಿಗೆ ತೃಪ್ತಿ, ಶಿಷ್ಯೆ ಗುರುವನ್ನು ಮೀರಿಸಿದಾಗಲೇ ಗುರುವಿಗೆ ತೃಪ್ತಿ ಎಂಬುದು ನಿಜವಾಗಿದೆ.🥀🌺🌹

  2. ಮರಕ್ಕಿಂತ ಮರದೊಡ್ಡದು ಎಂಬಂತೆ, ದೀಪದಿಂದ ದೀಪಹಚ್ಚುವ ಕೆಲಸ ಹೆಮ್ಮರವಾಗಿ ಬೆಳೆಯಲಿ. 💐🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X