ಹತ್ತಾರು ವರ್ಷಗಳಿಂದ ಮಾಂಸಕ್ಕಾಗಿ ಮನುಷ್ಯರು ಈ ಬಾವಲಿಗಳನ್ನು ಬೇಟೆಯಾಡುತ್ತಲೇ ಇದ್ದಾರೆ. ಬಾವಲಿಗಳ ಬೇಟೆ ಇದೇ ಪ್ರಮಾಣದಲ್ಲಿ ಮುಂದುವರೆದು ಸಂತಾನವೇ ನಾಶವಾಗಿಬಿಟ್ಟರೆ, ಮುಂದಿನ ವರ್ಷಗಳಲ್ಲಿ ರಾಗಿ, ಮೆಕ್ಕೆಜೋಳ, ಬಿಳಿಜೋಳ ಬೆಳೆದುಕೊಳ್ಳುವುದೂ ಕಷ್ಟವಾಗಲಿದೆ.
ಕಳೆದ 3 – 4 ವರ್ಷಗಳಿಂದ ರಾಗಿ, ಮೆಕ್ಕೆ ಜೋಳ, ಬಿಳಿಜೋಳದ ಪೈರಿನ ಗರಿ, ಸುಳಿ ಮತ್ತೆ ಹಾಲುದುಂಬುತ್ತಿರುವ ತೆನೆಗಳಿಗೆ ದಂಡುದಾಳಿ ಹುಳುಗಳು (Army worms) ಹಾವಳಿಯಿಕ್ಕುತ್ತಿವೆ. ಈ ಹಾವಳಿಯಿಂದ ದಿಕ್ಕು ತೋಚದಂತಾಗಿರುವ ರೈತಾಪಿಗಳು, ಅಂಗಡಿ ಮಾಲೀಕರು ಯಾವ ವಿಷವನ್ನು ಸಿಂಪಡಿಸಿ ಎಂದು ಸಲಹೆ ಮಾಡುತ್ತಾರೊ ಅಂಥ ವಿಷವನ್ನು ಸಿಂಪಡಿಸಿ ಹೈರಾಣಾಗುತ್ತಿದ್ದಾರೆ. ಒಂದು ಎಕರೆಗೆ ವಿಷ ಸಿಂಪಡಣೆ ಮಾಡುವ ವೇಳೆಗೆ ಸಿಂಪಡಣೆ ಮಾಡುವವರಿಗೆ ತಲೆ ಸುತ್ತಿದಂತಾಗುವುದು, ಸಮತೋಲ ತಪ್ಪಿ ಬೀಳುವುದು ನಡೆದೇ ಇದೆ.
ಯಾವುದಿದು ದಂಡುದಾಳಿ ಹುಳು? ಈ ಹಿಂದೆ ಇರಲಿಲ್ಲವೇ ಎಂದರೆ, ಇದು ಇತ್ತು. ಸಣ್ಣ ಪ್ರಮಾಣದಲ್ಲಿ ಗರಿ ಕತ್ತರಿಸುತ್ತಲೂ ಇತ್ತು, ತೆನೆಯ ದಿಂಡಿನ ಸಮೇತ ಜೋಳವನ್ನು ಕುರುಕುತ್ತಿತ್ತು. ಆದರೆ, ಈಪಾಟಿ ಬಿತ್ತಿದವನಿಗೇ ಇಲ್ಲದಂತೆ ಜೋಳವನ್ನು ಮೇಯ್ದ ಉದಾಹರಣೆಗಳಿರಲಿಲ್ಲ.
ಈ ದಂಡುದಾಳಿ ಹುಳುಗಳ ಹಾವಳಿ ಇದೇ ರೀತಿ ಮಿತಿ ಮೀರಿದ್ದೇ ಆದರೆ ಕೋಳಿ, ದನಕರುಗಳು ತಿನ್ನುವ ಕಾಳು ಕಡ್ಡಿಗಳಿಗಷ್ಟೇ ಅಲ್ಲ, ಮನುಷ್ಯರು ಉಣ್ಣುವ ರಾಗಿ, ಬಿಳಿ ಜೋಳದ ಕೊರತೆಯೂ ಉಂಟಾಗಲಿದೆ. ಹಿಂದೆ ಈ ದಂಡುದಾಳಿ ಹುಳು, ಬಾವಲಿಗಳ ಪ್ರಮಾಣ ಮತ್ತು ವಾಸಸ್ಥಾನಗಳು ಸುಭದ್ರವಾಗಿದ್ದಾಗ ನಿಯಂತ್ರಣದಲ್ಲಿದ್ದವು. ಬಾವಲಿಗಳಿಗೆ ಕಣ್ಣಿದ್ದರೂ ನೋಟವಿಲ್ಲ; ಇವು ಸಿಳ್ಳು ಹಾಕುತ್ತ (ultrasonic waves) ಆಕಾಶದ ಎತ್ತರದಲ್ಲಿ ಹಾರುತ್ತಿರುತ್ತವೆ. ಪ್ರತಿಧ್ವನಿಸಿದ ತಮ್ಮ ಸಿಳ್ಳಿನ ಸ್ವಭಾವದ ಮೇರೆಗೆ ತಮಗೆ ಅಡ್ಡವಾಗಿರುವುದು ಮರವೊ, ಕಟ್ಟಡವೊ ಇಲ್ಲ, ತಮ್ಮ ಆಹಾರವೊ ಎಂಬುದನ್ನು ಗ್ರಹಿಸಿ ತಮ್ಮ ಹಾರಾಟದ ಎತ್ತರವನ್ನು ಅಗತ್ಯಕ್ಕೆ ಅನುಗುಣವಾಗಿ ಏರಿಸಿಕೊಳ್ಳುವುದು, ತಗ್ಗಿಸಿಕೊಳ್ಳುವುದು ಮಾಡುತ್ತ ಆಹಾರಕ್ಕಾಗಿ ಬೇಟೆಯಾಡುತ್ತಿರುತ್ತವೆ.

ಹತ್ತಿಕಾಯಿ ಕೊರೆಯುವ ಹುಳದ ಪೂರ್ವ ಅವತಾರವಾದ ಪತಂಗ, ದಂಡುದಾಳಿ ಹುಳುವಿನ ಪೂರ್ವ ಅವತಾರವಾದ ಪತಂಗ ಈ ಎಲ್ಲವನ್ನೂ ಬಾವಲಿಗಳು ತಿಂದು ಹಾಕುತ್ತಿರುತ್ತವೆ. ಹಗಲೆಲ್ಲ ಎತ್ತರದ ಮರಕ್ಕೊ, ಕಣಿವೆಯ ಬಂಡೆಗೊ ತಲೆಕೆಳಗಾಗಿ ಜೋತು ಬೀಳುವ ಇವು ಮುಸ್ಸಂಜೆಯಾಗುತ್ತಲೇ ಬೇಟೆಯಾಡಲು ಹಾರಾಡತೊಡಗುತ್ತವೆ. ಒಂದು ಬಾವಲಿ ತನ್ನ ಇರುಳಿಡೀ ಪಯಣದಲ್ಲಿ ಸುಮಾರು 300 ಗ್ರಾಮುಗಳಷ್ಟು ಪತಂಗಗಳನ್ನು ಹಿಡಿದು ತಿನ್ನುತ್ತದೆ ಎಂಬ ಅಂದಾಜಿದೆ. ಉಳಿದಂತೆ ಸೊಳ್ಳೆ, ನೊಣ ಇವೆಲ್ಲ ಇದರ ಆಹಾರವೇ ಆಗಿವೆ; ಬಾವಲಿಗಳು ಇರುಳಿಡೀ ಹಾರಾಡುತ್ತಿರುತ್ತವೆ ಎಂದರೆ ದಿನವೂ ಅದು 20-30 ಕಿ.ಮೀ ದೂರದ ಬೇಟೆಗಾರಿಕೆ ಪಯಣ, ಅಂದರೆ ಇವು ಜೋಳ, ರಾಗಿ ಪೈರಿಗೆ ಹಾವಳಿಯಿಕ್ಕುವ ದಂಡುದಾಳಿ ಹುಳ, ಹತ್ತಿಕಾಯಿ, ತೊಗರಿಕಾಯಿ ಕೊರಕ ಹುಳ, ಎಲೆಕೋಸಿಗೆ ಹಾವಳಿಯಿಕ್ಕುವ ವಜ್ರಬೆನ್ನಿನ ಪತಂಗ. ಇವುಗಳನ್ನೆಲ್ಲ, ಅವು ಮೊಟ್ಟೆಯಿಡುವ ಮೊದಲೇ ತಿಂದು ಹಾಕಿ ಬೆಳೆಗಳನ್ನು ರಕ್ಷಣೆ ಮಾಡುತ್ತಿದ್ದವು.
ತಾವು ಬೇಟೆಯಾಡಿ ತಿನ್ನುವುದರಿಂದಲೇ ಬೆಳೆಗಳ ರಕ್ಷಣೆಯಾಗುತ್ತಿದೆ ಅಂತಾ ಅವೇನು ತಿಳಿದಿರಲಿಲ್ಲ. ಆದರೆ, ಬೆಳೆಹಾನಿ ಮಾಡುವ ಹುಳುಗಳು ಮತ್ತು ಈ ಹುಳುಗಳನ್ನು ತಿಂದು ಹಾಕಿ ನಿಸರ್ಗದ ಸಮತೋಲನ(Pest & predator equilibrium) ಕಾಯುತ್ತಿದ್ದ ಬಾವಲಿಗಳ ಮುಖ್ಯ ಪಾತ್ರವನ್ನು ಮನುಷ್ಯರಾದ ನಾವಾದರೂ ಮನದಟ್ಟು ಮಾಡಿಕೊಳ್ಳಬೇಕಾಗಿತ್ತು, ಮಾಡಿಕೊಳ್ಳಲಿಲ್ಲ.
ಇದನ್ನು ಓದಿದ್ದೀರಾ?: ಬೀದರ್ | ʼಸೀತಾಫಲʼ ಹಣ್ಣಿಗೆ ಭಾರಿ ಬೇಡಿಕೆ; ಬೇಕಿದೆ ಸೂಕ್ತ ಮಾರುಕಟ್ಟೆ
ಹತ್ತಾರು ವರ್ಷಗಳಿಂದ ಮಾಂಸಕ್ಕಾಗಿ ಮನುಷ್ಯರು ಈ ಬಾವಲಿಗಳನ್ನು ಬೇಟೆಯಾಡುತ್ತಲೇ ಇದ್ದಾರೆ. ಬಾವಲಿಗಳ ಭೇಟೆ ಇದೇ ಪ್ರಮಾಣದಲ್ಲಿ ಮುಂದುವರೆದು ಸಂತಾನವೇ ನಾಶವಾಗಿಬಿಟ್ಟರೆ, ಮುಂದಿನ ವರ್ಷಗಳಲ್ಲಿ ರಾಗಿ, ಮೆಕ್ಕೆಜೋಳ, ಬಿಳಿಜೋಳ ಬೆಳೆದುಕೊಳ್ಳುವುದೂ ಕಷ್ಟವಾಗಲಿದೆ.

ಬಾದಾಮಿ ಮರಗಳಿಗೆ ಹಾವಳಿಯಿಕ್ಕುವ ಕೀಟಗಳ ನಿಯಂತ್ರಣ ಮಾಡುವುದು ಅಗತ್ಯವಿದೆಯೆಂದೋ ಅಥವಾ ಬಾವಲಿಗಳ ಸಂರಕ್ಷಣೆ ಮಾಡಲೇಬೇಕೆಂದೊ ಅಮೆರಿಕದ ಕ್ಯಾಲಿಫೋರ್ನಿಯ ಯೂನಿವರ್ಸಿಟಿ ತಲಾ ಒಂದು ಬಾವಲಿಗೆ 10 ಅಮೆರಿಕನ್ ಡಾಲರಿನಂತೆ ಮಿಲಿಯಗಟ್ಟಲೆ ಹಣವನ್ನು ಖರ್ಚು ಮಾಡುತ್ತಿತ್ತು.
ಈ ಮಾತು ಕೇಳಿದಾಗಿನಿಂದ ಬೆಂಗಳೂರಿನ ಇನ್ಫ್ಯಾಂಟ್ರಿ ರಸ್ತೆಯ ಪೊಲೀಸ್ ಇಲಾಖೆಯ ಕಚೇರಿ, ಬಸವನಗುಡಿ ಬಿ.ಎಂ.ಎಸ್ ಕಾಲೇಜಿನ ಹಿಂದಿದ್ದ ಆಲದ ಮರವೊಂದರಲ್ಲಿ ವಾಸಿಸುತ್ತಿದ್ದ ಬಾವಲಿಗಳೆಲ್ಲ ಒಂದೂ ಇಲ್ಲದಂತೆ ಕಣ್ಮರೆಯಾದವು. ನಂದಿ ಬೆಟ್ಟ ತಪ್ಪಲಿನ ಕಂಚಿಗನಾಳ ಗ್ರಾಮದ ಹಾದಿಯ ಹಿರಿಯಾಲದ ಮರದಲ್ಲಿದ್ದ ನೂರಕ್ಕೂ ಹೆಚ್ಚು ಹೆಜ್ಜೇನು ಗೂಡುಗಳ ಜೊತೆಗೆ ಸಾವಿರಾರು ಬಾವಲಿಗಳು ಕೂಡ ಈಗ ಇಲ್ಲವಾಗಿವೆ. ಹೆಜ್ಜೇನು ಮತ್ತು ಬಾವಲಿಗಳಿಗೆ ಆಸರೆಯಾಗಿದ್ದ ಆ ಹಿರಿಯಾಲದ ಮರವೂ ಈಗ ನಗರೀಕರಣಕ್ಕೆ ಬಲಿಯಾಗಿದೆ. ಬಾವಲಿಗಳು ಉಳಿಯದಿದ್ದರೆ ಮುಂದಿನ ದಿನಗಳಲ್ಲಿ ಬಾಳೆ ಗಿಡಗಳ ಸುರುಳಿಕೊರಕ ಹುಳ, ಮೆಕ್ಕೆ ಜೋಳ, ಬಿಳಿಜೋಳ, ರಾಗಿ ಬೆಳೆಗಳಿಗೆ ಹಾವಳಿಯಿಕ್ಕುವ ದಂಡುದಾಳಿ ಹುಳುಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಅದೇ ವಿಷ ಸಿಂಪಡಿಸಿಕೊಂಡೇ ಬದುಕು ನಡೆಸಬೇಕಾಗುತ್ತದೆ; ಇದೊಂದು ಬದುಕಾ?
Nammurenallu ennu 2.3 varusha Ella kaledu ogthave KAIDB afoshana tagaluthe dhevahalli taluk nallappanahai grama
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ನಲ್ಲಪನಹಳ್ಳಿ ಗ್ರಾಮದ ಮರಗಳಲ್ಲಿ ಸಾವಿರಾರು ಬಾವಲಿಗಳು ಇವೆ. ಇವುಗಳ ರಕ್ಷಣೆ ತುಂಬಾ ಅವಶ್ಯಕ ಎಂದೆನಿಸುತ್ತದೆ ನಿಮ್ಮ ವರದಿ ಓದಿದ ಮೇಲೆ.
ಈ ಆಧುನಿಕ ಬದುಕಿನ ಆಡಂಬರದ ಜೀವನ ಶೈಲಿಯಲ್ಲಿ ಎಲ್ಲವನ್ನು ಆರ್ಥಿಕತೆಯ ದೃಷ್ಟಿ ಯಿಂದ ನೋಡತಾ ಇದ್ದಿವಿ, ನಿಮ್ಮ ಮಾಹಿತಿಯನ್ನ ಓದಿದ ಮೇಲೆ ಈ ಬಾಹುಲಿ ಗಳಿಗಾಗಿ ಏನಾದ್ರು ಮಾಡಬೇಕು ಅನ್ನುಸ್ತಾ ಇದೆ…. 🙏