Encounter | ಬಲಾಢ್ಯರು- ಪ್ರಭಾವಿಗಳ ಒಂದೇ ಒಂದು ಎನ್‌ಕೌಂಟರ್ ಆಗಿದ್ದರೆ ತೋರಿಸಿ…

Date:

Advertisements

ಕಾನೂನು, ಪೊಲೀಸ್‌, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡ ಜನಸಾಮಾನ್ಯರು ಅತ್ಯಾಚಾರಿಗಳನ್ನು ‘ಎನ್‌ಕೌಂಟರ್‌’ ಮಾಡಿ ಎಂದು ಒತ್ತಾಯಿಸೋದು, ‘ಎನ್‌ಕೌಂಟರ್‌’ನ್ನು ಸಂಭ್ರಮಿಸೋದು ವ್ಯವಸ್ಥೆಯಲ್ಲಿ ಆಳಕ್ಕೆ ಬೇರೂರಿರುವ ಲೋಪಕ್ಕೆ ಹಿಡಿದ ಕನ್ನಡಿ. ಆದರೆ, ಕಾನೂನಿನ ಆಡಳಿತದ ತತ್ವಕ್ಕೆ ಅನುಗುಣವಾಗಿ ಕೆಲಸ ಮಾಡಬೇಕಿರುವ ಪೊಲೀಸರು ಕೂಡ ಸಂಭ್ರಮಿಸುವ ನಿಲುವು ತಳೆದು ಅದನ್ನೇ ಕಾರ್ಯಗತ ಮಾಡುವುದು ಹೇಗೆ ಸರಿಯೆನಿಸೀತು? ಪ್ರಭುತ್ವದ ಎನ್‌ಕೌಂಟರ್‌ಗೆ ಬಲಿಯಾಗುತ್ತಿರುವವರು ಜನಪರಹೋರಾಟಗಾರರು, ಬಡವರ್ಗಗಳಿಗೆ ಸೇರಿರುವ ಅಪರಾಧಿಗಳೇ ಆಗಿದ್ದಾರೆ.

ಹುಬ್ಬಳ್ಳಿಯಲ್ಲಿ ಐದು ವರ್ಷದ ಹೆಣ್ಣು ಮಗುವನ್ನು ಮನೆಯಂಗಳದಿಂದ ಅಪಹರಿಸಿ ಅತ್ಯಾಚಾರಗೈದು ಕೊಂದು ಮುಗಿಸಿದ, ಬಿಹಾರ ಮೂಲದ ಆರೋಪಿಯನ್ನು ಬಂಧಿಸಿ ಕರೆದೊಯ್ಯುವಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕಾರಣಕ್ಕೆ ಮಹಿಳಾ ಪಿಎಸ್‌ಐಯ ಪಿಸ್ತೂಲಿನಿಂದ ಆತ್ಮರಕ್ಷಣೆಗೆ ಹಾರಿಸಿದ ಗುಂಡಿಗೆ ಆರೋಪಿ ಬಲಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲಿಗೆ ಈ ಪ್ರಕರಣ ಮುಕ್ತಾಯಗೊಂಡಿದೆ. ಮಗುವಿನ ಪೋಷಕರಿಗೆ ಸರ್ಕಾರ ಹತ್ತು ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.

ಐದು ವರ್ಷಗಳ ಹಿಂದೆ ಹೈದರಾಬಾದಿನಲ್ಲಿ ಹೈವೇ ಟೋಲ್‌ ಬಳಿ ಯುವತಿಯೊಬ್ಬರ ದ್ವಿಚಕ್ರವಾಹನ ಕೆಟ್ಟು ನಿಲ್ಲುತ್ತದೆ. ಸಹಾಯಕ್ಕೆ ಬಂದರೆನ್ನಲಾದ ಆಗಂತುಕ ಯುವಕರು ಯುವತಿಯನ್ನು ಸಾಮೂಹಿಕ ಅತ್ಯಾಚಾರಗೈದು ಆಕೆಯ ದೇಹವನ್ನು ಪೆಟ್ರೋಲ್‌ ಸುರಿದು ಸುಟ್ಟು ಹಾಕಿದ್ದರು. ಪ್ರಕರಣ ಬಯಲಾಗುತ್ತಿದ್ದಂತೆ ಭಾರೀ ಆಕ್ರೋಶ ಉಂಟಾಗಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಮಾಹಿತಿ ಸಿಕ್ಕಿತ್ತು. ಪೊಲೀಸರು ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿ ಮುಗಿಸಿದ್ದರು. ಇದಕ್ಕೆ ಜನರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಹುಬ್ಬಳ್ಳಿಯ ಪ್ರಕರಣದಲ್ಲೂ ಜನರು ಎನ್ಕೌಂಟರ್ ಮಾಡಿದ ಪೊಲೀಸರನ್ನು ಶ್ಲಾಘಿಸಿದ್ದಾರೆ. ಆದರೆ, ದೆಹಲಿಯ ನಿರ್ಭಯಳ ಆರು ಮಂದಿ ಅತ್ಯಾಚಾರಿಗಳನ್ನು ಈ ನೆಲದ ಕಾನೂನಿನಡಿ ಗಲ್ಲು ಶಿಕ್ಷೆಗೆ ಒಳಪಡಿಸಿದ್ದನ್ನು ನಾವು ಮರೆಯಬಾರದು.

Advertisements

ಈ ನೆಲದ ಕಾನೂನಿನ ಪ್ರಕಾರ ಎಂತಹ ಗಂಭೀರ ಅಪರಾಧವಾದರೂ ಕಾನೂನಿನ ಕಟಕಟೆಯಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ಆರೋಪಿಗಿದೆ. ಆತ ವಕೀಲರನ್ನು ನೇಮಿಸಿಕೊಂಡು ವಾದಿಸಬಹುದು. ಅಂತಿಮವಾಗಿ ಸಾಕ್ಷ್ಯಾಧಾರಗಳೇ ಮುಖ್ಯವಾಗುತ್ತವೆ. ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಮಾನವೀಯ ಕಾನೂನಿನ ಪ್ರಬಲ ಆಶಯ. ಹೆಚ್ಚು ಜನಸಂಖ್ಯೆ, ಹೆಚ್ಚು ಬಡತನ, ಅಪಾರ ನಿರುದ್ಯೋಗ, ಮೇಲು ಕೀಳಿನ ಜಾತಿವ್ಯವಸ್ಥೆ, ಬೇರು ಬಿಟ್ಟಿರುವ ಈ ದೇಶದಲ್ಲಿ ಅಪರಾಧದ ಪ್ರಮಾಣವೂ ಹೆಚ್ಚೇ ಇದೆ. ಆದರೆ ಅದಕ್ಕೆ ಸರಿಯಾದ ಅನುಪಾತದಲ್ಲಿ ಪೊಲೀಸ್ ಠಾಣೆಗಳಿಲ್ಲ, ಕೋರ್ಟ್‌ಗಳಿಲ್ಲ, ನ್ಯಾಯಾಧೀಶರಿಲ್ಲ ಎಂಬುದು ಬಹುಕಾಲದ ಗಂಭೀರ ವಾಸ್ತವ. ಅದೆಷ್ಟೋ ಗಂಭೀರ ಪ್ರಕರಣಗಳ ವಿಚಾರಣೆಯು, ಪೂರಕ ಸಾಕ್ಷ್ಯಗಳಿದ್ದರೂ ಹತ್ತಾರು ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಡೆಯುತ್ತಲೇ ಇರುತ್ತದೆ. ವಿಚಾರಣೆ ವಿಳಂಬವಾದಷ್ಟೂ ನ್ಯಾಯದಾನ ಕುಂಠಿತಗೊಳ್ಳುತ್ತದೆ. ಕಾನೂನಿನ ಶಿಥಿಲ ಬಲೆಯಿಂದ ಬಲಾಢ್ಯರು- ಪ್ರಭಾವಿಗಳು ತಪ್ಪಿಸಿಕೊಳ್ಳುತ್ತಾರೆ. ಒಂದೊಮ್ಮೆ ಅಪರಾಧಿ ಅಂತ ಸಾಬೀತಾಗಿ ಜೈಲು ಶಿಕ್ಷೆಯಾದರೂ ಅಲ್ಲಿಂದಲೂ ಪೆರೋಲ್ ಮತ್ತಿತರೆ ಅವಕಾಶಗಳನ್ನು ಪಡೆದು, ಅನಾರೋಗ್ಯದ ನೆವ ಒಡ್ಡಿ, ಚಿಕಿತ್ಸೆಯ ಕಾರಣ ನೀಡಿ ತಿಂಗಳುಗಟ್ಟಲೆ ಹೊರಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೇ ಇವೆ. ಹೀಗೆ ತ್ವರಿತವಾಗಿ ನ್ಯಾಯದಾನವಾಗದೇ ಇರುವ ಕಾರಣ ಸಂತ್ರಸ್ತ ಕುಟುಂಬಗಳು ಅನುದಿನವೂ ಅತೀವ ಅಸಹಾಯಕತೆಯಿಂದ ಕೊರಗುವಂತಾಗಿದೆ. ವಿಶೇಷ ನ್ಯಾಯಾಲಯಗಳನ್ನು ಹೊಂದಿರುವ ಪೋಕ್ಸೊ ಪ್ರಕರಣಗಳೂ ತ್ವರಿತ ಇತ್ಯರ್ಥವಾಗುತ್ತಿಲ್ಲ! ಈ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ಪೋಕ್ಸೋ ನ್ಯಾಯಾಲಯಗಳ ಕೇಸುಗಳಲ್ಲಿ ಶಿಕ್ಷೆಯ ಪ್ರಮಾಣವೇ ಉದಾಹರಣೆ. ಹೀಗಾಗಿ ಜನತೆಯಲ್ಲಿ ಕಾನೂನಿನ ಆಡಳಿತದ ಕುರಿತು ಭ್ರಮನಿರಸನ- ಅಸಮಾಧಾನ ಸ್ವಾಭಾವಿಕ. ಹೀಗಾಗಿ ಶೂಟೌಟ್ ಗಳನ್ನು ಸಂಭ್ರಮಿಸುವ ವಿಕೃತ ಸ್ಥಿತಿ ಸೃಷ್ಟಿಯಾಗುತ್ತಿದೆ. ಇಂತಹ ಸ್ಥಿತಿಯನ್ನು ಮೊನ್ನೆಯ ಶೂಟೌಟ್‌ ಪ್ರಕರಣ ಮತ್ತೆ ಮುನ್ನೆಲೆಗೆ ತಂದಿದೆ.

hubballi encounter 1744568981
ಹುಬ್ಬಳ್ಳಿಯಲ್ಲಿ ಅತ್ಯಾಚಾರ ಆರೋಪಿಯನ್ನು ಎನ್‌ಕೌಂಟರ್‌ ಮಾಡಿದ ಪಿಎಸ್‌ಐ ಅನ್ನಪೂರ್ಣ ಮತ್ತು ಆರೋಪಿ ಮಗುವನ್ನು ಹೊತ್ತೊಯ್ದ ಸಿಸಿಟಿವಿ ದೃಶ್ಯ

ಮಂಗಳೂರಿನಲ್ಲಿ ಹಿಂದುತ್ವ ಕಾರ್ಯಕರ್ತರಾಗಿದ್ದು ಮಾಹಿತಿ ಹಕ್ಕು ಹೋರಾಟಗಾರರೂ ಆಗಿದ್ದ ವಿನಾಯಕ ಬಾಳಿಗ ಅವರು ದೇವಸ್ಥಾನವೊಂದರಲ್ಲಿ ನಡೆದಿದ್ದ ಹಣಕಾಸಿನ ಅವ್ಯವಹಾರವನ್ನು ಬಯಲಿಗೆಳೆದ ಕಾರಣಕ್ಕೆ ಕೊಲೆಯಾಗುತ್ತಾರೆ. ಆದರೆ ಆರೋಪಿ ಬಿಜೆಪಿಯ ಮುಖಂಡ ನರೇಶ್‌ ಶೆಣೈ ಬಂಧನವಾಗಿ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದಾಗ ಹಿಂದುತ್ವದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮಂಗಳೂರು ಜೈಲಿನ ಹೆಬ್ಬಾಗಿಲಲ್ಲೇ ಹೂಹಾರ ಹಾಕಿ ಸ್ವಾಗತಿಸಿ ಕರೆ ತಂದಿದ್ದ. ಆತ ಮಾಡಿದ್ದು ಕೊಲೆ, ಅದೇನು ಸನ್ಮಾನಿಸುವ ಕೆಲಸವೇ? ಬಾಳಿಗರ ಇಬ್ಬರು ಅವಿವಾಹಿತ ಸಹೋದರಿಯರು ಈಗಲೂ ಕಾನೂನು ಹೋರಾಟ ಮಾಡುತ್ತಿದ್ದಾರೆ. ತಂದೆ ತಾಯಿ, ಮಗನಿಗಾದ ಗತಿಗೆ ಮರುಗಿ ಮರುಗಿ ಆ ಕೊರಗಿನಲ್ಲೇ ಮೃತಪಟ್ಟಿದ್ದಾರೆ. ಆ ಕುಟುಂಬಕ್ಕೆ ನ್ಯಾಯ ನೀಡುವಲ್ಲಿ ನಮ್ಮ ನ್ಯಾಯ ವ್ಯವಸ್ಥೆ ಈಗಲೂ ಗೆದ್ದಿಲ್ಲ. ಉತ್ತರಕನ್ನಡದ ಬಿಜೆಪಿ ಶಾಸಕ ಚಿತ್ತರಂಜನ್‌ ಅವರ ಹಂತಕರನ್ನು ಮೂರು ದಶಕವಾದರೂ ಪೊಲೀಸರಿಗೆ ಪತ್ತೆ ಹಚ್ಚಲಾಗಿಲ್ಲ!. ಆ ಕೊಲೆಯಿಂದ ಉದಯಿಸಿದ ನಾಯಕ ಬಿಜೆಪಿಯ ಮಾಜಿ ಸಂಸದ ಅನಂತ್‌ಕುಮಾರ್‌ ಹೆಗಡೆ. ಮೂರು ದಶಕ ಅಧಿಕಾರ ಅನುಭವಿಸಿ ಸದ್ಯ ಮೂಲೆಗೆ ಸರಿದಿದ್ದಾರೆ. ಆದರೆ, ಚಿತ್ತರಂಜನ್‌ ಹಂತಕರನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾದರಾ ಅಥವಾ ಹಂತಕರನ್ನು ರಕ್ಷಿಸಲಾಯಿತಾ ಎಂಬುದು ಯಕ್ಷಪ್ರಶ್ನೆ.

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಒಂದೇ ಒಂದು ಸಾಕ್ಷಿ ಇಲ್ಲದಂತೆ ಮಾಡಿದ ಅಂದಿನ ಪೊಲೀಸ್‌ ಅಧಿಕಾರಿಗಳು, ಪೋಸ್ಟ್‌ ಮಾರ್ಟಂ ಮಾಡಿದ ವೈದ್ಯರು ಈಗಲೂ ಸರ್ಕಾರಿ ಕರ್ತವ್ಯದಲ್ಲಿದ್ದಾರೆ. ಒಂದು ದಿನಕ್ಕೂ ನಮ್ಮ ನ್ಯಾಯಾಲಯಗಳು ಅವರನ್ನು ಕಟಕಟೆಯಲ್ಲಿ ನಿಲ್ಲಿಸಲಿಲ್ಲ. ಐದಾರು ದಶಕಗಳಲ್ಲಿ ಧರ್ಮಸ್ಥಳದ ನೇತ್ರಾವತಿಯಲ್ಲಿ ಹರಿದು ಹೋದ ಹೆಣ್ಣುಜೀವಗಳಿಗೆ ಲೆಕ್ಕವಿಲ್ಲ.‌

DSC 3212

ಹೀಗಿರುವಾಗ ಜನ ಕಾನೂನು, ಪೊಲೀಸರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳದೇ ಇರುತ್ತಾರಾ? ಅವರು ಎನ್‌ಕೌಂಟರ್‌ ಮಾಡಿ ಎಂದು ಒತ್ತಾಯಿಸುತ್ತಾರೆ, ಎನ್‌ಕೌಂಟರ್‌ ಆದಾಗ ಸಂಭ್ರಮಿಸುತ್ತಾರೆ. ಆದರೆ, ಅದೇ ನಿಲುವನ್ನು ಪೊಲೀಸರು ತಳೆದರೆ ಏನಾದೀತು? ಫೇಕ್‌ ಎನ್‌ಕೌಂಟರ್‌ಗಳು ಈ ದೇಶದಲ್ಲಿ ಬೇಕಾದಷ್ಟು ನಡೆದಿವೆ. ತಮ್ಮ ಊರಿನ ಸಮಸ್ಯೆಗೆ ಹೋರಾಡುತ್ತಾ ಕಾಡು ಸೇರಿದ್ದ ನಕ್ಸಲರನ್ನು ಶರಣಾಗತಿಗೆ ಅವಕಾಶ ನೀಡದೇ ಎನ್‌ಕೌಂಟರ್‌ ಮಾಡಿ ಎಸೆಯಲಾಗುತ್ತಿದೆ. ಈ ದೇಶದ ಗೃಹಸಚಿವರು ನಕ್ಸಲ್‌ಮುಕ್ತ ದೇಶ ಮಾಡುವ ತುರ್ತಿನಲ್ಲಿದ್ದಾರೆ. ಛತ್ತೀಸ್‌ಗಡದಲ್ಲಿ ವರ್ಷದಲ್ಲಿ ನೂರರಷ್ಟು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಪ್ರಭುತ್ವದ ಎನ್‌ಕೌಂಟರ್‌ ಗೆ ಬಲಿಯಾಗುತ್ತಿರುವವರಲ್ಲಿ ಹೋರಾಟಗಾರರು, ಬಡವರ್ಗದ ಅಪರಾಧಿಗಳೇ ಆಗಿದ್ದಾರೆ. ಪ್ರಭಾವಶಾಲಿಗಳು, ಅಧಿಕಾರಶಾಹಿಗಳು ಎಂತಹ ಅಪರಾಧ ಮಾಡಿದರೂ ಬಚಾವ್‌ ಆಗುತ್ತಾರೆ ಎಂಬುದು ಇಡೀ ನ್ಯಾಯವ್ಯವಸ್ಥೆಯ ವಿಡಂಬನೆಯಾಗಿದೆ.

ಇಂತಹ ಸಾವಿರಾರು ಉದಾಹರಣೆಗಳಿವೆ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಹರಿಯಾಣದ ರಾಮ್‌ರಹೀಂ ಗುರ್ಮಿತ್‌ ಸಿಂಗ್‌ಗೆ ಕೇಳಿದಾಗಲೆಲ್ಲ ಕೋರ್ಟ್‌ ಪೆರೋಲ್‌ ಕೊಡುತ್ತಲೇ ಇದೆ. ಗುಜರಾತಿನ ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರ ವಿಶ್ವದಲ್ಲೇ ಗಮನ ಸೆಳೆದ ಪ್ರಕರಣ. ಬಿಲ್ಕಿಸ್‌ ಅತ್ಯಾಚಾರಿಗಳು ಮೇಲ್ವರ್ಗದವರು. ಆದರೂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಅವರಿಗೆ ಮೋದಿ ಸರ್ಕಾರ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ವರ್ಷದಲ್ಲಿ ಸನ್ನಡತೆಯ ಕಾರಣ ಕೊಟ್ಟು ಬಿಡುಗಡೆಯ ಭಾಗ್ಯ ಒದಗಿಸಿತ್ತು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿ, ಬಿಡುಗಡೆಯನ್ನು ರದ್ದುಗೊಳಿಸಿ ಮತ್ತೆ ಜೈಲಿಗೆ ತಳ್ಳಲಾಗಿದೆ. ಆದರೆ ಅಪರಾಧಿಗಳು ವರ್ಷಗಟ್ಟಲೆ ಪೆರೋಲ್‌ನಲ್ಲಿ ಹೊರಗಿದ್ದರು. ಕರ್ನಾಟಕದ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ತನ್ನ ಮಠದ ಹಾಸ್ಟೆಲ್‌ನಲ್ಲಿ ಆಶ್ರಯಪಡೆದಿದ್ದ ಬಡ ಅಪ್ರಾಪ್ತ ಹೆಣ್ಣುಮಕ್ಕಳನ್ನು ದಿನವೂ ಅತ್ಯಾಚಾರ ಮಾಡುತ್ತಿದ್ದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿದ್ದಾರೆ. ಆತನ ಈ ಕೃತ್ಯದ ಬಗ್ಗೆ ಕಳೆದ ಎರಡು ದಶಕಗಳಿಂದ ಕಂಡೂ ಸುಮ್ಮನಿತ್ತು ಈ ಸಮಾಜ. ಪೋಕ್ಸೋ ಪ್ರಕರಣ ದಾಖಲಾಗಿ ಒಂದು ವಾರವಾದರೂ ಆತ ಮಠದಲ್ಲೇ ಇದ್ದರೂ ಪೊಲೀಸರು ಬಂಧಿಸಿರಲಿಲ್ಲ! ಎನ್‌ಕೌಂಟರ್‌ ಮಾತು ಆಗ ಬರಲೇ ಇಲ್ಲ. ಶಾಸಕ ಮುನಿರತ್ನ ಮಹಿಳೆಯರನ್ನು ಎಂಥೆಂಥಾ ಕೃತ್ಯಗಳಿಗೆ ಬಳಸಿಕೊಂಡಿದ್ದ! ತಾನೂ ಅತ್ಯಾಚಾರ ಮಾಡಿದ್ದಲ್ಲದೇ ಹನಿಟ್ರ್ಯಾಪ್‌ಗೆ ಆ ಮಹಿಳೆಯರನ್ನು ಬಳಸಿಕೊಂಡಿದ್ದ. ಈಗಲೂ ಶಾಸಕ.

ಹುಬ್ಬಳ್ಳಿಯಲ್ಲಿ ನಡೆದಂತಹದ್ದೇ ಕೃತ್ಯ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿದ್ದ ಕುಟುಂಬದ ಆರು ವರ್ಷದ ಪುಟ್ಟ ಮಗುವಿನ ಮೇಲೂ ಆಗಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಬಿಹಾರದ ಕಾರ್ಮಿಕ ಬಾಲಕಿಯನ್ನು ಅತ್ಯಾಚಾರಗೈದು ಕೊಂದು ಬಿಸಾಕಿದ್ದ. ಆತ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಜೀವಾವಧಿ ಶಿಕ್ಷೆಯಾಗಲಿ, ಎನ್‌ಕೌಂಟರ್‌ ಆಗಲಿ, ಮರಣದಂಡನೆಯಾಗಲಿ ಭಯ ಹುಟ್ಟಿಸುತ್ತಿಲ್ಲ ಎಂಬುದು ನಾಗರಿಕ ಸಮಾಜಕ್ಕೆ ಸವಾಲಾಗಿದೆ.

Snt copy
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಸಂತೋಷ್‌ ರಾವ್

ಹುಬ್ಬಳ್ಳಿಯ ಎನ್‌ಕೌಂಟರ್‌ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಆರೋಪಿ ಪ್ರಭಾವಿಯಾಗಿದ್ದರೆ ಈ ಎನ್‌ಕೌಂಟರ್‌ ನಡೆಯುತ್ತಿತ್ತಾ? ಎಂದು ಹಲವರು ಪ್ರಶ್ನಿಸಿದ್ದಾರೆ. ಧರ್ಮಸ್ಥಳದ ಸೌಜನ್ಯ ಪ್ರಕರಣದ ಏಕೈಕ ಆರೋಪಿ ಎಂದು ಧರ್ಮಸ್ಥಳದ ಯುವಕರು ಪೊಲೀಸರಿಗೆ ಹಿಡಿದುಕೊಟ್ಟ ಸಂತೋಷ್‌ ರಾವ್‌ನನ್ನು ಅಂದು ಎನ್‌ಕೌಂಟರ್‌ ಮಾಡಿದ್ದರೆ ಆತನೇ ಅತ್ಯಾಚಾರಿ ಎಂಬ ನಿರ್ಧಾರಕ್ಕೆ ಈ ಸಮಾಜ ಬಂದುಬಿಡುತ್ತಿತ್ತು. ಸಂತೋಷ್‌ ರಾವ್‌ ನ್ಯಾಯದ ಕಟಕಟೆಯಲ್ಲಿ ನಿರಪರಾಧಿ ಎಂದು ಸಾಬೀತಾಗಿರುವುದು ಸೌಜನ್ಯ ಅತ್ಯಾಚಾರಿಗಳು ಯಾರು ಎಂಬ ಪ್ರಶ್ನೆ, ಕೆಲವರ ಮೇಲಿನ ಅನುಮಾನ ಜೀವಂತವಾಗಿ ಉಳಿಯಲು ಸಾಧ್ಯವಾಯ್ತು. ಈಗಲೂ ಸೌಜನ್ಯಳ ನಿಜ ಹಂತಕರನ್ನು ಯಾಕೆ ಇನ್ನೂ ಕಾನೂನಿನ ಕುಣಿಕೆಗೆ ತರಲಾಗಿಲ್ಲ. ಆದರ ಮೇಲೆ ಮಣ್ಣೆಳೆಯುವ ಪ್ರಯತ್ನಗಳೇ ನಡೆದಿವೆಯಲ್ಲ ಯಾಕೆ?

ನೂರಾರು ಮಹಿಳೆಯರ ಅತ್ಯಾಚಾರಿ, ಸಂಸದನಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಸಹಾಯಕ್ಕೆ ಬಂದ ಮಹಿಳೆಯರ ಮಾನಭಂಗ ಮಾಡಿ ವಿಡಿಯೋ ಮಾಡಿಟ್ಟುಕೊಂಡಿದ್ದ ಪ್ರಜ್ವಲ್‌ ರೇವಣ್ಣ ಒಂದು ತಿಂಗಳು ದೇಶದಿಂದಲೇ ಎಸ್ಕೇಪ್‌ ಆಗಿದ್ದಾಗ ಯಾಕೆ ಎನ್‌ಕೌಂಟರ್‌ ಮಾಡಿಲ್ಲ ಎಂಬ ಪ್ರಶ್ನೆಯನ್ನೂ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಎತ್ತಿದ್ದರು. ಇಂತಹ ಪ್ರಶ್ನೆ ಬರೋದು ಸಹಜ. ಮೊದಲ ಬಾರಿಗೆ ಸಂಸದನಾಗಿದ್ದ ಪ್ರಜ್ವಲ್‌, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ದಶಕಗಳಿಂದ ಶಾಸಕರಾಗಿರುವ ರೇವಣ್ಣರ ಪುತ್ರ, ಎರಡು ಬಾರಿ ಮುಖ್ಯಮಂತ್ರಿಗಳಾಗಿ ಸದ್ಯ ಕೇಂದ್ರ ಸಚಿವರಾಗಿರುವ ಎಚ್‌ ಡಿ ಕುಮಾರಸ್ವಾಮಿಯವರ ಸೋದರನ ಮಗ. ಪ್ರಜ್ವಲ್‌ ಮಾಡಿದ್ದು ಈ ದೇಶ ಕಂಡು ಕೇಳರಿಯದ ಮಹಾಪಾತಕ ಕೃತ್ಯ. ಆದರೆ, ಆ ಕುಟುಂಬಕ್ಕೆ ಅದು ಕಳಂಕ ಅನ್ನಿಸಿಲ್ಲ. ವಿಡಿಯೋ ಬಹಿರಂಗಪಡಿಸಿದವರ ಮೇಲೆ ಆರೋಪ ಮಾಡುತ್ತಾ, ಕೃತ್ಯವನ್ನು ಖಂಡಿಸಿಲ್ಲ. ಮಗನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್‌ ಮಾಡಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ, ಕೋರ್ಟ್‌ ಜಾಮೀನು ಸಡಿಲಿಸಿದ ಕಾರಣ ಹಾಸನದ ಮನೆಗೆ ಹೋದಾಗ ಅಲ್ಲಿನ ಮಹಿಳೆಯರು ಆರತಿ ಎತ್ತಿ ಹೂಮಳೆಗರೆದು ಸ್ವಾಗತಿಸಿದ್ದರು. ಇದು ಈ ಸಮಾಜ ತಲುಪಿರುವ ಸ್ಥಿತಿ. ಹಣಬಲ, ರಾಜಕೀಯ ಬಲ ಇದ್ದರೆ ಆತ ಎಷ್ಟೇ ಅತ್ಯಾಚಾರ ಮಾಡಿದರೂ, ಕೊಲೆ ಮಾಡಿದರೂ ಜನ ಕ್ಷಮಿಸುತ್ತಾರೆ.

ಹುಬ್ಬಳ್ಳಿಯ ಎನ್‌ಕೌಂಟರ್ ಬಗ್ಗೆ ಈ ದಿನ.ಕಾಮ್‌ ನ್ಯಾಯವಾದಿಗಳು, ಸಾಮಾಜಿಕ ಚಿಂತಕರು, ಪ್ರಗತಿಪರರನ್ನು ಮಾತನಾಡಿಸಿತು. ಅವರ ಅಭಿಪ್ರಾಯಗಳು ಇಲ್ಲಿವೆ

ಉತ್ತರಪ್ರದೇಶದ ಮಾದರಿಯ ಭ್ರಮೆ ಬಿತ್ತಿದವರು…

ಅತ್ಯಾಚಾರ ಆರೋಪಿಯ ಶೂಟೌಟ್‌ಗೆ ಕಾರಣ, ಆರೋಪಿಯ ಹಠಾತ್ ದಾಳಿಯನ್ನು, ಸ್ವಯಂ ರಕ್ಷಣೆಯ ಕಾರಣವನ್ನು ಪೊಲೀಸರು ನೀಡುವುದು ಸಹಜ. ಮಗುವಿನ ಕೊಲೆಯ ಸಂದರ್ಭ ಸನ್ನಿವೇಶದ ಒತ್ತಡಕ್ಕೆ ಪೊಲೀಸರು ಒಳಗಾಗುವುದು ಸಹಜ. ಉತ್ತರ ಪ್ರದೇಶದ ಸರ್ಕಾರದ ಎನ್‌ಕೌಂಟರ್ ಗಳು. ಯುಪಿ ಮಾದರಿಯನ್ನು ನಮ್ಮಲ್ಲಿ ತರಬೇಕೆಂಬ ಭ್ರಮೆ ಬಿತ್ತಿದವರು ಯಾರು ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ. ಅತ್ಯಾಚಾರದಂಥ ಘಟನೆಗಳಾದಾಗ ಎನ್ ಕೌಂಟರ್ ಮಾಡಬೇಕ್ರಿ ಎಂದು ತಕ್ಷಣ ಜನರು ಪ್ರತಿಕ್ರಿಯಿಸುವುದು ಸಹಜ. ಇದಕ್ಕೆ ಕಾರಣ ದೃಶ್ಯ ಮಾಧ್ಯಮ ಬಿತ್ತಿರುವ ಅವಸರದ ನ್ಯಾಯಾದಾನ. ಅ್ಯಂಕರ್ ಗಳು ಜಡ್ಜಗಳಾಗಿರುವ ಕಾಲವಿದು. ಇದಕ್ಕೆ ಮಾಧ್ಯಮ ಕೇಂದ್ರಗಳನ್ನು ನಿಯಂತ್ರಿಸುವ ವ್ಯಕ್ತಿಯ ಸಂವಿಧಾನವಿರೋಧಿ ಧೋರಣೆ ಮುಖ್ಯ ಕಾರಣ. ಬಹಳ ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ, ದೊಡ್ಡ ಸಂಖ್ಯೆಯಲ್ಲಿರುವ ಬಡವರು ಶೋಷಣೆಗೆ, ಅತ್ಯಾಚಾರಕ್ಕೆ, ಎನ್ ಕೌಂಟರ್ ಗೆ ತುತ್ತಾಗುವುದು ಕಾಣುತ್ತಿದ್ದೇವೆ. ಇದರ ಸ್ಪಷ್ಟ ಅರಿವು ಇರುವ ಮಾಧ್ಯಮದ ಮೈಂಡ್ ಜನರ ಭಾವನಾತ್ಮಕತೆ ಜೊತೆ ಆಡ ಆಡುತ್ತಲೇ ಬಂದಿದೆ. ಎನ್ ಕೌಂಟರ್ ಪ್ರಿಯ ಪಕ್ಷ ಮಾತ್ರ, ಹುಬ್ಬಳ್ಳಿಯಲ್ಲಾದ ಬಿಹಾರಿ ಯುವಕನ ಎನ್ ಕೌಂಟರ್ ಬಗ್ಗೆ ತುಟಿಪಿಟಕ್ ಎಂದಿಲ್ಲ.
-ನಾಗರಾಜ್ ಹರಪನಹಳ್ಳಿ, ಪತ್ರಕರ್ತ

ಪ್ರಭಾವಿ ಅತ್ಯಾಚಾರಿಗಳ ಎನ್‌ಕೌಂಟರ್‌ ಆದ ಉದಾಹರಣೆ ಇದೆಯೇ?

ಸಂವಿಧಾನದ ಪ್ರಕಾರ ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು. ಆದರೆ ನಿಜ ಪ್ರಪಂಚದಲ್ಲಿ ಭಾರತದಲ್ಲಿ ಹೀಗೆ ಇದೆಯೇ?
ಕೆಲವು ಅತ್ಯಾಚಾರಿಗಳನ್ನು ಹಾರ, ತುರಾಯಿ ಹಾಕಿ ಸನ್ಮಾನಿಸಲಾಗುತ್ತದೆ, ಕೆಲವರನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ. ಹಾಗಾದರೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗುವುದು ಬೇಡವೇ? ಆಗಲೇಬೇಕು, ಹಾಗೆಯೇ ಅದು ಎಲ್ಲ ಅಪರಾಧಿಗಳಿಗೂ ಸಮಾನವಾಗಿ ಇರಬೇಕು. ನಮ್ಮ ದೇಶದಲ್ಲಿ ದಿನಕ್ಕೆ ಸರಾಸರಿ 86ಕ್ಕಿಂತಲೂ ಹೆಚ್ಚು ಅತ್ಯಾಚಾರಗಳಾಗುತ್ತವೆ. ಪುಟ್ಟ ಮಗುವಿನಿಂದ ಹಿಡಿದು 80 ವರ್ಷದ ಮಹಿಳೆಯರವರೆಗೆ 2022ರಲ್ಲಿ, ಭಾರತದಲ್ಲಿ ಆಗಿರುವ ಅತ್ಯಾಚಾರದ ಸಂಖ್ಯೆ 31,516. ಇದರಲ್ಲಿ ಎಷ್ಟು ಅತ್ಯಾಚಾರಿಗಳ ಎನ್‌ಕೌಂಟರ್ ಆಗಿದೆ?

ಪೊಲೀಸರಿಗೆ ಪ್ರಜ್ವಲ್ ರೇವಣ್ಣನಂತಹ ರಾಜಕೀಯ ಪ್ರಭಾವ ಇರುವ ಅತ್ಯಾಚಾರದ ಆರೋಪಿಗಳನ್ನು ಇದೆ ರೀತಿ ನಡೆಸಿಕೊಳ್ಳುವ ಧೈರ್ಯ ಇದೆಯೇ? ಪ್ರತೀ ಎನ್‌ಕೌಂಟರ್ ಕೇಸುಗಳನ್ನು ಪರಿಶೀಲಿಸಿದಾಗ ಕಂಡುಬರುವುದು ಇದೇ: ಎಲ್ಲ ಎನ್‌ಕೌಂಟರ್ ಬಲಿಪಶುಗಳು – ಜನ ಸಾಮಾನ್ಯರು, ಬಡವರು, ದಲಿತರು, ದಮನಿತರು. ಪ್ರಭಾವಿ, ಶ್ರೀಮಂತ, ಉನ್ನತವರ್ಗ, ಉನ್ನತ ಜಾತಿಯವರು ಎನ್‌ಕೌಂಟರ್ ಆಗಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಪೊಲೀಸರೇ ಎನ್‌ಕೌಂಟರ್ ಮಾಡಿ ಕೊಲ್ಲುವುದಾದರೇ ನಮಗೆ ನ್ಯಾಯಾಲಯದ ಅವಶ್ಯಕತೆ ಇದೆಯೇ?
-ಸುಚಿತ್ರಾ ಎಸ್‌ ಎ, ʼಜಾಗೃತ ಕರ್ನಾಟಕʼ ಸದಸ್ಯೆ

ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗದ ಮೇಲೆ ಭರವಸೆ ಇಲ್ಲವೇ?

ಚಿಕ್ಕ ಮಗುವನ್ನು ದಾರುಣವಾಗಿ ಹತ್ಯೆ ಮಾಡಿರುವುದು ಮಹಾಪರಾಧ. ಆದರೆ, ಇಂದಿರಾ ಗಾಂಧಿಯ ಹತ್ಯೆಯ ಆರೋಪಿಗಳು, ಮುಂಬೈ ದಾಳಿಯ ಅಪರಾಧಿ ಕಸಬ್ ಇತ್ಯಾದಿ ಆತಂಕವಾದಿ ಕೃತ್ಯಗಳಲ್ಲಿ ತೊಡಗಿರುವವರಿಗೆ ನ್ಯಾಯಾಂಗವು ಶಿಕ್ಷೆ ನೀಡಿರುವಾಗ ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಾಂಗವನ್ನು ಮೀರಿ ಶಿಕ್ಷೆ ಕೊಡುವುದು ಎಷ್ಟು ಸರಿ? ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗದ ಮೇಲೆ ಭರವಸೆ ಇಲ್ಲವೇ?

ಎನ್‌ಕೌಂಟರ್ ಪ್ರಕರಣದ ಮೇಲೆ ಗೃಹಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆಯನ್ನು ಮಾಡಲು ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ತನಿಖೆ ಯಾವುದೇ ಫಲಿತಾಂಶ ನೀಡುತ್ತದೆ ಎಂಬ ಭರವಸೆ ಖಂಡಿತ ಇಲ್ಲ. ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾದರೆ ಏನಾದರೂ ಭರವಸೆ ಬರುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆಂಬ ಭರವಸೆ ಕಿಂಚಿತ್ತೂ ಇಲ್ಲ. ಏಕೆಂದರೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳ ಮನಸ್ಥಿತಿಯೂ ಸಹ ಎನ್‌ಕೌಂಟರ್ ಕಡೆಗೆ ಒಲವಿರುತ್ತದೆ. ಈ ಎನ್‌ಕೌಂಟರ್ ಗಳ ಹಿಂದೆ ಇರುವ ಹಿರಿಯ ಅಧಿಕಾರಿಗಳ track record ಪತ್ತೆ ಹಚ್ಚಿದರೆ ಅದರಲ್ಲಿ ಒಂದು ಮಾದರಿ/ pattern ಕಾಣುತ್ತದೆ. ಅವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ ಆ ಎಲ್ಲಾ ಪೋಸ್ಟಿಂಗ್ ಗಳಲ್ಲಿ ಈ ತರಹದ ಎನ್‌ಕೌಂಟರ್ ಸರ್ವೇಸಾಮಾನ್ಯವಾಗಿದೆ. ಎಲ್ಲಾ ಎನ್‌ಕೌಂಟರ್‌ಗಳಲ್ಲಿ ಸಾಮಾನ್ಯವಾಗಿ ಕಾಲಿನ ಭಾಗಕ್ಕೆ ಬೀಳುತ್ತಿದ್ದ ಬುಲೆಟ್ ಈ ಪ್ರಕರಣದಲ್ಲಿ ಜೀವಕ್ಕೆ ಅಪಾಯವಾದ ಶರೀರದ ಭಾಗಕ್ಕೆ ಬಿದ್ದು ಆರೋಪಿ ಮರಣ ಹೊಂದಿರುವ ಕಾರಣ ಇದು ದೊಡ್ಡ ವಿಷಯವಾಗಿ ಹೊರಹೊಮ್ಮಿದೆ. ಇಲ್ಲವಾದಲ್ಲಿ ಇದು ಇನ್ನೊಂದು ಚಿಕ್ಕ ಪ್ರಕರಣವೆಂದು ಮೂಲೆ ಸೇರುತ್ತಿತ್ತು.
– ಆದರ್ಶ್‌ ಆರ್‌ ಅಯ್ಯರ್‌; ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು

ವಿಳಂಬ ನ್ಯಾಯಕ್ಕೆ ಪರಿಹಾರ ಶೂಟೌಟ್ ಅಲ್ಲ

ನಮ್ಮ ದೇಶದಲ್ಲಿ ಕಾನೂನು ಆಡಳಿತವೊಂದಿದೆ. ಅದಕ್ಕೆ ಸಂವಿಧಾನದ ಮನ್ನಣೆಯೂ ಇದೆ. ನ್ಯಾಯಾಲಯಗಳು ಕಾನೂನು ಪಾಲನೆಗೆಂತೇ ಕಾರ್ಯನಿರ್ವಹಿಸುತ್ತವೆ. ಇಂತಹ ವ್ಯವಸ್ಥೆಯನ್ನು ಹೊರತುಪಡಿಸಿ ನಡೆಸುವ, ನ್ಯಾಯದ ಹೆಸರಿನ ಎಲ್ಲ ದಂಡನೆಯೂ ಕಾನೂನುಬಾಹಿರ. ಆದ್ದರಿಂದಲೇ, ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗದ ಮೇಲೆ ಭರವಸೆ ಇಲ್ಲವೇ?. ಅತ್ಯಾಚಾರಿಯಾಗಲಿ, ಕಳ್ಳ ಆಗಲಿ, ಕೊಲೆಗಾರ ಆಗಲಿ, ಆತನನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸದೆ ಶಿಕ್ಷೆ ವಿಧಿಸುವ ಯಾವುದೇ ರೀತಿಯನ್ನು ಸ್ವೀಕರಿಸಲಾಗದು.

ಕಾನೂನು ಪ್ರಕ್ರಿಯೆ ತಡವಾದ ಕಾರಣ ತುರ್ತು ನ್ಯಾಯ ಕೊಡಿಸುವ ಪರ್ಯಾಯ ಮಾರ್ಗವಾಗಿ ಎನ್ ಕೌಂಟರ್ ನ್ನು ಸಮರ್ಥಿಸುವ ಅನೇಕ ಮಂದಿ ಇದ್ದಾರೆ. ನಿಜವಾದ ಅಪರಾಧಿ ತಪ್ಪಿಸಿಕೊಳ್ಳಲು ಇದು ಎಡ ಮಾಡಿಕೊಡುತ್ತದೆ. ಪ್ರಭಾವಿಗಳಾದ ಅಪರಾಧಿಗಳನ್ನು ಕಾಪಾಡಲೂ ಈ ಮಾರ್ಗವನ್ನು ಬಳಸುವ ಅಪಾಯವಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿ ಮಾಡಬೇಕಾದ ಅಧಿಕಾರಿಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಇದು ಕಾರಣವಾಗುತ್ತದೆ. ನಮ್ಮ ಇಂದಿನ ವ್ಯವಸ್ಥೆಯಲ್ಲಿ ನ್ಯಾಯ ವಿಳಂಬವು ಸ್ವಾಭಾವಿಕ. ಕೋಟಿಗಟ್ಟಲೆ ಕೇಸುಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇದೆ ಎನ್ನುವ ಕಟು ವಾಸ್ತವ ಒಂದೆಡೆ ಇದ್ದರೂ ತುರ್ತು ನ್ಯಾಯದ ನೆಪದಲ್ಲಿ ಶೂಟೌಟ್ ಒಪ್ಪಲಾಗದು. ವಿಳಂಬ ನ್ಯಾಯಕ್ಕೆ ಪರಿಹಾರ ಶೂಟೌಟ್ ಅಲ್ಲ. ಸಂವಿಧಾನದ ಮೇಲೆ ಆಕ್ರಮಣವನ್ನು ನಡೆಸುವ ಅದೇ ಮನಸ್ಥಿತಿಯಿಂದಲೇ ಶೂಟೌಟ್ ಮೂಲಕ ತುರ್ತು ನ್ಯಾಯ ಎನ್ನುವ ವಾದವು ಕೂಡ ಮುನ್ನೆಲೆಗೆ ತರಲಾಗುತ್ತದೆ.
– ಬಾಬುರಾಜ್‌ ಪಲ್ಲದನ್‌, ವಕೀಲರು ಮತ್ತು ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X