ಹೆಚ್ಚಾದ ದರೋಡೆ ಪ್ರಕರಣ; ಪೊಲೀಸ್ ವ್ಯವಸ್ಥೆ ಬಗ್ಗೆ ಅಪರಾಧ ತಜ್ಞರ ಕಳವಳ

Date:

Advertisements

ಕರ್ನಾಟಕದಲ್ಲಿ ಮೂರು ದರೋಡೆ ಪ್ರಕರಣಗಳು ಮೂರು ದಿನಗಳ ಅಂತರದಲ್ಲಿ ನಡೆದು ಭೀತಿ ಹುಟ್ಟಿಸಿವೆ. ವಿಜಯಪುರದಲ್ಲಿ ಗ್ಯಾಂಗ್‌ವೊಂದರ ಬೆನ್ನು ಹತ್ತಿದ ಪೊಲೀಸರು ಗುಂಡು ಹಾರಿಸಿ, ಮಧ್ಯಪ್ರದೇಶ ಮೂಲದ ಒಬ್ಬಾತನನ್ನು ಸೆರೆ ಹಿಡಿದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಸುಮಾರು 4 ಕೋಟಿ ರೂಪಾಯಿಗಳನ್ನು ಹಾಡಹಗಲೇ ದರೋಡೆ ಮಾಡಿದ ಘಟನೆ ನಡೆಯಿತು. ಬೀದರ್‌ ನಗರದಲ್ಲಿ ಎಟಿಎಂಗೆ ಹಣ ತುಂಬಿಸುವ ವೇಳೆ ಸಿಎಂಎಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಸುಮಾರು 92 ಲಕ್ಷ ರೂಪಾಯಿಯನ್ನು ಟ್ರಂಕ್ ಸಮೇತ ಖದೀಮರು ಸಾಗಣೆ ಮಾಡಿದರು. ಘಟನೆಯಲ್ಲಿ ಓರ್ವ ಸಿಬ್ಬಂದಿಯ ಹತ್ಯೆಯೂ ಆಗಿದೆ.

ಈ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಸುಧಾರಣಾ ಕ್ರಮಗಳ ಕುರಿತು ಅಪರಾಧ ಜಗತ್ತು ಬಲ್ಲವರು ಮಾತನಾಡಲಾರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ವಕೀಲರು, ಪತ್ರಿಕೆಗಳ ಕ್ರೈಮ್ ವರದಿಗಾರರು ಈ ಪಾತಕಗಳ ಕುರಿತು ನಮ್ಮದೇ ಆದ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿರಿ: ಬೆಚ್ಚಿ ಬೀಳಿಸಿದ ಬೀದರ್ ಎಟಿಎಂ ದರೋಡೆ ಪ್ರಕರಣ: ಪಾತಕಿಗಳಲ್ಲಿ ‘ಉತ್ತರ ಭಾರತ ಮಾದರಿ’ ವಾಸನೆ!

Advertisements

“ಇದು ಪೊಲೀಸ್ ವ್ಯವಸ್ಥೆಯ ನಿರ್ಲಕ್ಷ್ಯ” ಎನ್ನುತ್ತಾರೆ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಎಸ್‌.ಕೆ.ಉಮೇಶ್ ದೊಡ್ಡಿ. ‘ಈದಿನ.ಕಾಂ’ಗೆ ಪ್ರತ್ರಿಕ್ರಿಯಿಸಿದ ಅವರು, “ತಮಗೆ ನೀಡುವ ಪಿಸ್ತೂಲುಗಳನ್ನು ಪೊಲೀಸರು ಷೋಕೇಶ್‌ನಲ್ಲಿ ಇಡುವುದನ್ನು ಬಿಟ್ಟು, ಸೊಂಟದಲ್ಲಿ ಸಿಕ್ಕಿಸಿಕೊಂಡು ತಿರುಗಬೇಕು. ಪಿಸ್ತೂಲನ್ನು ಕೊಡುವುದು ದೀಪಾವಳಿ ವೇಳೆ ಪೂಜೆ ಮಾಡಲಷ್ಟೇ ಎಂದು ಅನೇಕ ಪೊಲೀಸ್ ಅಧಿಕಾರಿಗಳು ತಿಳಿದಿರುವಂತಿದೆ. ಠಾಣೆಯಲ್ಲಿ ತಮ್ಮ ಸಮವಸ್ತ್ರವನ್ನು ಕಳಚಿಟ್ಟು, ಟ್ರಂಕ್‌ಗೆ ಹಾಕಿ ಬರುತ್ತಾರೆ. ಸಮವಸ್ತ್ರ ಧರಿಸಿ ರಸ್ತೆಯಲ್ಲಿ ಓಡಾಡುವುದನ್ನು ಪೊಲೀಸರು ರೂಢಿಸಿಕೊಳ್ಳಬೇಕು. ಎಲ್ಲೆಲ್ಲೂ ಪೊಲೀಸರು ಕಾಣಿಸಿಕೊಳ್ಳುತ್ತಿದ್ದರೆ, ಕಳ್ಳರು ಇಂತಹ ಸಾಹಸಗಳಿಗೆ ಕೈ ಹಾಕುವುದಕ್ಕೆ ಹೋಗುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

SK Umesh
ಎಸ್.ಕೆ.ಉಮೇಶ್ ದೊಡ್ಡಿ

“ಯಾವುದೇ ಸರ್ಕಾರ ಬಂದರೂ ಯಾರೇ ಗೃಹ ಮಂತ್ರಿ ಆಗಿದ್ದರೂ ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನೂ ಹಾಳಾಗಿಲ್ಲ. ಆದರೆ ಪೊಲೀಸ್ ವ್ಯವಸ್ಥೆ ಸುಧಾರಣೆ ಆಗಲೇಬೇಕಿದೆ. ಆಗಾಗ್ಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಬೇಕಿದೆ. ಹೊಯ್ಸಳ ವಾಹನಗಳು ಹೆಚ್ಚು ಸುತ್ತಾಡಬೇಕಿದೆ” ಎಂಬುದು ಉಮೇಶ್ ಅವರ ಸಲಹೆ.

ಇದನ್ನೂ ಓದಿರಿ: ಸೆಲೆಬ್ರಿಟಿಗಳ ಬಲಿಸಂಚಿಗೆ ಮುಂಬೈ ಕುಖ್ಯಾತಿ; ಸಲ್ಮಾನ್, ಸಿದ್ದೀಕಿ ಈಗ ಸೈಫ್, ಶಾರುಖ್!

ಕ್ರಿಮಿನಲ್‌ ಕೇಸ್‌ಗಳ ತಜ್ಞರಾದ ಹೈಕೋರ್ಟ್ ಅಡ್ವೊಕೇಟ್ ಎಸ್.ಬಾಲನ್ ಪ್ರತಿಕ್ರಿಯಿಸಿ, ಪೊಲೀಸ್ ವ್ಯವಸ್ಥೆಯಲ್ಲಿನ ಭಾರೀ ಲೋಪದೋಷಗಳನ್ನು ಪ್ರಸ್ತಾಪಿಸಿದರು. “ಹಿಂಸಾತ್ಮಕ ಅಪರಾಧಿಗಳು ಮಾತ್ರ ಎಸಗುವಂತಹ ಕೃತ್ಯಗಳು ರಾಜ್ಯದಲ್ಲಿ ಜರುಗಿವೆ. ಇಂತಹ ಕ್ರೈಮ್‌ಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಇಂತಹ ಕೇಸ್‌ಗಳಲ್ಲಿ ಉತ್ತರ ಭಾರತದ ಗ್ಯಾಂಗ್‌ಗಳು ಕಂಡುಬರುವುದು ಸಾಮಾನ್ಯ. ಪೊಲೀಸರು, ತನಿಖಾ ಏಜೆನ್ಸಿಗಳು ಈ ಸಮಸ್ಯೆಗೆ ಒಂದು ಕಾರ್ಯತಂತ್ರವನ್ನು ರೂಪಿಸಿಕೊಳ್ಳಬೇಕಾಗಿದೆ. ಆದರೆ ಇಂಟೆಲಿಜೆನ್ಸ್ ಏಜೆನ್ಸಿಗಳು ಸ್ಥಳೀಯ ಪೊಲೀಸರ ಆದ್ಯತೆಗಳೇ ಬೇರೆಯಾಗಿವೆ” ಎಂದು ಟೀಕಿಸಿದರು.

balan 4
ಕರ್ನಾಟಕ ಹೈಕೋರ್ಟ್ ಅಡ್ವೊಕೇಟ್ ಎಸ್.ಬಾಲನ್

“ಅಲ್ಪಸಂಖ್ಯಾತರನ್ನು, ದಲಿತರನ್ನು, ಆದಿವಾಸಿಗಳನ್ನು ಎನ್‌ಐಎ ಟಾರ್ಗೆಟ್ ಮಾಡಿಕೊಂಡು ಕೂತಿದೆ. ವಿವಿಐಪಿ, ವಿಐಪಿ ಸೆಕ್ಯೂರಿಟಿಯಲ್ಲಿ ರೆಗ್ಯುಲರ್ ಪೊಲೀಸರು ಬ್ಯುಸಿಯಾಗಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್‌ಗಳು ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ಕಳೆದುಹೋಗಿ ಭದ್ರತಾ ವ್ಯವಸ್ಥೆಯ ಕುರಿತು ನಿರ್ಲಕ್ಷ್ಯ ತಾಳುತ್ತಾರೆ. ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು, ಇಂಟೆಲಿಜೆನ್ಸ್‌ಗಳು ಕಾರ್ಪೊರೇಟ್ ಶಕ್ತಿಗಳ ರಕ್ಷಣೆ ಮಾಡುವುದಲ್ಲಿ ಸಕ್ರಿಯವಾಗಿರುತ್ತವೆ. ಕೋಟಿ ಕೋಟಿ ಸುರಿದು, ಮಹಾನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಪೋಸ್ಟಿಂಗ್ ಮಾಡಿಸಿಕೊಳ್ಳುವವರು ಒಂದೆರಡು ವರ್ಷದಲ್ಲಿ ಕೋಟಿ ಕೋಟಿ ಸಂಪಾದಿಸುವ ಗುರಿ ಹೊಂದಿರುತ್ತಾರೆ. ಬೀದಿಯಲ್ಲಿ ಸಾರ್ವಜನಿಕರನ್ನು ರಕ್ಷಿಸಬೇಕಾದ ಕೆಲಸ ಮಾಡುವವರು ಯಾರಿದ್ದಾರೆ?” ಎಂದು ಪ್ರಶ್ನಿಸಿದರು.

“ವ್ಯವಸ್ಥೆಯ ಅವ್ಯವಸ್ಥೆ, ರಾಜಕಾರಣ, ಉನ್ನತ ವ್ಯಾಸಂಗ ಮಾಡಿದರೂ ಸಿಗದ ಉದ್ಯೋಗ, ಹಿಂಸಾತ್ಮಕ ಸಂಸ್ಕೃತಿಯ ವೈಭವೀಕರಣ, ಹಿಂಸಾತ್ಮಕ ಸಿನಿಮಾಗಳಿಂದ ಪ್ರಚೋದನೆ- ಇವೆಲ್ಲವೂ ಸೇರಿ ಇಂತಹ ಘಟನೆಗಳು ಆಗುತ್ತಿವೆ. ವ್ಯವಸ್ಥೆಯ ಸೋಲಿನಿಂದಾಗಿ ಈ ಪಾತಕಗಳು ಮತ್ತಷ್ಟು ಹೆಚ್ಚಲಿವೆ” ಎಂದು ಎಚ್ಚರಿಸಿದರು.

“ಉತ್ತರ ಭಾರತದ ರಾಜ್ಯಗಳು ಕ್ರೈಮ್ ಹಬ್ ಆಗುತ್ತಿವೆ. ಕಾರಣ ಕ್ರೈಮ್ ಮಾಡುವ ಮಾಫಿಯಾಗಳೇ ರಾಜಕೀಯದಲ್ಲಿ ಇರುತ್ತಾರೆ. ಇವರು ದಕ್ಷಿಣದ ಕಡೆಗೂ ಬಂದು ಪಾತಕ ಎಸಗುತ್ತಿದ್ದಾರೆ. ತಮಿಳುನಾಡು, ಕೇರಳದಲ್ಲಿ ನಾಲ್ಕು ಎಟಿಎಂಗಳನ್ನು ಒಡೆಯಲಾಗಿತ್ತು. ಖದೀಮರು ಹಣ ತೆಗೆದುಕೊಂಡು ಹೋಗುವಾಗ ಕಾರು ಹತ್ತಿದ್ದರು. ನಂತರ ಆ ಕಾರನ್ನು ಕಂಟೈನರ್‌ ಒಳಗೆ ಹಾಕಿಕೊಂಡು ಎಸ್ಕೇಪ್ ಆಗಿದ್ದರು. ಸಿಸಿಟಿವಿಯಲ್ಲಿ ಕಾರು ಮಾತ್ರ ಸೆರೆಯಾಗಿತ್ತು. ವಾಸ್ತವದಲ್ಲಿ ಕಂಟೈನರ್ ಒಳಗೆ ದರೋಡೆಕೋರರು ರಕ್ಷಣೆ ಪಡೆದುಕೊಂಡಿದ್ದರು” ಎನ್ನುತ್ತಾ ಡಕಾಯಿತರ ತಂತ್ರಗಳನ್ನು ವಿವರಿಸಿದರು.

ಸಂಸ್ಥೆಯ ಒಳಗಿನವರ ತನಿಖೆ ಅಗತ್ಯ: ಬಿ.ಕೆ.ಶಿವರಾಂ

ನಿವೃತ್ತ ಐಪಿಎಸ್ ಅಧಿಕಾರಿ ಬಿ.ಕೆ.ಶಿವರಾಂ ಅವರು ‘ಈದಿನ’ಕ್ಕೆ ಪ್ರತಿಕ್ರಿಯಿಸಿ, “ಉಳ್ಳಾಲದಲ್ಲಿ ಆಗಿರುವ ಘಟನೆಯನ್ನು ನೋಡಿದರೆ, ಸಂಸ್ಥೆಯ ಒಳಗಿರುವವರೇ ಈ ದರೋಡೆ ಮಾಡಿರುವ ಸಾಧ್ಯತೆ ಇದೆ. ರಾಬರಿಯನ್ನು ಇಷ್ಟು ಸುಲಭವಾಗಿ ಎಸಗಲಾಗದು. ಯಾವ ಸಮಯದಲ್ಲಿ ಯಾರು ಇರುತ್ತಾರೆ, ಯಾರು ಇರುವುದಿಲ್ಲ ಎಂಬ ಮಾಹಿತಿ ಚೆನ್ನಾಗಿ ಗೊತ್ತಿರುವವರು ಮಾತ್ರ ಇಂತಹ ಕೃತ್ಯ ಎಸಗಬಲ್ಲರು. ಈ ರೀತಿಯ ಘಟನೆಗಳು ಆ ಭಾಗದಲ್ಲಿ ಹಿಂದೆಯೂ ಆಗಿವೆ. ಬ್ಯಾಂಕ್ ಅಧಿಕಾರಿಗಳನ್ನು ಕೂಲಂಕಷವಾಗಿ ತನಿಖೆ ಮಾಡಿದರೆ ಸತ್ಯ ಹೊರಬೀಳಬಹುದು” ಎಂದು ಅಭಿಪ್ರಾಯಪಟ್ಟರು.

bks
ನಿವೃತ್ತ ಐಪಿಎಸ್ ಅಧಿಕಾರಿ ಬಿ.ಕೆ.ಶಿವರಾಂ

ಮುಂದುವರಿದು, “ದರೋಡೆ ಮಾಡುವ ಕಳ್ಳರು ಕನ್ನಡದಲ್ಲಿಯೂ ಮಾತನಾಡಿರುವುದಾಗಿ ವರದಿಯಾಗಿದೆ. ಅಚಾನಕ್ಕಾಗಿ ಯಾರಾದರೂ ಅಡ್ಡಬಂದರೆ ಭಯದಲ್ಲಿ ಅವರು ಮೂಲ ಭಾಷೆಯಲ್ಲೇ ಮಾತನಾಡುತ್ತಾರೆ. ಒಳಗಡೆ ಬಂದು ನಾಟಕ ಆಡುವಾಗ ಹಿಂದಿಯಲ್ಲಿಯೂ ಹೊರಗಡೆ ಹೋಗುವ ಅವಸರದಲ್ಲಿ ಕನ್ನಡದಲ್ಲಿಯೂ ಖದೀಮರು ಮಾತನಾಡಿರುವ ಕುರಿತು ಸುದ್ದಿಯಾಗಿದೆ. ಕೇರಳಕ್ಕೆ ತಪ್ಪಿಸಿಕೊಂಡು ಹೋಗಿರುವುದಾಗಿ ಹೇಳಲಾಗುತ್ತಿದೆ. ಟೋಲ್‌ಗಳಲ್ಲಿ ಎಲ್ಲ ಸಿಸಿಟಿವಿಯನ್ನು ಚೆಕ್ ಮಾಡಬೇಕಾಗಿದೆ” ಎಂದು ವಿವರಿಸಿದರು.

ಇದನ್ನೂ ಓದಿರಿ: ಸದನದೊಳಗಿನ ಸಿಟಿ ರವಿಯ ಕ್ರಿಮಿನಲ್ ಕೃತ್ಯಕ್ಕೆ ‘ಇಮ್ಯೂನಿಟಿ’ ಇಲ್ಲ; ಸಭಾಪತಿಗಳು ಓದಬೇಕಿರುವ ಸುಪ್ರೀಂ ತೀರ್ಪು!

“ಬ್ಯಾಂಕ್ ಲಾಕರ್ ಓಪನ್ ಇತ್ತು, ಯಾರೂ ಕೂಡ ಪ್ರತಿಭಟಿಸಿಲ್ಲ ಎನ್ನಲಾಗುತ್ತಿದೆ. 10ರಿಂದ 12 ಕೋಟಿ ಬೆಲೆ ಬಾಳುವ ಚಿನ್ನಾಭರಣ ಇದ್ದಾಗಲೂ ಭದ್ರತಾ ವ್ಯವಸ್ಥೆ ಇಲ್ಲ ಎಂದರೆ ಸಂಪೂರ್ಣ ನಿರ್ಲಕ್ಷ್ಯವೆಂಬುದು ಸ್ಪಷ್ಟವಾಗುತ್ತಿದೆ. ಈ ಬ್ಯಾಂಕ್‌ನವರು ಏಕೆ ಕ್ರಮ ತೆಗೆದುಕೊಂಡಿರಲಿಲ್ಲ ಎಂಬುದು ಗಂಭೀರ ಸಂಗತಿ” ಎಂದರು.

ಬೀದರ್ ಮತ್ತು ವಿಜಯಪುರ ಘಟನೆಯ ಬಗ್ಗೆ ಉಲ್ಲೇಖಿಸುತ್ತಾ ಮಾತನಾಡಿದ ಅವರು, “ಸಾರ್ವಜನಿಕರು ಸಂಪೂರ್ಣ ನಿರ್ಲಕ್ಷ್ಯತನ ತೋರುತ್ತಿರುವುದು ಕಂಡು ಬರುತ್ತಿದೆ. ವಲಸೆಗರು ಹೆಚ್ಚಾದಂತೆ ಇನ್ನೊಬ್ಬರ ಉಸಾಬರಿ ಏತಕ್ಕೆ ಎಂದು ಸುಮ್ಮನಿರುತ್ತಾರೆ. ಪೊಲೀಸರಿಗೆ ಸಹಕಾರ ಮಾಡಿ, ಕಳ್ಳರನ್ನು ಹಿಡಿಯಲು ಸ್ಪಂದಿಸುವವರು ಸ್ಥಳೀಯರೇ ಹೊರತು ಹೊರಗಡೆಯಿಂದ ಬಂದವರಲ್ಲ” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

“ಟೆಕ್ನಾಲಜಿ ಬಹಳ ಮುಂದುವರಿದಿದೆ. ಹೀಗಾಗಿ ಸಿಸಿಟಿವಿಗಳನ್ನು ಹೆಚ್ಚಿಸಬೇಕು.  ಎಸ್ಕೇಪ್ ಮಾರ್ಗಗಳನ್ನು ಪೊಲೀಸರು ಮೊದಲೇ ಗುರುತಿಸಿಕೊಂಡಿರಬೇಕು. ತಂತ್ರಜ್ಞಾನ ಅಷ್ಟಾಗಿ ಬೆಳೆದಿರದ ಬೆಂಗಳೂರು ದಿನಗಳನ್ನು ನೆನೆಯುವುದಾದರೆ, ಚೈನ್ ಸ್ನ್ಯಾಚಿಂಗ್‌ ಆದಂತಹ ಸಂದರ್ಭದಲ್ಲಿ ಒಂದು ಅಲರಂ ಕೊಟ್ಟರೆ ಸಾಕು ನೂರಾರು ಪೊಲೀಸರು ಬೀದಿಗೆ ಇಳಿಯುತ್ತಿದ್ದರು. ಬೀದರ್ ಘಟನೆಯಲ್ಲಿ ಪೊಲೀಸರು ತಕ್ಷಣ ಅಲರ್ಟ್ ಆದಂತೆ ಕಾಣುತ್ತಿಲ್ಲ” ಎನ್ನುತ್ತಾರೆ ಬಿ.ಕೆ.ಶಿವರಾಂ.

ಒಟ್ಟಾರೆ ಪೊಲೀಸ್ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಯೋಚಿಸಬೇಕಿದೆ. ಅನುಮಾನಾಸ್ಪದ ವ್ಯಕ್ತಿಗಳ ಕುರಿತು ಗೃಹ ಇಲಾಖೆ ನಿಗಾ ವಹಿಸಬೇಕಿದೆ. ವಿವಿಐಪಿ, ವಿಐಪಿಗಳಷ್ಟೇ ಸಾಮಾನ್ಯ ಜನರ ರಕ್ಷಣೆಯು ಮುಖ್ಯವಾಗಲಿ ಎಂಬುದು ಅಪರಾಧ ತಜ್ಞರ ಗಂಭೀರ ಸಲಹೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X