ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

Date:

Advertisements
ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವಿನ ವಿವಾದವಲ್ಲ. ಬದಲಾಗಿ, ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ರಕ್ಷಿಸಿಕೊಳ್ಳುವ ದೇಶದ ಹೋರಾಟವಾಗಿದೆ...

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗಳ ಮೇಲೆ ಗಂಭೀರ ಪ್ರಶ್ನೆಗಳು ಎದುರಾದಾಗ, ಒಂದು ರಾಷ್ಟ್ರವು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತದೆ. ಭಾರತದ ರಾಜಕೀಯ ವಲಯದಲ್ಲಿ ಇಂತಹದ್ದೇ ಒಂದು ಬಿರುಗಾಳಿ ಎದ್ದಿದ್ದು, ದೇಶದ ಅತ್ಯುನ್ನತ ಚುನಾವಣಾ ಸಂಸ್ಥೆಯಾದ ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟ ದೊಡ್ಡ ಮಟ್ಟದಲ್ಲಿ ಆಂದೋಲನ ಕೈಗೊಂಡಿದೆ.

ಈ ವಿವಾದವು ಕೇವಲ ರಾಜಕೀಯ ಆರೋಪಗಳಿಗಿಂತ ಮೀರಿದ್ದು, ಪ್ರಜಾಪ್ರಭುತ್ವದ ಆಧಾರಸ್ತಂಭಗಳ ವಿಶ್ವಾಸಾರ್ಹತೆಯ ಕುರಿತ ಆತಂಕಗಳನ್ನು ಪ್ರತಿಬಿಂಬಿಸುವಂಥದ್ದು. ಕಾಂಗ್ರೆಸ್ ನಾಯಯ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು ಮತದಾರರ ಪಟ್ಟಿಯ ಅಕ್ರಮಗಳ ಕುರಿತು ಎತ್ತಿದ ಆರೋಪಗಳು ಮತ್ತು ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗದ ಪ್ರತಿಕ್ರಿಯೆ, ಈ ಬಿಕ್ಕಟ್ಟಿನ ಸ್ವರೂಪವನ್ನು ಸ್ಪಷ್ಟವಾಗಿ ಅನಾವರಣಗೊಳಿಸಿದೆ. ಈ ವಿಷಯ ಕೇವಲ ಒಂದು ರಾಜಕೀಯ ಪಕ್ಷದ ಆತಂಕವಲ್ಲದೆ, ದೇಶದ ಸಂವಿಧಾನ ಮತ್ತು ಅದರ ಮೂಲಭೂತ ತತ್ವಗಳ ರಕ್ಷಣೆಗೆ ಸಂಬಂಧಿಸಿದ್ದು ಎನ್ನುವುದನ್ನು ಜನರ ಅರ್ಥಮಾಡಿಕೊಳ್ಳಬೇಕಿದೆ.

ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ನಾಯಕರು, ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಹಾಗೂ ದೇಶದ ಇತರೆ ರಾಜ್ಯಗಳಲ್ಲಿ ಕೈಗೊಳ್ಳಲು ಮುಂದಾಗಿರುವ ಎಸ್‌ಐಆರ್‌ ಪ್ರಕ್ರಿಯೆಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಈ ಪ್ರಕ್ರಿಯೆಯನ್ನು ಆಯೋಗವು ತಮಗೆ ಮನಬಂದಂತೆ ನಡೆಸುತ್ತಿದೆ. ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಇದಕ್ಕೆ ಯಾವುದೇ ಸ್ಪಷ್ಟನೆ ನೀಡದ ಆಯೋಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತಂತ್ರಗೊಳಿಸುವ ಪ್ರಯತ್ನ ಮಾಡುತ್ತಿದೆ. ವಿಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೋರಾಟದ ಭಾಗವಾಗಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗದ ಪ್ರಸ್ತಾಪವನ್ನು ಪರಿಶೀಲಿಸುತ್ತಿವೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಪ್ರಸ್ತುತ ಇರುವ ಸಂಖ್ಯಾಬಲವನ್ನು ಗಮನಿಸಿದರೆ ಇದು ಕಷ್ಟಸಾಧ್ಯವೇನಲ್ಲ. ಈ ಪ್ರಸ್ತಾಪವನ್ನು ತರುವುದು ಕೇವಲ ಕಾನೂನುಬದ್ಧ ಹೋರಾಟಕ್ಕಿಂತ ಹೆಚ್ಚಾಗಿ, ಇದು ನೈತಿಕ ಮತ್ತು ಸಾಂವಿಧಾನಿಕ ಹೋರಾಟವಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿನ ವಿಶ್ವಾಸದ ಕುಸಿತವು ಎಂತಹ ಗಂಭೀರ ಸ್ಥಿತಿಗೆ ತಲುಪಿದೆ ಎಂಬುದನ್ನು ಇದು ಬಿಂಬಿಸುತ್ತದೆ.

Advertisements

ಚುನಾವಣಾ ಪ್ರಕ್ರಿಯೆಗಳಲ್ಲಿನ ಅಕ್ರಮಗಳ ಕುರಿತಾದ ಆರೋಪಗಳು ಇಂದು ನಿನ್ನೆಯದಲ್ಲ. ಅಶೋಕ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಸಬ್ಯಸಾಚಿ ದಾಸ್ ಅವರು 2019ರ ಚುನಾವಣೆಯ ಬಗ್ಗೆ ಮಾಡಿದ್ದ ವಿಶ್ಲೇಷಣೆಯು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ. ಅವರು, ನಿರ್ದಿಷ್ಟವಾಗಿ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಯು ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳಲ್ಲಿ ಅಸಮರ್ಪಕ ಫಲಿತಾಂಶಗಳನ್ನು ಗಳಿಸಿದೆ ಎಂದು ವಾದಿಸಿದ್ದರು. ಈ ವಿಶ್ಲೇಷಣೆಯು ಮತದಾರರ ಹೆಸರನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಅಳಿಸುವುದು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ತಾರತಮ್ಯ ಮಾಡುವಂತಹ ವಿಷಯಗಳತ್ತ ಗಮನ ಸೆಳೆದಿತ್ತು. ಈ ರೀತಿಯ ವರದಿಗಳು, ಚುನಾವಣಾ ಆಯೋಗದ ಮೇಲಿನ ವಿಶ್ವಾಸದ ಮೇಲೆ ಇನ್ನಷ್ಟು ಕರಿ ನೆರಳನ್ನು ಬೀರುವಂತೆ ಮಾಡಿದೆ.

ಈ ಸಂಘರ್ಷ ಕೇಂದ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಳಗೊಂಡಂತೆ ಇಂಡಿಯಾ ಒಕ್ಕೂಟದ ನಾಯಕರು ನಡೆಸುತ್ತಿರುವ ಹೋರಾಟವು ಒಂದು ವಿಶಿಷ್ಟ ಸ್ವರೂಪ ಪಡೆದುಕೊಂಡಿದೆ. ವಿಪಕ್ಷ ನಾಯಕರು ಕೇವಲ ಅಧಿಕಾರವನ್ನು ಗುರಿಯಾಗಿಟ್ಟುಕೊಂಡು ಈ ಹೋರಾಟ ಮಾಡುತ್ತಿಲ್ಲ. ಬದಲಿಗೆ, ಇದು ‘ಒಂದು ವ್ಯಕ್ತಿ, ಒಂದು ಮತ’ ಎಂಬ ಸಂವಿಧಾನದ ಮೂಲ ತತ್ವವನ್ನು ರಕ್ಷಿಸುವ ಹೋರಾಟವನ್ನಾಗಿ ರೂಪಿಸಿಕೊಂಡಿದ್ದಾರೆ. ಈ ಪ್ರತಿಭಟನೆಯು ಪ್ರತಿಪಕ್ಷಗಳ ಒಕ್ಕೂಟದ ಸದಸ್ಯರ ನಡುವೆ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಮತ ಕಳ್ಳತನದ ಅಭಿಯಾನದಿಂದಾಗಿ ಕೇಂದ್ರ ಸರ್ಕಾರವು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಭೀತಿಯಿಂದ ವಿಪಕ್ಷಗಳ ನಾಯಕರ ವಿರುದ್ಧ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಇಂಡಿಯಾ ಒಕ್ಕೂಟದ ದೃಢ ನಿಲುವು ಮತ್ತು ಸಾರ್ವಜನಿಕರ ನಡುವೆ ಹೆಚ್ಚುತ್ತಿರುವ ಅವರ ಉಪಸ್ಥಿತಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಟ್ಟಿಹಾಕಲು ದೊಡ್ಡ ಅಸ್ತ್ರವಾಗುವುದಂತೂ ಸತ್ಯ.

ಹಾಗೆಯೇ ಇಂಡಿಯಾ ಒಕ್ಕೂಟವು ಮುಂದಿನ ದಿನಗಳಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ಪ್ರಮುಖ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕಾರ್ಯತಂತ್ರವನ್ನು ರೂಪಿಸಬೇಕಿದೆ. ಕೇವಲ ದಾಖಲೆಗಳನ್ನು ಇಟ್ಟುಕೊಂಡು ಆರೋಪಗಳನ್ನು ಮಾಡುವುದರಿಂದ ದೊಡ್ಡ ಮಟ್ಟದ ಫಲಿತಾಂಶ ಸಿಗಲಾರದು. ಈ ವಿಷಯವನ್ನು ಜನರೊಂದಿಗೆ ಸಂಪರ್ಕಿಸುವ ಒಂದು ಬಲವಾದ ಸಂಘಟನೆಯಾಗಿ ರೂಪಿಸಬೇಕಿದೆ. ಮತದಾರರ ಅಕ್ರಮಗಳು ಅವರ ದೈನಂದಿನ ಜೀವನದ ಸಮಸ್ಯೆಗಳೊಂದಿಗೆ ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳ ಜೊತೆಗೆ ಈ ಚುನಾವಣಾ ಅಕ್ರಮಗಳನ್ನು ಜೋಡಿಸಬೇಕು. ಪ್ರಜಾಪ್ರಭುತ್ವದ ಅಡಿಪಾಯವೇ ಕಳಂಕಿತವಾದರೆ, ಜನಸಾಮಾನ್ಯರ ಹಕ್ಕುಗಳು ಸಂಪೂರ್ಣವಾಗಿ ಹತ್ತಿಕ್ಕಲ್ಪಡುತ್ತವೆ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಈ ಹೋರಾಟವು ಕೇವಲ ರಾಜಕೀಯ ವಿವಾದಕ್ಕಿಂತ ಹೆಚ್ಚಾಗಿ, ಒಂದು ವ್ಯವಸ್ಥೆಯ ವಿರುದ್ಧದ ಬಂಡಾಯದ ಕಥೆಯಾಗಬೇಕು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಸಮಸ್ಯೆಯಾಗಿದ್ದು ಯಾಕೆ ಮತ್ತು ಯಾರಿಗೆಲ್ಲ ಅನುಕೂಲ? 

ಹತ್ತು ವರ್ಷಗಳಿಂದ ಪ್ರಧಾನಿಯಾಗಿ ಆಡಳಿತ ನಡೆಸಿದರೂ, ಇನ್ನೂ ‘ನನಗೆ ವಿಪಕ್ಷಗಳು ಬೆದರಿಕೆ ತಂತ್ರವೊಡ್ಡುತ್ತಿವೆ’ ಎಂಬ ಮಾತನ್ನೇ ಮುಂದುವರಿಸುತ್ತಿರುವ ಪ್ರಧಾನಿ ಮೋದಿಯವರ ರಾಜಕೀಯ ತಂತ್ರದ ವಿರುದ್ಧ ಇಂಡಿಯಾ ಒಕ್ಕೂಟದ ನಾಯಕರು ಹೋರಾಡಬೇಕಾಗಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಹತ್ತು ವರ್ಷಗಳ ನಂತರ, ಅವರು ತಮ್ಮನ್ನು ತಾವು ಬಲಿಪಶುವಾಗಿ ತೋರಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಸರ್ಕಾರದ ಅವಧಿಯಲ್ಲಿ ನಡೆದ ಪ್ರತಿಯೊಂದು ಅವ್ಯವಸ್ಥೆಗೂ ಪ್ರಧಾನಿ ಮೋದಿ ನೇರ ಹೊಣೆಗಾರರಾಗಿದ್ದಾರೆ. ಇದೇ ಸಮಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಈ ವಿವಾದದ ಬಗ್ಗೆ ಮೌನ ತಾಳಿದೆ. ಈ ಮೌನವು, ಆಡಳಿತಾರೂಢ ಬಿಜೆಪಿಯ ವಿಶ್ವಾಸಾರ್ಹತೆಗೆ ಧಕ್ಕೆಯಾಗದಂತೆ ಸಾರ್ವಜನಿಕವಾಗಿ ದೂರ ಉಳಿಯುವ ತಂತ್ರದ ಭಾಗವಾಗಿರಬಹುದು. ಆದರೆ, ಪರಿಸ್ಥಿತಿ ಹದಗೆಟ್ಟರೆ, ಬಿಜೆಪಿಯ ನಂಬಿಕೆಗೆ ಗಂಭೀರ ಹಾನಿಯಾಗುವ ಸಾಧ್ಯತೆಗಳೂ ಇವೆ.

ಪ್ರತಿಪಕ್ಷಗಳ ಮುಂದಿರುವ ಮತ್ತೊಂದು ಆಯ್ಕೆ, ಆಡಳಿತ ಪಕ್ಷದ ಪ್ರಮುಖ ಮಿತ್ರಪಕ್ಷಗಳಾದ ಒಂದಿಷ್ಟು ಜಾತ್ಯತೀತ ತತ್ವಗಳನ್ನು ಹೊಂದಿರುವ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದೊಂದಿಗೆ ಮಾತುಕತೆ ನಡೆಸಿ, ಅವರು ಕೇಂದ್ರ ಸರ್ಕಾರದ ಮೈತ್ರಿಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರುವುದು. ಮತದಾರರ ಪಟ್ಟಿಯ ಅಕ್ರಮಗಳ ಆರೋಪಗಳು ಈ ಪಕ್ಷಗಳ ಮೇಲೆಯೂ ಪರಿಣಾಮ ಬೀರಬಹುದು. ಮತ್ತೊಂದು ಆಯ್ಕೆ, ಸ್ವತಃ ಬಿಜೆಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಭುಗಿಲೆದ್ದು ಪಕ್ಷದಲ್ಲಿ ಒಂದು ಒಡಕು ಮೂಡುವ ನಿರೀಕ್ಷೆ. ಪ್ರಸ್ತುತ ಆಡಳಿತದಲ್ಲಿ ಅವಕಾಶ ವಂಚಿತರಾಗಿರುವ ದೊಡ್ಡ ಸಂಖ್ಯೆಯ ಅಸಂತೃಪ್ತ ನಾಯಕರು ಬಿಜೆಪಿಯಲ್ಲಿದ್ದಾರೆ. ಈ ಬಿಕ್ಕಟ್ಟು ಅವರಿಗೆ ತಮ್ಮ ಧ್ವನಿ ಎತ್ತಲು ಒಂದು ಅವಕಾಶ ನೀಡಬಹುದು.

ಈ ವಿವಾದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮೌನವು ಕೂಡ ಪ್ರಮುಖವಾದ ವಿಷಯವಾಗಿದೆ. ಬಿಜೆಪಿಯ ಮೂಲ ಸಂಸ್ಥೆಯಾಗಿ, ಆರ್‌ಎಸ್‌ಎಸ್ ಸಾಮಾನ್ಯವಾಗಿ ರಾಜಕೀಯ ವಿವಾದಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ, ಆದರೆ ಮತದಾನ ಕಳ್ಳತನ ಬಗ್ಗೆ ಅದು ನಿಶ್ಶಬ್ದವಾಗಿದೆ. ಇದು ಬಿಜೆಪಿಯೊಳಗಿನ ಅಸಮಾಧಾನದ ಸಂಕೇತವೋ ಅಥವಾ ಕಾಯುವ ತಂತ್ರವೋ ಎಂಬುದು ಸ್ಪಷ್ಟವಲ್ಲ. ಭ್ರಷ್ಟಾಚಾರ ಸಹಿಸುವುದಿಲ್ಲ, ನಮ್ಮದು ಸ್ವಚ್ಛ, ಶಿಸ್ತಿನ ಸಂಘಟನೆ ಎಂದು ಹೇಳುವ ಆರ್‌ಎಸ್‌ಎಸ್‌ ನಾಯಕರು ಸರ್ಕಾರದ ಮತಗಳ್ಳತನವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೋ ಅಥವಾ ಬೆಂಬಲ ನೀಡುತ್ತಿದ್ದಾರೊ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ವಿಷಯಕ್ಕೂ ಮೂಗು ತೂರಿಸುವ ಆರ್‌ಎಸ್‌ಎಸ್‌ ಮತ ವಂಚನೆಯ ಬಗ್ಗೆ ದೇಶದ ಜನತೆಗೆ ಉತ್ತರ ನೀಡಬೇಕಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ನಾಯಕರ ಹೋರಾಟ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಆದರೆ ಒಂದು ವಿಷಯ ಖಚಿತವಾಗಿದ್ದು, ವಿರೋಧ ಪಕ್ಷಗಳು ಚುನಾವಣಾ ಆಯೋಗದ ನೈತಿಕ ಕುಸಿತವನ್ನು ರಾಷ್ಟ್ರದ ಪ್ರಶ್ನೆಯನ್ನಾಗಿ ಎತ್ತಿರುವ ಮೂಲಕ ಜನರ ಗಮನ ಸೆಳೆಯಲು ಯಶಸ್ವಿಯಾಗಿವೆ. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಇಂಡಿಯಾ ಒಕ್ಕೂಟವು ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲು ಯೋಜಿಸಿದೆ. ಈ ಪ್ರತಿಭಟನೆಗಳಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡರೆ, ಇದು ಕೇವಲ ರಾಜಕೀಯ ಹೋರಾಟವಲ್ಲ, ಬದಲಾಗಿ ದೇಶವನ್ನು ಉಳಿಸಲು ವಿಪಕ್ಷಗಳು ನಡೆಸುತ್ತಿರುವ ಅಭಿಯಾನ ಎಂಬ ನಂಬಿಕೆ ಮೂಡಲಿದೆ. ಈ ಹೋರಾಟವು ಸಫಲವಾಗುತ್ತದೆಯೇ ಎಂಬುದು, ಈ ಪ್ರತಿಭಟನೆಗಳಲ್ಲಿ ಜನರ ಭಾಗವಹಿಸುವಿಕೆ ಮತ್ತು ಈ ಸಂಘಟನೆಗೆ ಸಿಗುವ ಬೆಂಬಲದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಒಟ್ಟಾರೆ, ಈ ಬಿಕ್ಕಟ್ಟು ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವಿನ ವಿವಾದವಲ್ಲ. ಬದಲಾಗಿ, ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ರಕ್ಷಿಸಿಕೊಳ್ಳುವ ದೇಶದ ಹೋರಾಟವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

‘ಬಲಗೈಗೆ ಶೇ.7ರಷ್ಟು ಮೀಸಲಾತಿ ಕೊಡಿ’: ಸಮಾವೇಶದಲ್ಲಿ ಕೇಳಿಬಂದ ಆಗ್ರಹ

“ನಾವು ಯಾರ ವಿರುದ್ಧವೂ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ಹೊಲೆಯ ಸಮುದಾಯ ತಕರಾರು...

Download Eedina App Android / iOS

X