ಟ್ರಂಪ್ ಮತ್ತು ಮೋದಿ ನಡುವಿನ ಇತ್ತೀಚಿನ ಫೋನ್ ಮಾತುಕತೆ ಮೇಲ್ನೋಟಕ್ಕೆ ಸ್ನೇಹಭಾವದ ಮತ್ತು ಆಶಾದಾಯಕವಾಗಿ ಕಾಣುತ್ತದೆಯಾದರೂ, ಅದರ ಹಿಂದಿನ ರಾಜಕಾರಣ, ವ್ಯಾಪಾರ ಮತ್ತು ಪುನರಾವರ್ತಿತ ಮೂರ್ಖತನವನ್ನು ಪರಿಶೀಲಿಸಿದಾಗ ಇದೊಂದು ದೊಡ್ಡ ಮೋಸದ ಭಾಗವೆಂದು ತೋರುತ್ತದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಇತ್ತೀಚಿನ ಫೋನ್ ಮಾತುಕತೆಯು ಮೇಲ್ನೋಟಕ್ಕೆ ಸ್ನೇಹಭಾವದ ಮತ್ತು ಆಶಾದಾಯಕವಾಗಿ ಕಾಣುತ್ತದೆಯಾದರೂ, ಅದರ ಹಿಂದಿನ ರಾಜಕಾರಣ, ಇದೊಂದು ದೊಡ್ಡ ಮೋಸದ ಭಾಗವೆಂದು ತೋರುತ್ತದೆ.
ಮೋದಿಯ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆದ ಈ ಕರೆಯಲ್ಲಿ ಟ್ರಂಪ್ ಮೋದಿಯನ್ನು “ಸ್ನೇಹಿತ” ಎಂದು ಕರೆದು, ಭಾರತವು ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗಾಣಿಸುವಲ್ಲಿ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಆದರೆ ಇದು ಕೇವಲ ಒಂದು ನಾಟಕೀಯ ನಡೆಯಷ್ಟೇ. ಕಳೆದ ತಿಂಗಳು ಅಮೆರಿಕಾ ಭಾರತದ ಮೇಲೆ ಶೇ. 50 ರಷ್ಟು ಸುಂಕಗಳನ್ನು ಹೇರಿದ ನಂತರ, ಭಾರತವು ರಷ್ಯಾ ಮತ್ತು ಚೀನಾ ದೇಶಗಳೊಂದಿಗೆ ಹತ್ತಿರವಾಗುತ್ತಿರುವುದನ್ನು ಗಮನಿಸಿ ಟ್ರಂಪ್ ಈಗ ತನ್ನ ತಂತ್ರವನ್ನು ಬದಲಾಯಿಸಿ ವ್ಯಾಪಾರ ಮಾತುಕತೆಗೆ ಆಹ್ವಾನಿಸುತ್ತಿದ್ದಾರೆ. ಇದು ಭಾರತದ ಸ್ವಾಭಿಮಾನಕ್ಕೆ ಮತ್ತೊಂದು ಹೊಡೆತವೇ ಸರಿ. ಏಕೆಂದರೆ ಅಮೆರಿಕಾ ಯಾವಾಗಲೂ ತನ್ನ ಸ್ವಾರ್ಥಕ್ಕಾಗಿ ಭಾರತವನ್ನು ಬಳಸಿಕೊಳ್ಳುತ್ತಾ ಬಂದಿದೆ, ಮತ್ತು ಭಾರತದ ನಾಯಕರು ಪದೇ ಪದೇ ಈ ಜಾಲಕ್ಕೆ ಸಿಲುಕಿ ಮೂರ್ಖರಂತೆ ನಡೆದುಕೊಳ್ಳುತ್ತಿದ್ದಾರೆ.
ಈ ಫೋನ್ ಕರೆಯ ಹಿನ್ನೆಲೆಯಲ್ಲಿ ಭಾರತ-ಅಮೆರಿಕಾ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹದಗೆಟ್ಟಿವೆ. ಜೂನ್ 17ರಂದು ಕೊನೆಯ ಬಾರಿ ಮಾತನಾಡಿದ ನಂತರ, ಅಮೆರಿಕಾ ಭಾರತದ ಮೇಲೆ ಸುಂಕಗಳನ್ನು ದ್ವಿಗುಣಗೊಳಿಸಿದ್ದು, ಅದರಲ್ಲಿ ಅರ್ಧದಷ್ಟು ರಷ್ಯಾ ತೈಲ ಮತ್ತು ಶಸ್ತ್ರಾಸ್ತ್ರ ಖರೀದಿಗೆ ದಂಡವಾಗಿತ್ತು. ಟ್ರಂಪ್, ರಷ್ಯಾ ಯುದ್ಧ ಯಂತ್ರಕ್ಕೆ ಭಾರತ ನೆರವು ನೀಡುತ್ತಿದೆ ಎಂದು ಆರೋಪಿಸಿ, ಭಾರತದ ಆರ್ಥಿಕತೆಯನ್ನು “ಡೆಡ್ ಎಕಾನಮಿ” ಎಂದು ವರ್ಣಿಸಿದ್ದರು. ಇದರಿಂದಾಗಿ ಭಾರತದ ರಫ್ತುಗಳು ತೀವ್ರವಾಗಿ ಕುಸಿದಿವೆ. ಅಮೆರಿಕದ ರಫ್ತು ವಹಿವಾಟು ಆಗಸ್ಟ್‌ನಲ್ಲಿ 6.86 ಬಿಲಿಯನ್ ಡಾಲರ್‌ಗೆ(ಸುಮಾರು 57 ಸಾವಿರ ಕೋಟಿ ರೂ.) ಇಳಿದಿದೆ. ಜುಲೈಗೆ ಹೋಲಿಸಿದರೆ 8.01 ಬಿಲಿಯನ್ ಡಾಲರ್‌ಗಿಂತ(67 ಸಾವಿರ ಕೋಟಿ ರೂ.) ಕಡಿಮೆ ವಹಿವಾಟಾಗಿದೆ. ಆದರೆ ಭಾರತ ರಷ್ಯಾ ತೈಲ ಖರೀದಿಯನ್ನು ಮುಂದುವರಿಸಿ, ಚೀನಾ ಜೊತೆಗಿನ ವ್ಯಾಪಾರ ಒಪ್ಪಂದಗಳನ್ನು ಮುಂದುವರಿಸುತ್ತಿರುವುದು ಅಮೆರಿಕಾಗೆ ಆಘಾತ ನೀಡಿದೆ. ಇದನ್ನು ಗಮನಿಸಿ ಟ್ರಂಪ್ ಈಗ ಮತ್ತೆ “ಗೆಳೆಯ” ಎನ್ನುತ್ತ ವ್ಯಾಪಾರ ಮಾತುಕತೆಗೆ ಕರೆಯುತ್ತಿದ್ದಾರೆ. ಆದರೆ ಇದು ಕೇವಲ ಭಾರತವನ್ನು ರಷ್ಯಾ-ಚೀನಾದಿಂದ ದೂರವಿಡಲು ಮಾಡುತ್ತಿರುವ ತಂತ್ರವಷ್ಟೇ.
ಭಾರತದ ಈ ಮೂರ್ಖತನವು ಹೊಸದಲ್ಲ. ಟ್ರಂಪ್ ಆಡಳಿತದಲ್ಲಿ ಅಮೆರಿಕಾ ಅಧಿಕಾರಿಗಳು ಭಾರತವನ್ನು ಪದೇ ಪದೇ ಹೀಯಾಳಿಸಿದ್ದಾರೆ. ಶ್ವೇತ ಭವನದ ವ್ಯವಹಾರ ಸಲಹೆಗಾರ ಪೀಟರ್ ನವಾರೋ ಭಾರತವನ್ನು ರಷ್ಯಾ ಮತ್ತು ಚೀನಾ ಜೊತೆಗೆ ಸಂಬಂಧ ಮುಂದುವರಿಸಿದರೆ “ಭಾರತಕ್ಕೆ ಚೆನ್ನಾಗಿರುವುದಿಲ್ಲ” ಎಂದು ಎಚ್ಚರಿಸಿದ್ದರು. ಅವರು ಭಾರತದ ಸುಂಕಗಳು ಅಮೆರಿಕಾ ಉದ್ಯೋಗಗಳನ್ನು ನಾಶಪಡಿಸುತ್ತಿವೆ ಎಂದು ಆರೋಪಿಸಿ, ರಷ್ಯಾ ತೈಲ ಖರೀದಿಯನ್ನು “ಯುದ್ಧ ಲಾಭಾಂಶ” ಎಂದು ಹೇಳಿದ್ದರು. ಇದಲ್ಲದೆ, ಟ್ರಂಪ್ ಸ್ವತಃ ಭಾರತವನ್ನು “ಯುರೋಪಿಯನ್ ಒಕ್ಕೂಟದ ಜೊತೆಗೆ ಶೇ. 100 ರಷ್ಟು ಸುಂಕ ಹೇರಬೇಕು” ಎಂದು ಹೇಳಿ, ಭಾರತವನ್ನು ಚೀನಾ ಜೊತೆಗೆ ಸಮೀಕರಿಸಿದ್ದರು. ಇಂತಹ ಅಪಮಾನಗಳ ಹಿನ್ನೆಲೆಯಲ್ಲಿ ಮೋದಿ-ಟ್ರಂಪ್ ಫೋನ್ ಕರೆಯು ಒಂದು ವ್ಯಂಗ್ಯವೆಂಬಂತಿದೆ.
ವ್ಯಾಪಾರ ಮಾತುಕತೆಗಳು ಇತ್ತೀಚೆಗೆ ನಡೆದಿದ್ದು, ಅಮೆರಿಕಾದ ಏಷ್ಯಾದ ವ್ಯವಹಾರ ಉಸ್ತುವಾರಿಯಾದ ಬ್ರೆಂಡನ್ ಲಿಂಚ್ ನೇತೃತ್ವದ ತಂಡ ನವದೆಹಲಿಯಲ್ಲಿ ಭಾರತದ ಅಧಿಕಾರಿಗಳ ಜೊತೆಗೆ ಚರ್ಚಿಸಿದೆ. ಇದನ್ನು ಎರಡೂ ದೇಶಗಳು “ಸಕಾರಾತ್ಮಕ” ಎಂದು ಹೇಳಿದರೂ, ಇದು ಕೇವಲ ಮೇಲ್ನೋಟದ ಮಾತುಗಳು. ಎರಡೂ ದೇಶಗಳ ಮಾತುಕತೆಗಳು ಆಗಸ್ಟ್‌ನಲ್ಲಿ ಸ್ಥಗಿತಗೊಂಡಿದ್ದವು, ಮತ್ತು ಈಗ ಮತ್ತೆ ಪ್ರಾರಂಭವಾಗುತ್ತಿರುವುದು ಭಾರತದ ರಷ್ಯಾ-ಚೀನಾ ಹತ್ತಿರವಾಗುತ್ತಿರುವ ಕಾರಣ ಬಿಟ್ಟರೆ ಬೇರೆ ಯಾವುದೇ ಉದ್ದೇಶವಿಲ್ಲ. ಆದರೆ ಭಾರತ ಮತ್ತೆ ಟ್ರಂಪ್‌ನ ಮಾತುಗಳಿಗೆ ಮರುಳಾಗಿ, “ನೈಸರ್ಗಿಕ ಪಾಲುದಾರರು” ಎಂದು ಹೇಳುತ್ತಾ ಮಾತುಕತೆಗೆ ಸಿದ್ಧವಾಗುತ್ತಿರುವುದು ಪ್ರಧಾನಿ ಮೋದಿಯವರು ದುರ್ಬಲತೆಯನ್ನು ತೋರಿಸುತ್ತದೆ. ಹಿಂದೆಯೂ ಅಮೆರಿಕಾದ ಅಧಿಕಾರಿಗಳು ಭಾರತವನ್ನು ಹೀಯಾಳಿಸಿದ್ದರು. ಟ್ರಂಪ್ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮಧ್ಯಸ್ಥಿಕೆ ಮಾಡಿದ್ದೇನೆ ಎಂದು ಹತ್ತಾರು ಬಾರಿ ಹೇಳಿ, ನೊಬೆಲ್ ಶಾಂತಿ ಪ್ರಶಸ್ತಿ ಬಯಸಿದ್ದರು. ಆದರೂ ಟ್ರಂಪ್ ಜೊತೆ ಸಲಿಗೆ ಬಯಸಲು ಮೋದಿ ಹಾತೊರೆಯುತ್ತಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಂಧಭಕ್ತರು, ಮುಟ್ಠಾಳರ ಕಿವಿಗೆ ಹೂ ಮುಡಿಸಿದ ಜೋಡಿ!
ಜೂನ್‌ನ ಫೋನ್ ಕರೆಯು “ಕಹಿ”ಯಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಸುಂಕಗಳ ಹೇರಿಕೆಯ ನಂತರವೂ ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್‌ಗೆ ಧನ್ಯವಾದ ಹೇಳುತ್ತಾರೆ. ಇದು ಭಾರತದ ರಾಜತಾಂತ್ರಿಕ ಮೂರ್ಖತನವನ್ನು ಪ್ರತಿಬಿಂಬಿಸುತ್ತದೆ. ಅಮೆರಿಕಾ ಭಾರತವನ್ನು ಯಾವಾಗಲೂ ತನ್ನ ಭೌಗೋಳಿಕ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತದೆ. ಟ್ರಂಪ್‌ನ ನಡೆ ಅಮೆರಿಕ ಮೊದಲು ಹಾಗೂ ಆರ್ಥಿಕ ಲಾಭವಷ್ಟೆ. ಭಾರತದಂತ ರಾಷ್ಟ್ರಗಳು, ಮೋದಿಯಂಥ ನಾಯಕರು ಯಾವಾಗಲು ದೊಡ್ಡಣ್ಣ ಎಂದು ಹೇಳಿಕೊಳ್ಳುವ ರಾಷ್ಟ್ರದ ದಾಳಕ್ಕೆ ಬಲಿಯಾಗುತ್ತಾರೆ.
ಭಾರತದ ರಫ್ತು ಕುಸಿತ ಮತ್ತು ಆರ್ಥಿಕ ಹೊಡೆತಗಳ ಹೊರತಾಗಿಯೂ, ಮೋದಿ ಸರ್ಕಾರ ಟ್ರಂಪ್‌ನೊಂದಿಗೆ “ಸಂಪೂರ್ಣ ಜಾಗತಿಕ ಪಾಲುದಾರಿಕೆ”ಯನ್ನು ಹೆಚ್ಚಿಸುವುದಾಗಿ ಹೇಳುತ್ತಿದೆ. ಆದರೆ ಇದು ಕೇವಲ ಭ್ರಮೆಯಷ್ಟೇ. ಈ ಫೋನ್ ಮಾತುಕತೆಯ ನಂತರ ಭಾರತ ಮತ್ತು ಅಮೆರಿಕಾ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲಿ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಭಾರತಕ್ಕೆ ನಷ್ಟವನ್ನುಂಟುಮಾಡುವ ಸಾಧ್ಯತೆ ಹೆಚ್ಚು. ಭಾರತ ತನ್ನ ಆತ್ಮಗೌರವವನ್ನು ತ್ಯಜಿಸಿ ಅಮೆರಿಕದ ”ಸುಂಕ ರಾಜಕೀಯ”ದಲ್ಲಿ ಕೇವಲ ಆಟದ ಪಾತ್ರವಾಗುತ್ತಿದೆ. ಟ್ರಂಪ್‌ನ ಪ್ರತಿಯೊಂದು ಮಾತು ಭಾರತವನ್ನು ಹೀನಗೊಳಿಸಿದರೂ, ಮೋದಿ ಅದನ್ನು ರಾಜಕೀಯ ಸ್ನೇಹದ ಹೆಸರಿನಲ್ಲಿ ಮುಚ್ಚಲು ಯತ್ನಿಸುತ್ತಿದ್ದಾರೆ. ಇದು ಕೇವಲ ವ್ಯಕ್ತಿಗತ ಮೌನವಾಗಿಲ್ಲ, ಭಾರತದ ರಾಜತಾಂತ್ರಿಕ ದೌರ್ಬಲ್ಯದ ಕಹಿ ಪ್ರತಿಬಿಂಬವಾಗಿದೆ ಆದರೆ ಇದು ಕೇವಲ ತನ್ನ ಸ್ವಾರ್ಥಕ್ಕಾಗಿ ಮಾಡುತ್ತಿರುವ ತಂತ್ರ. ಭಾರತ ಪದೇ ಪದೇ ಅಮೆರಿಕಾ ವಂಚನೆಗೆ ಒಳಗಾಗಿ, ಮತ್ತೆ ಮರುಳಾಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಈ ಧೋರಣೆಯನ್ನು ಬದಲಾಯಿಸದಿದ್ದರೆ, ಭಾರತ ಮತ್ತಷ್ಟು ನಷ್ಟ, ಅಪಮಾನಕ್ಕೆ ಒಳಗಾಗುವ ಸಾಧ್ಯತೆಯಿದೆ.
ಹತ್ತು ವರ್ಷ ಆಡಳಿತ ನಡೆಸಿ ವರ್ಷದ ಅರ್ಧ ಕಾಲ ವಿದೇಶಗಳನ್ನೂ ಸುತ್ತಿದರೂ ವಿದೇಶಾಂಗ ನೀತಿಯ ಬಗ್ಗೆ ಕಿಂಚಿತ್ತು ಅನುಭವವನ್ನು ಪಡೆಯದಿರುವುದು ಬೇಸರದ ಸಂಗತಿ. ಅಮೆರಿಕಕ್ಕೆ ಪಾಠ ಕಲಿಸುತ್ತೇನೆ ಎಂದು ಹೇಳಿ ತಾನು ಚೀನಾದ ಜೊತೆ ಕೈಜೋಡಿಸಿ ಮಾತುಕತೆ ನಡೆಸಿ. ಮರುದಿನ ಜೈಶಂಕರ್ ಅವರಂತಹ ಹಿಂಬಾಲಕ ಸಚಿವರಿಂದ ಚೀನಾ ವಿರುದ್ಧವೆ ಹೇಳಿಕೆಗಳನ್ನು ಕೊಡಿಸುವುದು ಎಡಬಿಡಂಗಿತನವನ್ನು ತೋರಿಸುತ್ತದೆ. ತಾನು ಸ್ವಚ್ಛ ಎಂದು ಎಲ್ಲಡೆ ಹೇಳಿಕೊಳ್ಳುವ ಪ್ರಧಾನಿ ಮೋದಿ ಅವರು ಇನ್ನು ಮುಂದಾದರೂ ಪಾರದರ್ಶಕ ಆಡಳಿತದೊಂದಿಗೆ ಕಪಟ ನಾಟಕವಾಡುವ ವಿದೇಶಿ ನಾಯಕರ ಜೊತೆ ಬದ್ಧತೆಯನ್ನು ತೋರಿಸಲಿ.