ಭಾರತದ ಫಲವಂತಿಕೆ ದರದ ಕುಸಿತವು ಸಾಮಾಜಿಕ-ಆರ್ಥಿಕ ಬದಲಾವಣೆಗಳ ಫಲಿತಾಂಶವಾಗಿದ್ದು, ರಾಜಕಾರಣಿಗಳು ಈ ಬದಲಾವಣೆಗೆ ಸಕಾರಾತ್ಮಕ ಹಾಗೂ ಪರಿಣಾಮಕಾರಿ ನೀತಿಗಳನ್ನು ರೂಪಿಸಬೇಕು. ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂಬ ಪ್ರಚೋದನಾಕಾರಿ ಭಾಷಣಗಳನ್ನು ಬಿಟ್ಟು, ಜನರಲ್ಲಿ ಜಾಗೃತಿ ಮೂಡಿಸಬೇಕು...
2025ರ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ(UNFPA) ತನ್ನ ವಾರ್ಷಿಕ ವರದಿಯಲ್ಲಿ ಭಾರತದಲ್ಲಿ ಕುಸಿತ ಕಂಡ ಫಲವಂತಿಕೆ ದರದ(ಟಿಎಫ್‌ಆರ್) ಕುರಿತು ಆಳವಾಗಿ ವಿಶ್ಲೇಷಣೆ ನೀಡಿದೆ. ‘The Real Fertility Crisis’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ವರದಿ ಭಾರತದಲ್ಲಿ ಸರಾಸರಿ ಫಲವಂತಿಕೆ ದರ ಈಗ ಶೇ. 1.9 ಕ್ಕೆ ಕುಸಿದಿರುವುದನ್ನು ವಿವರಿಸುತ್ತದೆ. ಜನಸಂಖ್ಯೆಯ ಮಟ್ಟ ಕಾಯ್ದುಕೊಳ್ಳಲು 2.1ರಷ್ಟು ಫಲವಂತಿಕೆ ದರ ಇರಬೇಕು. ಈ ಹಿನ್ನೆಲೆಯಲ್ಲಿ ಮುಂದಿನ ದಶಕಗಳಲ್ಲಿ ಭಾರತ ಜನಸಂಖ್ಯೆಯು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಭಾರತದಲ್ಲಿ 146.39 ಕೋಟಿ ಜನಸಂಖ್ಯೆಯಿದೆ ಎಂದು ವರದಿ ತಿಳಿಸಿದೆ. ಇಷ್ಟು ವರ್ಷ ವೃದ್ಧರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬ ಆಪಾದನೆಯಿದ್ದರೂ ಭಾರತದ ಜನಸಂಖ್ಯೆ ಮಾತ್ರ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿತ್ತು. ಇತ್ತೀಚಿಗಷ್ಟೆ ಹಲವು ವರ್ಷಗಳ ಕಾಲ ಜನಸಂಖ್ಯೆಯಲ್ಲಿ ಏಕಮೇವ ಸ್ಥಾನದಲ್ಲಿದ್ದ ಚೀನಾವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಜಿಗಿದಿತ್ತು. ಮಹಿಳೆಯರ ಶಿಕ್ಷಣ ಮಟ್ಟದಲ್ಲಿ ಏರಿಕೆ, ಉದ್ಯೋಗಾವಕಾಶಗಳಿಗಾಗಿ ಮಹಿಳೆಯರ ವಲಸೆ, ವೈದ್ಯಕೀಯ ಸಲಹೆ, ಕುಟುಂಬ ಯೋಜನೆ ಕುರಿತು ಜನಜಾಗೃತಿ ಮತ್ತು ನಗರೀಕರಣ ಸೇರಿದಂತೆ ಭಾರತದಲ್ಲಿ ಜನಸಂಖ್ಯೆ ಇಳಿಕೆಗೆ ಹಲವು ಕಾರಣಗಳಿವೆ ಎಂಬುದಾಗಿ ವರದಿ ವಿವರಿಸುತ್ತದೆ.
ಭಾರತದಲ್ಲಿ ಹೆಚ್ಚು ಮಕ್ಕಳನ್ನು ಹೊಂದುವುದಕ್ಕೆ ಆರ್ಥಿಕ ಇತಿಮಿತಿಯು ಅಡೆತಡೆಯಾಗಿ ಪರಿಣಮಿಸಿದೆ. ಭಾರತ ಸೇರಿದಂತೆ 14 ದೇಶಗಳಲ್ಲಿ ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಪಾಲ್ಗೊಂಡ 14,000 ಜನರಲ್ಲಿ ಭಾರತದ 1,048 ಮಂದಿ ಇದ್ದರು. ‘ನಾವು ಬಯಸಿದಷ್ಟು ಮಕ್ಕಳನ್ನು ಹೊಂದುವುದಕ್ಕೆ ಆರ್ಥಿಕ ಇತಿಮಿತಿ ಅಡ್ಡಿಯಾಗಿ ಪರಿಣಮಿಸಿದೆ’ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಭಾರತೀಯರಲ್ಲಿ ಶೇ. 38 ಮಂದಿ ಹೇಳಿದ್ದಾರೆ. ಮಹಿಳೆಯರು ತಮ್ಮ ಜೀವನದ ಆಯ್ಕೆಯ ಮೇಲೆ ತೀರ್ಮಾನ ಮಾಡುವ ಸ್ವಾತಂತ್ರ್ಯವಿರುವಂತೆ, ಅವರು ಕಡಿಮೆ ಮಕ್ಕಳನ್ನು ಹೊಂದಲು ಬಯಸುತ್ತಿರುವ ದೃಷ್ಟಿಕೋನವನ್ನೂ ವರದಿ ಗಮನಿಸಿದೆ. ಭಾರತದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಹಿಂದುಳಿದ ಹಾಗೂ ಶಿಕ್ಷಣವನ್ನು ಪಡೆಯದ ಸಮುದಾಯಗಳಲ್ಲಿ ಮಹಿಳೆಯರಿಗೆ ಮಕ್ಕಳ ಆಯ್ಕೆಯ ಸ್ವಾತಂತ್ರ್ಯ ಲಭಿಸಿಲ್ಲ. ವರದಿ ಹೇಳುವಂತೆ, ಆರ್ಥಿಕ ತೊಂದರೆ, ಆರೋಗ್ಯ ಸಂರಕ್ಷಣೆಯ ಕೊರತೆ ಮತ್ತು ಶಿಶುಪಾಲನೆಯ ತೊಂದರೆಗಳಿಂದ ಹಿಂದುಳಿದ ಹಾಗೂ ಬಡ ಸಮುದಾಯಗಳಲ್ಲಿರುವ ಬಹುತೇಕ ಮಹಿಳೆಯರು ತಮ್ಮ ಇಚ್ಛೆಗೆ ತಕ್ಕಂತೆ ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ಕಾರಣಗಳು ಜನಸಂಖ್ಯೆ ಕುಸಿತಗೊಳ್ಳಲು ಒಂದು ಕಾರಣವಾದರೆ, ಮಹಿಳೆಯರ ಶಿಕ್ಷಣ ಮಟ್ಟ ಏರಿಕೆಯಾಗಿರುವುದು ಜನಸಂಖ್ಯೆ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ ಎಂದು ವರದಿಗಳು ತಿಳಿಸುತ್ತವೆ. 1960ರ ದಶಕದಲ್ಲಿ ಭಾರತದ ಟಿಎಫ್‌ಆರ್ 5.8 ರಿಂದ 6.0 ರವರೆಗೆ ಇತ್ತು. ಆದರೆ 2000ರ ದಶಕದ ಆರಂಭದ ವೇಳೆಗೆ ಇದು 2.7ಕ್ಕೆ ಇಳಿಕೆಯಾಯಿತು. ಪ್ರಸ್ತುತ 1.9ಕ್ಕೆ ತಲುಪಿದೆ. ಕಳೆದ ಕೆಲವು ದಶಕಗಳಲ್ಲಿ ಮಹಿಳೆಯರ ಶಿಕ್ಷಣದ ಮಟ್ಟವು ಗಣನೀಯವಾಗಿ ಸುಧಾರಿಸಿದೆ. ಶಿಕ್ಷಿತ ಮಹಿಳೆಯರು, ನಗರೀಕರಣ, ಸಾಮಾಜಿಕ ಹಾಗೂ ಕೌಟುಂಬಿಕ ಕಾರಣಗಳಿಂದ ಸಾಮಾನ್ಯವಾಗಿ ಕಡಿಮೆ ಮಕ್ಕಳನ್ನು ಹೊಂದುವುದು ಆದ್ಯತೆ ಆಗುತ್ತಿದೆ.
ಜನಸಂಖ್ಯೆ ಕಡಿಮೆಯಾಗಲು ನಗರೀಕರಣವೂ ಒಂದು ಪ್ರಮುಖ ಅಂಶವಾಗಿದೆ. 2025ರ ವೇಳೆಗೆ ಭಾರತದ ಶೇಕಡ 36 ರಷ್ಟು ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದೆ. ಇದು ಕುಟುಂಬದ ಗಾತ್ರವನ್ನು ಕಡಿಮೆ ಮಾಡುವ ಒತ್ತಡವನ್ನುಂಟುಮಾಡಿದೆ. ಆರ್ಥಿಕ ಒತ್ತಡಗಳು, ಜೀವನ ವೆಚ್ಚದ ಏರಿಕೆ ಮತ್ತು ಉದ್ಯೋಗದ ಅನಿಶ್ಚಿತತೆಯೂ ದಂಪತಿಗಳು ಕಡಿಮೆ ಮಕ್ಕಳನ್ನು ಆಯ್ಕೆ ಮಾಡಲು ಕಾರಣವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರಿಯನ್ನು ಶಿಕ್ಷಿಸುವುದಾದರೆ ಕೋಮುವಾದಿಯನ್ನು ರಕ್ಷಿಸಬಹುದೇ?
ಜನಸಂಖ್ಯೆಯ ವಯೋವೃದ್ಧಿಕರಣವೂ ಒಂದು ಗಮನಾರ್ಹ ವಿಷಯವಾಗಿದೆ. ವರದಿಯಲ್ಲಿ ತಿಳಿಸುವಂತೆ, 2025ರಲ್ಲಿ ಭಾರತದ ಶೇಕಡ 5.7ರಷ್ಟು ಜನಸಂಖ್ಯೆ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಇದು 2050ರ ವೇಳೆಗೆ ಶೇಕಡ 12ಕ್ಕೆ ಏರಬಹುದು. ಇದರಿಂದ ಆರೋಗ್ಯ ಸಂರಕ್ಷಣೆ, ಪಿಂಚಣಿ ವ್ಯವಸ್ಥೆ ಮತ್ತು ಸಾಮಾಜಿಕ ಭದ್ರತೆಯ ಮೇಲೆ ಒತ್ತಡ ಹೆಚ್ಚಾಗಬಹುದು. ಭಾರತೀಯ ಪುರುಷರ ಸರಾಸರಿ ಜೀವಿತಾವಧಿ 71 ವರ್ಷ ಮತ್ತು ಮಹಿಳೆಯರದ್ದು 74 ವರ್ಷವಾಗಿದ್ದು, ಮುಂದಿನ ವರ್ಷಗಳಲ್ಲಿ ಸರಾಸರಿ ಜೀವಿತಾವಧಿಯಲ್ಲಿ ಬದಲಾವಣೆ ತರಬಹುದು.
ಸ್ವಾರ್ಥಕ್ಕಾಗಿ ರಾಜಕಾರಣಿಗಳ ಹೇಳಿಕೆಗಳು
ಒಂದು ಕಡೆಯಲ್ಲಿ ಭಾರತದ ಫಲವಂತಿಕೆ ದರ ಕುಸಿಯುತ್ತಿದ್ದರೆ, ಮತ್ತೊಂದೆಡೆ ರಾಜಕಾರಣಿಗಳು ಕುಟುಂಬಗಳ ಅಭಿವೃದ್ಧಿ, ಉದ್ಯೋಗ, ಆರ್ಥಿಕ ಅಭಿವೃದ್ಧಿ, ಜನಪರ ಆಡಳಿತ ಮುಂತಾದ ನೈಜ ಕಾರಣಗಳನ್ನು ಬಿಟ್ಟು ಸ್ವಾರ್ಥ ರಾಜಕಾರಣಕ್ಕಾಗಿ ಫಲವಂತಿಕೆ ದರ ಏರಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ರಾಜಕೀಯ ವಲಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗಮನ ಸೆಳೆಯುತ್ತವೆ. ಹಲವಾರು ರಾಜಕೀಯ ನಾಯಕರು ಫಲವಂತಿಕೆಯ ಕುಸಿತದ ವರದಿಗಳನ್ನು ತಮ್ಮ ಧರ್ಮ, ಜಾತಿ ಅಥವಾ ಮತಬ್ಯಾಂಕ್ ರಾಜಕೀಯಕ್ಕೆ ಪೂರಕವಾಗಿ ಬಳಸಲು ಆರಂಭಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೊಹನ್ ಭಾಗವತ್ ಅವರು, ”ಜನಸಂಖ್ಯೆ ತಗ್ಗಿದರೆ ಸಮಾಜವೊಂದು ಇಲ್ಲವಾಗುತ್ತದೆ, ಸರಾಸರಿ ಮಕ್ಕಳ ಸಂಖ್ಯೆ ಕನಿಷ್ಠ ಮೂರು ಇರಬೇಕು,” ಎಂದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತಮ್ಮ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಇಂತಹ ಹೇಳಿಕೆಗಳು ದೇಶ ಹಾಗೂ ಜನರ ಅಭಿವೃದ್ಧಿಗಿಂತ ದ್ವೇಷ ಹುಟ್ಟುಹಾಕುವುದಕ್ಕೆ ನೆರವಾಗುತ್ತವೆ.
ಇದೇ ದಿಕ್ಕಿನಲ್ಲಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ”ತಮ್ಮ ರಾಜ್ಯದವರು 16 ಮಕ್ಕಳನ್ನು ಪಡೆಯಬೇಕು” ಎಂಬ ರೀತಿಯಲ್ಲಿ ಘೋಷಣೆ ನೀಡಿರುವುದಲ್ಲಿ ರಾಜಕೀಯ ಹಿತಾಸಕ್ತಿಯೇ ಹೆಚ್ಚಾಗಿದೆ. ಕ್ಷೇತ್ರ ಪುನರ್‌ವಿಂಗಡನೆಯಲ್ಲಿ ದಕ್ಷಿಣದ ರಾಜ್ಯಗಳು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎಂಬ ಆತಂಕವಿದ್ದರೂ ಅಭಿವೃದ್ಧಿಗಿಂತ ಸ್ವಾರ್ಥ ಪರೋಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದಲ್ಲಿ ಅಧಿಕ ಮಕ್ಕಳು ಪಡೆಯುವವರಿಗೆ ಉದ್ಯೋಗ ಸೇರಿದಂತೆ ವಿವಿಧ ರೀತಿಯ ಆರ್ಥಿಕ ಸಹಾಯಧನ ಘೋಷಿಸಿರುವುದು ಕೂಡ ರಾಜಕೀಯ ಕಾರಣವಾಗಿದೆ.
ಇವರೆಲ್ಲರ ಉದ್ದೇಶವು ಉತ್ತರದ ರಾಜ್ಯಗಳ ಫಲವಂತಿಕೆಯ ದರ ಏರಿಕೆಯ ಭೀತಿಗಿಂತ ತಮ್ಮ ರಾಜಕೀಯ ಪ್ರಾತಿನಿಧ್ಯ ಎಲ್ಲಿ ಕಡಿಮೆಯಾಗುತ್ತದೆಯೋ ಎಂಬ ಆತಂಕವೇ ಹೆಚ್ಚಾಗಿದೆ. ರಾಜಕಾರಣಿಗಳ ಇಂತಹ ಹೇಳಿಕೆಗಳಲ್ಲಿ ಧರ್ಮ ರಾಜಕಾರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 2015 ರಲ್ಲಿ ಸಾಕ್ಷಿ ಮಹಾರಾಜ್ ಎಂಬ ಬಿಜೆಪಿ ಸಂಸದೆ, ”ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು,” ಎಂದು ಘೋಷಿಸಿದ್ದರು. ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಮುಸ್ಲಿಂ ಸಮುದಾಯದ ಜನಸಂಖ್ಯಾ ಇಳಿಕೆಯ ಕುರಿತಂತೆ ಮಾತನಾಡುವಾಗ, ಗರ್ಭನಿರೋಧಕದ ಬಗ್ಗೆ ಪ್ರವಚನ ನೀಡಿ, ಜನಸಂಖ್ಯೆ ನಿಯಂತ್ರಣ ಮಸೂದೆ ಅಂಗೀಕಾರವಾಗಬೇಕೆಂದು ಆಗ್ರಹಿಸಿದ್ದರು.
ಇವುಗಳೆಲ್ಲವೂ UNFPA ವರದಿಯ ಮೂಲ ಉದ್ದೇಶಕ್ಕೆ ವಿರುದ್ಧವಾದ ನಿಲುವುಗಳು. ಜನಸಂಖ್ಯೆಯ ಸಮಸ್ಯೆ ಎನ್ನುವುದು ಫಲವಂತಿಕೆಯ ಇಳಿಕೆಯಲ್ಲಿ ಇಲ್ಲ, ಮಹಿಳೆಯು ಮಕ್ಕಳ ವಿಷಯದಲ್ಲಿ ತಾನು ಕೂಡ ನಿರ್ಧಾರ ಮಾಡಬಾರದೆಂದು ಸಮಾಜ ಒತ್ತಡ ಹಾಕುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಉದ್ಯೋಗ, ವಸತಿ, ಆರೋಗ್ಯ, ಶಿಕ್ಷಣ ಇತ್ಯಾದಿ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿರುವಾಗ ಜನಸಂಖ್ಯೆಯ ಹೆಚ್ಚಳ ಅಥವಾ ಇಳಿಕೆ ವಿಚಾರ ಹೆಚ್ಚು ಗಂಭೀರ ತಳಹದಿಯ ಚರ್ಚೆಯಾಗಿ ಪರಿಗಣಿಸಬೇಕಿದೆ. ಜನಸಂಖ್ಯೆ ಇಳಿದರೂ, ಉದ್ಯೋಗವಿಲ್ಲದ ಯುವಜನತೆ ಎಷ್ಟು ಕಾಲ ತನ್ನ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ? ಇವೆಲ್ಲ ಕಾರಣಗಳನ್ನು ಪರಿಗಣಿಸಬೇಕಾದ ಅಗತ್ಯವಿದೆ.
ಈ ಎಲ್ಲ ಪ್ರಶ್ನೆಗಳು ವೈಜ್ಞಾನಿಕ, ಮಾನವೀಯ ಹಾಗೂ ಸಮಗ್ರ ನೀತಿ ಚಿಂತನೆಯ ಅಗತ್ಯವನ್ನು ಒತ್ತಿಹೇಳುತ್ತವೆ. ಒಂದು ದೇಶದಲ್ಲಿ ಜನಸಂಖ್ಯೆ ಕುರಿತು ಚರ್ಚೆಗಳು ಧರ್ಮ, ಜಾತಿ ಅಥವಾ ಪಕ್ಷಭೇದದಿಂದ ದೂರವಿದ್ದು, ಮಾನವ ಹಕ್ಕುಗಳ ಪರಿಪಾಲನೆಯೊಂದಿಗೆ ನಡೆಯಬೇಕು. ಭಾರತದ ಫಲವಂತಿಕೆ ದರದ ಕುಸಿತವು ಸಾಮಾಜಿಕ-ಆರ್ಥಿಕ ಬದಲಾವಣೆಗಳ ಫಲಿತಾಂಶವಾಗಿದ್ದು, ರಾಜಕಾರಣಿಗಳು ಈ ಬದಲಾವಣೆ ಸಕಾರಾತ್ಮಕ ನೀತಿಗಳನ್ನು ರೂಪಿಸಬೇಕು. ಪ್ರಚೋದನಾಕಾರಿ ಭಾಷಣಗಳನ್ನು ಬಿಟ್ಟು ಜನರಲ್ಲಿ ಜಾಗೃತಿ ಮೂಡಿಸಿದರೆ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಿದರೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಿದರೆ- ಭಾರತವನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸಬಹುದಾಗಿದೆ.
