ಅಮೆರಿಕದ ಅಗ್ಗದ ಮತ್ತು ಭಾರಿ ಸಬ್ಸಿಡಿ ಪಡೆದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ತೆರೆದರೆ ಬೆಳೆಗಳ ಬೆಲೆ ಕುಸಿದು ಗ್ರಾಮೀಣ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕುತ್ತದೆ. ಕೇಂದ್ರ ಸರ್ಕಾರವು ಕೃಷಿ ಹಿತಾಸಕ್ತಿಯಲ್ಲಿ ರಾಜಿ ಇಲ್ಲ ಎಂದು ಹೇಳುತ್ತಲೇ ರೈತರ ಕತ್ತು ಹಿಸುಕುತ್ತಿದೆ!
ಭಾರತ ಮತ್ತು ಅಮೆರಿಕದ ನಡುವೆ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ. ಮಧ್ಯಂತರ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಿಲ್ಲ. ಆದರೂ ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯತ್ತ ಹೊರಟಿದ್ದಾರೆ. ಹಲವರು ಅದರಲ್ಲೂ ಮೋದಿ ಭಕ್ತರು ‘ಸಹಿಯೇ ಆಗದ ಒಪ್ಪಂದದ ವಿರುದ್ಧ ಪ್ರತಿಭಟನೆ ಏಕೆ’ ಎಂದು ಪ್ರಶ್ನಿಸುತ್ತಿದ್ದಾರೆ.
ಆದಾಗ್ಯೂ ರೈತ ಸಂಘಟನೆಗಳ ಉತ್ತರ ಸ್ಪಷ್ಟವಾಗಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮತ್ತು ಅಮೆರಿಕವು ಭಾರತದ ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ, ಒಪ್ಪಂದವನ್ನು ಹಿಂದಕ್ಕೆ ಪಡೆಯುವುದು ಕಷ್ಟ. ಆದ್ದರಿಂದ ಮಾತುಕತೆ ನಡೆಯುತ್ತಿರುವ ಹಂತದಲ್ಲಿಯೇ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ಅಮೆರಿಕದ ಯಾವುದೇ ರೀತಿಯ ಹಾನಿಕಾರಕ ಷರತ್ತುಗಳನ್ನು ಒಪ್ಪಿಕೊಳ್ಳದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದು ರೈತರ ಸ್ಪಷ್ಟ ನಿಲುವು.
ರೈತರು ‘ದೇಶ್ ಬಚಾವೋ ಮೋರ್ಚಾ’ ನೇತೃತ್ವದಲ್ಲಿ ದೆಹಲಿಯ ಕಿಸಾನ್ ಘಾಟ್‌ನಲ್ಲಿ ಮಹಾಪಂಚಾಯತ್ ಆಯೋಜಿಸಿದ್ದಾರೆ. ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿವೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳಿಂದ ರೈತರು ದೆಹಲಿಯತ್ತ ಪ್ರಯಾಣ ಆರಂಭಿಸಿದ್ದಾರೆ. ಆದರೆ, ದೆಹಲಿಯತ್ತ ಹೊರಟಿದ್ದ ರೈತರನ್ನು ಪಂಜಾಬ್-ಹರಿಯಾಣದ ಶಂಭು ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ. ರಸ್ತೆಗಳಲ್ಲಿ ರೈತರು ಮುಂದೆ ಹೋಗದಂತೆ ತಡೆಯಲು ಬೃಹತ್ ಕಾಂಕ್ರೀಟ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಬೃಹತ್ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಹರಿಯಾಣದ ಕೆಲವು ಭಾಗಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ.
ಅಮೆರಿಕದ ಅಗ್ಗದ ಕೃಷಿ ಉತ್ಪನ್ನಗಳು – ಭಾರತದ ಕೃಷಿ ಮಾರುಕಟ್ಟೆಯ ಆತಂಕ
ರೈತ ಸಂಘಟನೆಗಳ ಪ್ರಮುಖ ಆತಂಕ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಯನ್ನು ತೆರೆಯುವುದರ ಕುರಿತಾದ್ದು. ಅಮೆರಿಕದ ಕೃಷಿ ವ್ಯವಸ್ಥೆಗೆ ಸರ್ಕಾರದಿಂದ ದೊಡ್ಡ ಪ್ರಮಾಣದ ಆರ್ಥಿಕ ನೆರವು ಮತ್ತು ಸಬ್ಸಿಡಿ ದೊರೆಯುತ್ತದೆ. ಉತ್ಪಾದನಾ ವೆಚ್ಚ, ವಿಮೆ, ರಫ್ತು ಪ್ರೋತ್ಸಾಹ, ತಾಂತ್ರಿಕ ನೆರವು ಸೇರಿದಂತೆ ಹಲವು ಹಂತಗಳಲ್ಲಿ ಅಲ್ಲಿನ ರೈತರಿಗೆ ಸರ್ಕಾರಿ ಬೆಂಬಲವಿದೆ. ಆದರೆ, ಭಾರತದ ಬಹುತೇಕ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸರ್ಕಾರದಿಂದ ಯಾವುದೇ ಸಹಾಯ ಸರಿಯಾಗಿ ದೊರೆಯುವುದಿಲ್ಲ. ಇಂತಹ ಅಸಮಾನ ಪರಿಸ್ಥಿತಿಯಲ್ಲಿ ಅಮೆರಿಕದ ಕೃಷಿ ಉತ್ಪನ್ನಗಳೊಂದಿಗೆ ಭಾರತೀಯ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ
ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಭಾಗವಾಗಿ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದರೆ ಅಥವಾ ಮುಕ್ತ ಮಾರುಕಟ್ಟೆ ಪ್ರವೇಶ ನೀಡಿದರೆ, ಅಮೆರಿಕದ ಅಗ್ಗದ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ನುಗ್ಗಲಿವೆ. ಇದು ಭಾರತೀಯ ಕೃಷಿ ಮಾರುಕಟ್ಟೆಯನ್ನು ಬುಡಮೇಲು ಮಾಡಲಿದೆ. ಸ್ಥಳೀಯ ರೈತರಿಗೆ ಭಾರೀ ಹೊಡೆತ ನೀಡಲಿದೆ.
ಹೆಚ್ಚು ಸಬ್ಸಿಡಿ ಪಡೆದ ಅಮೆರಿಕದ ಉತ್ಪನ್ನಗಳು ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಗೆ ಬಂದರೆ ದೇಶೀಯ ಬೆಳೆಗಳ ಬೆಲೆ ಕುಸಿಯಬಹುದು. ಇದರಿಂದ ರೈತರ ಆದಾಯ ಮಾತ್ರವಲ್ಲದೆ ಕೃಷಿ ಕಾರ್ಮಿಕರು, ಪಶುಸಂಗೋಪಕರು, ಸಣ್ಣ ವ್ಯಾಪಾರಿಗಳು, ಕೃಷಿ ಉತ್ಪನ್ನಗಳ ಸಾಗಣೆ, ಸಂಸ್ಕರಣೆ ಹಾಗೂ ಮಾರಾಟವನ್ನು ಅವಲಂಬಿಸಿರುವ ಲಕ್ಷಾಂತರ ಜನರ ಜೀವನೋಪಾಯದ ಮೇಲೂ ಪರಿಣಾಮ ಬೀರಲಿದೆ.
ಭಾರತದ ಕೃಷಿ ಮಾರುಕಟ್ಟೆ ಕೇವಲ ಬೆಳೆ ಬೆಳೆಯುವ ರೈತರಿಗೆ ಸೀಮಿತವಾಗಿಲ್ಲ. ಬೀಜ, ರಸಗೊಬ್ಬರ, ಕೃಷಿ ಉಪಕರಣ, ಪಶುಸಂಗೋಪನೆ, ಹೈನುಗಾರಿಕೆ, ಮಾರುಕಟ್ಟೆ, ಸಂಗ್ರಹಣೆ ಮತ್ತು ಗ್ರಾಮೀಣ ಚಿಲ್ಲರೆ ವ್ಯಾಪಾರದವರೆಗೆ ದೊಡ್ಡ ಆರ್ಥಿಕ ಸರಪಳಿಯೂ ಕೃಷಿ ಮಾರುಕಟ್ಟೆಯನ್ನು ಅವಲಂಬಿಸಿದೆ. ಆದ್ದರಿಂದ ಕೃಷಿ ಆಮದುಗಳಿಗೆ ನೀಡುವ ಯಾವುದೇ ದೊಡ್ಡ ರಿಯಾಯಿತಿ ಗ್ರಾಮೀಣ ಆರ್ಥಿಕತೆಯ ಒಟ್ಟಾರೆ ಸ್ಥಿರತೆಗೆ ಹೊಡೆತ ನೀಡಲಿದೆ. ಆದ್ದರಿಂದಲೇ, ರೈತರು ಈ ಒಪ್ಪಂದವನ್ನು ಆರಂಭದಲ್ಲೇ ತಡೆಲು ಹೋರಾಟ ನಡೆಸುತ್ತಿದ್ದಾರೆ.

ಕೇವಲ ಕೆಲವು ಬೆಳೆಗಳ ಪ್ರಶ್ನೆಯಲ್ಲ
ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳ ಪ್ರಕಾರ, ಪ್ರಸ್ತಾಪಿತ ಒಪ್ಪಂದವನ್ನು ಕೆಲವು ಕೃಷಿ ಉತ್ಪನ್ನಗಳ ಆಮದು–ರಫ್ತಿಗೆ ಮಾತ್ರ ಸೀಮಿತವಾಗಿ ನೋಡಬಾರದು. ಮಾತುಕತೆಯ ವ್ಯಾಪ್ತಿ ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಕೈಗಾರಿಕೆ, ಡಿಜಿಟಲ್ ವ್ಯಾಪಾರ, ಇ–ಕಾಮರ್ಸ್, ಸರ್ಕಾರಿ ಖರೀದಿ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಸೇವಾ ಕ್ಷೇತ್ರಗಳಿಗೂ ವಿಸ್ತರಿಸಬಹುದು.
ವಿಶೇಷವಾಗಿ, ಭಾರತದ ಹೈನುಗಾರಿಕೆ ಕ್ಷೇತ್ರಕ್ಕೆ ವಿದೇಶಿ ಕಂಪನಿಗಳ ಪ್ರವೇಶ ಹೆಚ್ಚಾದರೆ ಸಣ್ಣ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಭಾರತದಲ್ಲಿ ಕೋಟ್ಯಂತರ ಗ್ರಾಮೀಣ ಕುಟುಂಬಗಳು ಕೃಷಿಯ ಜೊತೆಗೆ ಹಸು, ಎಮ್ಮೆ ಹಾಗೂ ಇತರ ಪಶುಗಳನ್ನು ಸಾಕಿ ಹಾಲು ಮಾರಾಟದಿಂದ ಆದಾಯ ಗಳಿಸುತ್ತಿವೆ. ಹೈನುಗಾರಿಕೆಯಲ್ಲಿ ಆಮದು ಸಡಿಲಿಕೆ ನೀಡಿದರೆ ಅದರ ನೇರ ಪರಿಣಾಮ ಸಣ್ಣ ರೈತರು ಮತ್ತು ಮಹಿಳಾ ಹಾಲು ಉತ್ಪಾದಕರ ಮೇಲೆ ಬೀರಲಿದೆ.
ಒಪ್ಪಂದದಲ್ಲಿನ, ಸರ್ಕಾರಿ ಖರೀದಿ ವ್ಯವಸ್ಥೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಷರತ್ತುಗಳು ಬೀಜಗಳ ಬಳಕೆ, ಬೆಳೆ ವೈವಿಧ್ಯ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಕನಿಷ್ಠ ಬೆಂಬಲ ಬೆಲೆ ಆಧಾರಿತ ಖರೀದಿಯ ಮೇಲೂ ಪರೋಕ್ಷ ಪರಿಣಾಮ ಬೀರಲಿದೆ.
ಕೇಂದ್ರದ ಹೇಳುವುದೇನು – ರೈತರ ನಿಲುವೇನು?
‘ಕೃಷಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಮೋದಿ ಸರ್ಕಾರ ಹೇಳಿಕೊಂಡಿದೆ. ಮಾತುಕತೆಯ ಕುರಿತು ಮಾಹಿತಿ ಹೊಂದಿರುವ ಭಾರತೀಯ ಅಧಿಕಾರಿಯೊಬ್ಬರು, “ದೇಶಕ್ಕೆ ಅನುಕೂಲಕರವಲ್ಲದ ಷರತ್ತುಗಳನ್ನು ಒಳಗೊಂಡ ಒಪ್ಪಂದಕ್ಕೆ ತರಾತುರಿಯಲ್ಲಿ ಸಹಿ ಹಾಕುವುದಿಲ್ಲ ಮತ್ತು ಕೃಷಿಯಲ್ಲಿ ನೆಲಬಿಟ್ಟುಕೊಡುವಂತಹ ‘ರೆಡ್ ಲೈನ್’ಗಳನ್ನು ದಾಟುವುದಿಲ್ಲ” ಎಂದು ಹೇಳಿದ್ದಾರೆ.
ಆದರೆ, ಈ ಒಪ್ಪಂದದಲ್ಲಿ ಕೃಷಿಯೇ ಅತ್ಯಂತ ಸಂಕೀರ್ಣ ಮತ್ತು ಪ್ರಮುಖ ವಿಷಯವಾಗಿ ಉಳಿದಿದೆ. ಅಮೆರಿಕ ತನ್ನ ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳಿಗೆ ಭಾರತದ ದೊಡ್ಡ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರವೇಶ ಬಯಸುತ್ತಿದೆ.
ಆದ್ದರಿಂದ, ರೈತ ಸಂಘಟನೆಗಳು ಸರ್ಕಾರದಿಂದ ಮೌಖಿಕ ಭರವಸೆ ಮಾತ್ರ ಸಾಕಾಗುವುದಿಲ್ಲ. ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು ಅಂತಿಮ ಒಪ್ಪಂದದ ಪಠ್ಯದಲ್ಲಿಯೇ ಸ್ಪಷ್ಟವಾಗಿ ದಾಖಲಾಗಬೇಕು ಎಂದು ಒತ್ತಾಯಿಸಿವೆ.
ಈ ಲೇಖನ ಓದಿದ್ದೀರಾ?: ಬಿಜೆಪಿಗೆ ಬಿಸಿತುಪ್ಪವಾದ ಪರೀಕ್ಷಾ ಹಗರಣ, ವಾಂಗ್ಚುಕ್, ರಾಮಮಂದಿರ, ಎಥೆನಾಲ್!
“ವ್ಯಾಪಾರ ಮಾತುಕತೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ. ಯಾವ ಉತ್ಪನ್ನಗಳ ಕುರಿತು ಮಾತುಕತೆ ನಡೆಯುತ್ತಿದೆ, ಯಾವ ಕ್ಷೇತ್ರಗಳಲ್ಲಿ ಸುಂಕ ಕಡಿತಗೊಳಿಸುವ ಸಾಧ್ಯತೆ ಇದೆ, ಅಮೆರಿಕಕ್ಕೆ ಎಷ್ಟು ಮಾರುಕಟ್ಟೆ ಪ್ರವೇಶ ನೀಡಲಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕವಾಗಿ ಸರ್ಕಾರ ಪ್ರಟಿಸಬೇಕು. ಒಪ್ಪಂದ ಅಂತಿಮಗೊಳ್ಳುವ ಮೊದಲು ರೈತ ಸಂಘಟನೆಗಳು, ಕೃಷಿ ತಜ್ಞರು, ಹೈನುಗಾರಿಕೆ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.
ಒಮ್ಮೆ ಕೃಷಿ ಮಾರುಕಟ್ಟೆಯನ್ನು ವಿದೇಶಿ ಉತ್ಪನ್ನಗಳಿಗೆ ತೆರೆಯುವ ಬದ್ಧತೆಯನ್ನು ಅಂತರರಾಷ್ಟ್ರೀಯ ಒಪ್ಪಂದದಲ್ಲಿ ದಾಖಲಿಸಿದರೆ ಅದನ್ನು ನಂತರ ಬದಲಿಸುವುದು ಕಾನೂನು ಮತ್ತು ರಾಜತಾಂತ್ರಿಕವಾಗಿ ಕಷ್ಟವಾಗಬಹುದು. ಇದೇ ಕಾರಣಕ್ಕೆ ಮಾತುಕತೆ ನಡೆಯುತ್ತಿರುವಾಗಲೇ ವಿರೋಧ ದಾಖಲಿಸುವುದು ಅಗತ್ಯ ಎಂದು ರೈತ ನಾಯಕರು ಪ್ರತಿಪಾದಿಸಿದ್ದಾರೆ.
ಒಪ್ಪಂದ ಇನ್ನೂ ಅಂತಿಮವಾಗದಿರುವುದೇಕೆ?
ಭಾರತ ಮತ್ತು ಅಮೆರಿಕ ಹಲವು ತಿಂಗಳುಗಳಿಂದ ವ್ಯಾಪಾರ ಮಾತುಕತೆ ನಡೆಸುತ್ತಿದ್ದರೂ ಮಧ್ಯಂತರ ಒಪ್ಪಂದವನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ಮಾತುಕತೆಯಲ್ಲಿಯೂ ಎರಡೂ ದೇಶಗಳ ನಡುವೆ ಒಮ್ಮತ ಮೂಡಿಲ್ಲ ಎಂದು ವರದಿಯಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಭಾರತದ ಕೆಲವು ಪ್ರಮುಖ ಬೇಡಿಕೆಗಳಿಗೆ ಅಮೆರಿಕ ಸ್ಪಷ್ಟ ಭರವಸೆ ನೀಡದ ಕಾರಣ ಮಾತುಕತೆ ಅಂತಿಮ ಹಂತ ತಲುಪಿಲ್ಲ. ಚೀನಾದಂತಹ ಸ್ಪರ್ಧಿ ದೇಶಗಳಿಗಿಂತ ಭಾರತಕ್ಕೆ ಉತ್ತಮ ಮತ್ತು ಆದ್ಯತೆಯ ಸುಂಕ ವ್ಯವಸ್ಥೆ ನೀಡಬೇಕು. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕ ಹೊಸ ಅಥವಾ ಹೆಚ್ಚುವರಿ ಸುಂಕಗಳನ್ನು ವಿಧಿಸಬಾರದು ಎಂಬ ಬೇಡಿಕೆಯನ್ನು ಭಾರತವು ಅಮೆರಿಕ ಮುಂದಿಟ್ಟಿದೆ. ಆದರೆ, ಅಮೆರಿಕ ಬೇಡಿಕೆಗೆ ಸ್ಪಂದಿಸಿಲ್ಲ.




