ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

Date:

Advertisements
ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸತೊಡಗಿದ ಜನರು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಜಸ್ಟಿಸ್ ಎಚ್‌.ಎನ್. ನಾಗಮೋಹನ ದಾಸ್ ಏಕಸದಸ್ಯ ಆಯೋಗದ ವರದಿಯನ್ನು ಅನ್ಯಾಯಯುತವಾಗಿ ರಾಜ್ಯ ಸರ್ಕಾರ ಪರಿಷ್ಕರಿಸಿರುವ ಸಂಬಂಧ ಆಕ್ರೋಶ ಭುಗಿಲೆದ್ದಿದೆ. ಆಯೋಗವು ‘ಎ’ ಗುಂಪು ರಚಿಸಿ 59 ಅಲೆಮಾರಿ ಸಮುದಾಯಗಳಿಗೆ ನೀಡಲಾಗಿದ್ದ ಶೇ. 1ರಷ್ಟು ಮೀಸಲಾತಿಯನ್ನು ತೆಗೆದು ಹಾಕಿ, ಅದನ್ನು ಸ್ಪೃಶ್ಯ ಸಮುದಾಯಗಳಿದ್ದ ಗುಂಪಿಗೆ ವರ್ಗಾಯಿಸಿ, ಬಲಾಢ್ಯರಿಗೆ 5 ಪರ್ಸೆಂಟ್ ಮೀಸಲಾತಿಯನ್ನು ಹಂಚಿರುವುದು ‘ಸಾಮಾಜಿಕ ನ್ಯಾಯ’ದ ಅಣಕ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

‘ಎ’ ಗುಂಪಿನಲ್ಲಿ ಹೊಲೆಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 6, ‘ಬಿ’ ಗುಂಪಿನಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 6 ಹಾಗೂ ‘ಸಿ’ ಗುಂಪಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳೊಂದಿಗೆ ಅಲೆಮಾರಿಗಳನ್ನು ಸೇರಿಸಿ ‘ಶೇ. 5’ರಷ್ಟು ಒಳಮೀಸಲಾತಿ ಹಂಚಿಕೆಯ ತೀರ್ಮಾನವನ್ನು ಕ್ಯಾಬಿನೆಟ್ ಕೈಗೊಂಡಿದೆ. ಅಲೆಮಾರಿಗಳಿಗೆ ಅನ್ಯಾಯವಾಗಿರುವುದು ತಕ್ಷಣಕ್ಕೆ ತಿಳಿಯದೆ ಸಂಭ್ರಮಿಸಿದ ಮಾದಿಗ ಸಮುದಾಯದ ಹೋರಾಟಗಾರರು, ನಂತರದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದು, “ಅಲೆಮಾರಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ” ಎಂದು ಘೋಷಿಸಿದ್ದಾರೆ. ‘ಹೊಲೆಯ’ ಸಮುದಾಯವನ್ನು ‘ಎ’ ಗುಂಪಿನಲ್ಲಿಟ್ಟು, ಮಾದಿಗ ಸಮುದಾಯವನ್ನು ‘ಬಿ’ ಗುಂಪಿಗೆ ವರ್ಗಾಯಿಸಿರುವುದು ಸರ್ಕಾರದ ಮತ್ತೊಂದು ಘೋರ ಅನ್ಯಾಯವೆಂಬ ಟೀಕೆಗಳು ವ್ಯಕ್ತವಾಗಿವೆ. ಜಸ್ಟಿಸ್ ನಾಗಮೋಹನ ದಾಸ್ ಆಯೋಗವನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿರುವುದು ಕಂಡುಬಂದಿದೆ.

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸತೊಡಗಿದ ಜನರು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisements

***

“ಅಲೆಮಾರಿ ಸಮುದಾಯಗಳ ಗುಂಪನ್ನು ಪ್ರತ್ಯೇಕಿಸಿ ಪಾಲು ನಿಗದಿ ಆಗುವವರೆಗೂ ನಮ್ಮ ಹೋರಾಟ ನಿರಂತರ”

-ಅಂಬಣ್ಣ ಅರೋಲಿಕರ್, ಒಳಮೀಸಲಾತಿ ಹೋರಾಟಗಾರ

***

ಮುಖ್ಯವಾಗಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಒಳಮೀಸಲಾತಿ ದಕ್ಕಬೇಕಾದುದು ಅಲೆಮಾರಿ ಸಮುದಾಯಗಳಿಗೆ. ಅವರೀಗ ಎಡ-ಬಲಗಳ ನಡುವೆ ಸಿಲುಕಿ ಗಟಾರಕ್ಕೆ ಬಿದ್ದಿದ್ದಾರೆ. ಬಲಾಢ್ಯ ಸ್ಪೃಶ್ಯರ ನಡುವೆ ಇನ್ನೆಂದೂ ಮೇಲೇಳಲು ಸಾಧ್ಯವಿಲ್ಲ. ಸ್ಪೃಶ್ಯರ ಗುಂಪಿಗೆ ಸೇರಿಸುವುದೇ ಆಗಿದ್ದರೇ ಪರಿಶಿಷ್ಟ ಜಾತಿ ಗುಂಪಿನಿಂದಲೇ ಅಲೆಮಾರಿಗಳನ್ನು ಹೊರಗಿಡಬಹುದಿತ್ತು. ಏನೂ ನಷ್ಟವಾಗುತ್ತಿರಲಿಲ್ಲ. ವೈಜ್ಞಾನಿಕವಾಗಿದ್ದ ಜಸ್ಟಿಸ್ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ ಮಾಧುಸ್ವಾಮಿ ವರದಿಯನ್ನು ಆಂಗೀಕರಿಸಿದಂತಿದೆ. ಸುಪ್ರೀಂಕೋರ್ಟ್ ಸೂಚಿಸಿದ ಎಂಫಿರಿಕಲ್ ಡೇಟಾ ಬಿಟ್ಟು ಸೆಟ್ಲುಮೆಂಟ್ ಆಗಿ ಮೀಸಲಾತಿಯನ್ನು ವಿಭಾಗಿಸಿದ್ದು ಪರಮ ಅನ್ಯಾಯ. ಯಾವ ಹೋರಾಟವೂ ಇಲ್ಲದೇ, ಶೋಷಣೆಯ ಅನುಭವವೂ ಇಲ್ಲದೇ, ಇತರ ರಾಜ್ಯಗಳಲ್ಲಿ ಪರಿಶಿಷ್ಟಜಾತಿಯಿಂದ ಹೊರಗಿರುವವರು ಇಲ್ಲಿ ಪ್ರಬಲರಾಗಿ ಚೌಕಾಶಿ ಮಾಡಿ ಗೆದ್ದಿದ್ದಾರೆ. ಅಲೆಮಾರಿ ಸಮುದಾಯಗಳ ತಟ್ಟೆಗೆ ಕೈ ಹಾಕಿ ಕಬಳಿಸಿರುವುದು ಹೇಯವಾದುದು. ಮುಂದೆ ನಮ್ಮ ಹೋರಾಟ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕಡೆ. ಬನ್ನಿ ನಮ್ಮ ಹೋರಾಟ ಇನ್ನೂ ನಿಂತಿಲ್ಲ. ಹೋರಾಟಕ್ಕೆ ಕೊನೆಯಿಲ್ಲ.

- ರವಿಕುಮಾರ್ ನೀಹ, ಬರಹಗಾರರು, ಒಳಮೀಸಲಾತಿ ಹೋರಾಟಗಾರರು

***

ಪ್ರಿಯ ರಾಹುಲ್, ಮತಗಳ್ಳತನದ ಬಗ್ಗೆ ಬದ್ಧತೆಯಿಂದ ಮಾತನಾಡುತ್ತಿದ್ದೀರಿ. Love you for this.
ಆದರೆ, ಇಲ್ಲಿ ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ದನಿಯಿಲ್ಲದವರ ಹಕ್ಕನ್ನೇ ಕದಿಯುತ್ತಿದೆ.

-ಬಿ.ಸಿ.ಬಸವರಾಜು, ಜಾಗೃತ ಕರ್ನಾಟಕ

***

ಒಂದು ತುತ್ತೂ ಸಿಗದವರನ್ನು, ಒಂದೆರೆಡು ತುತ್ತು ಕಡಿಮೆಯಾದವರ ಜೊತೆಗೆ ಸೇರಿಸುವುದು
ಸಾಮಾಜಿಕ ನ್ಯಾಯವಲ್ಲ. ಸಾಮಾಜಿಕ ಕ್ರೌರ್ಯ.

-ಶಿವಸುಂದರ್, ಚಿಂತಕರು

***

ಅಲೆಮಾರಿಗಳಿಗೆ ಅನ್ಯಾಯ ಮಾಡುವ ಮೂಲಕ 'ಸಾಮಾಜಿಕ ನ್ಯಾಯ'ಕ್ಕೆ ಎಳ್ಳು ನೀರು ಬಿಟ್ಟ ಮುಖ್ಯಮಂತ್ರಿಗಳು. ಬಲಾಢ್ಯರ ಮುಂದೆ ಮಂಡಿಯೂರಿ ಅತ್ಯಂತ ಶೋಷಿತ ಸಮುದಾಯಗಳಿಗೆ ಐತಿಹಾಸಿಕ ಅನ್ಯಾಯ ಮಾಡಿದ ಕಾಂಗ್ರೆಸ್. ಬಿಜೆಪಿ-ಸಂಘಪರಿವಾರದಿಂದ ಸಂವಿಧಾನ, ಸಾಮಾಜಿಕ ನ್ಯಾಯದ ರಕ್ಷಣೆ ಮಾಡುತ್ತೇವೆ ಅಂತ ಉದ್ದುದ್ದ ಭಾಷಣ ಮಾಡುವ ದಲಿತರೇ ತಮ್ಮೊಳಗಿನ ತಬ್ಬಲಿ ಸಮುದಾಯಗಳಿಗೆ ಅನ್ಯಾಯ ಮಾಡುವುದಕ್ಕೆ ಮುಂದಾದರೆ ಬಿಜೆಪಿ-ಸಂಘಪರಿವಾರದ ವಿರುದ್ಧ ಹೋರಾಡುವ ನೈತಿಕತೆಯಾದರೂ ಎಲ್ಲಿ ಇರುತ್ತದೆ. ದಲಿತ ಸಂಘಟನೆಗಳು ಈಗ ಅಲೆಮಾರಿ ಸಮುದಾಯಗಳ ಜೊತೆ ನಿಲ್ಲಬೇಕೇ ಹೊರತು ಬಲಾಢ್ಯ ಸ್ಪೃಶ್ಯರ ಪರ ನಿಂತು ಸಾಮಾಜಿಕ ನ್ಯಾಯವನ್ನು ನಗೆಪಾಟಲು ಮಾಡಬಾರದು.

-ವಿ.ಎಲ್.ನರಸಿಂಹಮೂರ್ತಿ, ಬರಹಗಾರರು

***

ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸದ ಸರ್ಕಾರ. ಸುಪ್ರೀಂ ಕೋರ್ಟ್ ತೀರ್ಪನ್ನು ಗಾಳಿಗೆ ತೂರಿದೆ.
ಒಳಮೀಸಲಾತಿ ಹೋರಾಟ ಮುಂದುವರೆಯಬೇಕಿದೆ.

-ವಿಕಾಸ್ ಆರ್. ಮೌರ್ಯ, ಬರಹಗಾರರು

***

ಸಿದ್ದರಾಮಯ್ಯನವರೆ, ನೀವು ಹೀಗೆ ಮಾಡಬಾರದಿತ್ತು.

ಮೊದಲನೇಯದಾಗಿ ಅಲೆಮಾರಿ ಸಮುದಾಯಗಳನ್ನು ಮಾದಿಗ ಸಂಬಂಧಿತ ಅಥವಾ ಹೊಲೆಯ ಸಂಬಂಧಿತ ಜಾತಿಗಳ ಪ್ರವರ್ಗದಲ್ಲಿ ಸೇರಿಸಬೇಡಿ ಎಂದು ಹಕ್ಕೊತ್ತಾಯ ಮಾಡಿದೆವು. ಏಕೆಂದರೆ ಅವರು ಅಲ್ಲಿ ಸ್ಪರ್ಧಿಸಿ ಏನನ್ನೂ ಪಡೆದುಕೊಳ್ಳಲಾರರು ಎಂದು. ಈಗ ಸರ್ಕಾರ ಅವರನ್ನು ಸ್ಪೃಶ್ಯ ಜಾತಿಗಳ ವರ್ಷದಲ್ಲಿ ಸೇರಿಸಿಬಿಟ್ಟಿದೆ. ಅಲ್ಲಿ ಅವರು ಉಸಿರೆತ್ತಲೂ ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಆ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಅಲೆಮಾರಿಗಳಿಗೆ ಚಾರಿತ್ರಿಕ ದ್ರೋಹವೆಸಗಿದೆ.

ಇನ್ನು ಹೆಚ್ಚು ಮುಂದುವರೆದಿರುವ ಸ್ಪೃಶ್ಯ ಸಮುದಾಯಗಳಿಗೆ 5%, ಮಧ್ಯಮ ಮುಂದುವರಿದ ಹೊಲೆಯ ಸಂಬಂಧಿತ ಸಮುದಾಯಗಳಿಗೆ 6% ಹಾಗೂ 35 ವರ್ಷಗಳಿಂದ ನಿರಂತರವಾಗಿ ಹೋರಾಡಿದ ಹೆಚ್ಚು ಹಿಂದುಳಿದ ಮಾದಿಗ ಸಂಬಂಧಿತ ಸಮುದಾಯಗಳಿಗೂ ಕೇವಲ‌ 6% ನೀಡಿರುವುದು ಸಾಮಾಜಿಕ ನ್ಯಾಯವಲ್ಲ, ಅನ್ಯಾಯ. ನ್ಯಾ.ದಾಸ್ ರವರ ವರದಿ ಮತ್ತು ಶಿಫಾರಸ್ಸು ವೈಜ್ಞಾನಿಕವಾಗಿತ್ತು. ಅದು ಸಂಬಂಧಿತ ಜಾತಿಗಳ ಗುಂಪು ಮಾಡದೆ ಹಿಂದುಳಿದಿರುವಿಕೆ ಆಧಾರದಲ್ಲಿ 5 ಗುಂಪು ಮಾಡಿ ಮೀಸಲಾತಿ ಹಂಚಿತ್ತು. ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ 1% ಮೀಸಲಾತಿಯ ಜೊತೆಗೆ ಮೊದಲ ಆದ್ಯತೆ ನೀಡಲಾಗಿತ್ತು. ಆದರೆ ಈಗ ಅವರಿಗೆ ಕೊನೆಯ ಆದ್ಯತೆ.

ಇಂದು ದೇವರಾಜ ಅರಸುರವರ ಜನ್ಮದಿನ. ಜನರು ಸಾಮಾಜಿಕ ನ್ಯಾಯದ ಜೊತೆಗೆ ಅವರನ್ನು ಗುರುತಿಸುತ್ತಾರೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ದನಿ ಕೊಟ್ಟ ಹಿರಿಮೆ ಅವರದು. ಅವರ ಬಗ್ಗೆ ಇಂದು ಸಿದ್ದರಾಮಯ್ಯನವರು ಲೇಖನ ಬರೆದಿದ್ದಾರೆ. ಆದರೆ ನಿನ್ನೆಯ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಮಾಜಿಕ ಅನ್ಯಾಯವೆಸಗಿದ್ದಾರೆ. ಮತ್ತೊಬ್ಬ ದೇವರಾಜ ಅರಸು ಆಗುವುದನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ.

ಈಗಲೂ ಅವರು ಎಚ್ಚೆತ್ತುಕೊಂಡು ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ ಸ್ಪೃಶ್ಯ ಸಮುದಾಯಕ್ಕೆ ಕೊಟ್ಟ ಮೀಸಲಾತಿಯಲ್ಲಿ ಹಂಚಿಕೆ ಮಾಡುವ ಮೂಲಕ ತಮ್ಮ ಪ್ರಮಾದವನ್ನು ಸರಿಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಈ ಕಪ್ಪು ಚುಕ್ಕೆ ನಿಮ್ಮನ್ನು ಅಂಟಿಕೊಳ್ಳುತ್ತದೆ. ನಮ್ಮ ಹಳ್ಳಿ ಕಡೆ ಒಂದು ಗಾದೆ ಮಾತಿದೆ. "ಮಾಡೋಗಂಟ ಮಾಡಿ, ಮಾರ್ನಾಮಿಯಲ್ಲಿ ಚೇ ಅನಿಸಿಕೊಂಡರು" ಅಂತ. ಇಷ್ಟು ದಿನ ತುಳಿತಕ್ಕೊಳಗಾದ ಸಮುದಾಯಗಳ ಪರ ಮಾತಾಡಿದ ಸಿದ್ದರಾಮಯ್ಯನವರು ಈಗ ಅವರಿಗೆ ದ್ರೋಹವೆಸಗಿದ್ದಾರೆ. ಇನ್ನು ನಾವೆಲ್ಲರೂ ಅಲೆಮಾರಿಗಳ ಪರ ಹೋರಾಟ ಮುಂದುವರೆಸುತ್ತೇವೆ. ಬೀದಿ ಹೋರಾಟದ ಜೊತೆಗೆ ಕಾನೂನು ಹೋರಾಟದ ಸಾಧ್ಯತೆಯನ್ನು ಪ್ರಯತ್ನಿಸುತ್ತೇವೆ. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. 

ರಣರಂಗದಲ್ಲಿ ಎಲ್ಲಾ ಯುದ್ಧಗಳು ಗೆಲ್ಲುವುದಕ್ಕಾಗಿಯೇ ನಡೆಯುವುದಿಲ್ಲ. ಅನ್ಯಾಯದ ವಿರುದ್ಧ ಯುದ್ಧಭೂಮಿಯಲ್ಲಿ ನಮ್ಮವರು ಹೋರಾಡಿದರು ಎಂಬುದನ್ನು ಸಾರುವುದಕ್ಕಾಗಿಯಾದರೂ ನಾವು ಈ ಹೋರಾಟ ಮಾಡಲೇಬೇಕಿದೆ. ದಯವಿಟ್ಟು ಎಲ್ಲಾ ಸಮುದಾಯಗಳ ಪ್ರಜ್ಞಾವಂತರೂ ಈಗ ಅಲೆಮಾರಿಗಳ ಪರ ದನಿ ಎಂದು ಮನವಿ.

-ಮುತ್ತುರಾಜು, ಜಾಗೃತ ಕರ್ನಾಟಕ

***

ಒಳಮೀಸಲಾತಿಯ ಹೋರಾಟಗಾರರಲ್ಲಿ ಬಹಳಷ್ಟು ಜನ ಅಲೆಮಾರಿ ಸೂಕ್ಷ್ಮ ಸಮುದಾಯಗಳನ್ನು ತೋರಿಸಿ ನೋಡಿ ಅಲೆಮಾರಿಗಳು ಇನ್ನೆಷ್ಟು ದಿನ ಬೀದಿ ಮೇಲೆ ದಿಕ್ಕೇಡಿಗಳ ಹಾಗೆ ಬದುಕಬೇಕು. ಅವರಿಗೆ ಅವರ ಪಾಲು ದಕ್ಕಬೇಡವೇ. ಅಲೆಮಾರಿಗಳು ಮುಖ್ಯವಾಹಿನಿಗೆ ಬರಬೇಡವೇ. ಇಲ್ಲಿಯವರೆಗೆ ಪರಿಶಿಷ್ಟರಲ್ಲಿರುವ ಬಲಾಢ್ಯರೇ ಎಲ್ಲ ಸೌಲಭ್ಯಗಳನ್ನು ಪಡೆದಿದ್ದಾರೆ. ಒಳಮೀಸಲಾತಿಯಿಂದ ಸಣ್ಣ ಸಮುದಾಯಗಳಿಗೆ ಮತ್ತು ಅಲೆಮಾರಿಗಳಿಗೆ ನ್ಯಾಯ ದೊರಕುತ್ತದೆ ಎಂದು ಹೇಳುತ್ತಾ ಬರಲಾಗಿತ್ತು.

ಅಲೆಮಾರಿ ಮುಖಂಡರಲ್ಲಿ ಒಂದಷ್ಟು ಜಾಗೃತಗೊಂಡ ಮನಸ್ಸುಗಳು ಒಳಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿ ಹಲಾವಾರು ವರ್ಷಗಳಿಂದ ಹೋರಾಟದಲ್ಲಿ ಪಾಲ್ಗೊಳ್ಳಲಾಗಿತ್ತು. ಹಿರಿಯ ಅಣ್ಣಂದಿರರು ನಮಗೂ ನ್ಯಾಯ ಕೊಡಿಸುತ್ತಾರೆ ಎಂದು ಭಾವಿಸಿದ್ದೆವು. ಆದರೆ ಇಂದು ಒಳಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸರ್ಕಾರ ಬಲಾಡ್ಯರನ್ನು ತೃಪ್ತಿಪಡಿಸಿ ಅಲೆಮಾರಿಗಳನ್ನು ಕಡೆಗಣಿಸಿದೆ.

ಅಲೆಮಾರಿಗಳನ್ನು ಬಲಾಢ್ಯ ಸಮುದಾಯದ ಗ್ರುಪಿನಲ್ಲಿ ಸೇರಿಸುವುದರಿಂದ ಅಲೆಮಾರಿಗಳಿಗೆ ದೊಡ್ಡ ಅನ್ಯಾಯವಾಗುತ್ತದೆ. ಅಲೆಮಾರಿಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳು ಮರೀಚಿಕೆಯಾಗಲಿವೆ.

ಸರ್ಕಾರ ಪುನರ್ ಪರಿಶೀಲನೆ ಮಾಡಿ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯಲ್ಲಿ ತಿಳಿಸಿರುವಂತೆ ಅಲೆಮಾರಿ ಮತ್ತು ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟಾದರೂ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು.

-ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ, ಹೋರಾಟಗಾರರು

***

ಜಸ್ಟಿಸ್ ನಾಗನೋಹನದಾಸ್ ಅವರು ಅಲೆಮಾರಿಗಳಿಗೆ ಹಂಚಿಕೆ ಮಾಡಿದ್ದ 1 ಪರ್ಸೆಂಟ್ ಮೀಸಲಾತಿಗೆ ದಯವಿಟ್ಟು ಕೈ ಹಾಕಬೇಡಿ ಅಂತ ಎಲ್ಲಾ ಸಮುದಾಯಗಳ ಮುಖಂಡರ ಬಳಿ ಅಂಗಲಾಚಿದೆವು.

ನಿನ್ನೆ ಈಥರದ್ದೊಂದು ಹಂಚಿಕೆಯ ನಂಬರ್ ಗೊತ್ತಾದಾಗ, ಇಲ್ಲ‌ ಸಿದ್ಧರಾಮಯ್ಯನವರು ಇದಕ್ಕೆ‌ ಒಪ್ಪಲ್ಲ, ಅಲೆಮಾರಿಗಳಿಗೆ ಅನ್ಯಾಯ ಮಾಡಲ್ಲ ಅಂತ ಕಾದೆವು. ಕೊನೆಗೆ ಅವರ ಬಾಯಿಂದಲೇ ಸಾಮಾಜಿಕ ನ್ಯಾಯದ ಚರಮಗೀತೆಯನ್ನು ಹಾಡಿಸಲಾಯಿತು. ಅರ್ಧ ಗಂಟೆ ಅವಧಿಯಲ್ಲಿ ಒಬ್ಬನೇ ಒಬ್ಬ ಸ್ಪೃಶ್ಯ ಮಂತ್ರಿಯ ಎದುರು ನಮ್ಮ ಅಷ್ಟೂ ಜನ ಅಸ್ಪೃಶ್ಯ ಮಂತ್ರಿಗಳು ಮಂಡಿಯೂರಿದರು. ಆ ಗುಂಪಿನಲ್ಲಿ 14 ಹೊಲೆಯ ಸಂಬಂಧಿತ ಹಾಗೂ 9 ಮಾದಿಗ ಸಂಬಂಧಿತ ಅಲೆಮಾರಿಗಳ ಸಮುದಾಯಗಳಿವೆ. ಕೆಲವು ಹೊಲೆಯ ಮುಖಂಡರು ಅಲ್ಲಿರುವ ನಮ್ಮವರನ್ನು ನಮ್ಮ ಗುಂಪಿಗೆ ಸೇರಿಸಿ ಎಂದಾಗ ದಯವಿಟ್ಟು ಬೇಡ ಅಂತ ಬೇಡಿಕೊಂಡೆವು. ದಶಕಗಳಿಂದ ಹೋರಾಟ ಮಾಡಿಕೊಂಡು ಬಂದ ಮಾದಿಗ ಹಿರಿಯರು ಅವರು ಅಲ್ಲಿದ್ದರೇ ನ್ಯಾಯ ಎಂದು ದೊಡ್ಡತನ ಮೆರೆದರು.

ತಬ್ಬಲಿ ಸಮುದಾಯಗಳ ಕನಸುಗಳಿಗೆ ಕೊಳ್ಳಿ ಇಡಬೇಡಿ. ಮಾದಿಗರು ಇಷ್ಟು ವರ್ಷ ಹೋರಾಡಿದ್ದು ಕೇವಲ ಅವರಿಗಾಗಿ ಅಲ್ಲ. ಅಲೆಮಾರಿಗಳ ತುತ್ತಿಗೂ ಹೌದು. 5 ಪರ್ಸೆಂಟಲ್ಲಿ 2 ಪರ್ಸೆಂಟ್ ಪಾಲನ್ನು ಅಲೆಮಾರಿ ಸಮುದಾಯಗಳಿಗೆ ವಿಂಗಡಿಸಿ ಕೊಡಿ. ಇಲ್ಲವಾದರೆ ನಿಮ್ಮಷ್ಟು ಕ್ರೂರಿಗಳು ಯಾರೂ ಇರುವುದಿಲ್ಲ. ಇದು ಅತ್ಯಂತ ಹೇಯ, ಅಮಾನವೀಯ, ಕ್ರೌರ್ಯ.

-ಹುಲಿಕುಂಟೆ ಮೂರ್ತಿ, ಬರಹಗಾರರು, ಹೋರಾಟಗಾರರು

***

ಒಳಮೀಸಲಾತಿ ವರ್ಗೀಕರಣ ಕಾಂಗ್ರೆಸ್ ಪಕ್ಷ ಜಾರಿ ಮಾಡೇ ಮಾಡುತ್ತದೆ ಎನ್ನುವ ನಮ್ಮ ಭರವಸೆ ಹುಸಿಯಾಗಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಸಮಾಧಾನವಿದೆ. ಆದರೆ ಅಲೆಮಾರಿಗಳಿಗೆ ಆದ ಅನ್ಯಾಯ ನಮಗೆ ತುಂಬಾ ನೋವು ಎನಿಸುತ್ತದೆ.

-ಹನುಮೇಶ್ ಗುಂಡೂರು, ಒಳಮೀಸಲಾತಿ ಹೋರಾಟಗಾರರು

***

ಮಾದಿಗರ ಹಕ್ಕಿನ ಪಾಲನ್ನು ಮಾದಿಗರು ಕೇಳಿ ಸೋತಿದ್ದಾರೆ. ಹೊಲೆಯರ ಪಾಲನ್ನು ಅವರು ಪಡೆದೇ ತೀರಿದ್ದಾರೆ. ಭೋವಿ ಲಂಬಾಣಿಗರ ಹೆಚ್ಚುವರಿ ಪಾಲನ್ನ ದಲಿತೇತರರ ಮಂತ್ರಿಗಳು ಒದಗಿಸಿದ್ದಾರೆ. ಅಬ್ಬೆಪಾರಿ ಅಲೆಮಾರಿಗಳಿಗೆ ಯಾರೂ ಗತಿ ಇಲ್ಲ.

-ಗುರುಪ್ರಸಾದ್ ಕಂಟಲಗೆರೆ, ಬರಹಗಾರರು

***

ಎಡಗೈ, ಬಲಗೈ ಮತ್ತು ಇತರೆ ಪರಿಶಿಷ್ಟ ಜಾತಿಯ ಸಹೋದರರಿಗೆ ಶುಭಾಶಯಗಳು. ಅದರಲ್ಲೂ ಮಾದಿಗ ಸಮುದಾಯದ ಬಂಧುಗಳ ಶ್ರಮಕ್ಕೆ ಫಲ ಸಿಕ್ಕಿದೆ. ಹೀಗೆ ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನಾನು ಸಮುದಾಯವಾದಿ (Communitarian) ಅಲ್ಲ.

ಒಳಮೀಸಲಾತಿಗೆ ಸಂಬಂಧಿಸಿದ ಇಂದಿನ ಕ್ಯಾಬಿನೆಟ್ ನಿರ್ಣಯ ಅಲೆಮಾರಿ ಸಮುದಾಯಗಳನ್ನು ಶಾಶ್ವತವಾಗಿ ಮೂಲೆಗುಂಪು ಮಾಡಲಿದೆ. 1% ಮೀಸಲಾತಿ ಕೊಟ್ಟಿದ್ದರೂ ಅದು ಅಲೆಮಾರಿಗಳಿಗೆ ಪ್ರಯೋಜನವಾಗುತ್ತಿರಲಿಲ್ಲ. ಒಟ್ಟಿನಲ್ಲಿ, ಮೀಸಲಾತಿಯ ಒಳವರ್ಗೀಕರಣವು ಬಹುಸಂಖ್ಯಾತರಿಗಾಗಿ, ಬಹುಸಂಖ್ಯಾತರಿಗೋಸ್ಕರ, ಬಹುಸಂಖ್ಯಾತರನ್ನು ಓಲೈಸುವುದಕ್ಕಾಗಿ ಮಾಡಲಾಗಿದೆ.

ಮೀಸಲಾತಿಯ ಒಳವರ್ಗೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಈ ಕ್ಯಾಬಿನೆಟ್ ನಿರ್ಣಯ ವಿರುದ್ಧವಾಗಿದೆ. ಸಂಸದೀಯ ಪ್ರಜಾಪ್ರಭುತ್ವವು ಬಹುಸಂಖ್ಯಾತರ ಓಲೈಕೆಯಲ್ಲಿಯೇ ನಾಶವಾಗುತ್ತದೆ. ಅಲೆಮಾರಿ ಸಮುದಾಯದ ಬಂಧುಗಳೇ ಸ್ವಾವಲಂಬಿಗಳಾಗಿ.

-ಡಾ. ಎ. ಎಸ್. ಪ್ರಭಾಕರ, ಅಲೆಮಾರಿ ಸಮುದಾಯದ ಬರಹಗಾರರು

***

ಒಳಮೀಸಲಾತಿ: ದನಿ ಸತ್ತ ಅಲೆಮಾರಿಗಳನ್ನು ದಫನ್ ಮಾಡಿದ ಘೋರ ‘ನ್ಯಾಯ’

-ರವಿಕುಮಾರ್ ಟೆಲೆಕ್ಸ್, ಬರಹಗಾರರು, ಪತ್ರಕರ್ತರು

***

ಮೋಸ ಮತ್ತೆ ಅದರಲ್ಲಿಯೂ ಮಹಾ ಮೋಸ

ಮಾನ್ಯ ಸಮಾಜ ಕಲ್ಯಾಣ ಸಚಿವರು ಒಳಮೀಸಲಾತಿಯ ಕ್ಯಾಬಿನೆಟ್ ನೋಟನ್ನು ಸಮಾಜ ಕಲ್ಯಾಣ ಇಲಾಖೆಗೆ ಕಳಿಸುವಾಗ ತಮಗೆ ಇಷ್ಟ ಬಂದಾಗ ನೋಟನ್ನು ರೆಡಿ ಮಾಡಿದ್ದಾರೆ. ಅದು ಕ್ಯಾಬಿನೆಟ್ ಅಲ್ಲಿ ಕೂಡ ಅಪ್ರೂಲ್ ಆಗಿದೆ. ಇದರಿಂದ ಮಾದಿಗ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತಿದೆ. ನೆನ್ನೆ ಈ ರೀತಿ 3 ಗುಂಪುಗಳನ್ನು ಮಾಡಿದ್ದಾರೆ:
A- ಹೊಲೆಯ-ಅತ್ಯಂತ ಹಿಂದುಳಿದ
B- ಮಾದಿಗ – ಹಿಂದುಳಿದ
C- ಭೋವಿ – ಲಂಬಾಣಿ – ಕಡಿಮೆ ಹಿಂದುಳಿದ

ಇದರಿಂದ ಮಾದಿಗ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತದೆ. ಉದಾಹರಣೆಗೆ- ಸರ್ಕಾರಿ ಹುದ್ದೆಯಲ್ಲಿ 1 ಹುದ್ದೆ SC ಗೆ ಇದ್ದಲ್ಲಿ, ಪ್ರಮೋಷನ್ 1 SC ಇದ್ದಾರೆ , ಶಾಲೆಯಲ್ಲಿ ವಿದ್ಯಾರ್ಥಿಗೆ ಒಂದು ಸೀಟಿದ್ದರೆ ಈ ಹುದ್ದೆಗಳು ಅತ್ಯಂತ ಹಿಂದುಳಿದ ಹೊಲೆಯ ಸಮುದಾಯಕ್ಕೆ ಹೋಗುತ್ತದೆ ಹಾಗೂ ರೋಸ್ಟರ್ ಬಿಂದುಗಳನ್ನು ಗುರುತಿಸುವಾಗ ಮೊದಲು ಅತ್ಯಂತ ಹಿಂದುಳಿದ ಸಮುದಾಯ ಹೊಲಯ ಸಮುದಾಯಕ್ಕೆ ಆದ್ಯತೆ ಕೊಡುತ್ತಾರೆ. ಇದರಿಂದ ಮಾದಿಗ ಸಮುದಾಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ. SCP – TSP ಆರ್ಥಿಕ ಯೋಜನೆಗಳಲ್ಲೂ ಹಾಗೆ ಆಗಲಿದೆ. ಇದು, ನಾಗಮೋಹನ ದಾಸ ಆಯೋಗದ ವರದಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿದೆ. ಆದ್ದರಿಂದ ಮಾದಿಗ ಸಮುದಾಯದ ಬಂಧುಗಳು ಕೂಡಲೇ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಬಿಲ್ ಮಂಡಿಸಿ ಪಾಸ್ ಆಗುವ ಮುನ್ನ ಅವರ ಗಮನಕ್ಕೆ ತಂದು ಬದಲಾವಣೆ ಮಾಡಿಸಿ A ಗ್ರೂಪ್ಗೆ ಮಾದಿಗ ಸಮುದಾಯ ಬರಬೇಕು, ಸಂಭ್ರಮ ಪಟ್ಟು ಪಟಾಕಿ ಹೊಡೆಯುವ ಮುನ್ನ ಮುಖ್ಯಮಂತ್ರಿ ಸಮಾಜ ಕಲ್ಯಾಣ ಸಚಿವರನ್ನ ಹೊಗಳುವ ಮುನ್ನ ಒಮ್ಮೆ ಯೋಚಿಸಿ. ಇಲ್ಲವಾದಲ್ಲಿ ಹೈಕೋರ್ಟ್ ಮೊರೆ ಹೋಗಲಾಗುವುದು.

-ಡಾ. ಮರಡೀಪುರ ರವಿಕುಮಾರ್, ಸಾಮಾಜಿಕ ನ್ಯಾಯಪರ ವೇದಿಕೆ, ಮೈಸೂರು

***

‘ಸ್ವರ್ಗ ಹಾಳಾದರೂ ಸರಿಯೇ, ಆದರೆ ನ್ಯಾಯ ಸಿಗಲಿ’ (Fiat justitia ruat caelum) ಎನ್ನುವ ನ್ಯಾಯಪ್ರಜ್ಞೆಯನ್ನು ಮರೆತ ಸಿದ್ದರಾಮಯ್ಯ ಸರ್ಕಾರದ ವಂಚನೆಗಳು:

ವಂಚನೆ 1- ಅತಿ ಹಿಂದುಳಿದಿರುವಿಕೆಗೆ ಆದ್ಯತೆ ಕೊಡುವ ಒಳಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪಿನ preferential reservation ನೀತಿಯನ್ನು ಉಲ್ಲಂಘಿಸಲಾಗಿದೆ. ನಾಗಮೋಹನದಾಸ್ ವರದಿಯನ್ನು ನಿರ್ಲಕ್ಷಿಸಲಾಗಿದೆ.(ಇದಕ್ಕಾಗಿ 17+ ಕೋಟಿ ವೆಚ್ಚ ಮಾಡಿ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದೇಕೆ? ಸಮೀಕ್ಷೆ ನಡೆಸಿದ್ದೇಕೆ?)

ವಂಚನೆ 2- ಅಂಚಿನಲ್ಲಿರುವ ಸಮುದಾಯಗಳು ಕೇಂದ್ರದತ್ತ ಚಲಿಸುವ ಸಾಮಾಜಿಕ ನ್ಯಾಯದ ಆಶಯವನ್ನು ಅಂಚಿನಿಂದಲೇ ತಳ್ಳಲಾಗಿದೆ.

ವಂಚನೆ 3- ಕೊನೆಗೂ ತಮ್ಮ ರಾಜಕಾರಣದ ಮೇಲಾಟಕ್ಕೆ ಅತಿ ಹಿಂದುಳಿದ ಸಮುದಾಯಗಳನ್ನು ಬಲಿ ಮಾಡಿದ್ದಾರೆ.

ವಂಚನೆ 4- ಎಂಪಿರಿಕಲ್ ದತ್ತಾಂಶ ಎನ್ನುವ ತಾತ್ವಿಕತೆಯೇ ನಗೆಪಾಟಲಿಗೆ ಈಡಾಗಿದೆ. ಇದರ ಹೆಸರಿನಲ್ಲಿ ಅತಿ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯದ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಕಡೆಗೂ ಈ 6, 6, 5 ಹಂಚಿಕೆ ಸುಪ್ರೀಂಕೋರ್ಟ್ ನಲ್ಲಿ ನಿಲ್ಲುತ್ತದೆಯೇ ಎನ್ನುವ ಚಿಂತನೆಯನ್ನು ಸಹ ಮಾಡಲಿಲ್ಲವೇ?

ಮಾನ್ಯ ಮುಖ್ಯಮಂತ್ರಿಗಳೇ, ದನಿ ಇಲ್ಲದವರಿಗೆ ದನಿಯಾಗುವುದು ಅಂದರೆ ಅವರ ಪ್ರಾತಿನಿಧ್ಯ ಅವಕಾಶವನ್ನು ಕಿತ್ತುಕೊಳ್ಳುವುದು ಎಂದರ್ಥವೇ? preferential reservationಗೆ ತಿಲಾಂಜಲಿ ಇಟ್ಟು ಸಾಧಿಸಿದ್ದೇನು?

-ಬಿ. ಶ್ರೀಪಾದ ಭಟ್, ಶಿಕ್ಷಣ ತಜ್ಞರು

***

ಅಲೆಮಾರಿಗಳನ್ನು ತೆಗೆದು ಸ್ಪೃಶ್ಯರ ಗುಂಪಿಗೆ ಹಾಕಿದ್ದಾರೆ. ಹೊಲೆಯ ಮತ್ತು ಮಾದಿಗರ ಎದೆಯಲ್ಲಿ ನಿಜಕ್ಕೂ ಬಾಬಾಸಾಹೇಬರು ಇದ್ದರೆ ಈ ಅನ್ಯಾಯವನ್ನು ಒಪ್ಪಬಾರದು. ಎಡ- ಬಲಕ್ಕೆ ಆರು- ಆರು ಕೊಡಲಿ, ತೊಂದರೆ ಇಲ್ಲ. ಆದರೆ ನಮ್ಮ ಅಲೆಮಾರಿಗಳ ಅನ್ನವನ್ನು ಕಿತ್ತು ಸ್ಪೃಶ್ಯರ ಕೈಗೆ ಕೊಟ್ಟರಲ್ಲ, ಇದ್ಯಾವ ನ್ಯಾಯ? ಹೊಟ್ಟೆಯಲ್ಲಿ ಹೇಳಲಾಗದ ಸಂಕಟ. ನಾವು ಇದನ್ನು ಸಂಭ್ರಮಿಸುವುದಾದರೂ ಹೇಗೆ? ಅತ್ಯಂತ ನೋವುಂಡ ಅಲೆಮಾರಿಗಳನ್ನು ಕಂಡು ಬಾಬಾಸಾಹೇಬರ ಪಟ ಅಳುತ್ತಾ ನಿಂತಿತ್ತು.

ಕೊಲಂಬೊಗಳಿಗೆ ಆತ್ಮಸಾಕ್ಷಿ ಇದ್ದರೆ ಅತ್ಯಂತ ನೋವುಂಡ ಅಲೆಮಾರಿಗಳ ಅನ್ನವನ್ನು ಕಿತ್ತು ತಿನ್ನಲಾರರು.

ಅಲೆಮಾರಿಗಳನ್ನು ತಬ್ಬಲಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ.

ಅಲೆಮಾರಿಗಳ ಅನ್ನದ ಬಟ್ಟಲು ಕಿತ್ತು, ಹೊಟ್ಟೆ ತುಂಬಿದವರಿಗೆಯೇ ಮೃಷ್ಟಾನ್ನ ಕೊಟ್ಟ ದರಿದ್ರ ಕಾಂಗ್ರೆಸ್ ಸರ್ಕಾರವೇ, ಬಾಬಾಸಾಹೇಬರ ಮಕ್ಕಳ ನಿದ್ದೆಯನ್ನು ಮತ್ತೆ ಹಾಳು ಮಾಡಿದ್ದೀರಿ. ನಮ್ಮ ಒಡಲ ಸಂಕಟ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಅಲೆಮಾರಿಗಳನ್ನು ತಬ್ಬಲಿ ಮಾಡಿದ ನಿಮ್ಮನ್ನು ಸಮಸ್ತ ಅಸ್ಪೃಶ್ಯ ಸಮುದಾಯಗಳು ಸುಮ್ಮನೇ ಬಿಡುವುದಿಲ್ಲ. ಮೈಕ್ರೋ ಮೈನಾರಿಟೀಸ್‌ಗಳ ಪಾಲನ್ನು ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.

ಅಲೆಮಾರಿಗಳ ಅನ್ನ ಕಿತ್ತುಕೊಂಡವರ
ತಟ್ಟೆಯಲ್ಲಿ
ಬಾಬಾಸಾಹೇಬರ ಕುಡಿಗಳಿಗೆ
ಕಾಣುವುದಿನ್ನು
ಅಲೆಮಾರಿಗಳ
ಬೆವರು, ನಿಟ್ಟುಸಿರು, ಉಚ್ಚೆ, ಹೇಲು
ಹರಿದು ಜೂಲಾದ ಕಪ್ಪಡ
ತಿಂದು ಉಳಿದವರಿಲ್ಲ
ತಬ್ಬಲಿಗಳ ಕಂಬನಿ.

-ಯತಿರಾಜ್ ಬ್ಯಾಲಹಳ್ಳಿ

***

ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ನೂರಾರು ಅಭಿಪ್ರಾಯಗಳು ಹಂಚಿಕೆಯಾಗಿವೆ. ಸರ್ಕಾರ ಮಾಡಿರುವುದು ಮಹಾವಂಚನೆ ಎಂಬ ಆಕ್ರೋಶ ಭುಗಿಲೆದ್ದಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಅಲೆಮಾರಿಗಳು ಧ್ವನಿ ಇಲ್ಲದವರು ಮಾತ್ರ ಅಲ್ಲ ಧ್ವನಿ ಇಲ್ಲ ಅಂತವೂ ಅರಿಯದ ಸಮಾಜ ಈ ಸಮಾಜದ ಅವಗಣನೆ ಸರ್ಕಾರದ ಸಂವೇದನಾಶೀಲತೆಯ ಮೇಲೆ ಸಂಶಯ ಬರುವಂತಿದೆ.

    ಅಲೆಮಾರಿಗಳನ್ನ ತುರ್ತಾಗಿ ಸೂರು ನೀಡಿ ನೆಲೆ ಮಾರಿ ಮಾಡಬೇಕು.
    ಘನತೆಯ ಬದುಕಿಗೆ ದುಡಿಮೆಗೆ ಮಾರ್ಗ ತೋರಬೇಕು.

    ಸರ್ಕಾರ ಮಾತ್ರ ಅಲ್ಲದೆ ಸಮಾಜವು ಮುಂದೆ ಬಂದು ಸಹಕರಿಸಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕದ ಹಲವು ಭಾಗಗಳಲ್ಲಿ ನಿಲ್ಲದ ಮಳೆ, ನದಿ ದಡದ ಹಳ್ಳಿಗಳಲ್ಲಿ ಪ್ರವಾಹದ ಭೀತಿ

ಕರ್ನಾಟಕದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಬೆಳೆಗಳು ಹಾನಿಗೊಳಗಾಗಿವೆ. ಹಲವಡೆ ರಸ್ತೆ...

ಕೊಪ್ಪಳ | ಗವಿಸಿದ್ದಪ್ಪ ಕೊಲೆ ಪ್ರಕರಣ; ಕೋಮುದ್ವೇಷ ಹೇಳಿಕೆ ಆರೋಪ, ಶಾಸಕ ಯತ್ನಾಳ್ ವಿರುದ್ಧ ದೂರು

ಇದೇ ತಿಂಗಳು ಕೋಲಾರ ನಗರದಲ್ಲಿ ಪ್ರೀತಿ ವಿಚಾರಕ್ಕೆ ಕೊಲೆಯಾದ ಗವಿಸಿದ್ದಪ್ಪ ನಾಯಕರ...

₹56 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಪಡೆದರೂ ಅಭಿವೃದ್ಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ರಾಜ್ಯದ ಜನರಿಂದ ಹೆಚ್ಚುವರಿಯಾಗಿ 56 ಸಾವಿರ ಕೋಟಿ ತೆರಿಗೆ ವಸೂಲಿ ಮಾಡುತ್ತಿದ್ದರೂ,...

ದಾವಣಗೆರೆ | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬಳು ಗೃಹಿಣಿ ಬಲಿ

ಸಾಲದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಸಾಲು ವಸೂಲಾತಿಗಾಗಿ ಮೈಕ್ರೋ...

Download Eedina App Android / iOS

X