ಸಮುದಾಯದ ಭಾಗವಾಗಿರುವ ನಾರಾಯಣಸ್ವಾಮಿಯವರು ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಾವೇ ನಿಂತು ಕಾರ್ಯಕ್ರಮವನ್ನು ಮಾಡಿದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಈಗ ಜಾರಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ದ್ವಂದ್ವ ನೀತಿ ಅಲ್ಲವೇ? ಇವರು ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಇಡಬ್ಲ್ಯಎಸ್ ಜಾರಿಗೆ ತಂದರು. ಆದರೆ ಒಳಮೀಸಲಾತಿ ವಿಚಾರದಲ್ಲಿ ಸಬೂಬು ಹೇಳುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ
“ಸಂವಿಧಾನದಲ್ಲಿ ಈಗಿರುವ ಅವಕಾಶಗಳಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಾಗದು. 13 ರಾಜ್ಯಗಳು ಒಳಮೀಸಲಾತಿಗೆ ವಿರುದ್ಧ ಇವೆʼʼ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಸಚಿವ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.
26-07-2023ರಂದು ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರಾದ ಜಿ.ವಿ.ಎಲ್.ನರಸಿಂಹರಾವ್ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವ ಅವರು, “ಸಂವಿಧಾನದಲ್ಲಿ ಈಗಿರುವ ಅವಕಾಶಗಳಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಾಗದುʼʼ ಎಂದಿದ್ದಾರೆ.
“ಇದರ ಬಗ್ಗೆ ರಚಿಸಲಾಗಿದ್ದ ರಾಷ್ಟ್ರೀಯ ಆಯೋಗವು ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ಸಂವಿಧಾನದ ಆರ್ಟಿಕಲ್ 341ಕ್ಕೆ ತಿದ್ದುಪಡಿ ತರಲು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೋರಲಾಗಿತ್ತು. ಈವರೆಗೆ 20 ರಾಜ್ಯ ಸರ್ಕಾರಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ. ಅದಲ್ಲಿ 7 ರಾಜ್ಯಗಳು ಒಳಮೀಸಲಾತಿಯ ಪರವಾಗಿಯೂ, 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಒಳಮೀಸಲಾತಿಯ ವಿರುದ್ಧವಾಗಿಯೂ ಅಭಿಪ್ರಾಯಗಳನ್ನು ನೀಡಿವೆʼʼ ಎಂದು ವಿವರಿಸಿದ್ದಾರೆ.
“ಹಾಲಿ ಈ ವಿಷಯವು ಸಬ್ -ಜುಡೀಸ್ – ನ್ಯಾಯಾಲಯಾಧೀನ -ಆಗಿದೆ. ಐವರು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಏಳು ನ್ಯಾಯಾಧೀಶರ ಅಥವಾ ಹೆಚ್ಚಿನ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿದೆʼʼ ಎಂದು ತಿಳಿಸಿದ್ದಾರೆ.
ಬಿಜೆಪಿಯ ಸದಸ್ಯರಾದ ಜಿ.ವಿ.ಎಲ್.ನರಸಿಂಹರಾವ್, “ಒಳಮೀಸಲಾತಿಯ ಬಗ್ಗೆ ಈವರೆಗೆ ಬೇರೆಬೇರೆ ರಾಜ್ಯಗಳು ನೀಡಿರುವ ಅಭಿಪ್ರಾಯವೇನು? ಕೇಂದ್ರ ಸರ್ಕಾರದ ಮುಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಅಧಿಕಾರ ನೀಡುವ ಯೋಜನೆ ಇದೆಯೇ? ಯೋಜನೆಯಿದ್ದಲ್ಲಿ ಎಷ್ಟು ಕಾಲಾವಧಿಯೊಳಗೆ ಅದು ಜಾರಿಯಾಗಲಿದೆ?ʼʼ ಎಂದು ಪ್ರಶ್ನಿಸಿದ್ದರು.
ಕೇಂದ್ರ ಸಚಿವರ ಸ್ಪಷ್ಟೀಕರಣಕ್ಕೆ ಒಳಮೀಸಲಾತಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈದಿನ.ಕಾಂನೊಂದಿಗೆ ಮಾತನಾಡಿದ ಹಿರಿಯ ಹೋರಾಟಗಾರ ಎಸ್.ಮಾರಪ್ಪ, “ಒಳ ಮೀಸಲಾತಿಯನ್ನು ವಿರೋಧಿಸಿರುವ 13 ರಾಜ್ಯಗಳಲ್ಲಿ ಕನಿಷ್ಠ 5 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವುಗಳು ಬೆಂಬಲ ನೀಡಿದರೆ ಒಳಮೀಸಲಾತಿ ಪರ ಇರುವವರ ಸಂಖ್ಯೆ 12ಕ್ಕೆ ಏರಿಕೆಯಾಗುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಬೆಂಬಲ ನೀಡಬೇಕಲ್ಲವೇ? ರಾಜ್ಯ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಅನೇಕ ನಾಯಕರು ಒಳಮೀಸಲಾತಿ ನೀಡುತ್ತೇವೆ ಎಂದಿದ್ದರಲ್ಲವೇ? ನಮ್ಮ ಸಂವಿಧಾನದಲ್ಲಿ ಯಾವುದಕ್ಕೂ ಅವಕಾಶ ಇಲ್ಲ ಎನ್ನಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ಫ್ಲೆಕ್ಸಿಬಲ್ ಇದೆ. ತಿದ್ದುಪಡಿಗಳನ್ನು ತರಬಹುದು. ಉದ್ದೇಶಪೂರ್ವಕವಾಗಿಯೇ ಇದನ್ನೆಲ್ಲ ಮಾಡುತ್ತಿದ್ದಾರೆ ಅನಿಸುತ್ತದೆ. ಒಳಮೀಸಲಾತಿ ಜಾರಿಗೆ ಕ್ರಮ ಜರುಗಿಸದಿದ್ದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ವಿರುದ್ಧ ಖಂಡಿತವಾಗಿಯೂ ಜಾಗೃತಿ ಅಭಿಯಾನ ಮಾಡಿ, ಅವರನ್ನು ಮನೆಗೆ ಕಳಿಸುತ್ತೇವೆʼʼ ಎಂದು ಎಚ್ಚರಿಸಿದರು.
ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ರಾಜ್ಯ ಬಿಜೆಪಿ ನಾಯಕರು ಚುನಾವಣಾ ಹೊಸ್ತಿಲಲ್ಲಿ ಕೈಗೊಂಡಿರುವ ನಿರ್ಧಾರ ಬೋಗಸ್ ಎಂದು ನಾವು ಚುನಾವಣೆ ಪೂರ್ವದಲ್ಲಿಯೇ ಹೇಳಿದ್ದು ಈಗ ನಿಜವಾಗಿದೆʼʼ ಎಂದು ಟೀಕಿಸಿದರು.

“ಸಮುದಾಯದ ಭಾಗವಾಗಿರುವ ನಾರಾಯಣಸ್ವಾಮಿಯವರು ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಾವೇ ನಿಂತು ಕಾರ್ಯಕ್ರಮವನ್ನು ಮಾಡಿದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಈಗ ಜಾರಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ದ್ವಂದ್ವ ನೀತಿ ಅಲ್ಲವೇ? ಇವರು ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಇಡಬ್ಲ್ಯಎಸ್ ಜಾರಿಗೆ ತಂದರು. ಆದರೆ ಒಳಮೀಸಲಾತಿ ವಿಚಾರದಲ್ಲಿ ಸಬೂಬು ಹೇಳುತ್ತಿದ್ದಾರೆʼʼ ಎಂದು ಬೇಸರ ವ್ಯಕ್ತಪಡಿಸಿದರು.
“ತಮ್ಮ ನಿಲುವನ್ನು ಈಗ ಸ್ಪಷ್ಟಪಡಿಸಿದ್ದಾರೆ. ಇವರಿಗೆ ಜನರು ಪಾಠ ಕಲಿಸುತ್ತಾರೆ. ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ ಸರ್ಕಾರವು ಯಾವ ಹೆಜ್ಜೆಯನ್ನು ಇಡುತ್ತದೆ ಎಂಬುದನ್ನು ಗಮನಿಸುತ್ತಿದ್ದೇವೆ. ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯಗಳನ್ನು ಪಕ್ಕಕ್ಕಿಟ್ಟು, ಮೀಸಲಾತಿ ವರ್ಗೀಕರಣಕ್ಕೆ ರಾಜ್ಯಗಳಿಗಿರುವ ಪರಮಾಧಿಕಾರದ ಸಂಬಂಧ ಮಾತನಾಡಬೇಕಿದೆʼʼ ಎಂದರು.
ಕೇಂದ್ರ ಸರ್ಕಾರದ ನಿಲವಿನ ಸಂಬಂಧ ಪ್ರತಿಕ್ರಿಯೆ ನೀಡಿರುವ ಚಿಂತಕರಾದ ಶಿವಸುಂದರ್, “ಇಷ್ಟು ದಿನಗಳ ಕಾಲ ತಾನು ಒಳಮೀಸಲಾತಿಯ ಪರ ಎಂದು ಸೋಗಲಾಡಿ ನಿಲುವನ್ನು ತೋರುತ್ತಿದ್ದ ಬಿಜೆಪಿಯ ಅಸಲಿಯತ್ತು ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಬಯಲಾಗಿದೆʼʼ ಎಂದಿದ್ದಾರೆ.
“ಒಳಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ತರುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರವನ್ನೇ ಕೊಡದೆ ಜಾರಿಕೊಂಡಿದೆ. ಅಷ್ಟು ಮಾತ್ರವಲ್ಲ. ಈ ವಿಷಯವು ಸಬ್ ಜುಡೀಸ್- ಅರ್ಥಾತ್ ನ್ಯಾಯಾಲಯದ ಅಧೀನದಲ್ಲಿರುವುದರಿಂದ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಸುಪ್ರೀಂ ಕೋರ್ಟಿನ ಅಧೀನದಲ್ಲಿರುವ ಅಥವಾ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಅದಕ್ಕೆ ತದ್ವಿರುದ್ಧವಾದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲವೇ?ʼʼ ಎಂದು ಪ್ರಶ್ನಿಸಿದ್ದಾರೆ.
“ಇತಿಹಾಸದಲ್ಲಿ ಸಂಸತ್ತು ತನ್ನ ಸಾರ್ವಭೌಮತೆಯನ್ನು ಚಲಾಯಿಸಿ ಸಂವಿಧಾನ ತಿದ್ದುಪಡಿಯ ಮೂಲಕ ಸುಪ್ರೀಂ ಕೋರ್ಟ್ ಆದೇಶಗಳನ್ನು ಅಮಾನ್ಯಗೊಳಿಸಿಲ್ಲವೇ? ಅಷ್ಟೆಲ್ಲ ಏಕೆ, ದೆಹಲಿ ಸರ್ಕಾರಕ್ಕೆ ಅಧಿಕಾರಿಶಾಹಿಯ ಮೇಲಿನ ಅಧಿಕಾರದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೂ ಮೋದಿ ಸರ್ಕಾರ ಅದನ್ನು ಅಮಾನ್ಯಗೊಳಿಸಲು ಸುಗ್ರೀವಾಜ್ಞೆ ತರಲಿಲ್ಲವೇ? ಈಗ ಅದನ್ನು ಸಂಸತ್ತಿನಲ್ಲಿ ಮಸೂದೆಯಾಗಿ ಮಂಡಿಸುತ್ತಿಲ್ಲವೇ? ಸುಪ್ರೀಂ ಕೋರ್ಟಿನ ಉನ್ನತ ಪೀಠ ಈ ವಿಷಯದಲ್ಲಿ ಇನ್ನು ರಚನೆಯೇ ಆಗಿಲ್ಲ. ಆದರೆ ಸುಪ್ರೀಂ ಪೀಠ ವಿಚಾರಣಾ ನೋಟಿಸ್ ಕೊಟ್ಟ ವಿಷಯಗಳಲ್ಲೂ ಸಂಸತ್ತು ಕಾನೂನು ಮಾಡಿಲ್ಲವೇ? ಸಂವಿಧಾನ ತಿದ್ದುಪಡಿಗಳನ್ನು ಮಾಡಿಲ್ಲವೇ?ʼʼ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಇದನ್ನು ಓದಿ ಈ ದಿನ ಸಂಪಾದಕೀಯ | ‘ಮೇಲ್ಜಾತಿ ಬಿಗಿಮುಷ್ಠಿ’ಯಲ್ಲಿ ಹೈಕೋರ್ಟುಗಳು-ಬಹುಜನರೇಕೆ ದೂರ ದೂರ?
“ಮೋದಿ ಸರ್ಕಾರ ಒಳಮೀಸಲಾತಿ ನಿರಾಕರಿಸಲು ಸಬ್ ಜುಡೀಸ್ ಸಬೂಬು ಹೇಳುತ್ತಿದೆಯಷ್ಟೆ. ಅದರ ಜೊತೆಗೆ 20 ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಒಪ್ಪಿರುವುವು ಕೇವಲ 7 ರಾಜ್ಯಗಳು- ಉಳಿದ 13 ರಾಜ್ಯಗಳು ವಿರೋಧಿಸಿವೆ ಎಂಬ ನೆಪವನ್ನೂ ಈಗ ಮೋದಿ ಸರ್ಕಾರ ಮುಂದಿಟ್ಟಿದೆ. ವಾಸ್ತವದಲ್ಲಿ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಪೀಠ ಮುಖ್ಯ ನ್ಯಾಯಾಧೀಶರಿಗೆ ಈ ವಿಷಯದ ಬಗ್ಗೆ, ಏಳು ನ್ಯಾಯಾಧೀಶರ ಪೀಠ ರಚಿಸಲು ಸಲಹೆ ಮಾಡಿದ್ದು 2020ರ ಆಗಸ್ಟ್ 20 ರಂದು. ದೇವಿಂದರ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ. ಹಾಗಿದ್ದರೂ ಕೂಡ ಕಳೆದ ಎರಡು ವರ್ಷಗಳಲ್ಲಿ ಒಳಮೀಸಲಾತಿ ವಿಷಯವು ಸಬ್ ಜುಡೀಸ್ ಆಗಿದೆ ಎಂದು ಒಮ್ಮೆಯೂ ಹೇಳದೆ ಕರ್ನಾಟಕದ ಬಿಜೆಪಿ, ಸಂಘಪರಿವಾರ ಮತ್ತು ಕೇಂದ್ರದ ಮೋದಿ ಸರ್ಕಾರ ಒಳಮೀಸಲಾತಿ ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದೇಕೆ?ʼʼ ಎಂದು ಕೇಳಿದ್ದಾರೆ.
“ಇದೆ ಪ್ರಶ್ನೆಯನ್ನು ಹೋರಾಟಗಾರರು ಕೇಳಿದಾಗ ಸಂವಿಧಾನ ತಿದ್ದುಪಡಿಯನ್ನು ಮಾಡದೆ, ಸುಪ್ರೀಂ ಕೋರ್ಟಿಗೂ ಹೋಗದೆ ಹೇಗೋ ಒಳಮೀಸಲಾತಿ ಕೊಟ್ಟೆ ತೀರುವುದಾಗಿ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಸಮುದಾಯಕ್ಕೆ ಮೋಸ ಮಾಡಿದ್ದೇಕೆ? ಸಂಘಪರಿವಾರ ಉತ್ತರಿಸುತ್ತದೆಯೇ?” ಎಂದಿದ್ದಾರೆ.