ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು

Date:

Advertisements
"ನಮ್ಮ ವ್ಯವಸ್ಥೆಯು ನಗರ ಪ್ರದೇಶವನ್ನು ಬಹಳ ಲಘುವಾಗಿ ತೆಗೆದುಕೊಂಡಿದೆ. ಆದರೆ ವಾಸ್ತವದಲ್ಲಿ ದೊಡ್ಡ ಮಟ್ಟದ ಅಸ್ಪೃಶ್ಯತೆ ಇಲ್ಲಿದೆ" ಎನ್ನುತ್ತಾರೆ ಜಸ್ಟಿಸ್ ನಾಗಮೋಹನ ದಾಸ್

“ಇಲ್ಲ ರೀ, ನಾವು ಎಸ್ಸಿಗಳಲ್ಲ” ಅನ್ನುತ್ತಾನೆ ಆ ಹುಡುಗ. “ಜಾತಿ ಯಾವುದಾದರೂ ಇರಲಿ, ನೀವು ಹೇಳಬೇಕು ಸಾರ್, ಎಸ್ಸಿಗಳಾದರೆ ಮಾತ್ರ ವಿವರ ಬರೆದುಕೊಳ್ತೀವಿ. ಮಾಹಿತಿ ಪಡೆದುಕೊಳ್ತೀವಿ” ಎನ್ನುತ್ತಾರೆ ಗಣತಿಗೆ ಬಂದಿದ್ದ ಆ ಶಿಕ್ಷಕಿ. ಸ್ವಲ್ಪ ಯೋಚಿಸಿದ ಬಳಿಕ, “ಇಲ್ಲ ರೀ, ನಾವು ಊರಲ್ಲೇ ಮಾಹಿತಿ ಕೊಡ್ತಾ ಇದ್ದೀವಿ. ನಮ್ಮದೇನು ಬರೆದುಕೊಳ್ಳಬೇಡಿ. ನಾವು ಬಾಡಿಗೆ ಮನೇಲಿ ಇರೋರು” ಎಂದು ಮರು ಉತ್ತರಿಸಿ ಗಣತಿದಾರರನ್ನು ವಾಪಸ್ ಕಳುಹಿಸುತ್ತಾನೆ ಆ ಯುವಕ.

“ನಮ್ಮದು ಗೌಡ ಜಾತಿಯೆಂದು ಹೇಳಿಕೊಂಡು ಮೂರು ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದೇವೆ. ನಮ್ಮ ಮನೆ ಓನರ್ ಮಾಂಸಾಹಾರ ತಿನ್ನುವ ಸವರ್ಣೀಯರು. ಮನೆಯಲ್ಲಿ ಹಬ್ಬಹರಿದಿನ, ವಿಶೇಷ ಅಡುಗೆಗಳನ್ನು ಮಾಡಿದಾಗ ಒಳಗೆ ಕರೆಸಿಕೊಂಡು ಕೂರಿಸಿ ಊಟ ಹಾಕ್ತಾರೆ. ಈಗ ನಮ್ಮ ಜಾತಿ ಗೊತ್ತಾದರೆ ಯಾವ ರೀತಿ ವರ್ತಿಸುತ್ತಾರೋ ಅನ್ನೋ ಭಯ” ಎಂದು ಹೆಸರು ಹೇಳಲಿಚ್ಛಿಸದ ಆ ದಲಿತ ಹುಡುಗರು ‘ಈದಿನ’ದೊಂದಿಗೆ ತಮ್ಮ ಸಂಕಷ್ಟವನ್ನು ಹಂಚಿಕೊಂಡರು.

ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಈ ಮೂವರು ದಲಿತ ಯುವಕರ ಸ್ಥಿತಿ, ಬೇರೆ ದಲಿತರಿಗಿಂತ ಭಿನ್ನವೇನೂ ಅಲ್ಲ. ತಮ್ಮ ಅಸ್ಮಿತೆಯನ್ನು ಮುಚ್ಚಿಟ್ಟು ಬದುಕುವ ಸಂದಿಗ್ಧತೆ ಅವರದ್ದು. ಊರು ಬಿಟ್ಟು ಬೆಂಗಳೂರು ಸೇರಿದವರು, ತಮ್ಮ ಸ್ವಗ್ರಾಮದಲ್ಲೇ ಒಳಮೀಸಲಾತಿ ಸಮೀಕ್ಷೆಗೆ ವಿವರಗಳನ್ನು ನೀಡಬಹುದು. ಆದರೆ ಜಾತಿಯನ್ನು ಮುಚ್ಚಿಟ್ಟು ಬದುಕುವಂತಹ ಇಕ್ಕಟ್ಟಿನ ವಾಸ್ತವಗಳಿಗೆ ಸಮೀಕ್ಷೆಯು ಕನ್ನಡಿ ಹಿಡಿದು ತೋರಿಸಿದೆ.

Advertisements

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕೆ ರಚನೆಯಾಗಿರುವ ಜಸ್ಟಿಸ್ ನಾಗಮೋಹನ್ ದಾಸ್ ಏಕಸದಸ್ಯ ಆಯೋಗವು ನಡೆಸುತ್ತಿರುವ ಮನೆಮನೆ ಸಮೀಕ್ಷೆಯು ಬೆಂಗಳೂರು ನಗರದಲ್ಲಿ ಕಗ್ಗಂಟಾಗಿ ಪರಿಣಮಿಸಿದೆ. ಆಯೋಗವು ನಿರೀಕ್ಷಿಸಿದಷ್ಟು ಯಶಸ್ಸು ರಾಜಧಾನಿಯಲ್ಲಿ ಸಿಗುತ್ತಿಲ್ಲ.

“ನಗರದಲ್ಲಿ ಜಾತಿ ಹೇಳಿಕೊಂಡು ಬದುಕೋದು ದಲಿತರಿಗೆ ಕಷ್ಟಕಂಡ್ರಿ” ಎನ್ನುವ ಭಾವನೆ ಶಿಕ್ಷಿತ ದಲಿತರದ್ದು.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಆಗಿರುವ ವರದಿಯೂ ಇಂತಹದ್ದೇ ಸಂಕಟಗಳನ್ನು ತೆರೆದಿಟ್ಟಿರುವುದನ್ನು ನೋಡಬಹುದು. ದಲಿತರೆಂದರೆ ಎಂದಿಗೂ ಕೊಳಗೇರಿಗಳಲ್ಲೇ ವಾಸಿಸುವಂತಹ ಮಂದಿ; ಅವರಿಗೆ ಯೋಗ್ಯ ಬದುಕು ಇರಲಾರದು ಎಂಬ ಸೀಮಿತ ಗ್ರಹಿಕೆ ಸಮಾಜದಲ್ಲಿ ಬೇರೂರಿರುವುದನ್ನು ಆ ವರದಿಯಲ್ಲಿ ಪ್ರಸ್ತಾಪಿಸಿರುವ ಘಟನೆಯೊಂದು ಸ್ಪಷ್ಟವಾಗಿ ಹೇಳುತ್ತಿದೆ. “ಜಯನಗರ ವ್ಯಾಪ್ತಿಯಲ್ಲಿನ ಬ್ಯಾಂಕ್ ನೌಕರರ ಬಡಾವಣೆ ಒಂದರಲ್ಲಿ ಸಮೀಕ್ಷೆ ನಡೆಸುವಾಗ ಮನೆ ಮಾಲೀಕರೇ ಹೊರಬಂದು, ‘ಇಲ್ಲಿ ಯಾರೂ ಎಸ್ಸಿಗಳಿಲ್ಲ’ ಎಂದು ಹೇಳಿದರು. ಆ ಬಡಾವಣೆಯಲ್ಲಿದ್ದ ಕೆಲವು ಅಪಾರ್ಟ್‌ಮೆಂಟ್‌ಗಳ ಆವರಣ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಬಿಡಲೇ ಇಲ್ಲ. ‘ಇಲ್ಲಿ ಯಾರೂ ಎಸ್ಸಿಗಳಿಲ್ಲ. ಯಾರೂ ಮಾಹಿತಿ ಕೊಡುವುದಿಲ್ಲ’ ಎಂದು ಹೇಳಿದರು. ಪರಿಶಿಷ್ಟ ಜಾತಿಯೇತರರ ಮಾಹಿತಿಯನ್ನೂ ಕಲೆ ಹಾಕಬೇಕು ಎಂದು ತಿಳಿಸಿದಾಗಲೂ ಪ್ರವೇಶ ನಿರಾಕರಿಸಿದರು. ಆದರೆ, ಬಡಾವಣೆಯಿಂದ ಹೊರಬಂದು ಸಮೀಕ್ಷೆ ಮುಂದುವರೆಸುವಾಗ ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಮಾಹಿತಿ ನೀಡಿದರು.” ಇದು ದಲಿತರ ಸ್ಥಿತಿಯಾಗಿದೆ.

ಇದನ್ನೂ ಓದಿರಿ: ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ | ಕಾಯ್ದೆ ಏನು ಹೇಳುತ್ತದೆ, ಯಾರಿಗೆಲ್ಲ ಅನುಕೂಲವಾಗುತ್ತದೆ?

ಈ ಎಲ್ಲವನ್ನೂ ಜಸ್ಟಿಸ್ ನಾಗಮೋಹನ ದಾಸ್ ಏಕಸದಸ್ಯ ಆಯೋಗ ಹೇಗೆ ನಿಭಾಯಿಸುತ್ತಿದೆ, ಸ್ಪಷ್ಟ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

justice das 2
ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್

‘ಈದಿನ ಡಾಟ್ ಕಾಮ್’ ಜೊತೆ ಮಾತನಾಡಿದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರು, “ನಗರ ಪ್ರದೇಶದಲ್ಲಿ ಪರಿಶಿಷ್ಟರು ತಮ್ಮ ಜಾತಿಯನ್ನು ಹೇಳಿಕೊಳ್ಳಲು ಮುಜುಗರಪಡುತ್ತಿದ್ದಾರೆ ಎಂಬುದು ಸತ್ಯ. ನಮ್ಮ ವ್ಯವಸ್ಥೆಯು ನಗರ ಪ್ರದೇಶವನ್ನು ಬಹಳ ಲಘುವಾಗಿ ತೆಗೆದುಕೊಂಡಿದೆ. ಆದರೆ ವಾಸ್ತವದಲ್ಲಿ ದೊಡ್ಡ ಮಟ್ಟದ ಅಸ್ಪೃಶ್ಯತೆ ಇಲ್ಲಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ನಾವು ಸಮೀಕ್ಷೆಗಾಗಿ ಅಪಾರ್ಟ್‌ಮೆಂಟ್‌ಗಳಿಗೆ ಹೋದ ಸಂದರ್ಭದಲ್ಲಿ, ನಮ್ಮಲ್ಲಿ ಯಾರೂ ಎಸ್‌ಸಿಗಳಿಲ್ಲ ವಾಪಸ್ ಹೋಗಿ ಎನ್ನುತ್ತಿದ್ದಾರೆ. ಕೆಲವು ಖಾಸಗಿ ಲೇಔಟ್‌ಗಳಲ್ಲಿ, ನಮ್ಮಲ್ಲಿ ಎಸ್‌ಸಿಗಳಿಗೆ ಎಂಟ್ರಿಯನ್ನೇ ಕೊಟ್ಟಿಲ್ಲ ಎನ್ನುತ್ತಾರೆ. ನಮ್ಮ ಸಮಾಜ ಎಲ್ಲಿದೆ ನೋಡಿ” ಎಂದು ವಿಷಾದದಿಂದ ನುಡಿದರು.

“ಈ ಎಲ್ಲ ಸಮಸ್ಯೆಗಳ ನಡುವೆಯೂ ಇನ್ನೈದು ದಿನಗಳಲ್ಲಿ ಶೇ.90 ಸಮೀಕ್ಷೆಯನ್ನು ರಾಜ್ಯದಲ್ಲಿ ಪೂರೈಸಲಿದ್ದೇವೆ. ಬೆಂಗಳೂರಿನಲ್ಲಿ ಒಂದಿಷ್ಟು ಕೊರತೆಯಾಗಬಹುದು. ಆದರೂ ಅದನ್ನು ಸರಿಪಡಿಸುವ ಹಲವು ವಿಶೇಷ ಕ್ರಮಗಳನ್ನು ನಾವು ಕಂಡುಕೊಳ್ಳುತ್ತಿದ್ದೇವೆ” ಎಂದು ವಿವರಿಸಿದರು.

“ನಿಗದಿತ ಸ್ಲಮ್‌ಗಳನ್ನು ಬಲ್ಲ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರನ್ನು ಗಣತಿದಾರರ ಜೊತೆಯಲ್ಲಿ ಕಳುಹಿಸಲು ಮುಂದಾಗಿದ್ದೇವೆ. ಮನೆಮನೆ ಸಮೀಕ್ಷೆಯ ಬಳಿಕ ತೆರೆಯಲಾಗುವ ಶಿಬಿರಗಳಲ್ಲಾದರೂ ಜಾತಿಯನ್ನು ದಾಖಲಿಸಿ ಎಂದು ಒತ್ತು ನೀಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ 23 ಲಕ್ಷ ಎಸ್‌ಸಿ, ಎಸ್‌ಟಿ ಕುಟುಂಬಗಳಿವೆ. ನಾವು ಮಾಡಿರುವ ಸರ್ವೇಗೂ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಗೂ ತಾಳೆ ನೋಡಿದಾಗ 4 ಲಕ್ಷ ವ್ಯತ್ಯಾಸ ಕಂಡು ಬರುತ್ತಿದೆ. ಅದರಲ್ಲಿ ಎಸ್‌ಟಿ ಮತ್ತು ಇತರ ಕೆಲವು ಕುಟುಂಬಗಳನ್ನು ತೆಗೆದು ಹಾಕಿದರೂ ಇನ್ನೆರಡು ಲಕ್ಷ ಜನರ ಫೋನ್ ನಂಬರ್‌ಗಳು ನಮ್ಮ ಬಳಿ ಇವೆ. ನಾವು ಇವತ್ತಿಂದಲೇ ಕಾಲ್ ಅಥವಾ ಮೆಸೇಜ್ ಮಾಡಿ, ‘ಶಿಬಿರಕ್ಕೆ ಬಂದು ಸಮೀಕ್ಷೆಯಲ್ಲಿ ಭಾಗಿಯಾಗಿರಿ’ ಎಂದು ಕೋರಲಿದ್ದೇವೆ. ನಮಗೆ ಇನ್ನೂ ಐದು ದಿನ ಅವಕಾಶಗಳಿವೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ‘ಆಪರೇ‍ಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ

“ಆನ್‌ಲೈನ್‌ನಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ಬಂದಿಲ್ಲ. ನೋಂದಣಿ ಕಡಿಮೆಯಾಗಿದೆ. ಆಧಾರ್, ರೇಷನ್ ಕಾರ್ಡ್‌ಗಳ ವೆರಿಫೈನಲ್ಲಿ ಆಗಿರುವ ತಾಂತ್ರಿಕ ದೋಷಗಳು ಇದಕ್ಕೆ ಕಾರಣ. ಹೀಗಾಗಿ ಮನೆಮನೆ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿದ್ದೇವೆ. ಯಾದಗಿರಿ, ಗುಲಬರ್ಗಾ, ಬೀದರ್ ಈ ಪ್ರದೇಶಗಳಲ್ಲಿ ಹಲವು ಎಸ್‌ಸಿ ಕುಟುಂಬಗಳು ಮುಂಬೈ, ಹೈದ್ರಾಬಾದ್ ಥರದ ನಗರಗಳಿಗೆ ವಲಸೆ ಹೋಗಿವೆ. ಒಟ್ಟಾರೆಯಾಗಿ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮವಾಗಿ ಸಮೀಕ್ಷೆಯಾಗಿದೆ. ಆದರೆ ನಗರ ಪ್ರದೇಶದಲ್ಲಿ ಉತ್ತಮಪಡಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇಡೀ ರಾಜ್ಯದಲ್ಲಿ 24,70,000 ಮನೆಗಳ ಸಮೀಕ್ಷೆಯನ್ನು ನಾವು ದಾಟಿದ್ದೇವೆ” ಎಂದು ಮಾಹಿತಿ ಹಂಚಿಕೊಂಡರು.

ಸರ್ಕಾರ ಮತ್ತು ಆಯೋಗವು ಪ್ರಾಮಾಣಿಕವಾಗಿ ಸಮೀಕ್ಷೆಯನ್ನು ನಡೆಸಲು, ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿವೆ. ಆದರೆ ಜಾತಿ ಎಂಬ ವಿಷವರ್ತುಲದಲ್ಲಿ ತಮ್ಮ ಅಸ್ಮಿತೆಯನ್ನು ಹೇಳಿಕೊಳ್ಳಲಾಗದ ಸಂದಿಗ್ಧತೆಯಲ್ಲಿ ದಲಿತರು ನರಳುವಂತಾಗಿದೆ. ಸವರ್ಣೀಯರು ಹೆಮ್ಮೆಯಿಂದ ತಮ್ಮ ಜಾತಿಗಳ ಸರ್‌ನೇಮ್‌ ಹಾಕಿಕೊಳ್ಳುವ ಇಂದಿನ ಕಾಲದಲ್ಲಿ, ದಲಿತರು ತಮ್ಮ ಗುರುತುಗಳನ್ನು ಮುಚ್ಚಿಟ್ಟು ಬದುಕುತ್ತಿರುವುದು ಸಮಾಜದ ವಾಸ್ತವಗಳಿಗೆ ದರ್ಪಣ ಹಿಡಿದಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X