ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

Date:

Advertisements
'ಸಿ' ಮತ್ತು 'ಡಿ' ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ ಸಮುದಾಯಗಳಿಗೆ ಹೋಲಿಸಿದರೆ ಎಕೆ, ಎಡಿ ಎಂದು ಗುರುತಿಸಿಕೊಂಡಿರುವವರೇ ಉದ್ಯೋಗದಲ್ಲಿ ಹೆಚ್ಚು ಪಾಲು ಪಡೆದಿರುವುದು ಕಂಡು ಬಂದಿದೆ

ಆದಿ ಕರ್ನಾಟಕ (ಎಕೆ), ಆದಿ ದ್ರಾವಿಡ (ಎಡಿ), ಆದಿ ಆಂಧ್ರ (ಎಎ) ಸಮಸ್ಯೆ ಬಗೆಹರಿಸಿದ ಬಳಿಕವೇ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಸಾಧ್ಯ ಎಂಬ ಕಾರಣಕ್ಕೆ ಜಸ್ಟಿಸ್ ಎಚ್‌.ಎನ್. ನಾಗಮೋಹನ ದಾಸ್ ಆಯೋಗವು ಸಮೀಕ್ಷೆ ನಡೆಸಿತು. ಆದರೆ ಸರ್ವೇ ವೇಳೆಯಲ್ಲೂ 4,74,954 ಜನರು ಎಕೆ, ಎಡಿ, ಎಎ ಎಂದೇ ಬರೆಸಿದ್ದರಿಂದ ಅವರನ್ನು ‘ಇ’ ಗುಂಪಿಗೆ ಸೇರಿಸಿ ಶೇ.1ರಷ್ಟು ಮೀಸಲಾತಿಯನ್ನು ಆಯೋಗ ಶಿಫಾರಸ್ಸು ಮಾಡಿತು. ಜಸ್ಟಿಸ್ ದಾಸ್ ಅವರು ಹಂಚಿಕೆ ಮಾಡಿದ ಪ್ರಮಾಣದ ವಿರುದ್ಧ ಬಲಗೈ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ ಕಾರಣ ಎಕೆ, ಎಡಿ, ಎಎ ಜನರನ್ನು ಮಾದಿಗ ಸಂಬಂಧಿತ ಗುಂಪಿಗೂ ಮತ್ತು ಹೊಲೆಯ ಸಂಬಂಧಿತ ಗುಂಪಿಗೂ ಸರ್ಕಾರ ಹಂಚಿಕೆ ಮಾಡಿದೆ. ಅಂತಿಮವಾಗಿ ಶೇ.6ರಷ್ಟು ಮೀಸಲಾತಿಯನ್ನು ಹೊಲೆಯ ಮತ್ತು ಮಾದಿಗ ಸಮುದಾಯಗಳು ಪಡೆದಿವೆ. ದುರಾದೃಷ್ಟವಶಾತ್ ಎಕೆ, ಎಡಿ, ಎಎ ಜನರನ್ನು ಎರಡು ಕಡೆಗೂ ಮೀಸಲಿರಿಸಿದ್ದೇಕೆ ಎಂಬುದೇ ಯಕ್ಷ ಪ್ರಶ್ನೆ. ಆ ಮೂಲಕ ಒಳಮೀಸಲಾತಿ ವಿಚಾರವನ್ನು ಸರ್ಕಾರ ಮತ್ತೆ ಕಗ್ಗಂಟಾಗಿಸಿದೆ.

ಆಯೋಗ ದಾಖಲಿಸಿರುವ ಅತಿಹೆಚ್ಚು ಉದ್ಯೋಗ ಪಡೆದ 10 ಪರಿಶಿಷ್ಟ ಜಾತಿಗಳ ಪೈಕಿ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಮುಂಚೂಣಿಯಲ್ಲಿರುವುದು ಕಂಡು ಬರುತ್ತದೆ. ಎಕೆ, ಎಡಿ ಸೇರಿ 25,151 ಜನ ಉದ್ಯೋಗದಲ್ಲಿದ್ದಾರೆ. ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ ಸಮುದಾಯಗಳಿಗೆ ಹೋಲಿಸಿದರೆ ಎಕೆ, ಎಡಿ ಎಂದು ಗುರುತಿಸಿಕೊಂಡಿರುವವರೇ ಉದ್ಯೋಗದಲ್ಲಿ ಹೆಚ್ಚು ಪಾಲು ಪಡೆದಿರುವುದು ಕಂಡು ಬಂದಿದೆ.

ಆದಿ ದ್ರಾವಿಡ: ಎ ದರ್ಜೆ ನೌಕರರು- 210, ಬಿ- 241, ಸಿ- 2496, ಡಿ- 2112, ಒಟ್ಟು= 5,059. ಆದಿ ಕರ್ನಾಟಕ: ಎ ದರ್ಜೆ- 840, ಬಿ- 1,066, ಸಿ- 12,347, ಡಿ- 5,839, ಒಟ್ಟು= 20,029. ಅಂದರೆ ಎಕೆ, ಎಡಿ, ಎಎ ಜನರಲ್ಲಿ ಪ್ರತಿ ಒಂದು ಲಕ್ಷಕ್ಕೆ 5,296 ಜನರು ಉದ್ಯೋಗ ಪಡೆದಿದ್ದಾರೆ. ಆಯೋಗದ ಪ್ರಕಾರ ಹೊಲಯ ಸಮುದಾಯದ ಜನಸಂಖ್ಯೆ 24,72,103, ಸರ್ಕಾರಿ ಉದ್ಯೋಗ ಪಡೆದವರು- 34,206, ಅಂದರೆ ಒಂದು ಲಕ್ಷ ಹೊಲೆಯರಲ್ಲಿ 1,400 ಜನ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಮಾದಿಗ ಸಮುದಾಯದ ಜನಸಂಖ್ಯೆ 27,73,780, ಸರ್ಕಾರಿ ಉದ್ಯೋಗಪಡೆದವರು 21,682, ಅಂದರೆ ಒಂದು ಲಕ್ಷ ಮಾದಿಗರಲ್ಲಿ 560 ಜನರು ಉದ್ಯೋಗ ಪಡೆದಿದ್ದಾರೆ. ಎಕೆ, ಎಡಿ, ಎಎ ಜನರ ನಡುವಿನ ಉದ್ಯೋಗ ಪ್ರಮಾಣಕ್ಕೂ ಹೊಲೆಯ ಮತ್ತು ಮಾದಿಗರ ನಡುವಿನ ಉದ್ಯೋಗ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎಕೆ, ಎಡಿ, ಎಎ ಜನರು ಮೂಲದಲ್ಲಿ ಹೊಲೆಯ ಮತ್ತು ಮಾದಿಗರೇ ಆಗಿದ್ದಾರೆಂದು ಭಾವಿಸಬಹುದಾದರೂ ಉಳಿದವರಿಗಿಂತ ಇವರು ಮುಂದುವರಿದ ಜನರೆಂಬುದು ಅಂಕಿ, ಅಂಶಗಳಿಂದ ಸ್ಪಷ್ಟವಾಗುತ್ತದೆ. ಹೀಗಾಗಿ ಇವರನ್ನು ಆಯೋಗವು ಪ್ರತ್ಯೇಕವಾಗಿರಿಸಿ, ಶೇ.1ರಷ್ಟು ಮೀಸಲಾತಿಯನ್ನು ನೀಡಿದ್ದು ಸರಿಯಾದ ಕ್ರಮವಾಗಿತ್ತು ಎಂಬುದು ಅನೇಕರ ಅಭಿಪ್ರಾಯ.

Advertisements

ಇದನ್ನೂ ಓದಿರಿ: ಎಸ್‌ಸಿ, ಎಸ್ಟಿ ದೌರ್ಜನ್ಯ ಕಾಯ್ದೆ | 60 ದಿನದ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

“ನಮ್ಮ ಪಾಲಿನ ಪ್ರಮಾಣ ಕಡಿಮೆಯಾಗಿದೆ, ಕೆಲವು ಜಾತಿಗಳನ್ನು ತಪ್ಪಾಗಿ ವರ್ಗೀಕರಿಸಲಾಗಿದೆ” ಎಂದು ಹೊಲೆಯ ಸಮುದಾಯ ಆಕ್ರೋಶಗೊಂಡಿತು. ಇದಕ್ಕೆ ಮಣಿದ ಸರ್ಕಾರ, ‘ಮಾದಿಗ ಗುಂಪಿನಲ್ಲಿದ್ದ ಪರೆಯ ಸಮುದಾಯವನ್ನು ಹೊಲೆಯ ಗುಂಪಿಗೆ ವರ್ಗಾಯಿಸಲಾಗಿದೆ ಹಾಗೂ ಎಕೆ, ಎಡಿ, ಎಎಗಳನ್ನು ವಿಭಾಗಿಸಿ ಮಾದಿಗ ಸಂಬಂಧಿತ ಗುಂಪಿಗೂ, ಹೊಲೆಯ ಸಂಬಂಧಿತ ಗುಂಪಿಗೂ ಸೇರಿಸಲಾಗಿದೆ’ ಎಂದು ಹೇಳಿದೆ. ಸಮಸ್ಯೆ ಸೃಷ್ಟಿಯಾಗಿರುವುದೇ ಇಲ್ಲಿ!

ಮಾದಿಗ ಸಂಬಂಧಿತ ಪ್ರವರ್ಗ ‘ಎ’ನಲ್ಲೂ, ಹೊಲೆಯ ಸಂಬಂಧಿತ ಪ್ರವರ್ಗ ‘ಬಿ’ನಲ್ಲೂ ಎಕೆ, ಎಡಿ, ಎಎ ಜನರು ಈಗ ಮೀಸಲಾತಿಗೆ ಅರ್ಹರಾಗಿದ್ದಾರೆಂದು ಸರ್ಕಾರದ ಆದೇಶ ಹೇಳುತ್ತಿದೆ. ಇದನ್ನು ಸರಿಪಡಿಸಬೇಕೆಂಬ ಆಗ್ರಹಗಳು ಹುಟ್ಟಿಕೊಂಡಿವೆ. ಈವರೆಗೆ ಉದ್ಯೋಗದಲ್ಲಿ ಇತರರಿಗಿಂತ ಮೇಲುಚಲನೆಯಲ್ಲಿರುವ ಎಕೆ, ಎಡಿ, ಎಎಗಳು ಎರಡೂ ಕಡೆಯೂ ಪಾಲು ಪಡೆಯುವುದು ಅವೈಜ್ಞಾನಿಕ. ಆದರೆ 101 ಜಾತಿಗಳ ಪಟ್ಟಿಯಲ್ಲಿ ಎಕೆ, ಎಡಿ, ಎಎ- ನಮೂದಿತವಾಗಿವೆ. ಅವುಗಳನ್ನು ಯಾವುದೇ ಗುಂಪಿಗಾದರೂ ಸೇರಿಸಲೇಬೇಕಾಗುತ್ತದೆ.

“ಪ್ರವರ್ಗ ‘ಎ’ಗೆ ಇರುವ ಶೇ. 6 ಮೀಸಲಾತಿಯನ್ನು ಮಾದಿಗರಿಗೆ ಮಾತ್ರ ಸಿಗುವಂತಾಗಲು ಎಕೆ, ಎಡಿ, ಎಎಗಳಿಗೆ ಮೀಸಲಾತಿ ಶೇ. 0.5ಕ್ಕೆ ಮಿತಿಗೊಳ್ಳುವಂತೆ ಸರ್ಕಾರ ಕ್ರಮವಹಿಸಬೇಕು. ಇಲ್ಲದಿದ್ದರೆ, ಎಕೆ, ಎಡಿ, ಎಎಗಳು 6+6 (ಎರಡೂ ಗುಂಪಿನಲ್ಲಿ) ಒಟ್ಟು ಶೇ. 12 ಮೀಸಲಾತಿಗೆ ಅರ್ಹತೆಯನ್ನು ಪಡೆದುಕೊಳ್ಳಲು ಅನುಕೂಲ ಮಾಡಿದಂತಾಗುತ್ತದೆ. ಹಾಗಾಗಿ ಈ ಎಕೆ, ಎಡಿ, ಎಎಗಳು ಶೇ. 1ರಷ್ಟು ಮೀಸಲು ಮೀರದಂತೆ ನೇಮಕಾತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎನ್ನುತ್ತಾರೆ ಹೋರಾಟಗಾರ ಲಿಂಗಪ್ಪ ದಾನಪುರ.

“ಎಕೆ, ಎಡಿ, ಎಎ ಜಾತಿಗಳು 6+6 ಎರಡೂ ಕಡೆಗೆ ಬಳಸಿಕೊಂಡರೆ ಲಾಭ ಅವರಿಗೆ. ಇಂಥವರನ್ನು ಗೊಂದಲ ಇರುವ ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ವಯಿಸಬೇಕಿತ್ತು. ಈಗ ಮಾಡಿರುವ ಯಡವಟ್ಟಿನಿಂದಾಗಿ ಈಗಾಗಲೇ ಸಾಕಷ್ಟು ಸೌಲಭ್ಯ ಪಡೆದವರು ‘ಎ’ ವರ್ಗದ ಮಾದಿಗರಿಗೆ ದಕ್ಕುವ ಶಿಕ್ಷಣ ಪ್ರವೇಶ, ನೇಮಕಾತಿಗಳನ್ನು ಹೈಜಾಕ್ ಮಾಡುತ್ತಾರೆ. ಮಾದಿಗರಿಗೆ ಮತ್ತೆ ವಂಚನೆ ಆಗುವುದು ಖಚಿತ. ಸರ್ಕಾರ ಈ ಬಗ್ಗೆ ಮರುಪರಿಶೀಲನೆ ಮಾಡಿ ಗೊಂದಲ ಇರುವ ಜಿಲ್ಲೆಗಳಲ್ಲಿ ಮಾತ್ರ ಅನ್ವಯಿಸಿ ಆದೇಶ ಮಾಡುವುದು ಅನಿವಾರ್ಯ ಎನಿಸುತ್ತದೆ” ಎಂದಿದ್ದಾರೆ.

ಇದನ್ನೂ ಓದಿರಿ: ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ಯಾಗದಿರಲಿ…

ಇದು ಲಿಂಗಪ್ಪ ದಾನಪುರ ಅವರೊಬ್ಬರ ಆತಂಕವಲ್ಲ. ಈ ಮಾತನ್ನ ಅನೇಕ ಹೋರಾಟಗಾರರು ಹೇಳುತ್ತಿದ್ದಾರೆ. ಎಕೆ, ಎಡಿ, ಎಎಗಳು ಮಾದಿಗರ ಗುಂಪಿಗೆ ಬಿಸಿತುಪ್ಪವಾದಂತೆಯೇ ಹೊಲೆಯ ಸಮುದಾಯದ ಪ್ರವರ್ಗ ‘ಬಿ’ಯಲ್ಲಿರುವ ತೀರಾ ಹಿಂದುಳಿದವರಿಗೆ ಸವಾಲಾಗುತ್ತಾರೆ ಎಂಬ ಅಭಿಪ್ರಾಯಗಳೂ ಮೂಡಿಬಂದಿವೆ. “ಜಸ್ಟಿಸ್ ದಾಸ್ ಅವರು ಈ ಎಲ್ಲವನ್ನೂ ಗಮನಿಸಿಯೇ ಎಕೆ, ಎಡಿ, ಎಎಗಳಿಗೆ ಪ್ರತ್ಯೇಕವಾದ ಮೀಸಲು ವ್ಯವಸ್ಥೆ ಮಾಡಿದ್ದರು. ಇದನ್ನು ಸಕಾರಾತ್ಮಕವಾಗಿ ನೋಡಬೇಕಾಗಿತ್ತು, ಇರಲಿ. ಜನರ ಆಗ್ರಹದಂತೆ ವರ್ಗೀಕರಣ ಮಾಡಿಯಾಗಿದೆ. ಆದರೆ ಗೊಂದಲಕ್ಕೆ ಅವಕಾಶ ಕೊಡದೆ ಸರ್ಕಾರ ಎಚ್ಚರಿಕೆ ವಹಿಸಬೇಕಿತ್ತು” ಎನ್ನುತ್ತಾರೆ ಹೋರಾಟಗಾರರು.

ಒಂದು ಕಡೆ ಅಲೆಮಾರಿಗಳ ಪಾಲನ್ನು ಬರಕಾಸ್ತು ಮಾಡಿ, ಅನ್ಯಾಯ ಎಸಗಲಾಗಿದೆ. ಇನ್ನೊಂದು ಕಡೆ, ಎಕೆ, ಎಡಿ, ಎಎಗಳನ್ನು ಸ್ಪಷ್ಟವಾಗಿ ವಿಭಾಗಿಸದೆ ಹೊಲೆಯ ಮತ್ತು ಮಾದಿಗ ಸಮುದಾಯದ ಇಬ್ಬರಿಗೂ ಸಮಸ್ಯೆಯಾಗುವಂತೆ ವರ್ಗೀಕರಣ ಮಾಡಲಾಗಿದೆ. ಶಿಕ್ಷಿತ ಮತ್ತು ಮುಂದುವರಿದ ವರ್ಗವಾಗಿ ಕಾಣುವ ಈ ಮೂರು ಜಾತಿಗಳ ಪಾಲು ಶೇ.1ರಷ್ಟು ಮೀರದಂತೆ ನೋಡಿಕೊಳ್ಳುವ ತುರ್ತು ಇದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡುತ್ತದೆಯೋ ಅಥವಾ ಈಗ ಉಂಟಾಗಿರುವ ಕಗ್ಗಂಟ್ಟನ್ನು ಮುಂದುವರಿಸುತ್ತದೆಯೋ ಎಂಬುದಷ್ಟೇ ಸದ್ಯದ ಕುತೂಹಲ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತ, ಬಿಜೆಪಿ ಮುಖಂಡರ ನಡೆಗೆ ಖಂಡನೆ: ಸಿಪಿಐಎಂ

ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್...

ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿ ಕೆ ಶಿವಕುಮಾರ್

ವಿಧಾನಸಭೆ ಅಧಿವೇಶನದಲ್ಲಿಯೇ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಎಂದು ಆರ್‌ಎಸ್‌ಎಸ್‌ ಗೀತೆ...

ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ

ಕಳೆದ ಕೆಲವು ತಿಂಗಳುಗಳಿಂದ ಅಂಬಾನಿ ಅವರ ರಿಲಯನ್ಸ್‌ ಸಂಸ್ಥೆಗೆ ಸೇರಿದ, ಮುಕೇಶ್...

Download Eedina App Android / iOS

X