ಕರ್ನಾಟಕ ಲೋಕಾಯುಕ್ತ: ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಸಂಸ್ಥೆಗೆ ಸುಧಾರಣೆ ಹೇಗೆ?

Date:

Advertisements
ಪೊಲೀಸ್‌ ಇಲಾಖೆಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಂದರಿಂದ ಎರಡು ವರ್ಷ ನಿಯೋಜನೆ ಮೇರೆಗೆ ಲೋಕಾಯುಕ್ತಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿಗೆ ಬಂದ ಕೂಡಲೇ ಮನಸ್ಸು ಪರಿವರ್ತನೆಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಎಂದುಕೊಳ್ಳುವುದು ಮೂರ್ಖತನವಾಗುತ್ತದೆ...

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕತೆ ಇಂದು “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬ ಗಾದೆಗೆ ಅಕ್ಷರಶಃ ತಕ್ಕಂತಿದೆ. ಭ್ರಷ್ಟಾಚಾರದ ವಿರುದ್ಧ ಜನರ ಕುಂದುಕೊರತೆಗಳನ್ನು ನಿವಾರಿಸಲು ಸ್ಥಾಪಿತವಾದ ಈ ಸಂಸ್ಥೆಯು ತಾನೇ ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ. ಒಂದು ಕಾಲದಲ್ಲಿ ದೇಶದ ಅತ್ಯಂತ ಶಕ್ತಿಶಾಲಿ ತನಿಖಾ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದ ಕರ್ನಾಟಕ ಲೋಕಾಯುಕ್ತ, ಇಂದು ತನ್ನೊಳಗಿನ ದೋಷಗಳಿಂದಾಗಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ಕಾನೂನು ಪಾಲನೆಯ ಕಡೆ ನಿಲ್ಲಬೇಕಾದ ಅಧಿಕಾರಿಗಳು ಸ್ವತಃ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಜನತೆಯಲ್ಲಿ ನಂಬಿಕೆಯನ್ನು ಹುಸಿ ಮಾಡುತ್ತಿದೆ.

ಕರ್ನಾಟಕ ಲೋಕಾಯುಕ್ತದ ಆಂತರಿಕ ಭ್ರಷ್ಟಾಚಾರದ ಆರೋಪಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿವೆ. ಕೆಲವು ದಿನಗಳ ಹಿಂದೆ ಲೋಕಾಯುಕ್ತದ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಪೊಲೀಸ್ ಕಾನ್‌ಸ್ಟೆಬಲ್ ನಿಂಗಪ್ಪ ಎಂಬಾತನನ್ನು ಬಂಧಿಸಲಾಯಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಹಿಂದೆ ಲೋಕಾಯುಕ್ತದಲ್ಲಿದ್ದ ಶ್ರೀನಾಥ್‌ ಜೋಷಿ ಅವರನ್ನು ಹಲವು ಆರೋಪಗಳಿಂದಾಗಿ ಬೇರೆ ಕಡೆಗೆ ವರ್ಗಾವಣೆಗೊಳಿಸಲಾಗಿತ್ತು. ಅದಲ್ಲದೆ ನಿಂಗಪ್ಪ ಕೋಟಿಗಟ್ಟಲೆ ಹಣವನ್ನು ಸುಲಿಗೆ ಮಾಡಿ, ಅದನ್ನು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದ ಆರೋಪವಿದೆ. ಈ ಪ್ರಕರಣದಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಲೋಕಾಯುಕ್ತದಲ್ಲಿ ಸಾಮಾನ್ಯ ನೌಕರರು ಮಾತ್ರವಲ್ಲದೆ ಉನ್ನತ ಹುದ್ದೆಯಲ್ಲಿರುವವರೂ ಕೂಡ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

1966ರಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 1984ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ಥಾಪನೆಯಾಯಿತು. ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡುವುದು ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಲೋಕಾಯುಕ್ತ ಪೊಲೀಸ್ ವಿಭಾಗವು ರಾಜ್ಯದ ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ಮತ್ತು ಸಾರ್ವಜನಿಕ ಸೇವಕರ ವಿರುದ್ಧ ದೂರುಗಳನ್ನು ತನಿಖೆ ಮಾಡುವ ಅಧಿಕಾರವನ್ನು ಹೊಂದಿದೆ. ಈ ವಿಭಾಗವು ದೂರುಗಳನ್ನು ಸ್ವೀಕರಿಸಿ, ಪ್ರಾಥಮಿಕ ತನಿಖೆ ನಡೆಸಿ, ಅಗತ್ಯವಿದ್ದರೆ ಪ್ರಕರಣವನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತದೆ.

Advertisements

ಲೋಕಾಯುಕ್ತ ಸಂಸ್ಥೆಯ ಇತಿಹಾಸದಲ್ಲಿ ಕೆಲವು ಲೋಕಾಯುಕ್ತರು ಹಾಗೂ ಅಧಿಕಾರಿಗಳು ತಮ್ಮ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಗಮನ ಸೆಳೆದಿದ್ದಾರೆ. 1986ರಲ್ಲಿ ನ್ಯಾಯಮೂರ್ತಿ ಎ ಡಿ ಕೋಶಲ್‌ ಅವರು ಮೊದಲ ಲೋಕಾಯುಕ್ತರಾದರೂ ರಾಜ್ಯದಲ್ಲಿ ಭ್ರಷ್ಟರಿಗೆ ಬಿಸಿ ತಾಕಿದ್ದು 2001ರಲ್ಲಿ ನ್ಯಾಯಮೂರ್ತಿ ಎನ್‌ ವೆಂಕಟಾಚಲ ಅವರ ಅಧಿಕಾರಾವಧಿಯಲ್ಲಿ. ಆನಂತರ ಅಧಿಕಾರ ಸ್ವೀಕರಿಸಿದ ಎನ್‌ ಸಂತೋಷ್‌ ಹೆಗ್ಡೆ ದೇಶವೇ ಬೆಚ್ಚಿ ಬೀಳಿಸುವಂತಹ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಭೇದಿಸಿ ಲೋಕಾಯುಕ್ತ ಸಂಸ್ಥೆಯ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೌಢ್ಯ ಬಿತ್ತುವ ಕಾವೇರಿ ಆರತಿ ಯಾವ ಪುರುಷಾರ್ಥಕ್ಕೆ?

ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದ ಇವರು, ಲೋಕಾಯುಕ್ತ ಸಂಸ್ಥೆಯನ್ನು “ಭ್ರಷ್ಟ ಅಧಿಕಾರಶಾಹಿಯ ವಿರುದ್ಧ ಏಕವ್ಯಕ್ತಿ ಸೇನೆ” ಎಂದು ಖ್ಯಾತಿ ಗಳಿಸಿದ್ದರು. ಇವರ ಕಾಲದಲ್ಲಿ ಸಂಸ್ಥೆಯು ಹಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಜನರ ವಿಶ್ವಾಸ ಗಳಿಸಿತು. ಇದೇ ರೀತಿ 2006 ರಿಂದ 2011ರವರೆಗೆ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅವರು ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದರು. 2011ರಲ್ಲಿ ಇವರು ಸಲ್ಲಿಸಿದ 160.85 ಶತಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆಯ ವರದಿಯಿಂದ ಹಲವು ರಾಜಕಾರಣಿಗಳು, ಅಧಿಕಾರಿಗಳು ಸೆರೆಮನೆಯ ಹಾದಿ ಹಿಡಿಯಬೇಕಾಯಿತು.

ಸಂತೋಷ್‌ ಹೆಗ್ಡೆ ಹೆಚ್ಚು ಹೆಗ್ಗಳಿಕೆ ಪಡೆಯಲು ಮಧುಕರ್‌ ಶೆಟ್ಟಿ, ಡಾ. ಯು ವಿ ಸಿಂಗ್‌ ಅವರಂಥ ನಿಷ್ಠಾವಂತ ಅಧಿಕಾರಿಗಳ ಶ್ರಮ ಕೂಡ ಕಾರಣವಾಗಿತ್ತು. ಮಧುಕರ್ ಶೆಟ್ಟಿಯವರು ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದಾಗ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕೈಗೊಂಡ ಐಪಿಎಸ್ ಅಧಿಕಾರಿಯಾಗಿ ಗುರುತಿಸಲ್ಪಟ್ಟಿದ್ದರು. ಇಂತಹವರ ಪರಿಶ್ರಮದಿಂದಾಗಿ ಲೋಕಾಯುಕ್ತ ಸಂಸ್ಥೆಯು ಒಂದು ಕಾಲದಲ್ಲಿ ಜನರ ವಿಶ್ವಾಸದ ಸಂಕೇತವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಲೋಕಾಯುಕ್ತದಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿರುವ ಕಾರಣದಿಂದ ಸಾರ್ವಜನಿಕರು ಅನುಮಾನದಿಂದ ನೋಡುತ್ತಿದ್ದಾರೆ.

ಸಂತೋಷ್‌ ಹೆಗ್ಡೆ ಅಧಿಕಾರಾವಧಿ ಮುಗಿದ ನಂತರ ಲೋಕಾಯುಕ್ತದಲ್ಲೇ ಭ್ರಷ್ಟಾಚಾರ ಪ್ರಕರಣಗಳು ಜಗಜ್ಜಾಹೀರಾದವು. 2015ರಲ್ಲಿ ತೀವ್ರ ಸುದ್ದಿ ಮಾಡಿದ್ದ ನ್ಯಾಯಮೂರ್ತಿ ವೈ ಭಾಸ್ಕರ್‌ ರಾವ್‌ ಪ್ರಕರಣ ಮರೆಯಲು ಸಾಧ್ಯವಾಗದ ಪ್ರಕರಣವಾಗಿದೆ. ಸ್ವತಃ ವೈ ಭಾಸ್ಕರ್ ರಾವ್‌ ಅವರ ಪುತ್ರ ಅಶ್ವಿನ್ ರಾವ್‌ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳನ್ನು ಸುಲಿಗೆ ಮಾಡಿದ ಪ್ರಕರಣ ದೊಡ್ಡ ವಿವಾದವಾಗಿತ್ತು. ಈ ಆರೋಪದಿಂದಾಗಿ ಭಾಸ್ಕರ್ ರಾವ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಘಟನೆಯಿಂದ ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಗೆ ಗಂಭೀರ ಧಕ್ಕೆಯಾಯಿತು. ಆದರೆ, ಕೆಲವೇ ತಿಂಗಳುಗಳ ನಂತರ 2016ರಲ್ಲಿ ರಾಜ್ಯ ಸರ್ಕಾರವು ಲೋಕಾಯುಕ್ತದ ತನಿಖಾ ಅಧಿಕಾರವನ್ನು ಕಿತ್ತುಕೊಂಡು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿತು. ಇದು ಮುಖ್ಯಮಂತ್ರಿಯ ನೇರ ನಿಯಂತ್ರಣದಲ್ಲಿತ್ತು. ಈ ನಿರ್ಧಾರವು ಲೋಕಾಯುಕ್ತದ ಶಕ್ತಿಯನ್ನು ಸಂಪೂರ್ಣ ಕುಗ್ಗಿಸಿತು. 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ಆದೇಶದಿಂದ ಎಸಿಬಿಯನ್ನು ರದ್ದುಗೊಳಿಸಿ, ತನಿಖೆಯ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು.

ಲೋಕಾಯುಕ್ತ ಸಂಸ್ಥೆಯನ್ನು ಪಾರದರ್ಶಕಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮೊದಲಿಗೆ, ಸಂಸ್ಥೆಯ ಅಧಿಕಾರಿಗಳ ನೇಮಕಾತಿಯಲ್ಲಿ ಕಟ್ಟುನಿಟ್ಟಾದ ಪಾರದರ್ಶಕತೆ ತರಬೇಕಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಅವರ ನೇಮಕಾತಿಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರುವಂತೆ ಮಾಡಬೇಕು. ಇದಕ್ಕಾಗಿ, ಸ್ವತಂತ್ರ ಆಯ್ಕೆ ಸಮಿತಿಯನ್ನು ರಚಿಸಬಹುದು, ಇದರಲ್ಲಿ ನಿವೃತ್ತ ನ್ಯಾಯಾಧೀಶರು, ಸಮಾಜ ಸೇವಕರು ಮತ್ತು ಗೌರವಾನ್ವಿತ ವ್ಯಕ್ತಿಗಳು ಇರಬೇಕು. ಲೋಕಾಯುಕ್ತ ಸಂಸ್ಥೆಯು ತನ್ನ ಆರಂಭಿಕ ಗುರಿಯಾದ ಭ್ರಷ್ಟಾಚಾರ ನಿರ್ಮೂಲನೆಯನ್ನು ಸಾಧಿಸಬೇಕಾದರೆ, ತಕ್ಷಣವೇ ಸುಧಾರಣೆಗಳ ಅಗತ್ಯವಿದೆ. ಸಂಸ್ಥೆಯ ಒಳಗಿನ ಭ್ರಷ್ಟಾಚಾರವನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು. ಲೋಕಾಯುಕ್ತ ಪೊಲೀಸ್ ವಿಭಾಗದ ಕಾರ್ಯವಿಧಾನವನ್ನು ಸುಧಾರಿಸಬೇಕಿದೆ. ಲೋಕಾಯುಕ್ತದ ಅಧಿಕಾರಿಗಳ ವಿರುದ್ಧ ಆರೋಪಗಳು ಸಾಬೀತಾದರೆ, ಕಾನೂನಿನ ಪೂರ್ಣ ಪ್ರಮಾಣದಲ್ಲಿ ಶಿಕ್ಷೆಯನ್ನು ವಿಧಿಸಬೇಕು. ಇದರಿಂದ ಇತರರಿಗೆ ಎಚ್ಚರಿಕೆಯ ಸಂದೇಶ ಸಿಗುತ್ತದೆ. ಹಾಗೆಯೇ ಈ ವಿಭಾಗದ ಅಧಿಕಾರಿಗಳಿಗೆ ನಿಯಮಿತ ತರಬೇತಿ, ಆಂತರಿಕ ತನಿಖೆ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಬೇಕು. ಇದರಿಂದ ಭ್ರಷ್ಟಾಚಾರ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು.

ಲೋಕಾಯುಕ್ತದ ತನಿಖೆಯ ಪ್ರಗತಿಯನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಇದಕ್ಕಾಗಿ, ಆನ್‌ಲೈನ್ ವೇದಿಕೆಯನ್ನು ರಚಿಸಿ, ದೂರುಗಳ ಸ್ಥಿತಿಗತಿ, ತನಿಖೆಯ ವಿವರ ಮತ್ತು ಕ್ರಮಗಳನ್ನು ಪ್ರಕಟಿಸಬಹುದು. ಇದರಿಂದ ಸಾರ್ವಜನಿಕರಿಗೆ ಸಂಸ್ಥೆಯ ಕಾರ್ಯದ ಕುರಿತು ಮಾಹಿತಿ ಸಿಗುತ್ತದೆ ಮತ್ತು ರಾಜಕೀಯ ಒತ್ತಡದಿಂದ ತನಿಖೆಯನ್ನು ತಡೆಯುವ ಸಾಧ್ಯತೆ ಕಡಿಮೆಯಾಗುತ್ತದೆ. ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಇದಕ್ಕಾಗಿ, ಸಂಸ್ಥೆಯ ಆಡಳಿತಾತ್ಮಕ ಮತ್ತು ಆರ್ಥಿಕ ನಿಯಂತ್ರಣವನ್ನು ಸರ್ಕಾರದಿಂದ ತೆಗೆದುಹಾಕಿ, ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಕೊನೆಯದಾಗಿ, ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬೇಕು. ಲೋಕಾಯುಕ್ತದ ಕಾರ್ಯವಿಧಾನ, ದೂರು ಸಲ್ಲಿಸುವ ವಿಧಾನ ಮತ್ತು ಜನರ ಹಕ್ಕುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಕರ್ನಾಟಕ ಲೋಕಾಯುಕ್ತ ಒಂದು ಕಾಲದಲ್ಲಿ ಆದರ್ಶ ಸಂಸ್ಥೆಯಾಗಿದ್ದು, ಇಂದು ತನ್ನೊಳಗಿನ ದೋಷಗಳಿಂದ ಕುಸಿಯುತ್ತಿರುವುದನ್ನು ತೋರಿಸುತ್ತದೆ. ಆದರೆ, ಸೂಕ್ತ ಸುಧಾರಣೆಗಳ ಮೂಲಕ ಈ ಸಂಸ್ಥೆಯನ್ನು ಮತ್ತೆ ಜನರ ವಿಶ್ವಾಸದ ಕೇಂದ್ರವನ್ನಾಗಿ ಮಾಡಬಹುದು. ಇದಕ್ಕಾಗಿ ಸರ್ಕಾರ, ಸಂಸ್ಥೆಯ ಅಧಿಕಾರಿಗಳು, ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕು. ಒಂದು ಪಾರದರ್ಶಕ, ಸ್ವತಂತ್ರ, ಮತ್ತು ಪರಿಣಾಮಕಾರಿ ಲೋಕಾಯುಕ್ತವು ಕರ್ನಾಟಕದ ಆಡಳಿತದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಿ, ಜನರಿಗೆ ನ್ಯಾಯ ಒದಗಿಸಬಹುದು.

‘ಆಂತರಿಕ ವಿಚಕ್ಷಣ ದಳ ಬಲಪಡಿಸುವಿಕೆಯಿಂದ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ

ಲೋಕದ ಭ್ರಷ್ಟಾಚಾರ ಬಯಲಿಗೆಳೆಯಬೇಕಾದ ಲೋಕಾಯುಕ್ತದಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಲ್ಲಿನ ಅನ್ಯಾಯ ಅಕ್ರಮಗಳನ್ನು ನಿವಾರಿಸಬೇಕಾದರೆ ಲೋಕಾಯುಕ್ತದಲ್ಲಿರುವ ವಿಚಕ್ಷಣ ದಳವನ್ನು ಬಲಪಡಿಸಬೇಕಾದ ತುರ್ತು ಅಗತ್ಯವಿದೆ ಎಂದು ಲೋಕಾಯುಕ್ತದಲ್ಲಿ ಹಲವು ವರ್ಷ ಕೆಲಸ ಮಾಡಿರುವ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಈದಿನ ಡಾಟ್‌.ಕಾಂ’ ನೊಂದಿಗೆ ಮಾತನಾಡಿದ ಅವರು ”ಲೋಕಾಯುಕ್ತ ಪೊಲೀಸ್‌ ಪ್ರತ್ಯೇಕ ಇಲಾಖೆಯಲ್ಲ. ಪೊಲೀಸ್‌ ಇಲಾಖೆಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಂದರಿಂದ ಎರಡು ವರ್ಷ ನಿಯೋಜನೆ ಮೇರೆಗೆ ಲೋಕಾಯುಕ್ತಕ್ಕೆ  ವರ್ಗಾಯಿಸಲಾಗುತ್ತದೆ. ಇಲ್ಲಿಗೆ ಬಂದ ಕೂಡಲೇ ಮನಸ್ಸು ಪರಿವರ್ತನೆಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಎಂದುಕೊಳ್ಳುವುದು ಮೂರ್ಖತನವಾಗುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೊ ಲೋಕಾಯುಕ್ತಕ್ಕೆ ಬಂದಾಗಲೂ ಅದೇ ಇರುತ್ತಾರೆ. ಲೋಕಾಯುಕ್ತಕ್ಕೆ ಬಂದಾಗ ಅವರು ತಮ್ಮ ಭ್ರಷ್ಟಾಚಾರವನ್ನು ಮುಂದುವರಿಸಿದಾಗ ನಾವು ಅವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಅದನ್ನು ಈಗ ವಿಚಕ್ಷಣ ದಳ ಮಾಡುತ್ತಿದೆ. ಎರಡು ವರ್ಷದ ಹಿಂದೆ ಆಂತರಿಕ ವಿಚಕ್ಷಣ ದಳ ವಿಭಾಗವನ್ನು ರಚಿಸಲಾಗಿದೆ. ಈ ವಿಭಾಗ ಎಲ್ಲ ಅಧಿಕಾರಗಳ ಮೇಲೆ ಅಧಿಕಾರಿಗಳ ಮೇಲೆ ಕಣ್ಣಿಡುತ್ತದೆ. ಈಗ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿರುವ ಲೋಕಾಯುಕ್ತದ ಮಾಜಿ ಪೊಲೀಸ್‌ ಕೂಡ ಆಂತರಿಕ ವಿಚಕ್ಷಣ ದಳದ ಪರಿಶ್ರಮ ಹಾಗೂ ಫಲಿತಾಂಶವಾಗಿದೆ. ಸಂಸ್ಥೆಯನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಣೆಗೊಳಿಸಬೇಕಿದ್ದರೆ ವಿಚಕ್ಷಣ ದಳವನ್ನು ಮತ್ತಷ್ಟು ಬಲಪಡಿಸಬೇಕು” ಎಂದು ಹೇಳುತ್ತಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X