2025ರ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಇಲ್ಲ ಎಂದು ಹೇಳಿರುವ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ 70 ಕ್ಷೆತ್ರಗಳಿಗೂ ಎಎಪಿ ಅಭ್ಯರ್ಥಿಗಳ ಪಟ್ಟಿಯನ್ನೂ ಕೂಡ ಬಿಡುಗಡೆ ಮಾಡಿದ್ದಾರೆ. ಇತ್ತ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೂ ಕೂಡ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿವೆ. ಈ ನಡುವೆ ದೆಹಲಿ ಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಆತಿಶಿ ಅವರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಬಂಧಿಸಲು ಸಂಚು ನಡೆಯುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಆತಿಶಿ ಅವರನ್ನು ಕೇಂದ್ರ ಸರ್ಕಾರ ಬಂಧನ ಮಾಡಲಿದೆ ಎಂದು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಜನರ ಸಂಕಷ್ಟಗಳಿಗೆ ಬೆಲೆ ಕೊಡದ ಮೋದಿ ಅವರು ಇನ್ನೇನು ಚುನಾವಣೆ ಬರುತ್ತಿದೆ ಎಂದರೆ, ರ‍್ಯಾಲಿಗಳಲ್ಲಿ, ಬಹಿರಂಗ ಸಮಾವೇಶದಲ್ಲಿ ಕಾಣಸಿಗುವುದು ಸರ್ವೇ ಸಾಮಾನ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲು ಖಚಿತ ಎಂದು ಭಾವಿಸಲಾಗಿತ್ತು. ಯಾಕೆಂದರೆ, ಪ್ರತಿಪಕ್ಷಗಳು ಸೇರಿ ಇಂಡಿಯಾ ಒಕ್ಕೂಟವನ್ನು ರಚನೆ ಮಾಡಿಕೊಂಡು ಸಂವಿಧಾನವನ್ನ ಉಳಿಸುವ ಪಣ ತೊಟ್ಟಿದ್ದವು. ಅದರಂತೆಯೇ, ಸಂವಿಧಾನವನ್ನ ಉಳಿಸುವಲ್ಲಿ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟ ಯಶಸ್ಸನ್ನ ಕಂಡಿದೆ. ಅಂದುಕೊಂಡಂತೆ ಬಿಜೆಪಿ ಪೂರ್ಣ ಬಹುಮತ ಇಲ್ಲದೇ, ಎನ್‌ಡಿಎ ಒಕ್ಕೂಟದಲ್ಲಿ ಸರ್ಕಾರವನ್ನ ರಚನೆ ಮಾಡಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂದು ತಿಳಿದಿದ್ದ ಮೋದಿ ಅವರು ರಾಜಕೀಯ ತಂತ್ರಗಳನ್ನ ಸಕಾಲದಲ್ಲಿ ಬಳಸಿದ್ದರು. ಮೊದಲಿಗೆ ಇಂಡಿಯಾ ಒಕ್ಕೂಟದಲ್ಲಿದ್ದ ನಿತೀಶ್ ಕುಮಾರ್ ಅವರನ್ನ ತಮ್ಮ ಒಕ್ಕೂಟಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉಳಿದವರು ಸಿದ್ಧಾಂತ ಮೀರಿ ಎನ್‌ಡಿಎ ಸೇರಿಕೊಳ್ಳದೇ ಇರುವಾಗ ರಾಜಕೀಯ ಲಾಭಕ್ಕಾಗಿ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಾದ ಸಿಬಿಐ ಮಾತ್ರವಲ್ಲದೇ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಗಳನ್ನ ಬಳಸಿಕೊಂಡು ನಾನಾ ಪಕ್ಷಗಳ ನೇತೃತ್ವ ವಹಿಸಿದ್ದವರ ಆಪ್ತ ವಲಯದಲ್ಲಿದ್ದವರು, ಅಭ್ಯರ್ಥಿಗಳು, ನಾನಾ ರಾಜಕೀಯ ಪಕ್ಷಗಳ ಜತೆ ನಿಕಟ ನಂಟು ಹೊಂದಿದ್ದ ಗುತ್ತಿಗೆದಾರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸುವುದು.
2017ರಿಂದ ಈಚೆಗೆ ಕರ್ನಾಟಕದಲ್ಲಿ ಚುನಾವಣೆಗಳು ಘೋಷಣೆಯಾದಾಗಲೆಲ್ಲ ಆದಾಯ ತೆರಿಗೆ ದಾಳಿಗಳು ನಡೆಯುತ್ತಲೇ ಇವೆ. ಚುನಾವಣೆ ಸಮಯದಲ್ಲಿ ಹೆಚ್ಚಾಗಿ ನಡೆಯುವ ಈ ದಾಳಿಗಳು ಚುನಾವಣೆ ಮುಗಿದಾಗ ಸದ್ದಿಲ್ಲದ್ದಂತೆ ಮರೆಯಾಗುತ್ತವೆ. 2017ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದ್ದಾಗಲೂ ಶಿವಕುಮಾರ್ ಅವರನ್ನು ಗುರಿಯಾಗಿಸಿ ಐ.ಟಿ ದಾಳಿ ನಡೆದಿತ್ತು. 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ, 2019ರ ಡಿಸೆಂಬರ್‌ನಲ್ಲಿ 15 ಕ್ಷೇತ್ರಗಳ ಉಪಚುನಾವಣೆ ವೇಳೆಯೂ ಆದಾಯ ತೆರಿಗೆ ಇಲಾಖೆಯಿಂದ ಸರಣಿ ದಾಳಿಗಳು ನಡೆದಿದ್ದವು.
2018ರ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದ 34 ಕಡೆಗಳಲ್ಲಿ ಐಟಿಯು ಶೋಧಗಳನ್ನು ನಡೆಸಿತ್ತು. ಕಾಂಗ್ರೆಸ್ ಮುಖಂಡರು ಮತ್ತು ಆ ಪಕ್ಷದ ಜೊತೆ ನಂಟು ಹೊಂದಿದ್ದ 22 ಮಂದಿ, ಜೆಡಿಎಸ್‌ನ ನಾಲ್ವರು ಹಾಗೂ ಬಿಜೆಪಿಯ ಆರು ಮಂದಿಗೆ ಸೇರಿದ ಮನೆ, ಆಸ್ತಿಗಳ ಮೇಲೆ ಆ ಸಮಯದಲ್ಲಿ ದಾಳಿ ನಡೆದಿತ್ತು.
2019ರ ಲೋಕಸಭಾ ಚುನಾವಣೆ ವೇಳೆಯಲ್ಲೂ ಆದಾಯ ತೆರಿಗೆ ಅಧಿಕಾರಿಗಳು ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿಗಳನ್ನು ನಡೆಸಿದ್ದರು. ಈ ಅವಧಿಯಲ್ಲಿ ರಾಜ್ಯದಲ್ಲಿ 46 ದಾಳಿಗಳು ನಡೆದಿದ್ದವು. ಜೆಡಿಎಸ್ ಜೊತೆ ನಂಟು ಹೊಂದಿದ್ದವರ ಮೇಲೆ 22, ಕಾಂಗ್ರೆಸ್ ಜತೆ ಸಂಪರ್ಕವಿದ್ದವರ ಮೇಲೆ 16 ಹಾಗೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದವರ ಮೇಲೆ ಆರು ದಾಳಿಗಳು ನಡೆದಿದ್ದವು. ಯಾವ ಪಕ್ಷದ ಜತೆಗೂ ಸಂಬಂಧವಿಲ್ಲದ ಇಬ್ಬರ ಮೇಲೂ ಆದಾಯ ತೆರಿಗೆ ದಾಳಿ ನಡೆದಿತ್ತು. 2014ರಿಂದ ದಾಖಲಾದ ಒಟ್ಟು ಜಾರಿ ನಿರ್ದೇಶನಾಲಯ ಪ್ರಕರಣಗಳಲ್ಲಿ ಶೇ.95 ವಿಪಕ್ಷ ನಾಯಕರ ಮೇಲೆ ದಾಳಿ ನಡೆದಿದೆ ಎಂದು ಸಿಎಂ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿ ತಿಳಿಸಿದ್ದರು.
ಇನ್ನು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಆಕ್ಟಿವ್ ಆಗಿದ್ದ ಮೋದಿ ಸರ್ಕಾರ ಏಕಕಾಲದಲ್ಲಿ ಮೂವರು ಸಿಎಂಗಳನ್ನ ಕಟಕಟೆಯಲ್ಲಿ ನಿಲ್ಲಿಸಿತ್ತು. ಮೋದಿ ತಮ್ಮ ವಿರುದ್ಧ ಮಾತನಾಡುವವರನ್ನು ಸಹಿಸುವುದಿಲ್ಲ. ತಮ್ಮ ವಿರುದ್ಧ ಮಾತನಾಡಿದರೆ, ಅವರು ಮುಖ್ಯಮಂತ್ರಿಯೇ ಆಗಿದ್ದರೂ, ಅವರು ಕಿರುಕುಳ ಅನುಭವಿಸೋದು, ಜೈಲು ಸೇರೋದು ಖಚಿತ. ಅದಕ್ಕೆ ಉದಾಹರಣೆಯಾಗಿ ಇಬ್ಬರು ಮುಖ್ಯಮಂತ್ರಿಗಳು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಮತ್ತೊಬ್ಬ ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದೂ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ. ಮೋದಿ ಸರ್ಕಾರ, ಇದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಟಕಟೆಗೆ ತಂದು ನಿಲ್ಲಿಸಿತ್ತು.
ಹೌದು, ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿದ್ದಾಗ ಮಾರ್ಚ್ 21ರಂದು ದೆಹಲಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಬಂಧನಕ್ಕೆ ಒಳಗಾಗಿದ್ದರು. ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿ ಸೆಪ್ಟೆಂಬರ್ 13ರಂದು ಜಾಮೀನು ಪಡೆದು ಹೊರಬಂದಿದ್ದರು. ಲೋಕಸಭಾ ಚುನಾವಣೆ ಮುಗಿದ ಬಳಿಕ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಲಭಿಸಿತ್ತು. ಮತ್ತೋರ್ವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಇವರು ಕೂಡ ಲೋಕಸಭಾ ಚುನಾವಣೆಯ ಸಮಯದಲ್ಲಿ ಜೈಲು ಸೇರಿ, ಜಾಮೀನು ಪಡೆದು ಹೊರಬಂದು ಇದೀಗ ಮತ್ತೆ ಜಾರ್ಖಂಡ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ.
ಇನ್ನು ಮತ್ತೋರ್ವ ಸಿಎಂ ಅಂದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕರ್ನಾಟಕದಲ್ಲಿ ಇಡೀ ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಕಳಂಕ ರಹಿತವಾಗಿ ಇದ್ದ ರಾಜಕಾರಣಿ ಅಂದರೆ, ಅದು ಸಿದ್ಧರಾಮಯ್ಯ ಅವರು. ಬಡವರು, ಹಿಂದುಳಿದ ವರ್ಗದವರಿಗಾಗೇ ಹೆಚ್ಚು ಶ್ರಮಿಸಿದ್ದಾರೆ. ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿಗೊಳಿಸಿದ್ದಾರೆ. ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ರಾಜಕಾರಣಿಯಾಗಿದ್ದಾರೆ. ಸಿದ್ಧರಾಮಯ್ಯ ಅವರ ಪಾತ್ರವೇ ಇಲ್ಲದ, ಪ್ರಕರಣದಲ್ಲಿ ಸಿಎಂ ಅವರನ್ನು ಸಿಲುಕಿಸಲು ಬಿಜೆಪಿ ರಣತಂತ್ರ ಹೆಣೆಯಿತು. ಸಿಎಂ ಅವರನ್ನ ಬಗ್ಗುಬಡಿಯಲು ಪ್ರಯತ್ನಿಸಿತ್ತು.
ಈ ಮೂವರು ಮುಖ್ಯಮಂತ್ರಿಗಳು ದೇಶದ ಮೂರು ಭಾಗಗಳಲ್ಲಿ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ನಿಂತವರು. ಮೋದಿ ಸರ್ಕಾರ ಜನ-ವಿರೋಧಿ ನೀತಿಗಳು, ಪಕ್ಷಪಾತಿ ಧೋರಣೆಗಳನ್ನು ಖಂಡಿಸಿದವರು. ಬಿಜೆಪಿ-ಆರ್‌ಎಸ್‌ಎಸ್‌ನ ಕೋಮುವಾದಿ, ಮನುವಾದಿ ಸಿದ್ದಾಂತಗಳನ್ನು ಖಂಡಿಸಿದವರು. ಅಲ್ಲದೆ, ಬಿಜೆಪಿ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಗೆ ಸವಾಲಾಗಿ ನಿಂತಿರುವವರು.
ಬಹುಮುಖ್ಯವಾಗಿ, ಕೇಜ್ರಿವಾಲ್ ಭಷ್ಟ್ರಚಾರ ವಿರೋಧಿ ಆಂದೋಲನದಿಂದಲೇ ಅಧಿಕಾರಕ್ಕೆ ಬಂದವರು. ಸೊರೆನ್ ಈಶಾನ್ಯ ರಾಜ್ಯದ ಸ್ಥಳೀಯರ ನಾಯಕರಾಗಿ ಬಂದವರು. ಅದೇ ರೀತಿ, ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಛಾಪು ಮೂಡಿಸಿರುವವರು. ಈ ಮೂವರ ಮೇಲೆ ಈವರೆಗೆ ಗಮನಾರ್ಹವಾದ ಯಾವುದೇ ಆರೋಪ, ಕಳಂಕಗಳಿರಲಿಲ್ಲ. ಹೀಗಾಗಿ, ಅವರ ಮೇಲೆಯೇ ಆರೋಪ ಹೊರಿಸಿ, ಜೈಲಿಗಟ್ಟಿದರೆ, ತಾವು ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆದರೆ, ಬಿಜೆಪಿಯ ಎಲ್ಲ ತಂತ್ರಗಳು ಫಲಿಸುವುದಿಲ್ಲ. ಈ ದೇಶಕ್ಕೆ ಭದ್ರವಾದ ಸಂವಿಧಾನವಿದೆ. ಗಟ್ಟಿಯಾದ ಕಾನೂನುಗಳಿವೆ. ಅವೆಲ್ಲವನ್ನೂ ಬುಡಮೇಲು ಮಾಡಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿಯೇ, ಕೇಜ್ರಿವಾಲ್ ಮತ್ತು ಸೊರೇನ್ ಜಾಮೀನು ಪಡೆದಿದ್ದಾರೆ. ಜೈಲಿನಿಂದ ಹೊರಬಂದಿದ್ದಾರೆ. ಸಿದ್ದರಾಮಯ್ಯ ಅವರೂ ಕೂಡ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೇ ವೇಳೆ, ಬಿಜೆಪಿ ತಂತ್ರಗಳೂ ಬಟಾಬಯಲಾಗುತ್ತಿವೆ. ಈ ನಡುವೆ, ದೆಹಲಿ ವಿಧಾನಸಭಾ ಚುನವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಚುನಾವಣಾ ಪ್ರಿಯವಾಗಿರುವ ಬಿಜೆಪಿ ಸರ್ಕಾರ ತನ್ನ ಅಧಿಕಾವರನ್ನ ಮತ್ತೆ ದುರ್ಬಳಕೆ ಮಾಡಿಕೊಳ್ಳಬಹುದು ಎಂದೆನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಜೀವ ಹಿಂಡುವ ಜಿಎಸ್‌ಟಿ : ಬಡವರ ಹಣ ಕಿತ್ತು ಶ್ರೀಮಂತರಿಗೆ ನೀಡುತ್ತಿರುವ ನಿರ್ಮಲಾ ಸೀತಾರಾಮನ್
2025ರ ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಎಎಪಿ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಲು ಯೋಜನೆಗಳು ರೂಪುಗೊಳ್ಳುತ್ತಿವೆ. ಆತಿಶಿ ಅವರನ್ನೂ ಬಂಧಿಸಲು ಸಂಚು ನಡೆಯುತ್ತಿದೆ ಎಂದು ಸ್ವತಃ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರೇ ಹೇಳಿದ್ದಾರೆ.
ಇದಕ್ಕೆ ಕಾರಣ ಕೂಡ ಇದೆ. ಅದೆನೆಂದರೆ, ದೆಹಲಿಯ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಸಂಜೀವಿನಿ ಯೋಜನೆಯನ್ನು ಎಎಪಿ ಘೋಷಣೆ ಮಾಡಿದೆ. ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿಯಂತಹ ಕಲ್ಯಾಣ ಯೋಜನೆಗಳನ್ನು ಎಎಪಿ ಸರ್ಕಾರ ಘೋಷಿಸಿರುವುದು ಬಿಜೆಪಿಗೆ ಭಯ ಉಂಟುಮಾಡಿದೆ. ಹೀಗಾಗಿ, ದೆಹಲಿ ಮುಖ್ಯಮಂತ್ರಿ ಆತಿಶಿ ಅವರನ್ನು ಶೀಘ್ರದಲ್ಲೇ ನಕಲಿ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲು ಸಂಚು ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಚುನಾವಣಾ ಸಮಯದಲ್ಲಿ ಆಕ್ಟಿವ್ ಆಗಿ ತಪ್ಪಿಲ್ಲದಿದ್ದರೂ ಕೂಡ ಸಿಎಂ, ರಾಜಕಾರಣಿಗಳನ್ನ ಪ್ರಕರಣದಲ್ಲಿ ಸಿಲುಕಿಸಿ ನ್ಯಾಯಾಲಯದ ಮೆಟ್ಟಿಲು ಏರಿಸುತ್ತಿರುವ ಮೋದಿ ಸರ್ಕಾರ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಯಾರನ್ನ ಕಟಕಟೆಯಲ್ಲಿ ನಿಲ್ಲಿಸಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.