ಈ ದಿನ ವಿಶೇಷ | ದಲಿತರಿಗೆ ದೇವಾಲಯ ಪ್ರವೇಶಿಸುವುದು ಅನಿವಾರ್ಯವೇ?

Date:

Advertisements
ಧಾರ್ಮಿಕ ವ್ಯಕ್ತಿಯಾಗುವುದರ ಅರ್ಥ ನ್ಯಾಯಯುತವಾಗಿ ಬಾಳುವುದೇ ಹೊರತು, ತರತಮ ಎಣಿಸುವುದಲ್ಲ ಎಂಬುದು ಅಂಬೇಡ್ಕರ್ ವಿವೇಕವಾಗಿತ್ತು. ಆ ವಿವೇಕದ ದಾರಿಯನ್ನು ದಲಿತರು ಇನ್ನೂ ತುಳಿಯದಿರುವುದರಿಂದಲೇ ಈ ಆಧುನಿಕ 21ನೇ ಶತಮಾನದಲ್ಲೂ ದೇವಾಲಯಗಳ ಪ್ರವೇಶ ನಿರ್ಬಂಧಕ್ಕೆ ಗುರಿಯಾಗುತ್ತಿರುವುದು.

ಭಾರತದಲ್ಲಿ ದೇವಾಲಯಗಳು ಜಾತಿ ಸೃಷ್ಟಿ ಮತ್ತು ಜಾತಿ ತಾರತಮ್ಯದ ಮೂಲಗಳಾಗಿವೆ. ಮೇಲ್ಜಾತಿ ಮತ್ತು ಕೆಳ ಜಾತಿಗಳ ನಡುವಿನ ಗೋಡೆಯನ್ನು ಕೆಡವಿ ಹಾಕಲು ದಲಿತರು ದೇವಾಲಯ ಪ್ರವೇಶಿಸುವುದು ಸಾಧ್ಯವಾಗಬೇಕು ಎಂಬುದು ಅಂಬೇಡ್ಕರ್ ಅವರ ನಂಬಿಕೆ ಮತ್ತು ನಿಲುವಾಗಿತ್ತು. ಹೀಗಾಗಿಯೇ ಅವರು ಸುಮಾರು 15,000 ಹಿಂಬಾಲಕರೊಂದಿಗೆ ಹಳೆಯ ನಾಸಿಕ್ ಪ್ರದೇಶದಲ್ಲಿರುವ ಪ್ರಸಿದ್ಧ ಕಾಳರಾಮ ದೇವಾಲಯವನ್ನು ಮಾರ್ಚ್ 2, 1930ರಲ್ಲಿ ಪ್ರವೇಶಿಸಲು ಯತ್ನಿಸಿದ್ದರು. ದೇವಾಲಯ ಪ್ರವೇಶದ ಹಕ್ಕು ಹಾಗೂ ಸಮಾನತೆಯ ಹಕ್ಕಿಗಾಗಿ ನಡೆದ ಹೋರಾಟ ಅದಾಗಿತ್ತು.

ಈ ಐತಿಹಾಸಿಕ ಘಟನೆ ನಡೆದು ಸುಮಾರು ಒಂದು ಶತಮಾನ ಸಮೀಪಿಸುತ್ತಿದೆ. ಆದರೂ, ದಲಿತರಿಗೆ ಜಾತೀಯತೆಯ ಆಚರಣೆಯ ವಿರುದ್ಧ ಸಾಂವಿಧಾನಿಕ ರಕ್ಷಣೆ ಇದ್ದರೂ, ಆಗಾಗ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆಯ ಘಟನೆಗಳು ಜರುಗುತ್ತಲೇ ಇವೆ. ಈ ಸಾಲಿಗೆ ಹೊಸ ಸೇರ್ಪಡೆ ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮ. ಮಾಜಿ ಶಾಸಕ ಎಂ ಶ್ರೀನಿವಾಸ್ ನೇತೃತ್ವದಲ್ಲಿ ಜೀರ್ಣೋದ್ಧಾರಗೊಂಡಿದ್ದ ಪ್ರಸಿದ್ಧ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಇದುವರೆಗೂ ದಲಿತರಿಗೆ ಪ್ರವೇಶ ನಿರಾಕರಿಸಿಕೊಂಡು ಬರಲಾಗಿತ್ತು. ಆದರೆ, ದೇವಾಲಯ ಜೀರ್ಣೋದ್ಧಾರಗೊಳ್ಳುವುದಕ್ಕೂ ಮುನ್ನ, ಎಲ್ಲ ಕೋಮಿನ ಜನರೂ ದೇವಾಲಯ ಪ್ರವೇಶಿಸುತ್ತಿದ್ದರು ಎನ್ನಲಾಗಿದೆ.

ಈ ಕುರಿತು ದಲಿತರು ದೂರು ನೀಡಿದ ನಂತರ, ದೇವಾಲಯದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡುವೆ ನಡೆದ ಸಂಧಾನದಲ್ಲಿ ದಲಿತರಿಗೆ ದೇವಾಲಯಕ್ಕೆ ಪ್ರವೇಶ ನೀಡಲು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ನಂತರ ಇದೇ ಭಾನುವಾರ (ನವೆಂಬರ್ 10) ದಲಿತರು ಸಾಮೂಹಿಕವಾಗಿ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಿದ್ದಾರೆ. ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವುದಕ್ಕೆ ಕೆಲವು ಗ್ರಾಮಸ್ಥರು ಆಕ್ಷೇಪಿಸಿದ್ದು, ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರಗೆ ತೆಗೆದುಕೊಂಡು ಹೋಗಿ, ಮತ್ತೊಂದು ದೇವಾಲಯದಲ್ಲಿ ಇಟ್ಟುಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisements

1930ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗೆ ಸಮಾನತೆಯ ಸ್ವಾತಂತ್ರ್ಯ ದೊರಕಿಸಿಕೊಡಲು ಅಂಬೇಡ್ಕರ್ ಅವರು ಪ್ರಸಿದ್ಧ ಕಾಳರಾಮ ದೇವಾಲಯಕ್ಕೆ ತಮ್ಮ ಹಿಂಬಾಲಕರೊಂದಿಗೆ ಪ್ರವೇಶಿಸುವ ಯತ್ನ ನಡೆಸಿದ್ದರು. ಅದೇ ಅಂಬೇಡ್ಕರ್ ಅವರು ಅಕ್ಟೋಬರ್ 14, 1956ರಂದು ನಾಗಪುರದ ದೀಕ್ಷಾ ಭೂಮಿಯಲ್ಲಿ ತಮ್ಮ 4 ಲಕ್ಷ ಹಿಂಬಾಲಕರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಆ ಮೂಲಕ ‘ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ, ಹಿಂದೂವಾಗಿ ಸಾಯಲಾರೆ’ ಎಂಬ ಶಪಥವನ್ನು ಪೂರೈಸಿದ್ದರು.

ಹಿಂದೂ ಧರ್ಮಕ್ಕೆ ತರತಮವೇ ಮೂಲಾಧಾರ. ಅಂತಹ ಧರ್ಮದೊಳಗೆ ಸಮಾನತೆಗಾಗಿ ಹೋರಾಡಿ ಹಣ್ಣಾಗುವ ಬದಲು, ನಮ್ಮದೇ ಮೂಲ ಧರ್ಮವಾದ ಬೌದ್ಧ ಧರ್ಮಕ್ಕೆ ಮರಳುವುದೇ ವಿವೇಕಯುತ ನಿರ್ಧಾರ ಎಂಬುದನ್ನು ಅಂಬೇಡ್ಕರ್ ಅವರ ಬೌದ್ಧ ಧರ್ಮದ ಮತಾಂತರ ಸಾರಿ ಹೇಳುತ್ತಿದೆ. ಆದರೆ, ಅಂಬೇಡ್ಕರ್ ಗತಿಸಿ ಅರ್ಧ ಶತಮಾನವೇ ಕಳೆದು ಹೋಗಿದ್ದರೂ, ದಲಿತರಲ್ಲಿ ಮಾತ್ರ ಹಿಂದೂ ಧರ್ಮದ ತರತಮದ ಬಗ್ಗೆ ಜ್ಞಾನೋದಯವಾಗಿಲ್ಲ. ಬದಲಿಗೆ, ಹಿಂದೂ ಧರ್ಮದೊಳಗಿನ ಒಂದು ಜಾತಿಯಾಗಿ ಗುರುತಿಸಿಕೊಳ್ಳಲು ಪೈಪೋಟಿಯೇ ಏರ್ಪಟ್ಟಿದೆ. ಇತ್ತೀಚಿನ ದಿನಗಳಲ್ಲಂತೂ ದಲಿತರ ಕೇರಿಗಳಲ್ಲೂ ಹಿಂದೂ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯತೊಡಗಿವೆ. ಅದರಲ್ಲಿ ಗಣೇಶೋತ್ಸವ ಪ್ರಮುಖವಾದುದು. ಆ ಮೂಲಕ ದಲಿತರು ಮತ್ತೆ ಹಿಂದೂ ಧರ್ಮದ ತರತಮದ ಕಬಂಧ ಬಾಹುಗಳಲ್ಲಿ ತಾವೇ ಮುಂದಾಗಿ ಸೆರೆಯಾಗುತ್ತಿದ್ದಾರೆ.

ತಮ್ಮ ದೇವಾಲಯ ಪ್ರವೇಶದಿಂದ ಮೈಲಿಗೆಯಾಗುವ ದೇವರು ತಮಗಿಂತ ದುರ್ಬಲ ಎಂಬ ಜಾಗೃತಿ ದಲಿತರಲ್ಲಿ ಮೊದಲಿಗೆ ಮೂಡಬೇಕಿದೆ. ಅಂತಹ ದೇವಾಲಯಗಳಿಗೆ ತಾವೇ ಮುಂದೆ ನಿಂತು ಬಹಿಷ್ಕಾರ ಹಾಕುವ ಮೂಲಕ, ತಮ್ಮ ಕುಲದೈವಗಳ ಆರಾಧನೆಗಳತ್ತ ಮರಳಬೇಕಿದೆ. ಮಾರಮ್ಮ, ದೊಡ್ಡಮ್ಮ, ಗಂಗಮ್ಮ, ಅಟ್ಟಿ ಲಕ್ಕಮ್ಮ, ಪಿಳೇಕಮ್ಮ ಇಂತಹ ದೇವತೆಗಳ ಆರಾಧನೆಯೇ ದಲಿತರ ಮೂಲ ಧಾರ್ಮಿಕ ಸಂಸ್ಕೃತಿ. ಮಾತೃ ಪ್ರಧಾನ ಸಮಾಜವಾದ ದಲಿತ ಸಮುದಾಯವು ಆರಂಭದಿಂದಲೂ ಹೆಣ್ಣು ದೇವತೆಗಳನ್ನು ಆರಾಧಿಸಿಕೊಂಡು ಬಂದಿರುವುದೇ ಹೆಚ್ಚು. ಹೆಣ್ಣನ್ನು ಆರಾಧಿಸುವುದೆಂದರೆ, ಸೃಷ್ಟಿಯ ಮೂಲವಾದ ಪ್ರಕೃತಿಯನ್ನು ಆರಾಧಿಸಿದಂತೆ ಎಂಬುದು ದಲಿತ ಪೂರ್ವಜರ ವಿವೇಕವಾಗಿತ್ತು. ಆ ವಿವೇಕ ಮರೆಯಾಗಿ ವೈದಿಕ ದೇವರುಗಳೇ ಪ್ರಧಾನ ದೇವರುಗಳು ಹಾಗೂ ತಮ್ಮ ಕುಲದೈವಗಳು ಕ್ಷುದ್ರ ದೇವತೆಗಳು ಎಂಬ ಕೀಳರಿಮೆಗೆ ಒಳಗಾಗಿರುವುದರಿಂದಲೇ ವೈದಿಕರ ಜ್ಯೋತಿಷ್ಯ, ಮಂತ್ರಪ್ರವಚನ, ಹೋಮ-ಹವನಗಳಿಗೆ ಸುಶಿಕ್ಷಿತ ದಲಿತರಲ್ಲೇ ಬೇಡಿಕೆ ಹೆಚ್ಚಾಗಿರುವುದು.

ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರವಾಗುವ ಮುನ್ನ ವಿಶ್ವದ ಹಲವು ಪ್ರಮುಖ ಧರ್ಮಗಳ ಅಧ್ಯಯನ ನಡೆಸಿದ್ದರು. ಕೊಟ್ಟಕೊನೆಗೆ ಅವರು ಬೌದ್ಧ ಧರ್ಮವನ್ನು ಆಯ್ದುಕೊಂಡಿದ್ದಕ್ಕೆ ಅದು ತಮ್ಮ ಮೂಲ ಧರ್ಮ ಎಂಬುದು ಒಂದು ಕಾರಣವಾದರೆ, ಎರಡನೆಯದು, ಅತ್ಯಂತ ವೈಜ್ಞಾನಿಕ ನೆಲೆಯಲ್ಲಿ ನಿರ್ವಚನಗೊಂಡಿರುವ ಬೌದ್ಧ ಧರ್ಮದಲ್ಲಿ ಬುದ್ಧನನ್ನು ಯಾವ ಹಂತದಲ್ಲೂ ದೇವರು ಎಂದು ಪರಿಗಣಿಸುವುದಿಲ್ಲ. ಅಲ್ಲದೆ ಬುದ್ಧ ಕೂಡಾ ತನ್ನನ್ನು ತಾನು ಎಂದೂ ದೇವರು ಎಂದು ಘೋಷಿಸಿಕೊಳ್ಳಲಿಲ್ಲ. ನಾನು ದೇವರನ್ನು ಕಂಡೆ ಎಂದು ಹುಸಿ ನುಡಿಯಲಿಲ್ಲ. ಅತ್ಯಂತ ಲೌಕಿಕ ವ್ಯಕ್ತಿಯಾಗಿದ್ದ ಅಂಬೇಡ್ಕರ್ ಅವರನ್ನು ಬೌದ್ಧ ಧರ್ಮ ಆಕರ್ಷಿಸಿದ್ದೇ ಈ ಕಾರಣಗಳಿಂದ.

ಈ ವರದಿ ಓದಿದ್ದೀರಾ?: ವಕ್ಫ್‌ ವಿವಾದದಲ್ಲಿ ಜೆಪಿಸಿ | ಹಿಂದು ವಿರೋಧಿ, ರೈತ ವಿರೋಧಿ ನೀತಿಗೇಕೆ ಬಿಜೆಪಿ ಅಂಟಿಕೊಳ್ಳುತ್ತಿದೆ?

ಬೌದ್ಧ ಧರ್ಮವೂ ಪುರೋಹಿತಶಾಹಿಯ ಹಿಡಿತಕ್ಕೆ ಸಿಲುಕಿರುವ ಆರೋಪಕ್ಕೆ ತುತ್ತಾಗಿರುವ ಈ ಹೊತ್ತಿನಲ್ಲಿ ಬುದ್ಧನನ್ನು ಎದೆಯಲ್ಲಿಟ್ಟುಕೊಂಡು ದಲಿತರು ತಮ್ಮ ಮಾತೃನೆಲೆಯ ಧಾರ್ಮಿಕ ಆಚರಣೆಗಳಿಗೆ ಮರಳಬೇಕಿದೆ. ಅರ್ಥಾತ್, ಯಾವ ವೈದಿಕಶಾಹಿ ದಲಿತರ ದೇವತೆಗಳನ್ನು ಕ್ಷುದ್ರ ದೇವತೆಗಳು ಎಂದು ಬಿಂಬಿಸಿದೆಯೊ, ಆ ಕ್ಷುದ್ರ ದೇವತೆಗಳನ್ನೇ ತಮ್ಮ ಧಾರ್ಮಿಕ ವಿಮೋಚನೆಯ ಮಾರ್ಗವನ್ನಾಗಿ ಮಾರ್ಪಡಿಸಿಕೊಳ್ಳಬೇಕಿದೆ. ಈ ನೆಲದ ಮೂಲ ನಿವಾಸಿಗಳಾದ ದಲಿತರು ಸೃಷ್ಟಿಯ ಮೂಲವಾದ ಪ್ರಕೃತಿಯನ್ನೇ ದೈವವೆಂದು ಆರಾಧಿಸಿಕೊಂಡು ಬಂದಿರುವವರು. ಹೀಗಾಗಿಯೇ ಅವರಲ್ಲಿರುವಷ್ಟು ಮಾತೃ ನೆಲೆಯ ಧಾರ್ಮಿಕ ಆಚರಣೆಗಳು ಬೇರೆ ಯಾವ ಸಮುದಾಯಗಳಲ್ಲೂ ಇಲ್ಲ. ಇದು ದಲಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆ ಕೂಡಾ ಹೌದು.

ಈ ಸೃಷ್ಟಿಯಲ್ಲಿ ಜೀವ ವಿಕಸನಗೊಂಡು, ಮನುಷ್ಯ ಯೋಚಿಸಬಲ್ಲ ಪ್ರಾಣಿಯಾಗಿ ರೂಪಾಂತರಗೊಂಡಾಗಿನಿಂದ, ಆತನಲ್ಲಿ ಸೃಷ್ಟಿಯ ಮೂಲದ ಕುರಿತು ತಣಿಯದ ಕುತೂಹಲ, ಕೌತಕ ಬೆಳೆದುಕೊಂಡು ಬಂದಿದೆ. ಅದರೊಂದಿಗೆ ಭಯ, ಭಕ್ತಿ ಕೂಡಾ. ಇದರ ಭಾಗವಾಗಿಯೇ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಆಚರಣೆಗಳೂ ಬೆಳೆದು ಬಂದಿರುವುದು. ಆದರೆ, ಸರ್ವರನ್ನೂ ಸಮಾನವಾಗಿ ಕಾಣು ಎಂದು ಬೋಧಿಸುವ ಈ ಎಲ್ಲ ಧರ್ಮಗಳಲ್ಲಿ ನುಸುಳಿಕೊಂಡಿರುವ ಪುರೋಹಿತಶಾಹಿಗಳು ಶ್ರೇಷ್ಠತೆಯ ವ್ಯಸನದಿಂದ ಮೇಲು, ಕೀಳುಗಳ ತರತಮವನ್ನು ಸೃಷ್ಟಿಸಿದ್ದಾರೆ. ಹೀಗಾಗಿಯೇ ಹಿಂದೂ ಧರ್ಮದಲ್ಲಿನ ತರತಮವನ್ನು ಅಂಬೇಡ್ಕರ್ ನಖಾಶಿಖಾಂತ ವಿರೋಧಿಸಿದ್ದು ಹಾಗೂ ಹಿಂದೂ ಧರ್ಮವನ್ನೇ ತ್ಯಜಿಸಿದ್ದು.

ಅಂಬೇಡ್ಕರ್ ಎಷ್ಟು ಲೌಕಿಕ ವ್ಯಕ್ತಿಯಾಗಿದ್ದರೊ, ಅಷ್ಟೇ ಧಾರ್ಮಿಕ ವ್ಯಕ್ತಿಯಾಗಿದ್ದರೂ ಕೂಡಾ. ಹೀಗಾಗಿಯೇ ಅವರು, ತಮ್ಮ ಕೊನೆಗಾಲದಲ್ಲಿ ಬೌದ್ಧ ಧರ್ಮವನ್ನು ಆತುಕೊಂಡರು. ಧಾರ್ಮಿಕ ವ್ಯಕ್ತಿಯಾಗುವುದರ ಅರ್ಥ ನ್ಯಾಯಯುತವಾಗಿ ಬಾಳುವುದೇ ಹೊರತು, ತರತಮ ಎಣಿಸುವುದಲ್ಲ ಎಂಬುದು ಅವರ ವಿವೇಕವಾಗಿತ್ತು. ಆ ವಿವೇಕದ ದಾರಿಯನ್ನು ದಲಿತರು ಇನ್ನೂ ತುಳಿಯದಿರುವುದರಿಂದಲೇ ಈ ಆಧುನಿಕ 21ನೇ ಶತಮಾನದಲ್ಲೂ ದೇವಾಲಯಗಳ ಪ್ರವೇಶ ನಿರ್ಬಂಧಕ್ಕೆ ಗುರಿಯಾಗುತ್ತಿರುವುದು.
ಇನ್ನಾದರೂ ದಲಿತರು ವೈದಿಕರ ಪಿತೃಪ್ರಧಾನ ಧಾರ್ಮಿಕ ಡಂಭಾಚಾರಗಳಿಗೆ ಮರುಳಾಗದೆ, ತಮ್ಮ ಮಾತೃ ಭೂಮಿಕೆಯ ಧಾರ್ಮಿಕ ಆಚರಣೆಗಳಿಗೆ ಮರಳಬೇಕಿದೆ. ಇದರೊಂದಿಗೆ ಬುದ್ಧನ ಪ್ರೀತಿ, ಕಾರುಣ್ಯ, ಸಹನೆ, ಬಂಧುತ್ವವನ್ನೂ ಎದೆಯಲ್ಲಿ ಕಾಪಿಟ್ಟುಕೊಳ್ಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X