ಭವ್ಯ ಇತಿಹಾಸವಿರುವ ಇಸ್ರೋವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ವಿಜ್ಞಾನಿಗಳ ಶ್ರಮವನ್ನು ಗೌರವಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಕೇವಲ ಖಾಸಗಿ ಕಂಪನಿಗಳ ಹಿತಾಸಕ್ತಿ ಕಾಯುವ ಮತ್ತು ಕಾರ್ಪೊರೇಟ್ ಕ್ಷೇತ್ರಕ್ಕೆ ಮಣೆ ಹಾಕುವ ಸರ್ಕಾರದ ಇಂದಿನ ನಿರ್ಲಕ್ಷ್ಯದ ನೀತಿಗಳು, ದೇಶದ ಹೆಮ್ಮೆಯ ಸಾರ್ವಜನಿಕ ಸಂಸ್ಥೆಯನ್ನೇ ಬಲಿಪೀಠಕ್ಕೆ ತಳ್ಳುತ್ತಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇವಲ ಒಂದು ಸಂಸ್ಥೆಯಲ್ಲ, ಅದು ದಶಕಗಳಿಂದಲೂ ಭಾರತದ ಸ್ವಾಭಿಮಾನದ ಸಂಕೇತವಾಗಿ ಅಚ್ಚಳಿಯದೆ ಉಳಿದಿದೆ. ಸ್ವಾತಂತ್ರ್ಯದ ನಂತರ ಸೀಮಿತ ಸಂಪನ್ಮೂಲಗಳಿದ್ದರೂ, ವಿಕ್ರಮ್ ಸಾರಾಭಾಯ್, ಸತೀಶ್ ಧವನ್, ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಮಹಾನ್ ವಿಜ್ಞಾನಿಗಳ ಅವಿರತ ಶ್ರಮದಿಂದ ಇಸ್ರೋ ಹಲವು ಮುಂದುವರೆದ ದೇಶಗಳು ಬೆರಗಾಗುವಂತೆ ಹಲವು ಅದ್ಭುತ ಸಾಧನೆಗಳನ್ನು ಮಾಡಿತ್ತು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಶೂನ್ಯದಿಂದ ಆರಂಭಿಸಿ ಜಾಗತಿಕ ಮಹಾಶಕ್ತಿಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದ್ದ ಇಸ್ರೋದ ಆ ಸುವರ್ಣ ಇತಿಹಾಸ ಇಂದು ಕವಲು ದಾರಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಬಾಹ್ಯಾಕಾಶ ಕ್ಷೇತ್ರವನ್ನು ಜಾಗತಿಕ ಮಾರುಕಟ್ಟೆಗೆ ಮುಕ್ತಗೊಳಿಸುವ ಹೆಸರಿನಲ್ಲಿ ಕೈಗೊಂಡಿರುವ ಅತಿಯಾದ ಖಾಸಗೀಕರಣ ನೀತಿಯು ಈ ಹೆಮ್ಮೆಯ ಸಂಸ್ಥೆಯ ಅಸ್ತಿತ್ವಕ್ಕೇ ಪೆಟ್ಟು ನೀಡುತ್ತಿದೆ. ಪ್ರಸ್ತುತ ದೇಶದಲ್ಲಿ ನಾನೂರಕ್ಕೂ ಹೆಚ್ಚು ಖಾಸಗಿ ಬಾಹ್ಯಾಕಾಶ ನವೋದ್ಯಮಗಳು (ಸ್ಟಾರ್ಟ್-ಅಪ್) ತಲೆಯೆತ್ತಲು ಕೆಂಪುಹಾಸು ಹಾಸಿರುವ ಕೇಂದ್ರ ಸರ್ಕಾರ, ದಶಕಗಳಿಂದ ದೇಶಕ್ಕೆ ಕೀರ್ತಿ ತಂದ ಇಸ್ರೋವನ್ನು ಮಾತ್ರ ವ್ಯವಸ್ಥಿತವಾಗಿ ಕಡೆಗಣಿಸುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿವೆ.

ಬಾಹ್ಯಾಕಾಶ ರಂಗದಲ್ಲಿ ಖಾಸಗಿ ಬಂಡವಾಳಶಾಹಿಗಳ ಭರಾಟೆ ಜೋರಾಗುತ್ತಿದ್ದಂತೆ, ಇಸ್ರೋದ ಪ್ರತಿಭಾವಂತ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು ಜಾಗತಿಕ ಹಾಗೂ ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಚಂದ್ರಯಾನದ ಮೂವರು ಸೇರಿ ದೇಶದ ವಿವಿಧ ಇಸ್ರೋ ಕೇಂದ್ರಗಳಿಂದ 120 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು ರಾಜೀನಾಮೆ ಕೋರಿ ಅರ್ಜಿ ಸಲ್ಲಿಸಿರುವುದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಬೃಹತ್ ಆರ್ಥಿಕ ಪ್ಯಾಕೇಜ್ ಗಳ ಆಮಿಷಕ್ಕೆ ಸಿಲುಕಿ ಭಾರಿ ಪ್ರಮಾಣದಲ್ಲಿ ಬ್ರೇನ್ ಡ್ರೇನ್ (ಮೆದುಳು ಸೋರಿಕೆ) ಆಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಆರಂಭದಲ್ಲಿ ಸಂಪೂರ್ಣ ಉದಾಸೀನತೆ ತಳೆದಿತ್ತು.
120ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ಸಾಮೂಹಿಕ ರಾಜೀನಾಮೆಯಿಂದ ಬಿಕ್ಕಟ್ಟು ಬಿಗಡಾಯಿಸಿದಾಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ವಿಜ್ಞಾನಿಗಳ ಮೂಲಭೂತ ಸಮಸ್ಯೆಗಳನ್ನು ಆಲಿಸುವ ಬದಲು ಅವರ ಮೇಲೆ ಬಲವಂತದ ನಿಯಂತ್ರಣ ಹೇರಲು ಮುಂದಾಗಿದೆ. ಇಸ್ರೋದಿಂದ ಹೊರಹೋಗದಂತೆ ತಡೆಯಲು ನಿರ್ಗಮನ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿಸುವಂತೆ ಆಡಳಿತ ಮಂಡಳಿಗೆ ಸರ್ಕಾರ ಆದೇಶಿಸಿದೆ. ವಿಜ್ಞಾನಿಗಳನ್ನು ಗೌರವದಿಂದ ಉಳಿಸಿಕೊಳ್ಳುವ ಬದಲು, ಆಡಳಿತಾತ್ಮಕವಾಗಿ ಹತ್ತಿಕ್ಕುವ ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯು ತಜ್ಞರ ಹಾಗೂ ವಿಜ್ಞಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಇಸ್ರೋಗಿಂತ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಪ್ರಧಾನತೆ ಹಾಗೂ ಉತ್ತೇಜನ ನೀಡುತ್ತಿರುವುದೇ ಇಂದಿನ ಈ ದುಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ದೇಶಿಯ ನವೋದ್ಯಮಗಳಿಗೆ ಕೋಟ್ಯಂತರ ರೂಪಾಯಿಗಳ ಸಬ್ಸಿಡಿ ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸುತ್ತಿರುವ ಸರ್ಕಾರ, ಇಸ್ರೋ ವಿಜ್ಞಾನಿಗಳ ವೇತನ ಪರಿಷ್ಕರಣೆ ಮತ್ತು ಸೌಲಭ್ಯಗಳ ಬೇಡಿಕೆಯನ್ನು ಮಾತ್ರ ದಶಕಗಳಿಂದ ಕಡೆಗಣಿಸಿದೆ. ಖಾಸಗಿ ವಲಯವು ಇಸ್ರೋದ ಸಿದ್ಧ ಸಂಪನ್ಮೂಲಗಳನ್ನು ಸೆಳೆಯುತ್ತಿದ್ದರೂ ಸರ್ಕಾರ ಮೂಕಪ್ರೇಕ್ಷಕನಂತೆ ಕುಳಿತಿರುವುದು ಅದರ ಕಾರ್ಪೊರೇಟ್ ಪರ ಒಲವನ್ನು ಸಾಬೀತುಪಡಿಸುತ್ತಿದೆ.

ಕೇಂದ್ರದ ಕಟ್ಟುನಿಟ್ಟಾದ ಅಧಿಕಾರಶಾಹಿ ನಿಯಮಗಳು ಮತ್ತು ಆಡಳಿತಾತ್ಮಕ ವಿಳಂಬಗಳು ಇಸ್ರೋದ ಸ್ವಾಯತ್ತತೆಯನ್ನು ಹಂತಹಂತವಾಗಿ ಕುಗ್ಗಿಸುತ್ತಿವೆ. ಏಳನೇ ವೇತನ ಆಯೋಗದ ನಿಯಮಾವಳಿಗಳ ಅಡಿಯಲ್ಲಿ ಸಿಗುವ ಅಲ್ಪ ವೇತನಕ್ಕೆ ಬದ್ಧರಾಗಿ ದುಡಿಯುವ ವಿಜ್ಞಾನಿಗಳಿಗೆ ಕನಿಷ್ಠ ಪ್ರೋತ್ಸಾಹಕಗಳನ್ನು ನೀಡಲು ಕೂಡ ಸರ್ಕಾರ ಮೀನಮೇಷ ಎಣಿಸುತ್ತಿದೆ. ಆದರೆ, ಖಾಸಗಿ ಕಂಪನಿಗಳಲ್ಲಿ ವಿಜ್ಞಾನಿಗಳಿಗೆ ಸಿಗುವ ಮುಕ್ತ ಸ್ವಾತಂತ್ರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳು ಯುವ ವಿಜ್ಞಾನಿಗಳನ್ನು ಸುಲಭವಾಗಿ ಆಕರ್ಷಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯವೇ ಅವರ ವಲಸೆಗೆ ರಹದಾರಿಯಾಗಿದೆ.
ವಿಜ್ಞಾನಿಗಳ ಈ ಸಾಮೂಹಿಕ ನಿರ್ಗಮನವು ಭವಿಷ್ಯದ ಅತ್ಯಂತ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಬಾಹ್ಯಾಕಾಶ ಯೋಜನೆಗಳಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ‘ಗಗನ್ಯಾನ್’, ‘ಚಂದ್ರಯಾನ-4’ ಹಾಗೂ ಭಾರತದ ಸ್ವಂತ ‘ಅಂತರಿಕ್ಷ ನಿಲ್ದಾಣ’ದಂತಹ ಯೋಜನೆಗಳು ನಿರ್ಣಾಯಕ ಹಂತದಲ್ಲಿವೆ. ಈ ಸಮಯದಲ್ಲಿ ತಾಂತ್ರಿಕ ಸೂಕ್ಷ್ಮತೆಗಳನ್ನು ಬಲ್ಲ ವಿಜ್ಞಾನಿಗಳು ಇಸ್ರೋ ತೊರೆದರೆ ಯೋಜನೆಗಳು ವರ್ಷಗಟ್ಟಲೆ ವಿಳಂಬವಾಗಲಿವೆ. ದೇಶದ ಪ್ರತಿಷ್ಠೆ ಅಪಾಯದಲ್ಲಿದ್ದರೂ ಕೇಂದ್ರವು ಮಾತ್ರ ಖಾಸಗೀಕರಣದ ಮಂತ್ರ ಜಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದನ್ನೂ ಓದಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಶೂಟರ್ ದಿಢೀರ್ ನಾಪತ್ತೆ
ಭವ್ಯ ಇತಿಹಾಸವಿರುವ ಇಸ್ರೋವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ವಿಜ್ಞಾನಿಗಳ ಶ್ರಮವನ್ನು ಗೌರವಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಕೇವಲ ಖಾಸಗಿ ಕಂಪನಿಗಳ ಹಿತಾಸಕ್ತಿ ಕಾಯುವ ಮತ್ತು ಕಾರ್ಪೊರೇಟ್ ಕ್ಷೇತ್ರಕ್ಕೆ ಮಣೆ ಹಾಕುವ ಸರ್ಕಾರದ ಇಂದಿನ ನಿರ್ಲಕ್ಷ್ಯದ ನೀತಿಗಳು, ದೇಶದ ಹೆಮ್ಮೆಯ ಸಾರ್ವಜನಿಕ ಸಂಸ್ಥೆಯನ್ನೇ ಬಲಿಪೀಠಕ್ಕೆ ತಳ್ಳುತ್ತಿವೆ. ದೇಶದ ಸ್ವಾಭಿಮಾನದ ಪ್ರತೀಕವಾದ ಇಸ್ರೋದ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಮಹಾನ್ ವಿಜ್ಞಾನಿಗಳು ತಮ್ಮ ಬೆವರು ಸುರಿಸಿ ಕಟ್ಟಿದ ಭವ್ಯ ಪರಂಪರೆ ಶೀಘ್ರದಲ್ಲೇ ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.




