'ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ಈ ಬಿಲ್ ಒಂದೇ ತಕ್ಕಡಿಯಲ್ಲಿ ತೂಗುತ್ತದೆ. ಭಾರತದ ಜಾತಿವ್ಯವಸ್ಥೆಯ ಬಹುಮುಖ್ಯ ಲಕ್ಷಣ ಶ್ರೇಣೀಕರಣವಾಗಿದ್ದು, ಇದರಲ್ಲಿ ಅತ್ಯಂತ ಕಟ್ಟ ಕಡೆಯ ಶೋಷಿತರು ದಲಿತರೇ ಆಗಿದ್ದಾರೆ'
ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಆಗುವ ದಬ್ಬಾಳಿಕೆ, ದೌರ್ಜನ್ಯಗಳನ್ನು ತಡೆಯಲು ‘ರೋಹಿತ್ ವೇಮುಲ ಕಾಯ್ದೆ’ ರೂಪಿಸಬೇಕು ಎಂಬ ಆಗ್ರಹಗಳಿಗೆ ಕಿವಿಗೊಟ್ಟಿರುವ ಕರ್ನಾಟಕ ಸರ್ಕಾರ, ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೂ ಪ್ರಸ್ತಾವಿತ ಮಸೂದೆಯಲ್ಲಿ ಸಮಸ್ಯಾತ್ಮಕವಾದ ಹಾಗೂ ಗಂಭೀರ ಪರಿಣಾಮ ಬೀರದ ಅಂಶಗಳಿರುವುದು ಚರ್ಚೆಯ ಮುನ್ನೆಲೆಗೆ ಬಂದಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳೊಂದಿಗೆ ಒಬಿಸಿ (ಇತರೆ ಹಿಂದುಳಿದ ವರ್ಗ) ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಶೋಷಣೆಗಳನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಿರುವುದು ಗೊಂದಲಕಾರಿಯಾದಂತೆ ಕಾಣುತ್ತಿದೆ. ಕನ್ನಡ ಕೆಲ ಪತ್ರಿಕೆಗಳಲ್ಲಿ ಮಸೂದೆಯಲ್ಲಿರುವ ಅಂಶಗಳು ಈಗಾಗಲೇ ವರದಿಯಾಗಿದ್ದು, ಮೇಲು ನೋಟಕ್ಕೆ ರೋಹಿತ್ ವೇಮುಲ ಮಸೂದೆಯು ಮತ್ತಷ್ಟು ಗಟ್ಟಿಯಾಗಿರಬೇಕಾಗಿದೆ.
‘ಕರ್ನಾಟಕ ರೋಹಿತ್ ವೇಮುಲ (ಅನ್ಯಾಯ ಅಥವಾ ಹೊರಗಿಡುವಿಕೆಯನ್ನು ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ, 2025’ ಹೇಳುತ್ತಿರುವ ಅಂಶಗಳು ಚರ್ಚೆಗೆ ಒಳಪಡುತ್ತಿವೆ. ಎಸ್‌ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಘನತೆಯ ಹಕ್ಕನ್ನು ರಕ್ಷಿಸಲು ಹಾಗೂ ಈ ಸಮುದಾಯಗಳನ್ನು ಹೊರಗಿಡುವ, ಅನ್ಯಾಯ ಎಸಗುವ ಕ್ರೌರ್ಯವನ್ನು ತಪ್ಪಿಸಲು ಈ ಮಸೂದೆ ಚಿಂತಿಸಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಮಾನ ಪ್ರವೇಶ ಮತ್ತು ಶಿಕ್ಷಣದ ಹಕ್ಕನ್ನು ಈ ಸಮುದಾಯಗಳಿಗೆ ಖಾತ್ರಿಪಡಿಸುವ ಕುರಿತು ಮಸೂದೆ ಮಾತನಾಡುತ್ತಿದೆ.
ಪ್ರಸ್ತಾವಿತ ಮಸೂದೆಯ ಮುಖ್ಯ ಅಂಶಗಳು
ಸೆಕ್ಷನ್ 3ರ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಎಂಬುದು ಎಲ್ಲಾ ವರ್ಗ, ಜಾತಿ, ಧರ್ಮ, ಲಿಂಗ ಮತ್ತು ದೇಶಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿರಬೇಕು. ಅರ್ಹತಾ ಪರೀಕ್ಷೆಗಳಲ್ಲಿನ ಮೆರಿಟ್ ಆಧಾರದ ಮೇಲೆ ಎಲ್ಲಾ ಪ್ರವೇಶಾತಿಗಳು ನಡೆಯಬೇಕು.
ಸೆಕ್ಷನ್ 4 ತಾರತಮ್ಯವನ್ನು ನಿಷೇಧಿಸುತ್ತದೆ. ಇತರೆ ಹಿಂದುಳಿದ ವರ್ಗಗಳು, ಧಾರ್ಮಿಕ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯಾವುದೇ ವ್ಯಕ್ತಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ತಾರತಮ್ಯ ಇರಬಾರದು.
ಇದನ್ನೂ ಓದಿರಿ: ಬೆಂಗಳೂರು | ಮೆಟ್ರೋದಲ್ಲಿ ಗುಟ್ಕಾ, ಪಾನ್ ಉಗುಳುವವರೇ ಎಚ್ಚರ! ಬೀಳಲಿದೆ ದಂಡ
ಸೆಕ್ಷನ್ 5 ಯಾರು ದೂರು ದಾಖಲಿಸಬಹುದು ಎಂದು ಹೇಳುತ್ತದೆ. ನೊಂದ ವ್ಯಕ್ತಿ, ಆತನ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತ ಸಂಬಂಧಿ, ಮದುವೆ, ದತ್ತು ಅಥವಾ ಯಾವುದೇ ವಿಧದಿಂದ ಸಂಬಂಧಿತನಾಗಿರುವ ವ್ಯಕ್ತಿ ಅಥವಾ ಸಹೋದ್ಯೋಗಿ ದೂರು ದಾಖಲಿಸಬಹುದು. ಸೆಕ್ಷನ್ 4ರ ನಿಯಮಗಳನ್ನು ಉಲ್ಲಂಘಿಸಿರುವುದನ್ನು ದೂರು ಎತ್ತಿಹಿಡಿಯುತ್ತದೆ.
ಸೆಕ್ಷನ್ 6 ಶಿಕ್ಷೆಯ ಪ್ರಮಾಣವನ್ನು ಹೇಳುತ್ತದೆ. ಸೆಕ್ಷನ್ 4ರ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ, ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಬಹುದು. ನ್ಯಾಯಾಲಯವು ತಾರತಮ್ಯಕ್ಕೆ ತಕ್ಕಂತೆ ಆರೋಪಿತನಿಂದ ನೊಂದ ವ್ಯಕ್ತಿಗೆ ದಂಡದ ಜೊತೆಗೆ ಒಂದು ಲಕ್ಷ ರೂಪಾಯಿಗಳವರೆಗೂ ಸರಿಯಾದ ಪರಿಹಾರವನ್ನು ಕೊಡಿಸಬಹುದು. ಈ ಅಧಿನಿಯಮದ ಅಡಿಯಲ್ಲಿನ ಅಪರಾಧಕ್ಕಾಗಿ ಈ ಹಿಂದೆ ನ್ಯಾಯಾಲಯದಿಂದ ದೋಷಿಯಾದ ಯಾವುದೇ ವ್ಯಕ್ತಿಯು ಮತ್ತೆ ಇದೇ ಅಧಿನಿಯಮದಡಿಯಲ್ಲಿ ಉಲ್ಲೇಖಿತವಾಗಿರುವ ಅಪರಾಧವನ್ನು ಮಾಡಿ, ದೋಷಿ ಎಂದು ಸಾಭೀತಾದರೆ, ಅಂತಹ ವ್ಯಕ್ತಿಗೆ ಕನಿಷ್ಟ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ ಕಾರಾಗೃಹ ಶಿಕ್ಷೆ ನೀಡಿ, ಜೊತೆಗೆ ಒಂದು ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಬಹುದು.
ಸೆಕ್ಷನ್ 7ರ ಪ್ರಕಾರ ಈ ಅಪರಾಧಗಳು ಜಾಮೀನು ರಹಿತವಾಗಿರುತ್ತವೆ. ಸೆಕ್ಷನ್ 8ರ ಪ್ರಕಾರ ಸಂಸ್ಥೆಯು ಈ ನಿಯಮಗಳನ್ನು ಉಲ್ಲಂಘಿಸಿದರೆ ಸದರಿ ಸಂಸ್ಥೆಯ ಕಾರ್ಯನಿರ್ವಹಣೆಯ ಉಸ್ತುವಾರಿಯಾಗಿರುವ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಸೆಕ್ಷನ್ 6ರ ಅಡಿಯಲ್ಲಿ ಸೂಚಿಸಲಾಗಿರುವ ಶಿಕ್ಷೆಯನ್ನು ವಿಧಿಸಬಹುದು. ಈ ಅಧಿನಿಯಮದ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಸಂಸ್ಥೆಗೆ ಸರ್ಕಾರವು ಯಾವುದೇ ರೀತಿಯ ಅನುದಾನ ಅಥವಾ ಹಣಕಾಸಿನ ನೆರವನ್ನು ನೀಡಬಾರದು.
ಸೆಕ್ಷನ್ 9 ಯಾರು ಯಾರು ಅಪರಾಧಿಗಳು ಎಂಬುದನ್ನು ವಿವರಿಸುತ್ತದೆ. (1) ಅಪರಾಧವೆಂದು ಹೇಳುವ ಯಾವುದೇ ಕೃತ್ಯವನ್ನು ಎಸಗುವ ಪ್ರತಿ ವ್ಯಕ್ತಿಗಳು (2) ಅಪರಾಧ ಎಸಗುವಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಅಥವಾ ಕುಮ್ಮಕ್ಕು ನೀಡುವ ಪ್ರತಿಯೊಬ್ಬ ವ್ಯಕ್ತಿಗಳು.
ಇದನ್ನೂ ಓದಿರಿ: ದೇಶ ಈಗ ಜನಿವಾರದ ಕಪಿಮುಷ್ಟಿಯಲ್ಲಿದೆ: ಮಾವಳ್ಳಿ ಶಂಕರ್
ಈ ಮೇಲಿನ ಅಂಶಗಳನ್ನು ಕೂಲಂಕಶವಾಗಿ ನೋಡಿದರೆ ಕೆಲವು ಗೊಂದಲಗಳು ಮೂಡುವುದು ಸಹಜ. ಈ ಕುರಿತು ಪ್ರತಿಕ್ರಿಯಿಸಿರುವ ಬರಹಗಾರ ವಿಕಾಸ್ ಆರ್. ಮೌರ್ಯ ಅವರು ಸೆಕ್ಷನ್ 4ರಲ್ಲಿನ ಕೆಲ ತೊಡಕುಗಳ ಬಗ್ಗೆ ಪ್ರಶ್ನಿಸಿದ್ದಾರೆ. “ಕರ್ನಾಟಕ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಳಸಮುದಾಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತಾರತಮ್ಯವನ್ನು ತಡೆಯಲು ಜಾರಿಗೊಳಿಸುತ್ತಿರುವ ರೋಹಿತ್ ಕಾಯ್ದೆಯನ್ನು ಸಮಾನತೆ ಬಯಸುವ ಪ್ರತಿಯೊಬ್ಬರೂ ಸ್ವಾಗತಿಸಲೇಬೇಕು. ಆದರೆ ಕರ್ನಾಟಕ ಸರ್ಕಾರವು ತಯಾರಿಸಿರುವ ಮಸೂದೆ ಕೆಲವು ಗೊಂದಲದಿಂದ ಕೂಡಿದೆ” ಎಂದಿದ್ದಾರೆ.
“ಮೊದಲಿಗೆ ಈ ಪ್ರಸ್ತಾಪಿತ ಬಿಲ್‌ನಲ್ಲಿ ತಾರತಮ್ಯದ ಮಾದರಿ, ವಿಧ ಹಾಗೂ ಸ್ವರೂಪವನ್ನು ಉಲ್ಲೇಖ ಮಾಡಿಯೇ ಇಲ್ಲ. ಇದರಿಂದ ಯಾವುದು ತಾರತಮ್ಯ ಎನ್ನುವ ವಿಚಾರವೇ ಅಸ್ಪಷ್ಟವಾಗಿದೆ. ಎರಡನೆಯದಾಗಿ, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ಈ ಬಿಲ್ ಒಂದೇ ತಕ್ಕಡಿಯಲ್ಲಿ ತೂಗುತ್ತದೆ. ಭಾರತದ ಜಾತಿವ್ಯವಸ್ಥೆಯ ಬಹುಮುಖ್ಯ ಲಕ್ಷಣ ಶ್ರೇಣೀಕರಣವಾಗಿದ್ದು, ಇದರಲ್ಲಿ ಅತ್ಯಂತ ಕಟ್ಟ ಕಡೆಯ ಶೋಷಿತರು ದಲಿತರೇ ಆಗಿದ್ದಾರೆ. ಹಾಗಾಗಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಅನುಭವಿಸುವ ತಾರತಮ್ಯದ ಸ್ವರೂಪವನ್ನು ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅನುಭವಿಸಲು ಸಾಧ್ಯವಿಲ್ಲ” ಎಂಬ ಅಭಿಪ್ರಾಯ ತಾಳಿದ್ದಾರೆ.
ಇದನ್ನೂ ಓದಿರಿ: ಬಿಜೆಪಿ ಮುಖಂಡನಿಂದ ಸಿಯುಕೆ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ದೂರು ನೀಡಿದರೂ ಕ್ರಮ ವಹಿಸದ ಆಡಳಿತ ವರ್ಗ
ಮುಂದುವರಿದು, “ಇಲ್ಲಿ ಅಸ್ಪೃಶ್ಯತೆ ಎಂಬುದು ದಲಿತರು ಮಾತ್ರ ಅನುಭವಿಸಬಲ್ಲ ತಾರತಮ್ಯ ನೀತಿಯು ಎಸ್ಸಿ,ಎಸ್ಟಿ ವಿದ್ಯಾರ್ಥಿಗಳನ್ನು ಕಾಡುತ್ತಲೇ ಇರುತ್ತದೆ. ಅಸ್ಪೃಶ್ಯತೆಯ ಕಾರಣಕ್ಕೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಿರುದ್ಧ ಓಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಹ ತಾರತಮ್ಯ ಎಸಗುತ್ತಾರೆ. ಹಾಗಾಗಿ ರೋಹಿತ್ ಕಾಯ್ದೆಯಡಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸೆಕ್ಷನ್ ಬೇಕು ಹಾಗೂ ಎಸ್ಸಿ, ಎಸ್ಟಿಗಳ ವಿರುದ್ಧ ತಾರತಮ್ಯ ಎಸಗುವವರಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಅವಕಾಶ ನೀಡಬೇಕು. ಜೊತೆಗೆ ಜೆಂಡರ್ ಪ್ರಶ್ನೆಯನ್ನು ಕಾಯ್ದೆಯು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇವೆಲ್ಲವೂ ಇಲ್ಲದ ರೋಹಿತ್ ಕಾಯ್ದೆಯಿಂದ ಏನೂ ಪ್ರಯೋಜನವಾಗಲಾರದು. ಸರ್ಕಾರವು ರೋಹಿತ್ ಕಾಯ್ದೆಗಾಗಿ ಹೋರಾಡಿದ ಹಾಗೂ ಹೋರಾಡುತ್ತಿರುವ ಸಂಘಟನೆಗಳ ಜೊತೆ ಸಂದರ್ಶನ ಕೈಗೊಂಡರೆ ಮತ್ತಷ್ಟು ನ್ಯಾಯಕ್ಕೆ ಹತ್ತಿರವಾಗುತ್ತದೆ” ಎಂದಿದ್ದಾರೆ.
ರೋಹಿತ್ ವೇಮುಲ ಕಾಯ್ದೆಯು ನಿಜದ ಅರ್ಥದಲ್ಲಿ ಅಂಚಿನಲ್ಲಿರುವ ಸಮುದಾಯಗಳ ಹಿತವನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತಷ್ಟು ತಿದ್ದುಪಡಿಗಳನ್ನು ಪ್ರಸ್ತಾವಿತ ಮಸೂದೆಗೆ ತರಬೇಕಾದ ತುರ್ತು ಇದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.