ಇದೇ ಎಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮದಲ್ಲಿ ಉಗ್ರಗಾಮಿಗಳು 26 ಪುರುಷರನ್ನು ಅವರ ಹೆಂಡತಿ ಮಕ್ಕಳ ಮುಂದೆಯೇ ಕೊಂದಿದ್ದು ಎಂದಿಗೂ ಕ್ಷಮಿಸಲಾಗದ ಸಂಗತಿ. ಕೊಂದವರಿಗೆ ಮತ್ತು ಅವರ ಬೆಂಬಲಿತರಿಗೆ ತಕ್ಕ ಶಿಕ್ಷೆ ಆಗಲೇಬೇಕು ನಿಜ. ಆದರೆ, ಅದಕ್ಕಾಗಿ ಯುದ್ಧವು ಅನಿವಾರ್ಯವೇ? ಬೇರಾವ ದಾರಿಯೂ ಇಲ್ಲವೇ?
“ಇಂಡಸ್ ನೀರು ಹಂಚಿಕೆಯ ಒಪ್ಪಂದ ಸ್ಥಗಿತ. ನೀರಿಲ್ಲದೇ ಒಣಗಲಿದೆ ಪಾಕಿಸ್ತಾನ. ಬೆಳೆಗಳು ಬತ್ತಿ, ಉಣ್ಣಲು ಊಟವಿಲ್ಲದೆ, ಕುಡಿಯಲು ನೀರಿಲ್ಲದೆ ಅಲ್ಲಿನ ಜನರು ಸಾಯುವುದೇ ತಕ್ಕ ಶಿಕ್ಷೆ” ಎಂಬುದೊಂದು ಟಿವಿ ಸುದ್ದಿ! ಅಲ್ಲಿನ ಉಗ್ರಗಾಮಿಗಳು ಇಲ್ಲಿನ ಅಮಾಯಕರಿಗೆ ಗುಂಡಿಟ್ಟರೆ, ಇಲ್ಲಿನವರು ಅಲ್ಲಿನ ಅಮಾಯಕರಿಗೆ ನೀರಿಲ್ಲದ ಶಿಕ್ಷೆ ನೀಡುವುದಂತೆ!! ಇದೇ ಅಲ್ಲವೇ ಸಮರ ನ್ಯಾಯ!!!
ಸೊಮಾಲಿಯಾ ದೇಶದಿಂದ ಬೇರೆಯಾಗಿರುವ ಸೊಮಾಲಿಲ್ಯಾಂಡ್ಸ್ ಪ್ರದೇಶವನ್ನು ದೇಶವೆಂದು ಇನ್ನೂ ಪರಿಗಣಿಸಿಲ್ಲವಾದರೂ, ತನ್ನದೇ ಆದ ಆಡಳಿತ ವ್ಯವಸ್ಥೆಯೊಂದಿಗೆ ಸ್ವತಂತ್ರ ದೇಶವಾಗಿ ಕಾರ್ಯನಿರ್ವಹಿಸುತ್ತಿದೆ. 1988-90ರಲ್ಲಿನ ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್ಸ್ ನಡುವಿನ ಆಂತರಿಕ ಯುದ್ಧದಲ್ಲಿ ಸೊಮಾಲಿಲ್ಯಾಂಡ್ಸ್‌ನ ಸಾವಿರಾರು ಜನರು ನೆರೆ ದೇಶಗಳಿಗೆ ಗುಳೆ ಹೋಗುತ್ತಾರೆ. ಅಂತಹ ವ್ಯಕ್ತಿಯೊಬ್ಬನನ್ನು ಹರ್ಗೇಸಿಯಾದಲ್ಲಿ ಭೇಟಿಯಾಗುವ ಸಂದರ್ಭ ಒದಗಿತ್ತು. ಈ ವ್ಯಕ್ತಿ ಚಿಕ್ಕವನಿದ್ದಾಗ ತನ್ನ ಕುಟುಂಬದೊಡನೆ ಹಲವು ರಾತ್ರಿಗಳ ಕತ್ತಲಲ್ಲಿ ನೂರಾರು ಕಿ.ಮೀ ನಡೆದು ನೆರೆಯ ಇಥಿಯೋಪಿಯ ದೇಶದ ನಿರಾಶ್ರಿತನಾಗಿರುತ್ತಾನೆ. ಈ ಸಮಯದಲ್ಲಿ ಅನುಭವಿಸಿದ ಹಸಿವು, ಅವಮಾನ, ಅತಂತ್ರತೆಗಳು ಬೆಳೆದು ದೊಡ್ಡವನಾಗಿರುವ ಆತನನ್ನು ಇನ್ನೂ ಕಾಡುತ್ತಲೇ ಇದೆ. ಅಂದು ಕಳೆದುಕೊಂಡ ತನ್ನ ಪುಟ್ಟ ತಂಗಿಯು ಎಂದಾದರೊಮ್ಮೆ ಸಿಗುತ್ತಾಳೆಂದು ಕಾಯುತ್ತಿರುವ ಆತನು, ನಡೆವಾಗ ಹಾದಿಯಲ್ಲಿ ಸೋತು ಹಸಿವಿನಿಂದ ಸತ್ತ ತನ್ನ ತಾಯಿಯ ಶವವನ್ನು ಅಲ್ಲಿಯೇ ಬಿಟ್ಟು ಹೊರಟಿದ್ದನ್ನು ನೆನೆದು ಕಣ್ಣೀರಿಡುತ್ತಾನೆ. ಅಮಾಯಕರ ಮೇಲಿನ ಯುದ್ಧದ ಪರಿಣಾಮಗಳ ಇಂತಹ ಸಾವಿರಾರು ಕಥೆಗಳು ನಮ್ಮ ಮುಂದಿದ್ದರೂ, ನಮಗೆ ಯುದ್ಧ ಬೇಕೆನಿಸಿದೆ!
ಇದೇ ಎಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮದಲ್ಲಿ ಉಗ್ರಗಾಮಿಗಳು 26 ಪುರುಷರನ್ನು ಅವರ ಹೆಂಡತಿ ಮಕ್ಕಳ ಮುಂದೆ ಕೊಂದಿದ್ದು ಎಂದಿಗೂ ಕ್ಷಮಿಸಲಾಗದ ಸಂಗತಿ. ಕೊಂದವರಿಗೆ ಮತ್ತು ಅವರ ಬೆಂಬಲಿತರಿಗೆ ತಕ್ಕ ಶಿಕ್ಷೆ ಆಗಲೇಬೇಕು ನಿಜ. ಆದರೆ, ಅದಕ್ಕಾಗಿ ಯುದ್ಧವು ಅನಿವಾರ್ಯವೇ? ಬೇರಾವ ದಾರಿಯೂ ಇಲ್ಲವೇ?
ಅಮಾಯಕರು ಯಾವ ದೇಶದವರಾದರೇನು, ಯಾವ ಧರ್ಮದವರಾದರೇನು – ಎಲ್ಲರ ಬದುಕೂ ಒಂದೇ. ಸದಾ ಅನ್ನ, ನೀರು, ಸೂರು, ದುಡಿಮೆಗಳನ್ನು ಹೊಂದಿಸುವುದರಲ್ಲೇ ಜೀವ ತೇಯುವ ಇವರು ಗಡಿ, ದೇಶ, ಧರ್ಮ ಮತ್ತು ರಾಜಕೀಯ ವಿವಾದಗಳಿಂದ ಬಹು ದೂರವಿದ್ದರೂ, ಮಿಲಿಟರಿ ಮತ್ತು ರಾಜಕೀಯ ಕ್ರಮಗಳ ಮೊದಲ ಬಲಿಪಶುಗಳು ಇವರೇ ಆಗಿರುತ್ತಾರೆ. ‘ನಾವು’ ಮತ್ತು ‘ಅವರು’ ಎಂದು ವಿಭಜಿಸುವ ಈ ಗಡಿ, ದೇಶ, ಧರ್ಮ, ಜನಾಂಗೀಯತೆ ವಿಚಾರಗಳು ಎಂದಿಗೂ ಜನರಿಗೆ ನ್ಯಾಯ ಒದಗಿಸಿಲ್ಲ. ಇವುಗಳು ತಮ್ಮ ಶ್ರೇಷ್ಠತೆಯನ್ನು ಮೆರೆಯಲು ಜನರನ್ನು ದಾಳವಾಗಿಸುತ್ತವೆ. ಮನುಷ್ಯರಿಂದ ‘ಮಾನವ’ ಎಂಬ ಸತ್ವವನ್ನೇ ತೆಗೆದು ಅವರನ್ನು ವಸ್ತುಗಳನ್ನಾಗಿ ಕಾಣುತ್ತವೆ. ಮನುಷ್ಯರನ್ನು ಭಾವರಹಿತವಾದ ಒಂದು ವಸ್ತುವಂತೆ ಕಂಡಾಗ ಮಾತ್ರವೇ ಒಬ್ಬ ಉಗ್ರನಿಗೆ ಹೆಂಡತಿಯ ಎದುರು ಗಂಡನನ್ನು, ಮಕ್ಕಳ ಮುಂದೆ ತಂದೆಯನ್ನು ಕೊಲ್ಲಲು ಸಾಧ್ಯ. ಉಗ್ರನನ್ನೂ ಸಹ ಅವನೊಳಗಿನ ಮನುಷ್ಯನನ್ನು ತೆಗೆದು, ದೇಶ ಧರ್ಮಗಳನ್ನು ಅವನ ಕಣ್ಣಾಲಿಯ ಬಿಂಬವಾಗಿಸಿ ಒಂದು ಭಾವರಹಿತ ಯಂತ್ರವಾಗಿ ಪಳಗಿಸಿರುತ್ತಾರೆ. ಒಬ್ಬ ಸೈನಿಕನಲ್ಲೂ ದೇಶಭಕ್ತಿಯನ್ನು ಮೈದಳೆಸಿ, ಶತ್ರು ದೇಶದ ಮಹಿಳೆ, ಮಕ್ಕಳು, ವೃದ್ಧರಾದಿಯಾಗಿ ಮನುಷ್ಯರೇ ಅಲ್ಲದಂತೆ ಗುಂಡಿಕ್ಕುವ ಭಾವರಹಿತ ತುಪಾಕಿಯಾಗಿ ಅಣಿಗೊಳಿಸುತ್ತಾರೆ; ಶ್ರೀಕೃಷ್ಣನು ಅರ್ಜುನನನ್ನು ಅಣಿಗೊಳಿಸಿದಂತೆ.
ದುರಂತವೆಂದರೆ, ಇದೇ ಅಮಾಯಕ ಜನರು ಪಹಲ್ಗಾಮದ ನರಮೇಧಕ್ಕೆ ಪ್ರತೀಕಾರವಾಗಿ ಯುದ್ಧ ಬೇಕೆನ್ನುತ್ತಿದ್ದಾರೆ! ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧವನ್ನೂ ನಡೆಸಿಯೇ ಬಿಟ್ಟಿದ್ದು, ಮರ್ಯಾದೆಯ ಎಲ್ಲೆ ಮೀರಿದ ಚರ್ಚೆಗಳ ರಣಕಣಗಳಾಗಿವೆ ಟಿವಿ ಚಾನೆಲ್‌ಗಳು. ಭಾವೋದ್ವೇಗದಿಂದ ಮಹತ್ವದ್ದೇನನ್ನೋ ಬಯಸುತ್ತಿರುವ ಜನರು ಸರ್ಕಾರ ಮತ್ತು ರಕ್ಷಣಾ ಪಡೆಯ ಮೇಲೆ ಒತ್ತಡ ಹೆಚ್ಚಿಸಿದ್ದಾರೆ. ಅಂದಿನ ಘೋರ ಘಟನೆಯಿಂದ ಆಕ್ರೋಶಿತಗೊಂಡ ಜನಗಳು ತೋರ್ಪಡಿಸುವ ಈ ಮನಸ್ಥಿತಿಯನ್ನು ತಪ್ಪೆನ್ನಲಾದೀತೇ?
ಪಹಲ್ಗಾಮದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರವು ಪಾಕಿಸ್ತಾನಿ ಬೆಂಬಲಿತ ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಸ್ಥೆಯು ಕಾರಣವೆಂದು ಗುರುತಿಸಿ ರಾಜಕೀಯ ಕ್ರಮಗಳ ಭಾಗವಾಗಿ ಇಂಡಸ್ ನೀರು ಹಂಚಿಕೆಯ ಒಪ್ಪಂದವನ್ನು ಸ್ಥಗಿತ ಮಾಡಿರುವುದಲ್ಲದೆ, ಪಾಕಿಸ್ತಾನಿ ನಾಗರಿಕರ ವೀಸಾಗಳನ್ನೂ ಸಹ ರದ್ದುಗೊಳಿಸಿದೆ. ಜೊತೆಗೆ, ಪಾಕಿಸ್ತಾನಿ ಉಗ್ರಗಾಮಿತ್ವ ಚಟುವಟಿಕೆಗಳನ್ನು ಶಾಶ್ವತವಾಗಿ ಹೊಸಕಿ ಹಾಕುವಂತೆ ಭಾರತೀಯ ರಕ್ಷಣಾ ಪಡೆಗೆ ಸೂಕ್ತವೆನಿಸಿದ ಕ್ರಮ, ಗುರಿ ಹಾಗೂ ಸಮಯವನ್ನು ನಿರ್ಧರಿಸಲು ಮುಕ್ತಹಸ್ತದ ಅಧಿಕಾರ ನೀಡಿರುವುದು ಬಹುಮುಖ್ಯವಾಗಿದೆ.
ಭಾರತದಲ್ಲಿದ್ದ ಪಾಕಿಸ್ತಾನಿ ನಾಗರಿಕರು ತಮ್ಮ ಮಕ್ಕಳು, ಪತಿ-ಪತ್ನಿಯನ್ನು ತೊರೆದು ಜೀವಿಸಲು ಹಿಂದಿರುಗಬೇಕಾದ ಹೃದಯ ವಿದ್ರಾವಕ ದೃಶ್ಯವಾಗಲಿ, ರಷ್ಯಾ-ಉಕ್ರೇನ್ ಅಥವಾ ಇಸ್ರೇಲ್ -ಪ್ಯಾಲೆಸ್ತೀನ್ ಯುದ್ಧಗಳಲ್ಲಿ ಜನರು ಹೆಣವಾಗುತ್ತಿರುವ ಎದೆ ಬಿರಿಯುವ ದೃಶ್ಯಗಳಿಗಾಗಲಿ ಅಯ್ಯೋ ಅನ್ನುವ ಹೃದಯಗಳು ಯಾವ ಪಾಠವನ್ನು ಕಲಿತಂತೆ ಕಾಣುತ್ತಿಲ್ಲ. ಅದಕ್ಕಾಗಿಯೇ ಯುದ್ಧ ಬೇಕೆನಿಸಿದೆ ಇವರಿಗೆ!
ಇತಿಹಾಸದಲ್ಲಿ ಯುದ್ಧ ಮಾಡಿ ನಿಜಕ್ಕೂ ಗೆದ್ದವರಾರೂ ಇಲ್ಲ, ಅದು ರಕ್ತಪಿಪಾಸಿ. ಅದನ್ನು ಬೇಕೆನ್ನುವರಾರೂ ಯುದ್ಧಕ್ಕೆ ಹೋಗುವುದಿಲ್ಲ. ಬಡ ಕುಟುಂಬಗಳ ನಮ್ಮ ಸೈನಿಕರು ಮತ್ತು ಎರಡೂ ಕಡೆಯ ಗಡಿಭಾಗದ ಜನರು ಮುಖ್ಯವಾಗಿ ಇದಕ್ಕೆ ಬಲಿಯಾಗುತ್ತಾರೆ. ಯಾವುದೇ ಮಿಲಿಟರಿ ಕ್ರಮಗಳಿಗೆ ಮೊದಲ ಬಲಿ ಗಡಿ ಭಾಗದ ಜನರು; ಮಕ್ಕಳು ವೃದ್ಧರಾದಿಯಾಗಿ ಸಾಯುವ, ಅಂಗಗಳನ್ನು ಕಳೆದುಕೊಳ್ಳುವ, ಪಶುಪ್ರಾಣಿಗಳು ಜೀವಬಿಡುವ, ಮನೆಗಳು ಉರುಳಿ, ಬದುಕಿನ ದಿಕ್ಕು ಗಳಿಗೆಯಲ್ಲಿ ಬದಲಾಗಿ ಗಡಿಜನರ ಬದುಕನ್ನು ಛಿದ್ರಗೊಳಿಸುತ್ತದೆ. ಮನೆ ಮಠ, ದನಕರುಗಳನ್ನು ಬಿಟ್ಟು ಜೀವ ಭೀತಿಯಿಂದ ಓಡಿ ಹೋಗುವ ಪರಿಸ್ಥಿತಿಗಳು, ಪ್ರೀತಿಪಾತ್ರರ ಬರ್ಬರ ಮರಣಗಳು, ನಿರಂತರ ಗುಂಡಿನ ಮೊರೆತ – ಹೀಗೆ ಭಯದ ಬದುಕಿನ ಅತಂತ್ರತೆಗಳು ಮಾಸದ ಕಲೆಗಳನ್ನು ಮನದಲ್ಲಿ ಉಳಿಸಿ ಖಿನ್ನತೆಗೆ ತಳ್ಳುತ್ತವೆ. ಯುದ್ಧವು ಉಭಯ ದೇಶದ ಜನರ ಆರ್ಥಿಕ ಹಾಗೂ ಸಾಮಾಜಿಕ ಜೀವನವನ್ನೂ ಸಹ ಅತಂತ್ರಗೊಳಿಸುತ್ತದೆ. ಬೆಲೆಗಳು ಹೆಚ್ಚಾಗುತ್ತವೆ, ಸರ್ಕಾರದ ಗಮನವೆಲ್ಲವೂ ಯುದ್ಧ ನಿರ್ವಹಣೆ ಕಡೆಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿ ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ – ಆದರೂ ಯುದ್ಧ ಬೇಕಾಗಿದೆ!!
ಯುದ್ಧ ಬೇಡವೆನ್ನುವವರು ದೇಶ ದ್ರೋಹಿಗಳಾಗುತ್ತಾರೆ. ಯಾರಿವರು ಯುದ್ಧ ಬೇಕೆನ್ನುವ ಮಹಾನ್ ದೇಶ ಭಕ್ತರು? ಶತ್ರು ಸೇನೆಯ ಗುಂಡಿಗೆ ಎದೆಯೊಡ್ಡಬೇಕಾದ ಸೈನಿಕರೇ? ನೆರೆಹೊರೆಯ ದೇಶಗಳ ಒತ್ತಡ ಮತ್ತು ಯುದ್ಧದ ಅಪಾಯ-ಉಲ್ಬಣತೆಗಳ ಅರಿವಿರುವ ರಕ್ಷಣಾ ಪಡೆಯ ನಾಯಕರೇ? ವಿಕ್ಷಿತ್ ಭಾರತದ ಕನಸು ಕಾಣುತ್ತಿರುವ ಸರ್ಕಾರವೇ? ಅಥವಾ ಬವಣೆಗಳ ಬದುಕಿನ ಯುದ್ಧದಲ್ಲಿ ನಿತ್ಯವೂ ಹೋರಾಡುತ್ತಿರುವ ರೈತರೇ, ಮಹಿಳೆಯರೇ, ಕಾರ್ಮಿಕರೇ, ಯುವಜನರೇ? ಮತ್ತಾರು ಯುದ್ಧ ಬೇಕೆನ್ನುತ್ತಿರುವ ಆ ಮಹಾನ್ ದೇಶ ಭಕ್ತರು?
ಪಾಕಿಸ್ತಾನಿ ಪ್ರಚೋದಿತ ಉಗ್ರಗಾಮಿ ದಾಳಿಗಳನ್ನು ಹೊಸಕಿ ಹಾಕುವಂತಹ ದೊಡ್ಡ ಸವಾಲನ್ನು ಕ್ಷಮತೆಯಿಂದ ಎದುರಿಸಲು ಸೂಕ್ಷ್ಮ ಯೋಜಿತ ಮಹತ್ವಾಕಾಂಕ್ಷಿ ಕ್ರಮದ ಅವಶ್ಯಕತೆ ಇದೆ ಎಂಬುದು ರಕ್ಷಣಾ ಪಡೆಯ ಅನೇಕ ತಜ್ಞರ ಮತ್ತು ಅನುಭವಸ್ಥರ ಮಾತುಗಳಾಗಿವೆ. ಹೀಗೆ ಹೇಳಿರುವವರೂ ಸಹ ಯುದ್ಧವೇ ಆಗಬೇಕೆಂದು ಹೇಳಿಲ್ಲ. ಇದೇ 30ನೇ ಎಪ್ರಿಲ್‍ರಂದು ಮೇಜರ್ ಜನರಲ್ ವಿಕ್ರಮ್ ದೇವ್ ಡೋಗ್ರಾ ಅವರು ಬರ್ಕಾ ದತ್‍ರವರಿಗೆ ನೀಡಿದ ಸಂದರ್ಶನದಲ್ಲಿ, ಯಾವುದೇ ಕ್ರಮವನ್ನು ತೆಗೆದುಕೊಂಡರೂ, ಅದು ಉಗ್ರರ ಉಪಟಳವು ಮುಂದೆ ಈ ದೇಶದೊಳಗೆ ನಡೆಯದಂತೆ ತಡೆಯಬೇಕಾಗಿದೆ. ಆದರೆ, ಸಾಂಪ್ರದಾಯಿಕ ಯುದ್ಧವು ನಿಯಂತ್ರಣಕ್ಕೆ ಸಿಗದ ಕಾರಣ, ಯುದ್ಧದ ಉಲ್ಬಣ ಯಾರಿಂದಲೂ ನಿಯಂತ್ರಿಸಲು ಸಾಧ್ಯವಾಗದು. ಉಲ್ಬಣವು ಯಾವ ಕಡೆಯಿಂದಲೂ ಆಗಬಹುದಾಗಿದ್ದು, ಈ ಅಪಾಯದ ಗಂಭೀರತೆಯನ್ನು ಗಮನದಲ್ಲಿರಿಸಿ ಯಾವ ಮಿಲಿಟರಿ ಕ್ರಮ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದೆ ಎಂದಿದ್ದಾರೆ. ಇದಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪರಿಸ್ಥಿತಿಯನ್ನು ಅಂಕೆಯಲ್ಲಿಡುವಂತೆ ಎರಡೂ ದೇಶಗಳಿಗೆ ಒತ್ತಡವಿದೆ. ಈ ಹಿನ್ನೆಲೆಗಳಲ್ಲಿ ಯಾವ ಕ್ರಮ ಎಂದು ನಿರ್ಣಯಿಸುವುದು ಅಷ್ಟು ಸುಲಭವಲ್ಲ ಎಂದೂ ಸಹ ಹೇಳಿದ್ದಾರೆ.
ಯಾವುದೇ ಮಿಲಿಟರಿ ಕ್ರಮ ಕೈಗೊಂಡರೂ ಎರಡೂ ದೇಶದ ಜನಜೀವನ ಅತಂತ್ರವಾಗದಂತೆ ಎಚ್ಚರ ವಹಿಸುವುದು ಬಹು ಮುಖ್ಯವಿದೆ. ಮಿಲಿಟರಿ ಕ್ರಮವನ್ನು ನಡೆಸುವಾಗ ಮಾನವ ಹಕ್ಕುಗಳ ಕುರಿತು ಚಿಂತಿಸುವುದು ರಕ್ಷಣಾ ಪಡೆಗಳ ಕೆಲಸ ಅಲ್ಲವಾದರೂ, ಕ್ರಮಗಳನ್ನು ಯೋಜಿಸುವಾಗ ಈ ಬಗ್ಗೆ ಕಳಕಳಿ ಹೊಂದಿರುತ್ತಾರೆಂಬ ನಂಬಿಕೆ ಇದೆ. ಸರ್ಕಾರವು ಜನರ, ಅದರಲ್ಲೂ ಮುಖ್ಯವಾಗಿ ಗಡಿ ಪ್ರದೇಶಗಳ ಜನರ ಮಾನವೀಯ ಹಕ್ಕುಗಳ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ.
ಇದನ್ನೂ ಓದಿ ಆಪರೇಷನ್ ಸಿಂಧೂರ: ಪಾಕಿಸ್ತಾನ ದಾಳಿ; ಜಮ್ಮು ಕಾಶ್ಮೀರದಲ್ಲಿ ಕನಿಷ್ಠ 7 ಸಾವು
ಕಲ್ಲು ತೂರಾಟಗಳು ನಿಂತು, ಕಾಶ್ಮೀರಿಗರಲ್ಲಿ ತಾವು ಭಾರತೀಯರೆಂಬ ಭಾವನೆ ವ್ಯಕ್ತವಾಗುತ್ತಿರುವುದು ಒಳ್ಳೆಯ ಸಂಕೇತವಾದರೂ, ದೇಶದ ಇತರೆ ರಾಜ್ಯಗಳು ಅವರನ್ನು ನಮ್ಮವರಲ್ಲ ಎಂದು ದೂಡುತ್ತಿರುವ ಮನಸ್ಥಿತಿ ಮತ್ತು ವರ್ತನೆಗಳು ಆತಂಕ ಹುಟ್ಟಿಸುತ್ತಿವೆ. ಹಿಂದು-ಮುಸ್ಲಿಂ ದ್ವೇಷದ ಮೂಲಕ ಭಾರತವನ್ನು ಛಿದ್ರಗೊಳಿಸುವ ಉಗ್ರಗಾಮಿಗಳ ಉದ್ದೇಶವನ್ನು ಈಡೇರಿಸಲು ಇಂತಹ ಮನಸ್ಥಿತಿ ಮತ್ತು ವರ್ತನೆಗಳು ಸಹಾಯ ಮಾಡುತ್ತವಷ್ಟೆ. ಯುದ್ಧವೇ ಆಗಲಿ ಅಥವಾ ಹಠಾತ್ ಆಕ್ರಮಣವಾಗಲಿ (ಸ್ಟ್ರೈಕ್), ಅದು ನಡೆಯುವುದು ಎರಡು ದೇಶಗಳ ನಡುವೆಯೇ ಹೊರತು ಎರಡು ಧರ್ಮಗಳ ಮಧ್ಯವಲ್ಲ ಎಂಬ ಅರಿವು ಜನರಿಗಿರಬೇಕು. ಈ ಸಮಯದಲ್ಲಿ ಇತರೆ ರಾಜ್ಯಗಳಲ್ಲಿನ ಕಾಶ್ಮೀರಿಗಳನ್ನು ರಕ್ಷಣೆ ಮಾಡುವಂತಹ ಬದ್ಧತೆಯ ಜೊತೆಗೆ ಕಾಶ್ಮೀರಿಗಳ ಭಾರತೀಯತೆಯ ಭಾವನೆಯನ್ನು ಗಟ್ಟಿಗೊಳಿಸುವ ಮೂಲಕ ಅವರ ವಿಶ್ವಾಸ ಗಳಿಸುವಂತಹ ಗುರುತರವಾದ ಜವಾಬ್ದಾರಿಯನ್ನು ಸರ್ಕಾರವು ತೆಗೆದುಕೊಳ್ಳಬೇಕಾಗಿದೆ.
ಬೇಕೆನಿಸಿದಾಗ ನಿಲ್ಲಿಸಲು ಯುದ್ಧವು ಡಿಜಿಟಲ್ ಆಟವಲ್ಲ. ಅದು ಪ್ರಾರಂಭವಾದರೆ ಯಾವಾಗ ನಿಲ್ಲುವುದೋ ತಿಳಿಯದು. ಪರಮಾಣು ಅಸ್ತ್ರಗಳನ್ನು ಎರಡೂ ದೇಶಗಳು ಹೊಂದಿರುವ ಪರಿಸ್ಥಿತಿಯಲ್ಲಿ ಯಾವ ಸಂದರ್ಭದಲ್ಲಿ ಯುದ್ಧವು ಹೇಗೆ ಉಲ್ಬಣಿಸಬಹುದು ಎಂದು ಅಂದಾಜಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. 2022ರಲ್ಲಿ ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧವು ಇನ್ನೂ ನಡೆಯುತ್ತಿದ್ದು, 1.5 ಲಕ್ಷಕ್ಕೂ ಹೆಚ್ಚು ಜನರು ಸತ್ತಿರುವುದಾಗಿ ವರದಿಯಾಗಿದೆ. ಅವಸರದ ನಿರ್ಧಾರದಿಂದ ಭಾರತವು ಇಂತಹ ಸ್ಥಿತಿಯನ್ನು ತಲುಪಬೇಕಿಲ್ಲವೆಂಬ ಅರಿವು ಸರ್ಕಾರಕ್ಕಿರುವ ಕಾರಣದಿಂದಲೇ ಮುಕ್ತಹಸ್ತವನ್ನು ನೀಡಿ ನಿರ್ಧಾರವನ್ನು ರಕ್ಷಣಾ ಪಡೆಯ ವಿವೇಚನೆಗೆ ಬಿಟ್ಟಿರುತ್ತದೆ.
ಈಗಾಗಲೇ ಅಣಕು ಡ್ರಿಲ್ ಬಗೆಗಿನ ಸುದ್ದಿಗಳು ಹರಿದಾಡುತ್ತಿದ್ದು, ಮುಂದೇನಾಗುತ್ತದೆಂದು ಆತಂಕವಿದ್ದರೂ, ಉಗ್ರಗಾಮಿ ವ್ಯವಸ್ಥೆಯನ್ನು ಹೊಸಕಿ ಹಾಕಲಿ ಸೂಕ್ತ ಪರ್ಯಾಯ ಮಾರ್ಗಗಳನ್ನು ಭಾರತ ಸರ್ಕಾರ ಮತ್ತು ರಕ್ಷಣಾ ಪಡೆಯು ಕಂಡುಕೊಳ್ಳುತ್ತದೆಂಬ ಭರವಸೆ ಇದೆ. ಅಂತೆಯೇ, ಯುದ್ಧದ ಹಪಹಪಿಯ ಹುಚ್ಚಾಟಗಳನ್ನು ಕರಗಿಸಲು ಜನಗಣತಿಯಂತಹ ಧಿಡೀರ್ ನಿರ್ಣಯಗಳು ಬರುತ್ತಲೇ ಇರಲಿ.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು
ಈ ದಿನ ನಿನ್ನ ನಿಜ ಬಣ್ಣ ಬಯಲಾಯ್ತು ನೋಡು. ಅದೆಂತ ಕನಿಕರ ನಿನಗೆ ಪಾಕಿಸ್ತಾನ ದ ಮೇಲೆ? ಯುದ್ಧದ ಬದಲು ಬೇರಾವ ದಾರಿಯೂ ಇಲ್ಲವೇ? ಅಂತ ಪರೋಕ್ಷವಾಗಿ ದೇಶದ್ರೋಹದ ಹೇಳಿಕೆ ಕೊಡುತ್ತಿದ್ದಿಯಲ್ಲ ಥೂ ನಿನ್ನ. ಪಾಕಿಸ್ತಾನ ದ ಮೇಲೆ ನಿನಗೆ ಪ್ರೀತಿ ಕರುಣೆಯಿದ್ದರೆ ಅಲ್ಲಿಗೆ ಹೋಗಿ ಅಲ್ಲಿನ ಪೌರತ್ವ ಪಡೆದುಕೋ.
ಜೈ ಹಿಂದ್
ಜೈ ಭಾರತ🇮🇳