ʼಯೋಗʼ– ಭಾರತೀಯರು ಅನುಸರಿಸುವ ಆರೋಗ್ಯಭ್ಯಾಸ. ಇದು ಒಂದು ಕಾಲದಲ್ಲಿ ಧ್ಯಾನ, ತ್ಯಾಗ ಮತ್ತು ಆತ್ಮಶೋಧನೆಯ ಪಥವನ್ನು ಸೂಚಿಸುತ್ತಿತ್ತು. ಆದರೆ ಈಗ, ಅದೇ ಯೋಗ ಒಂದು ಬ್ರ್ಯಾಂಡ್ ಆಗಿದೆ. ಆರೋಗ್ಯದ ಪಾಠಕ್ಕೆ ಬದಲಾಗಿ ಮಾರಾಟದ ಪ್ಯಾಕೇಜ್ ಆಗಿದೆ. ಆಗ ಯೋಗಾಭ್ಯಾಸದಲ್ಲಿ ಗುರು ಶಿಷ್ಯ ಪರಂಪರೆ ಇದ್ದರೆ, ಈಗ ಪ್ರಚಾರ, ಪ್ಯಾಕೇಜ್ ಮತ್ತು ಪರ್ಸನ್‌ಬ್ರಾಂಡ್ ಇದೆ. ದೇಶದ ಸಂಸ್ಕೃತಿಯ ಭಾಗವೇ ಆಗಿರುವ ಯೋಗದ ವ್ಯಾಪ್ತಿಯು ಜಾಗತಿಕವಾಗಿ ವಿಸ್ತಾರವಾಗಿರುವುದು ಖುಷಿಯ ವಿಷಯವೇ.
ಯೋಗವನ್ನು ಕೆಲವು ಸ್ವಾಮೀಜಿಗಳು ಮತ್ತು ಯೋಗ ಗುರುಗಳು ತಮ್ಮ ಸಂಸ್ಥೆಗಳು, ಯೂಟ್ಯೂಬ್ ಚಾನೆಲ್‌ಗಳು, ಆ್ಯಪ್‌ಗಳು, ಗ್ರಂಥಗಳು ಹಾಗೂ ಅಂತಾರಾಷ್ಟ್ರೀಯ ಕಾರ್ಯಾಗಾರಗಳ ಮೂಲಕ ವ್ಯಾಪಾರದ ಸರಕನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಆಸಕ್ತಿ ಮತ್ತು ಜಾಗೃತಿಯ ಅಭಿವ್ಯಕ್ತಿ ಇದ್ದರೂ, ಬಹುತೇಕ ಭಾಗದಲ್ಲಿ ಇದು ಲಾಭ ಆಧಾರಿತ ಮಾರುಕಟ್ಟೆ ತಂತ್ರವಾಗಿದೆ.
ಇಂದಿನ ರಾಜಕೀಯ ವಾತಾವರಣದಲ್ಲಿ ಯೋಗವನ್ನೊಂದು ‘ರಾಷ್ಟ್ರೀಯ ಬ್ರ್ಯಾಂಡ್’ಆಗಿ ಮಾರ್ಪಡಿಸುವ ಪ್ರಯತ್ನ ತೀವ್ರವಾಗಿದೆ. ವಿಶೇಷವಾಗಿ 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಯೋಗದ ಹಳೆಯ ಚಿಹ್ನೆಗೆ ಹೊಸ ಬಣ್ಣ ಬಳಿಯಲಾಗಿದೆ. ಅಂತಾರಾಷ್ಟ್ರೀಯ ಯೋಗ ದಿನದ ಘೋಷಣೆ, ರಾಜಪಥದಲ್ಲಿ ನಡೆದ ಪ್ರದರ್ಶನಗಳು, ಶಾಲೆ-ಕಚೇರಿ-ಕಾರ್ಯಾಲಯಗಳಲ್ಲಿ ಯೋಗ ಕಡ್ಡಾಯ ತರಬೇತಿ ಮತ್ತು ಸರ್ಕಾರ ಪ್ರಾಯೋಜಿತ ಯೋಗ ಉತ್ಸವಗಳು– ಇವೆಲ್ಲವೂ ಯೋಗವನ್ನು ಧರ್ಮ-ಸಂಸ್ಕೃತಿಯ ರಾಜಕೀಯ ಉಪಕರಣವಾಗಿ ರೂಪಿಸುತ್ತಿರುವುದು ಸುಳ್ಳಲ್ಲ.
ಯೋಗದ ನಿಜಾರ್ಥ ತಿಳಿದ ಹಲವು ಭಾರತೀಯರಿದ್ದಾರೆ. ತಿರುಮಲೈ ಕೃಷ್ಣಮಾಚಾರ್ಯ, ಸ್ವಾಮಿ ಶಿವಾನಂದ, ಬಿಕೆಎಸ್ ಐಯ್ಯಂಗಾರ್, ಕೆಬಿ ಪಟ್ಟಾಭೀ ಜೋಶಿ, ಮಹರ್ಷಿ ಮಹೇಶ ಯೋಗಿ, ಪರಂಹಂಸ ಯೋಗಾನಂದ, ಸೀತಾ ದೇವಿ, ಮಾತಾ ಅಮೃತಾನಂದಮಯಿ, ಬಿ.ಕೆ.ಎಸ್. ಅಯ್ಯಂಗಾರ್ ಅವರ ಶಿಷ್ಯೆ ಸತ್ಯಶಿ, ಕನ್ನಡದ ಮೇರು ನಟ ರಾಜ್‌ಕುಮಾರ್… ಹೀಗೆ ಸಾಲು ಸಾಲು ಮಹನೀಯರು ಯೋಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆ ಸಿಗುವಲ್ಲಿ ಶ್ರಮಿಸಿದ್ದಾರೆ.
ಪ್ರಧಾನಿ ಮೋದಿ ಯೋಗದ ಜಾಗತಿಕತೆಗಾಗಿ ಶ್ರಮಿಸಿದವರಾಗಬಹುದು. ಆದರೆ, ʼಯೋಗʼವನ್ನೂ ಉದ್ಯಮವಾಗಿ ಕಟ್ಟಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು ಬಾಬಾ ರಾಮ್‌ದೇವ್, ಜಗ್ಗಿ ವಾಸುದೇವ್ ಅವರಂತವರು. ಇವರು ತಮ್ಮ ಧ್ಯಾನಪಥಗಳನ್ನು ಲಾಭದ ಮಾರ್ಗವಾಗಿ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ಬೆಂಬಲ, ಮಾಧ್ಯಮಗಳ ವೈಭವೋಪೇತ ಪ್ರಸಾರ ಮತ್ತು ಸಾರ್ವಜನಿಕವಾಗಿ ಹೆಚ್ಚಾದ ಮನ್ನಣೆಯ ನೆರಳಲ್ಲಿ ಇವರುಗಳು ಯೋಗದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ.

2015ರಲ್ಲಿ ವಿಶ್ವಸಂಸ್ಥೆಯು (ಯುನೈಟೆಡ್ ನೇಷನ್ಸ್) ಜೂನ್ 21ನೇ ತಾರೀಖನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ ನಂತರ, ಪ್ರತಿ ವರ್ಷ ಪ್ರಧಾನಿ ಮೋದಿ ನೇತೃತ್ವದಲ್ಲಿ ಬೃಹತ್ ಯೋಗ ಪ್ರದರ್ಶನಗಳು ನಡೆಯುತ್ತವೆ. ಸರ್ಕಾರಿ ಶಾಲೆಗಳು, ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಇದನ್ನು ಕಡ್ಡಾಯವಾಗಿ ಆಚರಿಸಬೇಕಾದ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಪಬ್ಲಿಕ್ ಸೆಕ್ಟರ್ ಕಾರ್ಪೊರೇಷನ್‌ಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ CSR ಚಟುವಟಿಕೆಯಲ್ಲಿ ಇದನ್ನು ಸೇರಿಸುತ್ತವೆ ಮತ್ತು ಮಾಧ್ಯಮಗಳು ‘ಯೋಗ=ಭಾರತ’ ಎಂಬ ಸಂದೇಶವನ್ನು ವ್ಯಾಪಕವಾಗಿ ಹರಡುಲಾಗಿದೆ. ಇವೆ ಮೊದಲಾದವುಗಳಿಂದ ‘ಯೋಗ = ಹಿಂದೂ ಸಂಸ್ಕೃತಿ = ಸರ್ಕಾರ’ ಎಂಬ ಸಮೀಕರಣ ಸೃಷ್ಟಿಸಲಾಗಿದೆ. ಇದು ಧರ್ಮನಿರಪೇಕ್ಷ ಭಾರತದಂತಹ ರಾಷ್ಟ್ರದಲ್ಲಿ ಎಂತಹ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಸದಾ ಮುನ್ನೆಲೆಗೆ ಬರುತ್ತದೆ.
ತರ್ಕಬದ್ಧ ಚಿಂತನೆಗಳು ಮೊಳೆಯುವ ಮೆದುಳುಗಳಲ್ಲಿ, ʼಚುನಾವಣೆಗೂ ಮುನ್ನ ಅಥವಾ ಚುನಾವಣೆ ವಸ್ತಿಲಿನ ಸಂದರ್ಭದಲ್ಲೇ, “ಯೋಗ”, “ಭಾರತೀಯತೆ”, “ಹಿಂದು ಪರಂಪರೆ” ಎಂಬ ಪದಗಳನ್ನು ಜನರ ಭಾವನೆಗಳ ಮೇಲೆ ಹೇರಲಾಗುತ್ತದೆ ಎಂಬ ವಿಚಾರವೂ ಮೊಳೆಯದೇ ಇರಲಾರದು. ಸಂಸ್ಕೃತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದರಿಂದ ಹೆಚ್ಚು ಪ್ರಚಾರ ಸಿಗಬಹುದು. ಆದರೆ, ಅದೇ ಹೊತ್ತಿನಲ್ಲಿ ಅದು ಮತಗಳ ಪ್ಯಾಕೇಜ್ ಆಗುವುದಕ್ಕೂ ವಾತಾವರಣ ಸೃಷ್ಟಿಸುತ್ತದೆ ಎಂಬುದು ಗಂಭೀರ ವಿಚಾರ.
ಕೆಲವು “ಗ್ಲೋಬಲ್ ಗುರುಗಳು” ಪಾಶ್ಚಾತ್ಯ ಖ್ಯಾತಿಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಯೋಗವನ್ನು ‘ಲೈಫ್‌ಸ್ಟೈಲ್ ಪ್ರಾಡಕ್ಟ್’ ಆಗಿ ಮಾರಾಟ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಕೋಟ್ಯಂತರ ರೂ. ಬಜೆಟ್‌ನಿಂದ ಪ್ರಚಾರಾತ್ಮಕ ಕಾರ್ಯಕ್ರಮಗಳು ನಡೆಯುತ್ತವೆ, ಇದರಲ್ಲಿ ರಾಷ್ಟ್ರಪ್ರೇಮ ಮತ್ತು ಸಂಸ್ಕೃತಿ ಎಂಬ ಮುಖವಾಡದ ಹಿಂದಿನ ರಾಜಕೀಯದ್ದೇ ಹೆಚ್ಚು ತೂಕ. ಪತಂಜಲಿ ಯೋಗದ ಎಂಟು ಅಂಗಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ, ಕೇವಲ ಆಸನ, ಪ್ರಾಣಾಯಾಮ, ಧ್ಯಾನ ಇವನ್ನಷ್ಟೇ ಕಮರ್ಶಿಯಲ್ ಮಾಡಲಾಗುತ್ತಿದೆ. ಕೆಲವು ಜನಪ್ರಿಯ ಗುರುಗಳು ತಮ್ಮ ವ್ಯಕ್ತಿತ್ವವನ್ನು ಅತಿಶಯವಾಗಿ ಮಾರುಕಟ್ಟೆ ಮಾಡಿಕೊಳ್ಳುತ್ತಾ, ಯೋಗಕ್ಕಿಂತ ಹೆಚ್ಚು ತಮ್ಮ “ಬ್ರಾಂಡ್” ಬೆಳವಣಿಗೆಯಲ್ಲಿ ತೊಡಗಿದ್ದಾರೆ.
ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಭಾರತೀಯ ಮೂಲದ ಯೋಗವನ್ನು ತಮ್ಮದೇ ಆಗಿಸಿಕೊಂಡು, ಹೊಸ ಹೆಸರುಗಳಿಂದ (ಹಾಟ್ ಯೋಗಾ, ಬಿಯರ್ ಯೋಗಾ, ಗೋಟ್ ಯೋಗಾ) ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಯೋಗದ ಮೂಲ ಉದ್ದೇಶವೇ ಬದಲಾಗಿದೆ.
ಇಂದು 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು (2025) ಕರಾವಳಿ ನಗರ ವಿಶಾಖಪಟ್ಟಣಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಚರಿಸಿದ್ದಾರೆ. “yoga for one health one earth” ಎಂಬ ಥೀಮ್‌ನೊಂದಿಗೆ ಈ ಕಾರ್ಯಕ್ರಮವನ್ನು ಆಂಧ್ರಪ್ರದೇಶ ಸರ್ಕಾರದ ಆಶ್ರಯದಲ್ಲಿ ʼಯೋಗಾಂಧ್ರ 2025ʼ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದೆ.

ವಿಶಾಖಪಟ್ಟಣಂನ ರಾಮಕೃಷ್ಣ ಬೀಚ್‌ನಿಂದ ಭೋಗಪುರಂವರೆಗಿನ ಸುಮಾರು 26 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯೋಗದಿನಾಚಾರಣೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ಐದು ಲಕ್ಷ ಜನರು ಭಾವಗಹಿಸಿದ್ದಾರೆ. ಈ ಬೃಹತ್ ಕಾರ್ಯಕ್ರಮಕ್ಕೆ ಬೃಹತ್ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, 10,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಡೀ ಮಾರ್ಗದಲ್ಲಿ 1,200 ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್ ಮೇಲ್ವಿಚಾರಣೆಯ ಮೂಲಕ ಕಣ್ಗಾವಲು ನಿರ್ವಹಿಸಲಾಗುತ್ತಿದೆ. ವಿಶೇಷವಾಗಿ ಪ್ರಧಾನಿಯವರ ಉಪಸ್ಥಿತಿಯ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಭದ್ರತೆಯನ್ನು ಸಂಘಟಿಸಲು ಅತ್ಯಾಧುನಿಕ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ.
ಯೋಗದ ತಾತ್ವಿಕ ಆಳವನ್ನೇ ಮರೆತು, ಕೇವಲ ಪ್ರದರ್ಶನ ಹಾಗೂ ಛಾಯಾಗ್ರಹಣದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತಿದೆಯೇನೋ ಎನ್ನುವ ಸಂಶಯ ಮೂಡಿದೆ. ಸಿಸಿಟಿವಿ, ಭದ್ರತೆ, ಬಸ್ ವ್ಯವಸ್ಥೆ, ವೇದಿಕೆ, ಡಿಜಿಟಲ್ ಪ್ರಚಾರ ಮುಂತಾದವುಗಳಿಗೆ ಸಾರ್ವಜನಿಕ ಹಣ ಬಳಸಲಾಗಿದೆ. ಈ ಹಣವನ್ನು ಗ್ರಾಮೀಣ ಮಟ್ಟದ ಯೋಗ ಶಿಕ್ಷಣ, ಜಾಗೃತಿ ಕಾರ್ಯಕ್ರಮ, ಮಕ್ಕಳ/ಮಹಿಳೆಯರ ಆರೈಕೆ ಕಾರ್ಯಕ್ರಮಗಳಿಗೆ ಬಳಸಿದ್ದರೆ ಏನಾಗುತ್ತಿತ್ತು? ಇದು ಹೀಗೇ ಮುಂದುವರೆದರೆ, ಬೃಹತ್ ಕಾರ್ಯಕ್ರಮಗಳಲ್ಲಿ ಬಡ, ಹಿಂದುಳಿದ ವರ್ಗದವರನ್ನು ಶತಮಾನಗಳಿಂದ ದೂರವಿಟ್ಟಿರುವ ಸ್ಥಿತಿಯೇ ಮುಂದುವರಿಯುವುದಿಲ್ಲವೇ?
ಇದನ್ನೂ ಓದಿ: ಬಿಹಾರಕ್ಕೆ ಭರಪೂರ ಮೋದಿ ಕೊಡುಗೆ: ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುವುದೇಕೆ?
ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯು ಟಿವಿ ಚಾನೆಲ್‌ಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ, ಅತಿ ವೈಭವೀಕರಣದ ಕಾರ್ಯಕ್ರಮಗಳಲ್ಲಿ ಬೆಳೆಯುತ್ತಿರುವಾಗಲೂ, ದೇಶದ ಬಹುತೇಕ ಗ್ರಾಮೀಣ ಜನಸಮುದಾಯಕ್ಕೆ ಯೋಗದ ಪರಿಕಲ್ಪನೆಯೇ ದೂರ. ಗೊತ್ತಿದ್ದರೂ ಆ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲ. ಇನ್ನೂ ಕೆಲವರು ಯೋಗವನ್ನು ಧಾರ್ಮಿಕ ಕಾರ್ಯಕ್ರಮ ಅಥವಾ ಹಿಂದು ಸಂಸ್ಕೃತಿಗೆ ಮಾತ್ರ ಸೇರಿದ ಸಾಧನೆ ಎಂದು ತಪ್ಪಾಗಿ ತಿಳಿಯುವ ಮನೋವೃತ್ತಿ ಕಂಡುಬರುತ್ತಿದೆ. ಅನೇಕ ಗ್ರಾಮಗಳಲ್ಲಿನ ಜನರಿಗೆ ಯೋಗವೆಂದರೆ “ಆಸನ” ಅಥವಾ “ಸಾಧು-ಸಂತರ ವ್ಯಾಯಾಮ” ಎಂಬಷ್ಟು ತಿಳಿವಳಿಕೆ ಮಾತ್ರವಿದೆ.