ಧರ್ಮಸ್ಥಳದ ಸೌಜನ್ಯ ಹಿಂದೂ ಅಲ್ಲವೇ ಶೋಭಾ ಮೇಡಂ? ಈ ಪ್ರಕರಣವನ್ನು ಮರು ತನಿಖೆಗೆ ಯಾಕೆ ಒತ್ತಾಯಿಸುತ್ತಿಲ್ಲ?

Date:

Advertisements

ತಮ್ಮದೇ ಊರಿನಲ್ಲಿ ಎಳೆಯ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳನ್ನು ಅದೇ ಊರಿನ ಕಾಮುಕರು ಸಾಮೂಹಿಕ ಅತ್ಯಾಚಾರಗೈದು ದೇಹವನ್ನು ಛಿದ್ರಗೊಳಿಸಿ ಹೊಳೆ ಬದಿಯಲ್ಲಿ ಎಸೆದು ಹೋದಾಗ shobha karandlaje ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಇಂಧನ ಸಚಿವೆಯಾಗಿದ್ರು. ಸೌಜನ್ಯ ಕೂಡಾ ಬಡ ಒಕ್ಕಲಿಗರ ಮನೆ ಮಗಳು. ಶೋಭಾ ಕೂಡ ಅದೇ ಊರಿನ ಬಡ ಒಕ್ಕಲಿಗ ಕುಟುಂಬದ ಮಗಳು. ಆದರೆ, ತಮ್ಮದೇ ಜಾತಿಯ, ಊರಿನ ಹೆಣ್ಣುಮಗಳಿಗೆ ಆದ ಅನ್ಯಾಯಕ್ಕೆ ಶೋಭಾ ಮರುಗಲಿಲ್ಲ.

ಸಚಿವೆ ಶೋಭಾ ಕರಂದ್ಲಾಜೆ ಮಹಿಳಾ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾದವರು, ಟೀಕೆಗೆ ಗುರಿಯಾದವರು. ಆಕೆಯನ್ನು ಲೂಸ್‌ ಟಾಕ್‌ಗೆ ಹೆಸರಾದ ಕರ್ನಾಟಕದ ಬಿಜೆಪಿ ನಾಯಕರ ಸಾಲಿನಲ್ಲಿ ನಿಸ್ಸಂದೇಹವಾಗಿ ನಿಲ್ಲಿಸಬಹುದಾಗಿದೆ. ಕೋಮುದ್ವೇಷಕ್ಕೆ ಹೆಸರಾದ ಸಿ ಟಿ ರವಿ, ಬಸನಗೌಡ ಯತ್ನಾಳ್‌, ಈಶ್ವರಪ್ಪ ಸಾಲಿನಲ್ಲಿ ನಿಲ್ಲಿಸಬಹುದಾದ ಮಹಿಳಾ ರಾಜಕಾರಣಿ. ಜನಪ್ರತಿನಿಧಿಗಳಾಗಿದ್ದೂ ತಮ್ಮ ಕ್ಷೇತ್ರದ ಎಲ್ಲ ಜನರನ್ನೂ ಒಂದೇ ರೀತಿಯಲ್ಲಿ ಕಾಣಬೇಕು ಎಂಬ ಕನಿಷ್ಠ ಸಜ್ಜನಿಕೆ ಇಲ್ಲದ ರಾಜಕಾರಣಿ ಶೋಭಾ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಎಂಥಾ ರೌಡಿಗಳಾಗಿದ್ದರೂ, ಸಮಾಜಘಾತಕ ಕೆಲಸ ಮಾಡಿದ್ದರೂ ಅವರ ಕೊಲೆಗಳಾದಾಗ ಅವರ ಪರ ಬಾಯಿ ತೆರೆದು ಬರುವ ಈ ಸಚಿವೆ ತಮ್ಮದೇ ಊರಿನಲ್ಲಿ ಎಳೆಯ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳನ್ನು ಅದೇ ಊರಿನ ಕಾಮುಕರು ಸಾಮೂಹಿಕ ಅತ್ಯಾಚಾರಗೈದು ದೇಹವನ್ನು ಛಿದ್ರಗೊಳಿಸಿ ಹೊಳೆ ಬದಿಯಲ್ಲಿ ಎಸೆದು ಹೋದಾಗ ಈಕೆ ಬಿಜೆಪಿ ಸರ್ಕಾರದ ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಇಂಧನ ಸಚಿವೆಯಾಗಿದ್ರು. ಸೌಜನ್ಯ ಕೂಡಾ ಬಡ ಒಕ್ಕಲಿಗರ ಮನೆ ಮಗಳು. ಶೋಭಾ ಕೂಡ ಅದೇ ಊರಿನ ಬಡ ಒಕ್ಕಲಿಗ ಕುಟುಂಬದ ಮಗಳು. ಆದರೆ, ತಮ್ಮದೇ ಜಾತಿಯ, ಊರಿನ ಬಡ ಹೆಣ್ಣುಮಗಳಿಗೆ ಆದ ಪರಿಸ್ಥಿತಿಗೆ ಶೋಭಾ ಹೆಣ್ಣಾಗಿ ಮರುಗಲಿಲ್ಲ. ಆ ಕುಟುಂಬ ಹದಿಮೂರು ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದೆ. ಆ ತಾಯಿಯ ನೋವು ಆಲಿಸಿಲ್ಲ. ಆ ಮನೆಗೆ ಒಮ್ಮೆಯೂ ಭೇಟಿ ನೀಡಿಲ್ಲ. ಅತ್ಯಾಚಾರಿಗಳ ಪರ ಊರಿನ ಮುಖಂಡರು, ಪೊಲೀಸರು, ತನಿಖಾಧಿಕಾರಿಗಳು ಎಲ್ಲರೂ ನಿಂತರು. ಬಿಜೆಪಿ ಸರ್ಕಾರ, ಸಚಿವೆ ಶೋಭಾ, ಗೃಹಸಚಿವ ಅಶೋಕ್‌, ಸಂಸದರ ನಳಿನ್‌ಕುಮಾರ್‌, ಉಡುಪಿ ಸಂಸದರಾಗಿದ್ದ ಸದಾನಂದ ಗೌಡ ನಂತರ ಮುಖ್ಯಮಂತ್ರಿಯೂ ಆದರು. ಬಿಜೆಪಿಯ ಇಷ್ಟು ದೊಡ್ಡ ಪಡೆಯೇ ದಕ್ಷಿಣ ಕನ್ನಡದಲ್ಲಿ ಇದ್ದರೂ ಸೌಜನ್ಯ ಕುಟುಂಬಕ್ಕೆ ನ್ಯಾಯ ಕೊಡಿಸಲು ಕಾಸಿನ ಕೆಲಸ ಮಾಡಿಲ್ಲ. ಸೌಜನ್ಯ ಕುಟುಂಬ ಕೂಡಾ ಹಿಂದುತ್ವದ ಪ್ರತಿಪಾದಕ ಕುಟುಂಬ. ಸೌಜನ್ಯ ಹೋರಾಟಗಾರರೆಲ್ಲರೂ ಬಿಜೆಪಿ ಮತ್ತು ಹಿಂದುತ್ವದ ಪರ ಇರುವವರು. ಆದರೆ, ಸೌಜನ್ಯ ಕುಟುಂಬದ ಪರ ಬಿಜೆಪಿ ಒಬ್ಬ ನಾಯಕರೂ ನಿಲ್ಲಲಿಲ್ಲ. ಅದೇ ಊರಿನ ಮಗಳಾಗಿ ಬಲಿಷ್ಠ ಮುಖಂಡ ಯಡಿಯೂರಪ್ಪನವರ ಆಪ್ತೆಯಾಗಿದ್ದ ಶೋಭಾ ಕರಂದ್ಲಾಜೆ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಸರಿಯಾದ ದಿಕ್ಕಿನಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂಬ ಬಗ್ಗೆ ಯಾವುದೇ ಕಾಳಜಿ ತೋರಿಸಿಲ್ಲ.

ಸೌಜನ್ಯ 1 696x392 1

2023 ಜೂನ್‌ನಲ್ಲಿ ಸಂತೋಷ್‌ ರಾವ್‌ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ತೀರ್ಪು ಹೊರಬಿದ್ದ ನಂತರ ಸುಮಾರು ಎಂಟು ತಿಂಗಳು ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಾರ್ಕಳ, ಉಡುಪಿ ಮಾತ್ರವಲ್ಲ ಮೈಸೂರು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಕ್ಷಾತೀತವಾಗಿ ಜನ ಪ್ರತಿಭಟನೆ ಮಾಡಿದ್ದಾರೆ. ಮರು ತನಿಖೆಗೆ ಒತ್ತಾಯಿಸಿದ್ದಾರೆ. ಒಂದೇ ಒಂದು ಹೇಳಿಕೆ ಶೋಭಾ ಕರಂದ್ಲಾಜೆ ಕಡೆಯಿಂದ ಬಂದಿಲ್ಲ. ಮಾಧ್ಯಮಗಳೂ ಈ ಮೇಡಂನ ಪ್ರಶ್ನೆ ಮಾಡಿಲ್ಲ ಅಂತ ಇಟ್ಟುಕೊಳ್ಳೋಣ. ಆದರೆ ರಾಜ್ಯದ ಎಲ್ಲೇ ಆಗಲಿ ಒಂದು ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯಾದರೂ ದೆಹಲಿಯಿಂದ ಓಡೋಡಿ ಬಂದು ಪ್ರೆಸ್‌ಮೀಟ್‌ ಮಾಡುವ ಸಚಿವೆಗೆ ಸೌಜನ್ಯ ಕುಟುಂಬದ ನೋವು ಕೇಳಿಸಲಿಲ್ಲವೇ? ಹಲವು ಪ್ರತಿಭಟನಾ ಸಭೆಗಳಲ್ಲಿ ಹೋರಾಟಗಾರರು ಈಕೆಯ ಹೆಸರು ಪ್ರಸ್ತಾಪಿಸಿ ಟೀಕಿಸಿದ್ದಾರೆ. ಪ್ರತಿಯೊಂದು ಹತ್ಯೆಯನ್ನೂ ಎನ್‌ಐಎಗೆ ಕೊಡಬೇಕು ಎಂದು ಗೃಹಸಚಿವ ಅಮಿತ್‌ ಶಾ ಗೆ ಪತ್ರ ಬರೆಯುವ ಶೋಭಾ ಮೇಡಂ ಸೌಜನ್ಯ ಪ್ರಕರಣವನ್ನೂ ಮರು ತನಿಖೆಗೆ ಒತ್ತಾಯಿಸಿ ಒಂದು ಪತ್ರ ಬರೆಯಬಾರದೇ? ಸೌಜನ್ಯ ಕುಟುಂಬದ ಮೇಲೆ ಯಾಕಿಷ್ಟು ದ್ವೇಷ? ತಮ್ಮದೇ ಜಾತಿಯ ಸೌಜನ್ಯಳ ಅತ್ಯಾಚಾರಿಗಳ ಮೇಲೆ ಯಾಕಷ್ಟು ಪ್ರೀತಿ? ಹದಿಮೂರು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಸುಮಾವತಿ ಎಂಬ ತಾಯಿಯ ಕಣ್ಣೀರು ಶೋಭಾ ಕಣ್ಣಿಗೆ ಕಾಣದಾಯಿತೇ? ಇಷ್ಟು ಮನುಷ್ಯತ್ವ ಇಲ್ಲದ ಮಹಿಳೆ ಮಂತ್ರಿಯಾದರೇನು, ಬಿಟ್ಟರೇನು!

Advertisements

ಮಂಗಳೂರು ಸಾಮೂಹಿಕ ಅತ್ಯಾಚಾರದ ಬಗ್ಗೆ ಮೌನ ಸರಿಯೇ?

ಮಂಗಳೂರಿನಲ್ಲಿ ಇದೇ ಏಪ್ರಿಲ್‌ನಲ್ಲಿ ಉತ್ತರ ಭಾರತದ ಕೂಲಿ ಕಾರ್ಮಿಕ ಯುವತಿಯೊಬ್ಬಳ ಸಾಮೂಹಿಕ ಅತ್ಯಾಚಾರ ನಡೆದು ಮೂವರು ಸ್ಥಳೀಯ ಹಿಂದೂ ಯುವಕರ ಬಂಧನವಾಗಿದೆ. ಹೊರ ರಾಜ್ಯದ ಯುವತಿಯ ಮೇಲೆ ಹಾಡ ಹಗಲೇ ಸಾಮೂಹಿಕ ಅತ್ಯಾಚಾರ ನಡೆದಿರುವುದು ತನ್ನ ಜಿಲ್ಲೆಗೆ ಕಳಂಕ ಅಲ್ಲವೇ? ಈ ಪ್ರಕರಣದ ಬಗ್ಗೆ ಶೋಭಾ ಕರಂದ್ಲಾಜೆ ಏನಾದರೂ ಹೇಳಿಕೆ ನೀಡಿದ್ದಾರೆಯೇ? ಇಲ್ಲ. ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ ನಡೆದಾಗ ಆರೋಪಿಗಳು ಮುಸ್ಲಿಮರಾಗಿದ್ದರೆ ಮಾತ್ರ ಮಾಧ್ಯಮಗಳ ಮುಂದೆ ಬಂದು ಕೋಮುದ್ವೇಷದ ಹೇಳಿಕೆ ಕೊಡುವುದು, ಹೋರಾಟದಲ್ಲಿ ಭಾಗಿಯಾಗುವುದು, ಕಾಂಗ್ರೆಸ್‌ನ ಓಲೈಕೆ ರಾಜಕಾರಣ ಎಂಬ ಟೀಕೆ ಮಾಡುವುದು ಇದು ಶೋಭಾ ಕರಂದ್ಲಾಜೆಯವರು ಮಾಡುತ್ತ ಬಂದ ಪುರುಷ ರಾಜಕಾರಣದ ನಕಲು. ಹಿಂದೂಗಳೇ ಹಿಂದೂ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಕಿದರೆ ಯಾವುದೇ ಹೋರಾಟ, ಖಂಡನಾ ಹೇಳಿಕೆ ನೀಡುವುದಿಲ್ಲ.

ದಕ್ಷಿಣ ಕನ್ನಡದ ಸುಳ್ಯದಲ್ಲಿ ಮಸೂದ್‌ ಎಂಬ ಅಮಾಯಕ ಕೂಲಿ ಕಾರ್ಮಿಕನ ಕೊಲೆ ಮಾಡಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಕೃತ್ಯಕ್ಕೆ ಪ್ರತೀಕಾರವಾಗಿ ಪ್ರವೀಣ್‌ ನೆಟ್ಟಾರುವಿನ ಹತ್ಯೆ, ಅದಕ್ಕೆ ಪ್ರತಿಯಾಗಿ ಸುರತ್ಕಲ್‌ನ ಫಾಜಿಲ್‌ನ ಹತ್ಯೆ, ಅದಕ್ಕೆ ಪ್ರತಿಯಾಗಿ ಈಗ ಸುಹಾಸ್‌ ಶೆಟ್ಟಿಯ ಹತ್ಯೆ ನಡೆದಿದೆ. ಒಬ್ಬ ಸಂಸದೆ ಸಚಿವೆಯಾಗಿ ಆಕೆ ಎಲ್ಲ ಕೊಲೆಗಳನ್ನೂ ಖಂಡಿಸಬೇಕಿತ್ತು. ಆದರೆ, ಆಕೆ ಖಂಡಿಸಿದ್ದು ಪ್ರವೀಣ್‌ ನೆಟ್ಟಾರು, ಸುಹಾಸ್‌ ಶೆಟ್ಟಿಯ ಕೊಲೆಯನ್ನು ಮಾತ್ರ. ಈ ಮಧ್ಯೆ ಬಡ ಯುವಕ ಮಸೂದ್‌, ಯಾವುದೇ ತಪ್ಪು ಮಾಡದ ಫಾಜಿಲ್‌ನ ಕೊಲೆಯನ್ನು ಖಂಡಿಸಿಲ್ಲ. ಅವರೇನು ಮನುಷ್ಯರಲ್ಲವೇ? ಅವರಿಗೂ ಹೆತ್ತ ತಾಯಿ ಮಡದಿ ಮಕ್ಕಳು ಕುಟುಂಬ ಇಲ್ಲವೇ? ದಕ್ಷಿಣ ಕನ್ನಡದಲ್ಲಿ ಒಂದು ದಶಕದಿಂದ ಆಗುತ್ತಿರುವ ಪ್ರತೀಕಾರದ ಹತ್ಯೆಗಳನ್ನು ತಡೆಯಲು ಅಲ್ಲಿನ ಸತತವಾಗಿ ಗೆದ್ದು ಬರುತ್ತಿರುವ ಬಿಜೆಪಿಯ ನಾಯಕರು ಮಾಡಿದ್ದೇನು? ಅದಕ್ಕಾಗಿ ಏನೂ ಮಾಡಿಲ್ಲ. ಬದಲಿಗೆ ಮತ್ತೊಂದು ಹತ್ಯೆಗೆ ಪ್ರಚೋದನೆ ನೀಡುವ ಹೇಳಿಕೆ ಕೊಡುವುದು ನಿರಂತರವಾಗಿ ಮಾಡುತ್ತಿದ್ದಾರೆ. ಡಾ ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌ ಮತ್ತು ಹರೀಶ್‌ ಪೂಂಜಾ ತರಹದ ಕೋಮುವಾದಿಗಳು ಜಿಲ್ಲೆಯ ಶಾಂತಿಗೆ ಭಂಗ ತರುವ ಹೇಳಿಕೆ ನೀಡುತ್ತಲೇ ಇದ್ದಾರೆ. ಅವರು ಜೊತೆಗೆ ಶೋಭಾ ಕರಂದ್ಲಾಜೆ ಕೂಡಾ ಸೇರಿಕೊಂಡಿದ್ದಾರೆ. ಇವರೆಲ್ಲ ಬಡ ಮನೆಯ ಯುವಕರನ್ನು ಸಮಾಜಘಾತುಕ ಚಟುವಟಿಕೆಗಳಿಗೆ ಬೆಂಬಲಿಸುತ್ತ ಅವರು ಬೀದಿ ಹೆಣವಾಗುವಂತೆ ಮಾಡುತ್ತಿದ್ದಾರೆ. ಇದನ್ನು ಬುದ್ದಿವಂತರ ಜಿಲ್ಲೆಯ ಮತದಾರರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಈ ಕಾಲದ ದುರಂತ.

Suhas shetty 8
ದಕ್ಷಿಣ ಕನ್ನಡದಲ್ಲಿ ಒಂದು ದಶಕದಲ್ಲಿ ನಡೆದ ಪ್ರತೀಕಾರದ ಹತ್ಯೆಗಳು

ಮಂಗಳೂರು ಗುಂಪುಹತ್ಯೆ ಬಗ್ಗೆ ಮಾತಿಲ್ಲ ಯಾಕೆ?

ಪಹಲ್ಗಾಮ್‌ ಹತ್ಯಾಕಾಂಡಕ್ಕೆ ಮಂಗಳೂರಿನಲ್ಲಿ ಹಿಂದುತ್ವದ ನಶೆ ಏರಿಸಿಕೊಂಡ ಗುಂಪು ಕೇರಳದ ಕೂಲಿ ಕಾರ್ಮಿಕ ಅಶ್ರಫನನ್ನು ಕೊಂದು ಹಾಕಿದ್ದು ಸರಿಯೇ? ಎಲ್ಲಿಯ ಕಾಶ್ಮೀರ ಎಲ್ಲಿಯ ಮಂಗಳೂರು! ರೌಡಿಗಳ ಗ್ಯಾಂಗ್‌ವಾರ್‌ನಲ್ಲಿ ಸುಹಾಸ್‌ ಹತ್ಯೆಯಾದರೆ ಹಿಂದೂ ಕಾರ್ಯಕರ್ತನ ಹತ್ಯೆ ಎಂದು ಓಡೋಡಿ ಬಂದು ಖಂಡಿಸುವ, ರಾಜಕೀಯ ಹೇಳಿಕೆ ನೀಡುವ ಇವರಿಗೆ ಮನುಷ್ಯತ್ವ ಇದೆಯೇ? ಮಂಗಳೂರಿನಲ್ಲಿ ಒಂದು ಸಾಮೂಹಿಕ ಅತ್ಯಾಚಾರ ನಡೆದಿದೆ. ಅದರ ಮೂವರು ಆರೋಪಿಗಳು ಹಿಂದೂಗಳು. ಒಬ್ಬ ಮುಸ್ಲಿಂ ಯುವಕನ ಗುಂಪು ಹತ್ಯೆ ಆಗಿದೆ, ಅದರ ಹದಿನಾರು ಜನ ಆರೋಪಿಗಳು ಹಿಂದೂಗಳು. ಸುಹಾಸನ ಕೊಲೆಗಾರರಲ್ಲಿ ಹಿಂದೂ -ಮುಸ್ಲಿಂ ಎರಡೂ ಧರ್ಮದ ಯುವಕರಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಸಹಿತ ಎಲ್ಲ ಬಿಜೆಪಿ ನಾಯಕರಿಗೆ ಅಲ್ಲಿ ಮುಸ್ಲಿಮರಿಂದ ಹಿಂದೂ ಕಾರ್ಯಕರ್ತರ ಹತ್ಯೆ ಮಾತ್ರ ಅಪರಾಧವಾಗಿ ಕಾಣುತ್ತಿದೆ. ಅಮಾಯಕ ವ್ಯಕ್ಯಿಗಳನ್ನು ಮುಸ್ಲಿಂ ಎಂಬ ಕಾರಣಕ್ಕೆ ಅದೂ ಕಾಶ್ಮೀರದಲ್ಲಿ ನಡೆದ ಹತ್ಯೆಗೆ ಪ್ರತೀಕಾರವಾಗಿ ಸಾಯಿಸಲಾಗುತ್ತದೆ ಎಂದರೆ ಅದನ್ನು ಹೇಗೆ ಸಮರ್ಥಿಸಲು ಸಾಧ್ಯ? ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಹಾಸ್‌ನನ್ನು ರೌಡಿ ಶೀಟರ್‌ ಎಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೀರ್ತಿ ಎಂಬ ದಲಿತನ ಕೊಲೆ, ನಂತರ ಸುರತ್ಕಲ್‌ನ ಫಾಜಿಲ್‌ ಕೊಲೆ ಆರೋಪಿ ಬಿಜೆಪಿಯವರ ಪಾಲಿಗೆ ಹಿಂದೂ ಧರ್ಮ ರಕ್ಷಣೆಗಾಗಿ ದುಡಿಯುವವ ಹೇಗಾಗುತ್ತಾನೆ? ರೌಡಿಯೊಬ್ಬ ಎದುರಾಳಿ ರೌಡಿ ಗ್ಯಾಂಗಿನಿಂದ ಹತನಾದರೆ ಅದಕ್ಕೆ ಸರ್ಕಾರ, ಕಾಂಗ್ರೆಸ್‌ ಪಕ್ಷ ಹೇಗೆ ಹೊಣೆಯಾಗುತ್ತದೆ? ಪ್ರವೀಣ್‌ ನೆಟ್ಟಾರು, ಹರ್ಷನ ಕೊಲೆಯಾದಾಗ ಅದರ ಹೊಣೆಯನ್ನು ಬಿಜೆಪಿ ಸರ್ಕಾರ ಹೊತ್ತುಕೊಂಡಿತ್ತೇ?

ಈಗ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ಮಾತನಾಡುತ್ತ ಶೋಭಾ ಕರಂದ್ಲಾಜೆ ಸ್ಪೀಕರ್‌ ಯು ಟಿ ಖಾದರ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಜಿ ಪರಮೇಶ್ವರ್‌ ನಾಲಾಯಕ್‌ ಗೃಹಸಚಿವ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಕಳೆದ ವರ್ಷ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾದಾಗ, ಆರೋಪಿ ತಮಿಳುನಾಡಿನಲ್ಲಿ ಬಾಂಬ್‌ ತಯಾರಿಗೆ ತರಬೇತಿ ಪಡೆದಿದ್ದ ಎಂದು ನಾಲಿಗೆ ಹರಿಬಿಟ್ಟು, ಸ್ಟಾಲಿನ್‌ ಸರ್ಕಾರ ಪ್ರಕರಣ ದಾಖಲಿಸಿದಾಗ ಮದ್ರಾಸ್‌ ಹೈಕೋರ್ಟ್‌ನಲ್ಲಿ ಕ್ಷಮೆಯಾಚನೆ ಮಾಡಿದ್ದರು. ಆಗ ಶೋಭಾ ಅವರ ರಾಜೀನಾಮೆಯನ್ನು ಯಾರಾದರೂ ಕೇಳಿದ್ರಾ? ಮುಸ್ಲಿಂ ಪುಂಡರಿಂದ ಹತ್ಯೆಗಳಾದಾಗ ಅದನ್ನು ಇಡೀ ಮುಸ್ಲಿಂ ಸಮುದಾಯದ ಮೇಲೆ ಹೊರಿಸುವುದು, ಹಿಂದೂಗಳಿಂದ ಮುಸ್ಲಿಮರ ಹತ್ಯೆಯಾದಾಗ ಅಥವಾ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ನಡೆದಾಗ ಕಾಣೆಯಾಗುವ ಶೋಭಾ ಅವರು ಸದಾ ಮುಸ್ಲಿಮರ ಮೇಲೆ ದ್ವೇಷ ಕಾರಲು ಹಾತೊರೆಯುತ್ತಿರುತ್ತಾರೆ. ಅವರ ಹೇಳಿಕೆ, ನಡವಳಿಕೆಗಳಲ್ಲಿ ರಾಜಕೀಯ ದುರುದ್ಧೇಶ ಬಿಟ್ಟರೆ ಹಿಂದೂಗಳ ಮೇಲಿನ ಕಾಳಜಿಯಾಗಲಿ, ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂಬ ಉದ್ದೇಶವಾಗಲಿ ಇರುವುದಿಲ್ಲ. ಸುಹಾಸ್‌ ಕೊಲೆ ಪ್ರಕರಣವನ್ನು ಎನ್‌ಐಎಗೆ ಕೊಡಲು ಗೃಹಸಚಿವರಿಗೆ ಪತ್ರ ಬರೆಯುವುದಾಗಿ ಶೋಭಾ ಹೇಳಿದ್ದಾರೆ. ಅದಕ್ಕೂ ಮೊದಲು ಸೌಜನ್ಯ ಪ್ರಕರಣವನ್ನು ಎನ್‌ಐಎಯಿಂದ ಮರು ತನಿಖೆ ಮಾಡಿಸಲು ಒತ್ತಾಯಿಸಬಹುದಲ್ವೇ?

ಪರೇಶ್‌ ಮೇಸ್ತನ ‍ಸಾವನ್ನು ಮುಸ್ಲಿಮರ ತಲೆಗೆ ಕಟ್ಟಿದ್ದ ಶೋಭಾ

2016ರಲ್ಲಿ ಉತ್ತರ ಕನ್ನಡದಲ್ಲಿ ಪರೇಶ್‌ ಮೇಸ್ತ ಎಂಬ ಯುವಕನ ಅಸಹಜ ಸಾವನ್ನು ರಾಜಕೀಯಗೊಳಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದ ಬಿಜೆಪಿಯ ಹೋರಾಟದ ಮುಂಚೂಣಿಯ ನಾಯಕತ್ವ ವಹಿಸಿದ್ದವರು ಶೋಭಾ. ಸಿದ್ದರಾಮಯ್ಯ ಸರ್ಕಾರದ ಮೇಲೆ ಕೊಲೆ ಆರೋಪ ಹೊರಿಸಿ ಮುಸ್ಲಿಂ ಯುವಕರು ಕೊಲೆ ಮಾಡಿದ್ದಾರೆ ಎಂದು ಸುಳ್ಳು ಸುಳ್ಳೇ ಆರೋಪಿಸಿ ಬಂದ್‌ ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಪ್ರಕರಣ ಕೊಡುವಂತೆ ಮಾಡಿದ ಬಿಜೆಪಿ ಸಿಬಿಐ ವರದಿ ಬಂದ ನಂತರ ಯಾವುದೇ ಪ್ರತಿಕ್ರಿಯೆ ಕೊಡದೇ ಸುಮ್ಮನಾಗಿದೆ. ಪರೇಶ್‌ ಮೇಸ್ತನ ಕುಟುಂಬ ಈಗಲೂ ಕಷ್ಟದಲ್ಲಿದೆ. ಪರೇಶ್‌ ಮೇಸ್ತನ ಮುಖಕ್ಕೆ ಸೀಮೆಎಣ್ಣೆ ಸುರಿದು ಸುಟ್ಟು ನಂತರ ಕೆರೆಗೆ ಎಸೆಯಲಾಗಿದೆ ಎಂಬ ಕಟ್ಟು ಕತೆಯನ್ನು ಶೋಭಾ ಯಾವುದೇ ಮುಜುಗರ ಇಲ್ಲದೇ ಮಾಧ್ಯಮಗಳ ಮುಂದೆ ಹೇಳಿದ್ದರು. ಅಷ್ಟೇ ಅಲ್ಲ ಸಂಸತ್ತಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರ ಪಟ್ಟಿಯಲ್ಲಿ ಬದುಕಿರುವವವರ ಹೆಸರು ಸೇರಿಸಿ ಪೇಚಿಗೆ ಒಳಗಾಗಿದ್ದರು. ಪ್ರತಿಯೊಂದು ಕೊಲೆ, ಅಧಿಕಾರಿಗಳ ಆತ್ಮಹತ್ಯೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಮಾಡಿಸಿದ ಕೊಲೆ ಎಂಬ ಬೊಬ್ಬೆ ಹೊಡೆದು ಹಿಂದೂ ಕಾರ್ಯಕರ್ತರನ್ನು ಪ್ರಚೋದಿಸುವ ಕೆಲಸವನ್ನು ಶೋಭಾ ಕರಂದ್ಲಾಜೆ ಮಾಡುತ್ತಲೇ ಬಂದಿದ್ದಾರೆ.

honnavar protest
ಪರೇಶ್‌ ಮೇಸ್ತ ಸಾವಿನ ಪ್ರಕರಣ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಪ್ರತಿಭಟನೆ

ತೀರ್ಥಹಳ್ಳಿಯ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ರಾಜಕೀಯ ರಾಡಿಗೊಳಿಸಿ, ಆಕೆಯ ಸಾವಿಗೆ ಮುಸ್ಲಿಂ ಯುವಕರು ಕಾರಣ, ಆಕೆಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಸುಳ್ಳು ಹಬ್ಬಿಸಿ ಗಲಭೆಗೆ ಪ್ರಚೋದಿಸಿದ ಟೀಂನಲ್ಲಿ ಶೋಭಾ ಕರಂದ್ಲಾಜೆ ಮುಂಚೂಣಿಯಲ್ಲಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ ಅವರನ್ನು ವಿನಾ ಕಾರಣ ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದ್ದರು. ನಂದಿತಾಳ ಮರಣಪತ್ರವನ್ನು ಸಚಿವ ಕಿಮ್ಮನೆ ಬರೆದಿದ್ದಾರೆ ಎಂದು ಶೋಭಾ ಕರಂದ್ಲಾಜೆ ಬಹಳ ಕೆಳಮಟ್ಟಕ್ಕಿಳಿದು ಟೀಕಿಸಿದ್ದರು.

ಗೆದ್ದ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗಿಂತ ಇಂತಹ ಪ್ರಚೋದನಕಾರಿ ಭಾಷಣಗಳಿಗೇ ಫೇಮಸ್‌ ಆಗಿದ್ದ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಜನ ತಿರಸ್ಕರಿಸಿದ್ದಾರೆ. ಆಕೆಗೆ ಟಿಕೆಟ್‌ ಕೊಡುವ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ಹೊರ ಹಾಕಿದ್ದರು. ಗೋ ಬ್ಯಾಕ್‌ ಎಂದಿದ್ದರು. ನಂತರ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್‌ ಕೊಟ್ಟಾಗಲೂ ಗೋ ಬ್ಯಾಕ್‌ ಎಂದಿದ್ದರು. ಆದರೂ ಆಕೆ ಬಿಜೆಪಿಯ ಅಭ್ಯರ್ಥಿ ಎಂಬ ಒಂದೇ ಕಾರಣಕ್ಕೆ ಗೆಲ್ಲುತ್ತಿರುವ ಶೋಭಾ ಮೋದಿ ಸಂಪುಟದ ಎರಡನೇ ಮತ್ತು ಮೂರನೇ ಅವಧಿಯಲ್ಲಿ ಸಚಿವೆಯಾದ ಅದೃಷ್ಟವಂತೆ. ಮೂರನೇ ಅವಧಿಯಲ್ಲಿ ಅನೇಕ ಪಕ್ಷಗಳ ಮೈತ್ರಿಯಿಂದ ಮೋದಿ ಸರ್ಕಾರ ರಚನೆಯಾದರೂ ಆಕೆಗೆ ಮಂತ್ರಿ ಪದವಿ ನೀಡಲಾಗಿದೆ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮೊದಲ ಬಾರಿಗೆ ಶಾಸಕಿಯಾದರೂ ಗ್ರಾಮೀಣಾಭಿವೃದ್ದಿ ಖಾತೆ ನೀಡಲಾಗಿತ್ತು. ಎರಡು ವರ್ಷ ತುಂಬುವಾಗ ಜಗದೀಶ್‌ ಶೆಟ್ಟರ್‌ ಅಸಮಾಧಾನ ಹೊರ ಹಾಕಿದ್ದರು, ಆ ಕಾರಣಕ್ಕೆ ಖಾತೆಯನ್ನು ವಾಪಸ್‌ ಪಡೆಯಲಾಗಿತ್ತು. ನಂತರ ಆರೇ ತಿಂಗಳಲ್ಲಿ ಪ್ರಬಲ ಖಾತೆಯಾದ ಇಂಧನ ಇಲಾಖೆಯನ್ನು ನೀಡಲಾಗಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಶೋಭಾ ಮರು ವರ್ಷವೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗಿತ್ತು. ಮೊದಲ ಬಾರಿಗೆ ಗೆದ್ದು ಸಂಸದೆಯಾದ ನಂತರ ಕೋಮುದ್ವೇಷದ ಭಾಷಣ ಮಾಡುವುದರಲ್ಲೇ ಹೆಚ್ಚು ಸುದ್ದಿಯಾದವರು. ಈಗಲೂ ಹೆಣ ಬಿದ್ದ ತಕ್ಷಣ ಅದು ಹಿಂದುವಿನದ್ದೋ, ಕೊಲೆಗಾರರು ಮುಸ್ಲಿಮರೋ ಎಂದು ನಿರ್ಧರಿಸಿ ನಂತರ ಹೇಳಿಕೆ ಕೊಡುವ ಚಾಳಿ ಬಿಟ್ಟಿಲ್ಲ.

ತಮ್ಮ ಇಡೀ ರಾಜಕೀಯ ಜೀವನದಲ್ಲಿ ಬರೇ ಕೋಮುದ್ವೇಷ, ಶವರಾಜಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಶೋಭಾ ಕರಂದ್ಲಾಜೆ ಬಿಜೆಪಿಯ ಮುಂದಿನ ಮಹಿಳಾ ಮುಖ್ಯಮಂತ್ರಿ, ರಾಜ್ಯ ಘಟಕದ ಅಧ್ಯಕ್ಷೆ ಎಂಬ ಮಟ್ಟಿಗೆ ಚರ್ಚೆಗಳು ಶುರುವಾಗಿದ್ದವು. ಈ ಅರ್ಹತೆಗಳ ಕಾರಣಕ್ಕೆ ಮೋದಿ ಸರ್ಕಾರ ಆಕೆಗೆ ಸಚಿವ ಸ್ಥಾನ ನೀಡಿರಬೇಕು. ಆದರೆ, ಕರ್ನಾಟಕದ ಪ್ರಜ್ಞಾವಂತ ಜನ ಇಂತಹ ರಾಜಕಾರಣಿಗಳನ್ನು ಮನೆಗೆ ಕಳಿಸುವ ನಿರ್ಧಾರ ಮಾಡಬೇಕು. ಈ ನೆಲದ ಸೌಹಾರ್ದ ಪರಂಪರೆಗೆ ಇಂತಹ ಕೋಮುವಾದಿ ರಾಜಕಾರಣಿಗಳೇ ಕಾರಣ ಹೊರತು ಸಮಾನ್ಯ ಜನ ಅಲ್ಲ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X