ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಮಹಿಳಾ ದೌರ್ಜನ್ಯ ಕುರಿತ ದತ್ತಾಂಶ ನಿಜಕ್ಕೂ ಆಘಾತಕಾರಿಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಕರಣ ಗಣನೀಯ ಏರಿಕೆಯಾಗಿರುವುದು ಕಂಡುಬಂದಿದೆ.
ಭಾರತದಲ್ಲಿ ಒಂದು ಪ್ರಮುಖ ಧಾರ್ಮಿಕ ಹಬ್ಬವಾಗಿ ಗುರುತಿಸಿಕೊಂಡಿರುವ ದಸರಾ ಮಹಿಳೆಯರ ಪಾಲಿಗೆ ಅಚ್ಚು ಮೆಚ್ಚಿನ ಹಬ್ಬವಾಗಿದೆ. ಇದನ್ನು ನವರಾತ್ರಿ ಎಂತಲೂ ಕರೆಯಲಾಗುತ್ತದೆ. ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇ ದಿನ ‘ವಿಜಯ ದಶಮಿ’ ದಿನ ಶಮಿ (ಬನ್ನಿ) ವೃಕ್ಷಕ್ಕೆ ಪೂಜೆ ಸಲ್ಲಿಸಿ, ಬನ್ನಿ ವಿನಿಯೋಗ ಮಾಡುವುದು ಕರ್ನಾಟಕದಲ್ಲಿ ಆಚರಣೆಯಲ್ಲಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ‘ದುರ್ಗಾ ಪೂಜಾ’ ಎಂತಲೂ ಆಚರಿಸಲಾಗುತ್ತದೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ದಿನಕ್ಕೊಂದು ಬಣ್ಣದ ಹೊಸ ಸೀರೆಯುಟ್ಟು 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸುವ ಸಂಪ್ರದಾಯವಿದೆ.
ಇದೇ ವೇಳೆ ಸರ್ಕಾರಿ ಮತ್ತು ಖಾಸಗಿ ಕೆಲಸದ ಕಚೇರಿಗಳಲ್ಲೂ ಮಹಿಳೆಯರು ಮತ್ತು ಪುರುಷರು ದಿನಕ್ಕೊಂದು ಬಣ್ಣದ ಉಡುಗೆ ತೊಟ್ಟು ಸಂಭ್ರಮಿಸುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಾಲೇಜುಗಳಲ್ಲೂ ಈ ಸಡಗರವನ್ನು ಕಾಣಬಹುದು. ಆದರೆ, ದಸರಾ ಹಬ್ಬದಲ್ಲಿ ಮಹಿಳೆಯರೇ ಹೆಚ್ಚಿನದಾಗಿ ತೊಡಗಿಕೊಳ್ಳುವುದರಿಂದ ಮತ್ತು ವಿಶೇಷವಾಗಿ ದೇವಿ ಪೂಜೆಯನ್ನು ಮಾಡುವುದರಿಂದ ಈ ಹತ್ತು ದಿನಗಳ ಕಾಲ ಸಮಾಜ ಮತ್ತು ಕುಟುಂಬಗಳಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ, ಕಾಳಜಿ ಸಿಗುವುದನ್ನು ಗಮನಿಸಬಹುದು. ಆದರೆ, ವರ್ಷದ ಉಳಿದ ದಿನಗಳಲ್ಲಿ ಇದೆ ರೀತಿಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನವನ್ನು ಸ್ಥಾಪಿತ ಪುರುಷ ಸಮಾಜ ಕೊಡುತ್ತದೆಯೇ ಎಂದು ಪ್ರಶ್ನಿಸಿಕೊಂಡಾಗ ಉತ್ತರ ಬಹಳಷ್ಟು ಕಳವಳಕಾರಿಯಾಗಿರುತ್ತದೆ.
ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಮಹಿಳಾ ದೌರ್ಜನ್ಯ ಕುರಿತ ದತ್ತಾಂಶ ನಿಜಕ್ಕೂ ಆಘಾತಕಾರಿಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಕರಣ ಗಣನೀಯ ಏರಿಕೆಯಾಗಿರುವುದು ಕಂಡುಬಂದಿದೆ.
2023ರಲ್ಲಿ ದೇಶಾದ್ಯಂತ ಒಟ್ಟು 6,07,705 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 4,45,256 ಪ್ರಕರಣಗಳು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಾಗಿವೆ. ಈ ಪೈಕಿ 1,33,676 ಗಂಡ ಮತ್ತು ಆತನ ಕುಟುಂಬದಿಂದಾದ ದೌರ್ಜನ್ಯ ಪ್ರಕರಣಗಳು. 31,516 ಅತ್ಯಾಚಾರ ಪ್ರಕರಣಗಳು. 20,446 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಲ್ಲಿ ದಾಖಲಾಗಿವೆ.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಗಮನಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ದೇಶದಲ್ಲಿ ಸುರಕ್ಷತೆ ಎನ್ನುವುದು ಇದೆಯಾ ಎನ್ನುವ ಗಂಭೀರ ಪ್ರಶ್ನೆ ನಮ್ಮ ಕಣ್ಮುಂದೆ ಬರುತ್ತದೆ. ದೇಶದಲ್ಲಿ 1,62,449 ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದರಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳೇ 1,53,147. ಅಪಹರಣ, ಕೊಲೆಗೆ ಸಂಬಂಧಿದಂತೆ 9,302 ಪ್ರಕರಣಗಳು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖವಾಗಿವೆ.
ಇನ್ನು ಕರ್ನಾಟಕ ವಿಚಾರಕ್ಕೆ ಬಂದರೆ 2023ರಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಒಟ್ಟು 69,555 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 51,422 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಾಗಿವೆ. ಈ ಸಂಖ್ಯೆಯನ್ನು 2022ಕ್ಕೆ ಹೋಲಿಸಿದರೆ 45,000 ಪ್ರಕರಣ ದಾಖಲಾಗಿವೆ. ಅಂದ್ರೆ 14.16%ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ.
2023ರಲ್ಲಿ ಮಹಿಳೆಯರ ಮೇಲಿನ ಸೈಬರ್ ಅಪರಾಧದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 127 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲೇ ನಂ.1 ಸ್ಥಾನದಲ್ಲಿದೆ! ಉಳಿದಂತೆ ಹೈದರಾಬಾದ್‌ನಲ್ಲಿ 53 ಪ್ರಕರಣಗಳು ದಾಖಲಾಗಿದ್ದು 2ನೇ ಸ್ಥಾನದಲ್ಲಿದೆ. ಲಕ್ನೋಷದಲ್ಲಿ 41. ದೆಹಲಿಯಲ್ಲಿ 36 ಪ್ರಕರಣಗಳು ದಾಖಲಾಗಿದ್ದು ಕ್ರಮೇಣ 3,4 ಸ್ಥಾನದಲ್ಲಿವೆ.
ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅವಲೋಕಿಸಿದರೆ 2023ಲ್ಲಿ 18,133 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 16,227 ಪ್ರಕರಣಗಳು ದಾಖಲಾಗಿದ್ದವು. ಅಂದರೆ 11.78%ರಷ್ಟು ಏರಿಕೆಯಾಗಿದ್ದನ್ನು ಕಾಣಬಹುದು. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿಯೂ ಬೆಂಗಳೂರು 3ನೇ ಸ್ಥಾನದಲ್ಲಿದ್ದು, 1,982 ಪ್ರಕರಣಗಳು ದಾಖಲಾಗಿವೆ. ದಿಲ್ಲಿಯಲ್ಲಿ 7731 ಪ್ರಕರಣಗಳು ದಾಖಲಾಗಿದ್ದು, ಮೊದಲನೇ ಸ್ಥಾನದಲ್ಲಿದೆ. ಮುಂಬೈನಲ್ಲಿ 3,110 ಪ್ರಕರಣಗಳು ದಾಖಲಾಗಿರುವ ಬಗ್ಗೆ ವರದಿಯಾಗಿವೆ.
ಇತ್ತೀಚೆಗೆ ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳ ನೀಡಿ, ಪತಿ, ಅತ್ತೆ, ಮಾವ ಮಹಿಳೆಯೊಬ್ಬರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣ ದೇಶದಲ್ಲಿ ಹೆಚ್ಚು ಚರ್ಚೆಯಾಗಿದ್ದನ್ನು ಗಮನಿಸಬಹುದು. ಇದು ಒಬ್ಬ ಮಹಿಳೆಯ ಕಥೆಯಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದರೂ, ನಮ್ಮ ಸಮಾಜದ ಬೇರುಗಳಲ್ಲಿ ವಿಷದಂತೆ ಹರಡಿರುವ ವರದಕ್ಷಿಣೆ ಕಿರುಕುಳ ಬಹುತೇಕರನ್ನು ಬಾಧಿಸಿದೆ.
ದೇಶದಲ್ಲಿ ವರದಕ್ಷಿಣೆ ಕಿರುಕುಳ ಎದುರಿಸುತ್ತಿರುವ ಮಹಿಳೆಯರ ಬಗ್ಗೆ ಹಿರಿಯ ವಕೀಲೆ ಸುನೀತಾ ಭಾರದ್ವಾಜ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತ, “ಪ್ರತಿ ವರ್ಷ ಸರಾಸರಿ 7000 ಮಹಿಳೆಯರು ವರದಕ್ಷಿಣೆ ಅಥವಾ ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾಗುತ್ತಾರೆ. ಆದರೆ, ಈ ಅಂಕಿ – ಅಂಶಗಳು ಅಪೂರ್ಣ. ಏಕೆಂದರೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಪೊಲೀಸ್ ಠಾಣೆಗೆ ತಲುಪುವುದಿಲ್ಲ ಮತ್ತು ಯಾವುದೇ ಎಫ್‌ಐಆರ್ ದಾಖಲಾಗುವುದಿಲ್ಲ. ಹಾಗಾಗಿ ಈ ಅಂಕಿ – ಅಂಶಗಳು ವರದಕ್ಷಿಣೆ ಕಿರುಕುಳದ ಸಂಪೂರ್ಣ ಚಿತ್ರವನ್ನು ಬಿಚ್ಚಿಡುವುದಿಲ್ಲ. ಸರ್ಕಾರಿ ಅಂಕಿ – ಅಂಶಗಳನ್ನು ಕೆಲವೊಮ್ಮೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬಂತೆ ಪ್ರಸ್ತುತಪಡಿಸಲಾಗುತ್ತದೆ. ಆದರೆ, ವಾಸ್ತವವೆಂದರೆ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ” ಎಂದು ಹೇಳಿದ್ದನ್ನು ಇಲ್ಲಿ ಗಮನಿಸಬಹುದು.
ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿಯಲ್ಲಿ ಮಹಾನಗರಗಳ ಪೈಕಿ ಬೆಂಗಳೂರು 2023ರಲ್ಲಿ ಮೊದಲನೇ ಸ್ಥಾನವನ್ನು ಪಡೆದಿತ್ತು ಎಂಬ ಕಹಿ ಸತ್ಯವನ್ನು ಮರೆಯುವಂತಿಲ್ಲ. ಎಳೆಯ ಕಂದಮ್ಮಗಳ ಮೇಲೆ ಅತ್ಯಾಚಾರ ಪ್ರಕರಣಗಳು ನಿಂತಿಲ್ಲ. ಮನೆಯಲ್ಲಿ ಬಳಸುವ ಫ್ರಿಡ್ಜ್‌ಗಳಲ್ಲಿ ವಯಸ್ಕ ಮಹಿಳೆಯರನ್ನು, ಯುವತಿಯರನ್ನು ತುಂಡು ತುಂಡಾಗಿ ಕತ್ತರಿಸಿ ತುಂಬಿದ ಪ್ರಕರಣಗಳು ದೇಶದ ನಾನಾ ಭಾಗಗಲ್ಲಿ ವರದಿಯಾಗಿವೆ.
ಈ ಸುದ್ದಿ ಓದಿದ್ದೀರಾ? ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!
ದೊಡ್ಡ ದೊಡ್ಡ ರಾಜಕೀಯ ನಾಯಕರು ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಪ್ರಕರಣಗಳಲ್ಲಿ ಸುದ್ದಿಯಾಗಿದ್ದನ್ನು ಕಾಣಬಹುದು. ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ತಾಯಿಯ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಆತನ ತಂದೆ ಹೆಚ್ ಡಿ ರೇವಣ್ಣ ಸಹ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಹಾಯ ಕೋರಿ ಬಂದಿದ್ದ ಸಂತ್ರಸ್ತ ಬಾಲಕಿಯನ್ನು ಯಡಿಯೂರಪ್ಪ ಮನಬಂದಂತೆ ಸ್ಪರ್ಶಿಸಿದ್ದಾರೆ ಎನ್ನುವ ಆರೋಪ ಯಡಿಯೂರಪ್ಪ ಮೇಲೆ ಕೇಳಿಬಂದಿದೆ. ಸಂತ್ರಸ್ತ ಬಾಲಕಿಯ ತಾಯಿ ನೀಡಿರುವ ದೂರಿನ ಅನುಸಾರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇವು ಕಣ್ಮುಂದಿನ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು.
ಧರ್ಮ ಧರ್ಮಗಳ ನಡುವೆ ಗಂಡು ಹೆಣ್ಣು ಮಕ್ಕಳು ಒಂದಾಗಿ ಸಹಬಾಳ್ವೆಯಿಂದ ಬದುಕುವ ವಾತಾವರಣ ದೇಶದಲ್ಲಿ ಇಲ್ಲ. ಅನ್ಯ ಧರ್ಮದ ಯುವಕ ಯುವತಿಯರು ಮತ್ತೊಂದು ಧರ್ಮದ ಯುವಕ, ಯುವತಿಯರನ್ನು ಪ್ರೀತಿಸಿದರೆ ಅದಕ್ಕೊಂದು ಕೋಮು ಬಣ್ಣ ಕಟ್ಟಿ, ಆರ್‌ಎಸ್‌ಎಸ್ ಸಿದ್ಧಾಂತ ಪ್ರೇರಿತ ‘ಲವ್ ಜಿಹಾದ್’ ಅನ್ನು ಸಮಾಜದಲ್ಲಿ ಛೂ ಬಿಡಲಾಗುತ್ತಿದೆ. ಇಲ್ಲಿ ಮಹಿಳಾ ದೌರ್ಜನ್ಯಕ್ಕೆ ಕೊನೆಯೇ ಇಲ್ಲವಾಗಿದೆ.
ಮಹಿಳೆಯರಿಗೆ ದೇವತೆಯ ಸ್ಥಾನಮಾನ ನೀಡುವ ದೇಶ ಭಾರತ ಎಂದು ಬಿಜೆಪಿ ನಾಯಕರು ಮತ್ತು ಹಾರ್ಡ್‌ಕೋರ್ ಹಿಂದುತ್ವದ ಪ್ರತಿಪಾದಕರು, ಪುಂಖಾನುಪುಂಖವಾಗಿ ಭಾಷಣ ಬಿಗಿಯುವವರು ಎನ್‌ಸಿಆರ್‌ಬಿ ರಿಪೋರ್ಟ್ ಒಳಗಿನ ಮಹಿಳಾ ದೌರ್ಜನ್ಯ ಕುರಿತ ಸತ್ಯವನ್ನು ಒಮ್ಮೆ ಕಣ್ತೆರೆದು ನೋಡಬೇಕಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.