ಹೊಸ ಓದು | ಜೆ.ಎಂ. ಕಟ್‌ಸೇ ಅವರ ʼಕಲ್ಲುನೆಲದ ಹಾಡುಪಾಡುʼ: ಕೊನೆಯಿರದ ನಿಟ್ಟುಸಿರು…

Date:

Advertisements
ಮನುಷ್ಯನ ನಿಗೂಢಗಳನ್ನು ʼಬಟಾಬಯಲುʼ ಮಾಡುವುದು ಸುಲಭದ ಕೆಲಸವಲ್ಲ. ಅದು ʼಖಂಡ, ಮಾಂಸ, ಗುಂಡಿಗೆಯ ಬಿಸಿರಕ್ತʼಗಳನ್ನು ಒಳಗೊಂಡು ಅದರಾಚೆಗಿನದನ್ನೂ ಕಾಣಿಸುವ ಪವಾಡ. ಕಟ್‌ಸೇ ಅವರು ತಮ್ಮ ಕಾದಂಬರಿಗಳಲ್ಲಿ ಇದನ್ನು ಸಾಧಿಸಿದ್ದಾರೆ. ಅಂತಹ ಜೆ.ಎಂ. ಕಟ್‌ಸೇ ಅವರ ʼಕಲ್ಲು ನೆಲದ ಹಾಡುಪಾಡುʼ ಕೃತಿಯನ್ನು ಹಿರಿಯ ವಿಮರ್ಶಕರಾದ ಎಚ್.ಎಸ್.‌ ರಾಘವೇಂದ್ರರಾವ್‌ ಕನ್ನಡಕ್ಕೆ ತಂದಿದ್ದಾರೆ. ಆ ಕೃತಿಯ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ...

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ನನ್ನ ಮಗ ಮನು, ಜಾನ್ ಕಟ್‌ಸೇ ಬರೆದ ʼಡಿಸ್ಗ್ರೇಸ್ʼ ಕಾದಂಬರಿಯನ್ನು ಕೊಂಡು ತಂದು, ತಾನು ಓದಿ, ನನ್ನಿಂದಲೂ ಓದಿಸಿದ. ಅಂದಿನಿಂದ ಇಂದಿನವರೆಗೆ ಅವರು ಬರೆದ ಎಲ್ಲ ಕಾದಂಬರಿಗಳನ್ನೂ ಮನಮರುಳಾಗಿ ಓದಿದ್ದೇನೆ. ನನ್ನ ಆತ್ಮೀಯರಿಗೆ ಹೇಳಿ ಓದಿಸಿದ್ದೇನೆ. ಆ ಕಾದಂಬರಿಗಳು ನೀಡಿದ ತಿಳಿವಳಿಕೆಯಿಂದ ನನ್ನ ʼಒಳಲೋಕʼ ಶ್ರೀಮಂತವಾಗಿದೆ. ಪ್ರತಿಯೊಂದು ಕಾದಂಬರಿಯಲ್ಲಿಯೂ ಅವರು ಹುಡುಕಿ ತೋರಿಸುವ ಬರವಣಿಗೆಯ ಹೊಸ ಹೊಸ ಬಗೆಗಳು ಕಥಾಸಾಹಿತ್ಯವನ್ನು ಕುರಿತ ನನ್ನ ಅರಿವನ್ನು ಹಿಗ್ಗಿಸಿವೆ. ಈ ಅವಧಿಯಲ್ಲಿ ಮಾರ್ಕೆಸ್, ಪಮುಕ್, ಇಸಬೆಲ್ ಅಯೆಂಡೆ, ಹಾನ್ ಕಾಂಗ್, ಟೋನಿ ಮಾರಿಸನ್ ಮುಂತಾದವರ ಬರವಣಿಗೆಯನ್ನು ಓದಿ ಸಂಭ್ರಮಿಸಿದರೂ ಕಟ್‌ಸೇ ತನಗಿರುವ ಸ್ಥಾನದಿಂದ ಕದಲಿಲ್ಲ. ಅವರ ʼದ ಮಾಸ್ಟರ್ ಆಫ್ ಪೀಟರ್ಸ್ಬರ್ಗ್ʼ, ʼವೇಟಿಂಗ್ ಫಾರ್ ದ ಬಾರ್ಬೇರಿಯನ್ಸ್ʼ, ʼಚೈಲ್ಡ್‌ಹುಡ್ ಆಫ್ ಜೀಸಸ್ʼ, ʼಐರನ್ ಇನ್ ದ ಸೋಲ್ʼ… ಮುಂತಾದ ಶ್ರೇಷ್ಠ ಕಾದಂಬರಿಗಳು ಕೂಡ ಕನ್ನಡಕ್ಕೆ ಸಲ್ಲಬೇಕು ಎನ್ನುವುದು ನನ್ನ ಹಂಬಲ.

ಈ ಲೇಖಕ ಸೃಜನಶೀಲತೆ, ವಿದ್ವತ್ತು ಮತ್ತು ಸಾಮಾಜಿಕ ಎಚ್ಚರಗಳ ಸಂಕೀರ್ಣ ಸಂಯೋಜನೆ. ಗಣಿತ, ತತ್ವಶಾಸ್ತ್ರ, ಕಂಪ್ಯೂಟರ್ ಜ್ಞಾನ ಮತ್ತು ಸಾಹಿತ್ಯ ಇವರ ಆಸಕ್ತಿ ಹಾಗೂ ಪರಿಣತಿಯ ಕ್ಷೇತ್ರಗಳು. ಮತ್ತೊಬ್ಬ ನೊಬೆಲ್ ಪ್ರಶಸ್ತಿವಿಜೇತ ಬರೆಹಗಾರ ಸ್ಯಾಮುಯೆಲ್ ಬೆಕೆಟ್‌ನ ಕೃತಿಗಳನ್ನು ಕುರಿತ ಕಂಪ್ಯೂಟರ್ ಆಧರಿತ ಸಂಶೋಧನೆ ಮಾಡಿ ಪಿಎಚ್.ಡಿ. ಪದವಿ ಪಡೆದವರು. ಐ.ಬಿ.ಎಂ. ಕಂಪನಿಯಲ್ಲಿ ಕೆಲಸ ಮಾಡಿದವರು. ದಸ್ತೊವಸ್ಕಿ, ಕಾಫ್ಕಾ, ಬೆಕೆಟ್ ಮುಂತಾದ ಮಹಾನ್ ಲೇಖಕರಿಂದ ಪ್ರಭಾವಿತರಾದವರು. ಅಮೆರಿಕಾದಲ್ಲಿ ಇರುವಾಗಲೇ ವಿಯಟ್ನಾಂ ಯುದ್ಧದ ಬಗ್ಗೆ ಪ್ರತಿಭಟನೆ ನಡೆಸಿ, ಕೆಲಕಾಲ ಸೆರೆಮನೆಗೆ ಹೋದವರು. ಆ ಕಾರಣಕ್ಕಾಗಿಯೇ ಅವರಿಗೆ ಅಮೆರಿಕಾ ಪೌರತ್ವವನ್ನು ನಿರಾಕರಿಸಲಾಯಿತು. ಇಂಗ್ಲಿಷ್ ಭಾಷೆಯು ಜಗತ್ತನ್ನು ಆವರಿಸುತ್ತಿರುವ ರೀತಿ ಮತ್ತು ಅದನ್ನು ಮಾತೃಭಾಷೆಯಾಗಿ ಹೊಂದಿರುವವರ ಆತ್ಮಪ್ರತ್ಯಯದ ಬಗ್ಗೆ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದ ಜನಾಂಗಭೇದ ನೀತಿಗೆ ತೀವ್ರವಾದ ಪ್ರತಿಭಟನೆ ತೋರಿಸಿದ ಕಪ್ಪುಜನಾಂಗಕ್ಕೆ ಸೇರದ ಲೇಖಕರಲ್ಲಿ ಅವರು ಮತ್ತು ನದೀನ್ ಗಾದಿಮಾ ಮುಖ್ಯರು. ಆ ಕಾಲದ ಸಾಮಾಜಿಕ ಸನ್ನಿವೇಶವು ಆ ದೇಶದ ಸಾಹಿತ್ಯವನ್ನೂ ವಿಕಲವಾಗಿಸಿತೆನ್ನುವುದೂ ಅವರ ಖಚಿತವಾದ ಅಭಿಪ್ರಾಯ. ಅವರು ಹೀಗೆ ಹೇಳುತ್ತಾರೆ: ʼʼಈ ದೇಶದ ಸಮಾಜವು ಮನುಷ್ಯ ಮನುಷ್ಯರ ನಡುವಿನ ಸಂಬಂಧವನ್ನು ವಿಕೃತಗೊಳಿಸಿದೆ, ಅಪೂರ್ಣವಾಗಿಸಿದೆ. ಇದರ ಪರಿಣಾಮವಾಗಿ ಅಂತರಂಗದ ಬದುಕೂ ವಿಕೃತವೂ ಅಪೂರ್ಣವೂ ಆಗಿ ಬದಲಾಗಿದೆ. ದಕ್ಷಿಣ ಆಫ್ರಿಕಾದ ಸಾಹಿತ್ಯವು ದಾಸ್ಯದಲ್ಲಿರುವವರ ಸಾಹಿತ್ಯ. ಅದು ಸಂಪೂರ್ಣವಾದ ಮಾನುಷಬರೆಹವೇ ಅಲ್ಲ. ಅದು ಸೆರೆಮನೆಯಲ್ಲಿರುವವರಿಂದ ನಿರೀಕ್ಷಿಸಬಹುದಾದ ಬರವಣಿಗೆ.ʼʼ ಆ ದೇಶಕ್ಕೆ ಜನಾಂಗಭೇದ ನೀತಿಯಿಂದ ಬಿಡುಗಡೆ ಸಿಕ್ಕ ನಂತರದ ಪರಿಸ್ಥಿತಿಯನ್ನೂ ಅವರು ವಸ್ತುನಿಷ್ಠವಾಗಿಯೇ ನೋಡಿದರು. ಇಷ್ಟಾಗಿಯೂ ಯಾವುದೇ ನಿರ್ದಿಷ್ಟ ರಾಜಕೀಯ ಸಿದ್ಧಾಂತಗಳ ಕಟ್ಟುಪಾಡುಗಳನ್ನೂ ಅವರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಅವರು ತನ್ನ ದೇಶವನ್ನು ತೊರೆದು ಆಸ್ಟ್ರೇಲಿಯಾದ ನಾಗರಿಕರಾಗಿ ಅಡಿಲೇಡ್ ನಗರದಲ್ಲಿ ನೆಲೆಸಿದ್ದಾರೆ.(2002) ಅವರ ಸ್ವಭಾವದಲ್ಲಿ ಏಕಾಂತಪ್ರಿಯತೆಯೂ ಇದೆ. ಎರಡು ಬಾರಿ ಬುಕರ್ ಪ್ರಶಸ್ತಿ ಬಂದಾಗಲೂ ಪ್ರಶಸ್ತಿ ನೀಡುವ ಸಮಾರಂಭಕ್ಕೆ ಹೋಗಲಿಲ್ಲ. ಈ ಬಗೆಯ ಒಳಸರಿತ ಮತ್ತು ಹೊರಸರಿತಗಳ ಪರಿಣಾಮವಾಗಿ ಅವರು ಬದುಕನ್ನು ಅದರ ಹಲವು ಆಯಾಮಗಳ ಒಟ್ಟಂದದಲ್ಲಿ ನೋಡಲು ಸಾಧ್ಯವಾಗಿದೆ.

ತಾನು ಹೇಳಬೇಕಾದುದಕ್ಕೂ ಅದನ್ನು ಹೇಳುವ ಬಗೆಗೂ ಇರುವ ಅವಿನಾ ಸಂಬಂಧವನ್ನು ಕಟ್‌ಸೇ ಚೆನ್ನಾಗಿ ಬಲ್ಲರು. ಆದ್ದರಿಂದಲೇ ಅವರ ಬರವಣಿಗೆಯ ರೀತಿಯು ಸತತವಾಗಿ ಬದಲಾಗಿದೆ. ಅವರ ಕಾದಂಬರಿಗಳನ್ನು ಒಟ್ಟಾಗಿ ಓದಿದಾಗ ಈ ವಿಷಯವು ಮನದಟ್ಟಾಗುತ್ತದೆ. ʼಡಸ್ಕ್‌ಲ್ಯಾಂಡ್ಸ್ʼನಿಂದ ʼದ ಪೋಲ್ʼವರೆಗೆ ಈ ರೀತಿಯ ಹಲವು ತಿರುಗುಬಿಂದುಗಳಿವೆ.

Advertisements

ಇದನ್ನು ಓದಿದ್ದೀರಾ?: ನೆನಪು | ಲಂಕೇಶ್ ಎಂಬ ಕನ್ನಡದ ಅಪ್ರತಿಮ ಸೃಷ್ಟಿಕರ್ತ

ಮನುಷ್ಯ, ಸಮಾಜ, ಜೀವನ, ಕಾಲ ಮತ್ತು ಸಂಬಂಧಗಳು ಎಂಬ ಸಂಕೀರ್ಣವೂ ಶಾಶ್ವತ-ಜಂಗಮವೂ ಆದ ಸಂಗತಿಗಳನ್ನು ಒಟ್ಟಾಗಿ ಗ್ರಹಿಸುವುದು ಮತ್ತು ಬರವಣಿಗೆಯೆಂಬ ಕಲೆಯ ಇಂದ್ರಜಾಲದಲ್ಲಿ ಮತ್ತೆ ಕಟ್ಟುವುದು ದೊಡ್ಡ ಸವಾಲು. ಅದನ್ನು ಮಾಡಹೊರಟವರಿಗೆ ಅಲ್ಪತೃಪ್ತಿಯೇ ಆತ್ಮವಿಶ್ವಾಸವೇ ಶತ್ರುಗಳು. ಈ ಸಂಗತಿಗಳು ಬಗೆದಷ್ಟೂ ಬಿಟ್ಟುಕೊಡುವ ಗಣಿಗಳು. ತನ್ನ ಹಿನ್ನೆಲೆ, ವಿಚಾರ, ಪಕ್ಷಪಾತ, ಸ್ವಾನುಭವ ಎಲ್ಲವನ್ನೂ ಒಳಗೊಂಡಿರುವಾಗಲೂ ಬಿಟ್ಟುಕೊಟ್ಟು, ಒಳಮನಸ್ಸಿನ ಪವಾಡಗಳಿಗೆ ತನ್ನನ್ನು ತೆತ್ತುಕೊಂಡಾಗ ತಾವಾಗಿಯೇ ಕಾಣಿಸಿಕೊಳ್ಳುವ, ಕಟ್ಟಿಕೊಳ್ಳುವ ಕವಿತೆ, ಕಥೆ, ಕಾದಂಬರಿಗಳು ಓದುಗನನ್ನು ಆವರಿಸುತ್ತವೆ, ದಣಿಸುತ್ತವೆ, ಬೆಳಗಿಸುತ್ತವೆ. ಕಟ್ಟೇಕಾಂತ ಮತ್ತು ಕಟ್ಟೆಚ್ಚರದಲ್ಲಿ ನಡೆಯುವ ಅಂತಹ ಕೆಲಸದಲ್ಲಿ ಸಹಜವಾಗಿಯೇ ವಿರೋಧಗಳ ಸಮತೋಲನವಾಗುತ್ತದೆ, ದಿಟದ ದರ್ಶನವಾಗುತ್ತದೆ. ಮನುಷ್ಯನ ನಿಗೂಢಗಳನ್ನು ʼಬಟಾಬಯಲುʼ ಮಾಡುವುದು ಸುಲಭದ ಕೆಲಸವಲ್ಲ. ಅದು ʼಖಂಡ, ಮಾಂಸ, ಗುಂಡಿಗೆಯ ಬಿಸಿರಕ್ತʼಗಳನ್ನು ಒಳಗೊಂಡು ಅದರಾಚೆಗಿನದನ್ನೂ ಕಾಣಿಸುವ ಪವಾಡ. ಕಟ್‌ಸೇ ಅವರು ತಮ್ಮ ಕಾದಂಬರಿಗಳಲ್ಲಿ ಇದನ್ನು ಸಾಧಿಸಿರುವರೆಂದು ನಾನು ನಂಬಿದ್ದೇನೆ. ಅವರು ಸರಳವಾದ ಉತ್ತರಗಳನ್ನು ಸೂಚಿಸುವ ಹಾದಿ ಹಿಡಿಯುವುದಿಲ್ಲ, ತಾನು ಹೇಳಿದ್ದು ಮಾತ್ರ ದಿಟವೆನ್ನುವ ಹಟಗಾರನೂ ಅಲ್ಲ. ಬರವಣಿಗೆಯು ಸುಲಿದ ಬಾಳೆಯಹಣ್ಣಿನಂತೆ ಸರಳವಾಗಿ ಇರಬೇಕೆಂದು ನಂಬಿದವರಲ್ಲ. ಆ ಕಾದಂಬರಿಗಳನ್ನು ಒಗ್ಗಿಸಿಕೊಳ್ಳುವ, ಒಲಿಸಿಕೊಳ್ಳುವ ಕೆಲಸವನ್ನು ಓದುಗರು ಮಾಡಿಕೊಳ್ಳಬೇಕು.

ಕಟ್‌ಸೇ ಬಹಳ ಸಂಕೀರ್ಣವಾದ ದೇಶ, ಕಾಲ, ಸಂದರ್ಭಗಳಿಗೆ ಸೇರಿದವರು. ಅವರು ವರ್ಣಭೇದ ರೀತಿಯ ತವರುಮನೆಯಾದ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಬೆಳೆದವರು. ಅವರು ಆ ಖಂಡದ ಮೂಲನಿವಾಸಿಗಳಾದ ಕಪ್ಪು ಜನಾಂಗದವರೂ ಅಲ್ಲ, ಅವರನ್ನು ಆಳಿದ ಬ್ರಿಟಿಷ್ ಹಿನ್ನೆಲೆಯ ಬಿಳಿಯರೂ ಅಲ್ಲ. ಅವರು ಹಾಲೆಂಡಿನಿಂದ ಬಂದ ʼಬೋಯೆರ್ʼ ಎಂದು ಕರೆಸಿಕೊಳ್ಳುವ ಸಮುದಾಯಕ್ಕೆ ಸೇರಿದವರು. ಇಂಗ್ಲಿಷ್ ಕಲಿತು ಅದರಲ್ಲಿಯೇ ಬರೆದರೂ ಅವರ ಮನೆಮಾತು ಆಫ್ರಿಕಾನ್ಸ್ ಭಾಷೆ. ಅದನ್ನು ದಕ್ಷಿಣ ಆಫ್ರಿಕಾದ ಕೆಲವು ಭಾಗ, ನಮೀಬಿಯಾ, ಜಿಂಬಾಬ್ವೆ ಮುಂತಾದ ಕಡೆ ಮಾತನಾಡುತ್ತಾರೆ. ಈ ಸಮುದಾಯವು ಬ್ರಿಟಿಷ್ ವಸಾಹತುಶಾಹಿಗಳಿಂದ ತಪ್ಪಿಸಿಕೊಂಡು ಇನ್ನೊಂದು ಕಡೆ ವಲಸೆ ಹೋದವರು. ಕಪ್ಪುಜನರೂ ಇವರನ್ನು ತಮ್ಮವರೆಂದು ಸ್ವೀಕರಿಸಲಿಲ್ಲ. ಇದು ತ್ರಿಶಂಕುಸ್ಥಿತಿ. ಬೋಯೆರ್ ಸಮುದಾಯದ ಜೀವನಶೈಲಿ ಮತ್ತು ಸಂಸ್ಕೃತಿಗಳು ಕಟ್‌ಸೇ ಅವರಿಗೆ ಸುಪರಿಚಿತ. ʼಬೋಯೆರ್ʼ ಎಂದರೆ ʼಕೃಷಿಕʼ ಎಂದು ಅರ್ಥ. ಅವರು ಕುರಿಗಾಹಿಗಳೂ ಹೌದು. ಒಂದು ಕಾಲದಿಂದ ಇವರದು ʼಪಿತೃಪ್ರಧಾನʼವಾದ, ಗಂಡಾಳಿಕೆಯೇ ಮೂಲನೆಲೆಯಾದ ಜೀವನಕ್ರಮ. ಹೆಣ್ಣು ಭೋಗವಸ್ತು ಮತ್ತು ಮಕ್ಕಳನ್ನು ಸಾಕುವ ʼಆಸ್ತಿʼ. ಅಷ್ಟೇ. ಇಂಥ ಸನ್ನಿವೇಶದಲ್ಲಿ ಹೆಣ್ಣುಮಕ್ಕಳು ನಾಗರಿಕತೆ, ಸಂಸ್ಕೃತಿ, ಕಲೆ, ವಿದ್ಯಾಭ್ಯಾಸ ಮುಂತಾದ ಸಂಗತಿಗಳಿಂದ ವಂಚಿತರು. ಅಷ್ಟೇಕೆ, ಅವರಿಗೆ ಭಾಷೆಯೂ ಕೇವಲ ಪ್ರಾಥಮಿಕ ಹಂತದ್ದು.

file 20240124 27 p6w3fe

ʼಕಲ್ಲುನೆಲದ ಹಾಡುಪಾಡುʼ ಕಾದಂಬರಿಯು (ʼIn the Heart of the Countryʼ-1977) ಇಂತಹ ಸಮುದಾಯದಲ್ಲಿಯೂ ಒಂಟಿಯಾಗಿರುವ ಕುಟುಂಬದ ಕಥೆ. ಆ ಕುಟುಂಬದಲ್ಲಿ ಇರುವವರು ತಂದೆ ಮತ್ತು ಮಗಳು ಮಾತ್ರ. ಹರೆಯ ಕಳೆದ ಮಗಳು ಅವಿವಾಹಿತೆ. ಹೆಂಡತಿಯೂ ಅಲ್ಲ, ತಾಯಿಯೂ ಅಲ್ಲ. ತಂದೆ ಮಗಳ ನಡುವೆ ಇರುವ ಒಣಕಲಾದ, ಪ್ರೀತಿರಹಿತವಾದ, ಹಲವು ಆಯಾಮಗಳ ಸಂಬಂಧದ ಎಳೆಗಳನ್ನು ಗ್ರಹಿಸುವುದು ಬಹಳ ಕಷ್ಟ. ಇಡೀ ಕಾದಂಬರಿಯ ನಿರೂಪಕಿ ಮಗಳು ಮ್ಯಾಗ್ಡಾ. ಆ ತಂದೆಗೆ ಸರಿಯಾದ ಹೆಸರೂ ಇಲ್ಲ. ಮಗಳು ನಿರೂಪಿಸುವ ಘಟನೆಗಳು ಬಹಿರಂಗದ ವಾಸ್ತವ ಮತ್ತು ಅಂತರಂಗದ ಕಲ್ಪನೆ-ಹಳವಂಡಗಳ ಸಂಯೋಜನೆ. ಅವುಗಳಲ್ಲಿ ಯಾವುದು ಯಾವುದೆಂದು ಕೊನೆಗೂ ತಿಳಿಯುವುದಿಲ್ಲ. ಈಗ ಹೇಳಿದ್ದನ್ನು ಮರುಕ್ಷಣವೇ ನಿರಾಕರಿಸುತ್ತಾಳೆ, ಬೇರೆ ಏನನ್ನೋ ಹೇಳುತ್ತಾಳೆ. ತಂದೆಯನ್ನು ಎರಡೆರಡು ಸಲ ಬೇರೆ ಬೇರೆ ಬಗೆಯಲ್ಲಿ ಕೊಂದೆನೆಂದು ಹೇಳುತ್ತಾಳೆ. ಕಾದಂಬರಿಯ ಕೊನೆಯಲ್ಲಿ, ಅವನ ಸಂಗಡ ಕುಳಿತು ಮಾತನಾಡುತ್ತಿದ್ದೇನೆ ಎನ್ನುತ್ತಾಳೆ. ಓದುಗರಿಗೆ ಯಾವುದು ನಿಜ ಯಾವುದು ಸಟೆ ಎಂದು ತಿಳಿಯದೆ ಅಯೋಮಯವಾಗುತ್ತದೆ. ವಾಸ್ತವ, ಭ್ರಮೆ ಮತ್ತು ಫ್ಯಾಂಟಸಿಗಳ ನಡುವಿನ ಗೆರೆಗಳು ಅಳಿಸಿಹೋಗುವಂತೆ ತನ್ನದೇ ಕಥೆ ಹೇಳುವ ಈ ನಿರೂಪಕಿಯ ಮನಸ್ಸು ಕೂಡಾ ಹಾಗೆಯೇ ಛಿದ್ರಛಿದ್ರವಾಗಿ ಹೋಗಿದೆ. ಈ ನಿರೂಪಣೆ ಮತ್ತು ಈ ನಿರೂಪಕಿಯರು ಒಂದು ಇನ್ನೊಂದಕ್ಕೆ ಹಿಡಿದ ಕನ್ನಡಿ. ಒಂದಿಷ್ಟು ವಿಸ್ತರಿಸಿ ನೋಡಿದರೆ, ಅಕ್ಷರ, ಸಂಸ್ಕೃತಿ, ವಿದ್ಯಾಭ್ಯಾಸ ಮುಂತಾದ ಸಂಗತಿಗಳಿಂದ ದೂರ ಇಡಲಾಗಿದ್ದ ನಮ್ಮದೇ ನಾಡಿನ ಹೆಣ್ಣುಮಕ್ಕಳ, ಅಂತಹುದೇ ಸಮುದಾಯಗಳ ʼಹಾಡು-ಪಾಡುʼಗಳ ಉತ್ಪ್ರೇಕ್ಷಿತ ರೂಪಕವಾಗಿ ಇದನ್ನು ಗುರುತಿಸಬಹುದು. ಕಳೆದ ಕಾಲದ ಸಾಹಿತಿಗಳ ಮತ್ತು ಅವರ ಪತ್ನಿಯರ ಮನೋಲೋಕಗಳ ನಡುವೆ ಇದ್ದ ಅಂತರವನ್ನು ಕುರಿತು ನಾನು ಮತ್ತೆ ಮತ್ತೆ ಯೋಚಿಸಿದ್ದೇನೆ. ಇಂತಹ ದಮನದ ಆಚೆಗೂ ಅವರು ತಮ್ಮದೇ ಆದ ಕಲಾಲೋಕವನ್ನು ಕಂಡುಕೊಳ್ಳಲು ಪ್ರಯತ್ನಿಸಿದರೆನ್ನುವುದೂ ನಿಜವೇ. ಇಲ್ಲಿನ ಮ್ಯಾಗ್ಡಾ ಕೂಡ ಅಂತಹುದೇ ತಡಕಾಟಗಳಲ್ಲಿ ತೊಡಗಿಕೊಂಡಿದ್ದಾಳೆ. ಅವಳು ಭಾಷೆಯನ್ನೂ ಮುರಿಯುತ್ತಾ ಮತ್ತೆ ಕಟ್ಟುತ್ತಾ, ಅದರೊಳಗೆ ತನ್ನೊಡಲು, ತನ್ನಳಲುಗಳನ್ನು ಹೇಳಲು ಪ್ರಯತ್ನಿಸುವ ಅವಳ ಸೋಲೂ ಗೆಲುವೇ ಆಗಿರುತ್ತದೆ. ಯಾಕೆಂದರೆ ಇಂಥದು ಮೂಕನಿಗೆ ಬಾಯಿ ಬರುವ ಮಾತು. ಈ ಕಾದಂಬರಿ ಓದುವಾಗ ನಾವು ಯಾವಾಗಲೂ ಅಚ್ಚರಿಗಳಿಗೆ, ಪ್ರಶ್ನೆಗಳಿಗೆ, ಒಗಟುಗಳಿಗೆ, ʼತಲೆಬಿಸಿʼ-ʼತಲೆಕೆಡುʼಗಳಿಗೆ ಸಿದ್ಧವಾಗಿರಬೇಕು. ಆದರೆ ಅವೆಲ್ಲವೂ ಕಲೆಯಾಗಿ ಅರಳುವ ಬಗೆ ಅದ್ಭುತವಾಗಿದೆ.

ಈ ಪುಸ್ತಕದ ಹೆಸರಿನಲ್ಲಿಯೇ ಬರುವ ʼಕಂಟ್ರಿʼ ಕಗ್ಗತ್ತಲ ಖಂಡ. ಅದು ಆಫ್ರಿಕಾ ಮತ್ತು ಅಜ್ಞಾತವಾಗಿಯೇ, ತಿರಸ್ಕೃತವಾಗಿಯೇ ಉಳಿದಿರುವ ʼಹೆಣ್ಣಿನʼ ಕಥನವೂ ಹೌದು. ಆ ದೇಶ ಮತ್ತು ʼಹೆಣ್ಣುʼ ಇಬ್ಬರಿಗೂ ಮನುಷ್ಯನ ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ಜಾಗವೇ ಇರಲಿಲ್ಲ. ಇದ್ದರೂ ಅದು ಅವರನ್ನು ಶೋಷಣೆ ಮಾಡುವವರೇ ಕಟ್ಟಿದ ʼಹುಸಿ ಕಥನʼವಾಗಿತ್ತು. ಈ ಬಗೆಯ ಚಿಂತನೆ ಯೂರೋ-ಕೇಂದ್ರಿತ ಮತ್ತು ಪುರುಷಕೇಂದ್ರಿತ. ಇದನ್ನು ಈ ಕಾದಂಬರಿಯ ಕೇಂದ್ರವಾದ ಮ್ಯಾಗ್ಡಾ ʼಗೈರುಹಾಜರಿʼ ಎಂದು ಕರೆಯುತ್ತಾಳೆ. ತಾನು ಕೇವಲ ಒಂದು ರಂಧ್ರ(ಹೋಲ್) ಎನ್ನುತ್ತಾಳೆ. ತನ್ನ ಇಡೀ ದೇಹ, ಇಡೀ ಅಸ್ತಿತ್ವವೇ ಆ ರಂಧ್ರದ ಸುತ್ತಲೂ ʼನಿರ್ಮಿತʼವಾಗಿದೆಯೆಂದು ಹಲುಬುತ್ತಾಳೆ. ಈ ಸ್ವ-ಪ್ರಜ್ಞೆ ಕೂಡಾ ಅರಣ್ಯರೋದನವಾಗಿಯೇ ಮುಕ್ತಾಯವಾಗುತ್ತದೆ. ಅವಳದು ಕೇಳುವವರಿಲ್ಲದ ಕಥೆ. ಅವಳ ವ್ಯಕ್ತಿತ್ವದಲ್ಲೇ ಹೆಣ್ಣನ್ನು ಗಂಡಿನ ದೃಷ್ಟಿಕೋನದಿಂದಲೇ ನೋಡುವ ಆಯಾಮವೂ ಇದೆ. ಆ ʼದತ್ತವಾದʼ ದೃಷ್ಟಿಕೋನವನ್ನು ದಾಟಿ, ಹೆಣ್ಣಿನ ಅಸಲು ನೆಲೆಯಿಂದ ನೋಡುವ ಆಯಾಮವೂ ಇದೆ. ಅವಳನ್ನು ಛಿದ್ರಗೊಳಿಸುವ ದುರಂತಕ್ಕೆ ಈ ದ್ವಂದ್ವವೇ ಕಾರಣ. ಬದುಕಿನ ಬಗೆ, ಪ್ರಕೃತಿಯ ಬಗ್ಗೆ, ಭಾಷೆಯ ಬಗ್ಗೆ ಗಂಭೀರವಾದ ತಾತ್ವಿಕಚಿಂತನೆ ನಡೆಸುತ್ತಲೇ ʼನಾನು ಹೆಣ್ಣು, ಫಿಲಾಸಫಿ ನನಗೇನು ಗೊತ್ತು?ʼ ಎಂದು ಘೋಷಿಸುತ್ತಾಳೆ. ಅವಳ ಮಾತುಗಳನ್ನು ಯಾರೂ ಯಾರೂ ಕೇಳಿಸಿಕೊಳ್ಳುವುದಿಲ್ಲ. ಇಡೀ ಕಾದಂಬರಿ ಅವಳ ಸ್ವಗತ. ಅದು ನಿರ್ವಾತದಲ್ಲಿ ಸೇರಿಹೋಗುವ ʼಕೊನೆಯಿರದ ನಿಟ್ಟುಸಿರುʼ. ಅಂತಹ ಅಳಲಿಗೆ ಧ್ವನಿ ಕೊಡುವುದರಿಂದಲೇ ಈ ಕಾದಂಬರಿ ವಿಶಿಷ್ಟವಾಗುತ್ತದೆ. ಹೆಣ್ಣಿನಂತೆಯೇ ಗುಲಾಮರಾಗಿ ಬದುಕುವ ಹೆಂಡ್ರಿಕ್, ಕ್ಲೈನ್ ಆನಾ, ಬಿಗ್ ಆನಾ, ಜೇಕಬ್ ಮುಂತಾದ ಪಾತ್ರಗಳು ಮತ್ತೊಂದು ಬಗೆಯ ವರ್ಗಾಧರಿತ ಗುಲಾಮಗಿರಿಗೆ ಸಾಕ್ಷಿಯಾಗುತ್ತಾರೆ. ಅವರೆಲ್ಲರೂ ಮ್ಯಾಗ್ಡಾಳ ಸೃಜನಕಲ್ಪನೆಯಲ್ಲಿ ಜೀವಂತರಾಗುತ್ತಾರೆ.

ಈ ಕಾದಂಬರಿ ಪ್ರಕಟವಾದಾಗ, ದಕ್ಷಿಣ ಆಫ್ರಿಕಾದಲ್ಲಿ ʼಜನಾಂಗಭೇದ ನೀತಿʼ ತೀವ್ರವಾಗಿಯೇ ಇತ್ತು. ಅದರ ವಿರುದ್ಧ ನಡೆಯುತ್ತಿದ್ದ ಹೋರಾಟವೂ ಅಷ್ಟೇ ತೀವ್ರವಾಗಿತ್ತು. ನೆಲ್ಸನ್ ಮಂಡೇಲ ಅವರು ಇನ್ನೂ ಸೆರೆಮನೆಯಲ್ಲೇ ಇದ್ದರು. ಬೊಯೆರ್ ಜನಾಂಗದವರು ಒಂದೇ ಕಾಲದಲ್ಲಿ ಶೋಷಕರೂ ಶೋಷಿತರೂ ಆಗಿದ್ದರು. ಕಟ್‌ಸೇ ಇವೆಲ್ಲವನ್ನೂ ಸೃಜನಶೀಲ ಸಮತೋಲನದಿಂದ ನೋಡುವ ಸಾಮರ್ಥ್ಯ ಪಡೆದಿದ್ದರು. ಈ ಕಾದಂಬರಿಯಲ್ಲಿ ಈ ಎಲ್ಲ ಹಿನ್ನೆಲೆಗಳಿಂದ ಬಂದ, ಎಲ್ಲ ವರ್ಗಗಳನ್ನು ಪ್ರತಿನಿಧಿಸುವ ಪಾತ್ರಗಳು ಬಂದು ಹೋಗುತ್ತಾರೆ. ಈ ಪಾತ್ರಗಳನ್ನು ಪ್ರಾತಿನಿಧಿಕವಾಗಿ ಮತ್ತು ಸಾಮಾನ್ಯ ಮನುಷ್ಯರಾಗಿ ಚಿತ್ರಿಸಿರುವುದು ಈ ಲೇಖಕರ ಹೆಚ್ಚುಗಾರಿಕೆ. ಕನ್ನಡದ ಕಥಾಸಾಹಿತ್ಯವು ಎದುರಿಸುತ್ತಿರುವ ಇಂಥ ಬಿಕ್ಕಟ್ಟುಗಳಿಂದ ಬಿಡಿಸಿಕೊಳ್ಳಲು ಈ ಬಗೆಯ ಬರೆಹಗಳು ನೆರವು ನೀಡುತ್ತವೆಂದು ನನ್ನ ನಂಬಿಕೆ.

ಇದನ್ನು ಓದಿದ್ದೀರಾ?: ಕ್ರೋಧಕ್ಕಿಂತ ಕ್ಷಮೆ ದೊಡ್ಡದು, ಪ್ರೀತಿ ದೊಡ್ಡದು: ಝೆನ್‌ ಜಾಡಿನತ್ತ ಜೊಕೊವಿಕ್‌

ಈ ಕಾದಂಬರಿಯನ್ನು ʼಓದುವುದುʼ ನನ್ನ ಮಟ್ಟಿಗಂತೂ ಅನನ್ಯವಾದ ಅನುಭವವಾಗಿತ್ತು. ಇದರಲ್ಲಿ ʼನಡೆದ ವಾಸ್ತವʼ ಮತ್ತು ʼಕಲ್ಪಿತ ವಾಸ್ತವʼಗಳ ನಡುವಿನ ಗೆರೆ ಅಳಿಸಿಹೋಗುತ್ತದೆ. ಒಂದು ಸನ್ನಿವೇಶವು ಮುಂದುವರಿಯಬಹುದಾದ ಬೇರೆ ಬೇರೆ ಬಗೆಗಳನ್ನು ಊಹಿಸಿಕೊಂಡು ಅವೆಲ್ಲವನ್ನೂ ʼಅವು ಹಾಗೆ ನಡೆದವುʼ ಎನ್ನುವಂತೆ ಒಂದರ ನಂತರ ಒಂದರಂತೆ ನಿರೂಪಿಸಿದಾಗ ಓದುಗರು ʼನಡೆದಿದ್ದು ಯಾವುದು?ʼ, ʼನಡೆಯದಿದ್ದುದು ಯಾವುದುʼ ಎಂಬ ಗೊಂದಲದಲ್ಲಿ ಬೀಳುತ್ತಾರೆ. ಮ್ಯಾಗ್ಡಾ ಕಟ್ಟಿಕೊಡುವ ಹಲವು ʼನಿಜʼಗಳಲ್ಲಿ ʼನಿಜವಾದ ನಿಜʼ ಎಂದು ಹುಡುಕುವ ಪ್ರಯತ್ನ ವ್ಯರ್ಥ. ಎಲ್ಲವೂ ಎಲ್ಲವೂ ನಿರೂಪಕಿಯ ʼಅಂತರಂಗʼದಲ್ಲಿ ನರ್ತಿಸುವ ಸಂಗತಿಗಳೆಂದು ಹೊಳೆದಾಗ, ಅವಳ ಆಶಾಚಿಂತನೆಯ ಪರಿಣಾಮಗಳೆಂದು ಹೊಳೆದಾಗ ಈ ಕಾದಂಬರಿ ತನ್ನ ಗುಟ್ಟುಗಳನ್ನು ಬಿಟ್ಟುಕೊಡುತ್ತದೆ. ಆದ್ದರಿಂದಲೇ ಇದು ಒಂದೇ ಕಾದಂಬರಿಯಲ್ಲಿ ಹಲವು ʼಕಾದಂಬರಿʼಗಳನ್ನು ಹೇಳುವ ಸಾಧನೆ. ಪ್ರತಿಯೊಂದು ಪಾತ್ರವೂ ʼಬಹುರೂಪಿʼಯಾಗಿ ಮೈದಳೆಯುತ್ತದೆ. ಇವೆಲ್ಲಕ್ಕೂ ಪ್ರಕೃತಿಯ, ಪಶು-ಪಕ್ಷಿ-ಕೀಟಗಳ ಚಿರಂತನ ಭಿತ್ತಿಯಿರುತ್ತದೆ. ನನ್ನ ಓದಿನಲ್ಲಿ ಇಂತಹ ಇನ್ನೊಂದು ಪುಸ್ತಕವನ್ನು ಭೇಟಿಯಾಗಿಲ್ಲ.

ಅರಿಕೆಯ ಈ ಮಾತುಗಳಲ್ಲಿ ಕಾದಂಬರಿಯ ಸುದೀರ್ಘ ವಿಮರ್ಶೆ ಮಾಡುವುದು ನನ್ನ ಉದ್ದೇಶವಲ್ಲ. ಅಂತಹ ಕೆಲಸ ಓದುವವರ ಮನಸ್ಸಿನಲ್ಲಿ ನಡೆಯುತ್ತದೆ. ಹಲವು ವರ್ಷಗಳಿಂದ ನನ್ನೊಂದಿಗೆ ಇರುವ ಈ ಪುಸ್ತಕದ ಬಗ್ಗೆ ನನ್ನ ಆಕರ್ಷಣೆಯನ್ನು ವಿವರಿಸುವ ಪ್ರಯತ್ನ ಇಲ್ಲಿದೆ.

(ಕೃತಿ ಲೋಕಾರ್ಪಣೆ: ಭಾನುವಾರ, 26.01.2025ರ ಬೆಳಗ್ಗೆ 10.30ಕ್ಕೆ. ‘ಗೋವಿಂದ್’, 518, 46ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041, (ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಪಕ್ಕ, ಮೆಟ್ರೋ ಪಿಲ್ಲರ್ 34-35ಗಳ ಎದುರು) ಸಂಪರ್ಕ: 8073321430)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X