ಶಿಕ್ಷಣ ಕ್ರಾಂತಿಯ ಹರಿಕಾರ, ಕರ್ಮಭೂಮಿಯ ಕಾಯಕಯೋಗಿ ʼಕಾಕಾʼ ಕಾರಖಾನೀಸ

Date:

ಖಾದಿ ಧರಿಸಿ, ಜೋಳಿಗೆ ಹೊತ್ತು, ಬಡಿಗೆ ಹಿಡಿದು ಗಡಸು ನಡಿಗೆಯಿಂದ ವಿಜಯಪುರದ ಬೀದಿಗಳಲ್ಲಿ ಸಂಚರಿಸುತ್ತಿದ್ದ ಕಾಕಾ ಅವರ ಪ್ರತಿ ಹೆಜ್ಜೆಯೂ ಶೋಷಿತರ ಪಾಲಿಗೆ ಆಶಾಕಿರಣವಾಗಿತ್ತು. ನೂರು ವರ್ಷಗಳ ಸುದೀರ್ಘ ಬದುಕು, ‘ಪದ್ಮಶ್ರೀ’ಯಂತಹ ಉನ್ನತ ಮನ್ನಣೆ, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಜನಸಾಮಾನ್ಯರ ಮನದಲ್ಲಿ ಅವರು ಉಳಿಸಿಹೋದ ‘ಕಾಕಾ’ ಎಂಬ ಪ್ರೀತಿಯ ಅಂಕಿತ.. ಇವೆಲ್ಲವೂ ಅವರ ಬದುಕಿನ ಸಾರ್ಥಕತೆಗೆ ಸಾಕ್ಷಿ.

- Advertisement -

ವಿಜಯಪುರ ಎಂದೊಡನೆ ಕಣ್ಣಮುಂದೆ ಮೊದಲು ಸುಳಿಯುವುದು ವಿಶ್ವವಿಖ್ಯಾತ ಗೋಲಗುಮ್ಮಟ. ಬಾನಂಚಿನಲ್ಲಿ ಮಿನುಗುತ್ತಾ, ಹತ್ತಿರ ಬಂದಂತೆ ತನ್ನ ಬೃಹತ್ ಗಾತ್ರದಿಂದ ಮೈಮರೆಸುವ ಆ ಅದ್ಭುತ ವಾಸ್ತುಶಿಲ್ಪವು ಪ್ರತಿಯೊಬ್ಬರನ್ನೂ ಕ್ಷಣಕಾಲ ಮೂಕವಿಸ್ಮಿತರನ್ನಾಗಿಸುತ್ತದೆ. ಆ ಭವ್ಯ ಕಟ್ಟಡದ ಆಕಾರ, ರಚನಾಕೌಶಲ ಮತ್ತು ಅದನ್ನು ನಿರ್ಮಿಸಿದ ಶಿಲ್ಪಿಗಳ ಕುಶಲತೆ ಚಿಂತನೆಗೆ ಹಚ್ಚುತ್ತದೆ. ಕಲ್ಲು-ಕಟ್ಟಡಗಳಿಗೆ ಮಾತ್ರ ಸೀಮಿತವಾಗಿಲ್ಲ ವಿಜಯಪುರದ ಹೆಮ್ಮೆ, ಇದೇ ನೆಲದಲ್ಲಿ ಜನಿಸಿದ, ಅಷ್ಟೇ ಅದ್ಭುತ ವ್ಯಕ್ತಿತ್ವ ಪದ್ಮಶ್ರೀ ಕಾಕಾ ಕಾರಖಾನೀಸರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅವರ ಪೂರ್ತಿ ಹೆಸರು ಗಣೇಶ ಗೋವಿಂದ ಕಾರಖಾನೀಸ. ಭಾರತದಲ್ಲಿ ಬ್ರಿಟಿಷರ ಪ್ರಭುತ್ವ ಗಟ್ಟಿಯಾಗಿ ಬೇರೂರಿದ್ದ ಕಾಲಘಟ್ಟದಲ್ಲಿ, ಅಂದರೆ 1890ರ ಏಪ್ರಿಲ್ 20 ರಂದು ಇಂದಿನ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಮಲಿಕಾಪುರದಲ್ಲಿ ಅವರು ಜನಿಸಿದರು. ಮಲಿಕಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನಂತರ, ಮಾಧ್ಯಮಿಕ ಶಿಕ್ಷಣಕ್ಕಾಗಿ ಅವರು ಜಮಖಂಡಿಗೆ ತೆರಳಿದರು. ನಂತರ, ಪುಣೆಯ ಪ್ರತಿಷ್ಠಿತ ಡೆಕ್ಕನ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿ, 1917ರಲ್ಲಿ ಬಿ.ಎ. ಪದವಿ ಪಡೆದರು.

ಅದು 1927ರ ಅವಧಿ. 3 ವರ್ಷಗಳ ಕಾಲ (1929) ಮಹಾತ್ಮ ಗಾಂಧಿ ಅವರ ಸಾಬರಮತಿ ಆಶ್ರಮದಲ್ಲಿ ಖಾದಿ ಕುರಿತು ತರಬೇತಿಗೆ ತೆರಳಿದಾಗ, ಗಾಂಧೀಜಿ ಅವರ ಸಂಪರ್ಕ ಬೆಳೆಯುತ್ತದೆ. ನಂತರ ನಡೆದದ್ದು ಇತಿಹಾಸ. ಕರ್ನಾಟಕದಲ್ಲಿ ಗಾಂಧಿ ಅವರ ಪ್ರೇರಣೆಯಿಂದ ಆರಂಭವಾದ ಖಾದಿ ಕೇಂದ್ರಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾರೆ. ಕರ್ನಾಟಕ ಅಸ್ಪೃಶ್ಯತಾ ನಿವಾರಣಾ ಸಮಿತಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಅಂಕೋಲಾ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ನಾಲ್ಕು ತಿಂಗಳು ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ.

kaka kharakhanis

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಹಾದಿಯನ್ನು ತುಳಿದ ಕಾಕಾರ ಬದುಕು ಸುಗಮವಾಗಿರಲಿಲ್ಲ. ಬ್ರಿಟಿಷ್ ಸರ್ಕಾರ ಅವರನ್ನು ಹಲವು ಬಾರಿ ಕಟ್ಟಿಹಾಕಲು ಪ್ರಯತ್ನಿಸಿತು. ಪೆರೋಲ್ ಮೇಲೆ ಹೊರಗಿದ್ದ ಸಂದರ್ಭದಲ್ಲಿ, ದೆಹಲಿಯಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದಕ್ಕಾಗಿ, ಅವರು ‘ಪೆರೋಲ್ ನಿಯಮ ಉಲ್ಲಂಘಿಸಿದ್ದಾರೆ’ ಎಂಬ ನೆಪವೊಡ್ಡಿ ಬ್ರಿಟಿಷರು ಮತ್ತೆ ಅವರನ್ನು ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಪಡಿಸಿದರು. ಆದರೆ ಜೈಲಿನ ನಾಲ್ಕು ಗೋಡೆಗಳು ಅವರ ಸಮಾಜ ಸೇವೆಯ ಕನಸನ್ನು ಕಮರಲು ಬಿಡಲಿಲ್ಲ. ಜೈಲುವಾಸ ಮುಗಿಸಿ ಹೊರಬಂದ ನಂತರ, ಅವರು ತಮ್ಮ ಸಂಪೂರ್ಣ ಶಕ್ತಿಯನ್ನು ವಿಜಯಪುರದ(ವಿಜಾಪುರ) ಜನತೆಯ ಉದ್ಧಾರಕ್ಕಾಗಿ ಮುಡಿಪಾಗಿಟ್ಟರು. ಗಾಂಧೀಜಿಯವರ ಅಚ್ಚುಮೆಚ್ಚಿನ ಕನಸಾದ ‘ಹರಿಜನೋದ್ಧಾರ‘ವೇ ಅವರ ಮುಂದಿನ ಗುರಿಯಾಯಿತು. ಸಮಾಜದ ಕಟ್ಟಕಡೆಯ ಮನುಷ್ಯನ ಬಾಳು ಹಸನಾಗಬೇಕೆಂದು ಹಂಬಲಿಸಿದ ಅವರು, ‘ಹರಿಜನ ಸೇವಕ ಸಂಘ‘ದ ಮೂಲಕ ವಿಜಯಪುರದಲ್ಲಿ ಹರಿಜನ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದರು. ಆರ್ಥಿಕವಾಗಿ ಹಿಂದುಳಿದ, ಶೋಷಿತ ಸಮುದಾಯದ ಸಾವಿರಾರು ಬಡ ಮಕ್ಕಳಿಗೆ ಅಲ್ಲಿ ಆಶ್ರಯ ಸಿಕ್ಕಿತು. ಉಚಿತ ಶಿಕ್ಷಣ ಮತ್ತು ಸಂಸ್ಕಾರಗಳನ್ನು ನೀಡುವ ಮೂಲಕ, ಆ ಮಕ್ಕಳ ಬದುಕಿನಲ್ಲಿ ಹೊಸ ಭರವಸೆಯ ಬೆಳಕನ್ನು ಮೂಡಿಸಿದರು. ತಮ್ಮ ಜೀವನದುದ್ದಕ್ಕೂ ಅವರು ಮಾಡಿದ ಈ ನಿಸ್ವಾರ್ಥ ಸೇವೆ, ಅವರನ್ನು ವಿಜಯಪುರದ ಜನರ ಪಾಲಿನ ಅಕ್ಷರಶಃ ‘ಕಾಕಾ’ (ಅಪ್ಪ/ದೊಡ್ಡಪ್ಪ) ಆಗಿ ನೆಲೆನಿಲ್ಲುವಂತೆ ಮಾಡಿತು.

ಕಾಕಾರ ದೃಷ್ಟಿ ಬಹಳ ದೂರಗಾಮಿಯಾಗಿತ್ತು. ಹಳ್ಳಿಗಳಿಂದ ನಗರಕ್ಕೆ ಬರುವ ಮಕ್ಕಳಿಗೆ ಶಿಕ್ಷಣ ಸಿಕ್ಕರೂ, ಅವರು ಉಳಿದುಕೊಳ್ಳಲು ಸೂಕ್ತವಾದ ವಸತಿ ಸಿಗದೇ ಶಿಕ್ಷಣ ಅರ್ಧಕ್ಕೆ ನಿಲ್ಲುವುದನ್ನು ಅವರು ಗಮನಿಸಿದರು. ಈ ಸಮಸ್ಯೆಗೆ ಪರಿಹಾರವಾಗಿ, ಶೋಷಿತ ಸಮುದಾಯದ ಮಕ್ಕಳಿಗಾಗಿ ಅವರು ‘ಹರಿಜನ ಕನ್ಯಾ ಮಂದಿರ’ ಹಾಗೂ ‘ಹರಿಜನ ವಿದ್ಯಾರ್ಥಿ ನಿಲಯ’ಗಳನ್ನು ಸ್ಥಾಪಿಸಿದರು.

kaka school

ವಿಜಯಪುರದ ನೂರಾರು ಹಳ್ಳಿಗಳಿಗೆ ಸ್ವತಃ ತಾವೇ ಅಲೆದು, ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಿಸಿದರು. ಎಲ್ಲಕ್ಕಿಂತ ಮಿಗಿಲಾಗಿ, ಅಂದಿನ ಕಾಲದ ಕರಾಳ ವಾಸ್ತವವಾಗಿದ್ದ ‘ದೇವದಾಸಿ ಪದ್ಧತಿ‘ಯ ವಿರುದ್ಧ ಅವರು ಸಿಡಿದೆದ್ದರು. ಆ ಪದ್ಧತಿಯ ಸಂಕೋಲೆಯಿಂದ ನರಳುತ್ತಿದ್ದ ಹೆಣ್ಣುಮಕ್ಕಳ ಬಾಳನ್ನು ಹಸನು ಮಾಡಲು ಅವರು ಅವಿರತವಾಗಿ ಶ್ರಮಿಸಿದರು. ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಂಡ ಬಾಲಕಿಯರಿಗಾಗಿ ಪ್ರತ್ಯೇಕ ವಸತಿನಿಲಯವನ್ನು ಪ್ರಾರಂಭಿಸಿದ ಅವರು, ಅದಕ್ಕೆ ಅರ್ಥಪೂರ್ಣವಾಗಿ “ಅಹಲ್ಯೋದ್ಧಾರ ಮಂದಿರ” ಎಂದು ನಾಮಕರಣ ಮಾಡಿದರು.
ಬದುಕಿನಲ್ಲಿ ಅನಾಥರಾದವರು, ಸಮಾಜದಿಂದ ತಿರಸ್ಕರಿಸಲ್ಪಟ್ಟವರು ಎಲ್ಲರಿಗೂ ‘ಕಾಕಾ’ ಅವರ ಮಂದಿರಗಳು ತಾಯಿಯ ಮಡಿಲಂತೆ ಆಸರೆಯಾದವು. ಅಕ್ಷರ ಮತ್ತು ಆಶ್ರಯದ ಮೂಲಕ ಅವರು ಸಾವಿರಾರು ಮಂದಿಯ ಬದುಕಿನಲ್ಲಿ ಹೊಸ ಸಂಚಲನ ಮೂಡಿಸಿದರು.

ನೂರು ವರ್ಷಗಳ ಸುದೀರ್ಘ ಬದುಕು ಕಂಡ ಕಾಕಾರು, ತಮ್ಮ ಪ್ರತಿ ಉಸಿರನ್ನೂ ದಲಿತರ ಮತ್ತು ಶೋಷಿತರ ಉದ್ಧಾರಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ದಶಕಗಳ ನಿಸ್ವಾರ್ಥ ಸೇವೆಯನ್ನು ಗುರುತಿಸಿ, 1958ರಲ್ಲಿ ಅಂದಿನ ಮೈಸೂರು ಸರ್ಕಾರ ಅವರಿಗೆ ‘ಸುವರ್ಣ ಪದಕ‘ ಪ್ರಶಸ್ತಿ ನೀಡಿ ಗೌರವಿಸಿತು.
ಅವರ ಸಮಾಜಮುಖಿ ಕಾರ್ಯಗಳ ಕೀರ್ತಿಯು ರಾಷ್ಟ್ರಮಟ್ಟಕ್ಕೆ ಹರಡಿತು. ಇದರ ಫಲವಾಗಿ 1959ರಲ್ಲಿ ಭಾರತ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ‘ಯನ್ನು ನೀಡಿ ಅವರನ್ನು ಸನ್ಮಾನಿಸಿತು. ಅಂದಿನಿಂದ, ಆ ಸರಳ ವ್ಯಕ್ತಿ ಎಲ್ಲರ ಪಾಲಿನ ಪ್ರೀತಿಯ “ಪದ್ಮಶ್ರೀ ಕಾಕಾ ಕಾರಖಾನೀಸ”ರಾಗಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾದರು.

kaka

ಹಗಲಿರುಳು ಕಾಕಾರ ಆಲೋಚನೆಯಲ್ಲಿ ಇದ್ದಿದ್ದು ಒಂದೇ- ಅದು ದಲಿತ ಮಕ್ಕಳು ಮತ್ತು ಅವರ ಭವಿಷ್ಯ. “ದಲಿತರ ಉದ್ಧಾರವಾಗದೆ ಭಾರತದ ಏಳ್ಗೆಯಾಗುವುದಿಲ್ಲ” ಎಂದು ಅವರು ಪದೇಪದೇ ಒತ್ತಿ ಹೇಳುತ್ತಿದ್ದರು. ‘ಹರಿಜನ ಮಕ್ಕಳ ಕಲ್ಯಾಣ’ವೇ ಅವರ ಜೀವನದ ಏಕೈಕ ಗುರಿಯಾಗಿತ್ತು. ಮಹಾತ್ಮ ಗಾಂಧೀಜಿಯವರ ಆಶ್ರಮದಲ್ಲಿ ಕಲಿತ ಪಾಠಗಳನ್ನು ಅವರು ಜೀವನದ ಕೊನೆಯವರೆಗೂ ಅಕ್ಷರಶಃ ಪಾಲಿಸಿದರು. ಗಾಂಧೀಜಿಯವರ ಪ್ರಭಾವದಿಂದಾಗಿ ಅವರು ಪ್ರತಿನಿತ್ಯ ಶ್ರದ್ಧೆಯಿಂದ ಚರಕದಲ್ಲಿ ನೂಲು ತೆಗೆಯುತ್ತಿದ್ದರು.

ಕಾಕಾ ಅವರ ದಿರಿಸು ಅವರ ವ್ಯಕ್ತಿತ್ವದಷ್ಟೇ ಸರಳ ಮತ್ತು ಗಂಭೀರವಾಗಿತ್ತು. ಮೊಣಕಾಲವರೆಗೆ ಇರುತ್ತಿದ್ದ ಖಾದಿ ಪಂಚೆ, ಮೊಣಕೈ ಉದ್ದದ ಖಾದಿ ಅಂಗಿ, ತಲೆಯ ಮೇಲೆ ಗಾಂಧಿ ಟೋಪಿ, ಬಗಲಲ್ಲಿ ಒಂದು ಜೋಳಿಗೆ ಮತ್ತು ಕೈಯಲ್ಲಿ ಆಸರೆಗೆ ಒಂದು ದಪ್ಪನೆಯ ಬಡಿಗೆ – ಈ ವೇಷದಲ್ಲಿ ಅವರು ಒಬ್ಬ ಪೈಲವಾನನಂತೆ ಗಡಸು ನಡಿಗೆಯಿಂದ ವಿಜಯಪುರದ ಬೀದಿಗಳಲ್ಲಿ ಓಡಾಡುತ್ತಿದ್ದರು.

kaka basava

ಕಾಕಾ ಮತ್ತು ಅಂಬೇಡ್ಕರ್

ಕಾರಖಾನೀಸರು ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ದಿಟ್ಟ ಹೋರಾಟಗಾರರೂ ಆಗಿದ್ದರು. ಅವರ ಜೀವನದ ಒಂದು ಅತ್ಯಂತ ಮಹತ್ವದ ಘಟನೆ ನಡೆದದ್ದು 1939ರಲ್ಲಿ. ಅಂದಿನ ಅಖಂಡ ವಿಜಾಪುರ ಜಿಲ್ಲೆಯ ಬೀಳಗಿ ಗ್ರಾಮದ ಸರಪಂಚರಾಗಿದ್ದ ಸೋಮನಗೌಡ ಫಕೀರಗೌಡ ಪಾಟೀಲ ಅವರ ಊರಿನಲ್ಲಿ ಒಂದು ಜೋಡಿ ಕೊಲೆ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಸೋಮನಗೌಡರು ಸಿಲುಕಿಕೊಂಡರು. ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅಂತಿಮವಾಗಿ ನ್ಯಾಯಾಧೀಶರು ಸೋಮನಗೌಡರಿಗೆ ಗಲ್ಲು ಶಿಕ್ಷೆ ವಿಧಿಸಿದರು.

ಗೌಡರನ್ನು ಆ ಭೀಕರ ಶಿಕ್ಷೆಯಿಂದ ಪಾರು ಮಾಡುವುದು ಸುಲಭದ ಮಾತಾಗಿರಲಿಲ್ಲ. ಪ್ರಾಣದ ರಕ್ಷಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಕಠಿಣ ಸಮಯದಲ್ಲಿ ಆ ಪ್ರಕರಣದ ವಕೀಲರಾಗಿದ್ದ ವಿಜಾಪುರದ ಎ.ಸಿ. ಅಂಗಡಿ ಅವರು ಹತಾಶರಾಗದೆ, ಸೋಮನಗೌಡರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡುವ ಅಂತಿಮ ಪ್ರಯತ್ನವಾಗಿ ಮುಂಬೈಗೆ ತೆರಳಲು ನಿರ್ಧರಿಸಿದರು. ಅವರು ಅಲ್ಲಿನ ಪ್ರಖ್ಯಾತ ಕಾನೂನು ತಜ್ಞರೊಬ್ಬರನ್ನು ಭೇಟಿ ಮಾಡಲು ಹೊರಟಿದ್ದರು, ಆ ತಜ್ಞರು ಬೇರೆ ಯಾರೂ ಅಲ್ಲ; ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಿದ್ದ ಕಾನೂನಿನ ಅಪ್ರತಿಮ ಮೇಧಾವಿ, ಡಾ. ಬಿ.ಆರ್. ಅಂಬೇಡ್ಕರ್ ಅವರು!

ಸೋಮನಗೌಡರ ಪ್ರಕರಣದ ವಿವರಗಳನ್ನು ಆಲಿಸಿದ ಅಂಬೇಡ್ಕರ್ ಅವರು, ಆ ಕೇಸಿನ ಗಂಭೀರತೆಯನ್ನು ಮನಗಂಡರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ಅವರು ಸಮ್ಮತಿಸಿದರು. ಕೇವಲ ಸಮ್ಮತಿಸುವುದಷ್ಟೇ ಅಲ್ಲ, ಪ್ರಕರಣದ ಮರುಪರಿಶೀಲನೆ ನಡೆಸಿ ಸಮರ್ಥವಾಗಿ ವಾದ ಮಂಡಿಸಲು ಸ್ವತಃ ವಿಜಾಪುರಕ್ಕೆ ಬರಲು ಅಂಬೇಡ್ಕರ್ ಒಪ್ಪಿಕೊಂಡರು. ಅದರಂತೆ, 1939ರ ಫೆಬ್ರವರಿ 12ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಜಾಪುರಕ್ಕೆ ಆಗಮಿಸಿದರು. ಕುತೂಹಲದ ಸಂಗತಿಯೆಂದರೆ, ಇದು ಡಾ. ಅಂಬೇಡ್ಕರ್ ಅವರ ಜೀವನದಲ್ಲಿ ನಡೆದ ಮೊದಲ ಮತ್ತು ಕೊನೆಯ ವಿಜಾಪುರ ಭೇಟಿಯಾಗಿತ್ತು.

ನ್ಯಾಯಾಲಯದ ಕಲಾಪಕ್ಕೆ ಒಂದು ದಿನ ಮುನ್ನ, ಅಂದರೆ ಫೆಬ್ರವರಿ 11ರಂದು ನೇರವಾಗಿ ಕಾಕಾ ಕಾರಖಾನೀಸರ ಮನೆಗೆ ಬಾಬಾ ಸಾಹೇಬರು ಭೇಟಿ ನೀಡಿದರು. ಇಬ್ಬರೂ ಮಹನೀಯರು ಒಂದೇ ಸೂರಿನಡಿ ಮುಖಾಮುಖಿಯಾದ ಆ ಕ್ಷಣವು ಅದೆಷ್ಟು ವಿಶೇಷವಾಗಿತ್ತೆಂದರೆ, ಅದು ಕಾಲದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿ ಉಳಿಯಿತು. ಅಂದು ಬಾಬಾಸಾಹೇಬರು ತಮ್ಮ ಮನೆಗೆ ಬಂದಿದ್ದರ ಬಗ್ಗೆ ಸ್ವತಃ ಕಾಕಾ ಕಾರಖಾನೀಸರೇ ಮುಂದೆ ಹಲವು ಬಾರಿ ಭಾವುಕರಾಗಿ ಸ್ಮರಿಸಿಕೊಂಡಿದ್ದರು.

ಈ ಐತಿಹಾಸಿಕ ಸಂವಾದವನ್ನು ಸ್ವತಃ ಕಾಕಾ ಅವರೇ 1974ರನವೆಂಬರ್ 4ರಂದು ವಿಜಾಪುರದಲ್ಲಿ ನಡೆದ ಬಾಬಾಸಾಹೇಬರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ನೆನಪಿಸಿಕೊಂಡಿದ್ದರು. ಅಂದು ಬಾಬಾಸಾಹೇಬರು ಕಾಕಾ ಅವರಿಗೆ ಹೇಳಿದ ಮಾತುಗಳು ಹೀಗಿದ್ದವು:

“ಕೋರ್ಟಿನ ಕೆಲಸಕ್ಕೆ ಈ ನಗರಕ್ಕೆ ಬರುವ ಪ್ರಸಂಗ ಬಂತು, ನಿಮ್ಮ ನೆನಪಾಗಿ ನಿಮ್ಮನ್ನು ಕಾಣುವ ಅವಕಾಶ ಪಡೆದಿದ್ದೇನೆ. ನೀವು ನಿಸ್ವಾರ್ಥ ಸಮಾಜ ಸೇವಕರಾಗಿ, ಹರಿಜನ ಮಕ್ಕಳನ್ನು ಸಾಕ್ಷರರನ್ನಾಗಿ ಮಾಡುವ ಮೂಲಕ ಗಾಂಧೀಜಿಯವರ ತತ್ವ-ಆದರ್ಶಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತಿರುವುದು ವಂದನೀಯ. ಸಾಂಪ್ರದಾಯಕವಾದ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಾಗಿದ್ದುಕೊಂಡು ನೀವು ಇಷ್ಟು ಧೈರ್ಯದಿಂದ ತುಳಿಯುತ್ತಿರುವ ದಾರಿ ನನ್ನನ್ನು ವಿಸ್ಮಯಗೊಳಿಸಿದೆ. ನಾನು ಇಂದು ನಿಮ್ಮನ್ನು ಕಾಣಲು ಬಂದದ್ದು ಕೇವಲ ಭೇಟಿಗಷ್ಟೇ ಅಲ್ಲ, ಇನ್ನೊಂದು ಜವಾಬ್ದಾರಿಯನ್ನು ನಿಮ್ಮ ಹೆಗಲಿಗೆ ಏರಿಸಲು ನಾನು ಬಯಸಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಚೀನ ಕಾಲದಿಂದ ರೂಢಿಗತವಾಗಿ ಬಂದಿರುವ ಅನಿಷ್ಟ ‘ದೇವದಾಸಿ’ ಪದ್ಧತಿಯನ್ನು ತೊಡೆದುಹಾಕುವಲ್ಲಿ ನಿಮ್ಮ ಸೇವೆಯನ್ನು ನಾನು ಹಂಬಲಿಸುತ್ತಿದ್ದೇನೆ.”

ಈ ಐತಿಹಾಸಿಕ ಘಟನೆಯನ್ನು ಲೇಖಕ ಬಿ.ಆರ್. ಬನಸೋಡೆ ಅವರು ತಮ್ಮ “ವಿಜಾಪುರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಹೆಜ್ಜೆಗಳು” ಎಂಬ ಕೃತಿಯಲ್ಲಿ ಬಹಳ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಬಾಬಾಸಾಹೇಬರು ಕಾಕಾ ಅವರ ಕಾರ್ಯವೈಖರಿಯನ್ನು ಎಷ್ಟೊಂದು ಸೂಕ್ಷ್ಮವಾಗಿ ಗಮನಿಸಿದ್ದರು ಮತ್ತು ಅವರ ಮೇಲೆ ಎಷ್ಟೊಂದು ವಿಶ್ವಾಸವಿಟ್ಟಿದ್ದರು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಖಾದಿ ಧರಿಸಿ, ಜೋಳಿಗೆ ಹೊತ್ತು, ಬಡಿಗೆ ಹಿಡಿದು ಗಡಸು ನಡಿಗೆಯಿಂದ ವಿಜಯಪುರದ ಬೀದಿಗಳಲ್ಲಿ ಸಂಚರಿಸುತ್ತಿದ್ದ ಕಾಕಾ ಅವರ ಪ್ರತಿ ಹೆಜ್ಜೆಯೂ ಶೋಷಿತರ ಪಾಲಿಗೆ ಆಶಾಕಿರಣವಾಗಿತ್ತು. ನೂರು ವರ್ಷಗಳ ಸುದೀರ್ಘ ಬದುಕು, ‘ಪದ್ಮಶ್ರೀ’ಯಂತಹ ಉನ್ನತ ಮನ್ನಣೆ, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಜನಸಾಮಾನ್ಯರ ಮನದಲ್ಲಿ ಅವರು ಉಳಿಸಿಹೋದ ‘ಕಾಕಾ‘ ಎಂಬ ಪ್ರೀತಿಯ ಅಂಕಿತ… ಇವೆಲ್ಲವೂ ಅವರ ಬದುಕಿನ ಸಾರ್ಥಕತೆಗೆ ಸಾಕ್ಷಿ.

ವಿಜಯಪುರದ ಮಣ್ಣು ಅವರ ಪಾದಸ್ಪರ್ಶದಿಂದ ಪಾವನವಾಗಿದೆ. ಇತಿಹಾಸದ ಪುಟಗಳಲ್ಲಿ ಗೋಲಗುಮ್ಮಟದ ಶಿಲ್ಪಕಲೆ ಹೇಗೆ ಚಿರಸ್ಥಾಯಿಯೋ, ಹಾಗೆಯೇ ದಲಿತೋದ್ಧಾರಕನಾಗಿ ಕಾಕಾ ಕಾರಖಾನೀಸರು ಮಾಡಿದ ಸೇವೆಯೂ ಅಷ್ಟೇ ಅಮರ. ಅಂತಹ ಮಹಾನ್ ಚೇತನದ ಜೀವನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಹೆಮ್ಮೆಯ ಸಂಗತಿಯಾಗಿದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...