ಕನಕದಾಸ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಕವಿ. ಸಾಹಿತ್ಯಕ, ರಾಜಕೀಯ, ಧಾರ್ಮಿಕ ಲಾಭಕ್ಕಾಗಿ ಇವನ ಸುತ್ತ ಸೃಷ್ಟಿಸುತ್ತ ಬಂದ ಗೊಂದಲಗಳನ್ನು ಹೀಗೆ ಬಿಡಿಸಿ ಇಡಬಹುದು...
- ಬೇಡನಾಗಿರುವ ಕನಕದಾಸನನ್ನು ಕುರುಬನನ್ನಾಗಿಸಲಾಗಿದೆ.
- ರಾಮಾನುಜ ಸಂಪ್ರದಾಯದ ದಾಸನಾಗಿರುವ ಕನಕದಾಸನನ್ನು ಮಾಧ್ವ ಸಂಪ್ರದಾಯದ ದಾಸನನ್ನಾಗಿಸಲಾಗಿದೆ.
- ಇಷ್ಟು ಸಾಲದೆಂಬಂತೆ ರಾಮಾನುಜ ಸಂಪ್ರದಾಯದ ದಾಸನಾದ ಕನಕದಾಸನ ಹೆಸರಿನಲ್ಲಿ ಶಂಕರ ಸಂಪ್ರದಾಯದ ʼಪುರಿʼ ಪೀಠ ಸ್ಥಾಪಿಸಲಾಗಿದೆ.
ಒಬ್ಬನಿಗೆ ಒಂದು ಜಾತಿ, ಒಂದು ಧರ್ಮವಿರುತ್ತದೆ. ಆದರೆ ಮೇಲೆ ಹೇಳಿದಂತೆ ಕನಕದಾಸನ ಕೊರಳಿಗೆ ಎರಡು ಜಾತಿ ಮೂರು ಧರ್ಮಗಳನ್ನು ಸುತ್ತುಹಾಕಲಾಗಿದೆ. ವಿದ್ವಾಂಸರ ಕೈಯಲ್ಲಿ ಆರಂಭವಾಗಿ, ರಾಜಕಾರಣಿಗಳ ಕೈಯಲ್ಲಿ ಗಟ್ಟಿಗೊಳ್ಳುತ್ತ ನಡೆದಿರುವ ಈ ಮೂರೂ ಗೊಂದಲಗಳ ಸ್ವರೂಪ, ನಿಜಸ್ಥಿತಿ ಹೀಗಿದೆ:
1. ಕನಕದಾಸನ ಜಾತಿಯನ್ನು (ಅ) ಆರಾಧಿಸುವ ದೈವತ (ಆ) ದಾಖಲೆ (ಇ) ವದಂತಿ- ಈ ಮೂರು ನೆಲೆಗಳಲ್ಲಿ ಚರ್ಚಿಸಿ, ಕೆಳಗಿನ ನಿರ್ಣಯಕ್ಕೆ ಬರಬೇಕಾಗುತ್ತದೆ. (ಅ) ಕನಕದಾಸನ ಜನ್ಮಗ್ರಾಮವಾಗಿರುವ ಬಾಡ ಪರಿಸರದಲ್ಲಿ ಬೇಡರಂತೆ ಕುರುಬರೂ ಇದ್ದಾರೆ. ಬೇಡರಲ್ಲಿ ವಿಷ್ಣುವಿನ ಆರಾಧನೆ, ಕುರುಬರಲ್ಲಿ ಶಿವನ ಆರಾಧನೆ ಈಗಲೂ ಆಚರಣೆಯಲ್ಲಿದೆ. ಹೀಗೆ ಈ ಪರಿಸರದ ಎಲ್ಲ ಕುರುಬರು ಶಿವೋಪಾಸಕರಾಗಿರುವಾಗ, ಕುರುಬನಾಗಿದ್ದ ಪಕ್ಷದಲ್ಲಿ ಕನಕದಾಸನೊಬ್ಬನೇ ವಿಷ್ಣು ಉಪಾಸಕನಾಗಿರುವುದು ಹೇಗೆ? ಆದುದರಿಂದ ಅಲ್ಲಿಯ ಬೇಡರಂತೆ ವಿಷ್ಣು ಉಪಾಸಕನಾದ ಕನಕದಾಸನೂ ಬೇಡನಾಗಿದ್ದಾನೆ.
(ಅ) ಬೇಡರಾಗಿದ್ದ ಸುರಪುರ ದೊರೆ ಮೊದಲಾದವರು ವಿಷ್ಣು ಉಪಾಸಕರಾಗಿ ತಿರುಪತಿ ವೆಂಕಟೇಶನ ಭಕ್ತರಾಗಿರುವುದನ್ನು, ಕುರುಬರಾಗಿದ್ದ ಹುಕ್ಕಬುಕ್ಕರು ಶಿವನ ಉಪಾಸಕರಾಗಿ ಹಂಪಿಯ ವಿರೂಪಾಕ್ಷನ ಭಕ್ತರಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
(ಆ) ಸಾಮಾನ್ಯವಾಗಿ ನಾವು ನಮ್ಮ ಕವಿಗಳ ಚರಿತ್ರೆಯನ್ನು ದಾಖಲಿಸುವ ಗೋಜಿಗೆ ಹೋಗಿಲ್ಲ, ಕನಕದಾಸರು ಇದಕ್ಕೆ ಹೊರತಲ್ಲ. ಆದರೆ ಸುದೈವಕ್ಕೆ ಒಂದು ತಾಳೆಗರಿಯ ಹಸ್ತಪ್ರತಿಯಲ್ಲಿ ಇವನು ಉಡುಪಿಗೆ ಹೋದ, ಅಲ್ಲಿಯ ಶ್ರೀಕೃಷ್ಣ ದೇವಾಲಯದಲ್ಲಿ ಒಳಗೆ ಬಿಡದ ಸಂಗತಿ “ಈತ ಬೆಡನಾದ ಕಾರ್ಣ ಬ್ರಾಹ್ಮಣರು ವಳಗೆ ಪೊಗಲಿಕ್ಕೆ ಬಿಡದೆ” ಎಂದು ದಾಖಲಾಗಿದೆ. ಪ್ರಾಚೀನಕಾಲದಲ್ಲಿ ಲಿಖಿಸುವಾಗ ದೀರ್ಘವನ್ನು ಪ್ರಸ್ವವಾಗಿಯೇ ಬರೆಯುತ್ತಿದ್ದರಾಗಿ, ಇಲ್ಲಿಯ ಬೆಡ ಎಂಬುದರ ನಿಜಪಾಠ ಬೇಡ. ಈ ಬೆಡ ಎಂಬುದನ್ನು ಜಡ ಎಂದು ತಪ್ಪಾಗಿ ಓದಿದ್ದರು. ಆದರೆ 35 ವರ್ಷಗಳಷ್ಟು ಹಿಂದೆಯೇ ಇದನ್ನು ತಿದ್ದುಪಡಿಮಾಡಿ ಬೇಡ ಎಂದು ಓದಿ, ಪ್ರಜಾವಾಣಿ ದಿನಪತ್ರಿಕೆಯಲ್ಲಿ (18.4.1969) ಶ್ರೀ ಸತ್ಯನಾರಾಯಣ (ಮೈಸೂರು) ಅವರು ಒಂದು ಲೇಖನವನ್ನು ಬರೆದಿದ್ದರು.
(ಇ) ಇವುಗಳಿಗಿಂತ ಮುಖ್ಯವಾದುದೆಂದರೆ ಕಾಗಿನೆಲೆ ನೆರೆಯ ಹುಲ್ಲೂರ ಗ್ರಾಮದಲ್ಲಿ ಬೇಡ ಜನಾಂಗದ ಕುಟುಂಬಗಳಿದ್ದು, ತಾವು ಕನಕದಾಸನ ವಂಶಸ್ಥರೆಂದು ಹೇಳಿಕೊಳ್ಳುವ ವದಂತಿ ಇನ್ನೂ ಜೀವಂತವಾಗಿದೆ.
ಇಷ್ಟೆಲ್ಲ ಆಧಾರಗಳಿದ್ದರೂ ಕನಕದಾಸನು ಕುರುಬನೆಂದು ಭಾವಿಸಿದುದು ಅನ್ಯಥಾಜ್ಞಾನವೇ ಸರಿ. ಈ ವಾದ ಹುಟ್ಟು ಹಾಕಿದವರು ವಿದ್ವಾಂಸರು. ಇವರು ಒಮ್ಮೆ ಬೇಡನೆಂದೂ, ಇನ್ನೊಮ್ಮೆ ಕುರುಬನೆಂದೂ ಹೊಣೆಗೇಡಿ ಲೇಖನ ಬರೆಯುತ್ತ ಹೋದರು, “ನಾವು ಕುರುಬರು ನಮ್ಮ ದೇವರು ಬೀರಯ್ಯ” ಎಂಬ ಕೀರ್ತನೆಯನ್ನು ಕೆಲವರು ರೂಪಕದಲ್ಲಿ ಬಿಟ್ಟು ವಾಚ್ಯರ್ಥದಲ್ಲಿ ಸ್ವೀಕರಿಸಿದರು. ನಿಜಹೇಳುವುದಾದರೆ ಈ ಕೀರ್ತನೆ ಕೊಡೆಕಲ್ಲ ಬಸವಣ್ಣನ ಮಗ ರಾಚಪ್ಪಯ್ಯನದಾಗಿದೆ. (ಈ ರಾಚಪ್ಪಯ್ಯನ ತಮ್ಮ ಸಂಗಪ್ಪಯ್ಯನ ಸಮಾಧಿ ಕಾಗಿನೆಲೆಯಲ್ಲಿದೆ).
ಇವೆಲ್ಲ ಕಾರಣಗಳಿಂದಾಗಿ ಸರಳವಾಗಿದ್ದ ವಿಷಯವೊಂದು ಸಮಸ್ಯೆಯ ಕವಲೊಡೆಯಿತು. ಮೊದಮೊದಲು ತೀರ ಸಾಮಾನ್ಯವೆಂಬಂತೆ ಈ ಜಾತಿವಿಚಾರ ವಿದ್ವಾಂಸರ ಮಟ್ಟದಲ್ಲಿ ವ್ಯವಹರಿಸುತ್ತಿದ್ದಿತು. ಆದರೆ ಕುರುಬ ಸಮಾಜದವರು ಏಕತೆಗಾಗಿ ಸಂಘಟನೆಯನ್ನು ಬಯಸಿ, ತಮಗಾಗಿ ಇತಿಹಾಸದಲ್ಲಿ ಒಬ್ಬ ಸಾಂಸ್ಕೃತಿಕ ಮಹಾಪುರುಷನನ್ನು ಹುಡುಕತೊಡಗಿದ ಪ್ರಸಂಗದಲ್ಲಿ, ವಿದ್ವಾಂಸರ ಅಪಸ್ವರ ಅವರ ಗಮನ ಸೆಳೆಯಿತು. ಈ ಸಂಘಟನೆಯ ನೇತೃತ್ವವನ್ನು ರಾಜಕೀಯ ವ್ಯಕ್ತಿಗಳು ವಹಿಸಿದ್ದರಿಂದ ಕನಕದಾಸರು ಕುರುಬನೆಂಬುದಕ್ಕೆ ಒಮ್ಮೆಲೇ ರೆಕ್ಕೆ ಪುಕ್ಕ ಬಂದು, ಪ್ರಚಾರ ಪಡೆಯತೊಡಗಿತು. ಇತ್ತೀಚೆಗೆ ಕಾಗಿನೆಲೆಯಲ್ಲಿ ಕುರುಬರು ಕನಕಪೀಠ ಸ್ಥಾಪಿಸುತ್ತಲೇ, ಕುರುಬ ಸಮಾಜದ ಸಾಹಿತಿಗಳೂ ಕನಕದಾಸನಿಗೆ ಕುರುಬನೆಂಬ ಬಣ್ಣ ಲೇಪಿಸುತ್ತ ನಡೆದರು. ಸಭೆ-ಸಮಾರಂಭಗಳಲ್ಲಿ ಮಾತನಾಡಿ, ಗ್ರಾಮ-ನಗರಗಳಲ್ಲಿ ಸ್ಮಾರಕ ಸ್ಥಾಪಿಸಿ ಕುರುಬನೆಂಬ ವಾದವನ್ನು ವೇಗದಿಂದ ಪ್ರಚಾರ ಮಾಡಿದರು. ಸರಕಾರವೂ ಬಹುಜನ ಸಮಾಜವಾದ ಕುರುಬರ ಸಂಪ್ರೀತಿಗಾಗಿ ಕೀರ್ತನೆ, ಸ್ಮರಣಗ್ರಂಥಗಳ ಪ್ರಕಟನೆಯಿಂದ ಈ ವಿಷಯಕ್ಕೆ ರಾಜ(ಕಾರಣ) ಮುದ್ರೆಯೊತ್ತಿದರು. ವಿಶ್ವವಿದ್ಯಾಲಯಗಳಲ್ಲಿ ಕನಕಪೀಠ ಸ್ಥಾಪಿಸುವ ಮೂಲಕ ಈ ವಾದಕ್ಕೆ ವಿದ್ವನ್ಮಾನ್ಯತೆ ಸಿಗುವಂತೆ ಮಾಡಿದರು. ಹೀಗೆ ಪ್ರಚಾರ ಪಡೆಯುತ್ತಿದ್ದಂತೆಯೇ ಕನಕದಾಸನು ಕುರುಬನಲ್ಲ ಎಂಬ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು. ಇವುಗಳಲ್ಲಿ ಶ್ರೀ ದೇವೇಂದ್ರ ಮಾಧವನರ ಅವರು ಬರೆದ “ಕನಕದಾಸರು ಬೇಡಜನಾಂಗದವರು” ಎಂಬ ಪುಸ್ತಕ, ಪ್ರೊ. ಬಿ. ರಾಜಶೇಖರಪ್ಪ ಅವರ “ಕನಕದಾಸರು: ಹೊಸ ಚಾರಿತ್ರಿಕ ಸಂಗತಿಗಳು” ಲೇಖನ ಮುಖ್ಯವಾದುವು(ಇತಿಹಾಸ ಕಥನ, ಪು. 231). ಇತ್ತೀಚೆಗೆ ಪಂಡಿತರೊಬ್ಬರು ಕನಕದಾಸನು ಪಂಚಾಳಕುಲದವನೆಂದೂ ಬರೆದಿದ್ದಾರೆ !(ಕನಕದಾಸಕುಲ-ಸಾಹಿತ್ಯಸಂಚಯ (ಡಾ. ರಾಜಶೇಖರ ಬಡಿಗೇರ)ಪು. 22).
2. “ರಾಮಾನುಜ ಗುರುವನ್ನು, ತಾತಾಚಾರ್ಯರನ್ನು ಸ್ತುತಿಸಿರುವುದರಿಂದ ಶ್ರೀವೈಷ್ಣವರ ಶಿಷ್ಯನಾಗಿದ್ದಂತೆ ತೋರುತ್ತದೆ”. ಎಂದು ಕವಿ ಚರಿತೆಕಾರರು 1907ರಷ್ಟು ಹಿಂದೆಯೇ ಹೇಳಿದ್ದರೂ, ಕನಕದಾಸನು ಮಾಧ್ವ ಬ್ರಾಹ್ಮಣನೆಂದು ಪ್ರಚಾರ ಪಡೆದುದು ತುಂಬ ವಿಚಿತ್ರವೆನಿಸುತ್ತದೆ. ಬಹುಶ: ಇವನ ಹೆಸರಿನಲ್ಲಿ ದಾಸ ಪದವಿರುವುದೂ, ಇವನು ವಿಷ್ಣುಭಕ್ತನಾಗಿರುವುದೂ, ಪುರಂದರ ದಾಸರಂತೆ ಕೀರ್ತನೆ ಬರೆದುದೂ ಕಾರಣವಾಗಿ ಈ ತಪ್ಪು ತಿಳಿವಳಿಕೆ ಬೆಳೆಯುತ್ತ ಬಂದಿತೆಂದು ಕಾಣುತ್ತದೆ. ಹೀಗಿದ್ದೂ ಅನೇಕರು ಅವನ ಕಾವ್ಯಗಳನ್ನೇ ಆಧರಿಸಿ ಅವನು ರಾಮಾನುಜ ಪಂಥೀಯನೆಂದು ಬರೆದುದನ್ನು ಹೀಗೆ ಸಂಗ್ರಹಿಸಬಹುದು :
ಮೋಹನ ತರಂಗಿಣಿಯ ಆರಂಭದಲ್ಲಿಯೇ “ಶ್ರೀರಾಮಾನುಜಮುನಿ ಶರಣು” “ರಾಮಾನುಜರೊಳು ವಾದಿ ಸಂಪರ್ಕ ನಿಲ್ವುದೆ? ನಿಲ್ಲಲರಿದು” ಎಂದು ಕನಕದಾಸರು ಸ್ತುತಿಸಿದ್ದಾರೆ. ಇಲ್ಲಿಯೇ ಮುಂದೆ ಶ್ರೀವೈಷ್ಣವ ಪ್ರಸಿದ್ಧಗುರು ತಾತಾಚಾರ್ಯನನ್ನು ಸ್ತುತಿಸಿದ್ದಾರೆ. ಇದಲ್ಲದೆ ಇವನದೇ ಎಂದು ಅನುಮಾನಿಸುತ್ತಿರುವ “ನೃಸಿಂಹಸ್ತುತಿ”ಯಲ್ಲಿಯೂ ರಾಮಾನುಜರ ಸ್ತುತಿಯಿದೆ.
ಮೋಹನ ತಂರಂಗಿಣಿಯಲ್ಲಿ “ಶ್ರೀವೈಷ್ಣವರೇಕವ್ರತದ ತದ ಭೂಸುರರು” ಎಂದೂ “ರಾಮಾನುಜ ವ್ಯಾಖ್ಯಾನ ಸುತತ್ವದ ಬ್ರಾಹ್ಮಣೋತ್ತಮರು” ಎಂದೂ “ರಾಮಾನುಜಾಗಮವ ಸ್ಮರಿಸಿ”ರೆಂದೂ ಹೇಳಲಾಗಿದೆ. ಇದಲ್ಲದೆ ಶ್ರೀವೈಷ್ಣವಕ್ಕೆ ಸಂಬಂಧಿಸಿದಂತೆ ಈ ಮತೀಯರು ಧರಿಸಿದ್ದ “ಘನಪಟ್ಟೆ ನಾಮ” “ತಿರುಚೂರ್ಣ” ಮೊದಲಾದವುಗಳ ಉಲ್ಲೇಖ ಇಲ್ಲಿ ಬರುತ್ತದೆ. ಆದರೆ ಮಧ್ವಾಚಾರ್ಯರ ಹೆಸರಾಗಲೀ, ಅವರ ಧರ್ಮದ ಪ್ರಸ್ತಾಪವಾಗಲೀ ಕನಕದಾಸರ ರಚನೆಗಳಲ್ಲಿ ಇಲ್ಲವೇ ಇಲ್ಲ. ಎರಡನೆಯದಾಗಿ ಶ್ರೀವೈಷ್ಣವ ಮತದಲ್ಲಿ ಬ್ರಾಹ್ಮಣೇತರರನ್ನು ಮತಾಂತರ ಮಾಡಿಕೊಳ್ಳುವುದಿಲ್ಲ; ಮಂತ್ರದೀಕ್ಷೆಯ ಮೂಲಕ ಒಕ್ಕಲು ಮಾಡಿಕೊಳ್ಳುತ್ತಾರೆ. ಕನಕದಾಸರು ಹೀಗೆ ಶ್ರೀವೈಷ್ಣವಕ್ಕೆ ಒಕ್ಕಲಾದವರು. ಮಾಧ್ವಮತದಲ್ಲಿ ಮತಾಂತರಕ್ಕಾಗಲೀ, ಒಕ್ಕಲು ಮಾಡಿಕೊಳ್ಳುವುದಕ್ಕಾಗಲೀ ಅವಕಾಶವಿಲ್ಲ. ಹೀಗಿರುವಾಗ ಕನಕದಾಸನನ್ನು ಮಾಧ್ವದಾಸ, ಮಾಧ್ವಮತೀಯನೆನ್ನುವಲ್ಲಿ ಅರ್ಥವೇ ಇಲ್ಲ.
3. ಬೇಡಜಾತಿಯವನನ್ನು ಕುರುಬಜಾತಿಗೆ ಎಳೆದುದು ಸಾಲದೆಂಬಂತೆ, ರಾಮಾನುಜ ಪಂಥೀಯನನ್ನು ಮಾಧ್ವಪಂಥೀಯ ದಾಸತ್ವಕ್ಕೆ ಎಳೆದುದು ಇನ್ನೂ ಸಾಲದೆಂಬಂತೆ, ಇತ್ತೀಚೆಗೆ ಕನಕದಾಸ ಜಗದ್ಗುರುಪೀಠ ಕಲ್ಪಿಸಿ, ಅದಕ್ಕೆ ಶಂಕರ ಪಂಥೀಯ ”ಪುಂ” ವಿಶೇಷಣ ಜೋಡಿಸಿದುದು ಕನಕದಾಸನಿಗೆ ಮಾಡಿದ ದೊಡ್ಡ ಅನ್ಯಾಯವೇ ಆಗಿದೆ. ಸಂಸ್ಕೃತಿಗೆ ಮಾಡಿದ ಅಪಚಾರವೇ ಆಗಿದೆ.
ಹಿಂದುಳಿದ ಸಮಾಜ ಸಂಘಟನೆಯಾಗುವುದು ತಪ್ಪಲ್ಲ. ಸಂಘಟನೆಯ ಮೂಲಕ ಅವು ಭೌತಿಕವಾಗಿ ಸಾಂಸ್ಕೃತಿಕವಾಗಿ ಮುಂದುವರಿದ ಸಮಾಜಗಳ ಮಟ್ಟಕ್ಕೆ ಏರಬೇಕು. ಆದರೆ ಅವರು ತಮ್ಮ ತಮ್ಮ ಪರಂಪರೆಗಳ ನೆಲೆಯಲ್ಲಿಯೇ ಸಂಘಟಿತರಾಗಬೇಕು. ಅದರಲ್ಲಿಯೂ ಆ ಪರಂಪರೆಯನ್ನು ಪರಿಷ್ಕರಿಸಿಕೊಂಡು ಸಂಘಟನೆಯಾಗಬೇಕು. ಆದರೆ ಸಂಬಂಧವೇ ಇಲ್ಲದ ವೈದಿಕ ಸಂಪ್ರದಾಯದ ಹೆಸರನ್ನು ಹಣೆಗೆ ಹಚ್ಚಿಕೊಳ್ಳುವುದೆಂದರೆ, ಮೂಲತಃ ಅಸಮಾನತೆಯನ್ನು ಸಾರುವ ವೈದಿಕ ಸಮಾಜದಲ್ಲಿ ಶಾಶ್ವತ ಎರಡನೆಯ ದರ್ಜೆಯ ಪ್ರಜೆಯಾಗಲು ಹೊರಟಂತಾಗುತ್ತದೆ. ಮೇಲುಜಾತಿಯ ನಾಮ ಧರಿಸಿದರೆ ”ಅರಸನ ಹೆಸರಿಟ್ಟುಕೊಂಡ ಅನಾಮಿಕನಂತೆ ನಗೆಗೆಡೆ”ಯಾಗುತ್ತದೆ. ಹೀಗಾಗಿ ಬೇಡನಾಗಿರುವ ಕನಕದಾಸನನ್ನು ಕುರುಬನ್ನಾಗಿ ಮಾಡಿ, ಅವನ ಹೆಸರಿನಲ್ಲಿ ‘ಪುರಿ’ನಾಮದ ಗುರು ಪಟ್ಟಕಟ್ಟಿಕೊಂಡರೆ ಎತ್ತಣಿಂದೆತ್ತಣ ಸಂಬಂಧ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಬಹುಶಃ ಇದು ರಾಜಕೀಯ ಲಾಭಕ್ಕಾಗಿ ಮೇಲುಜಾತಿಯವರು ಕೆಳಜಾತಿಗಳಲ್ಲಿ ಭ್ರಮೆ ಹುಟ್ಟಿಸುವ ಧರ್ಮಕಾರಣವೆನಿಸುತ್ತದೆ. ಕುರುಬ ಸಮಾಜದವರು ಇಂಥ ಭ್ರಮೆಗೆ ತಾವು ತುತ್ತಾಗುವುದಲ್ಲದೆ, ಶ್ರೀವೈಷ್ಣವನಾಗಿರುವ ಬೇಡಜಾತಿಯ ಕನಕದಾಸನನ್ನು ಕುರುಬಜಾತಿಗೆ~ ಶಂಕರಮತಕ್ಕೆ ಗುರಿಮಾಡಿದುದು ನಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಗಂಭೀರ ಪ್ರಮಾದವೆನಿಸುತ್ತದೆ. ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ತಮ್ಮದೇ ಆದ ಹಾಲುಮತವನ್ನೂ, ಇದರ ಪರಂಪರಾಗತ ಗುರುಗಳನ್ನೂ ಮೂಲೆಗುಂಪು ಮಾಡಿ, ಕೇವಲ 500 ವರ್ಷಗಳ ಒಬ್ಬ ಬೇಡ ಸಂತನನ್ನು, ಒಬ್ಬ ರಾಮಾನುಜ ಪಂಥೀಯನನ್ನು ಅಪ್ಪಿಕೊಂಡ ಪ್ರಮಾದವನ್ನೂ ಮಾಡಿದಂತಾಗುತ್ತದೆ.
**
ಕನಕದಾಸನ ಹೆಸರನ್ನು ಕನಕ+ದಾಸ ಎಂದು ಸರಳವಾಗಿ ಬಿಡಿಸಿ, ಪೂರ್ವಪದವು ಬಂಗಾರ ಅರ್ಥವನ್ನೊಳಗೊಂಡಿದೆಯೆಂದು ಭಾವಿಸುತ್ತ ಬಂದಿದ್ದೇವೆ. ಜನಸಾಮಾನ್ಯರಲ್ಲಿ ಕನಕವೆಂಬ ಸಂಸ್ಕೃತ ಪದಕ್ಕಿಂತ ಬಂಗಾರ, ಚಿನ್ನ, ಹೊನ್ನ ಎಂಬ ದೇಶೀ ಪದಗಳು ಬಳಕೆಯಲ್ಲಿವೆ. ಈ ಪ್ರಚಲಿತ ಪದಗಳನ್ನವಲಂಬಿಸಿ ಬಂಗಾರಪ್ಪ, ಹೊನ್ನಪ್ಪ, ಚಿನ್ನಮ್ಮ ಹೆಸರುಗಳನ್ನು ಕನ್ನಡಿಗರು ಬಳಸುತ್ತ ಬಂದಿರುವುದು ಸಹಜ. ಅಪ್ರಸಿದ್ಧ ಸಂಸ್ಕೃತ ಶಬ್ದವನ್ನು ಗಮನಿಸಿ ಕನಕಪ್ಪ ಎಂಬ ಹೆಸರಿಡುವುದು ಸ್ವಲ್ಪ ಕಠಿಣ. ಹೀಗಾಗಿ ಈ ಹೆಸರಿನ ಮೂಲ ಬೇರೆ ಇರಬಹುದೆನಿಸುತ್ತದೆ.
ಪ್ರಾಚೀನ ಕಾಲದಲ್ಲಿ ಕನ್ನ, ಕನ್ನಗಿ, ಕನ್ನುಗಿ, ಕನ್ನೇಗೌಡ ಹೆಸರುಗಳು ತುಂಬ ಪ್ರಸಿದ್ಧವಾಗಿದ್ದವೆಂದು ಶಾಸನಗಳು ತಿಳಿಸುತ್ತವೆ. ಅಂಕಿತ ನಾಮಗಳಿಗೆ -ಕ ಇಲ್ಲವೆ -ಗ (ಎರಕ, ಬೂತುಗ) ಪ್ರತ್ಯಯಗಳನ್ನು ಅಂಟಿಸುವುದು ಕನ್ನಡದಲ್ಲಿ ಸ್ವಾಭಾವಿಕ. ಈ ಮೇರೆಗೆ ಕನ್ನ ಎಂಬುದಕ್ಕೆ -ಕ ಪ್ರತ್ಯಯ ಹತ್ತಿದ ಕನ್ನಕ ಎಂಬ ಅಂಕಿತನಾಮವೇ ಕನ್ನಕದಾಸ>ಕನಕದಾಸ (ಕನ್ನ<ಕೃಷ್ಣ ಎಂದು ನಿಷ್ಪತ್ತಿ ಹೇಳಬಹುದಾದರೂ, ಇದು ಮೂಲತಃ ದ್ರಾವಿಡ ಪದವಿರಬಹುದೇ? ವಿಚಾರಿಸಬೇಕು) ಎಂಬ ರೂಪತಾಳಿರಬಹುದು. ಯಾವುದೇ ಒಂದು ಗ್ರಾಮದಲ್ಲಿ ಪ್ರಸಿದ್ಧ ಹೆಸರುಗಳು ಅನೇಕ ಜನರಿಗೆ ಕಂಡುಬರುತ್ತವೆ. ಈ ಮೇರೆಗೆ ಕನ್ನಕ ಎಂಬುದು ಬಾಡಗ್ರಾಮದಲ್ಲಿ ಮತ್ತೆ ಕೆಲವರಿಗೆ ಅಂದು ಬಳಕೆಯಾಗುತ್ತಿರಬಹುದು. ಶಿವತತ್ವ ಚಿಂತಾಮಣಿಯಲ್ಲಿ ನೂರೊಂದು ವಿರಕ್ತರ ಕಾಲದ ನೂತನಗಣಂಗಳಾದ ತೊಗರಸೆಯ ಹಾಲಮ್ಮ, ದೊಡ್ಡವಾಡಗ ಸ್ವರ್ಣಗೆಲಸಿ ಮಲ್ಲಪ್ಪ, ಉಪ್ಪಹುಣಸಿಯ ಸಿರಿಗಿರಿ, ಅಬ್ಬಲೂರ ಸೂಜಿಕಾಯದ ಭರಣಯ್ಯರ ಜೊತೆ ಬಾಡಗ್ರಾಮದ ಕನ್ನಪ್ಪನನ್ನು ಹೆಸರಿಸಲಾಗಿದೆ. ಇದರಿಂದ ಕನ್ನಮೂಲದ ಹೆಸರು ಊರಲ್ಲಿ ಪ್ರಚಲಿತವಾಗಿದ್ದಿತೆಂದೂ, ಇಂಥ ಕನ್ನಕ ಹೆಸರಿನ ಬೇರೊಬ್ಬನು ದಾಸನಾದ ಬಳಿಕ, ಕನ್ನಕ+ದಾಸ>ಕನಕದಾಸನೆಂದು ಪ್ರಸಿದ್ದಿ ಪಡೆದನೆಂದೂ ಊಹಿಸಬಹುದಾಗಿದೆ. ಹೆಸರಿಸಲಾಗಿದೆ.
-ಎಂ.ಎಂ. ಕಲಬುರ್ಗಿ
(ಆಕರ: ಮಾರ್ಗ ಸಂಪುಟ:4/ಪುಟ:376-380, ಮೂರನೆ ಮುದ್ರಣ:2010/ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಂಗಳೂರು)
ಅಣ್ಣ ನಿನ್ ಧೈರ್ಯ ಮೆಚ್ಚಬೇಕು ಅಣ್ಣ ಸರಿಯಾಗಿ ಬರ್ದಿದ್ದೀರಾ
ಬೋಯರ್ ನ ಉಪ ಪಂಗಡಗಳಲ್ಲಿ ಬೇಡರು ಒಂದು.ಬೇಡ,ಬೋಯರ್,ಬೋಯಿ,ಭೋವಿ,ಒಡ್ಡರು,ವಾಲ್ಮೀಕ್ಸ್,ಪುಳಿಂದರ್,ಕೋಲ್,ಬೀಲ್,ಪೋಯ ಕಿರಾತ,ನಿಷಾದ್ಸ್, ದಾಸ್,ದೊರಬಿಡಲು,ಬೋಯಸ್,ಕೊಂಡದೊರಲು. ಇವು ಸೇರಿದಂತೆ ಹಲವು ಬುಡಕಟ್ಟುಗಳು ಒಂದೇ ಪಶುಪಾಲಕ ಜಾತಿಗಳು ಆಗಿದ ಕುರುಬರು ಸಹ ಬೋಯ ಸಮುದಾಯದ ಉಪ ಪಂಗಡವೆ..ಇಲ್ಲಿ ಬೋಯ ಮತ್ತು ಬೇಡ ಬೇರೆ ಅಲ್ಲ ಒಂದೇ..?! ಬೇಟೆ ಯಾಡಿ ಬೇಡನಾದ,ಕಲ್ಲು ಮಣ್ಣು ಕೆಲಸ ಮಾಡಿ ಒಡ್ಡ ನಾದ, ಕುರಿ ಕಾದು ಕುರುಬನಾದ.
ವಡ್ಡರ ಉಪ ಪಂಗಡಗಳು ಸಹ ಬರಿ ಕಲ್ಲು ಮತ್ತು ಮಣ್ಣಿಗೆ ಸಿಮೀತವಾಗಿಲ್ಲ.ಒಡೆಯರ್, ರಾಜು,ಬೋಯಿ,ಗೌಡ,ಕೋಟಾ,ಪವಾರ್,ಚೌಹಾನ್, ರಾಥೋಡ್,ಉಪ್ಪು ವಡ್ಡ,ಪತ್ರೋಟ್,ಗಿರಿಣಿ ವಡ್ಡ,ತುಡುಗು ವಡ್ಡ,ಲಾಲ್ ಗೊಲ್ಲ ಸೇರಿದಂತೆ ನೂರಕ್ಕೂ ಹೆಚ್ಚು ಉಪ್ಪ ಪಂಗಡಗಳು ಮತ್ತೆ ಈ ಉಪ ಪಂಗಡಗಳಲ್ಲಿ ನೂರಾರು ಗೋತ್ರ,ಬೇಡಗುಗಳು ಇವೆ.ಈ ಗೋತ್ರಗಳಲ್ಲಿ ಅರಸು ಕುರುಬರಲ್ಲು ಇದೆ ವಡ್ಡರಲು ಗೋತ್ರ ಇದೆ.ಒಡೆಯರ್ ಸಹ ಗೊಲ್ಲ,ಕುರುಬ ಮತ್ತು ಒಡ್ಡರಲ್ಲಿ ಉಪ ಪಂಗಡಗಳು ಇವೆ.ತೆಲುಗು ಬೋಯ ಗೋತ್ರಲು ಗಮನಿಸಿದಾಗ ಕುರುಬರು ಬೇಡರು/ ಬೋಯಗಳ ಉಪಪಂಗಡವೇ ಎಂದು ತಿಳಿಯುತ್ತದೆ.
ಕನಕದಾಸರು ಬೇಡ ಜನಾಂಗಕ್ಕೆ ಸೇರಿದವರು ಕಾಗೆನಲ್ಲಿ ಸುತ್ತಮುತ್ತಲು ಬೇಡ ಜನಾಂಗದವರು ಮನೆಗಳು ಸಿಗುತ್ತವೆ ಹೊರತು ಕುರುಬ ಸಮುದಾಯದ ಮನೆಗಳು ಸಿಗುವುದಿಲ್ಲ