ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಾದ ಎಂ.ಎಸ್ ರಾಮಯ್ಯ, ಆರ್‌ವಿಸಿಇ, ಬಿಎಂಎಸ್, ಎಂಎಸ್‌ಆರ್‌ಐಟಿ, ಬಿಐಟಿ ಹಾಗೂ ದಯಾನಂದ ಸೇರಿದಂತೆ ವಿವಿಧ ಕಾಲೇಜುಗಳ ಪ್ರವೇಶಕ್ಕೆ 3ನೇ ಸುತ್ತಿನ ಕೌನ್ಸೆಲಿಂಗ್ ಮುಗಿದೆ. ಆದಾಗ್ಯೂ, ಈ ಕಾಲೇಜುಗಳಲ್ಲಿ ಇನ್ನೂ ಹಲವು ಸೀಟುಗಳು ಖಾಲಿ ಇವೆ ಎಂಬುದನ್ನು Comedk.org ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ, ಮತ್ತೊಂದು ಸುತ್ತಿನಲ್ಲಿ ಕೌನ್ಸೆಲಿಂಗ್ ನಡೆಸಿ, ಆಸಕ್ತ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾದಲ್ಲಿಯೇ ಪ್ರವೇಶ ನೀಡಬೇಕು. ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಇತ್ತೀಚೆಗೆ, Comedk.orgನಲ್ಲಿ 3ನೇ ಸುತ್ತಿನ ಕೌನ್ಸೆಲಿಂಗ್ ಮುಗಿದ ಬಳಿಕ, ಖಾಲಿ ಇರುವ ಸೀಟುಗಳ ಪಟ್ಟಿಯನ್ನು ಲಗತ್ತಿಸಲಾಗಿದೆ. ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಸೇರಿದಂತೆ ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಲ್ಲಿ ಹಲವು ಸೀಟುಗಳು ಇನ್ನೂ ಖಾಲಿ ಇವೆ. ಈ ಪೈಕಿ, RVCE (31), BMS (136), BIT (52), MSR (133) ಮತ್ತು ದಯಾನಂದ ಸಾಗರ್ ಕಾಲೇಜಿನಲ್ಲಿ 47 ಸೀಟುಗಳು ಸೇರಿದಂತೆ ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ 600ಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿದಿವೆ. ಈ ಸೀಟುಗಳನ್ನು ಈಗ ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಾಗಿ ಪರಿವರ್ತಿಸಲು ಕಾಲೇಜುಗಳು ಮುಂದಾಗಿವೆ. ಇದನ್ನು ತಡೆಯಬೇಕು. ಆ ಖಾಲಿ ಸೀಟುಗಳಿಗೆ 4ನೇ ಸುತ್ತಿನ ಕೌನ್ಸೆಲಿಂಗ್ ನಡೆಸಿ ಸರ್ಕಾರಿ ಕೋಟಾದಲ್ಲಿಯೇ ದಾಖಲಾತಿ ನೀಡುವಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂಬ ಒತ್ತಾಯವಿದೆ.
ಅಂದಹಾಗೆ, ಪ್ರತಿ ವರ್ಷ ದಾಖಲಾತಿ ಸಮಯದಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ಕೋರ್ಸುಗಳಿಗೆ ಆಥವಾ ಒಂದೇ ಕೋರ್ಸ್‌ಗೆ ವಿವಿಧ ಕಾಲೇಜುಗಳಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಆ ಪೈಕಿ, ಕೆಲವೊಮ್ಮೆ ಒಬ್ಬರೇ ಅಭ್ಯರ್ಥಿಗೆ ಎರಡು ಕಾಲೇಜು ಅಥವಾ ಕೋರ್ಸುಗಳಲ್ಲಿ ಸೀಟು ಸಿಗುತ್ತದೆ. ಆಗ, ತಮ್ಮ ಆಧ್ಯತೆಯ ಕೋರ್ಸ್‌ಗೆ ತಾವು ಬಯಸಿದ ಕಾಲೇಜಿನಲ್ಲಿ ಅಭ್ಯರ್ಥಿಗಳು ದಾಖಲಾಗುತ್ತಾರೆ. ಮತ್ತೊಂದು ಕೋರ್ಸ್ ಅಥವಾ ಕಾಲೇಜಿನ ಸೀಟು ಹಾಗೆಯೇ ಉಳಿದುಹೋಗುತ್ತದೆ. 3ನೇ ಸುತ್ತಿನವರೆಗೂ ಹೀಗೆಯೇ ನಡೆಯುತ್ತದೆ.
ಈ ವರದಿ ಓದಿದ್ದೀರಾ?: ಹಸಿರಾಗುತ್ತಿದೆ ಅಂಟಾರ್ಟಿಕ; ಸಕಲ ಜೀವ ಸಂಕುಲಕ್ಕೆ ಅಪಾಯದ ಸಂಕೇತ!
ಜೊತೆಗೆ, Comedkನಲ್ಲಿ ಸೀಟು ಸಿಕ್ಕರೂ, ಕೆಲವು ಅಭ್ಯರ್ಥಿಗಳು ಸಿಇಟಿ ಮೂಲಕ ಸೀಟು ಸಿಕ್ಕರೆ ಅದನ್ನೇ ಆಧ್ಯತೆಯಾಗಿ ತೆಗೆದುಕೊಂಡು ಸಿಇಟಿ ಮೂಲಕ ದೊರೆತ ಕೋರ್ಸ್, ಕಾಲೇಜುಗಳಿಗೆ ದಾಖಲಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ – ಶುಲ್ಕ. Comedk ಮೂಲಕ ದಾಖಲಾತಿ ಪಡೆದರೆ ಕೋರ್ಸ್‌ಅನ್ನು ಪೂರ್ಣಗೊಳಿಸಲು 10ರಿಂದ 12 ಲಕ್ಷ ರೂ. ಬೇಕಾಗುತ್ತದೆ. ಸಿಇಟಿ ಮೂಲಕ ಹೋದರೆ, ಗರಿಷ್ಠ ನಾಲ್ಕು ಲಕ್ಷದಲ್ಲಿಯೇ ಮುಗಿಯುತ್ತದೆ.
ಹೀಗಾಗಿಯೆ, ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ನೂರಾರು ಸೀಟುಗಳು 3ನೇ ಸುತ್ತಿನ ಕೌನ್ಸೆಲಿಂಗ್ ಬಳಿಕವೂ ಉಳಿದುಹೋಗಿವೆ. ಗಮನಾರ್ಹವಾಗಿ, ಸರ್ಕಾರಿ ಕೋಟಾದಲ್ಲಿ ಕೋರ್ಸು ಮುಗಿಸಲು 10 ಲಕ್ಷ ರೂ. ವೆಚ್ಚವಾದರೆ, ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ದುಪ್ಪಟ್ಟು ಹಣ ಖರ್ಚಾಗುತ್ತದೆ. ವರ್ಷಕ್ಕೆ 7-8 ಲಕ್ಷ ಹಣ ವ್ಯಯಿಸಬೇಕಾಗುತ್ತದೆ. ಈ ಖಾಲಿ ಇರುವ ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಾಗಿ ಪರಿವರ್ತಿಸಿದರೆ, ಹೆಚ್ಚು ಹಣ ಭರಿಸಲಾಗದ ಅಭ್ಯರ್ಥಿಗಳು ಎಂಜಿನಿಯರಿಂಗ್ ಶಿಕ್ಷಣದಿಂದಲೇ ಹೊರಗುಳಿಯುತ್ತಾರೆ. ಅದೇ ಈ ಸೀಟುಗಳನ್ನು ಸರ್ಕಾರಿ ಕೋಟಾಗಳಲ್ಲಿಯೇ ನೀಡಿದರೆ, ನಾಲ್ಕನೇ ಸುತ್ತಿನ ಕೌನ್ಸೆಲಿಂಗ್ ಮಾಡಿದರೆ, ಹಲವಾರು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಈದಿನ.ಕಾಮ್ ಜತೆ ಮಾತನಾಡಿದ ಇಂಜಿನಿಯರಿಂಗ್ ಶಿಕ್ಷಣದಲ್ಲಿ ತೊಡಗಿರುವ ರಾಘವೇಂದ್ರ, “Comedkನಲ್ಲಿ 4ನೇ ಸುತ್ತಿನ ಅಂತಿಮ ಕೌನ್ಸೆಲಿಂಗ್ ನಡೆಸಬೇಕು. ಇದರಿಂದ, ಈಗಾಗಲೇ ಸಿಇಟಿ ಮತ್ತು Comedk ನಡೆಸಿದ ಕೌನ್ಸೆಲಿಂಗ್‌ಗಳಲ್ಲಿ ಸೀಟು ಸಿಗದೆ ನಿರಾಶೆಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ದೊರೆಯುತ್ತದೆ. ಅವರ ಶಿಕ್ಷಣವೂ ಮುಂದುವರೆಯುತ್ತದೆ. 4ನೇ ಸುತ್ತಿನಲ್ಲಿ ಕೌನ್ಸೆಲಿಂಗ್ ನಡೆಸಿದರೆ, ಕನಿಷ್ಠ 400-500 ಬಡ, ಹಿಂದುಳಿದ ಕುಟುಂಬಗಳು ತಮ್ಮ ಮಕ್ಕಳನ್ನು ಎಂಜಿನಿಯರಿಂಗ್ ಮಾಡಿಸಲು ಅನುಕೂಲವಾಗುತ್ತದೆ” ಎಂದಿದ್ದಾರೆ.