ತಮ್ಮ ವೈಚಾರಿಕಬರಹ, ಅನುವಾದಗಳ ಮೂಲಕ ಅರಿವನ್ನು ಬೆಳೆಸುತ್ತಿರುವ ವಿಕಾಸ್ ಕತೆ ಕವಿತೆಗಳ ಮೂಲಕ ಸಂವೇದನೆಯನ್ನು ಮೊನಚುಗೊಳಿಸುತ್ತಿದ್ದಾರೆ. ಇಲ್ಲಿರುವುದು ಕೇವಲ ನೋವಿನ ಕಣ್ಣೀರಲ್ಲ, ಕೆಡಹುವ ಆಕ್ರೋಶವೂ ಅಲ್ಲ, ಕುದಿವ ಕಣ್ಣೀರು...
ವಿಕಾಸ್ ಮತ್ತು ಅವರ ಕವಿತೆಗಳ ಜೊತೆಗಿನ ಸ್ನೇಹ ಕಳೆದ ಕೆಲವು ವರ್ಷಗಳದ್ದು. ಸುತ್ತಲಿನ ವಿದ್ಯಮಾನಗಳಿಗೆ ಕುದ್ದು ಇದು ಇನ್ನೂ ಯಾಕೆ ಹೀಗೆ ಎಂಬ ನೋವು, ಆಕ್ರೋಶಭರಿತ ಕೂಗು, ಕವಿತೆಯಾಗಿ ಹೊಮ್ಮಿದಾಗ ಅದರ ಝಳ ನನಗೂ ತಾಕಿದೆ. ಕವಿತೆಗಳೊಳಗಿನ ಪ್ರಶ್ನೆಗಳು ನಮ್ಮ ಕಣ್ಣಮುಂದೆ ಕುಣಿಯುತ್ತಾ ಸಾಗಬೇಕಾದ ದಿಕ್ಕು ತೋರುತ್ತಲೇ ಇವೆ. ಆಳದ ನೋವು, ಮಾಯದ ಗಾಯ ಹೊತ್ತು ಬದುಕುತ್ತಿರುವ ಈ ಹೊತ್ತಲ್ಲಿ ಬರೆಯುವುದು ಮತ್ತು ಕ್ರಿಯೆಯಲ್ಲಿ ತೊಡಗುವುದು ಮಾತ್ರ ಹೊರದಾರಿ ಎಂದು ಕವಿ ದೃಢವಾಗಿ ನಂಬಿದ್ದಾರೆ. ಹೀಗಾಗಿ, ಈ ಕವಿತೆಗಳ ಬಗ್ಗೆ ಮಾತನಾಡುವುದೆಂದರೆ ನಮ್ಮೊಳಗನ್ನೂ ತೆರೆದು ಇಡುವುದು ಎಂದೇ ನನಗನಿಸುತ್ತದೆ.
ಬೋಧನೆ, ಆಕ್ಟಿವಿಸಂನ ಜೊತೆಜೊತೆಗೇ ಬದುಕನ್ನು ಹೆಣೆದುಕೊಂಡಿರುವ ವಿಕಾಸ್‌ಗೆ ಬರವಣಿಗೆ ಅದರ ವಿಸ್ತರಣೆಯಾಗಿದೆ. ಈ ನೋಟದಲ್ಲೇ ಪರಂಪರೆ ಮತ್ತು ವರ್ತಮಾನಗಳ ಜೊತೆ ಅವರು ಮಾತಿಗಿಳಿಯುತ್ತಾರೆ. ಪರಂಪರೆ ಎಂದಾಗ ಅದರ ಅರ್ಥ ವ್ಯಾಪ್ತಿ ದೊಡ್ಡದು. ಒಂದೆಡೆ ಹಿಂದಿನಿಂದಲೂ ನಡೆದುಬಂದ ಕೆಲವರನ್ನು ಒಳಗೆ, ಕೆಲವರನ್ನು ಹೊರಗೆ ಇಡುವ ಪರಂಪರೆ ಇದೆ. ಇನ್ನೊಂದೆಡೆ ಬುದ್ಧ, ಬಸವ, ಫುಲೆ, ಬಾಬಾ ಸಾಹೇಬರು ಸಾಗಿಬಂದ ದಾರಿಯ ಗುರುತು ಇದೆ. ಜೊತೆಗೆ ಅವ್ವ, ಅಪ್ಪನ ಬೆವರಿನ ಹನಿಗಳಿಂದ ಒದ್ದೆಯಾದ ಹಾದಿಯಿದೆ. ಡಾ. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೆ.ಬಿ ಸಿದ್ದಯ್ಯ ಮುಂತಾದ ಹಿರೀಕರು ನಡೆದ ದಾರಿಯೂ ಇದೆ. ಮೊದಲನೆಯದಾಗಿ ಹೇಳಿದ ಏಕಲವ್ಯನ ಬೆರಳು ಕಿತ್ತ, ಶಂಭೂಕನ ವಧೆಗೆ ಕಾರಣವಾದ ಅಸಂಖ್ಯ ಖೈರ್ಲಾಂಜಿ, ಬೆಲ್ಚಿ, ಕಂಬಾಲಪಲ್ಲಿಗಳಿಗೆ ಪ್ರೇರಣೆಯಾದ ಪರಂಪರೆ ಅಮಾನುಷವಾದುದು. ಫುಲೆ, ಬಾಬಾಸಾಹೇಬರ ಹಾದಿಯಲ್ಲಿ ನಿಂತು ಈ ಅಮಾನುಷ ಪರಂಪರೆಯನ್ನು ಕವಿತೆಗಳು ಧಿಕ್ಕರಿಸಿ ಪ್ರೀತಿ, ಕಾರುಣ್ಯದ ಬದುಕನ್ನು ಹಾರೈಸುತ್ತವೆ.
ಇಲ್ಲಿನ ಕವಿತೆಗಳು ಈ ಎಲ್ಲವುಗಳ ಜೊತೆ ಸಂವಾದಕ್ಕೆಳಸುವುದನ್ನು ನೋಡಬೇಕು. ಹಿಂದಿನ ಬೇರೆ ಬೇರೆ ಕವಿತೆಗಳು, ಘಟನೆಗಳು, ಕತೆಗಳ ಜೊತೆಗಿನ ಅಂತರ್ ಪಠ್ಯೀಯತೆ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಈ ಸಂಕಲನದಲ್ಲಿನ ‘ಅವ್ವ’ ಎನ್ನುವ ಕವಿತೆ, ಕನ್ನಡದಲ್ಲಿ ಅವ್ವನ ಬಗ್ಗೆ ಬಂದ ಇತರ ಕವಿತೆಗಳನ್ನು ನಮಗೆ ನೆನಪಿಸಿಕೊಡುತ್ತಾ ಅವುಗಳಿಗಿಂತ ಭಿನ್ನವಾಗಿ ಅವ್ವನ ಚಿತ್ರವನ್ನು ಕಟ್ಟಿಕೊಡುತ್ತದೆ. ನನ್ನವ್ವ ‘ಉಣಿಸುವ ಭಿಕ್ಕುಣಿ’, ‘ಪೊರೆಯುವ ಕೋತಿ’, ‘ಶಾಲೆಗೆ ಹೋಗದಿದ್ದರೆ ಕೆರಳುವ ಹೆಮ್ಮಾರಿ’, ‘ಒಣಗಿಯೂ ಸಾರ ಬಿಟ್ಟುಕೊಡದ ಕೊರಬಾಡು’ ಎಂಬ ಚಿತ್ರಗಳು ಅಪೂರ್ವವಾಗಿವೆ.
ಹಾಗೆಯೇ ನಮ್ಮಲ್ಲಿ ‘ಕನ್ನಡ ಎನೆ ಕುಣಿದಾಡುವುದೆನ್ನೆದೆ’ ಎನ್ನುವುದರಿಂದ ಹಿಡಿದು ಕನ್ನಡನಾಡಿನಲ್ಲಿನ ತಾರತಮ್ಯದ ಬಗ್ಗೆ ಕುದ್ದು ಡಾ. ಸಿದ್ಧಲಿಂಗಯ್ಯನವರು ಬರೆದ ‘ಕನ್ನಡವ್ವನಿಗೆ’ವರೆಗೆ ಬೇರೆ ಸಂಕಥನಗಳಿವೆ. ಇವೆಲ್ಲದರ ಮಧ್ಯೆ ವಿಕಾಸ್, ‘ಕನ್ನಡ ಎಂದರೆ ಕೊರಬಾಡು ಇದ್ದಂಗೆ’ ಎಂದು ಕನ್ನಡದ ಕುರಿತಾದ ನಮ್ಮ ರೊಮ್ಯಾಂಟಿಕ್, ಉದಾರವಾದಿ, ಕುಲೀನ ನೆಲೆಯ ಕಲ್ಪನೆಯನ್ನು ಒಡೆದುಬಿಡುತ್ತಾರೆ. ಬಾಬಾಸಾಹೇಬರ ಕುರಿತಾದ ‘ಆಲ’ ಎನ್ನುವ ಕವಿತೆ ಡಾ. ಸಿದ್ಧಲಿಂಗಯ್ಯನವರ ‘ಆಕಾಶದ ಅಗಲಕ್ಕೂ ನಿಂತ ಆಲವೇ’ ಅನ್ನು ನೆನಪಿಸುತ್ತಾ ಚಿತ್ರವೊಂದನ್ನು ಕಟ್ಟಿಕೊಡುತ್ತದೆ. ಇಂಥ ಇನ್ನೊಂದು ಕವಿತೆ ‘ಗಾಂಧಿ ತಾತನಿಗೆ’. ಕವಿ ‘ನಿನ್ನ ಬಿಸಿ ಅಪ್ಪುಗೆಗೆ ಕರಗಲೊಲ್ಲೆ ತಾತ’ ಎನ್ನುತ್ತಲೇ ‘ನಿನ್ನ ಕೊಂದ ಗೋಡ್ಸೆಗಳು ಮತ್ತೆ ಮತ್ತೆ ನಿನ್ನ ಕೊಲ್ಲುತ್ತಿರುವಾಗ ರಂರಂಗದಲ್ಲಿ ನಾನು ನಿನ್ನ ಪಕ್ಕ’ ಎನ್ನುವ ನಿಲುವು ತಳೆಯುವುದು ಅವರ ಸೈದ್ಧಾಂತಿಕ ಸ್ಪಷ್ಟತೆಯನ್ನು ತೋರುತ್ತದೆ. ಮೇಲಿನ ಕವಿತೆಗಳ ಮೂಲಕ ಕವಿ ಒಂದು ಹೊಸ ಸಂಕಥನವನ್ನು, ರೂಪಕ ಲೋಕವನ್ನು ಕಟ್ಟಿಕೊಡುತ್ತಿದ್ದಾರೆ.
ಈ ಸಂಕಲನದಲ್ಲಿ ಕವಿಮಿತ್ರರನ್ನು ನೆನೆದು ಬರೆದ ಆರ್ದ್ರ ಕವಿತೆಗಳಿವೆ. ಅಗಲಿದ ಕೆ.ಬಿ ಸಿದ್ದಯ್ಯನವರನ್ನು ನೆನೆದು ಬರೆದ ‘ಬಕಾಲ ಮುನಿ’ ಕವಿತೆಯಲ್ಲಿ ಕವಿ ‘ನೀನು ಮಾತಾಡಿದೊಡನೆ ಉದುರುತ್ತಿದ್ದ ಮುತ್ತುಗಳು ಇನ್ನೂ ಈ ನೆಲದಲ್ಲಿಯೇ ಮಿಂಚುತ್ತಿವೆ’ ಎನ್ನುತ್ತಾರೆ. ತಮಟೆಯ ನಾದದ ಹಿನ್ನೆಲೆಯೊಂದಿಗೆ ಮೂಡಿದ ಡಾ. ಸಿದ್ಧಲಿಂಗಯ್ಯನವರ ನೆನಪಿನ ‘ತಮಟೆಯ ಹಾಡು’ ಕವಿತೆಯಲ್ಲಿ ಅವರನ್ನು ಕವಿ ‘ಇರುವೆ ಸಾಲಿನೊಡೆಯ’, ‘ಕನ್ನಡವ್ವನ ಕರಿಯ’ ಎನ್ನುತ್ತಾ ‘ತಬರ-ಬೆಲ್ಚಿ ಕಾಡಿದಂತೆ, ಖೈರ್ಲಾಂಜಿ-ವೇಮುಲ ಕಾಡಲಿಲ್ಲವೇ’ ಎಂದು ಪ್ರಶ್ನಿಸುತ್ತಾರೆ. ಎನ್ಕೆ, ಚಂಪಾ, ಗದ್ದರ್ ಕುರಿತಾದ ಕವಿತೆಗಳು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ. ಜೊತೆಗೆ ಮುಂದಿನ ತಲೆಮಾರು ಅವರನ್ನು ನೋಡುತ್ತಿರುವ ಬಗೆ, ಎತ್ತುತ್ತಿರುವ ಪ್ರಶ್ನೆಗಳನ್ನೂ ಮುಂದಿಡುತ್ತವೆ.
ಈ ಲೇಖನ ಓದಿದ್ದೀರಾ?: ʼಬುದ್ಧ, ಬಸವ, ಅಂಬೇಡ್ಕರ್: ಹೊಸ ದೃಷ್ಟಿಕೋನʼ ವಿಚಾರ ಸಂಕಿರಣ; ಪ್ರಸ್ತುತಕ್ಕೆ ಅನ್ವಯಿಸುತ್ತವೆಯೇ?
ಇಲ್ಲಿನ ಕವಿತೆಗಳು ತರತಮದ ಪರಂಪರೆಯನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ, ಅದರೊಳಗಿನ ಅಸಂಗತತೆಯನ್ನು ತೋರುವ ಬಗೆಯನ್ನು ಗಮನಿಸಬೇಕು. ಎದುರಿಗೆ ರಾಚುವಂತಿದ್ದರೂ ಕಾಣದ ಕುರುಡು, ಕೇಳದ ಕಿವುಡು, ಅಹಿಂಸೆಯ ಮರೆಯಲ್ಲಿ ಅಡಗಿರುವ ಹಿಂಸೆ ದಿಗ್ಭ್ರಾಂತಿಗೊಳಿಸುತ್ತದೆ. ಈ ಕಾರಣಕ್ಕೇ ಇಲ್ಲಿನ ಹಲವು ಕವಿತೆಗಳು ಎದುರಿಗಿರುವವರಿಗೆ ಪ್ರಶ್ನೆಗಳನ್ನು ಹಾಕುತ್ತವೆ, ತಮಗೇ ಹಾಕಿಕೊಳ್ಳುತ್ತವೆ. ‘ನಾವು ತಿನ್ನೋದು ಅನ್ನ, ನೀವು?’ ‘ನಾವು ಮನುಷ್ಯರು, ನೀವು?’ ‘ನಮ್ಮದು ನಾಲಿಗೆ, ನಿಮ್ಮದು?’… ಒಂದು ಕವಿತೆಯಂತೂ ‘ಮನುಷ್ಯರಾ ನೀವು?’ ಎಂದು ಕೊರಳಪಟ್ಟಿ ಹಿಡಿದು ಕೇಳುತ್ತದೆ. ‘ಯೋನಿ ನಮ್ಮ ಜನ್ಮಸ್ಥಳ’, ‘ಅವ್ವನೊಂದಿಗೆ ಉಸಿರಾಡಿ ಉಳಿದವರು’, ಹೀಗೆನ್ನುವುದರ ಮೂಲಕ ಕಟ್ಟಿಕೊಡಲಾದ ಜಾತಿವಾದಿ, ಪಿತೃಸಂಸ್ಕೃತಿಯ ಮಿತ್‌ಗಳನ್ನು ಒಡೆಯುತ್ತಾ ಕವಿ ಮುಂದುವರೆದು ನೀವು ‘ನಮ್ಮ ಮುಟ್ಟಿ ಮನುಷ್ಯರಾಗಬಹುದು’ ಎನ್ನುತ್ತಾರೆ. ಮೈಲಿಗೆಯೆಂದು ದೂರ ಮಾಡಿ ಮನುಷ್ಯತ್ವವನ್ನೇ ಕಳೆದುಕೊಂಡವರು ಮರಳಿ ಮನುಷ್ಯರಾಗಬೇಕಾದರೆ ಮುಟ್ಟಬೇಕು, ಎನ್ನುವ ಸಾಲು ಕಣ್ಣು ತೆರೆಸುವಂಥದ್ದು.

ಇಂದು ನಮ್ಮ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಮೂಡಿಬರುತ್ತಿರುವ ದಲಿತ ಸಾಹಿತ್ಯ, ಚಿಂತನೆ ಮತ್ತು ಕಲೆ ಹೊಸ ಆಯಾಮಗಳನ್ನು ಪಡೆದು ಸೃಜನಶೀಲವಾಗಿ ಹೊರಹೊಮ್ಮುತ್ತಿವೆ. ದಲಿತ ಬದುಕಿನ ಸಂಕಟ, ಅಸಹಾಯಕತೆಗಳ ಜೊತೆಗೆ ಗಾಢ ಜೀವನಪ್ರೀತಿ, ಎಲ್ಲರನ್ನೂ ಆತುಕೊಳ್ಳುವ ಗುಣ, ಸೃಜನಶೀಲತೆಯ ಬಗ್ಗೆ ಮಾತಾಡುತ್ತಿವೆ. ತಾರತಮ್ಯ ಬಿಟ್ಟು ‘ಮನುಷ್ಯರಾಗಲು ಒಳಬನ್ನಿ’ ಎನ್ನುವ ‘ಹೊಲೆ ಮಾದಿಗರ ಹೋಟೆಲ್’, ಅಂತಹದ್ದನ್ನು ಕಾಣಿಸುವ ಕವಿತೆ. ನೈಜ ಪ್ರೀತಿಗೆ ತೋಳು ಚಾಚಿದ್ದು ಹೌದು, ಆದರೆ ಬೂಟಾಟಿಕೆ ಬೇಡ ಎನ್ನುವ ಇನ್ನೊಂದು ಕವಿತೆ ‘ಹೋಗಿ… ಮತ್ತೆ ಬರಬೇಡಿ’. ಇವುಗಳ ಜೊತೆಗೆ ಇಂದಿನ ಪೀಳಿಗೆ ಹಳೆ ತಲೆಮಾರಿಗೆ ಹಾಕುತ್ತಿರುವ ಪ್ರಶ್ನೆ ಎಂಥದ್ದು, ಸಾಗಿ ಬಂದ ದಾರಿಯನ್ನು ಪರಿಭಾವಿಸುತ್ತಿರುವ ರೀತಿ ಯಾವ ಬಗೆಯದು ಎಂಬುದೂ ಬಹಳ ಮುಖ್ಯ.
ಮೊದಲನೇ ಮತ್ತು ಎರಡನೇ ತಲೆಮಾರಿನ ದಲಿತ ಕಾವ್ಯದ ಕೇಂದ್ರ ಆಕ್ರೋಶ ಎಂದು ಗುರುತಿಸಲಾಗುತ್ತದೆ. ಈ ಹೊತ್ತಿಗೂ ಆಕ್ರೋಶವೇ ಕೇಂದ್ರಭಾವವಾಗಿರುವುದು ಹೆಚ್ಚೇನೂ ಬದಲಾಗದ ವಾಸ್ತವವನ್ನು ತೋರಿಸುತ್ತದೆ. ಕೋಮುವಾದ, ಬಂಡವಾಳಶಾಹಿಯ ನಂಟು ಶೋಷಣೆಯನ್ನು ಬಹುರೂಪಿಯಾಗಿಸಿದೆ. ಇದನ್ನು ಗುರುತಿಸುವುದು, ತೆರೆದು ತೋರುವುದು ತುಂಬಾ ಮುಖ್ಯವಾಗಿ ಮಾಡಬೇಕಾದ ಕೆಲಸವಾಗಿದೆ. ಇಲ್ಲಿನ ಕವಿತೆಗಳು ಒಡಲೊಳಗಿನ ನೋವು, ಆಕ್ರೋಶವನ್ನು ಹೊರಗೆ ಹಾಕದೇ ಬಿಡುಗಡೆಯಿಲ್ಲ ಎಂಬ ಒತ್ತಡದಲ್ಲಿ ಮೂಡಿವೆ. ಈ ಒತ್ತಡ ಕೆಲವೊಮ್ಮೆ ಅಭಿವ್ಯಕ್ತಿಯನ್ನು ಸರಳೀಕರಿಸುತ್ತದೆ. ಜೊತೆಗೆ ಈ ತುರ್ತಿನಲ್ಲಿ ಭಾವಕೋಶದ ಇತರ ಸಂಗತಿಗಳು ಮಸುಳಿಹೋಗಿಬಿಡಬಹುದಾದ ಅಪಾಯವಿದೆ. ಅಸಹನೀಯ ನೋವು, ಸಂಘರ್ಷಗಳ ಜೊತೆಗೇ ಬದುಕಿನ ಆರ್ದ್ರತೆ, ಸಂಕೀರ್ಣತೆ, ಸಂದಿಗ್ಧತೆ, ಸೊಗಸುಗಳಿಗೆ ನಾವು ಒಡ್ಡಿಕೊಳ್ಳುತ್ತಲೇ ಇರುತ್ತೇವೆ. ಆದರೆ ಇವು ಇಲ್ಲಿ ಕೇವಲ ಮಿಂಚಿ ಮಾಯವಾಗುತ್ತವೆ. ಈ ಕವಿತೆಗಳು ‘ಓದು ಕವಿತೆ’ಗಳು ಎನ್ನುವುದಕ್ಕಿಂತ ಹೆಚ್ಚಾಗಿ ‘ಕೇಳು’ ಕವಿತೆಗಳಾಗಿ ವಿಶೇಷ ಪರಿಣಾಮ ಉಂಟುಮಾಡುತ್ತವೆ.
ತಮ್ಮ ವೈಚಾರಿಕ ಬರಹ, ಅನುವಾದಗಳ ಮೂಲಕ ಅರಿವನ್ನು ಬೆಳೆಸುತ್ತಿರುವ ವಿಕಾಸ್ ಕತೆ ಕವಿತೆಗಳ ಮೂಲಕ ಸಂವೇದನೆಯನ್ನು ಮೊನಚುಗೊಳಿಸುತ್ತಿದ್ದಾರೆ. ಇಲ್ಲಿನ ಕವಿತೆಯೊಂದರಲ್ಲಿ ಬರುವಂತೆ ಆರಂಭದ ಅಸಹಾಯಕತೆ ನಂತರದಲ್ಲಿ ಸಿಟ್ಟಿನ ರೂಪ ಪಡೆದು ಈಗ ಅಕ್ಷರದ ತಿಳಿವಿನ ಮೂಲಕ ತನ್ನನ್ನು ಸ್ಥಾಪಿಸಿಕೊಳ್ಳುವ ಹಾದಿಯಲ್ಲಿದೆ. ಇಲ್ಲಿರುವುದು ಕೇವಲ ನೋವಿನ ಕಣ್ಣೀರಲ್ಲ, ಕೆಡಹುವ ಆಕ್ರೋಶವೂ ಅಲ್ಲ, ಕುದಿವ ಕಣ್ಣೀರು. ‘ಅಕ್ಷರವ ಎದೆಗೆ ಹಾಕಿಕೊಂಡ’ದ್ದರಿಂದ ಮೂಡಿದ ಎಚ್ಚರದೊಂದಿಗೆ ಇಲ್ಲಿ ಕೆಡಹುತ್ತಲೇ ಕಟ್ಟುವ ಕೆಲಸವೂ ನಡೆದಿದೆ. ವಿಕಾಸ್, ಹಳೆಬೇರಿಗೆ ಹೊಸ ಚಿಗುರು ಮೂಡುವ ಬಗೆಯಲ್ಲಿ ಚಳವಳಿಗಳೊಂದಿಗೆ ಬೆಸೆದುಕೊಂಡು ಸಮಸಮಾಜ ಬಯಸುವ ಎಲ್ಲರೂ ಸೋದರತ್ವದ ಹೆಣಿಗೆಯೊಂದಿಗೆ ಸಾಗಬೇಕಾಗಿರುವುದನ್ನು ಸಾರುತ್ತಾ ಬಂದಿದ್ದಾರೆ. ಅವರ ಕವಿತೆಗಳು ಇದನ್ನೇ ಕನಸುತ್ತವೆ.
ವಿಕಾಸ ಅವರ ಕವನ ಸಂಕಲನದ ಆಶಯವನ್ನು ಕುರಿತು ಚೆನ್ನಾಗಿ ಮನಮುಟ್ಟುವಂತೆ ಮತ್ತು ಕವಿತೆಯ ಹೊಸಹೊಸ ಆಲೋಚನೆ ಗಳೊಂದಿಗೆ ಮಿತ್ ಗಳನ್ನು ಸೂಕ್ಷ್ಮ ಒಳನೋಟದೊಂದಿಗೆ ವಿಶ್ಲೇಷಿಸಿದ್ದೀರಿ.ಮೇಡಂ…..ನಿಮಗೆ ಅಭಿನಂದನೆಗಳು
ನಮ್ಮ ತಲೆಮಾರಿನ ಸೂಕ್ಷ್ಮ ಸಂವೇದನೆಯ ಕವಿ ಹಾಗೂ ಚಳುವಳಿಗಾರರು, ನೈಜ ನೆಲಮೂಲ ಸಂಸ್ಕೃತಿಯ ಕವಿ ವಿಕಾಸ ಅವರಿಗೂ ಈ ಬಗೆಯ ಕವನ ಸಂಕಲನ ಬರೆದಿದ್ದಕ್ಕೆ ತಮಗೂ ಅಭಿನಂದನೆಗಳು….